009 ಇಂದ್ರವಿಜಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಉದ್ಯೋಗ ಪರ್ವ

ಅಧ್ಯಾಯ 9

ಸಾರ

ಯುಧಿಷ್ಠಿರನು ಕೇಳಲು ಶಲ್ಯನು ಇಂದ್ರ ವಿಜಯೋಪಾಖ್ಯಾನವನ್ನು ಪ್ರಾಂಭಿಸುವುದು (1-2). ತ್ವಷ್ಟನು ಪ್ರಜಾಪತಿಯಾಗಿದ್ದಾಗ ಸೃಷ್ಟಿಸಿದ ಇಂದ್ರದ್ರೋಹೀ ಮಗ ತ್ರಿಶಿರನ ತಪಸ್ಸಿನಿಂದ ಹೆದರಿದ ಇಂದ್ರನು ಅವನ ಪ್ರಲೋಭನೆಗೆ ಅಪ್ಸರೆಯರಿಗೆ ಆಜ್ಞಾಪಿಸಿದುದು (3-12). ಪ್ರಯತ್ನಿಸಿದರೂ ಅಪ್ಸರೆಯರು ಅದರಲ್ಲಿ ಸೋಲಲು ಚಿಂತಿತನಾದ ಇಂದ್ರನು ವಜ್ರಾಯುಧದಿಂದ ತ್ರಿಶಿರನನ್ನು ಕೊಂದುದು (13-23). ಓರ್ವ ಬಡಿಗನ ಸಹಾಯದಿಂದ ಹತನಾಗಿ ಬಿದ್ದಿದ್ದ ತ್ರಿಶಿರನ ಶಿರಗಳನ್ನು ಕತ್ತರಿಸಿ ಇಂದ್ರನು ಸ್ವರ್ಗಕ್ಕೆ ಮರಳಿದುದು (24-39). ಕುಪಿತನಾದ ತ್ವಷ್ಟನು ತನ್ನ ಮಗನನ್ನು ಕೊಂದ ಇಂದ್ರನನ್ನು ಕೊಲ್ಲಲು ವೃತ್ರನನ್ನು ಸೃಷ್ಟಿಸಿ ಕಳುಹಿಸಿದುದು (40-45). ವೃತ್ರ-ಇಂದ್ರರ ಯುದ್ಧದಲ್ಲಿ ಇಂದ್ರನು ಸೋಲಲು ಸಮಾಲೋಚನೆ (46-52).

05009001 ಯುಧಿಷ್ಠಿರ ಉವಾಚ।
05009001a ಕಥಮಿಂದ್ರೇಣ ರಾಜೇಂದ್ರ ಸಭಾರ್ಯೇಣ ಮಹಾತ್ಮನಾ।
05009001c ದುಃಖಂ ಪ್ರಾಪ್ತಂ ಪರಂ ಘೋರಮೇತದಿಚ್ಚಾಮಿ ವೇದಿತುಂ।।

ಯುಧಿಷ್ಠಿರನು ಹೇಳಿದನು: “ರಾಜೇಂದ್ರ! ಮಹಾತ್ಮ ಇಂದ್ರನು ಭಾರ್ಯೆಯೊಡನೆ ಹೇಗೆ ಪರಮ ಘೋರ ದುಃಖವನ್ನು ಹೊಂದಿದನು ಎನ್ನುವುದನ್ನು ತಿಳಿಯಲು ಬಯಸುತ್ತೇನೆ.”

05009002 ಶಲ್ಯ ಉವಾಚ।
05009002a ಶೃಣು ರಾಜನ್ಪುರಾ ವೃತ್ತಮಿತಿಹಾಸಂ ಪುರಾತನಂ।
05009002c ಸಭಾರ್ಯೇಣ ಯಥಾ ಪ್ರಾಪ್ತಂ ದುಃಖಮಿಂದ್ರೇಣ ಭಾರತ।।

ಶಲ್ಯನು ಹೇಳಿದನು: “ರಾಜನ್! ಭಾರತ! ಹಿಂದೆ ಇಂದ್ರನು ಭಾರ್ಯೆಯೊಡನೆ ಹೇಗೆ ದುಃಖವನ್ನು ಪಡೆದನು ಎನ್ನುವ ಈ ಪುರಾತನ ಇತಿಹಾಸ ವೃತ್ತಾಂತವನ್ನು ಕೇಳು.

05009003a ತ್ವಷ್ಟಾ ಪ್ರಜಾಪತಿರ್ಹ್ಯಾಸೀದ್ದೇವಶ್ರೇಷ್ಠೋ ಮಹಾತಪಾಃ।
05009003c ಸ ಪುತ್ರಂ ವೈ ತ್ರಿಶಿರಸಮಿಂದ್ರದ್ರೋಹಾತ್ಕಿಲಾಸೃಜತ್।।

ದೇವಶ್ರೇಷ್ಠ ಮಹಾತಪಸ್ವಿ ತ್ವಷ್ಟನು ಪ್ರಜಾಪತಿಯಾಗಿದ್ದಾಗ ಅವನು ಇಂದ್ರದ್ರೋಹದಿಂದ ತ್ರಿಶಿರನೆನ್ನುವ ಪುತ್ರನನ್ನು ಸೃಷ್ಟಿಸಿದನಷ್ಟೆ?

05009004a ಐಂದ್ರಂ ಸ ಪ್ರಾರ್ಥಯತ್ಸ್ಥಾನಂ ವಿಶ್ವರೂಪೋ ಮಹಾದ್ಯುತಿಃ।
05009004c ತೈಸ್ತ್ರಿಭಿರ್ವದನೈರ್ಘೋರೈಃ ಸೂರ್ಯೇಂದುಜ್ವಲನೋಪಮೈಃ।।
05009005a ವೇದಾನೇಕೇನ ಸೋಽಧೀತೇ ಸುರಾಮೇಕೇನ ಚಾಪಿಬತ್।
05009005c ಏಕೇನ ಚ ದಿಶಃ ಸರ್ವಾಃ ಪಿಬನ್ನಿವ ನಿರೀಕ್ಷತೇ।।

ಆ ವಿಶ್ವರೂಪೀ ಮಹಾದ್ಯುತಿಯು ಇಂದ್ರನ ಸ್ಥಾನವನ್ನು ಬಯಸಿದನು. ಸೂರ್ಯ, ಚಂದ್ರ ಮತ್ತು ಅಗ್ನಿಗಳಂತಿದ್ದ ಆ ಮೂರು ಘೋರ ಮುಖಗಳವನು ಒಂದರಿಂದ ವೇದಗಳನ್ನು ಪಠಿಸುತ್ತಿದ್ದನು, ಒಂದರಿಂದ ಸುರೆಯನ್ನು ಕುಡಿಯುತ್ತಿದ್ದನು ಮತ್ತು ಇನ್ನೊಂದರಿಂದ ಎಲ್ಲ ದಿಕ್ಕುಗಳನ್ನೂ ಕುಡಿದುಬಿಡುತ್ತಾನೋ ಎನ್ನುವಂತೆ ನೋಡುತ್ತಿದ್ದನು.

05009006a ಸ ತಪಸ್ವೀ ಮೃದುರ್ದಾಂತೋ ಧರ್ಮೇ ತಪಸಿ ಚೋದ್ಯತಃ।
05009006c ತಪೋಽತಪ್ಯನ್ಮಹತ್ತೀವ್ರಂ ಸುದುಶ್ಚರಮರಿಂದಮ।।

ಆ ತಪಸ್ವಿಯು ಮೃದುವೂ ದಾಂತನೂ ಆಗಿದ್ದು ಧರ್ಮದ ತಪಸ್ಸಿನಲ್ಲಿ ತೊಡಗಿಕೊಂಡಿದ್ದನು. ಅರಿಂದಮ! ಅವನು ಆಚರಿಸಲು ಅತಿಕಷ್ಟವಾದ ಮಹಾ ತೀವ್ರ ತಪಸ್ಸನ್ನು ತಪಿಸಿದನು.

05009007a ತಸ್ಯ ದೃಷ್ಟ್ವಾ ತಪೋವೀರ್ಯಂ ಸತ್ತ್ವಂ ಚಾಮಿತತೇಜಸಃ।
05009007c ವಿಷಾದಮಗಮಚ್ಚಕ್ರ ಇಂದ್ರೋಽಯಂ ಮಾ ಭವೇದಿತಿ।।

ಆ ತಪೋವೀರ್ಯ, ಸತ್ವಯುತ, ಅಮಿತತೇಜಸನನ್ನು ನೋಡಿ ಇಂದ್ರನು ಇವನು ಇಂದ್ರನಾಗಬಾರದು ಎಂದು ವಿಷಾದಿಸಿದನು.

05009008a ಕಥಂ ಸಜ್ಜೇತ ಭೋಗೇಷು ನ ಚ ತಪ್ಯೇನ್ಮಹತ್ತಪಃ।
05009008c ವಿವರ್ಧಮಾನಸ್ತ್ರಿಶಿರಾಃ ಸರ್ವಂ ತ್ರಿಭುವನಂ ಗ್ರಸೇತ್।।

“ಇವನು ಭೋಗಗಳಲ್ಲಿ ತೊಡಗುವಂತೆ ಹೇಗೆಮಾಡಬೇಕು? ಇವನು ಮಹಾತಪಸ್ಸನ್ನು ತಪಿಸದಂತೆ ಏನು ಮಾಡಬೇಕು? ವರ್ಧಿಸುತ್ತಿರುವ ತ್ರಿಶಿರನು ತ್ರಿಭುವನವೆಲ್ಲವನ್ನೂ ಕಬಳಿಸಿಬಿಡುತ್ತಾನೆ.”

05009009a ಇತಿ ಸಂಚಿಂತ್ಯ ಬಹುಧಾ ಬುದ್ಧಿಮಾನ್ಭರತರ್ಷಭ।
05009009c ಆಜ್ಞಾಪಯತ್ಸೋಽಪ್ಸರಸಸ್ತ್ವಷ್ಟೃಪುತ್ರಪ್ರಲೋಭನೇ।।

ಭರತರ್ಷಭ! ಹೀಗೆ ಬಹಳಷ್ಟು ಯೋಚಿಸಿದ ಬುದ್ಧಿಮಾನನು ತ್ವಷ್ಟಪುತ್ರನ ಪ್ರಲೋಭನೆಗೆ ಅಪ್ಸರೆಯರಿಗೆ ಆಜ್ಞಾಪಿಸಿದನು.

05009010a ಯಥಾ ಸ ಸಜ್ಜೇತ್ತ್ರಿಶಿರಾಃ ಕಾಮಭೋಗೇಷು ವೈ ಭೃಶಂ।
05009010c ಕ್ಷಿಪ್ರಂ ಕುರುತ ಗಚ್ಚಧ್ವಂ ಪ್ರಲೋಭಯತ ಮಾಚಿರಂ।।

“ತ್ರಿಶಿರನನ್ನು ಕಾಮಭೋಗಗಳಲ್ಲಿ ತೊಡಗಿಸಿ. ಬೇಗನೇ ಹೋಗಿ ಕ್ಷಿಪ್ರದಲ್ಲಿಯೇ ಅವನನ್ನು ಪ್ರಲೋಭಗೊಳಿಸಿ.

05009011a ಶೃಂಗಾರವೇಷಾಃ ಸುಶ್ರೋಣ್ಯೋ ಭಾವೈರ್ಯುಕ್ತಾ ಮನೋಹರೈಃ।
05009011c ಪ್ರಲೋಭಯತ ಭದ್ರಂ ವಃ ಶಮಯಧ್ವಂ ಭಯಂ ಮಮ।।

ಸುಶ್ರೋಣಿಯರೇ! ಶೃಂಗಾರವೇಷಗಳನ್ನು ಧರಿಸಿ ಮನೋಹರ ಭಾವಗಳಿಂದೊಡಗೂಡಿ ಅವನನ್ನು ಪ್ರಲೋಭಗೊಳಿಸಿ ಮತ್ತು ನನ್ನ ಭಯವನ್ನು ಶಮನಗೊಳಿಸಿ.

05009012a ಅಸ್ವಸ್ಥಂ ಹ್ಯಾತ್ಮನಾತ್ಮಾನಂ ಲಕ್ಷಯಾಮಿ ವರಾಂಗನಾಃ।
05009012c ಭಯಮೇತನ್ಮಹಾಘೋರಂ ಕ್ಷಿಪ್ರಂ ನಾಶಯತಾಬಲಾಃ।।

ವರಾಂಗನೆಯರೇ! ನಾನು ಅತ್ಮದಲ್ಲಿ ಅಸ್ವಸ್ಥ್ಯನಾಗಿರುವುದನ್ನು ಗಮನಿಸಿದ್ದೇನೆ. ಅಬಲೆಯರೇ! ಈ ಮಹಾಘೋರ ಭಯವನ್ನು ಕ್ಷಿಪ್ರದಲ್ಲಿ ನಾಶಗೊಳಿಸಿ.”

05009013 ಅಪ್ಸರಸ ಊಚುಃ।
05009013a ತಥಾ ಯತ್ನಂ ಕರಿಷ್ಯಾಮಃ ಶಕ್ರ ತಸ್ಯ ಪ್ರಲೋಭನೇ।
05009013c ಯಥಾ ನಾವಾಪ್ಸ್ಯಸಿ ಭಯಂ ತಸ್ಮಾದ್ಬಲನಿಷೂದನ।।

ಅಪ್ಸರೆಯರು ಹೇಳಿದರು: “ಶಕ್ರ! ಅವನನ್ನು ಪ್ರಲೋಭನಗೊಳಿಸಲು ಪ್ರಯತಿಸುತ್ತೇವೆ. ಬಲನಿಷೂದನ! ಅವನಿಂದ ನೀನು ಯಾವುದೇ ಭಯವನ್ನು ಹೊಂದಬೇಕಾಗಿಲ್ಲ.

05009014a ನಿರ್ದಹನ್ನಿವ ಚಕ್ಷುರ್ಭ್ಯಾಂ ಯೋಽಸಾವಾಸ್ತೇ ತಪೋನಿಧಿಃ।
05009014c ತಂ ಪ್ರಲೋಭಯಿತುಂ ದೇವ ಗಚ್ಚಾಮಃ ಸಹಿತಾ ವಯಂ।
05009014e ಯತಿಷ್ಯಾಮೋ ವಶೇ ಕರ್ತುಂ ವ್ಯಪನೇತುಂ ಚ ತೇ ಭಯಂ।।

ದೇವ! ಕಣ್ಣುಗಳಿಂದ ಎಲ್ಲವನ್ನೂ ಸುಟ್ಟುಬಿಡುವನೋ ಎಂದು ಕುಳಿತಿರುವ ಆ ತಪೋನಿಧಿಯನ್ನು ಪ್ರಲೋಭಗೊಳಿಸಲೂ ನಾವು ಒಟ್ಟಾಗಿ ಹೋಗುತ್ತೇವೆ. ಅವನನ್ನು ವಶೀಕರಿಸಲು ಮತ್ತು ನಿನ್ನ ಭಯವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತೇವೆ.””

05009015 ಶಲ್ಯ ಉವಾಚ।
05009015a ಇಂದ್ರೇಣ ತಾಸ್ತ್ವನುಜ್ಞಾತಾ ಜಗ್ಮುಸ್ತ್ರಿಶಿರಸೋಽಂತಿಕಂ।
05009015c ತತ್ರ ತಾ ವಿವಿಧೈರ್ಭಾವೈರ್ಲೋಭಯಂತ್ಯೋ ವರಾಂಗನಾಃ।
05009015e ನೃತ್ಯಂ ಸಂದರ್ಶಯಂತ್ಯಶ್ಚ ತಥೈವಾಂಗೇಷು ಸೌಷ್ಠವಂ।।

ಶಲ್ಯನು ಹೇಳಿದನು: “ಇಂದ್ರನಿಂದ ಅನುಜ್ಞಾತರಾದ ಅವರು ತ್ರಿಶಿರನ ಬಳಿ ಹೋದರು. ಅಲ್ಲಿ ಆ ವರಾಂಗನೆಯರು ವಿವಿಧಭಾವಗಳಿಂದ, ನೃತ್ಯವನ್ನು ಮತ್ತು ಹಾಗೆಯೇ ಅಂಗ ಸೌಷ್ಟವವನ್ನು ಪ್ರದರ್ಶಿಸುತ್ತಾ ಅವನನ್ನು ಲೋಭಗೊಳಿಸಲು ಪ್ರಯತ್ನಿಸಿದರು.

05009016a ವಿಚೇರುಃ ಸಂಪ್ರಹರ್ಷಂ ಚ ನಾಭ್ಯಗಚ್ಚನ್ಮಹಾತಪಾಃ।
05009016c ಇಂದ್ರಿಯಾಣಿ ವಶೇ ಕೃತ್ವಾ ಪೂರ್ಣಸಾಗರಸಮ್ನಿಭಃ।।

ಆ ಮಹಾತಪಸ್ವಿಯು ಅವರನ್ನು ನೋಡಿದರೂ ಹರ್ಷಿತನಾಗಲಿಲ್ಲ. ಇಂದ್ರಿಯಗಳನ್ನು ವಶೀಕರಿಸಿ ತುಂಬಿದ ಸಾಗರದಂತೆ ತೋರುತ್ತಿದ್ದನು.

05009017a ತಾಸ್ತು ಯತ್ನಂ ಪರಂ ಕೃತ್ವಾ ಪುನಃ ಶಕ್ರಮುಪಸ್ಥಿತಾಃ।
05009017c ಕೃತಾಂಜಲಿಪುಟಾಃ ಸರ್ವಾ ದೇವರಾಜಮಥಾಬ್ರುವನ್।।

ಪರಮ ಯತ್ನವನ್ನು ಮಾಡಿ ಅವರು ಪುನಃ ಶಕ್ರನ ಉಪಸ್ಥಿತಿಯಲ್ಲಿ ಬಂದು, ಎಲ್ಲರೂ ಕೈಮುಗಿದು ದೇವರಾಜನಿಗೆ ಹೀಗೆ ಹೇಳಿದರು:

05009018a ನ ಸ ಶಕ್ಯಃ ಸುದುರ್ಧರ್ಷೋ ಧೈರ್ಯಾಚ್ಚಾಲಯಿತುಂ ಪ್ರಭೋ।
05009018c ಯತ್ತೇ ಕಾರ್ಯಂ ಮಹಾಭಾಗ ಕ್ರಿಯತಾಂ ತದನಂತರಂ।।

“ಪ್ರಭೋ! ಆ ದುರ್ಧರ್ಷನನ್ನು ಧೈರ್ಯದಿಂದ ಅಲುಗಾಡಿಸಲು ಶಕ್ಯವಿಲ್ಲ. ಮಹಾಭಾಗ! ಇದರ ನಂತರ ಏನು ಮಾಡಬೇಕೋ ಅದನ್ನು ಮಾಡು.”

05009019a ಸಂಪೂಜ್ಯಾಪ್ಸರಸಃ ಶಕ್ರೋ ವಿಸೃಜ್ಯ ಚ ಮಹಾಮತಿಃ।
05009019c ಚಿಂತಯಾಮಾಸ ತಸ್ಯೈವ ವಧೋಪಾಯಂ ಮಹಾತ್ಮನಃ।।

ಮಹಾಮತಿ ಶಕ್ರನು ಅಪ್ಸರೆಯರನ್ನು ಗೌರವಿಸಿ ಕಳುಹಿಸಿಕೊಟ್ಟು ಆ ಮಹಾತ್ಮನ ವಧೆಯ ಉಪಾಯವನ್ನು ಚಿಂತಿಸತೊಡಗಿದನು.

05009020a ಸ ತೂಷ್ಣೀಂ ಚಿಂತಯನ್ವೀರೋ ದೇವರಾಜಃ ಪ್ರತಾಪವಾನ್।
05009020c ವಿನಿಶ್ಚಿತಮತಿರ್ಧೀಮಾನ್ವಧೇ ತ್ರಿಶಿರಸೋಽಭವತ್।।

ಆ ವೀರ ಪ್ರತಾಪವಾನ್ ಧೀಮಾನ್ ದೇವರಾಜನು ತುಂಬಾ ಚಿಂತಿಸಿ ತ್ರಿಶಿರನ ವಧೆಯ ಕುರಿತು ನಿಶ್ಚಯಿಸಿದನು.

05009021a ವಜ್ರಮಸ್ಯ ಕ್ಷಿಪಾಮ್ಯದ್ಯ ಸ ಕ್ಷಿಪ್ರಂ ನ ಭವಿಷ್ಯತಿ।
05009021c ಶತ್ರುಃ ಪ್ರವೃದ್ಧೋ ನೋಪೇಕ್ಷ್ಯೋ ದುರ್ಬಲೋಽಪಿ ಬಲೀಯಸಾ।।

“ಇಂದು ಈ ವಜ್ರವನ್ನು ಅವನ ಮೇಲೆ ಎಸೆಯುತ್ತೇನೆ. ಇದರಿಂದ ಅವನು ಕ್ಷಿಪ್ರವಾಗಿ ಕೊಲ್ಲಲ್ಪಡುತ್ತಾನೆ. ಎಷ್ಟೇ ದುರ್ಬಲನಾಗಿದ್ದ ಶತ್ರುವು ಪ್ರವೃದ್ಧನಾಗುತ್ತಿದ್ದಾನೆಂದರೆ ಬಲಶಾಲಿಯೂ ನಿರ್ಲಕ್ಷಿಸಬಾರದು.”

05009022a ಶಾಸ್ತ್ರಬುದ್ಧ್ಯಾ ವಿನಿಶ್ಚಿತ್ಯ ಕೃತ್ವಾ ಬುದ್ಧಿಂ ವಧೇ ದೃಢಾಂ।
05009022c ಅಥ ವೈಶ್ವಾನರನಿಭಂ ಘೋರರೂಪಂ ಭಯಾವಹಂ।
05009022e ಮುಮೋಚ ವಜ್ರಂ ಸಂಕ್ರುದ್ಧಃ ಶಕ್ರಸ್ತ್ರಿಶಿರಸಂ ಪ್ರತಿ।।

ಶಾಸ್ತ್ರಬುದ್ಧಿಯನ್ನುಪಯೋಗಿಸಿ ನಿಶ್ಚಯಿಸಿ ವಧೆಗೆ ದೃಢ ಮನಸ್ಸುಮಾಡಿದನು. ಆಗ ಶಕ್ರನು ಸಂಕ್ರುದ್ಧನಾಗಿ ಅಗ್ನಿಯಂತೆ ಹೊಳೆಯುತ್ತಿರುವ, ಘೋರರೂಪೀ, ಭಯವನ್ನುಂಟುಮಾಡುವ ವಜ್ರವನ್ನು ತ್ರಿಶಿರನ ಮೇಲೆ ಎಸೆದನು.

05009023a ಸ ಪಪಾತ ಹತಸ್ತೇನ ವಜ್ರೇಣ ದೃಢಮಾಹತಃ।
05009023c ಪರ್ವತಸ್ಯೇವ ಶಿಖರಂ ಪ್ರಣುನ್ನಂ ಮೇದಿನೀತಲೇ।।

ವಜ್ರದಿಂದ ಜೋರಾಗಿ ಹೊಡೆಯಲ್ಪಟ್ಟು ಹತನಾಗಿ ಅವನು ಪರ್ವತಶಿಖರವು ಮಣ್ಣಾಗಿ ನೆಲಕ್ಕೆ ಬೀಳುವಂತೆ ಬಿದ್ದನು.

05009024a ತಂ ತು ವಜ್ರಹತಂ ದೃಷ್ಟ್ವಾ ಶಯಾನಮಚಲೋಪಮಂ।
05009024c ನ ಶರ್ಮ ಲೇಭೇ ದೇವೇಂದ್ರೋ ದೀಪಿತಸ್ತಸ್ಯ ತೇಜಸಾ।
05009024e ಹತೋಽಪಿ ದೀಪ್ತತೇಜಾಃ ಸ ಜೀವನ್ನಿವ ಚ ದೃಶ್ಯತೇ।।

ಅವನು ವಜ್ರದಿಂದ ಹತನಾಗಿ ಮಲಗಿದ ಪರ್ವತದಂತಿರುವುದನ್ನು ನೋಡಿ ದೇವೇಂದ್ರನು ಶಾಂತಿಯನ್ನು ಪಡೆಯಲಿಲ್ಲ. ಅವನು ತೇಜಸ್ಸಿನಿಂದ ಬೆಳಗುತ್ತಿದ್ದನು. ಹತನಾದರೂ ಆ ದೀಪ್ತ ತೇಜಸ್ವಿಯು ಜೀವಂತನಾಗಿದ್ದಾನೋ ಎಂದು ತೋರಿದನು.

05009025a ಅಭಿತಸ್ತತ್ರ ತಕ್ಷಾಣಂ ಘಟಮಾನಂ ಶಚೀಪತಿಃ।
05009025c ಅಪಶ್ಯದಬ್ರವೀಚ್ಚೈನಂ ಸತ್ವರಂ ಪಾಕಶಾಸನಃ।
05009025e ಕ್ಷಿಪ್ರಂ ಚಿಂಧಿ ಶಿರಾಂಸ್ಯಸ್ಯ ಕುರುಷ್ವ ವಚನಂ ಮಮ।।

ಭಯಕ್ಕೆ ಸಿಲುಕಿದ ಶಚೀಪತಿಯು ಆಗ ಅಲ್ಲಿಗೆ ಬಂದ ಬಡಿಗನನ್ನು ನೋಡಿದನು. ತಕ್ಷಣವೇ ಪಾಕಶಾಸನನು ಅವನಿಗೆ ಹೇಳಿದನು: “ಬೇಗನೇ ಇವನ ಶಿರಗಳನ್ನು ಕತ್ತರಿಸು. ನನ್ನ ಮಾತಿನಂತೆ ಮಾಡು.”

05009026 ತಕ್ಷೋವಾಚ।
05009026a ಮಹಾಸ್ಕಂಧೋ ಭೃಶಂ ಹ್ಯೇಷ ಪರಶುರ್ನ ತರಿಷ್ಯತಿ।
05009026c ಕರ್ತುಂ ಚಾಹಂ ನ ಶಕ್ಷ್ಯಾಮಿ ಕರ್ಮ ಸದ್ಭಿರ್ವಿಗರ್ಹಿತಂ।।

ಬಡಿಗನು ಹೇಳಿದನು: “ಇವನ ಭುಜಗಳು ತುಂಬಾ ದೊಡ್ಡವು. ಈ ಗರಗಸೆಯಿಂದ ಅದು ತುಂಡಾಗುವುದಿಲ್ಲ. ಒಳ್ಳೆಯವರು ಅಲ್ಲಗಳೆಯುವ ಕೆಲಸವನ್ನು ಮಾಡಲೂ ನನಗೆ ಇಷ್ಟವಿಲ್ಲ.”

05009027 ಇಂದ್ರ ಉವಾಚ।
05009027a ಮಾ ಭೈಸ್ತ್ವಂ ಕ್ಷಿಪ್ರಮೇತದ್ವೈ ಕುರುಷ್ವ ವಚನಂ ಮಮ।
05009027c ಮತ್ಪ್ರಸಾದಾದ್ಧಿ ತೇ ಶಸ್ತ್ರಂ ವಜ್ರಕಲ್ಪಂ ಭವಿಷ್ಯತಿ।।

ಇಂದ್ರನು ಹೇಳಿದನು: “ಹೆದರಬೇಡ! ಬೇಗನೆ ನಾನು ಹೇಳಿದಂತೆ ಮಾಡು. ನನ್ನ ಪ್ರಸಾದದಿಂದ ನಿನ್ನ ಗರಗಸವು ವಜ್ರಕಲ್ಪವಾಗುತ್ತದೆ.”

05009028 ತಕ್ಷೋವಾಚ।
05009028a ಕಂ ಭವಂತಮಹಂ ವಿದ್ಯಾಂ ಘೋರಕರ್ಮಾಣಮದ್ಯ ವೈ।
05009028c ಏತದಿಚ್ಚಾಮ್ಯಹಂ ಶ್ರೋತುಂ ತತ್ತ್ವೇನ ಕಥಯಸ್ವ ಮೇ।।

ಬಡಿಗನು ಹೇಳಿದನು: “ಇಂದು ಈ ಘೋರಕರ್ಮವನ್ನು ಮಾಡಿರುವ ನೀನು ಯಾರೆಂದು ನಾನು ತಿಳಿಯಬೇಕು? ಇದನ್ನು ಕೇಳಲು ಬಯಸುತ್ತೇನೆ. ಸತ್ಯವನ್ನು ಹೇಳು.”

05009029 ಇಂದ್ರ ಉವಾಚ।
05009029a ಅಹಮಿಂದ್ರೋ ದೇವರಾಜಸ್ತಕ್ಷನ್ವಿದಿತಮಸ್ತು ತೇ।
05009029c ಕುರುಷ್ವೈತದ್ಯಥೋಕ್ತಂ ಮೇ ತಕ್ಷನ್ಮಾ ತ್ವಂ ವಿಚಾರಯ।।

ಇಂದ್ರನು ಹೇಳಿದನು: “ನಾನು ದೇವರಾಜ ಇಂದ್ರ. ಇದು ನಿನಗೆ ತಿಳಿದಿರಲಿ. ನಾನು ಹೇಳಿದಹಾಗೆ ನೀನು ಮಾಡುತ್ತೀಯೆ. ಬಡಿಗ! ವಿಚಾರಮಾಡಬೇಡ!”

05009030 ತಕ್ಷೋವಾಚ।
05009030a ಕ್ರೂರೇಣ ನಾಪತ್ರಪಸೇ ಕಥಂ ಶಕ್ರೇಹ ಕರ್ಮಣಾ।
05009030c ಋಷಿಪುತ್ರಮಿಮಂ ಹತ್ವಾ ಬ್ರಹ್ಮಹತ್ಯಾಭಯಂ ನ ತೇ।।

ಬಡಿಗನು ಹೇಳಿದನು: “ಶಕ್ರ! ಈ ಕ್ರೂರ ಕರ್ಮದಿಂದ ನೀನು ಹೇಗೆ ತಾನೇ ಪರಿತಪಿಸುತ್ತಿಲ್ಲ? ಈ ಋಷಿಪುತ್ರನನ್ನು ಕೊಂದು ನಿನಗೆ ಹೇಗೆ ಬ್ರಹ್ಮಹತ್ಯೆಯ ಭಯವಿಲ್ಲ?”

05009031 ಇಂದ್ರ ಉವಾಚ।
05009031a ಪಶ್ಚಾದ್ಧರ್ಮಂ ಚರಿಷ್ಯಾಮಿ ಪಾವನಾರ್ಥಂ ಸುದುಶ್ಚರಂ।
05009031c ಶತ್ರುರೇಷ ಮಹಾವೀರ್ಯೋ ವಜ್ರೇಣ ನಿಹತೋ ಮಯಾ।।

ಇಂದ್ರನು ಹೇಳಿದನು: “ಈ ರೀತಿ ಕೆಟ್ಟದ್ದಾಗಿ ನಡೆದುಕೊಂಡಿದ್ದುದಕ್ಕೆ ಪಾವನಗೊಳ್ಳಲು ನಾನು ಅನಂತರ ಧರ್ಮದಿಂದ ನಡೆದುಕೊಳ್ಳುತ್ತೇನೆ. ಈ ಮಹಾವೀರ್ಯವಂತನು ನನ್ನ ಶತ್ರುವಾಗಿದ್ದನು. ನನ್ನ ವಜ್ರದಿಂದ ಹತನಾದನು.

05009032a ಅದ್ಯಾಪಿ ಚಾಹಮುದ್ವಿಗ್ನಸ್ತಕ್ಷನ್ನಸ್ಮಾದ್ಬಿಭೇಮಿ ವೈ।
05009032c ಕ್ಷಿಪ್ರಂ ಚಿಂಧಿ ಶಿರಾಂಸಿ ತ್ವಂ ಕರಿಷ್ಯೇಽನುಗ್ರಹಂ ತವ।।

ಬಡಿಗ! ಈಗಲೂ ಕೂಡ ನಾನು ಉದ್ವಿಗ್ನನಾಗಿದ್ದೇನೆ. ಇವನಿಂದ ಈಗಲೂ ಭಯಗೊಳ್ಳುತ್ತೇನೆ. ಬೇಗನೆ ಇವನ ಶಿರಗಳನ್ನು ಕತ್ತರಿಸು. ನಿನಗೆ ಅನುಗ್ರಹವನ್ನು ಮಾಡುತ್ತೇನೆ.

05009033a ಶಿರಃ ಪಶೋಸ್ತೇ ದಾಸ್ಯಂತಿ ಭಾಗಂ ಯಜ್ಞೇಷು ಮಾನವಾಃ।
05009033c ಏಷ ತೇಽನುಗ್ರಹಸ್ತಕ್ಷನ್ ಕ್ಷಿಪ್ರಂ ಕುರು ಮಮ ಪ್ರಿಯಂ।।

ಯಜ್ಞಗಳಲ್ಲಿ ಮಾನವರು ಪಶುವಿನ ಶಿರೋಭಾಗವನ್ನು ನಿನಗೆ ನೀಡುತ್ತಾರೆ. ಬಡಿಗ! ಈ ಅನುಗ್ರಹವನ್ನು ನಾನು ನಿನಗೆ ನೀಡುತ್ತಿದ್ದೇನೆ. ನನಗೆ ಪ್ರಿಯವಾದುದನ್ನು ಬೇಗ ಮಾಡು!””

05009034 ಶಲ್ಯ ಉವಾಚ।
05009034a ಏತಚ್ಚ್ರುತ್ವಾ ತು ತಕ್ಷಾ ಸ ಮಹೇಂದ್ರವಚನಂ ತದಾ।
05009034c ಶಿರಾಂಸ್ಯಥ ತ್ರಿಶಿರಸಃ ಕುಠಾರೇಣಾಚ್ಚಿನತ್ತದಾ।।

ಶಲ್ಯನು ಹೇಳಿದನು: “ಆಗ ಮಹೇಂದ್ರನ ಈ ಮಾತನ್ನು ಕೇಳಿದ ಬಡಿಗನು ತಕ್ಷಣವೇ ತ್ರಿಶಿರನ ತಲೆಗಳನ್ನು ಕೊಡಲಿಯಿಂದ ತುಂಡರಿಸಿದನು.

05009035a ನಿಕೃತ್ತೇಷು ತತಸ್ತೇಷು ನಿಷ್ಕ್ರಾಮಂಸ್ತ್ರಿಶಿರಾಸ್ತ್ವಥ।
05009035c ಕಪಿಂಜಲಾಸ್ತಿತ್ತಿರಾಶ್ಚ ಕಲವಿಂಕಾಶ್ಚ ಸರ್ವಶಃ।।

ತಲೆಗಳನ್ನು ತುಂಡರಿಸಲು ತ್ರಿಶಿರಗಳಿಂದ ಬಹಳಷ್ಟು ಗಿಳಿಗಳು, ಕೋಗಿಲೆಗಳು ಮತ್ತು ಗುಬ್ಬಿಗಳು ಹೊರಹಾರಿ ಬಂದವು.

05009036a ಯೇನ ವೇದಾನಧೀತೇ ಸ್ಮ ಪಿಬತೇ ಸೋಮಮೇವ ಚ।
05009036c ತಸ್ಮಾದ್ವಕ್ತ್ರಾನ್ವಿನಿಷ್ಪೇತುಃ ಕ್ಷಿಪ್ರಂ ತಸ್ಯ ಕಪಿಂಜಲಾಃ।।

ಯಾವ ಬಾಯಿಯಿಂದ ವೇದಗಳನ್ನು ಪಠಿಸುತ್ತಿದ್ದನೋ ಮತ್ತು ಸೋಮವನ್ನು ಕುಡಿಯುತ್ತಿದ್ದನೋ ಆ ಬಾಯಿಯಿಂದ ಒಂದೇಸಮನೆ ಕಪಿಂಜಲಗಳು ಹಾರಿಬಂದವು.

05009037a ಯೇನ ಸರ್ವಾ ದಿಶೋ ರಾಜನ್ಪಿಬನ್ನಿವ ನಿರೀಕ್ಷತೇ।
05009037c ತಸ್ಮಾದ್ವಕ್ತ್ರಾದ್ವಿನಿಷ್ಪೇತುಸ್ತಿತ್ತಿರಾಸ್ತಸ್ಯ ಪಾಂಡವ।।

ರಾಜನ್! ಯಾವುದರಿಂದ ದಿಕ್ಕುಗಳೆಲ್ಲವನ್ನೂ ಕುಡಿದುಬಿಡುವವನಂತೆ ನೋಡುತ್ತಿದ್ದನೋ ಆ ಮುಖದಿಂದ ಬಹಳಷ್ಟು ಕೋಗಿಲೆಗಳು ಹೊರಬಂದವು.

05009038a ಯತ್ಸುರಾಪಂ ತು ತಸ್ಯಾಸೀದ್ವಕ್ತ್ರಂ ತ್ರಿಶಿರಸಸ್ತದಾ।
05009038c ಕಲವಿಂಕಾ ವಿನಿಷ್ಪೇತುಸ್ತೇನಾಸ್ಯ ಭರತರ್ಷಭ।।

ಭರತಶ್ರೇಷ್ಠ! ಯಾವುದರಿಂದ ಸುರಾಪಾನ ಮಾಡುತ್ತಿದ್ದನೋ ತ್ರಿಶಿರನ ಆ ಮುಖದಿಂದ ಗುಬ್ಬಿ-ಗಿಡುಗಗಳು ಹೊರಬಂದವು

05009039a ತತಸ್ತೇಷು ನಿಕೃತ್ತೇಷು ವಿಜ್ವರೋ ಮಘವಾನಭೂತ್।
05009039c ಜಗಾಮ ತ್ರಿದಿವಂ ಹೃಷ್ಟಸ್ತಕ್ಷಾಪಿ ಸ್ವಗೃಹಾನ್ಯಯೌ।।

ತಲೆಗಳು ತುಂಡರಿಸಲ್ಪಡಲು ಮಘವತನು ವಿಜ್ವರನಾದನು. ಸಂತೋಷಗೊಂಡು ತ್ರಿದಿವಕ್ಕೆ ಹೋಗಿ ಸ್ವಗೃಹವನ್ನು ಸೇರಿದನು.

05009040a ತ್ವಷ್ಟಾ ಪ್ರಜಾಪತಿಃ ಶ್ರುತ್ವಾ ಶಕ್ರೇಣಾಥ ಹತಂ ಸುತಂ।
05009040c ಕ್ರೋಧಸಂರಕ್ತನಯನ ಇದಂ ವಚನಮಬ್ರವೀತ್।।

ಪ್ರಜಾಪತಿ ತ್ವಷ್ಟನು ಶಕ್ರನಿಂದ ತನ್ನ ಮಗನು ಹತನಾದುದನ್ನು ಕೇಳಿ ಕ್ರೋಧದಿಂದ ಕಣ್ಣುಗಳು ಕೆಂಪಾಗಲು ಹೀಗೆ ಹೇಳಿದನು:

05009041a ತಪ್ಯಮಾನಂ ತಪೋ ನಿತ್ಯಂ ಕ್ಷಾಂತಂ ದಾಂತಂ ಜಿತೇಂದ್ರಿಯಂ।
05009041c ಅನಾಪರಾಧಿನಂ ಯಸ್ಮಾತ್ಪುತ್ರಂ ಹಿಂಸಿತವಾನ್ಮಮ।।
05009042a ತಸ್ಮಾಚ್ಚಕ್ರವಧಾರ್ಥಾಯ ವೃತ್ರಮುತ್ಪಾದಯಾಮ್ಯಹಂ।

“ತಪಸ್ಸನ್ನು ತಪಿಸುತ್ತಿರುವ, ನಿತ್ಯವೂ ಕ್ಷಾಂತ, ದಾಂತ ಮತ್ತು ಜಿತೇಂದ್ರಿಯನಾಗಿ ಅನಾಪರಾಧಿಯಾಗಿದ್ದ ನನ್ನ ಪುತ್ರನನ್ನು ಯಾರು ಹಿಂಸಿಸಿದ್ದಾನೋ ಆ ಶಕ್ರನ ವಧೆಗಾಗಿ ನಾನು ವೃತ್ರನನ್ನು ಉತ್ಪಾದಿಸುತ್ತಿದ್ದೇನೆ.

05009042c ಲೋಕಾಃ ಪಶ್ಯಂತು ಮೇ ವೀರ್ಯಂ ತಪಸಶ್ಚ ಬಲಂ ಮಹತ್।
05009042e ಸ ಚ ಪಶ್ಯತು ದೇವೇಂದ್ರೋ ದುರಾತ್ಮಾ ಪಾಪಚೇತನಃ।।

ನನ್ನ ವೀರ್ಯವನ್ನು ಮತ್ತು ತಪಸ್ಸಿನ ಮಹಾಬಲವನ್ನು ಲೋಕಗಳು ನೋಡಲಿ! ದುರಾತ್ಮ ಪಾಪಚೇತನ ದೇವೇಂದ್ರನೂ ಇದನ್ನು ನೋಡಲಿ.”

05009043a ಉಪಸ್ಪೃಶ್ಯ ತತಃ ಕ್ರುದ್ಧಸ್ತಪಸ್ವೀ ಸುಮಹಾಯಶಾಃ।
05009043c ಅಗ್ನಿಂ ಹುತ್ವಾ ಸಮುತ್ಪಾದ್ಯ ಘೋರಂ ವೃತ್ರಮುವಾಚ ಹ।
05009043e ಇಂದ್ರಶತ್ರೋ ವಿವರ್ಧಸ್ವ ಪ್ರಭಾವಾತ್ತಪಸೋ ಮಮ।।

ಆಗ ಆ ಸುಮಹಾಯಶ ಕೃದ್ಧತಪಸ್ವಿಯು ನೀರನ್ನು ಮುಟ್ಟಿ, ಅಗ್ನಿಯಲ್ಲಿ ಆಹುತಿಯನ್ನು ಹಾಕಿ ಘೋರ ವೃತ್ರನನ್ನು ಉತ್ಪಾದಿಸಿ ಹೇಳಿದನು: “ಇಂದ್ರಶತ್ರುವೇ! ನನ್ನ ತಪಸ್ಸಿನ ಪ್ರಭಾವದಿಂದ ವಿವರ್ಧನಾಗು.”

05009044a ಸೋಽವರ್ಧತ ದಿವಂ ಸ್ತಬ್ಧ್ವಾ ಸೂರ್ಯವೈಶ್ವಾನರೋಪಮಃ।
05009044c ಕಿಂ ಕರೋಮೀತಿ ಚೋವಾಚ ಕಾಲಸೂರ್ಯ ಇವೋದಿತಃ।

ಸೂರ್ಯ-ಅಗ್ನಿಯರ ಸರಿಸಮನಾದ ಅವನು ದಿವವನ್ನು ಸ್ತಬ್ಧಗೊಳಿಸಿ ಬೆಳೆದನು. ಕಾಲಸೂರ್ಯನಂತೆ ಮೇಲೆದ್ದು “ಏನು ಮಾಡಲಿ?” ಎಂದು ಕೇಳಿದನು.

05009044e ಶಕ್ರಂ ಜಹೀತಿ ಚಾಪ್ಯುಕ್ತೋ ಜಗಾಮ ತ್ರಿದಿವಂ ತತಃ।।
05009045a ತತೋ ಯುದ್ಧಂ ಸಮಭವದ್ವೃತ್ರವಾಸವಯೋಸ್ತದಾ।
05009045c ಸಂಕ್ರುದ್ಧಯೋರ್ಮಹಾಘೋರಂ ಪ್ರಸಕ್ತಂ ಕುರುಸತ್ತಮ।।

“ಇಂದ್ರನನ್ನು ಕೊಲ್ಲು!” ಎಂದು ಹೇಳಿ ಅವನು ತ್ರಿದಿವಕ್ಕೆ ತೆರಳಿದನು. ಆಗ ವೃತ್ರ-ವಾಸವರ ನಡುವೆ ಯುದ್ಧವು ನಡೆಯಿತು.

05009046a ತತೋ ಜಗ್ರಾಹ ದೇವೇಂದ್ರಂ ವೃತ್ರೋ ವೀರಃ ಶತಕ್ರತುಂ।
05009046c ಅಪಾವೃತ್ಯ ಸ ಜಗ್ರಾಸ ವೃತ್ರಃ ಕ್ರೋಧಸಮನ್ವಿತಃ।।

ಆಗ ವೃತ್ರನು ವೀರ ಶತಕ್ರತು ದೇವೇಂದ್ರನನ್ನು ಹಿಡಿದನು. ಅವನನ್ನು ಜೋರಾಗಿ ತಿರುಗಿಸಿ ಕ್ರೋಧಸಮನ್ವಿತನಾದ ವೃತ್ರನು ನುಂಗಿದನು.

05009047a ಗ್ರಸ್ತೇ ವೃತ್ರೇಣ ಶಕ್ರೇ ತು ಸಂಭ್ರಾಂತಾಸ್ತ್ರಿದಶಾಸ್ತದಾ।
05009047c ಅಸೃಜಂಸ್ತೇ ಮಹಾಸತ್ತ್ವಾ ಜೃಂಭಿಕಾಂ ವೃತ್ರನಾಶಿನೀಂ।।

ವೃತ್ರನಿಂದ ಶಕ್ರನು ನುಂಗಲ್ಪಡಲು ಮಹಾಸತ್ವಶಾಲೀ ತ್ರಿದಶರು ಸಂಭ್ರಾಂತರಾಗಿ ವೃತ್ರನಾಶಿನೀ ಜೃಂಭಿಕೆ (ಆಕಳಿಕೆ) ಯನ್ನು ಸೃಷ್ಟಿಸಿದರು.

05009048a ವಿಜೃಂಭಮಾಣಸ್ಯ ತತೋ ವೃತ್ರಸ್ಯಾಸ್ಯಾದಪಾವೃತಾತ್।
05009048c ಸ್ವಾನ್ಯಂಗಾನ್ಯಭಿಸಂಕ್ಷಿಪ್ಯ ನಿಷ್ಕ್ರಾಂತೋ ಬಲಸೂದನಃ।
05009048e ತತಃ ಪ್ರಭೃತಿ ಲೋಕೇಷು ಜೃಂಭಿಕಾ ಪ್ರಾಣಿಸಂಶ್ರಿತಾ।।

ವೃತ್ರನು ಆಕಳಿಸಲು ಬಾಯಿ ತೆರೆದಾಗ ಬಲಸೂದನನು ತನ್ನ ಅಂಗಾಂಗಗಳನ್ನು ಸಂಕ್ಷಿಪ್ತಗೊಳಿಸಿ ಹೊರಬಂದನು. ಅಂದಿನಿಂದ ಲೋಕದಲ್ಲಿ ಜೃಂಭಿಕೆಯು ಪ್ರಾಣಿಗಳಲ್ಲಿ ಸಂಶ್ರಿತಳಾದಳು.

05009049a ಜಹೃಷುಶ್ಚ ಸುರಾಃ ಸರ್ವೇ ದೃಷ್ಟ್ವಾ ಶಕ್ರಂ ವಿನಿಹ್ಸೃತಂ।
05009049c ತತಃ ಪ್ರವವೃತೇ ಯುದ್ಧಂ ವೃತ್ರವಾಸವಯೋಃ ಪುನಃ।
05009049e ಸಂರಬ್ಧಯೋಸ್ತದಾ ಘೋರಂ ಸುಚಿರಂ ಭರತರ್ಷಭ।।

ಶಕ್ರನು ಹೊರಬಂದುದನ್ನು ನೋಡಿದ ಎಲ್ಲ ಸುರರೂ ಸಂತುಷ್ಟರಾದರು. ಆಗ ಪುನಃ ವೃತ್ರ-ವಾಸವರ ನಡುವೆ ಯುದ್ಧವು ಪ್ರಾರಂಭವಾಯಿತು. ಭರತರ್ಷಭ! ಆ ಘೋರ ಮಹಾಯುದ್ಧವು ತುಂಬಾ ಸಮಯದವರೆಗೆ ನಡೆಯಿತು.

05009050a ಯದಾ ವ್ಯವರ್ಧತ ರಣೇ ವೃತ್ರೋ ಬಲಸಮನ್ವಿತಃ।
05009050c ತ್ವಷ್ಟುಸ್ತಪೋಬಲಾದ್ವಿದ್ವಾಂಸ್ತದಾ ಶಕ್ರೋ ನ್ಯವರ್ತತ।।

ರಣದಲ್ಲಿ ತನ್ನ ಮತ್ತು ತ್ವಷ್ಟನ ತಪೋಬಲದಿಂದ ಬಲಸಮನ್ವಿತ ವೃತ್ರನು ವರ್ಧಿಸಿ ಅವನದೇ ಮೇಲ್ಗೈಯಾಗಲು ಶಕ್ರನು ಹಿಂದೆ ಸರಿದನು.

05009051a ನಿವೃತ್ತೇ ತು ತದಾ ದೇವಾ ವಿಷಾದಮಗಮನ್ಪರಂ।
05009051c ಸಮೇತ್ಯ ಶಕ್ರೇಣ ಚ ತೇ ತ್ವಷ್ಟುಸ್ತೇಜೋವಿಮೋಹಿತಾಃ।
05009051e ಅಮಂತ್ರಯಂತ ತೇ ಸರ್ವೇ ಮುನಿಭಿಃ ಸಹ ಭಾರತ।।

ಅವನು ಹಿಂದೆ ಸರಿಯಲು ದೇವತೆಗಳು ಪರಮ ವಿಷಾದಗೊಂಡರು. ಶಕ್ರನ ಜೊತೆಗೆ ಅವರೂ ಕೂಡ ತ್ವಷ್ಟನ ತೇಜಸ್ಸಿನಿಂದ ವಿಮೋಹಿತರಾದರು. ಭಾರತ! ಆಗ ಅವರೆಲ್ಲರೂ ಮುನಿಗಳನ್ನು ಕೂಡಿ ಮಂತ್ರಾಲೋಚನೆಗೈದರು.

05009052a ಕಿಂ ಕಾರ್ಯಮಿತಿ ತೇ ರಾಜನ್ವಿಚಿಂತ್ಯ ಭಯಮೋಹಿತಾಃ।
05009052c ಜಗ್ಮುಃ ಸರ್ವೇ ಮಹಾತ್ಮಾನಂ ಮನೋಭಿರ್ವಿಷ್ಣುಮವ್ಯಯಂ।।
05009052e ಉಪವಿಷ್ಟಾ ಮಂದರಾಗ್ರೇ ಸರ್ವೇ ವೃತ್ರವಧೇಪ್ಸವಃ।।

ರಾಜನ್! ಏನು ಮಾಡಬೇಕು ಎಂದು ಚಿಂತಿಸಿ ಭಯಮೋಹಿತರಾಗಿ, ವೃತ್ರನ ವಧೆಯನ್ನು ಬಯಸಿದ ಎಲ್ಲರೂ ಮಹಾತ್ಮ, ಅವ್ಯಯ, ಮಂದರಾಗ್ರದಲ್ಲಿ ಕುಳಿತಿರುವ ವಿಷ್ಣುವನ್ನು ನೆನೆದರು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಉದ್ಯೋಗ ಪರ್ವಣಿ ಇಂದ್ರವಿಜಯೇ ನವಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಉದ್ಯೋಗ ಪರ್ವದಲ್ಲಿ ಇಂದ್ರವಿಜಯದಲ್ಲಿ ಒಂಭತ್ತನೆಯ ಅಧ್ಯಾಯವು।