008 ಶಲ್ಯವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಉದ್ಯೋಗ ಪರ್ವ

ಅಧ್ಯಾಯ 8

ಸಾರ

ಮಹಾಸೇನೆಯೊಂದಿಗೆ ಪಾಂಡವರನ್ನು ಸೇರಲು ಬರುತ್ತಿದ್ದ ಶಲ್ಯನನ್ನು ದುರ್ಯೋಧನನು ಅವನ ಮಾರ್ಗದಲ್ಲಿ ಸ್ವಲಂಕೃತ ಸಭೆಗಳನ್ನು ರಚಿಸಿ, ಸತ್ಕರಿಸಿ ಸಂತೋಷಗೊಳಿಸಿ ಯುದ್ಧದಲ್ಲಿ ಅವನ ಸಹಾಯವನ್ನು ವರವಾಗಿ ಪಡೆದುದು (1-14). ಅನಂತರ ಶಲ್ಯನು ಯುಧಿಷ್ಠಿರನಿಗೆ ನಡೆದುದೆಲ್ಲವನ್ನೂ ತಿಳಿಸಿದುದು (15-24). ಶಲ್ಯನು ಕರ್ಣಾರ್ಜುನರ ದ್ವಂದ್ವ ರಥಯುದ್ಧದಲ್ಲಿ ಕರ್ಣನ ಸಾರಥಿಯಾಗಬೇಕಾಗಿ ಬಂದಾಗ ಅವನ ತೇಜೋವಧೆಯನ್ನು ಮಾಡಿ ತನಗೆ ಸಹಾಯಮಾಡಬೇಕೆಂದು ಯುಧಿಷ್ಠಿರನು ಕೇಳಿಕೊಳ್ಳುವುದು (25-27). ಹಾಗೆಯೇ ಮಾಡುತ್ತೇನೆಂದು ಹೇಳಿ ಶಲ್ಯನು ಇಂದ್ರನಿಗೂ ಕಷ್ಟವೊದಗಿ ಬಂದರೂ ನಂತರ ವಿಜಯವನ್ನು ಪಡೆದಂತೆ ಯುಧಿಷ್ಠಿರನೂ ವಿಜಯವನ್ನು ಪಡೆಯುವನೆಂದು ಹೇಳುವುದು (28-37).

05008001 ವೈಶಂಪಾಯನ ಉವಾಚ।
05008001a ಶಲ್ಯಃ ಶ್ರುತ್ವಾ ತು ದೂತಾನಾಂ ಸೈನ್ಯೇನ ಮಹತಾ ವೃತಃ।
05008001c ಅಭ್ಯಯಾತ್ಪಾಂಡವಾನ್ರಾಜನ್ಸಹ ಪುತ್ರೈರ್ಮಹಾರಥೈಃ।।

ವೈಶಂಪಾಯನನು ಹೇಳಿದನು: “ರಾಜನ್! ದೂತರಿಂದ ಕೇಳಿದ ಶಲ್ಯನು ಮಹಾರಥ ಪುತ್ರರೊಂದಿಗೆ ಪಾಂಡವರಲ್ಲಿಗೆ ಬರುತ್ತಿದ್ದನು.

05008002a ತಸ್ಯ ಸೇನಾನಿವೇಶೋಽಭೂದಧ್ಯರ್ಧಮಿವ ಯೋಜನಂ।
05008002c ತಥಾ ಹಿ ಬಹುಲಾಂ ಸೇನಾಂ ಸ ಬಿಭರ್ತಿ ನರರ್ಷಭಃ।।

ಅವನ ಸೇನೆಯ ಡೇರೆಯು ಅರ್ಧ ಯೋಜನೆಯಷ್ಟು ಜಾಗವನ್ನು ಆವರಿಸಿತ್ತು. ಅಷ್ಟೊಂದು ದೊಡ್ಡದಾಗಿತ್ತು ಆ ನರರ್ಷಭನ ಸೇನೆ.

05008003a ವಿಚಿತ್ರಕವಚಾಃ ಶೂರಾ ವಿಚಿತ್ರಧ್ವಜಕಾರ್ಮುಕಾಃ।
05008003c ವಿಚಿತ್ರಾಭರಣಾಃ ಸರ್ವೇ ವಿಚಿತ್ರರಥವಾಹನಾಃ।।

ಅವರೆಲ್ಲ ಶೂರರೂ ವಿಚಿತ್ರಕವಚಗಳನ್ನು ಧರಿಸಿದವರೂ, ವಿಚಿತ್ರ ಧ್ವಜ-ಬಿಲ್ಲುಗಳನ್ನು ಹೊಂದಿದವರೂ, ವಿಚಿತ್ರಾಭರಣಗಳನ್ನು ಧರಿಸಿದವರೂ, ವಿಚಿತ್ರ ರಥವಾಹನರೂ ಆಗಿದ್ದರು.

05008004a ಸ್ವದೇಶವೇಷಾಭರಣಾ ವೀರಾಃ ಶತಸಹಸ್ರಶಃ।
05008004c ತಸ್ಯ ಸೇನಾಪ್ರಣೇತಾರೋ ಬಭೂವುಃ ಕ್ಷತ್ರಿಯರ್ಷಭಾಃ।।

ಸ್ವದೇಶದ ವೇಷಾಭರಣಗಳನ್ನು ಧರಿಸಿದ ನೂರಾರು ಸಾವಿರಾರು ಕ್ಷತ್ರಿಯರ್ಷಭ ವೀರರು ಅವನ ಸೇನೆಯ ಮುಖಂಡರಾಗಿದ್ದರು.

05008005a ವ್ಯಥಯನ್ನಿವ ಭೂತಾನಿ ಕಂಪಯನ್ನಿವ ಮೇದಿನೀಂ।
05008005c ಶನೈರ್ವಿಶ್ರಾಮಯನ್ಸೇನಾಂ ಸ ಯಯೌ ಯೇನ ಪಾಂಡವಃ।।

ಅವನ ಸೇನೆಯು ನಿಧಾನವಾಗಿ ಅಲ್ಲಲ್ಲಿ ವಿಶ್ರಮಿಸುತ್ತಾ ಪಾಂಡವರಿರುವಲ್ಲಿಗೆ ಬರುತ್ತಿರಲು ಭೂಮಿಯ ಮೇಲಿರುವವುಗಳು ವ್ಯಥಿತಗೊಂಡವು.

05008006a ತತೋ ದುರ್ಯೋಧನಃ ಶ್ರುತ್ವಾ ಮಹಾಸೇನಂ ಮಹಾರಥಂ।
05008006c ಉಪಾಯಾಂತಮಭಿದ್ರುತ್ಯ ಸ್ವಯಮಾನರ್ಚ ಭಾರತ।।

ಭಾರತ! ಆಗ ಮಹಾಸೇನ ಮಹಾರಥನು ಬರುತ್ತಿದ್ದಾನೆಂದು ಕೇಳಿದ ದುರ್ಯೋಧನನು ಅವನನ್ನು ಸ್ವಯಂ ಎದಿರುಗೊಂಡು ಗೌರವಿಸಿದನು.

05008007a ಕಾರಯಾಮಾಸ ಪೂಜಾರ್ಥಂ ತಸ್ಯ ದುರ್ಯೋಧನಃ ಸಭಾಃ।
05008007c ರಮಣೀಯೇಷು ದೇಶೇಷು ರತ್ನಚಿತ್ರಾಃ ಸ್ವಲಂಕೃತಾಃ।।

ಅವನನ್ನು ಪೂಜಿಸಲು ದುರ್ಯೋಧನನು ರಮಣೀಯ ಪ್ರದೇಶಗಳಲ್ಲಿ ರತ್ನ-ಚಿತ್ರಗಳಿಂದ ಸ್ವಲಂಕೃತ ಸಭೆಗಳನ್ನು ನಿರ್ಮಿಸಿದನು.

05008008a ಸ ತಾಃ ಸಭಾಃ ಸಮಾಸಾದ್ಯ ಪೂಜ್ಯಮಾನೋ ಯಥಾಮರಃ।
05008008c ದುರ್ಯೋಧನಸ್ಯ ಸಚಿವೈರ್ದೇಶೇ ದೇಶೇ ಯಥಾರ್ಹತಃ।
05008008e ಆಜಗಾಮ ಸಭಾಮನ್ಯಾಂ ದೇವಾವಸಥವರ್ಚಸಂ।।

ದೇಶ ದೇಶಗಳಲ್ಲಿ ಆ ಸಭೆಗಳಿಗೆ ಹೋಗಿ ಅಮರನಂತೆ ದುರ್ಯೋಧನನ ಸಚಿವರಿಂದ ಯಥಾರ್ಹನಾಗಿ ಪೂಜೆಗೊಂಡು, ದೇವತೆಗಳ ವಾಸದಂತೆ ಶೋಭಿಸುವ ಇನ್ನೊಂದು ಸಭೆಗೆ ಬಂದನು.

05008009a ಸ ತತ್ರ ವಿಷಯೈರ್ಯುಕ್ತಃ ಕಲ್ಯಾಣೈರತಿಮಾನುಷೈಃ।
05008009c ಮೇನೇಽಭ್ಯಧಿಕಮಾತ್ಮಾನಮವಮೇನೇ ಪುರಂದರಂ।।

ಅಲ್ಲಿ ಯುಕ್ತ ವಿಷಯಗಳಿಂದ ಅತಿಮಾನುಷ ಸುಖಭೋಗಗಳಿಂದ ಪೂಜಿಸಲ್ಪಟ್ಟು ಅವನು ತಾನು ಪುರಂದರನಿಗಿಂತ ಅಧಿಕನೇನೋ ಎಂದು ಭಾವಿಸಿದನು.

05008010a ಪಪ್ರಚ್ಚ ಸ ತತಃ ಪ್ರೇಷ್ಯಾನ್ಪ್ರಹೃಷ್ಟಃ ಕ್ಷತ್ರಿಯರ್ಷಭಃ।
05008010c ಯುಧಿಷ್ಠಿರಸ್ಯ ಪುರುಷಾಃ ಕೇ ನು ಚಕ್ರುಃ ಸಭಾ ಇಮಾಃ।
05008010e ಆನೀಯಂತಾಂ ಸಭಾಕಾರಾಃ ಪ್ರದೇಯಾರ್ಹಾ ಹಿ ಮೇ ಮತಾಃ।।

ಆ ಕ್ಷತ್ರಿಯರ್ಷಭನು ಸಂತೋಷಗೊಂಡು ತನ್ನ ಸೇವಕರನ್ನು ಕೇಳಿದನು: “ಈ ಸಭೆಗಳನ್ನು ನಿರ್ಮಿಸಿದ ಯುಧಿಷ್ಠಿರನ ಜನರು ಎಲ್ಲಿದ್ದಾರೆ? ಈ ಸಭಾಕಾರರನ್ನು ನನ್ನೆದುರಿಗೆ ಕರೆದುಕೊಂಡು ಬನ್ನಿ.”

05008011a ಗೂಢೋ ದುರ್ಯೋಧನಸ್ತತ್ರ ದರ್ಶಯಾಮಾಸ ಮಾತುಲಂ।
05008011c ತಂ ದೃಷ್ಟ್ವಾ ಮದ್ರರಾಜಸ್ತು ಜ್ಞಾತ್ವಾ ಯತ್ನಂ ಚ ತಸ್ಯ ತಂ।
05008011e ಪರಿಷ್ವಜ್ಯಾಬ್ರವೀತ್ಪ್ರೀತ ಇಷ್ಟೋಽರ್ಥೋ ಗೃಹ್ಯತಾಮಿತಿ।।

ಆಗ ಅಡಗಿಕೊಂಡಿದ್ದ ದುರ್ಯೋಧನನು ಮಾವನಿಗೆ ಕಾಣಿಸಿಕೊಂಡನು. ಅವನನ್ನು ನೋಡಿ ಇದು ಅವನ ಪ್ರಯತ್ನವೆಂದು ತಿಳಿದ ಮದ್ರರಾಜನು ಅವನನ್ನು ಆಲಂಗಿಸಿ “ನಿನಗಿಷ್ಟವಾದುದನ್ನು ಕೇಳಿ ಪಡೆದುಕೋ!” ಎಂದು ಹೇಳಿದನು.

05008012 ದುರ್ಯೋಧನ ಉವಾಚ।
05008012a ಸತ್ಯವಾಗ್ಭವ ಕಲ್ಯಾಣ ವರೋ ವೈ ಮಮ ದೀಯತಾಂ।
05008012c ಸರ್ವಸೇನಾಪ್ರಣೇತಾ ಮೇ ಭವಾನ್ ಭವಿತುಮರ್ಹತಿ।।

ದುರ್ಯೋಧನನು ಹೇಳಿದನು: “ಕಲ್ಯಾಣ! ಸತ್ಯವಾಗ್ಮಿಯಾಗು. ನನಗೆ ವರವನ್ನು ನೀಡುವವನಾಗು. ನೀನು ನನ್ನ ಸರ್ವ ಸೇನೆಯ ನಾಯಕನಾಗಬೇಕು.””

05008013 ವೈಶಂಪಾಯನ ಉವಾಚ।
05008013a ಕೃತಮಿತ್ಯಬ್ರವೀಚ್ಚಲ್ಯಃ ಕಿಮನ್ಯತ್ಕ್ರಿಯತಾಮಿತಿ।
05008013c ಕೃತಮಿತ್ಯೇವ ಗಾಂಧಾರಿಃ ಪ್ರತ್ಯುವಾಚ ಪುನಃ ಪುನಃ।।

ವೈಶಂಪಾಯನನು ಹೇಳಿದನು: “ಹಾಗೆಯೇ ಆಗಲಿ! ಇನ್ನೇನು ಮಾಡಲಿಕ್ಕಾಗುತ್ತದೆ?” ಎಂದು ಶಲ್ಯನು ಹೇಳಲು ಗಾಂಧಾರಿಯ ಮಗನು “ಆಯಿತು” ಎಂದು ಪುನಃ ಪುನಃ ಉತ್ತರಿಸಿದನು.

05008014a ಸ ತಥಾ ಶಲ್ಯಮಾಮಂತ್ರ್ಯ ಪುನರಾಯಾತ್ಸ್ವಕಂ ಪುರಂ।
05008014c ಶಲ್ಯೋ ಜಗಾಮ ಕೌಂತೇಯಾನಾಖ್ಯಾತುಂ ಕರ್ಮ ತಸ್ಯ ತತ್।।

ಹೀಗೆ ಶಲ್ಯನನ್ನು ಆಮಂತ್ರಿಸಿ ಅವನು ತನ್ನ ಪುರಕ್ಕೆ ಹಿಂದಿರುಗಿದನು. ಶಲ್ಯನು ಅವನು ನಡೆಸಿದುದನ್ನು ಹೇಳಲು ಕೌಂತೇಯನಲ್ಲಿಗೆ ಹೋದನು.

05008015a ಉಪಪ್ಲವ್ಯಂ ಸ ಗತ್ವಾ ತು ಸ್ಕಂಧಾವಾರಂ ಪ್ರವಿಶ್ಯ ಚ।
05008015c ಪಾಂಡವಾನಥ ತಾನ್ಸರ್ವಾಂ ಶಲ್ಯಸ್ತತ್ರ ದದರ್ಶ ಹ।।

ಉಪಪ್ಲವ್ಯಕ್ಕೆ ಹೋಗಿ ಡೇರೆಯನ್ನು ಪ್ರವೇಶಿಸಿ ಅಲ್ಲಿ ಪಾಂಡವರೆಲ್ಲರನ್ನೂ ಶಲ್ಯನು ಕಂಡನು.

05008016a ಸಮೇತ್ಯ ತು ಮಹಾಬಾಹುಃ ಶಲ್ಯಃ ಪಾಂಡುಸುತೈಸ್ತದಾ।
05008016c ಪಾದ್ಯಮರ್ಘ್ಯಂ ಚ ಗಾಂ ಚೈವ ಪ್ರತ್ಯಗೃಹ್ಣಾದ್ಯಥಾವಿಧಿ।।

ಮಹಾಬಾಹು ಶಲ್ಯನು ಪಾಂಡುಸುತರನ್ನು ಸೇರಿ ಯಥಾವಿಧಿಯಾಗಿ ಪಾದ್ಯ, ಅರ್ಘ್ಯ ಮತ್ತು ಗೋವನ್ನು ಸ್ವೀಕರಿಸಿದನು.

05008017a ತತಃ ಕುಶಲಪೂರ್ವಂ ಸ ಮದ್ರರಾಜೋಽರಿಸೂದನಃ।
05008017c ಪ್ರೀತ್ಯಾ ಪರಮಯಾ ಯುಕ್ತಃ ಸಮಾಶ್ಲಿಷ್ಯ ಯುಧಿಷ್ಠಿರಂ।।
05008018a ತಥಾ ಭೀಮಾರ್ಜುನೌ ಹೃಷ್ಟೌ ಸ್ವಸ್ರೀಯೌ ಚ ಯಮಾವುಭೌ।

ಆಗ ಮೊದಲು ಅರಿಸೂದನ ಮದ್ರರಾಜನು ಕುಶಲವನ್ನು ಕೇಳಿ ಪರಮ ಪ್ರೀತಿಯಿಂದ ಯುಧಿಷ್ಠಿರನನ್ನು, ಭೀಮಾರ್ಜುನರನ್ನೂ ಮತ್ತು ಹಾಗೆಯೇ ಹೃಷ್ಟರಾಗಿದ್ದ ಯಮಳರಿಬ್ಬರನ್ನೂ ಬಿಗಿದಪ್ಪಿದನು.

05008018c ಆಸನೇ ಚೋಪವಿಷ್ಟಸ್ತು ಶಲ್ಯಃ ಪಾರ್ಥಮುವಾಚ ಹ।।
05008019a ಕುಶಲಂ ರಾಜಶಾರ್ದೂಲ ಕಚ್ಚಿತ್ತೇ ಕುರುನಂದನ।

ಆಸನದಲ್ಲಿ ಕುಳಿತುಕೊಂಡ ಶಲ್ಯನು ಪಾರ್ಥನಿಗೆ ಹೇಳಿದನು: “ರಾಜಶಾರ್ದೂಲ! ಕುರುನಂದನ! ನೀನು ಕುಶಲವಾಗಿದ್ದೀಯೆ ತಾನೇ?

05008019c ಅರಣ್ಯವಾಸಾದ್ದಿಷ್ಟ್ಯಾಸಿ ವಿಮುಕ್ತೋ ಜಯತಾಂ ವರ।।
05008020a ಸುದುಷ್ಕರಂ ಕೃತಂ ರಾಜನ್ನಿರ್ಜನೇ ವಸತಾ ವನೇ।
05008020c ಭ್ರಾತೃಭಿಃ ಸಹ ರಾಜೇಂದ್ರ ಕೃಷ್ಣಯಾ ಚಾನಯಾ ಸಹ।।

ಗೆಲ್ಲುವವರಲ್ಲಿ ಶ್ರೇಷ್ಠ! ರಾಜನ್! ರಾಜೇಂದ್ರ! ಸುದುಷ್ಕರ ನಿರ್ಜನ ವನವಾಸವನ್ನು ನಿನ್ನ ಸಹೋದರರೊಂದಿಗೆ ಮತ್ತು ಈ ಗೌರವಾನ್ವಿತೆ ಕೃಷ್ಣೆಯೊಂದಿಗೆ ಒಳ್ಳೆಯದಾಗಿ ಕಳೆದೆ ತಾನೇ?

05008021a ಅಜ್ಞಾತವಾಸಂ ಘೋರಂ ಚ ವಸತಾ ದುಷ್ಕರಂ ಕೃತಂ।
05008021c ದುಃಖಮೇವ ಕುತಃ ಸೌಖ್ಯಂ ರಾಜ್ಯಭ್ರಷ್ಟಸ್ಯ ಭಾರತ।।

ಭಾರತ! ಘೋರ ಮತ್ತು ದುಷ್ಕೃತ ಅಜ್ಞಾತವಾಸವನ್ನೂ ನೀನು ಮಾಡಿ ಮುಗಿಸಿದ್ದೀಯೆ. ರಾಜ್ಯಭ್ರಷ್ಟನಾದವನಿಗೆ ದುಃಖ ಮಾತ್ರವಿದೆ. ಸುಖವು ಎಲ್ಲಿಯದು?

05008022a ದುಃಖಸ್ಯೈತಸ್ಯ ಮಹತೋ ಧಾರ್ತರಾಷ್ಟ್ರಕೃತಸ್ಯ ವೈ।
05008022c ಅವಾಪ್ಸ್ಯಸಿ ಸುಖಂ ರಾಜನ್ ಹತ್ವಾ ಶತ್ರೂನ್ಪರಂತಪ।।
05008023a ವಿದಿತಂ ತೇ ಮಹಾರಾಜ ಲೋಕತತ್ತ್ವಂ ನರಾಧಿಪ।

ಪರಂತಪ! ರಾಜನ್! ಧಾರ್ತರಾಷ್ಟ್ರನಿಂದ ತಂದೊಡ್ಡಿದ ಈ ಮಹಾ ದುಃಖದ ಪ್ರಮಾಣದಷ್ಟೇ ಸುಖವನ್ನು ನಿನ್ನ ಶತ್ರುಗಳನ್ನು ಸಂಹರಿಸಿ ಪಡೆಯುತ್ತೀಯೆ. ಮಹಾರಾಜ! ನರಾಧಿಪ! ಲೋಕತತ್ವವು ನಿನಗೆ ತಿಳಿದೇ ಇದೆ.

05008023c ತಸ್ಮಾಲ್ಲೋಭಕೃತಂ ಕಿಂ ಚಿತ್ತವ ತಾತ ನ ವಿದ್ಯತೇ।।
05008024a ತತೋಽಸ್ಯಾಕಥಯದ್ರಾಜಾ ದುರ್ಯೋಧನಸಮಾಗಮಂ।
05008024c ತಚ್ಚ ಶುಶ್ರೂಷಿತಂ ಸರ್ವಂ ವರದಾನಂ ಚ ಭಾರತ।

ಆದುದರಿಂದ ಮಗೂ! ನಿನ್ನ ಚಿತ್ತವು ಲೋಭದಿಂದ ಮಾಡುವುದನ್ನು ತಿಳಿದಿಲ್ಲ.” ಭಾರತ! ಅನಂತರ ರಾಜಾ ದುರ್ಯೋಧನನೊಡನೆ ಭೇಟಿಯಾದುದನ್ನು ಹೇಳಿ ತಾನು ಕೊಟ್ಟ ಭರವಸೆ ಮತ್ತು ಅವನು ಕೇಳಿದ ವರದಾನಗಳ ಕುರಿತು ವಿವರವಾಗಿ ಎಲ್ಲವನ್ನೂ ಹೇಳಿದನು.

05008025 ಯುಧಿಷ್ಠಿರ ಉವಾಚ।
05008025a ಸುಕೃತಂ ತೇ ಕೃತಂ ರಾಜನ್ಪ್ರಹೃಷ್ಟೇನಾಂತರಾತ್ಮನಾ।
05008025c ದುರ್ಯೋಧನಸ್ಯ ಯದ್ವೀರ ತ್ವಯಾ ವಾಚಾ ಪ್ರತಿಶ್ರುತಂ।
05008025e ಏಕಂ ತ್ವಿಚ್ಚಾಮಿ ಭದ್ರಂ ತೇ ಕ್ರಿಯಮಾಣಂ ಮಹೀಪತೇ।।

ಯುಧಿಷ್ಠಿರನು ಹೇಳಿದನು: “ರಾಜನ್! ನೀನು ಒಳ್ಳೆಯದನ್ನೇ ಮಾಡಿದೆ. ವೀರ! ಅಂತರಾತ್ಮದಲ್ಲಿ ಸಂತೋಷಗೊಂಡು ನೀನು ದುರ್ಯೋಧನನಿಗೆ ನಿನ್ನ ಮಾತನ್ನು ಕೇಳಿಸಿದೆ. ಮಹೀಪತೇ! ನಿನಗೆ ಮಂಗಳವಾಗಲಿ. ನಿನ್ನಿಂದ ಒಂದೇ ನಡೆಯಬೇಕು ಎಂದು ನಾನು ಬಯಸುತ್ತೇನೆ.

05008026a ಭವಾನಿಹ ಮಹಾರಾಜ ವಾಸುದೇವಸಮೋ ಯುಧಿ।
05008026c ಕರ್ಣಾರ್ಜುನಾಭ್ಯಾಂ ಸಂಪ್ರಾಪ್ತೇ ದ್ವೈರಥೇ ರಾಜಸತ್ತಮ।
05008026e ಕರ್ಣಸ್ಯ ಭವತಾ ಕಾರ್ಯಂ ಸಾರಥ್ಯಂ ನಾತ್ರ ಸಂಶಯಃ।।

ಮಹಾರಾಜ! ಯುದ್ಧದಲ್ಲಿ ನೀನು ವಾಸುದೇವನ ಸಮನಾಗಿದ್ದೀಯೆ. ರಾಜಸತ್ತಮ! ಕರ್ಣಾರ್ಜುನರ ರಥಗಳ ದ್ವಂದ್ವಯುದ್ಧವು ಬಂದಾಗ ಕರ್ಣನ ಸಾರಥ್ಯವನ್ನು ನೀನು ಮಾಡಬೇಕಾಗಿ ಬರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

05008027a ತತ್ರ ಪಾಲ್ಯೋಽರ್ಜುನೋ ರಾಜನ್ಯದಿ ಮತ್ಪ್ರಿಯಮಿಚ್ಚಸಿ।
05008027c ತೇಜೋವಧಶ್ಚ ತೇ ಕಾರ್ಯಃ ಸೌತೇರಸ್ಮಜ್ಜಯಾವಹಃ।
05008027e ಅಕರ್ತವ್ಯಮಪಿ ಹ್ಯೇತತ್ಕರ್ತುಮರ್ಹಸಿ ಮಾತುಲ।।

ರಾಜನ್! ನನಗೆ ಒಳ್ಳೆಯದನ್ನು ಮಾಡಲು ಬಯಸಿದರೆ ನೀನು ಆಗ ಅರ್ಜುನನನ್ನು ಪಾಲಿಸಬೇಕು. ಸೌತಿಯ ತೇಜೋವಧೆಯನ್ನು ಮಾಡಿ ನಮಗೆ ಜಯವನ್ನು ಒದಗಿಸಬೇಕು. ಮಾವ! ಮಾಡಬಾರದುದ್ದಾದರೂ ಇದನ್ನು ನೀನು ಮಾಡಬೇಕು.”

05008028 ಶಲ್ಯ ಉವಾಚ।
05008028a ಶೃಣು ಪಾಂಡವ ಭದ್ರಂ ತೇ ಯದ್ಬ್ರವೀಷಿ ದುರಾತ್ಮನಃ।
05008028c ತೇಜೋವಧನಿಮಿತ್ತಂ ಮಾಂ ಸೂತಪುತ್ರಸ್ಯ ಸಮ್ಯುಗೇ।।

ಶಲ್ಯನು ಹೇಳಿದನು: “ಪಾಂಡವ! ನಿನಗೆ ಮಂಗಳವಾಗಲಿ! ಕೇಳು. ಯುದ್ಧದಲ್ಲಿ ದುರಾತ್ಮ ಸೂತಪುತ್ರನ ತೇಜೋವಧೆಗೆ ಕಾರಣನಾಗಬೇಕೆಂದು ಹೇಳಿದೆಯಲ್ಲ!

05008029a ಅಹಂ ತಸ್ಯ ಭವಿಷ್ಯಾಮಿ ಸಂಗ್ರಾಮೇ ಸಾರಥಿರ್ಧ್ರುವಂ।
05008029c ವಾಸುದೇವೇನ ಹಿ ಸಮಂ ನಿತ್ಯಂ ಮಾಂ ಸ ಹಿ ಮನ್ಯತೇ।।

ಸಂಗ್ರಾಮದಲ್ಲಿ ಖಂಡಿತವಾಗಿ ನಾನು ಅವನ ಸಾರಥಿಯಾಗುತ್ತೇನೆ. ಏಕೆಂದರೆ ಅವನು ನನ್ನನ್ನು ಯಾವಾಗಲೂ ವಾಸುದೇವನಿಗೆ ಸಮನೆಂದು ತಿಳಿದುಕೊಂಡಿದ್ದಾನೆ.

05008030a ತಸ್ಯಾಹಂ ಕುರುಶಾರ್ದೂಲ ಪ್ರತೀಪಮಹಿತಂ ವಚಃ।
05008030c ಧ್ರುವಂ ಸಂಕಥಯಿಷ್ಯಾಮಿ ಯೋದ್ಧುಕಾಮಸ್ಯ ಸಂಯುಗೇ।।
05008031a ಯಥಾ ಸ ಹೃತದರ್ಪಶ್ಚ ಹೃತತೇಜಾಶ್ಚ ಪಾಂಡವ।
05008031c ಭವಿಷ್ಯತಿ ಸುಖಂ ಹಂತುಂ ಸತ್ಯಮೇತದ್ಬ್ರವೀಮಿ ತೇ।।

ಕುರುಶಾರ್ದೂಲ! ಪಾಂಡವ! ರಣದಲ್ಲಿ ಹೋರಾಡಲು ಬಯಸಿದಾಗ ಖಂಡಿತವಾಗಿ ನಾನು ಅವನಿಗೆ ಅವನ ದರ್ಪವನ್ನು ಅಪಹರಿಸುವ ಮತ್ತು ತೇಜಸ್ಸನ್ನು ಅಪಹರಿಸುವ ಅಹಿತ ಮಾತುಗಳನ್ನಾಡುತ್ತೇನೆ. ಇದರಿಂದ ಸುಲಭವಾಗಿ ಅವನನ್ನು ಕೊಲ್ಲಬಹುದು. ನಿನಗೆ ಸತ್ಯವನ್ನು ಹೇಳುತ್ತಿದ್ದೇನೆ.

05008032a ಏವಮೇತತ್ಕರಿಷ್ಯಾಮಿ ಯಥಾ ತಾತ ತ್ವಮಾತ್ಥ ಮಾಂ।
05008032c ಯಚ್ಚಾನ್ಯದಪಿ ಶಕ್ಷ್ಯಾಮಿ ತತ್ಕರಿಷ್ಯಾಮಿ ತೇ ಪ್ರಿಯಂ।।

ಮಗೂ! ನೀನು ನನ್ನನ್ನು ಕೇಳಿದಂತೆಯೇ ನಾನು ಮಾಡುತ್ತೇನೆ. ನಿನಗೆ ಒಳ್ಳೆಯದಾಗುವಂತೆ ಇನ್ನೇನಾದರೂ ಇದ್ದರೆ ಅದನ್ನೂ ಮಾಡುತ್ತೇನೆ.

05008033a ಯಚ್ಚ ದುಃಖಂ ತ್ವಯಾ ಪ್ರಾಪ್ತಂ ದ್ಯೂತೇ ವೈ ಕೃಷ್ಣಯಾ ಸಹ।
05008033c ಪರುಷಾಣಿ ಚ ವಾಕ್ಯಾನಿ ಸೂತಪುತ್ರಕೃತಾನಿ ವೈ।।
05008034a ಜಟಾಸುರಾತ್ಪರಿಕ್ಲೇಶಃ ಕೀಚಕಾಚ್ಚ ಮಹಾದ್ಯುತೇ।
05008034c ದ್ರೌಪದ್ಯಾಧಿಗತಂ ಸರ್ವಂ ದಮಯಂತ್ಯಾ ಯಥಾಶುಭಂ।।
05008035a ಸರ್ವಂ ದುಃಖಮಿದಂ ವೀರ ಸುಖೋದರ್ಕಂ ಭವಿಷ್ಯತಿ।

ವೀರ! ಕೃಷ್ಣೆಯೊಂದಿಗೆ ದ್ಯೂತದಲ್ಲಿ ಏನೆಲ್ಲ ದುಃಖವನ್ನು ನೀನು ಪಡೆದೆಯೋ, ಸೂತಪುತ್ರನಾಡಿದ ಪೌರುಷದ ಮಾತುಗಳು, ಜಟಾಸುರನಿಂದ ಮತ್ತು ಮಹಾದ್ಯುತಿ ಕೀಚಕರಿಂದ ಕಷ್ಟ, ದಮಯಂತಿಯಂತೆ ದ್ರೌಪದಿಯು ಅನುಭವಿಸಿದ ಎಲ್ಲ ಕಷ್ಟಗಳೂ, ಈ ಸರ್ವ ದುಃಖಗಳೂ ಸುಖದಲ್ಲಿ ಕೊನೆಗೊಳ್ಳುತ್ತವೆ.

05008035c ನಾತ್ರ ಮನ್ಯುಸ್ತ್ವಯಾ ಕಾರ್ಯೋ ವಿಧಿರ್ಹಿ ಬಲವತ್ತರಃ।।
05008036a ದುಃಖಾನಿ ಹಿ ಮಹಾತ್ಮಾನಃ ಪ್ರಾಪ್ನುವಂತಿ ಯುಧಿಷ್ಠಿರ।
05008036c ದೇವೈರಪಿ ಹಿ ದುಃಖಾನಿ ಪ್ರಾಪ್ತಾನಿ ಜಗತೀಪತೇ।।

ಯುಧಿಷ್ಠಿರ! ಇದರಲ್ಲಿ ನೀನು ದುಃಖಿಸುವುದು ಏನೂ ಇಲ್ಲ. ವಿಧಿಯೇ ಬಲವತ್ತರ. ಮಹಾತ್ಮರಿಗೆ ದುಃಖಗಳು ಬರುತ್ತವೆ. ಜಗತೀಪತೇ! ದೇವತೆಗಳು ಕೂಡ ದುಃಖವನ್ನು ಹೊಂದುತ್ತಾರೆ.

05008037a ಇಂದ್ರೇಣ ಶ್ರೂಯತೇ ರಾಜನ್ಸಭಾರ್ಯೇಣ ಮಹಾತ್ಮನಾ।
05008037c ಅನುಭೂತಂ ಮಹದ್ದುಃಖಂ ದೇವರಾಜೇನ ಭಾರತ।।

ಭಾರತ! ರಾಜನ್! ಮಹಾತ್ಮ ದೇವರಾಜ ಇಂದ್ರನು ಭಾರ್ಯೆಯೊಡನೆ ಮಹಾ ದುಃಖವನ್ನು ಅನುಭವಿಸಿದ್ದನೆಂದು ಕೇಳುತ್ತೇವೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಉದ್ಯೋಗ ಪರ್ವಣಿ ಶಲ್ಯವಾಕ್ಯೇ ಅಷ್ಟಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಉದ್ಯೋಗ ಪರ್ವದಲ್ಲಿ ಶಲ್ಯವಾಕ್ಯ ಎನ್ನುವ ಎಂಟನೆಯ ಅಧ್ಯಾಯವು।