005 ಪುರೋಹಿತಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಉದ್ಯೋಗ ಪರ್ವ

ಅಧ್ಯಾಯ 5

ಸಾರ

ಆಗ ಕೃಷ್ಣನು “ಅವರು ಪಾಂಡವರೊಂದಿಗೆ ವರ್ತಮಾನದಲ್ಲಿ ಹೇಗೆ ನಡೆದುಕೊಂಡರೂ ಕುರು ಮತ್ತು ಪಾಂಡವರೊಂದಿಗೆ ನಮ್ಮ ಸಂಬಂಧವು ಸಮನಾದುದು” ಮತ್ತು “ಒಂದುವೇಳೆ ಕುರುಗಳು ನ್ಯಾಯದಿಂದ ಶಾಂತಿಗಾಗಿ ನಡೆದುಕೊಂಡರೆ ಒಳ್ಳೆಯದು, ಇಲ್ಲವಾದರೆ ದುರ್ಯೋಧನನನು ಅಮಾತ್ಯ-ಬಾಂಧವರೊಡನೆ ಕೃದ್ಧ ಗಾಂಡೀವಧನುಸ್ಸಿನಿಂದ ಕೊನೆಯನ್ನು ಕಾಣುತ್ತಾನೆ” ಎಂದು ಹೇಳಿ ದ್ವಾರಕೆಗೆ ತೆರಳಿದುದು (1-11). ಉಳಿದ ರಾಜರೂ ಹಿಂದಿರುಗಿದುದು (12-18).

05005001 ವಾಸುದೇವ ಉವಾಚ।
05005001a ಉಪಪನ್ನಮಿದಂ ವಾಕ್ಯಂ ಸೋಮಕಾನಾಂ ಧುರಂಧರೇ।
05005001c ಅರ್ಥಸಿದ್ಧಿಕರಂ ರಾಜ್ಞಾಃ ಪಾಂಡವಸ್ಯ ಮಹೌಜಸಃ।।

ವಾಸುದೇವನು ಹೇಳಿದನು: “ಸೋಮಕರ ಧುರಂಧರ! ರಾಜರಿಗೆ ತಕ್ಕುದಾದ ಮಾತಿದು. ಮಹೌಜಸ ಪಾಂಡವನ ಅರ್ಥಸಿದ್ಧಿಕರವಾದುದು.

05005002a ಏತಚ್ಚ ಪೂರ್ವಕಾರ್ಯಂ ನಃ ಸುನೀತಮಭಿಕಾಂಕ್ಷತಾಂ।
05005002c ಅನ್ಯಥಾ ಹ್ಯಾಚರನ್ಕರ್ಮ ಪುರುಷಃ ಸ್ಯಾತ್ಸುಬಾಲಿಶಃ।।

ಸುನೀತಮಾರ್ಗವನ್ನು ಬಯಸುವವರಿಗೆ ಇದೇ ಮೊದಲು ಮಾಡಬೇಕಾದ ಕಾರ್ಯ. ಅನ್ಯಥಾ ನಡೆದುಕೊಳ್ಳುವ ಮತ್ತು ಮಾಡುವ ಪುರುಷನು ಬಾಲಿಶನೇ ಸರಿ.

05005003a ಕಿಂ ತು ಸಂಬಂಧಕಂ ತುಲ್ಯಮಸ್ಮಾಕಂ ಕುರುಪಾಂಡುಷು।
05005003c ಯಥೇಷ್ಟಂ ವರ್ತಮಾನೇಷು ಪಾಂಡವೇಷು ಚ ತೇಷು ಚ।।

ಅವರು ಪಾಂಡವರೊಂದಿಗೆ ವರ್ತಮಾನದಲ್ಲಿ ಹೇಗೆ ನಡೆದುಕೊಂಡರೂ ಕುರು ಮತ್ತು ಪಾಂಡವರೊಂದಿಗೆ ನಮ್ಮ ಸಂಬಂಧವು ಸಮನಾದುದು.

05005004a ತೇ ವಿವಾಹಾರ್ಥಮಾನೀತಾ ವಯಂ ಸರ್ವೇ ಯಥಾ ಭವಾನ್।
05005004c ಕೃತೇ ವಿವಾಹೇ ಮುದಿತಾ ಗಮಿಷ್ಯಾಮೋ ಗೃಹಾನ್ಪ್ರತಿ।।

ನಿನ್ನಂತೆ ನಾವೆಲ್ಲರೂ ಇಲ್ಲಿಗೆ ವಿವಾಹಾರ್ಥವಾಗಿ ಆಹ್ವಾನಿತರಾಗಿ ಬಂದಿದ್ದೇವೆ. ವಿವಾಹವು ಮುಗಿದು ಸಂತೋಷಗೊಂಡು ಮನೆಗಳಿಗೆ ಹೋಗೋಣ.

05005005a ಭವಾನ್ವೃದ್ಧತಮೋ ರಾಜ್ಞಂ ವಯಸಾ ಚ ಶ್ರುತೇನ ಚ।
05005005c ಶಿಷ್ಯವತ್ತೇ ವಯಂ ಸರ್ವೇ ಭವಾಮೇಹ ನ ಸಂಶಯಃ।।

ನೀನಾದರೋ ವಯಸ್ಸಿನಲ್ಲಿ ಮತ್ತು ತಿಳುವಳಿಕೆಯಲ್ಲಿ ರಾಜರಲ್ಲೆಲ್ಲಾ ಹಿರಿಯವನು. ಆದುದರಿಂದ ಇಲ್ಲಿರುವ ನಾವೆಲ್ಲರೂ ನಿನ್ನ ಶಿಷ್ಯರಂತೆ ಎನ್ನುವುದರಲ್ಲಿ ಸಂಶಯವಿಲ್ಲ.

05005006a ಭವಂತಂ ಧೃತರಾಷ್ಟ್ರಶ್ಚ ಸತತಂ ಬಹು ಮನ್ಯತೇ।
05005006c ಆಚಾರ್ಯಯೋಃ ಸಖಾ ಚಾಸಿ ದ್ರೋಣಸ್ಯ ಚ ಕೃಪಸ್ಯ ಚ।।

ಧೃತರಾಷ್ಟ್ರನು ನಿನ್ನನ್ನು ಸತತವಾಗಿ ಬಹಳಷ್ಟು ಗೌರವಿಸುತ್ತಾನೆ. ಆಚಾರ್ಯ ದ್ರೋಣ ಮತ್ತು ಕೃಪರ ಗೆಳೆಯನೂ ಆಗಿರುವೆ.

05005007a ಸ ಭವಾನ್ಪ್ರೇಷಯತ್ವದ್ಯ ಪಾಂಡವಾರ್ಥಕರಂ ವಚಃ।
05005007c ಸರ್ವೇಷಾಂ ನಿಶ್ಚಿತಂ ತನ್ನಃ ಪ್ರೇಷಯಿಷ್ಯತಿ ಯದ್ಭವಾನ್।।

ಆದುದರಿಂದ ಇಂದು ಪಾಂಡವಾರ್ಥವಾಗಿ ಸಂದೇಶವನ್ನು ಅವರಿಗೆ ಕಳುಹಿಸಬೇಕೆಂದು ನಾನು ನಿನ್ನಲ್ಲಿ ಕೇಳಿಕೊಳ್ಳುತ್ತೇನೆ. ನೀನು ಸಂದೇಶವನ್ನು ಕಳುಹಿಸಬೇಕೆಂದು ನಮ್ಮೆಲ್ಲರ ನಿರ್ಧಾರ.

05005008a ಯದಿ ತಾವಚ್ಚಮಂ ಕುರ್ಯಾನ್ನ್ಯಾಯೇನ ಕುರುಪುಂಗವಃ।
05005008c ನ ಭವೇತ್ಕುರುಪಾಂಡೂನಾಂ ಸೌಭ್ರಾತ್ರೇಣ ಮಹಾನ್ ಕ್ಷಯಃ।।

ಒಂದುವೇಳೆ ಕುರುಪುಂಗವರು ನ್ಯಾಯದಿಂದ ಶಾಂತಿಗಾಗಿ ನಡೆದುಕೊಂಡರೆ ಕುರು-ಪಾಂಡವರ ನಡುವಿನ ಸೌಭ್ರಾತೃತ್ವವು ಮಹಾ ಕ್ಷಯವನ್ನು ಹೊಂದುವುದಿಲ್ಲ.

05005009a ಅಥ ದರ್ಪಾನ್ವಿತೋ ಮೋಹಾನ್ನ ಕುರ್ಯಾದ್ಧೃತರಾಷ್ಟ್ರಜಃ।
05005009c ಅನ್ಯೇಷಾಂ ಪ್ರೇಷಯಿತ್ವಾ ಚ ಪಶ್ಚಾದಸ್ಮಾನ್ಸಮಾಹ್ವಯೇಃ।।

05005010a ತತೋ ದುರ್ಯೋಧನೋ ಮಂದಃ ಸಹಾಮಾತ್ಯಃ ಸಬಾಂಧವಃ।
05005010c ನಿಷ್ಠಾಮಾಪತ್ಸ್ಯತೇ ಮೂಢಃ ಕ್ರುದ್ಧೇ ಗಾಂಡೀವಧನ್ವನಿ।।

ಇಲ್ಲವಾದರೆ ಆ ಮಂದಬುದ್ಧಿ ಮೂಢ ದುರ್ಯೋಧನನನು ಅಮಾತ್ಯ-ಬಾಂಧವರೊಡನೆ ಕೃದ್ಧ ಗಾಂಡೀವಧನುಸ್ಸಿನಿಂದ ಕೊನೆಯನ್ನು ಕಾಣುತ್ತಾನೆ.””

05005011 ವೈಶಂಪಾಯನ ಉವಾಚ।
05005011a ತತಃ ಸತ್ಕೃತ್ಯ ವಾರ್ಷ್ಣೇಯಂ ವಿರಾಟಃ ಪೃಥಿವೀಪತಿಃ।
05005011c ಗೃಹಾನ್ಪ್ರಸ್ಥಾಪಯಾಮಾಸ ಸಗಣಂ ಸಹಬಾಂಧವಂ।।

ವೈಶಂಪಾಯನನು ಹೇಳಿದನು: “ಅನಂತರ ರಾಜ ವಿರಾಟನು ವಾರ್ಷ್ಣೇಯನನ್ನು ಸತ್ಕರಿಸಿ ಅವನ ಗಣ ಬಾಂಧವರೊಡನೆ ಮನೆಗಳಿಗೆ ಕಳುಹಿಸಿಕೊಟ್ಟನು.

05005012a ದ್ವಾರಕಾಂ ತು ಗತೇ ಕೃಷ್ಣೇ ಯುಧಿಷ್ಠಿರಪುರೋಗಮಾಃ।
05005012c ಚಕ್ರುಃ ಸಾಂಗ್ರಾಮಿಕಂ ಸರ್ವಂ ವಿರಾಟಶ್ಚ ಮಹೀಪತಿಃ।।

ಕೃಷ್ಣನು ದ್ವಾರಕೆಗೆ ಹೋದ ನಂತರ ಯುಧಿಷ್ಠಿರನು ತನ್ನ ಅನುಯಾಯಿಗಳೊಂದಿಗೆ ಮತ್ತು ರಾಜ ವಿರಾಟನೊಂದಿಗೆ ಯುದ್ಧದ ಎಲ್ಲ ತಯಾರಿಗಳನ್ನೂ ನಡೆಸಿದನು.

05005013a ತತಃ ಸಂಪ್ರೇಷಯಾಮಾಸ ವಿರಾಟಃ ಸಹ ಬಾಂಧವೈಃ।
05005013c ಸರ್ವೇಷಾಂ ಭೂಮಿಪಾಲಾನಾಂ ದ್ರುಪದಶ್ಚ ಮಹೀಪತಿಃ।।

ಅನಂತರ ವಿರಾಟನು ಎಲ್ಲ ಭೂಮಿಪಾಲರನ್ನೂ ಮಹೀಪತಿ ದ್ರುಪದನನ್ನೂ ಬಾಂಧವರೊಂದಿಗೆ ಕಳುಹಿಸಿಕೊಟ್ಟನು.

05005014a ವಚನಾತ್ಕುರುಸಿಂಹಾನಾಂ ಮತ್ಸ್ಯಪಾಂಚಾಲಯೋಶ್ಚ ತೇ।
05005014c ಸಮಾಜಗ್ಮುರ್ಮಹೀಪಾಲಾಃ ಸಂಪ್ರಹೃಷ್ಟಾ ಮಹಾಬಲಾಃ।।

ಕುರುಸಿಂಹರ ಮತ್ತು ಮತ್ಸ್ಯ-ಪಾಂಚಾಲರ ಮಾತಿನಂತೆ ಸಂತೋಷಗೊಂಡು ಮಹಾಬಲ ಮಹೀಪಾಲರು ಬಂದು ಸೇರಿದರು.

05005015a ತಚ್ಚ್ರುತ್ವಾ ಪಾಂಡುಪುತ್ರಾಣಾಂ ಸಮಾಗಚ್ಚನ್ಮಹದ್ಬಲಂ।
05005015c ಧೃತರಾಷ್ಟ್ರಸುತಶ್ಚಾಪಿ ಸಮಾನಿನ್ಯೇ ಮಹೀಪತೀನ್।।

ಪಾಂಡುಪುತ್ರರು ಮಹಾಬಲವನ್ನು ಒಟ್ಟುಗೂಡಿಸಿದ್ದಾರೆ ಎಂದು ಕೇಳಿದ ಧೃತರಾಷ್ಟ್ರಪುತ್ರನೂ ಕೂಡ ಮಹೀಪತಿಗಳನ್ನು ಒಟ್ಟುಗೂಡಿಸಿದನು.

05005016a ಸಮಾಕುಲಾ ಮಹೀ ರಾಜನ್ಕುರುಪಾಂಡವಕಾರಣಾತ್।
05005016c ತದಾ ಸಮಭವತ್ಕೃತ್ಸ್ನಾ ಸಂಪ್ರಯಾಣೇ ಮಹೀಕ್ಷಿತಾಂ।।

ರಾಜನ್! ಆಗ ಕುರು-ಪಾಂಡವರ ಕಾರಣದಿಂದ ಪ್ರಯಾಣಿಸುತ್ತಿದ್ದ ಮಹೀಕ್ಷಿತರಿಂದ ಇಡೀ ಭೂಮಿಯು ತುಂಬಿಹೋಯಿತು.

05005017a ಬಲಾನಿ ತೇಷಾಂ ವೀರಾಣಾಮಾಗಚ್ಚಂತಿ ತತಸ್ತತಃ।
05005017c ಚಾಲಯಂತೀವ ಗಾಂ ದೇವೀಂ ಸಪರ್ವತವನಾಮಿಮಾಂ।।

ಎಲ್ಲೆಡೆಯಿಂದ ಬರುತ್ತಿರುವ ಆ ವೀರರ ನಡುಗೆಯಿಂದ ಪರ್ವತ ವನಗಳಿಂದ ಕೂಡಿದ ಇಡೀ ಭೂಮಿದೇವಿಯು ನಡುಗುತ್ತಿರುವಂತೆ ತೋರಿತು.

05005018a ತತಃ ಪ್ರಜ್ಞಾವಯೋವೃದ್ಧಂ ಪಾಂಚಾಲ್ಯಃ ಸ್ವಪುರೋಹಿತಂ।
05005018c ಕುರುಭ್ಯಃ ಪ್ರೇಷಯಾಮಾಸ ಯುಧಿಷ್ಠಿರಮತೇ ತದಾ।।

ಅನಂತರ ಯುಧಿಷ್ಠಿರನ ಮತದಂತೆ ಪಾಂಚಲನು ಪ್ರಜ್ಞಾವಂತನೂ ವಯೋವೃದ್ಧನೂ ಆದ ತನ್ನ ಪುರೋಹಿತನನ್ನು ಕುರುಗಳಲ್ಲಿಗೆ ಕಳುಹಿಸಿದನು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಉದ್ಯೋಗ ಪರ್ವಣಿ ಪುರೋಹಿತಯಾನೇ ಪಂಚಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಉದ್ಯೋಗ ಪರ್ವದಲ್ಲಿ ಪುರೋಹಿತಯಾನ ಎನ್ನುವ ಐದನೆಯ ಅಧ್ಯಾಯವು।