012 ಇಂದ್ರಾಣೀಕಾಲಾವಧಿಯಾಚನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಉದ್ಯೋಗ ಪರ್ವ

ಅಧ್ಯಾಯ 12

ಸಾರ

ಕುಪಿತನಾದ ನಹುಷನನ್ನು ಪ್ರಸನ್ನಗೊಳಿಸಲು “ನೀನು ಇಚ್ಛಿಸಿದಂತೆ ಇಂದ್ರಾಣಿಯನ್ನು ಕರೆತರುತ್ತೇವೆ” ಎಂದು ದೇವತೆಗಳು ಭರವಸೆಯನ್ನು ನೀಡಿದುದು (1-9). ಇಂದ್ರಾಣಿಯನ್ನು ಬಿಟ್ಟುಕೊಡೆಂದು ದೇವತೆಗಳು ಬೃಹಸ್ಪತಿಯಲ್ಲಿ ಕೇಳಲು, ಅವನು ಅದಕ್ಕೆ ಒಪ್ಪಿಕೊಳ್ಳದೇ, ಶಚಿಯು ನಹುಷನಿಂದ ಕೆಲವೇ ಸಮಯವನ್ನು ಯಾಚಿಸಲಿ ಇಂದು ಸೂಚಿಸಿದುದು (10-26). ದೇವತೆಗಳ ಪ್ರಾರ್ಥನೆಯಂತೆ ಶಚಿಯು ನಹುಷನನ್ನು ಭೇಟಿಯಾದುದು (27-32).

05012001 ಶಲ್ಯ ಉವಾಚ।
05012001a ಕ್ರುದ್ಧಂ ತು ನಹುಷಂ ಜ್ಞಾತ್ವಾ ದೇವಾಃ ಸರ್ಷಿಪುರೋಗಮಾಃ।
05012001c ಅಬ್ರುವನ್ದೇವರಾಜಾನಂ ನಹುಷಂ ಘೋರದರ್ಶನಂ।।

ಶಲ್ಯನು ಹೇಳಿದನು: “ನಹುಷನು ಸಿಟ್ಟಾಗಿದ್ದಾನೆಂದು ತಿಳಿದ ದೇವತೆಗಳು ಋಷಿಗಳನ್ನು ಮುಂದಿಟ್ಟುಕೊಂಡು ಘೋರವಾಗಿ ಕಾಣುತ್ತಿದ್ದ ದೇವರಾಜ ನಹುಷನಿಗೆ ಹೇಳಿದರು:

05012002a ದೇವರಾಜ ಜಹಿ ಕ್ರೋಧಂ ತ್ವಯಿ ಕ್ರುದ್ಧೇ ಜಗದ್ವಿಭೋ।
05012002c ತ್ರಸ್ತಂ ಸಾಸುರಗಂಧರ್ವಂ ಸಕಿನ್ನರಮಹೋರಗಂ।।

“ದೇವರಾಜ! ಕ್ರೋಧವನ್ನು ತ್ಯಜಿಸು. ವಿಭೋ! ನಿನ್ನ ಸಿಟ್ಟಿನಿಂದ ಅಸುರ, ಗಂಧರ್ವ, ಮಹೋರಗಗಳೊಂದಿಗೆ ಜಗತ್ತೇ ಕಂಪಿಸುತ್ತಿದೆ.

05012003a ಜಹಿ ಕ್ರೋಧಮಿಮಂ ಸಾಧೋ ನ ಕ್ರುಧ್ಯಂತಿ ಭವದ್ವಿಧಾಃ।
05012003c ಪರಸ್ಯ ಪತ್ನೀ ಸಾ ದೇವೀ ಪ್ರಸೀದಸ್ವ ಸುರೇಶ್ವರ।।

ಈ ಕ್ರೋಧವನ್ನು ಬಿಡು. ನಿನ್ನಂಥಹ ಸಾಧುಗಳು ಸಿಟ್ಟಾಗುವುದಿಲ್ಲ. ಸುರೇಶ್ವರ! ಆ ದೇವಿಯು ಪರನ ಪತ್ನಿ. ಪ್ರಸೀದನಾಗು.

05012004a ನಿವರ್ತಯ ಮನಃ ಪಾಪಾತ್ಪರದಾರಾಭಿಮರ್ಶನಾತ್।
05012004c ದೇವರಾಜೋಽಸಿ ಭದ್ರಂ ತೇ ಪ್ರಜಾ ಧರ್ಮೇಣ ಪಾಲಯ।।

ಇನ್ನೊಬ್ಬನ ಪತ್ನಿಯನ್ನು ಆಸೆಪಡುವ ಈ ಪಾಪದಿಂದ ನಿನ್ನ ಮನಸ್ಸನ್ನು ಹಿಂದೆ ತೆಗೆದುಕೋ. ನಿನಗೆ ಮಂಗಳವಾಗಲಿ! ದೇವರಾಜನಾಗಿದ್ದೀಯೆ. ಪ್ರಜೆಗಳನ್ನು ಧರ್ಮದಿಂದ ಪಾಲಿಸು!”

05012005a ಏವಮುಕ್ತೋ ನ ಜಗ್ರಾಹ ತದ್ವಚಃ ಕಾಮಮೋಹಿತಃ।
05012005c ಅಥ ದೇವಾನುವಾಚೇದಮಿಂದ್ರಂ ಪ್ರತಿ ಸುರಾಧಿಪಃ।।

ಹೇಳಿದ ಈ ಮಾತುಗಳು ಕಾಮಮೋಹಿತನಾದ ಅವನಿಗೆ ಹಿಡಿಸಲಿಲ್ಲ. ಆಗ ಸುರಾಧಿಪನು ಇಂದ್ರನ ಕುರಿತಾಗಿ ದೇವತೆಗಳಿಗೆ ಹೀಗೆ ಹೇಳಿದನು:

05012006a ಅಹಲ್ಯಾ ಧರ್ಷಿತಾ ಪೂರ್ವಮೃಷಿಪತ್ನೀ ಯಶಸ್ವಿನೀ।
05012006c ಜೀವತೋ ಭರ್ತುರಿಂದ್ರೇಣ ಸ ವಃ ಕಿಂ ನ ನಿವಾರಿತಃ।

“ಹಿಂದೆ ಋಷಿಪತ್ನೀ ಯಶಸ್ವಿನೀ ಅಹಲ್ಯೆಯನ್ನು ಅವಳ ಪತಿಯು ಜೀವಿಸಿರುವಾಗಲೇ ಅವನು ಬಲಾತ್ಕರಿಸಿದ್ದನು. ಆಗ ನೀವು ಅವನನ್ನು ಏಕೆ ತಡೆಯಲಿಲ್ಲ?

05012007a ಬಹೂನಿ ಚ ನೃಶಂಸಾನಿ ಕೃತಾನೀಂದ್ರೇಣ ವೈ ಪುರಾ।
05012007c ವೈಧರ್ಮ್ಯಾಣ್ಯುಪಧಾಶ್ಚೈವ ಸ ವಃ ಕಿಂ ನ ನಿವಾರಿತಃ।।

ಹಿಂದೆ ಇಂದ್ರನು ಬಹಳಷ್ಟು ಧರ್ಮಕ್ಕೆ ವಿರುದ್ಧವಾದ ಮೋಸದ, ಒಳ್ಳೆಯದಲ್ಲದ ಕೃತ್ಯಗಳನ್ನು ಮಾಡಿದ್ದಾನೆ. ಆಗ ಅವನನ್ನು ಏಕೆ ತಡೆಯಲಿಲ್ಲ?

05012008a ಉಪತಿಷ್ಠತು ಮಾಂ ದೇವೀ ಏತದಸ್ಯಾ ಹಿತಂ ಪರಂ।
05012008c ಯುಷ್ಮಾಕಂ ಚ ಸದಾ ದೇವಾಃ ಶಿವಮೇವಂ ಭವಿಷ್ಯತಿ।

ದೇವಿಯು ನನ್ನ ಬಳಿ ಬರಲಿ. ಅವಳಿಗೆ ಇದೇ ಪರಮ ಹಿತವಾದುದು. ದೇವತೆಗಳೇ! ಇದು ನಿಮಗೂ ಕೂಡ ಮಂಗಳಕರವಾಗುತ್ತದೆ!”

05012009 ದೇವಾ ಊಚುಃ।
05012009a ಇಂದ್ರಾಣೀಮಾನಯಿಷ್ಯಾಮೋ ಯಥೇಚ್ಚಸಿ ದಿವಸ್ಪತೇ।
05012009c ಜಹಿ ಕ್ರೋಧಮಿಮಂ ವೀರ ಪ್ರೀತೋ ಭವ ಸುರೇಶ್ವರ।।

ದೇವತೆಗಳು ಹೇಳಿದರು: “ದಿವಸ್ಪತೇ! ನೀನು ಇಚ್ಛಿಸಿದಂತೆ ಇಂದ್ರಾಣಿಯನ್ನು ಕರೆತರುತ್ತೇವೆ. ವೀರ! ಸುರೇಶ್ವರ! ಈ ಕ್ರೋಧವನ್ನು ಬಿಡು. ಪ್ರೀತನಾಗು!””

05012010 ಶಲ್ಯ ಉವಾಚ।
05012010a ಇತ್ಯುಕ್ತ್ವಾ ತೇ ತದಾ ದೇವಾ ಋಷಿಭಿಃ ಸಹ ಭಾರತ।
05012010c ಜಗ್ಮುರ್ಬೃಹಸ್ಪತಿಂ ವಕ್ತುಮಿಂದ್ರಾಣೀಂ ಚಾಶುಭಂ ವಚಃ।।

ಶಲ್ಯನು ಹೇಳಿದನು: “ಭಾರತ! ಹೀಗೆ ಹೇಳಿ ದೇವತೆಗಳು ಋಷಿಗಳೊಂದಿಗೆ ಇಂದ್ರಾಣಿಗೆ ಅಶುಭವಾದ ಮಾತುಗಳನ್ನು ಹೇಳಲು ಬೃಹಸ್ಪತಿಯಲ್ಲಿಗೆ ಹೋದರು.

05012011a ಜಾನೀಮಃ ಶರಣಂ ಪ್ರಾಪ್ತಮಿಂದ್ರಾಣೀಂ ತವ ವೇಶ್ಮನಿ।
05012011c ದತ್ತಾಭಯಾಂ ಚ ವಿಪ್ರೇಂದ್ರ ತ್ವಯಾ ದೇವರ್ಷಿಸತ್ತಮ।।

“ವಿಪ್ರೇಂದ್ರ! ದೇವರ್ಷಿಸತ್ತಮ! ಇಂದ್ರಾಣಿಯು ನಿನ್ನ ಮನೆಯಲ್ಲಿ ಶರಣು ಬಂದಿದ್ದಾಳೆಂದೂ ನೀನು ಅವಳಿಗೆ ಅಭಯವನ್ನಿತ್ತಿದ್ದೀಯೆ ಎಂದೂ ತಿಳಿದಿದ್ದೇವೆ.

05012012a ತೇ ತ್ವಾಂ ದೇವಾಃ ಸಗಂಧರ್ವಾ ಋಷಯಶ್ಚ ಮಹಾದ್ಯುತೇ।
05012012c ಪ್ರಸಾದಯಂತಿ ಚೇಂದ್ರಾಣೀ ನಹುಷಾಯ ಪ್ರದೀಯತಾಂ।।

ಆದರೆ ಮಹಾದ್ಯುತೇ! ಗಂಧರ್ವ ಋಷಿಗಳೊಂದಿಗೆ ನಾವು ದೇವತೆಗಳು ನಹುಷನಿಗಾಗಿ ಇಂದ್ರಾಣಿಯನ್ನು ಬಿಟ್ಟುಕೊಡಲು ನಿನ್ನನ್ನು ಪ್ರಾರ್ಥಿಸುತ್ತಿದ್ದೇವೆ.

05012013a ಇಂದ್ರಾದ್ವಿಶಿಷ್ಟೋ ನಹುಷೋ ದೇವರಾಜೋ ಮಹಾದ್ಯುತಿಃ।
05012013c ವೃಣೋತ್ವಿಯಂ ವರಾರೋಹಾ ಭರ್ತೃತ್ವೇ ವರವರ್ಣಿನೀ।।

ಮಹಾದ್ಯುತಿ ದೇವರಾಜ ನಹುಷನು ಇಂದ್ರನಿಗಿಂತಲೂ ವಿಶಿಷ್ಟನು. ವರವರ್ಣಿನೀ ವರಾರೋಹೆಯು ಅವನನ್ನು ಪತಿಯನ್ನಾಗಿ ವರಿಸಲಿ.”

05012014a ಏವಮುಕ್ತೇ ತು ಸಾ ದೇವೀ ಬಾಷ್ಪಮುತ್ಸೃಜ್ಯ ಸಸ್ವರಂ।
05012014c ಉವಾಚ ರುದತೀ ದೀನಾ ಬೃಹಸ್ಪತಿಮಿದಂ ವಚಃ।।

ಇದನ್ನು ಕೇಳಿದ ಆ ದೇವಿಯು ಕಣ್ಣೀರು ಸುರಿಸಿ ಜೋರಾಗಿ ರೋದಿಸುತ್ತಾ ದೀನಳಾಗಿ ಬೃಹಸ್ಪತಿಗೆ ಹೇಳಿದಳು:

05012015a ನಾಹಮಿಚ್ಚಾಮಿ ನಹುಷಂ ಪತಿಮನ್ವಾಸ್ಯ ತಂ ಪ್ರಭುಂ।
05012015c ಶರಣಾಗತಾಸ್ಮಿ ತೇ ಬ್ರಹ್ಮಂಸ್ತ್ರಾಹಿ ಮಾಂ ಮಹತೋ ಭಯಾತ್।।

“ಬ್ರಹ್ಮನ್! ಪ್ರಭು ನಹುಷನನ್ನು ನನ್ನ ಪತಿಯನ್ನಾಗಿಸಿಕೊಳ್ಳಲು ನನಗೆ ಇಷ್ಟವಿಲ್ಲ. ನಿನ್ನ ಶರಣು ಬಂದಿದ್ದೇನೆ. ಈ ಮಹಾಭಯದಿಂದ ನನ್ನನ್ನು ಪಾರುಮಾಡು!”

05012016 ಬೃಹಸ್ಪತಿರುವಾಚ।
05012016a ಶರಣಾಗತಾಂ ನ ತ್ಯಜೇಯಮಿಂದ್ರಾಣಿ ಮಮ ನಿಶ್ಚಿತಂ।
05012016c ಧರ್ಮಜ್ಞಾಂ ಧರ್ಮಶೀಲಾಂ ಚ ನ ತ್ಯಜೇ ತ್ವಾಮನಿಂದಿತೇ।।

ಬೃಹಸ್ಪತಿಯು ಹೇಳಿದನು: “ಇಂದ್ರಾಣಿ! ಶರಣಾಗತರನ್ನು ತ್ಯಜಿಸುವುದಿಲ್ಲ. ಇದು ನನ್ನ ನಿಶ್ಚಯ. ಅನಿಂದಿತೇ! ಧರ್ಮಜ್ಞೆ ಧರ್ಮಶೀಲೆ ನಿನ್ನನ್ನು ನಾನು ತ್ಯಜಿಸುವುದಿಲ್ಲ.

05012017a ನಾಕಾರ್ಯಂ ಕರ್ತುಮಿಚ್ಚಾಮಿ ಬ್ರಾಹ್ಮಣಃ ಸನ್ವಿಶೇಷತಃ।
05012017c ಶ್ರುತಧರ್ಮಾ ಸತ್ಯಶೀಲೋ ಜಾನನ್ಧರ್ಮಾನುಶಾಸನಂ।।

ಅದರಲ್ಲೂ ಬ್ರಾಹ್ಮಣನಾಗಿರುವ, ಧರ್ಮವನ್ನು ಕೇಳಿ ತಿಳಿದುಕೊಂಡಿರುವ, ಸತ್ಯಶೀಲನಾಗಿರುವ, ಧರ್ಮದ ಅನುಶಾಸನವನ್ನು ತಿಳಿದಿರುವ ನಾನು ಅಕಾರ್ಯವನ್ನು ಮಾಡಲು ಬಯಸುವುದಿಲ್ಲ.

05012018a ನಾಹಮೇತತ್ಕರಿಷ್ಯಾಮಿ ಗಚ್ಚಧ್ವಂ ವೈ ಸುರೋತ್ತಮಾಃ।
05012018c ಅಸ್ಮಿಂಶ್ಚಾರ್ಥೇ ಪುರಾ ಗೀತಂ ಬ್ರಹ್ಮಣಾ ಶ್ರೂಯತಾಮಿದಂ।।

ಸುರೋತ್ತಮರೇ! ನಾನು ಇದನ್ನು ಮಾಡುವುದಿಲ್ಲ! ಹೊರಟು ಹೋಗಿ! ಇದರ ಕುರಿತು ಹಿಂದಿನ ಬ್ರಹ್ಮನ ಈ ಗೀತೆಯನ್ನು ಕೇಳಬೇಕು.

05012019a ನ ತಸ್ಯ ಬೀಜಂ ರೋಹತಿ ಬೀಜಕಾಲೇ। ನ ಚಾಸ್ಯ ವರ್ಷಂ ವರ್ಷತಿ ವರ್ಷಕಾಲೇ।
05012019c ಭೀತಂ ಪ್ರಪನ್ನಂ ಪ್ರದದಾತಿ ಶತ್ರವೇ। ನ ಸೋಽಂತರಂ ಲಭತೇ ತ್ರಾಣಮಿಚ್ಚನ್।।

ಭೀತರಾಗಿ ಶರಣು ಬಂದಿರುವವರನ್ನು ಶತ್ರುಗಳಿಗೆ ಕೊಡುವವನು ತನಗೇ ಬೇಕೆಂದಾಗ ರಕ್ಷಣೆಯನ್ನು ಪಡೆಯುವುದಿಲ್ಲ. ಅವನ ಬೀಜವು ಬೀಜಕಾಲದಲ್ಲಿ ಬೆಳೆಯುವುದಿಲ್ಲ. ಮತ್ತು ಅಂಥಹವನಲ್ಲಿ ಮಳೆಗಾಲದಲ್ಲಿಯೂ ಮಳೆಯು ಬೀಳುವುದಿಲ್ಲ.

05012020a ಮೋಘಮನ್ನಂ ವಿಂದತಿ ಚಾಪ್ಯಚೇತಾಃ। ಸ್ವರ್ಗಾಲ್ಲೋಕಾದ್ಭ್ರಶ್ಯತಿ ನಷ್ಟಚೇಷ್ಟಃ।
05012020c ಭೀತಂ ಪ್ರಪನ್ನಂ ಪ್ರದದಾತಿ ಯೋ ವೈ। ನ ತಸ್ಯ ಹವ್ಯಂ ಪ್ರತಿಗೃಹ್ಣಂತಿ ದೇವಾಃ।।

ಭೀತರಾಗಿ ಶರಣು ಬಂದಿರುವವರನ್ನು ಬಿಟ್ಟುಕೊಡುವವನ ಹವಿಸ್ಸನ್ನು ದೇವತೆಗಳು ಸ್ವೀಕರಿಸುವುದಿಲ್ಲ. ಅವನು ಹಿಡಿಯುವ ಯಾವುದೂ ಯಶಸ್ವಿಯಾಗುವುದಿಲ್ಲ. ಚೇಷ್ಟೆಗಳನ್ನು ಕಳೆದುಕೊಂಡು ಅವನು ಸ್ವರ್ಗಲೋಕದಿಂದ ಬೀಳುತ್ತಾನೆ.

05012021a ಪ್ರಮೀಯತೇ ಚಾಸ್ಯ ಪ್ರಜಾ ಹ್ಯಕಾಲೇ। ಸದಾ ವಿವಾಸಂ ಪಿತರೋಽಸ್ಯ ಕುರ್ವತೇ।
05012021c ಭೀತಂ ಪ್ರಪನ್ನಂ ಪ್ರದದಾತಿ ಶತ್ರವೇ। ಸೇಂದ್ರಾ ದೇವಾಃ ಪ್ರಹರಂತ್ಯಸ್ಯ ವಜ್ರಂ।

ಭೀತರಾಗಿ ಶರಣು ಬಂದಿರುವವರನ್ನು ಶತ್ರುಗಳಿಗೆ ಕೊಡುವವನ ಮಕ್ಕಳು ಅಕಾಲದಲ್ಲಿ ಸಾಯುತ್ತಾರೆ. ಅವನ ಪಿತ್ರುಗಳು ಸದಾ ಜಗಳವಾಡುತ್ತಾರೆ. ಇಂದ್ರನೊಂದಿಗೆ ದೇವತೆಗಳು ಅವನ ಮೇಲೆ ವಜ್ರಪ್ರಹಾರ ಮಾಡುತ್ತಾರೆ.

05012022a ಏತದೇವಂ ವಿಜಾನನ್ವೈ ನ ದಾಸ್ಯಾಮಿ ಶಚೀಮಿಮಾಂ।
05012022c ಇಂದ್ರಾಣೀಂ ವಿಶ್ರುತಾಂ ಲೋಕೇ ಶಕ್ರಸ್ಯ ಮಹಿಷೀಂ ಪ್ರಿಯಾಂ।

ಇದನ್ನು ತಿಳಿದ ನಾನು ಇಂದ್ರಾಣೀ, ಶಕ್ರನ ಪ್ರಿಯ ಮಹಿಷಿಯೆಂದು ಲೋಕಗಳಲ್ಲಿ ವಿಶ್ರುತಳಾದ ಈ ಶಚಿಯನ್ನು ಕೊಡುವುದಿಲ್ಲ.

05012023a ಅಸ್ಯಾ ಹಿತಂ ಭವೇದ್ಯಚ್ಚ ಮಮ ಚಾಪಿ ಹಿತಂ ಭವೇತ್।
05012023c ಕ್ರಿಯತಾಂ ತತ್ಸುರಶ್ರೇಷ್ಠಾ ನ ಹಿ ದಾಸ್ಯಾಮ್ಯಹಂ ಶಚೀಂ।।

ಸುರಶ್ರೇಷ್ಠರೇ! ಇವಳಿಗೆ ಹಿತವಾಗುವ ನನಗೂ ಹಿತವಾಗುವ ಕಾರ್ಯವನ್ನು ಮಾಡಿ. ಶಚಿಯನ್ನು ನಾನು ಕೊಡುವುದೇ ಇಲ್ಲ!””

05012024 ಶಲ್ಯ ಉವಾಚ।
05012024a ಅಥ ದೇವಾಸ್ತಮೇವಾಹುರ್ಗುರುಮಂಗಿರಸಾಂ ವರಂ।
05012024c ಕಥಂ ಸುನೀತಂ ತು ಭವೇನ್ಮಂತ್ರಯಸ್ವ ಬೃಹಸ್ಪತೇ।।

ಶಲ್ಯನು ಹೇಳಿದನು: “ಆಗ ದೇವತೆಗಳು ಅಂಗಿರಸರಲ್ಲಿ ಶ್ರೇಷ್ಠ ಗುರುವಿಗೆ ಹೇಳಿದರು: “ಬೃಹಸ್ಪತೇ! ಹೇಗೆ ಒಳಿತನ್ನು ತರಬಹುದು ಎಂದು ನೀನೇ ಆಲೋಚಿಸು.”

05012025 ಬೃಹಸ್ಪತಿರುವಾಚ।
05012025a ನಹುಷಂ ಯಾಚತಾಂ ದೇವೀ ಕಿಂ ಚಿತ್ಕಾಲಾಂತರಂ ಶುಭಾ।
05012025c ಇಂದ್ರಾಣೀಹಿತಮೇತದ್ಧಿ ತಥಾಸ್ಮಾಕಂ ಭವಿಷ್ಯತಿ।।

ಬೃಹಸ್ಪತಿಯು ಹೇಳಿದನು: “ಈ ಶುಭೆ ದೇವಿ ಇಂದ್ರಾಣಿಯು ನಹುಷನಲ್ಲಿ ಕೆಲವೇ ಸಮಯವನ್ನು ಯಾಚಿಸಲಿ. ಇದರಿಂದ ಇಂದ್ರಾಣಿಗೂ ನಮಗೂ ಹಿತವಾಗುತ್ತದೆ.

05012026a ಬಹುವಿಘ್ನಕರಃ ಕಾಲಃ ಕಾಲಃ ಕಾಲಂ ನಯಿಷ್ಯತಿ।
05012026c ದರ್ಪಿತೋ ಬಲವಾಂಶ್ಚಾಪಿ ನಹುಷೋ ವರಸಂಶ್ರಯಾತ್।।

ಕಾಲವು ಬಹಳಷ್ಟು ವಿಘ್ನಗಳನ್ನುಂಟುಮಾಡುತ್ತದೆ. ಕಾಲವು ಕಾಲವನ್ನು ತಳ್ಳುತ್ತದೆ. ಬಲವಾನ್ ನಹುಷನು ವರವನ್ನಾಶ್ರಯಿಸಿ ದರ್ಪಿತನಾಗಿದ್ದಾನೆ.””

05012027 ಶಲ್ಯ ಉವಾಚ।
05012027a ತತಸ್ತೇನ ತಥೋಕ್ತೇ ತು ಪ್ರೀತಾ ದೇವಾಸ್ತಮಬ್ರುವನ್।
05012027c ಬ್ರಹ್ಮನ್ಸಾಧ್ವಿದಮುಕ್ತಂ ತೇ ಹಿತಂ ಸರ್ವದಿವೌಕಸಾಂ।
05012027e ಏವಮೇತದ್ದ್ವಿಜಶ್ರೇಷ್ಠ ದೇವೀ ಚೇಯಂ ಪ್ರಸಾದ್ಯತಾಂ।।

ಶಲ್ಯನು ಹೇಳಿದನು: “ಅವನು ಹಾಗೆ ಹೇಳಲು ಪ್ರೀತರಾದ ದೇವತೆಗಳು ಅವನಿಗೆ ಹೇಳಿದರು: “ಬ್ರಹ್ಮನ್! ಒಳ್ಳೆಯದನ್ನೇ ಹೇಳಿದ್ದೀಯೆ. ಇದು ಎಲ್ಲ ದಿವೌಕಸರಿಗೂ ಹಿತವಾದುದು. ದ್ವಿಜಶ್ರೇಷ್ಠ! ಇದು ಹೀಗೆಯೇ ಆಗಲಿ. ಈ ದೇವಿಯನ್ನು ಸಂತವಿಸು.”

05012028a ತತಃ ಸಮಸ್ತಾ ಇಂದ್ರಾಣೀಂ ದೇವಾಃ ಸಾಗ್ನಿಪುರೋಗಮಾಃ।
05012028c ಊಚುರ್ವಚನಮವ್ಯಗ್ರಾ ಲೋಕಾನಾಂ ಹಿತಕಾಮ್ಯಯಾ।।

ಆಗ ಅಗ್ನಿಯನ್ನು ಮುಂದಿಟ್ಟುಕೊಂಡು ಸಮಸ್ತ ದೇವತೆಗಳೂ ಲೋಕಗಳ ಹಿತವನ್ನು ಬಯಸಿ ಇಂದ್ರಾಣಿಗೆ ಮೆಲ್ಲನೆ ಹೇಳಿದರು:

05012029a ತ್ವಯಾ ಜಗದಿದಂ ಸರ್ವಂ ಧೃತಂ ಸ್ಥಾವರಜಂಗಮಂ।
05012029c ಏಕಪತ್ನ್ಯಸಿ ಸತ್ಯಾ ಚ ಗಚ್ಚಸ್ವ ನಹುಷಂ ಪ್ರತಿ।।

“ಸ್ಥಾವರ-ಜಂಗಮಗಳ ಈ ಜಗತ್ತನ್ನು ನೀನು ಪೊರೆಯುತ್ತಿರುವೆ. ನೀನು ಪತಿವ್ರತೆ ಮುತ್ತು ಸತ್ಯೆ. ನಹುಷನಲ್ಲಿಗೆ ಹೋಗು.

05012030a ಕ್ಷಿಪ್ರಂ ತ್ವಾಮಭಿಕಾಮಶ್ಚ ವಿನಶಿಷ್ಯತಿ ಪಾರ್ಥಿವಃ।
05012030c ನಹುಷೋ ದೇವಿ ಶಕ್ರಶ್ಚ ಸುರೈಶ್ವರ್ಯಮವಾಪ್ಸ್ಯತಿ।।

ನಿನ್ನನ್ನು ಅಭಿಕಾಮಿಸುವ ಆ ಪಾರ್ಥಿವ ನಹುಷನು ಬೇಗನೇ ವಿನಾಶಗೊಳ್ಳುತ್ತಾನೆ. ದೇವೀ! ಶಕ್ರನು ಸುರೈಶ್ವರ್ಯವನ್ನು ಪುನಃ ಪಡೆಯುತ್ತಾನೆ.”

05012031a ಏವಂ ವಿನಿಶ್ಚಯಂ ಕೃತ್ವಾ ಇಂದ್ರಾಣೀ ಕಾರ್ಯಸಿದ್ಧಯೇ।
05012031c ಅಭ್ಯಗಚ್ಚತ ಸವ್ರೀಡಾ ನಹುಷಂ ಘೋರದರ್ಶನಂ।।

ಈ ರೀತಿಯ ನಿಶ್ಚಯ ಮಾಡಿಕೊಂಡು ಇಂದ್ರಾಣಿಯು ಕಾರ್ಯಸಿದ್ಧಿಗಾಗಿ ನಾಚಿಕೊಂಡವಳಂತೆ ಘೋರದರ್ಶನ ನಹುಷನಲ್ಲಿಗೆ ಹೋದಳು.

05012032a ದೃಷ್ಟ್ವಾ ತಾಂ ನಹುಷಶ್ಚಾಪಿ ವಯೋರೂಪಸಮನ್ವಿತಾಂ।
05012032c ಸಮಹೃಷ್ಯತ ದುಷ್ಟಾತ್ಮಾ ಕಾಮೋಪಹತಚೇತನಃ।।

ಕಾಮದಿಂದ ಚೇತನವನ್ನು ಕಳೆದುಕೊಂಡ ಆ ದುಷ್ಟಾತ್ಮ ನಹುಷನಾದರೋ ವಯೋರೂಪಸಮನ್ವಿತಳಾದ ಅವಳನ್ನು ಕಂಡು ಸಂತೋಷಭರಿತನಾದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಉದ್ಯೋಗ ಪರ್ವಣಿ ಇಂದ್ರಾಣೀಕಾಲಾವಧಿಯಾಚನೇ ದ್ವಾದಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಉದ್ಯೋಗ ಪರ್ವದಲ್ಲಿ ಇಂದ್ರಾಣೀಕಾಲಾವಧಿಯಾಚನೆಯಲ್ಲಿ ಹನ್ನೆರಡನೆಯ ಅಧ್ಯಾಯವು।