011 ಇಂದ್ರಾಣೀಭಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಉದ್ಯೋಗ ಪರ್ವ

ಅಧ್ಯಾಯ 11

ಸಾರ

ನಹುಷನನ್ನು ದೇವರಾಜನನ್ನಾಗಿ ಅಭಿಷೇಕಿಸಿದುದು ಮತ್ತು “ನಿನ್ನ ಕಣ್ಣಮುಂದೆ ಯಾರೇ ಬರಲಿ – ದೇವ, ದಾನವ, ಯಕ್ಷ, ಋಷಿ, ರಾಕ್ಷಸ, ಪಿತೃ, ಗಂಧರ್ವರು - ಅವರನ್ನು ನೋಡಿಯೇ ಅವರ ತೇಜಸ್ಸನ್ನು ಎಳೆದುಕೊಂಡು ಬಲಶಾಲಿಯಾಗುತ್ತೀಯೆ” ಎಂದು ನಹುಷನಿಗೆ ವರವನ್ನಿತ್ತುದು (1-7). ವರದಿಂದ ಮತ್ತನಾದ ನಹುಷನು ಇಂದ್ರಾಣಿ ಶಚಿಯನ್ನು ಬಯಸಿದುದು (8-15). ಶರಣು ಬಂದ ಶಚಿಗೆ ಅಭಯವನ್ನು ನೀಡಿ ಬೃಹಸ್ಪತಿಯು ನಹುಷನನ್ನು ಇನ್ನೂ ಕೆರಳಿಸಿದುದು (16-22).

05011001 ಶಲ್ಯ ಉವಾಚ।
05011001a ಋಷಯೋಽಥಾಬ್ರುವನ್ಸರ್ವೇ ದೇವಾಶ್ಚ ತ್ರಿದಶೇಶ್ವರಾಃ।
05011001c ಅಯಂ ವೈ ನಹುಷಃ ಶ್ರೀಮಾನ್ದೇವರಾಜ್ಯೇಽಭಿಷಿಚ್ಯತಾಂ।
05011001e ತೇ ಗತ್ವಾಥಾಬ್ರುವನ್ಸರ್ವೇ ರಾಜಾ ನೋ ಭವ ಪಾರ್ಥಿವ।।

ಶಲ್ಯನು ಹೇಳಿದನು: “ಆಗ ಎಲ್ಲ ಋಷಿಗಳೂ ತ್ರಿದಶೇಶ್ವರರೂ ದೇವತೆಗಳೂ “ಶ್ರೀಮಾನ್ ನಹುಷನು ದೇವರಾಜನಾಗಿ ಅಭಿಷಿಕ್ತನಾಗಲಿ!” ಎಂದು ಹೇಳಿದರು. ಅವರೆಲ್ಲರೂ ಅವನಲ್ಲಿಗೆ ಹೋಗಿ ಹೇಳಿದರು: “ಪಾರ್ಥಿವ! ನಮ್ಮ ರಾಜನಾಗು!”

05011002a ಸ ತಾನುವಾಚ ನಹುಷೋ ದೇವಾನೃಷಿಗಣಾಂಸ್ತಥಾ।
05011002c ಪಿತೃಭಿಃ ಸಹಿತಾನ್ರಾಜನ್ಪರೀಪ್ಸನ್ ಹಿತಮಾತ್ಮನಃ।।

ರಾಜನ್! ತನ್ನ ಹಿತವನ್ನು ಬಯಸಿ ಆ ನಹುಷನು ಪಿತೃಗಳ ಸಹಿತರಿಂದ ದೇವ ಋಷಿಗಣಗಳಿಗೆ ಹೇಳಿದನು:

05011003a ದುರ್ಬಲೋಽಹಂ ನ ಮೇ ಶಕ್ತಿರ್ಭವತಾಂ ಪರಿಪಾಲನೇ।
05011003c ಬಲವಾಂ ಜಾಯತೇ ರಾಜಾ ಬಲಂ ಶಕ್ರೇ ಹಿ ನಿತ್ಯದಾ।।

“ನಾನು ದುರ್ಬಲನಾಗಿದ್ದೇನೆ. ನಿಮ್ಮನ್ನು ಪರಿಪಾಲಿಸಲು ನನ್ನಲ್ಲಿ ಶಕ್ತಿಯಿಲ್ಲ. ಬಲಶಾಲಿಯು ರಾಜನಾಗುತ್ತಾನೆ. ಶಕ್ರನು ಯಾವಾಗಲೂ ಬಲಶಾಲಿಯಾಗಿದ್ದನು.”

05011004a ತಮಬ್ರುವನ್ಪುನಃ ಸರ್ವೇ ದೇವಾಃ ಸರ್ಷಿಪುರೋಗಮಾಃ।
05011004c ಅಸ್ಮಾಕಂ ತಪಸಾ ಯುಕ್ತಃ ಪಾಹಿ ರಾಜ್ಯಂ ತ್ರಿವಿಷ್ಟಪೇ।।

ಋಷಿಗಳನ್ನು ಮುಂದಿಟ್ಟುಕೊಂಡ ಎಲ್ಲ ದೇವತೆಗಳೂ ಅವನಿಗೆ ಪುನಃ ಹೇಳಿದರು: “ನಮ್ಮ ತಪಸ್ಸುಗಳಿಂದ ಯುಕ್ತನಾಗಿ ತ್ರಿವಿಷ್ಟಪದಲ್ಲಿ ರಾಜ್ಯವನ್ನು ಆಳು!

05011005a ಪರಸ್ಪರಭಯಂ ಘೋರಮಸ್ಮಾಕಂ ಹಿ ನ ಸಂಶಯಃ।
05011005c ಅಭಿಷಿಚ್ಯಸ್ವ ರಾಜೇಂದ್ರ ಭವ ರಾಜಾ ತ್ರಿವಿಷ್ಟಪೇ।।

ನಮ್ಮ ಪರಸ್ಪರರಲ್ಲಿ ಭಯವಿದೆ ಎನ್ನುವುದು ನಿಃಸಂಶಯ. ರಾಜೇಂದ್ರ! ಅಭಿಷೇಕಿಸಿಕೊಂಡು ತ್ರಿವಿಷ್ಟಪದಲ್ಲಿ ರಾಜನಾಗು.

05011006a ದೇವದಾನವಯಕ್ಷಾಣಾಮೃಷೀಣಾಂ ರಕ್ಷಸಾಂ ತಥಾ।
05011006c ಪಿತೃಗಂಧರ್ವಭೂತಾನಾಂ ಚಕ್ಷುರ್ವಿಷಯವರ್ತಿನಾಂ।
05011006e ತೇಜ ಆದಾಸ್ಯಸೇ ಪಶ್ಯನ್ಬಲವಾಂಶ್ಚ ಭವಿಷ್ಯಸಿ।।

ನಿನ್ನ ಕಣ್ಣಮುಂದೆ ಯಾರೇ ಬರಲಿ – ದೇವ, ದಾನವ, ಯಕ್ಷ, ಋಷಿ, ರಾಕ್ಷಸ, ಪಿತೃ, ಗಂಧರ್ವರು - ಅವರನ್ನು ನೋಡಿಯೇ ಅವರ ತೇಜಸ್ಸನ್ನು ಎಳೆದುಕೊಂಡು ಬಲಶಾಲಿಯಾಗುತ್ತೀಯೆ.

05011007a ಧರ್ಮಂ ಪುರಸ್ಕೃತ್ಯ ಸದಾ ಸರ್ವಲೋಕಾಧಿಪೋ ಭವ।
05011007c ಬ್ರಹ್ಮರ್ಷೀಂಶ್ಚಾಪಿ ದೇವಾಂಶ್ಚ ಗೋಪಾಯಸ್ವ ತ್ರಿವಿಷ್ಟಪೇ।।

ಸದಾ ಧರ್ಮವನ್ನೇ ಮೊದಲಾಗಿರಿಸಿಕೊಂಡು ಸರ್ವ ಲೋಕಗಳ ಅಧಿಪತಿಯಾಗು. ತ್ರಿವಿಷ್ಟಪದಲ್ಲಿ ಬ್ರಹ್ಮರ್ಷಿಗಳನ್ನು ಮತ್ತು ದೇವತೆಗಳನ್ನು ರಕ್ಷಿಸು.”

05011008a ಸುದುರ್ಲಭಂ ವರಂ ಲಬ್ಧ್ವಾ ಪ್ರಾಪ್ಯ ರಾಜ್ಯಂ ತ್ರಿವಿಷ್ಟಪೇ।
05011008c ಧರ್ಮಾತ್ಮಾ ಸತತಂ ಭೂತ್ವಾ ಕಾಮಾತ್ಮಾ ಸಮಪದ್ಯತ।।

ಸತತ ಧರ್ಮಾತ್ಮನಾಗಿದ್ದರೂ, ತ್ರಿವಿಷ್ಟಪದಲ್ಲಿ ರಾಜ್ಯವನ್ನು ಪಡೆದು, ಸುದುರ್ಲಭ ವರವನ್ನು ಪಡೆದು ಅವನು ಕಾಮಾತ್ಮನಾಗತೊಡಗಿದನು.

05011009a ದೇವೋದ್ಯಾನೇಷು ಸರ್ವೇಷು ನಂದನೋಪವನೇಷು ಚ।
05011009c ಕೈಲಾಸೇ ಹಿಮವತ್ಪೃಷ್ಠೇ ಮಂದರೇ ಶ್ವೇತಪರ್ವತೇ।
05011009e ಸಹ್ಯೇ ಮಹೇಂದ್ರೇ ಮಲಯೇ ಸಮುದ್ರೇಷು ಸರಿತ್ಸು ಚ।।
05011010a ಅಪ್ಸರೋಭಿಃ ಪರಿವೃತೋ ದೇವಕನ್ಯಾಸಮಾವೃತಃ।
05011010c ನಹುಷೋ ದೇವರಾಜಃ ಸನ್ಕ್ರೀಡನ್ಬಹುವಿಧಂ ತದಾ।।

ಆಗ ದೇವರಾಜ ನಹುಷನು ಎಲ್ಲ ದೇವೋದ್ಯಾನಗಳಲ್ಲಿ, ನಂದನ ಉಪವನದಲ್ಲಿ, ಕೈಲಾಸ ಹಿಮಾಲಯದ ತಪ್ಪಲಿನಲ್ಲಿ, ಮಂದರ ಶ್ವೇತ ಪರ್ವತಗಳಲ್ಲಿ, ಸಹ್ಯಾದ್ರಿ-ಮಹೇಂದ್ರ ಮಲಯಗಳಲ್ಲಿ, ಸಮುದ್ರ ಸರೋವರಗಳಲ್ಲಿ, ಅಪ್ಸರೆಯರು ಮತ್ತು ದೇವ ಕನ್ಯೆಯರಿಂದ ಸಮಾವೃತನಾಗಿ ಬಹುವಿಧದ ಕ್ರೀಡೆಗಳಲ್ಲಿ ತೊಡಗಿದನು.

05011011a ಶೃಣ್ವನ್ದಿವ್ಯಾ ಬಹುವಿಧಾಃ ಕಥಾಃ ಶ್ರುತಿಮನೋಹರಾಃ।
05011011c ವಾದಿತ್ರಾಣಿ ಚ ಸರ್ವಾಣಿ ಗೀತಂ ಚ ಮಧುರಸ್ವರಂ।।

ಬಹುವಿಧದ ದಿವ್ಯ ಕಥೆಗಳನ್ನೂ, ಶ್ರುತಿಮನೋಹರ ವಾದ್ಯಗಳೆಲ್ಲವನ್ನೂ, ಮಧುರಸ್ವರ ಗೀತೆಗಳನ್ನೂ ಕೇಳಿದನು.

05011012a ವಿಶ್ವಾವಸುರ್ನಾರದಶ್ಚ ಗಂಧರ್ವಾಪ್ಸರಸಾಂ ಗಣಾಃ।
05011012c ಋತವಃ ಷಟ್ಚ ದೇವೇಂದ್ರಂ ಮೂರ್ತಿಮಂತ ಉಪಸ್ಥಿತಾಃ।
05011012e ಮಾರುತಃ ಸುರಭಿರ್ವಾತಿ ಮನೋಜ್ಞಾಃ ಸುಖಶೀತಲಃ।।

ವಿಶ್ವಾವಸು, ನಾರದ, ಗಂಧರ್ವ ಅಪ್ಸರ ಗಣಗಳು, ಮತ್ತು ಆರು ಋತುಗಳು ಮೂರ್ತಿಮಂತರಾಗಿ ದೇವೇಂದ್ರನ ಉಪಸ್ಥಿತಿಯಲ್ಲಿದ್ದರು. ಸುಗಂಧಗಳನ್ನು ಹೊತ್ತು ಮಾರುತನು ಮನೋಜ್ಞ ಸುಖಶೀತಲವಾಗಿ ಬೀಸಿದನು.

05011013a ಏವಂ ಹಿ ಕ್ರೀಡತಸ್ತಸ್ಯ ನಹುಷಸ್ಯ ಮಹಾತ್ಮನಃ।
05011013c ಸಂಪ್ರಾಪ್ತಾ ದರ್ಶನಂ ದೇವೀ ಶಕ್ರಸ್ಯ ಮಹಿಷೀ ಪ್ರಿಯಾ।।

ಹೀಗೆ ಮಹಾತ್ಮ ನಹುಷನು ಕ್ರೀಡಿಸುತ್ತಿರಲು, ಅವನಿಗೆ ಶಕ್ರನ ಪ್ರಿಯ ಮಹಿಷಿ ದೇವಿಯ ದರ್ಶನವು ದೊರಕಿತು.

05011014a ಸ ತಾಂ ಸಂದೃಶ್ಯ ದುಷ್ಟಾತ್ಮಾ ಪ್ರಾಹ ಸರ್ವಾನ್ಸಭಾಸದಃ।
05011014c ಇಂದ್ರಸ್ಯ ಮಹಿಷೀ ದೇವೀ ಕಸ್ಮಾನ್ಮಾಂ ನೋಪತಿಷ್ಠತಿ।।

ಅವಳನ್ನು ನೋಡಿದ ಆ ದುಷ್ಟಾತ್ಮನು ಸಭಾಸದರೆಲ್ಲರಲ್ಲಿ ಕೇಳಿದನು: “ಇಂದ್ರನ ಮಹಿಷಿ ದೇವಿಯು ಏಕೆ ನನ್ನೊಂದಿಗೆ ಕುಳಿತುಕೊಳ್ಳುವುದಿಲ್ಲ?

05011015a ಅಹಮಿಂದ್ರೋಽಸ್ಮಿ ದೇವಾನಾಂ ಲೋಕಾನಾಂ ಚ ತಥೇಶ್ವರಃ।
05011015c ಆಗಚ್ಚತು ಶಚೀ ಮಹ್ಯಂ ಕ್ಷಿಪ್ರಮದ್ಯ ನಿವೇಶನಂ।।

ನಾನು ದೇವತೆಗಳ ಇಂದ್ರ ಮತ್ತು ಹಾಗೆಯೇ ಲೋಕಗಳ ಈಶ್ವರ. ಬೇಗನೆ ಶಚಿಯು ಇಂದು ನನ್ನ ನಿವೇಶನಕ್ಕೆ ಬರಲಿ!”

05011016a ತಚ್ಚ್ರುತ್ವಾ ದುರ್ಮನಾ ದೇವೀ ಬೃಹಸ್ಪತಿಮುವಾಚ ಹ।
05011016c ರಕ್ಷ ಮಾಂ ನಹುಷಾದ್ಬ್ರಹ್ಮಂಸ್ತವಾಸ್ಮಿ ಶರಣಂ ಗತಾ।।

ಅದನ್ನು ಕೇಳಿ ದುಃಖಿತಳಾದ ದೇವಿಯು ಬೃಹಸ್ಪತಿಗೆ ಹೇಳಿದಳು: “ಬ್ರಹ್ಮನ್! ನನ್ನನ್ನು ನಹುಷನಿಂದ ರಕ್ಷಿಸು! ನಿನ್ನ ಶರಣು ಬಂದಿದ್ದೇನೆ!

05011017a ಸರ್ವಲಕ್ಷಣಸಂಪನ್ನಾಂ ಬ್ರಹ್ಮಸ್ತ್ವಂ ಮಾಂ ಪ್ರಭಾಷಸೇ।
05011017c ದೇವರಾಜಸ್ಯ ದಯಿತಾಮತ್ಯಂತಸುಖಭಾಗಿನೀಂ।।
05011018a ಅವೈಧವ್ಯೇನ ಸಂಯುಕ್ತಾಮೇಕಪತ್ನೀಂ ಪತಿವ್ರತಾಂ।
05011018c ಉಕ್ತವಾನಸಿ ಮಾಂ ಪೂರ್ವಮೃತಾಂ ತಾಂ ಕುರು ವೈ ಗಿರಂ।।

ಬ್ರಹ್ಮನ್! ನಾನು ಸರ್ವಲಕ್ಷಣಸಂಪನ್ನಳು. ದೇವರಾಜನ ಪ್ರಿಯಳು. ಅತ್ಯಂತ ಸುಖಭಾಗಿನಿ. ಅವೈಧವ್ಯದಿಂದ ಸಂಯುಕ್ತಳಾಗಿದ್ದೇನೆ. ಏಕಪತ್ನಿಯಾಗಿ ಪತಿವ್ರತೆಯಾಗಿದ್ದೇನೆ ಎಂದು ನನಗೆ ನೀನು ಯಾವಾಗಲೂ ಹೇಳುತ್ತೀಯೆ ಮತ್ತು ಹಿಂದೆ ಹೇಳಿದ್ದೀಯೆ. ನಿನ್ನ ಮಾತು ಸುಳ್ಳಾಗದಂತೆ ಮಾಡು!

05011019a ನೋಕ್ತಪೂರ್ವಂ ಚ ಭಗವನ್ಮೃಷಾ ತೇ ಕಿಂ ಚಿದೀಶ್ವರ।
05011019c ತಸ್ಮಾದೇತದ್ಭವೇತ್ಸತ್ಯಂ ತ್ವಯೋಕ್ತಂ ದ್ವಿಜಸತ್ತಮ।।

ಭಗವನ್! ಈಶ್ವರ! ಹಿಂದೆ ನೀನು ಸುಳ್ಳನ್ನು ಎಂದೂ ಹೇಳಿದ್ದಿಲ್ಲ. ದ್ವಿಜಸತ್ತಮ! ಆದುದರಿಂದ ನೀನು ಹೇಳಿದ ಇದನ್ನೂ ಸತ್ಯವನ್ನಾಗಿಸಬೇಕು.”

05011020a ಬೃಹಸ್ಪತಿರಥೋವಾಚ ಇಂದ್ರಾಣೀಂ ಭಯಮೋಹಿತಾಂ।
05011020c ಯದುಕ್ತಾಸಿ ಮಯಾ ದೇವಿ ಸತ್ಯಂ ತದ್ಭವಿತಾ ಧ್ರುವಂ।।

ಆಗ ಭಯಮೋಹಿತ ಇಂದ್ರಾಣಿಗೆ ಬೃಹಸ್ಪತಿಯು ಹೇಳಿದನು: “ದೇವಿ! ನಾನು ಏನನ್ನು ಹೇಳುತ್ತೇನೋ ಅದು ಸತ್ಯವಾಗುವುದು ಖಂಡಿತ.

05011021a ದ್ರಕ್ಷ್ಯಸೇ ದೇವರಾಜಾನಮಿಂದ್ರಂ ಶೀಘ್ರಮಿಹಾಗತಂ।
05011021c ನ ಭೇತವ್ಯಂ ಚ ನಹುಷಾತ್ಸತ್ಯಮೇತದ್ಬ್ರವೀಮಿ ತೇ।
05011021e ಸಮಾನಯಿಷ್ಯೇ ಶಕ್ರೇಣ ನಚಿರಾದ್ಭವತೀಮಹಂ।।

ದೇವರಾಜ ಇಂದ್ರನು ಶೀಘ್ರದಲ್ಲಿಯೇ ಇಲ್ಲಿಗೆ ಬರುವುದನ್ನು ನೋಡುತ್ತೀಯೆ. ನಹುಷನಿಂದ ನಿನಗೆ ಯಾವುದೂ ಭಯವಿಲ್ಲ. ಸತ್ಯವನ್ನು ಹೇಳುತ್ತಿದ್ದೇನೆ. ಸ್ವಲ್ಪವೇ ಸಮಯದಲ್ಲಿ ನಾನು ನಿನ್ನನ್ನು ಶಕ್ರನೊಂದಿಗೆ ಕೂಡಿಸುತ್ತೇನೆ.”

05011022a ಅಥ ಶುಶ್ರಾವ ನಹುಷ ಇಂದ್ರಾಣೀಂ ಶರಣಂ ಗತಾಂ।
05011022c ಬೃಹಸ್ಪತೇರಂಗಿರಸಶ್ಚುಕ್ರೋಧ ಸ ನೃಪಸ್ತದಾ।।

ಇಂದ್ರಾಣಿಯು ಆಂಗಿರಸ ಬೃಹಸ್ಪತಿಯ ಶರಣು ಹೋಗಿದ್ದಾಳೆ ಎಂದು ಕೇಳಿದ ನೃಪ ನಹುಷನು ಕ್ರೋಧಿತನಾದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಉದ್ಯೋಗ ಪರ್ವಣಿ ಇಂದ್ರಾಣೀಭಯೇ ಏಕಾದಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಉದ್ಯೋಗ ಪರ್ವದಲ್ಲಿ ಇಂದ್ರಾಣೀಭಯದಲ್ಲಿ ಹನ್ನೊಂದನೆಯ ಅಧ್ಯಾಯವು।