013 ಉಪಶ್ರುತಿಯಾಚನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಉದ್ಯೋಗ ಪರ್ವ

ಅಧ್ಯಾಯ 13

ಸಾರ

ಶಚಿಯು ನಹುಷನಿಂದ ಸ್ವಲ್ಪಸಮಯವನ್ನು ಕೇಳಿಕೊಂಡು (1-6), ಇಂದ್ರನನ್ನು ಬ್ರಹ್ಮಹತ್ಯ ದೋಷದಿಂದ ಮುಕ್ತಗೊಳಿಸಲು ದೇವತೆಗಳು ವಿಷ್ಣುವಿನ ಸಲಹೆಯಂತೆ ಮಹಾ ಅಶ್ವಮೇಧಯಾಗಗಳನ್ನು ನಡೆಸಲು ಇಂದ್ರನು ಆತ್ಮವಂತನಾದುದು (7-18). ಆದರೆ ನಹುಷನನ್ನು ನೋಡಿ ತನ್ನ ತೇಜಸ್ಸನ್ನು ಕಳೆದುಕೊಂಡು ಇಂದ್ರನು ಪುನಃ ನಶಿಸಿಹೋಗಿ, ಸರ್ವಭೂತಗಳಿಗೂ ಅದೃಶ್ಯನಾಗಲು ಶಚಿಯು ದೇವಿ ರಾತ್ರಿಯನ್ನು ಉಪಾಸಿಸಿ ಅವಳಿಂದ ಇಂದ್ರನ ಕುರುಹನ್ನು ಕಾಣುವುದು (19-25).

05013001 ಶಲ್ಯ ಉವಾಚ।
05013001a ಅಥ ತಾಮಬ್ರವೀದ್ದೃಷ್ಟ್ವಾ ನಹುಷೋ ದೇವರಾಟ್ತದಾ।
05013001c ತ್ರಯಾಣಾಮಪಿ ಲೋಕಾನಾಮಹಮಿಂದ್ರಃ ಶುಚಿಸ್ಮಿತೇ।
05013001e ಭಜಸ್ವ ಮಾಂ ವರಾರೋಹೇ ಪತಿತ್ವೇ ವರವರ್ಣಿನಿ।।

ಶಲ್ಯನು ಹೇಳಿದನು: “ಅವಳನ್ನು ನೋಡಿ ದೇವರಾಜ ನಹುಷನು ಹೇಳಿದನು: “ಶುಚಿಸ್ಮಿತೇ! ನಾನು ಮೂರೂ ಲೋಕಗಳ ಇಂದ್ರ. ವರವರ್ಣಿನೀ! ವರಾರೋಹೇ! ನನ್ನನ್ನು ನಿನ್ನ ಪತಿಯಾಗಿ ಪ್ರೀತಿಸು!”

05013002a ಏವಮುಕ್ತಾ ತು ಸಾ ದೇವೀ ನಹುಷೇಣ ಪತಿವ್ರತಾ।
05013002c ಪ್ರಾವೇಪತ ಭಯೋದ್ವಿಗ್ನಾ ಪ್ರವಾತೇ ಕದಲೀ ಯಥಾ।।

ನಹುಷನು ಹೀಗೆ ಹೇಳಲು ಆ ಪತಿವ್ರತೆ ದೇವಿಯು ಭಯೋದ್ವಿಗ್ನಳಾಗಿ ಭಿರುಗಾಳಿಗೆ ಸಿಲುಕಿದ ಬಾಳೆಯ ಮರದಂತೆ ತತ್ತರಿಸಿದಳು.

05013003a ನಮಸ್ಯ ಸಾ ತು ಬ್ರಹ್ಮಾಣಂ ಕೃತ್ವಾ ಶಿರಸಿ ಚಾಂಜಲಿಂ।
05013003c ದೇವರಾಜಮಥೋವಾಚ ನಹುಷಂ ಘೋರದರ್ಶನಂ।।

ಅವಳಾದರೋ ಬ್ರಹ್ಮನಿಗೆ ಕೈಮುಗಿದು ತಲೆಬಾಗಿ ನಮಸ್ಕರಿಸಿ ಘೋರದರ್ಶನ ದೇವರಾಜ ನಹುಷನಿಗೆ ಹೇಳಿದಳು:

05013004a ಕಾಲಮಿಚ್ಚಾಮ್ಯಹಂ ಲಬ್ಧುಂ ಕಿಂ ಚಿತ್ತ್ವತ್ತಃ ಸುರೇಶ್ವರ।
05013004c ನ ಹಿ ವಿಜ್ಞಾಯತೇ ಶಕ್ರಃ ಪ್ರಾಪ್ತಃ ಕಿಂ ವಾ ಕ್ವ ವಾ ಗತಃ।।

“ಸುರೇಶ್ವರ! ಸ್ವಲ್ಪ ಸಮಯವನ್ನು ಬಯಸುತ್ತೇನೆ. ಶಕ್ರನಿಗೆ ಏನಾಯಿತೆಂದೂ ಎಲ್ಲಿ ಹೋಗಿದ್ದಾನೆಂದೂ ತಿಳಿಯದಾಗಿದೆ.

05013005a ತತ್ತ್ವಮೇತತ್ತು ವಿಜ್ಞಾಯ ಯದಿ ನ ಜ್ಞಾಯತೇ ಪ್ರಭೋ।
05013005c ತತೋಽಹಂ ತ್ವಾಮುಪಸ್ಥಾಸ್ಯೇ ಸತ್ಯಮೇತದ್ಬ್ರವೀಮಿ ತೇ।
05013005e ಏವಮುಕ್ತಃ ಸ ಇಂದ್ರಾಣ್ಯಾ ನಹುಷಃ ಪ್ರೀತಿಮಾನಭೂತ್।।

ಪ್ರಭೋ! ಸತ್ಯವೇನೆಂದು ತಿಳಿಯಲು ಪ್ರಯತ್ನಿಸುತ್ತೇನೆ. ಅವನ ಕುರಿತಾದ ವಿಷಯವು ತಿಳಿಯದೇ ಹೋದಲ್ಲಿ ನಾನು ನಿನ್ನ ಉಪಸ್ಥಿತಿಯಲ್ಲಿ ಬರುತ್ತೇನೆ. ಸತ್ಯವನ್ನು ನಿನಗೆ ಹೇಳುತ್ತೇನೆ.” ಇಂದ್ರಾಣಿಯು ಹೀಗೆ ಹೇಳಲು ನಹುಷನು ಸಂತೋಷಗೊಂಡನು.

05013006 ನಹುಷ ಉವಾಚ।
05013006a ಏವಂ ಭವತು ಸುಶ್ರೋಣಿ ಯಥಾ ಮಾಮಭಿಭಾಷಸೇ।
05013006c ಜ್ಞಾತ್ವಾ ಚಾಗಮನಂ ಕಾರ್ಯಂ ಸತ್ಯಮೇತದನುಸ್ಮರೇಃ।।

ನಹುಷನು ಹೇಳಿದನು: “ಸುಶ್ರೋಣೀ! ನೀನು ನನಗೆ ಹೇಳಿದಂತೆಯೇ ಆಗಲಿ. ವಿಷಯವನ್ನು ತಿಳಿದುಕೊಂಡು ಬರುತ್ತೀಯೆ. ನೀನು ನುಡಿದ ಸತ್ಯವು ನಿನಗೆ ನೆನಪಿರಲಿ.””

05013007 ಶಲ್ಯ ಉವಾಚ।
05013007a ನಹುಷೇಣ ವಿಸೃಷ್ಟಾ ಚ ನಿಶ್ಚಕ್ರಾಮ ತತಃ ಶುಭಾ।
05013007c ಬೃಹಸ್ಪತಿನಿಕೇತಂ ಸಾ ಜಗಾಮ ಚ ತಪಸ್ವಿನೀ।।

ಶಲ್ಯನು ಹೇಳಿದನು: “ನಹುಷನಿಂದ ಕಳುಹಿಸಲ್ಪಟ್ಟ ಆ ತಪಸ್ವಿನೀ ಶುಭೆಯು ಹೊರಬಂದು ಬೃಹಸ್ಪತಿಯ ಮನೆಗೆ ಹೋದಳು.

05013008a ತಸ್ಯಾಃ ಸಂಶ್ರುತ್ಯ ಚ ವಚೋ ದೇವಾಃ ಸಾಗ್ನಿಪುರೋಗಮಾಃ।
05013008c ಮಂತ್ರಯಾಮಾಸುರೇಕಾಗ್ರಾಃ ಶಕ್ರಾರ್ಥಂ ರಾಜಸತ್ತಮ।।

ರಾಜಸತ್ತಮ! ಅವಳ ಮಾತನ್ನು ಕೇಳಿ, ಅಗ್ನಿಯ ನೇತೃತ್ವದಲ್ಲಿ ದೇವತೆಗಳು ಶಕ್ರನ ಒಳಿತನ್ನೇ ಉದ್ದೇಶವನ್ನಾಗಿಟ್ಟುಕೊಂಡು ಮಂತ್ರಾಲೋಚನೆಗೈದರು.

05013009a ದೇವದೇವೇನ ಸಂಗಮ್ಯ ವಿಷ್ಣುನಾ ಪ್ರಭವಿಷ್ಣುನಾ।
05013009c ಊಚುಶ್ಚೈನಂ ಸಮುದ್ವಿಗ್ನಾ ವಾಕ್ಯಂ ವಾಕ್ಯವಿಶಾರದಾಃ।।

ಪ್ರಭವಿಷ್ಣು ದೇವದೇವ ವಿಷ್ಣುವಿನ ಬಳಿಸಾರಿ, ಆ ವಾಕ್ಯವಿಶಾರದರು ಅವನಿಗೆ ಉದ್ವಿಗ್ನರಾಗಿ ಈ ಮಾತನ್ನಾಡಿದರು:

05013010a ಬ್ರಹ್ಮಹತ್ಯಾಭಿಭೂತೋ ವೈ ಶಕ್ರಃ ಸುರಗಣೇಶ್ವರಃ।
05013010c ಗತಿಶ್ಚ ನಸ್ತ್ವಂ ದೇವೇಶ ಪೂರ್ವಜೋ ಜಗತಃ ಪ್ರಭುಃ।
05013010e ರಕ್ಷಾರ್ಥಂ ಸರ್ವಭೂತಾನಾಂ ವಿಷ್ಣುತ್ವಮುಪಜಗ್ಮಿವಾನ್।।

“ಸುರಗಣೇಶ್ವರ ಶಕ್ರನು ಬ್ರಹ್ಮಹತ್ಯೆಯಿಂದ ಅಭಿಭೂತನಾಗಿದ್ದಾನೆ. ದೇವೇಶ! ಪೂರ್ವಜ! ಜಗತ್ಪ್ರಭು! ನೀನೇ ನಮ್ಮ ಗತಿ. ಸರ್ವಭೂತರ ರಕ್ಷಣಾರ್ಥವಾಗಿಯೇ ನೀನು ವಿಷ್ಣುತ್ವವನ್ನು ಧರಿಸಿದ್ದೀಯೆ.

05013011a ತ್ವದ್ವೀರ್ಯಾನ್ನಿಹತೇ ವೃತ್ರೇ ವಾಸವೋ ಬ್ರಹ್ಮಹತ್ಯಯಾ।
05013011c ವೃತಃ ಸುರಗಣಶ್ರೇಷ್ಠ ಮೋಕ್ಷಂ ತಸ್ಯ ವಿನಿರ್ದಿಶ।।

ನಿನ್ನ ವೀರ್ಯದಿಂದ ವೃತ್ರನು ನಿಹತನಾಗಲು ವಾಸವನು ಬ್ರಹ್ಮಹತ್ಯೆಯಿಂದ ಆವೃತನಾಗಿದ್ದಾನೆ. ಸುರಗಣಶ್ರೇಷ್ಠ! ಅವನಿಗೆ ಮೋಕ್ಷವೇನೆಂದು ನಿರ್ದೇಶಿಸು.”

05013012a ತೇಷಾಂ ತದ್ವಚನಂ ಶ್ರುತ್ವಾ ದೇವಾನಾಂ ವಿಷ್ಣುರಬ್ರವೀತ್।
05013012c ಮಾಮೇವ ಯಜತಾಂ ಶಕ್ರಃ ಪಾವಯಿಷ್ಯಾಮಿ ವಜ್ರಿಣಂ।।

ದೇವತೆಗಳ ಆ ಮಾತನ್ನು ಕೇಳಿ ವಿಷ್ಣುವು ಹೇಳಿದನು: “ಶಕ್ರನು ನನ್ನನ್ನೇ ಯಾಜಿಸಲಿ. ನಾನು ವಜ್ರಿಣಿಯನ್ನು ಪಾವನಗೊಳಿಸುತ್ತೇನೆ.

05013013a ಪುಣ್ಯೇನ ಹಯಮೇಧೇನ ಮಾಮಿಷ್ಟ್ವಾ ಪಾಕಶಾಸನಃ।
05013013c ಪುನರೇಷ್ಯತಿ ದೇವಾನಾಮಿಂದ್ರತ್ವಮಕುತೋಭಯಃ।।

ಪುಣ್ಯ ಹಯಮೇಧದಿಂದ ನನ್ನನ್ನು ಇಷ್ಟಗೊಳಿಸಿ, ಪಾಕಶಾಸನನು, ಭಯವನ್ನು ಕಳೆದುಕೊಂಡು, ಪುನಃ ದೇವತೆಗಳ ಇಂದ್ರತ್ವವನ್ನು ಪಡೆಯುತ್ತಾನೆ.

05013014a ಸ್ವಕರ್ಮಭಿಶ್ಚ ನಹುಷೋ ನಾಶಂ ಯಾಸ್ಯತಿ ದುರ್ಮತಿಃ।
05013014c ಕಂ ಚಿತ್ಕಾಲಮಿಮಂ ದೇವಾ ಮರ್ಷಯಧ್ವಮತಂದ್ರಿತಾಃ।।

ತನ್ನದೇ ಕರ್ಮದಿಂದ ದುರ್ಮತಿ ನಹುಷನು ನಾಶಹೊಂದುತ್ತಾನೆ. ದೇವತೆಗಳೇ! ಕೆಲವು ಕಾಲ ನೀವು ತಾಳ್ಮೆಯಿಂದಿರಬೇಕು. ಜಾಗರೂಕರಾಗಿಯೂ ಇರಬೇಕು.”

05013015a ಶ್ರುತ್ವಾ ವಿಷ್ಣೋಃ ಶುಭಾಂ ಸತ್ಯಾಂ ತಾಂ ವಾಣೀಮಮೃತೋಪಮಾಂ।
05013015c ತತಃ ಸರ್ವೇ ಸುರಗಣಾಃ ಸೋಪಾಧ್ಯಾಯಾಃ ಸಹರ್ಷಿಭಿಃ।
05013015e ಯತ್ರ ಶಕ್ರೋ ಭಯೋದ್ವಿಗ್ನಸ್ತಂ ದೇಶಮುಪಚಕ್ರಮುಃ।।

ವಿಷ್ಣುವಿನ ಆ ಶುಭ ಸತ್ಯ ಅಮೃತೋಪಮ ಮಾತನ್ನು ಕೇಳಿ ಸುರಗಣಗಳೆಲ್ಲವೂ ಆಚಾರ್ಯ ಮತ್ತು ಋಷಿಗಳ ಜೊತೆಗೂಡಿ ಭಯೋದ್ವಿಗ್ನ ಶಕ್ರನಿದ್ದಲ್ಲಿಗೆ ಹೊರಟವು.

05013016a ತತ್ರಾಶ್ವಮೇಧಃ ಸುಮಹಾನ್ಮಹೇಂದ್ರಸ್ಯ ಮಹಾತ್ಮನಃ।
05013016c ವವೃತೇ ಪಾವನಾರ್ಥಂ ವೈ ಬ್ರಹ್ಮಹತ್ಯಾಪಹೋ ನೃಪ।।
05013017a ವಿಭಜ್ಯ ಬ್ರಹ್ಮಹತ್ಯಾಂ ತು ವೃಕ್ಷೇಷು ಚ ನದೀಷು ಚ।
05013017c ಪರ್ವತೇಷು ಪೃಥಿವ್ಯಾಂ ಚ ಸ್ತ್ರೀಷು ಚೈವ ಯುಧಿಷ್ಠಿರ।।

ನೃಪ! ಯುಧಿಷ್ಠಿರ! ಅಲ್ಲಿ ಮಹಾತ್ಮ ಮಹೇಂದ್ರನ ಬ್ರಹ್ಮಹತ್ಯಾದೋಷವನ್ನು ಕಳೆದು ಪಾವನಗೊಳಿಸಲು ಸುಮಹಾ ಅಶ್ವಮೇಧವನ್ನು ನೆರವೇರಿದರು. ಬ್ರಹ್ಮಹತ್ಯಾದೋಷವನ್ನು ಮರಗಳಲ್ಲಿ, ನದಿಗಳಲ್ಲಿ, ಪರ್ವತಗಳಲ್ಲಿ, ಭೂಮಿ ಮತ್ತು ಸ್ತ್ರೀಯರಲ್ಲಿ ವಿಭಜಿಸಿದರು.

05013018a ಸಂವಿಭಜ್ಯ ಚ ಭೂತೇಷು ವಿಸೃಜ್ಯ ಚ ಸುರೇಶ್ವರಃ।
05013018c ವಿಜ್ವರಃ ಪೂತಪಾಪ್ಮಾ ಚ ವಾಸವೋಽಭವದಾತ್ಮವಾನ್।।

ಆ ಭೂತಗಳಲ್ಲಿ ಅದನ್ನು ಭಾಗಮಾಡಿ ವಿಸರ್ಜಿಸಿದ ನಂತರ ಸುರೇಶ್ವರ ವಾಸವನು ಜ್ವರವನ್ನು ಹೋಗಲಾಡಿಸಿಕೊಂಡು ಪಾಪದಿಂದ ಪಾವನನಾಗಿ, ಆತ್ಮವಂತನಾದನು.

05013019a ಅಕಂಪ್ಯಂ ನಹುಷಂ ಸ್ಥಾನಾದ್ದೃಷ್ಟ್ವಾ ಚ ಬಲಸೂದನಃ।
05013019c ತೇಜೋಘ್ನಂ ಸರ್ವಭೂತಾನಾಂ ವರದಾನಾಚ್ಚ ದುಃಸಹಂ।।

ತನ್ನ ಸ್ಥಾನದಲ್ಲಿದ್ದು ಸರ್ವಭೂತಗಳಿಗೆ ವರದನಾಗಿದ್ದ ಆ ದುಃಸಹ ನಹುಷನನ್ನು ನೋಡಿ ಬಲಸೂದನನು ನಡುಗಿ ತೇಜಸ್ಸನ್ನು ಕಳೆದುಕೊಂಡನು.

05013020a ತತಃ ಶಚೀಪತಿರ್ವೀರಃ ಪುನರೇವ ವ್ಯನಶ್ಯತ।
05013020c ಅದೃಶ್ಯಃ ಸರ್ವಭೂತಾನಾಂ ಕಾಲಾಕಾಂಕ್ಷೀ ಚಚಾರ ಹ।।

ಆಗ ವೀರ ಶಚೀಪತಿಯು ಪುನಃ ನಶಿಸಿಹೋಗಿ, ಸರ್ವಭೂತಗಳಿಗೂ ಅದೃಶ್ಯನಾಗಿ, ಸಮಯವನ್ನು ಕಾಯುತ್ತಾ ಸಂಚರಿಸತೊಡಗಿದನು.

05013021a ಪ್ರನಷ್ಟೇ ತು ತತಃ ಶಕ್ರೇ ಶಚೀ ಶೋಕಸಮನ್ವಿತಾ।
05013021c ಹಾ ಶಕ್ರೇತಿ ತದಾ ದೇವೀ ವಿಲಲಾಪ ಸುದುಃಖಿತಾ।।
05013022a ಯದಿ ದತ್ತಂ ಯದಿ ಹುತಂ ಗುರವಸ್ತೋಷಿತಾ ಯದಿ।
05013022c ಏಕಭರ್ತೃತ್ವಮೇವಾಸ್ತು ಸತ್ಯಂ ಯದ್ಯಸ್ತಿ ವಾ ಮಯಿ।।

ಶಕ್ರನು ನಷ್ಟನಾಗಲು ಶೋಕಸಮನ್ವಿತಳಾದ, ತುಂಬಾ ದುಃಖಿತಳಾದ ಶಚೀದೇವಿಯು ವಿಲಪಿಸಿದಳು. “ಹಾ ಶಕ್ರ! ನಾನು ದಾನವನ್ನು ಮಾಡಿದ್ದರೆ, ಆಹುತಿಯನ್ನು ನೀಡಿದ್ದರೆ, ಗುರುಗಳನ್ನು ಸ್ತುತಿಸಿದ್ದರೆ, ಮತ್ತು ಸತ್ಯವು ಇದ್ದರೆ ನನಗೆ ಒಬ್ಬನೇ ಪತಿಯೆಂದಾಗಲಿ!

05013023a ಪುಣ್ಯಾಂ ಚೇಮಾಮಹಂ ದಿವ್ಯಾಂ ಪ್ರವೃತ್ತಾಮುತ್ತರಾಯಣೇ।
05013023c ದೇವೀಂ ರಾತ್ರಿಂ ನಮಸ್ಯಾಮಿ ಸಿಧ್ಯತಾಂ ಮೇ ಮನೋರಥಃ।।

ನನ್ನ ಮನೋರಥವು ಸಿದ್ಧಿಯಾಗಲೆಂದು ನಾನು ಪುಣ್ಯೆ, ದಿವ್ಯೆ, ಉತ್ತರಾಯಣಕ್ಕೆ ಹೋಗುತ್ತಿರುವ ದೇವಿ ರಾತ್ರಿಯನ್ನು ನಮಸ್ಕರಿಸುತ್ತೇನೆ.”

05013024a ಪ್ರಯತಾ ಚ ನಿಶಾಂ ದೇವೀಮುಪಾತಿಷ್ಠತ ತತ್ರ ಸಾ।
05013024c ಪತಿವ್ರತಾತ್ವಾತ್ಸತ್ಯೇನ ಸೋಪಶ್ರುತಿಮಥಾಕರೋತ್।।

ಹೀಗೆ ಹೇಳಿ ಅವಳು ಅಲ್ಲಿ ದೇವಿ ನಿಶೆಯ ಉಪಾಸನೆಯನ್ನು ಮಾಡಿದಳು. ಪಾತಿವ್ರತ್ಯ ಮತ್ತು ಸತ್ಯದಿಂದ ಅವಳು ಉಪಶ್ರುತಿಯನ್ನು ನಡೆಸಿದಳು.

05013025a ಯತ್ರಾಸ್ತೇ ದೇವರಾಜೋಽಸೌ ತಂ ದೇಶಂ ದರ್ಶಯಸ್ವ ಮೇ।
05013025c ಇತ್ಯಾಹೋಪಶ್ರುತಿಂ ದೇವೀ ಸತ್ಯಂ ಸತ್ಯೇನ ದೃಶ್ಯತಾಂ।।

“ದೇವರಾಜನು ಎಲ್ಲಿದ್ದಾನೋ ಆ ಪ್ರದೇಶವನ್ನು ನನಗೆ ತೋರಿಸು!” ಎಂದು ಉಪಶ್ರುತಿಗೆ ಹೇಳಲು ಆ ದೇವಿಯು ಸತ್ಯವನ್ನು ಸತ್ಯವಾಗಿಯೇ ಕಾಣಿಸಿದಳು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಉದ್ಯೋಗ ಪರ್ವಣಿ ಉಪಶ್ರುತಿಯಾಚನೇ ತ್ರಯೋದಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಉದ್ಯೋಗ ಪರ್ವದಲ್ಲಿ ಉಪಶ್ರುತಿಯಾಚನೆಯಲ್ಲಿ ಹದಿಮೂರನೆಯ ಅಧ್ಯಾಯವು।