021 ಪುರೋಹಿತಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಉದ್ಯೋಗ ಪರ್ವ

ಅಧ್ಯಾಯ 21

ಸಾರ

ದೂತನು ಹೇಳಿದುದೆಲ್ಲವೂ ಸತ್ಯವಾಗಿದ್ದರೂ ಅವನು ಬ್ರಾಹ್ಮಣನಾಗಿರುವುದರಿಂದ ಮಾತು ತೀಕ್ಷ್ಣವಾಗಿದೆಯೆಂದೂ, ಅರ್ಜುನನನ್ನು ಎದುರಿಸುವ ಸಮರ್ಥರು ಯಾರೂ ಇಲ್ಲವೆಂದು ಭೀಷ್ಮನು ಸಭೆಯಲ್ಲಿ ನುಡಿದುದು (1-7). ಅಷ್ಟರಲ್ಲಿಯೇ ಕರ್ಣನು ಮಧ್ಯ ಮಾತನಾಡುತ್ತಾ ಒಪ್ಪಂದವನ್ನು ಆದರಿಸದೇ ಪಾಂಡವರು ಬಲವನ್ನು ಒಟ್ಟುಗೂಡಿಸಿ ರಾಜ್ಯವನ್ನು ಕೇಳುತ್ತಿದ್ದಾರೆಂದೂ, ಆದರೆ ದುರ್ಯೋಧನನು ಬೆದರಿಕೆಗೆ ಒಳಗಾಗಿ ಒಂದಡಿ ಭೂಮಿಯನ್ನೂ ಕೊಡುವುದಿಲ್ಲವೆಂದೂ ಹೇಳುವುದು (8-15). ಭೀಷ್ಮನು ರಾಧೇಯನನ್ನು ಅಲ್ಲಗಳೆದು ದೂತನು ಹೇಳಿದುದನ್ನು ಸಮರ್ಥಿಸಲು ಧೃತರಾಷ್ಟ್ರನು ಆಲೋಚಿಸಿ ಸಂಜಯನನ್ನು ಪಾಂಡವರ ಬಳಿ ಕಳುಹಿಸುತ್ತೇನೆಂದು ಹೇಳಿ ದೂತನನ್ನು ಸತ್ಕರಿಸಿ ಕಳುಹಿಸಿದುದು (16-21).

05021001 ವೈಶಂಪಾಯನ ಉವಾಚ।
05021001a ತಸ್ಯ ತದ್ವಚನಂ ಶ್ರುತ್ವಾ ಪ್ರಜ್ಞಾವೃದ್ಧೋ ಮಹಾದ್ಯುತಿಃ।
05021001c ಸಂಪೂಜ್ಯೈನಂ ಯಥಾಕಾಲಂ ಭೀಷ್ಮೋ ವಚನಮಬ್ರವೀತ್।।

ವೈಶಂಪಾಯನನು ಹೇಳಿದನು: “ಅವನ ಆ ಮಾತನ್ನು ಕೇಳಿ ಪ್ರಜ್ಞಾವೃದ್ಧ, ಮಹಾದ್ಯುತಿ ಭೀಷ್ಮನು ಅವನನ್ನು ಗೌರವಿಸಿ ಕಾಲಕ್ಕೆ ತಕ್ಕಂತಹ ಈ ಮಾತುಗಳನ್ನಾಡಿದನು:

05021002a ದಿಷ್ಟ್ಯಾ ಕುಶಲಿನಃ ಸರ್ವೇ ಪಾಂಡವಾಃ ಸಹ ಬಾಂಧವೈಃ।
05021002c ದಿಷ್ಟ್ಯಾ ಸಹಾಯವಂತಶ್ಚ ದಿಷ್ಟ್ಯಾ ಧರ್ಮೇ ಚ ತೇ ರತಾಃ।।

“ಪಾಂಡವರೆಲ್ಲರೂ ಬಾಂಧವರೊಂದಿಗೆ ಕುಶಲರಾಗಿದ್ದಾರೆಂದರೆ ಒಳ್ಳೆಯದೇ ಆಯಿತು. ಒಳ್ಳೆಯದಾಯಿತು ಅವರಿಗೆ ಸಹಾಯವು ದೊರಕಿದೆ. ಮತ್ತು ಅವರು ಧರ್ಮನಿರತರಾಗಿದ್ದಾರೆ.

05021003a ದಿಷ್ಟ್ಯಾ ಚ ಸಂಧಿಕಾಮಾಸ್ತೇ ಭ್ರಾತರಃ ಕುರುನಂದನಾಃ।
05021003c ದಿಷ್ಟ್ಯಾ ನ ಯುದ್ಧಮನಸಃ ಸಹ ದಾಮೋದರೇಣ ತೇ।।

ಒಳ್ಳೆಯದಾಯಿತು ಆ ಕುರುನಂದರು ತಮ್ಮ ಭ್ರಾತೃಗಳೊಂದಿಗೆ ಸಂಧಿಯನ್ನು ಬಯಸುತ್ತಿದ್ದಾರೆ. ಒಳ್ಳೆಯದಾಯಿತು ದಾಮೋದರನನ್ನೂ ಸೇರಿ ಅವರು ಯುದ್ಧದ ಮನಸ್ಸು ಮಾಡುತ್ತಿಲ್ಲ.

05021004a ಭವತಾ ಸತ್ಯಮುಕ್ತಂ ಚ ಸರ್ವಮೇತನ್ನ ಸಂಶಯಃ।
05021004c ಅತಿತೀಕ್ಷ್ಣಂ ತು ತೇ ವಾಕ್ಯಂ ಬ್ರಾಹ್ಮಣ್ಯಾದಿತಿ ಮೇ ಮತಿಃ।।

ನೀನು ಹೇಳಿದುದೆಲ್ಲವೂ ಸತ್ಯ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ನಿನ್ನ ಮಾತುಗಳು ಅತಿ ತೀಕ್ಷ್ಣವಾಗಿವೆ. ನೀನು ಬ್ರಾಹ್ಮಣನಾಗಿರುವುದೇ ಇದಕ್ಕೆ ಕಾರಣವಾಗಿರಬಹುದೆಂದು ನನಗನ್ನಿಸುತ್ತದೆ.

05021005a ಅಸಂಶಯಂ ಕ್ಲೇಶಿತಾಸ್ತೇ ವನೇ ಚೇಹ ಚ ಪಾಂಡವಾಃ।
05021005c ಪ್ರಾಪ್ತಾಶ್ಚ ಧರ್ಮತಃ ಸರ್ವಂ ಪಿತುರ್ಧನಮಸಂಶಯಂ।।

ಪಾಂಡವರು ಇಲ್ಲಿ ಮತ್ತು ವನದಲ್ಲಿ ಕಷ್ಟಗಳನ್ನನುಭವಿಸಿದರು ಎನ್ನುವುದರಲ್ಲಿ ಸಂಶಯವಿಲ್ಲ. ಧರ್ಮತಃ ಅವರು ಸರ್ವ ಪಿತುರ್ಧನವನ್ನೂ ಪಡೆಯಬೇಕು ಎನ್ನುವುದರಲ್ಲೂ ಸಂಶಯವಿಲ್ಲ.

05021006a ಕಿರೀಟೀ ಬಲವಾನ್ಪಾರ್ಥಃ ಕೃತಾಸ್ತ್ರಶ್ಚ ಮಹಾಬಲಃ।
05021006c ಕೋ ಹಿ ಪಾಂಡುಸುತಂ ಯುದ್ಧೇ ವಿಷಹೇತ ಧನಂಜಯಂ।।

ಕಿರೀಟೀ ಪಾರ್ಥನು ಮಹಾಬಲಶಾಲಿ, ಬಲವಂತ ಮತ್ತು ಕೃತಾಸ್ತ್ರ. ಯಾರುತಾನೇ ಪಾಂಡುಸುತ ಧನಂಜಯನನ್ನು ಯುದ್ಧದಲ್ಲಿ ಎದುರಿಸಿಯಾರು?

05021007a ಅಪಿ ವಜ್ರಧರಃ ಸಾಕ್ಷಾತ್ಕಿಮುತಾನ್ಯೇ ಧನುರ್ಭೃತಃ।
05021007c ತ್ರಯಾಣಾಮಪಿ ಲೋಕಾನಾಂ ಸಮರ್ಥ ಇತಿ ಮೇ ಮತಿಃ।।

ಸಾಕ್ಷಾತ್ ವಜ್ರಧರನಿಗೇ ಸಾಧ್ಯವಿಲ್ಲದಿರುವಾಗ ಇನ್ನು ಇತರ ಧನುಷ್ಪಾಣಿಗಳೇನು? ಮೂರು ಲೋಕಗಳಲ್ಲಿಯೂ ಸಮರ್ಥರಿಲ್ಲ ಎಂದು ನನ್ನ ಅಭಿಪ್ರಾಯ.”

05021008a ಭೀಷ್ಮೇ ಬ್ರುವತಿ ತದ್ವಾಕ್ಯಂ ಧೃಷ್ಟಮಾಕ್ಷಿಪ್ಯ ಮನ್ಯುಮಾನ್।
05021008c ದುರ್ಯೋಧನಂ ಸಮಾಲೋಕ್ಯ ಕರ್ಣೋ ವಚನಮಬ್ರವೀತ್।।

ಭೀಷ್ಮನು ಹೀಗೆ ಮಾತನ್ನಾಡುತ್ತಿರುವಾಗಲೇ ಸಿಟ್ಟಿಗೆದ್ದ ಕರ್ಣನು ದುರ್ಯೋಧನನನ್ನು ನೋಡುತ್ತಾ ಮಧ್ಯ ಮಾತನಾಡಿದನು:

05021009a ನ ತನ್ನ ವಿದಿತಂ ಬ್ರಹ್ಮನ್ಲ್ಲೋಕೇ ಭೂತೇನ ಕೇನ ಚಿತ್।
05021009c ಪುನರುಕ್ತೇನ ಕಿಂ ತೇನ ಭಾಷಿತೇನ ಪುನಃ ಪುನಃ।।

“ಬ್ರಹ್ಮನ್! ಈ ಲೋಕದಲ್ಲಿ ಇದನ್ನು ತಿಳಿಯದೇ ಇರುವವರು ಯಾರೂ ಇಲ್ಲ. ಪುನಃ ಪುನಃ ನೀನು ಅದನ್ನೇ ಏಕೆ ಹೇಳುತ್ತಿರುವೆ?

05021010a ದುರ್ಯೋಧನಾರ್ಥೇ ಶಕುನಿರ್ದ್ಯೂತೇ ನಿರ್ಜಿತವಾನ್ಪುರಾ।
05021010c ಸಮಯೇನ ಗತೋಽರಣ್ಯಂ ಪಾಂಡುಪುತ್ರೋ ಯುಧಿಷ್ಠಿರಃ।।

ಹಿಂದೆ ದುರ್ಯೋಧನನಿಗಾಗಿ ಶಕುನಿಯು ದ್ಯೂತದಲ್ಲಿ ಗೆದ್ದನು. ಒಪ್ಪಂದದಂತೆ ಪಾಂಡುಪುತ್ರ ಯುಧಿಷ್ಠಿರನು ಅರಣ್ಯಕ್ಕೆ ಹೋದನು.

05021011a ನ ತಂ ಸಮಯಮಾದೃತ್ಯ ರಾಜ್ಯಮಿಚ್ಚತಿ ಪೈತೃಕಂ।
05021011c ಬಲಮಾಶ್ರಿತ್ಯ ಮತ್ಸ್ಯಾನಾಂ ಪಾಂಚಾಲಾನಾಂ ಚ ಪಾರ್ಥಿವಃ।।

ಆ ಪಾರ್ಥಿವನು ಈಗ ಆ ಒಪ್ಪಂದವನ್ನು ಆದರಿಸದೇ1, ಮತ್ಸ್ಯ ಮತ್ತು ಪಾಂಚಾಲರ ಬಲವನ್ನು ಆಶ್ರಯಿಸಿ ಪಿತ್ರಾರ್ಜಿತ ರಾಜ್ಯವನ್ನು ಇಚ್ಛಿಸುತ್ತಾನೆ.

05021012a ದುರ್ಯೋಧನೋ ಭಯಾದ್ವಿದ್ವನ್ನ ದದ್ಯಾತ್ಪದಮಂತತಃ।
05021012c ಧರ್ಮತಸ್ತು ಮಹೀಂ ಕೃತ್ಸ್ನಾಂ ಪ್ರದದ್ಯಾಚ್ಚತ್ರವೇಽಪಿ ಚ।।

ದುರ್ಯೋಧನನು ಬೆದರಿಕೆಗೊಳಗಾಗಿ ಒಂದಡಿ ಭೂಮಿಯನ್ನೂ ಕೊಡುವುದಿಲ್ಲ. ಆದರೆ ಧರ್ಮದಂತಾದರೆ ಅವನು ಶತ್ರುವಿಗೆ ಕೂಡ ಇಡೀ ಮಹಿಯನ್ನು ಕೊಟ್ಟಾನು.

05021013a ಯದಿ ಕಾಂಕ್ಷಂತಿ ತೇ ರಾಜ್ಯಂ ಪಿತೃಪೈತಾಮಹಂ ಪುನಃ।
05021013c ಯಥಾಪ್ರತಿಜ್ಞಾಂ ಕಾಲಂ ತಂ ಚರಂತು ವನಮಾಶ್ರಿತಾಃ।।

ಒಂದುವೇಳೆ ಅವರು ಪಿತೃಪಿತಾಮಹರ ರಾಜ್ಯವನ್ನು ಬಯಸುವರಾದರೆ, ಪ್ರತಿಜ್ಞೆಮಾಡಿದಷ್ಟು ಸಮಯ ಪುನಃ ವನವಾಸವನ್ನು ನಡೆಸಲಿ.

05021014a ತತೋ ದುರ್ಯೋಧನಸ್ಯಾಂಕೇ ವರ್ತಂತಾಮಕುತೋಭಯಾಃ।
05021014c ಅಧಾರ್ಮಿಕಾಮಿಮಾಂ ಬುದ್ಧಿಂ ಕುರ್ಯುರ್ಮೌರ್ಖ್ಯಾದ್ಧಿ ಕೇವಲಂ।।

ಆಗ ದುರ್ಯೋಧನನ ಆಳ್ವಿಕೆಯಲ್ಲಿ ನಿರ್ಭಯರಾಗಿ ವಾಸಿಸಲಿ. ಕೇವಲ ಮೂರ್ಖತನದಿಂದ ಅಧರ್ಮಕಾರ್ಯವನ್ನೆಸಗುತ್ತಿದ್ದಾರೆ.

05021015a ಅಥ ತೇ ಧರ್ಮಮುತ್ಸೃಜ್ಯ ಯುದ್ಧಮಿಚ್ಚಂತಿ ಪಾಂಡವಾಃ।
05021015c ಆಸಾದ್ಯೇಮಾನ್ಕುರುಶ್ರೇಷ್ಠಾನ್ಸ್ಮರಿಷ್ಯಂತಿ ವಚೋ ಮಮ।।

ಈಗ ಆ ಪಾಂಡವರು ಧರ್ಮವನ್ನು ತೊರೆದು ಯುದ್ಧವನ್ನು ಬಯಸುತ್ತಿದ್ದಾರೆ. ಈ ಕುರುಶ್ರೇಷ್ಠರನ್ನು ಎದುರಿಸುವಾಗ ನನ್ನ ಈ ಮಾತನ್ನು ಸ್ಮರಿಸಿಕೊಳ್ಳುತ್ತಾರೆ.”

05021016 ಭೀಷ್ಮ ಉವಾಚ।
05021016a ಕಿಂ ನು ರಾಧೇಯ ವಾಚಾ ತೇ ಕರ್ಮ ತತ್ಸ್ಮರ್ತುಮರ್ಹಸಿ।
05021016c ಏಕ ಏವ ಯದಾ ಪಾರ್ಥಃ ಷಡ್ರಥಾಂ ಜಿತವಾನ್ಯುಧಿ।।

ಭೀಷ್ಮನು ಹೇಳಿದನು: “ರಾಧೇಯ! ನಿನ್ನ ಮಾತಿನ ಪ್ರಯೋಜನವೇನು? ಯುದ್ಧದಲ್ಲಿ ಪಾರ್ಥನು ಒಬ್ಬನೇ ನಮ್ಮ ಷಡ್ರಥರನ್ನು ಗೆದ್ದುದನ್ನು ನೀನು ಸ್ಮರಿಸಿಕೊಳ್ಳಬೇಕು.

05021017a ನ ಚೇದೇವಂ ಕರಿಷ್ಯಾಮೋ ಯದಯಂ ಬ್ರಾಹ್ಮಣೋಽಬ್ರವೀತ್।
05021017c ಧ್ರುವಂ ಯುಧಿ ಹತಾಸ್ತೇನ ಭಕ್ಷಯಿಷ್ಯಾಮ ಪಾಂಸುಕಾನ್।।

ಈ ಬ್ರಾಹ್ಮಣನು ಹೇಳಿದಂತೆ ನಾವು ಮಾಡದೇ ಇದ್ದರೆ ಯುದ್ಧದಲ್ಲಿ ಅವನಿಂದ ಹತರಾಗುತ್ತೇವೆ ಎನ್ನುವುದು ನಿಶ್ಚಿತ.””

05021018 ವೈಶಂಪಾಯನ ಉವಾಚ।
05021018a ಧೃತರಾಷ್ಟ್ರಸ್ತತೋ ಭೀಷ್ಮಮನುಮಾನ್ಯ ಪ್ರಸಾದ್ಯ ಚ।
05021018c ಅವಭರ್ತ್ಸ್ಯ ಚ ರಾಧೇಯಮಿದಂ ವಚನಮಬ್ರವೀತ್।।

ವೈಶಂಪಾಯನನು ಹೇಳಿದನು: “ಆಗ ಧೃತರಾಷ್ಟ್ರನು ಭೀಷ್ಮನನ್ನು ಮೆಚ್ಚಿಸಿ ರಾಧೇಯನನ್ನು ಹಳಿದು ಸಂಧಿಯ ಈ ಮಾತನ್ನಾಡಿದನು:

05021019a ಅಸ್ಮದ್ಧಿತಮಿದಂ ವಾಕ್ಯಂ ಭೀಷ್ಮಃ ಶಾಂತನವೋಽಬ್ರವೀತ್।
05021019c ಪಾಂಡವಾನಾಂ ಹಿತಂ ಚೈವ ಸರ್ವಸ್ಯ ಜಗತಸ್ತಥಾ।।

“ಶಾಂತನವ ಭೀಷ್ಮನು ಹೇಳಿದ ಮಾತು ನಮಗೆ ಮತ್ತು ಪಾಂಡವರಿಗೆ ನಮಸ್ಕೃತ್ಯವಾದುದು. ಸರ್ವ ಜಗತ್ತಿಗೂ ಕೂಡ ಇದು ಹಿತವಾದುದು.

05021020a ಚಿಂತಯಿತ್ವಾ ತು ಪಾರ್ಥೇಭ್ಯಃ ಪ್ರೇಷಯಿಷ್ಯಾಮಿ ಸಂಜಯಂ।
05021020c ಸ ಭವಾನ್ಪ್ರತಿಯಾತ್ವದ್ಯ ಪಾಂಡವಾನೇವ ಮಾಚಿರಂ।।

ಆದರೆ ಆಲೋಚಿಸಿ ನಾನು ಸಂಜಯನನ್ನು ಪಾಂಡವರ ಬಳಿ ಕಳುಹಿಸುತ್ತೇನೆ. ನೀನು ಇಂದೇ ತಡಮಾಡದೇ ಪಾಂಡವರಲ್ಲಿಗೆ ಹಿಂದಿರುಗು.”

05021021a ಸ ತಂ ಸತ್ಕೃತ್ಯ ಕೌರವ್ಯಃ ಪ್ರೇಷಯಾಮಾಸ ಪಾಂಡವಾನ್।
05021021c ಸಭಾಮಧ್ಯೇ ಸಮಾಹೂಯ ಸಂಜಯಂ ವಾಕ್ಯಮಬ್ರವೀತ್।।

ಕೌರವ್ಯನು ಅವನನ್ನು ಸತ್ಕರಿಸಿ ಪಾಂಡವರಲ್ಲಿಗೆ ಕಳುಹಿಸಿದನು. ಸಭಾಮಧ್ಯದಲ್ಲಿ ಸಂಜಯನನ್ನು ಕರೆಯಿಸಿ ಈ ಮಾತುಗಳನ್ನಾಡಿದನು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಉದ್ಯೋಗ ಪರ್ವಣಿ ಪುರೋಹಿತಯಾನೇ ಏಕವಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಉದ್ಯೋಗ ಪರ್ವದಲ್ಲಿ ಪುರೋಹಿತಯಾನದಲ್ಲಿ ಇಪ್ಪತ್ತೊಂದನೆಯ ಅಧ್ಯಾಯವು. ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಉದ್ಯೋಗ ಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಉದ್ಯೋಗ ಪರ್ವವು।
ಇದೂವರೆಗಿನ ಒಟ್ಟು ಮಹಾಪರ್ವಗಳು-4/18, ಉಪಪರ್ವಗಳು-49/100, ಅಧ್ಯಾಯಗಳು-684/1995, ಶ್ಲೋಕಗಳು-22286/73784.


  1. ಅಜ್ಞಾತವಾಸವು ಮುಗಿಯುವುದರೊಳಗೇ ಅರ್ಜುನನನ್ನು ಕೌರವರು ಗುರುತಿಸಿದುದರಿಂದ ಪಾಂಡವರು ಪುನಃ 12 ವರ್ಷ ವನವಾಸ ಮತ್ತು 1 ವರ್ಷ ಅಜ್ಞಾತವಾಸವನ್ನು ಮಾಡಬೇಕೆಂಬ ಒಪ್ಪಂದವನ್ನು ಅವರು ಮುರಿದರೆಂಬ ಕರ್ಣನ ವಾದವೇ ಇದು? ↩︎