010 ವೃತ್ರವಧೇ ಇಂದ್ರವಿಜಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಉದ್ಯೋಗ ಪರ್ವ

ಅಧ್ಯಾಯ 10

ಸಾರ

ದೇವ-ಋಷಿಗಣಗಳು ವಿಷ್ಣುವನ್ನು ಮೊರೆಹೊಗಲು, ವಿಷ್ಣುವು ವೃತ್ರನೊಂದಿಗೆ ಸಂಧಿಮಾಡಿಕೊಳ್ಳಲು ಸೂಚಿಸುವುದು (1-13). ಒಣಗಿದುದರಿಂದಾಲೀ ಒದ್ದೆಯಾಗಿದುದರಿಂದಾಗಲೀ, ಕಲ್ಲಿನಿಂದಾಗಲೀ ಮರದಿಂದಾಗಲೀ, ಶಸ್ತ್ರದಿಂದಾಗಲೀ ವಜ್ರದಿಂದಾಗಲೀ, ದಿನದಲ್ಲಿಯಾಗಲೀ ರಾತ್ರಿಯಲ್ಲಾಗಲೀ ಶಕ್ರನು ಅಥವಾ ದೇವತೆಗಳು ನನ್ನನ್ನು ಕೊಲ್ಲದಿರಲಿ ಎಂದು ವೃತ್ರನೊಂದಿಗೆ ಒಪ್ಪಂದವಾದುದು (14-33). ಉಪಾಯದಿಂದ ಅವಕಾಶವನ್ನು ನೋಡಿಕೊಂಡು ಇಂದ್ರನು ವಿಷ್ಣುವಿನ ಸಹಾಯದಿಂದ ವೃತ್ರನನ್ನು ವಧಿಸಿದುದು (34-38). ತ್ರಿಶಿರ ಬ್ರಹ್ಮಹತ್ಯೆಯ ಭಯದಿಂದ ಪೀಡಿತನಾದ ಇಂದ್ರನು ಲೋಕಗಳ ಆಳವನ್ನು ಸೇರಿ ಸಂಜ್ಞೆಗಳನ್ನು ಕಳೆದುಕೊಂಡು ವಿಚೇತನನಾದುದು; ದೇವಲೋಕದಲ್ಲಿ ಇಂದ್ರನೇ ಇಲ್ಲದಂತಾದುದು (39-47).

05010001 ಇಂದ್ರ ಉವಾಚ।
05010001a ಸರ್ವಂ ವ್ಯಾಪ್ತಮಿದಂ ದೇವಾ ವೃತ್ರೇಣ ಜಗದವ್ಯಯಂ।
05010001c ನ ಹ್ಯಸ್ಯ ಸದೃಶಂ ಕಿಂ ಚಿತ್ಪ್ರತಿಘಾತಾಯ ಯದ್ಭವೇತ್।।

ಇಂದ್ರನು ಹೇಳಿದನು: “ದೇವತೆಗಳೇ! ಈ ಅವ್ಯಯ ಜಗತ್ತೆಲ್ಲವೂ ವೃತ್ರನಿಂದ ವ್ಯಾಪ್ತಗೊಂಡಿದೆ. ಅವನನ್ನು ಎದುರಿಸುವಂತಹುದು ಯಾವುದೂ ಇಲ್ಲವೆನಿಸುತ್ತಿದೆ.

05010002a ಸಮರ್ಥೋ ಹ್ಯಭವಂ ಪೂರ್ವಮಸಮರ್ಥೋಽಸ್ಮಿ ಸಾಂಪ್ರತಂ।
05010002c ಕಥಂ ಕುರ್ಯಾಂ ನು ಭದ್ರಂ ವೋ ದುಷ್ಪ್ರಧರ್ಷಃ ಸ ಮೇ ಮತಃ।।

ಹಿಂದೆ ನಾನು ಸಮರ್ಥನಾಗಿದ್ದೆ. ಆದರೆ ಈಗ ಅಸಮರ್ಥನಾಗಿದ್ದೇನೆ. ನಿಮ್ಮೆಲ್ಲರ ಭದ್ರತೆಗೆ ಏನು ಮಾಡಲಿ? ಅವನು ದುಷ್ಪ್ರಧರ್ಷನೆಂದು ನನ್ನ ಅಭಿಪ್ರಾಯ.

05010003a ತೇಜಸ್ವೀ ಚ ಮಹಾತ್ಮಾ ಚ ಯುದ್ಧೇ ಚಾಮಿತವಿಕ್ರಮಃ।
05010003c ಗ್ರಸೇತ್ತ್ರಿಭುವನಂ ಸರ್ವಂ ಸದೇವಾಸುರಮಾನುಷಂ।।

ಯುದ್ಧದಲ್ಲಿ ಅಮಿತವಿಕ್ರಮಿಯಾದ ಆ ತೇಜಸ್ವೀ ಮಹಾತ್ಮನು ದೇವಾಸುರಮನುಷ್ಯರನ್ನೂ ಸೇರಿಸಿ ಮೂರು ಭುವನಗಳನ್ನು ನುಂಗಲು ಸಮರ್ಥನಾಗಿದ್ದಾನೆ.

05010004a ತಸ್ಮಾದ್ವಿನಿಶ್ಚಯಮಿಮಂ ಶೃಣುಧ್ವಂ ಮೇ ದಿವೌಕಸಃ।
05010004c ವಿಷ್ಣೋಃ ಕ್ಷಯಮುಪಾಗಮ್ಯ ಸಮೇತ್ಯ ಚ ಮಹಾತ್ಮನಾ।
05010004e ತೇನ ಸಮ್ಮಂತ್ರ್ಯ ವೇತ್ಸ್ಯಾಮೋ ವಧೋಪಾಯಂ ದುರಾತ್ಮನಃ।।

ಆದುದರಿಂದ ದಿವೌಕಸರೇ! ನನ್ನ ಈ ನಿಶ್ಚಯವನ್ನು ಕೇಳಿ. ಒಟ್ಟಿಗೇ ಮಹಾತ್ಮ ವಿಷ್ಣುವಿನಲ್ಲಿಗೆ ಹೋಗಿ ಅವನ ಸಲಹೆಯಂತೆ ಈ ದುರಾತ್ಮನ ವಧೆಯ ಉಪಾಯವನ್ನು ಮಾಡಬೇಕು.””

05010005 ಶಲ್ಯ ಉವಾಚ।
05010005a ಏವಮುಕ್ತೇ ಮಘವತಾ ದೇವಾಃ ಸರ್ಷಿಗಣಾಸ್ತದಾ।
05010005c ಶರಣ್ಯಂ ಶರಣಂ ದೇವಂ ಜಗ್ಮುರ್ವಿಷ್ಣುಂ ಮಹಾಬಲಂ।।

ಶಲ್ಯನು ಹೇಳಿದನು: “ಮಘವತನು ಹೀಗೆ ಹೇಳಲು ದೇವತೆ ಋಷಿಗಣಗಳು ಮಹಾಬಲ, ಶರಣ್ಯ, ದೇವ ವಿಷ್ಣುವಿನ ಶರಣುಹೊಕ್ಕರು.

05010006a ಊಚುಶ್ಚ ಸರ್ವೇ ದೇವೇಶಂ ವಿಷ್ಣುಂ ವೃತ್ರಭಯಾರ್ದಿತಾಃ।
05010006c ತ್ವಯಾ ಲೋಕಾಸ್ತ್ರಯಃ ಕ್ರಾಂತಾಸ್ತ್ರಿಭಿರ್ವಿಕ್ರಮಣೈಃ ಪ್ರಭೋ।।

ವೃತ್ರನಿಂದ ಭಯಾರ್ದಿತ ಅವರೆಲ್ಲರೂ ದೇವೇಶ ವಿಷ್ಣುವಿಗೆ ಹೇಳಿದರು: “ಪ್ರಭೋ! ಹಿಂದೆ ನೀನು ಮೂರು ಲೋಕಗಳನ್ನು ಮೂರು ಹೆಜ್ಜೆಗಳಲ್ಲಿ ಆವರಿಸಿದ್ದೆ.

05010007a ಅಮೃತಂ ಚಾಹೃತಂ ವಿಷ್ಣೋ ದೈತ್ಯಾಶ್ಚ ನಿಹತಾ ರಣೇ।
05010007c ಬಲಿಂ ಬದ್ಧ್ವಾ ಮಹಾದೈತ್ಯಂ ಶಕ್ರೋ ದೇವಾಧಿಪಃ ಕೃತಃ।।

ವಿಷ್ಣು! ಅಮೃತವನ್ನು ಅಪಹರಿಸಿ ನೀನು ರಣದಲ್ಲಿ ದೈತ್ಯರನ್ನು ಸಂಹರಿಸಿದ್ದೆ. ಮಹಾದೈತ್ಯ ಬಲಿಯನ್ನು ಬಂಧಿಸಿ ಶಕ್ರನನ್ನು ದೇವಾಧಿಪನನ್ನಾಗಿ ಮಾಡಿದೆ.

05010008a ತ್ವಂ ಪ್ರಭುಃ ಸರ್ವಲೋಕಾನಾಂ ತ್ವಯಾ ಸರ್ವಮಿದಂ ತತಂ।
05010008c ತ್ವಂ ಹಿ ದೇವ ಮಹಾದೇವಃ ಸರ್ವಲೋಕನಮಸ್ಕೃತಃ।।

ಸರ್ವಲೋಕಗಳ ಪ್ರಭು ನೀನು. ಇವೆಲ್ಲವೂ ನಿನ್ನಿಂದ ತುಂಬಿದೆ. ನೀನೇ ದೇವ, ಮಹಾದೇವ ಮತ್ತು ಸರ್ವಲೋಕನಮಸ್ಕೃತ.

05010009a ಗತಿರ್ಭವ ತ್ವಂ ದೇವಾನಾಂ ಸೇಂದ್ರಾಣಾಮಮರೋತ್ತಮ।
05010009c ಜಗದ್ವ್ಯಾಪ್ತಮಿದಂ ಸರ್ವಂ ವೃತ್ರೇಣಾಸುರಸೂದನ।।

ಅಮರೋತ್ತಮ! ನೀನು ಇಂದ್ರನೊಂದಿಗೆ ದೇವತೆಗಳ ಗತಿಯಾಗು. ಅಸುರಸೂದನ! ಈ ಜಗತ್ತೆಲ್ಲವೂ ವೃತ್ರನಿಂದ ವ್ಯಾಪಿತಗೊಂಡಿದೆ.”

05010010 ವಿಷ್ಣುರುವಾಚ।
05010010a ಅವಶ್ಯಂ ಕರಣೀಯಂ ಮೇ ಭವತಾಂ ಹಿತಮುತ್ತಮಂ।
05010010c ತಸ್ಮಾದುಪಾಯಂ ವಕ್ಷ್ಯಾಮಿ ಯಥಾಸೌ ನ ಭವಿಷ್ಯತಿ।।

ವಿಷ್ಣುವು ಹೇಳಿದನು: “ನಿಮ್ಮ ಉತ್ತಮ ಹಿತಕ್ಕಾಗಿ ಅವಶ್ಯವಾದುದನ್ನು ನಾನು ಮಾಡಲೇಬೇಕು. ಆದುದರಿಂದ ಅವನು ಇಲ್ಲದಂತೆ ಮಾಡುವ ಉಪಾಯವನ್ನು ಹೇಳುತ್ತೇನೆ.

05010011a ಗಚ್ಚಧ್ವಂ ಸರ್ಷಿಗಂಧರ್ವಾ ಯತ್ರಾಸೌ ವಿಶ್ವರೂಪಧೃಕ್।
05010011c ಸಾಮ ತಸ್ಯ ಪ್ರಯುಂಜಧ್ವಂ ತತ ಏನಂ ವಿಜೇಷ್ಯಥ।।

ಋಷಿಗಂಧರ್ವರೊಡನೆ ವಿಶ್ವರೂಪವನ್ನು ತಾಳಿರುವ ವೃತ್ರನಿರುವಲ್ಲಿಗೆ ಹೋಗಿ. ಅವನೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲು ಪ್ರಯತ್ನಿಸಿ. ಇದರಿಂದ ನೀವು ಅವನನ್ನು ಗೆಲ್ಲಬಲ್ಲಿರಿ.

05010012a ಭವಿಷ್ಯತಿ ಗತಿರ್ದೇವಾಃ ಶಕ್ರಸ್ಯ ಮಮ ತೇಜಸಾ।
05010012c ಅದೃಶ್ಯಶ್ಚ ಪ್ರವೇಕ್ಷ್ಯಾಮಿ ವಜ್ರಮಸ್ಯಾಯುಧೋತ್ತಮಂ।।

ದೇವತೆಗಳೇ! ಶಕ್ರನಿಗೆ ನನ್ನ ತೇಜಸ್ಸೇ ಗತಿ. ಅದೃಶ್ಯನಾಗಿದ್ದುಕೊಂಡು ನಾನು ಆ ಉತ್ತಮ ವಜ್ರಾಯುಧವನ್ನು ಪ್ರವೇಶಿಸುತ್ತೇನೆ.

05010013a ಗಚ್ಚಧ್ವಮೃಷಿಭಿಃ ಸಾರ್ಧಂ ಗಂಧರ್ವೈಶ್ಚ ಸುರೋತ್ತಮಾಃ।
05010013c ವೃತ್ರಸ್ಯ ಸಹ ಶಕ್ರೇಣ ಸಂಧಿಂ ಕುರುತ ಮಾಚಿರಂ।।

ಸುರೋತ್ತಮರೇ! ಹೊರಡಿ! ಆದಷ್ಟು ಬೇಗ ಋಷಿ-ಗಂಧರ್ವರೊಡಗೂಡಿ ವೃತ್ರನೊಂದಿಗೆ ಶಕ್ರನ ಸಂಧಿಯನ್ನು ಮಾಡಿಸಿ.””

05010014 ಶಲ್ಯ ಉವಾಚ।
05010014a ಏವಮುಕ್ತಾಸ್ತು ದೇವೇನ ಋಷಯಸ್ತ್ರಿದಶಾಸ್ತಥಾ।
05010014c ಯಯುಃ ಸಮೇತ್ಯ ಸಹಿತಾಃ ಶಕ್ರಂ ಕೃತ್ವಾ ಪುರಃಸರಂ।।

ಶಲ್ಯನು ಹೇಳಿದನು: “ದೇವನು ಹೀಗೆ ಹೇಳಲು ಋಷಿಗಳು, ತ್ರಿದಶರು, ಒಂದಾಗಿ ಶಕ್ರನನ್ನು ಮುಂದಿಟ್ಟುಕೊಂಡು ಹೋದರು.

05010015a ಸಮೀಪಮೇತ್ಯ ಚ ತದಾ ಸರ್ವ ಏವ ಮಹೌಜಸಃ।
05010015c ತಂ ತೇಜಸಾ ಪ್ರಜ್ವಲಿತಂ ಪ್ರತಪಂತಂ ದಿಶೋ ದಶ।।
05010016a ಗ್ರಸಂತಮಿವ ಲೋಕಾಂಸ್ತ್ರೀನ್ಸೂರ್ಯಾಚಂದ್ರಮಸೌ ಯಥಾ।
05010016c ದದೃಶುಸ್ತತ್ರ ತೇ ವೃತ್ರಂ ಶಕ್ರೇಣ ಸಹ ದೇವತಾಃ।।

ಶಕ್ರನೊಂದಿಗೆ ದೇವತೆಗಳೆಲ್ಲರೂ ಸಮೀಪಕ್ಕೆ ಬಂದು ತೇಜಸ್ಸಿನಿಂದ ಪ್ರಜ್ವಲಿಸಿ ದಶದಿಶಗಳನ್ನೂ ಸುಡುತ್ತಿರುವ, ಸೂರ್ಯ-ಚಂದ್ರರಂತಿರುವ, ಮೂರು ಲೋಕಗಳನ್ನೂ ಕಬಳಿಸುವಂತಿರುವ ಆ ಮಹೌಜಸ ವೃತ್ರನನ್ನು ನೋಡಿದರು.

05010017a ಋಷಯೋಽಥ ತತೋಽಭ್ಯೇತ್ಯ ವೃತ್ರಮೂಚುಃ ಪ್ರಿಯಂ ವಚಃ।
05010017c ವ್ಯಾಪ್ತಂ ಜಗದಿದಂ ಸರ್ವಂ ತೇಜಸಾ ತವ ದುರ್ಜಯ।।

ಆಗ ಋಷಿಗಳು ಬಂದು ವೃತ್ರನಿಗೆ ಈ ಪ್ರಿಯ ಮಾತುಗಳನ್ನಾಡಿದರು: “ದುರ್ಜಯ! ನಿನ್ನ ತೇಜಸ್ಸು ಈ ಜಗತ್ತೆಲ್ಲವನ್ನೂ ಆವರಿಸಿದೆ.

05010018a ನ ಚ ಶಕ್ನೋಷಿ ನಿರ್ಜೇತುಂ ವಾಸವಂ ಭೂರಿವಿಕ್ರಮಂ।
05010018c ಯುಧ್ಯತೋಶ್ಚಾಪಿ ವಾಂ ಕಾಲೋ ವ್ಯತೀತಃ ಸುಮಹಾನಿಹ।।

ಸುಮಹಾನಿಹ! ಭೂರಿವಿಕ್ರಮ ವಾಸವನನ್ನು ಸೋಲಿಸಲು ನಿನಗೆ ಶಕ್ಯವಿಲ್ಲ. ಈ ಮಹಾಯುದ್ಧವು ಪ್ರಾರಂಭಿಸಿ ಬಹುಕಾಲವು ಕಳೆದುಹೋಯಿತು.

05010019a ಪೀಡ್ಯಂತೇ ಚ ಪ್ರಜಾಃ ಸರ್ವಾಃ ಸದೇವಾಸುರಮಾನವಾಃ।
05010019c ಸಖ್ಯಂ ಭವತು ತೇ ವೃತ್ರ ಶಕ್ರೇಣ ಸಹ ನಿತ್ಯದಾ।
05010019e ಅವಾಪ್ಸ್ಯಸಿ ಸುಖಂ ತ್ವಂ ಚ ಶಕ್ರಲೋಕಾಂಶ್ಚ ಶಾಶ್ವತಾನ್।।

ದೇವಾಸುರ-ಮಾನವರೂ ಸೇರಿ ಎಲ್ಲ ಪ್ರಜೆಗಳೂ ಪೀಡೆಗೊಳಗಾಗಿದ್ದಾರೆ. ವೃತ್ರ! ಶಕ್ರನೊಂದಿಗೆ ನಿನ್ನ ನಿತ್ಯ ಸಖ್ಯವಾಗಲಿ. ಶಕ್ರಲೋಕದಲ್ಲಿ ನೀನು ಶಾಶ್ವತ ಸುಖವನ್ನು ಹೊಂದುವೆ.”

05010020a ಋಷಿವಾಕ್ಯಂ ನಿಶಮ್ಯಾಥ ಸ ವೃತ್ರಃ ಸುಮಹಾಬಲಃ।
05010020c ಉವಾಚ ತಾಂಸ್ತದಾ ಸರ್ವಾನ್ಪ್ರಣಮ್ಯ ಶಿರಸಾಸುರಃ।।

ಋಷಿಗಳ ಮಾತುಗಳನ್ನು ಸುಮಹಾಬಲ ವೃತ್ರಾಸುರನು ಕೇಳಿ, ಅವರೆಲ್ಲರಿಗೆ ತಲೆಬಾಗಿ ನಮಸ್ಕರಿಸಿ ಹೇಳಿದನು:

05010021a ಸರ್ವೇ ಯೂಯಂ ಮಹಾಭಾಗಾ ಗಂಧರ್ವಾಶ್ಚೈವ ಸರ್ವಶಃ।
05010021c ಯದ್ಬ್ರೂತ ತಚ್ಚ್ರುತಂ ಸರ್ವಂ ಮಮಾಪಿ ಶೃಣುತಾನಘಾಃ।।

“ಎಲ್ಲ ಗಂಧರ್ವರೂ ಮತ್ತು ಮಹಾಭಾಗ ನೀವೆಲ್ಲರೂ ಹೇಳಿದುದನ್ನು ನಾನು ಕೇಳಿದೆ. ಅನಘರೇ! ಈಗ ನಾನು ಹೇಳುವುದನ್ನೂ ಕೇಳಿ.

05010022a ಸಂಧಿಃ ಕಥಂ ವೈ ಭವಿತಾ ಮಮ ಶಕ್ರಸ್ಯ ಚೋಭಯೋಃ।
05010022c ತೇಜಸೋರ್ಹಿ ದ್ವಯೋರ್ದೇವಾಃ ಸಖ್ಯಂ ವೈ ಭವಿತಾ ಕಥಂ।।

ನನ್ನ ಮತ್ತು ಶಕ್ರನ ನಡುವೆ ಸಂಧಿಯು ಹೇಗಾದೀತು? ದೇವತೆಗಳೇ! ಇಬ್ಬರು ತೇಜಸ್ವಿ ದ್ರೋಹಿಗಳ ಮಧ್ಯೆ ಸಖ್ಯವು ಹೇಗಾಗಬಹುದು?”

05010023 ಋಷಯ ಊಚುಃ।
05010023a ಸಕೃತ್ಸತಾಂ ಸಂಗತಂ ಲಿಪ್ಸಿತವ್ಯಂ। ತತಃ ಪರಂ ಭವಿತಾ ಭವ್ಯಮೇವ।
05010023c ನಾತಿಕ್ರಮೇತ್ಸತ್ಪುರುಷೇಣ ಸಂಗತಂ। ತಸ್ಮಾತ್ಸತಾಂ ಸಂಗತಂ ಲಿಪ್ಸಿತವ್ಯಂ।।

ಋಷಿಗಳು ಹೇಳಿದರು: “ಸಕೃತರರಲ್ಲಿ ಗೆಳೆತನವು ಒಂದೇ ಭೇಟಿಯಲ್ಲಾಗುವುದು ಒಳ್ಳೆಯದೇ. ಅದರ ನಂತರ ನಡೆಯುವಂಥಹುದು ನಡೆಯಲೇ ಬೇಕಾಗಿರುವ ವಿಧಿವಿಹಿತವಾದುದು. ಆದುದರಿಂದ ಸತ್ಪುರುಷರೊಡನೆ ಸಖ್ಯದ ಅವಕಾಶವನ್ನು ಕಡೆಗಾಣಿಸಬಾರದು. ಆದುದರಿಂದ ಒಳ್ಳೆಯವರೊಂದಿಗೆ ಸಖ್ಯವನ್ನು ಬಯಸಬೇಕು.

05010024a ದೃಢಂ ಸತಾಂ ಸಂಗತಂ ಚಾಪಿ ನಿತ್ಯಂ। ಬ್ರೂಯಾಚ್ಚಾರ್ಥಂ ಹ್ಯರ್ಥಕೃಚ್ಚ್ರೇಷು ಧೀರಃ।
05010024c ಮಹಾರ್ಥವತ್ಸತ್ಪುರುಷೇಣ ಸಂಗತಂ। ತಸ್ಮಾತ್ಸಂತಂ ನ ಜಿಘಾಂಸೇತ ಧೀರಃ।।

ಸತ್ಯವಂತರೊಂದಿಗಿನ ಸಖ್ಯವು ಕಷ್ಟದಲ್ಲಿ ಬರುವ ಸಂಪತ್ತಿನಂತೆ ದೃಢವೂ ನಿತ್ಯವೂ ಆದುದು. ಸತ್ಪುರುಷರೊಂದಿಗಿನ ಸಖ್ಯವು ಮಹಾ ಐಶ್ವರ್ಯವಿದ್ದಂತೆ. ಆದುದರಿಂದ ಸತ್ಯವಂತರನ್ನು ಕೊಲ್ಲಬಾರದು.

05010025a ಇಂದ್ರಃ ಸತಾಂ ಸಮ್ಮತಶ್ಚ ನಿವಾಸಶ್ಚ ಮಹಾತ್ಮನಾಂ।
05010025c ಸತ್ಯವಾದೀ ಹ್ಯದೀನಶ್ಚ ಧರ್ಮವಿತ್ಸುವಿನಿಶ್ಚಿತಃ।।
05010026a ತೇನ ತೇ ಸಹ ಶಕ್ರೇಣ ಸಂಧಿರ್ಭವತು ಶಾಶ್ವತಃ।
05010026c ಏವಂ ವಿಶ್ವಾಸಮಾಗಚ್ಚ ಮಾ ತೇ ಭೂದ್ಬುದ್ಧಿರನ್ಯಥಾ।।

ಇಂದ್ರನು ಸತ್ಯವಂತರಿಂದ ಗೌರವಿಸಲ್ಪಟ್ಟವನು ಮತ್ತು ಮಹಾತ್ಮರ ನಿವಾಸ. ಸತ್ಯವಾದೀ, ಹೃದಯವಂತ ಮತ್ತು ಧರ್ಮನಿಶ್ಚಯಗಳನ್ನು ತಿಳಿದವನು. ಶಕ್ರನೊಂದಿಗೆ ನಿನ್ನ ಶಾಶ್ವತ ಸಂಧಿಯಾಗಲಿ. ಈ ರೀತಿ ನಿನಗೆ ಅವನ ಮೇಲೆ ವಿಶ್ವಾಸ ಬರಲಿ. ಅನ್ಯಥಾ ವಿಚಾರಮಾಡಬೇಡ.””

05010027 ಶಲ್ಯ ಉವಾಚ।
05010027a ಮಹರ್ಷಿವಚನಂ ಶ್ರುತ್ವಾ ತಾನುವಾಚ ಮಹಾದ್ಯುತಿಃ।
05010027c ಅವಶ್ಯಂ ಭಗವಂತೋ ಮೇ ಮಾನನೀಯಾಸ್ತಪಸ್ವಿನಃ।।

ಶಲ್ಯನು ಹೇಳಿದನು: “ಮಹರ್ಷಿಗಳ ಮಾತನ್ನು ಕೇಳಿ ಆ ಮಹಾದ್ಯುತಿಯು ಹೇಳಿದನು: “ಭಗವಂತ ತಪಸ್ವಿಗಳನ್ನು ನಾನು ಅವಶ್ಯವಾಗಿಯೂ ಮನ್ನಿಸುತ್ತೇನೆ.

05010028a ಬ್ರವೀಮಿ ಯದಹಂ ದೇವಾಸ್ತತ್ಸರ್ವಂ ಕ್ರಿಯತಾಮಿಹ।
05010028c ತತಃ ಸರ್ವಂ ಕರಿಷ್ಯಾಮಿ ಯದೂಚುರ್ಮಾಂ ದ್ವಿಜರ್ಷಭಾಃ।।

ನಾನು ಏನನ್ನು ಹೇಳುತ್ತೇನೋ ಅವೆಲ್ಲವನ್ನೂ ದೇವತೆಗಳು ಮಾಡಲಿ. ಆಗ ದ್ವಿಜರ್ಷಭರು ಹೇಳಿದುದೆಲ್ಲವನ್ನೂ ನಾನು ಮಾಡುತ್ತೇನೆ.

05010029a ನ ಶುಷ್ಕೇಣ ನ ಚಾರ್ದ್ರೇಣ ನಾಶ್ಮನಾ ನ ಚ ದಾರುಣಾ।
05010029c ನ ಶಸ್ತ್ರೇಣ ನ ವಜ್ರೇಣ ನ ದಿವಾ ನ ತಥಾ ನಿಶಿ।।
05010030a ವಧ್ಯೋ ಭವೇಯಂ ವಿಪ್ರೇಂದ್ರಾಃ ಶಕ್ರಸ್ಯ ಸಹ ದೈವತೈಃ।
05010030c ಏವಂ ಮೇ ರೋಚತೇ ಸಂಧಿಃ ಶಕ್ರೇಣ ಸಹ ನಿತ್ಯದಾ।।

ವಿಪ್ರೇಂದ್ರರೇ! ಒಣಗಿದುದರಿಂದಾಲೀ ಒದ್ದೆಯಾಗಿದುದರಿಂದಾಗಲೀ, ಕಲ್ಲಿನಿಂದಾಗಲೀ ಮರದಿಂದಾಗಲೀ, ಶಸ್ತ್ರದಿಂದಾಗಲೀ ವಜ್ರದಿಂದಾಗಲೀ, ದಿನದಲ್ಲಿಯಾಗಲೀ ರಾತ್ರಿಯಲ್ಲಾಗಲೀ ಶಕ್ರನು ಅಥವಾ ದೇವತೆಗಳು ನನ್ನನ್ನು ಕೊಲ್ಲದಿರಲಿ. ಶಕ್ರನೊಂದಿಗೆ ಈ ರೀತಿಯ ನಿತ್ಯ ಸಂಧಿಯು ನನಗೆ ಇಷ್ಟವಾಗುತ್ತದೆ.”

05010031a ಬಾಢಮಿತ್ಯೇವ ಋಷಯಸ್ತಮೂಚುರ್ಭರತರ್ಷಭ।
05010031c ಏವಂ ಕೃತೇ ತು ಸಂಧಾನೇ ವೃತ್ರಃ ಪ್ರಮುದಿತೋಽಭವತ್।।

ಭರತರ್ಷಭ! “ಒಳ್ಳೆಯದು” ಎಂದು ಋಷಿಗಳು ಹೇಳಿದರು. ಈ ರೀತಿ ಸಂಧಾನವನ್ನು ಮಾಡಿಕೊಂಡು ವೃತ್ರನು ಪರಮ ಮುದಿತನಾದನು.

05010032a ಯತ್ತಃ ಸದಾಭವಚ್ಚಾಪಿ ಶಕ್ರೋಽಮರ್ಷಸಮನ್ವಿತಃ।
05010032c ವೃತ್ರಸ್ಯ ವಧಸಮ್ಯುಕ್ತಾನುಪಾಯಾನನುಚಿಂತಯನ್।
05010032e ರಂಧ್ರಾನ್ವೇಷೀ ಸಮುದ್ವಿಗ್ನಃ ಸದಾಭೂದ್ಬಲವೃತ್ರಹಾ।।

ಹಾಗೆಯೇ ಶಕ್ರನೂ ಕೂಡ ಸಂತುಷ್ಟನಾದರೂ ಅವನು ಸದಾ ವ್ಯಾಕುಲಗೊಂಡು ವೃತ್ರನ ವಧೆಯ ಕುರಿತ ಉಪಾಯವನ್ನು ಯೋಚಿಸುತ್ತಿದ್ದನು. ಬಲವೃತ್ರಹನು ಸದಾ ಅವಕಾಶದ ರಂಧ್ರವನ್ನು ಹುಡುಕುವುದರಲ್ಲಿ ನಿರತನಾಗಿದ್ದನು.

05010033a ಸ ಕದಾ ಚಿತ್ಸಮುದ್ರಾಂತೇ ತಮಪಶ್ಯನ್ಮಹಾಸುರಂ।
05010033c ಸಂಧ್ಯಾಕಾಲ ಉಪಾವೃತ್ತೇ ಮುಹೂರ್ತೇ ರಮ್ಯದಾರುಣೇ।।

ಒಮ್ಮೆ ಅವನು ಸಂಧ್ಯಾಕಾಲದ ರಮ್ಯವೂ ದಾರುಣವೂ ಆದ ಮುಹೂರ್ತವು ಸನ್ನಿಹಿತವಾಗುವಾಗ ಆ ಮಹಾಸುರನನ್ನು ಸಮುದ್ರದ ಅಂಚಿನಲ್ಲಿ ಕಂಡನು.

05010034a ತತಃ ಸಂಚಿಂತ್ಯ ಭಗವಾನ್ವರದಾನಂ ಮಹಾತ್ಮನಃ।
05010034c ಸಂಧ್ಯೇಯಂ ವರ್ತತೇ ರೌದ್ರಾ ನ ರಾತ್ರಿರ್ದಿವಸಂ ನ ಚ।
05010034e ವೃತ್ರಶ್ಚಾವಶ್ಯವಧ್ಯೋಽಯಂ ಮಮ ಸರ್ವಹರೋ ರಿಪುಃ।।

ಆಗ ಭಗವಾನನು ಆ ಮಹಾತ್ಮನಿಗೆ ನೀಡಿದ ವರದ ಕುರಿತು ಯೋಚಿಸಿದನು: “ಇದು ರೌದ್ರವಾದ ಸಂಧ್ಯಾಸಮಯ. ರಾತ್ರಿಯೂ ಅಲ್ಲ ದಿವಸವೂ ಅಲ್ಲ. ನನ್ನಿಂದ ಎಲ್ಲವನ್ನೂ ಅಪಹರಿಸಿದ ನನ್ನ ಈ ಶತ್ರು ವೃತ್ರನನ್ನು ನಾನು ಅವಶ್ಯವಾಗಿ ವಧಿಸುತ್ತೇನೆ.

05010035a ಯದಿ ವೃತ್ರಂ ನ ಹನ್ಮ್ಯದ್ಯ ವಂಚಯಿತ್ವಾ ಮಹಾಸುರಂ।
05010035c ಮಹಾಬಲಂ ಮಹಾಕಾಯಂ ನ ಮೇ ಶ್ರೇಯೋ ಭವಿಷ್ಯತಿ।।

ಇಂದು ನಾನು ವಂಚಿಸಿ ಈ ಮಹಾಬಲ ಮಹಾಕಾಯ ಮಹಾಸುರನನ್ನು ಕೊಲ್ಲದೇ ಇದ್ದರೆ ನನಗೆ ಶ್ರೇಯಸ್ಸುಂಟಾಗುವುದಿಲ್ಲ.”

05010036a ಏವಂ ಸಂಚಿಂತಯನ್ನೇವ ಶಕ್ರೋ ವಿಷ್ಣುಮನುಸ್ಮರನ್।
05010036c ಅಥ ಫೇನಂ ತದಾಪಶ್ಯತ್ಸಮುದ್ರೇ ಪರ್ವತೋಪಮಂ।।

ಈ ರೀತಿ ಆಲೋಚಿಸಿ ಶಕ್ರನು ವಿಷ್ಣುವನ್ನು ಸ್ಮರಿಸಿದನು. ಅಗ ಸಮುದ್ರದಲ್ಲಿ ಪರ್ವತೋಪಮ ನೊರೆಯು ಕಾಣಿಸಿಕೊಂಡಿತು.

05010037a ನಾಯಂ ಶುಷ್ಕೋ ನ ಚಾರ್ದ್ರೋಽಯಂ ನ ಚ ಶಸ್ತ್ರಮಿದಂ ತಥಾ।
05010037c ಏನಂ ಕ್ಷೇಪ್ಸ್ಯಾಮಿ ವೃತ್ರಸ್ಯ ಕ್ಷಣಾದೇವ ನಶಿಷ್ಯತಿ।।

“ಇದು ಒಣಗಿಯೂ ಇಲ್ಲ ಒದ್ದೆಯಾಗಿಯೂ ಇಲ್ಲ. ಹಾಗೆಯೇ ಇದು ಶಸ್ತ್ರವೂ ಅಲ್ಲ. ಇದನ್ನು ಎಸೆಯುತ್ತೇನೆ. ಕ್ಷಣದಲ್ಲಿಯೇ ವೃತ್ರನು ನಾಶಗೊಳ್ಳುತ್ತಾನೆ.”

05010038a ಸವಜ್ರಮಥ ಫೇನಂ ತಂ ಕ್ಷಿಪ್ರಂ ವೃತ್ರೇ ನಿಸೃಷ್ಟವಾನ್।
05010038c ಪ್ರವಿಶ್ಯ ಫೇನಂ ತಂ ವಿಷ್ಣುರಥ ವೃತ್ರಂ ವ್ಯನಾಶಯತ್।।

ಅವನು ಆಗ ವಜ್ರವನ್ನು ನೊರೆಯಲ್ಲಿ ಅದ್ದಿ ವೃತ್ರನೆಡೆ ಎಸೆದನು. ಆಗ ವಿಷ್ಣುವು ನೊರೆಯನ್ನು ಪ್ರವೇಶಿಸಿ ವೃತ್ರನನ್ನು ನಾಶಗೊಳಿಸಿದನು.

05010039a ನಿಹತೇ ತು ತತೋ ವೃತ್ರೇ ದಿಶೋ ವಿತಿಮಿರಾಭವನ್।
05010039c ಪ್ರವವೌ ಚ ಶಿವೋ ವಾಯುಃ ಪ್ರಜಾಶ್ಚ ಜಹೃಷುಸ್ತದಾ।।

ವೃತ್ರನು ಹತನಾಗಲು ದಿಕ್ಕುಗಳು ಕತ್ತಲೆರಹಿತವಾದವು. ಸುಖಕರ ಗಾಳಿಯು ಬೀಸಿತು. ಪ್ರಜೆಗಳೆಲ್ಲರೂ ಹರ್ಷಿತರಾದರು.

05010040a ತತೋ ದೇವಾಃ ಸಗಂಧರ್ವಾ ಯಕ್ಷರಾಕ್ಷಸಪನ್ನಗಾಃ।
05010040c ಋಷಯಶ್ಚ ಮಹೇಂದ್ರಂ ತಮಸ್ತುವನ್ವಿವಿಧೈಃ ಸ್ತವೈಃ।।

ಆಗ ದೇವತೆಗಳು ಮತ್ತು ಋಷಿಗಳು ಗಂಧರ್ವ, ಯಕ್ಷ, ರಾಕ್ಷಸ, ಪನ್ನಗರೊಡನೆ ಮಹೇಂದ್ರನನ್ನು ವಿವಿಧ ಸ್ತವಗಳಿಂದ ಸ್ತುತಿಸಿದರು.

05010041a ನಮಸ್ಕೃತಃ ಸರ್ವಭೂತೈಃ ಸರ್ವಭೂತಾನಿ ಸಾಂತ್ವಯನ್।
05010041c ಹತಶತ್ರುಃ ಪ್ರಹೃಷ್ಟಾತ್ಮಾ ವಾಸವಃ ಸಹ ದೈವತೈಃ।
05010041e ವಿಷ್ಣುಂ ತ್ರಿಭುವನಶ್ರೇಷ್ಠಂ ಪೂಜಯಾಮಾಸ ಧರ್ಮವಿತ್।।

ಸರ್ವಭೂತಗಳಿಂದ ನಮಸ್ಕರಿಸಲ್ಪಟ್ಟ ವಾಸವನು ಸರ್ವಭೂತಗಳನ್ನು ಸಂತವಿಸಿ ಶತ್ರುವು ಹತನಾದನೆಂದು ಪ್ರಹೃಷ್ಟಾತ್ಮನಾಗಿ ದೇವತೆಗಳೊಂದಿಗೆ ತ್ರಿಭುವನಶ್ರೇಷ್ಠ ವಿಷ್ಣುವನ್ನು ಧರ್ಮವತ್ತಾಗಿ ಪೂಜಿಸಿದನು.

05010042a ತತೋ ಹತೇ ಮಹಾವೀರ್ಯೇ ವೃತ್ರೇ ದೇವಭಯಂಕರೇ।
05010042c ಅನೃತೇನಾಭಿಭೂತೋಽಭೂಚ್ಚಕ್ರಃ ಪರಮದುರ್ಮನಾಃ।
05010042e ತ್ರೈಶೀರ್ಷಯಾಭಿಭೂತಶ್ಚ ಸ ಪೂರ್ವಂ ಬ್ರಹ್ಮಹತ್ಯಯಾ।।

ದೇವಭಯಂಕರ ಮಹಾವೀರ್ಯ ವೃತ್ರನು ಹತನಾಗಲು ಶಕ್ರನು ಸುಳ್ಳಿನಿಂದ ಅಭಿಭೂತನಾಗಿ ಮತ್ತು ಹಿಂದೆ ಮಾಡಿದ ತ್ರಿಶಿರ ಬ್ರಹ್ಮಹತ್ಯೆಯಿಂದ ಅಭಿಭೂತನಾಗಿ ಪರಮ ದುಃಖಿತನಾದನು.

05010043a ಸೋಽಂತಮಾಶ್ರಿತ್ಯ ಲೋಕಾನಾಂ ನಷ್ಟಸಂಜ್ಞೋ ವಿಚೇತನಃ।
05010043c ನ ಪ್ರಾಜ್ಞಾಯತ ದೇವೇಂದ್ರಸ್ತ್ವಭಿಭೂತಃ ಸ್ವಕಲ್ಮಷೈಃ।
05010043e ಪ್ರತಿಚ್ಚನ್ನೋ ವಸತ್ಯಪ್ಸು ಚೇಷ್ಟಮಾನ ಇವೋರಗಃ।।

ಅವನು ಲೋಕಗಳ ಆಳವನ್ನು ಸೇರಿ ಸಂಜ್ಞೆಗಳನ್ನು ಕಳೆದುಕೊಂಡು ವಿಚೇತನನಾದನು. ತನ್ನದೇ ಪಾಪಗಳಿಂದ ಅಭಿಭೂತನಾಗಿ ದೇವೇಂದ್ರನು ಗುರುತಿಗೇ ಸಿಗದಂತಾದನು. ಒದ್ದಾಡುತ್ತಿರುವ ಹಾವಿನಂತೆ ನೀರಿನಲ್ಲಿ ಅಡಗಿಕೊಂಡು ವಾಸಿಸಿದನು.

05010044a ತತಃ ಪ್ರನಷ್ಟೇ ದೇವೇಂದ್ರೇ ಬ್ರಹ್ಮಹತ್ಯಾಭಯಾರ್ದಿತೇ।
05010044c ಭೂಮಿಃ ಪ್ರಧ್ವಸ್ತಸಂಕಾಶಾ ನಿರ್ವೃಕ್ಷಾ ಶುಷ್ಕಕಾನನಾ।
05010044e ವಿಚ್ಚಿನ್ನಸ್ರೋತಸೋ ನದ್ಯಃ ಸರಾಂಸ್ಯನುದಕಾನಿ ಚ।।

ಬ್ರಹ್ಮಹತ್ಯೆಯ ಭಯದಿಂದ ಪೀಡಿತನಾದ ದೇವೇಂದ್ರನನ್ನು ಕಳೆದುಕೊಂಡ ಭೂಮಿಯಲ್ಲಿ ಮಹಾ ವಿಧ್ವಂಸವು ನಡೆಯಿತೋ ಎನ್ನುವ ಹಾಗೆ ಮರಗಳನ್ನು ಕಳೆದುಕೊಂಡು, ಕಾನನಗಳು ಒಣಗಿ, ನದಿಗಳ ಪ್ರವಾಹವು ತುಂಡಾಗಿ, ಸರೋವರಗಳು ನೀರಿಲ್ಲದಂತಾದವು.

05010045a ಸಂಕ್ಷೋಭಶ್ಚಾಪಿ ಸತ್ತ್ವಾನಾಮನಾವೃಷ್ಟಿಕೃತೋಽಭವತ್।
05010045c ದೇವಾಶ್ಚಾಪಿ ಭೃಶಂ ತ್ರಸ್ತಾಸ್ತಥಾ ಸರ್ವೇ ಮಹರ್ಷಯಃ।।
05010046a ಅರಾಜಕಂ ಜಗತ್ಸರ್ವಮಭಿಭೂತಮುಪದ್ರವೈಃ।
05010046c ತತೋ ಭೀತಾಭವನ್ದೇವಾಃ ಕೋ ನೋ ರಾಜಾ ಭವೇದಿತಿ।।

ಅನಾವೃಷ್ಟಿಯಿಂದ ಸತ್ವಗಳಲ್ಲಿ ಸಂಕ್ಷೋಭೆಗೊಂಡಿತು. ದೇವತೆಗಳೂ ಎಲ್ಲ ಮಹರ್ಷಿಗಳೂ ತುಂಬಾ ಪೀಡಿತರಾದರು. ಅರಾಜಕತೆಯಿಂದ ಜಗತ್ತೆಲ್ಲವೂ ಉಪದ್ರವಗಳಿಂದ ತುಂಬಿಕೊಂಡಿತು. “ಯಾರು ನಮ್ಮ ರಾಜನಾಗುತ್ತಾನೆ?” ಎಂದು ದೇವತೆಗಳು ಭಯಭೀತರಾದರು.

05010047a ದಿವಿ ದೇವರ್ಷಯಶ್ಚಾಪಿ ದೇವರಾಜವಿನಾಕೃತಾಃ।
05010047c ನ ಚ ಸ್ಮ ಕಶ್ಚಿದ್ದೇವಾನಾಂ ರಾಜ್ಯಾಯ ಕುರುತೇ ಮನಃ।।

ದಿವಿಯಲ್ಲಿ ದೇವರಾಜನಿಲ್ಲದೇ ಆದಾಗ ದೇವತೆಗಳು ಮತ್ತು ಋಷಿಗಳಲ್ಲಿ ಯಾರೂ ದೇವತೆಗಳ ರಾಜನಾಗಲು ಮನಸ್ಸುಮಾಡಲಿಲ್ಲ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಉದ್ಯೋಗ ಪರ್ವಣಿ ವೃತ್ರವಧೇ ಇಂದ್ರವಿಜಯೋ ನಾಮ ದಶಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಉದ್ಯೋಗ ಪರ್ವದಲ್ಲಿ ವೃತ್ರವಧೆಯಲ್ಲಿ ಇಂದ್ರವಿಜಯವೆಂಬ ಹತ್ತನೆಯ ಅಧ್ಯಾಯವು।