001 ಕೃಷ್ಣವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಉದ್ಯೋಗ ಪರ್ವ

ಅಧ್ಯಾಯ 1

ಸಾರ

ವಿವಾಹದ ನಂತರ ವಿರಾಟನ ಸಭೆಯಲ್ಲಿ ಪಾಂಡವರು, ವೃಷ್ಣಿಗಳು, ಪಾಂಚಾಲರು ಮತ್ತು ವಿರಾಟರು ಆಸೀನರಾದುದು (1-9). ಒಪ್ಪಂದದಂತೆ ಪಾಂಡವರು ವನವಾಸ-ಅಜ್ಞಾತವಾಸಗಳನ್ನು ಮುಗಿಸಿದ್ದಾರೆಂದೂ, ಅವರ ರಾಜ್ಯವು ಅವರಿಗೆ ದೊರೆಯಬೇಕೆಂದೂ, ಒಂದುವೇಳೆ ದುರ್ಯೋಧನನು ಅವರಿಗೆ ರಾಜ್ಯವನ್ನು ಹಿಂದಿರುಗಿಸದೇ ಇದ್ದರೆ ಈಗ ಪಾಂಡವರಿಗೆ ಸಹಾಯಕರಿದ್ದಾರೆಂದೂ, ಆದರೆ ನಿರ್ಧರಿಸುವುದರ ಮೊದಲು ಕೌರವರ ವಿಚಾರಗಳೇನೆಂದು ತಿಳಿದುಕೊಳ್ಳಲು ಅವರಲ್ಲಿಗೆ ಸಮರ್ಥ ದೂತನನ್ನು ಕಳುಹಿಸಬೇಕೆಂದು ಕೃಷ್ಣನು ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದುದು (10-25).

05001001 ವೈಶಂಪಾಯನ ಉವಾಚ 05001001a ಕೃತ್ವಾ ವಿವಾಹಂ ತು ಕುರುಪ್ರವೀರಾಸ್। ತದಾಭಿಮನ್ಯೋರ್ಮುದಿತಸ್ವಪಕ್ಷಾಃ।
05001001c ವಿಶ್ರಮ್ಯ ಚತ್ವಾರ್ಯುಷಸಃ ಪ್ರತೀತಾಃ। ಸಭಾಂ ವಿರಾಟಸ್ಯ ತತೋಽಭಿಜಗ್ಮುಃ।।

ವೈಶಂಪಾಯನನು ಹೇಳಿದನು: “ಅಭಿಮನ್ಯುವಿನ ವಿವಾಹವನ್ನು ಪೂರೈಸಿ ಆ ಕುರುಪ್ರವೀರರು ತಮ್ಮ ಪಕ್ಷದವರೊಂದಿಗೆ ನಾಲ್ಕು ರಾತ್ರಿಗಳನ್ನು ಸಂತೋಷದಿಂದ ಕಳೆದು ಮಾರನೆಯ ದಿನ ವಿರಾಟನ ಸಭೆಯನ್ನು ಪ್ರವೇಶಿಸಿದರು.

05001002a ಸಭಾ ತು ಸಾ ಮತ್ಸ್ಯಪತೇಃ ಸಮೃದ್ಧಾ। ಮಣಿಪ್ರವೇಕೋತ್ತಮರತ್ನಚಿತ್ರಾ।
05001002c ನ್ಯಸ್ತಾಸನಾ ಮಾಲ್ಯವತೀ ಸುಗಂಧಾ। ತಾಮಭ್ಯಯುಸ್ತೇ ನರರಾಜವರ್ಯಾಃ।।

ಆ ಮತ್ಸ್ಯಪತಿಯ ಸಭೆಯು ಮಣಿಗಳಿಂದ ತುಂಬಿದ್ದು ಉತ್ತಮ ರತ್ನಗಳಿಂದಲೂ ಬಣ್ಣಬಣ್ಣದ ಮಾಲೆಗಳಿಂದ ಸುಗಂಧಿತ ಆಸನಗಳಿಂದಲೂ ಶೋಭಿಸುತ್ತಿತ್ತು. ಅಲ್ಲಿಗೆ ನರವರ್ಯರೆಲ್ಲರೂ ಆಗಮಿಸಿದರು.

05001003a ಅಥಾಸನಾನ್ಯಾವಿಶತಾಂ ಪುರಸ್ತಾದ್। ಉಭೌ ವಿರಾಟದ್ರುಪದೌ ನರೇಂದ್ರೌ।
05001003c ವೃದ್ಧಶ್ಚ ಮಾನ್ಯಃ ಪೃಥಿವೀಪತೀನಾಂ। ಪಿತಾಮಹೋ ರಾಮಜನಾರ್ದನಾಭ್ಯಾಂ।।

ಎದುರಿಗೆ ಆಸನಗಳಲ್ಲಿ ಪೃಥಿವೀಪತಿಗಳಲ್ಲಿಯೇ ಮಾನ್ಯರಾದ ವೃದ್ಧ ವಿರಾಟ-ದ್ರುಪದ ರಾಜರೀರ್ವರು, ಮತ್ತು ತಂದೆಯೊಂದಿಗೆ ಬಲರಾಮ ಜನಾರ್ದನರಿಬ್ಬರೂ ಕುಳಿತಿದ್ದರು.

05001004a ಪಾಂಚಾಲರಾಜಸ್ಯ ಸಮೀಪತಸ್ತು। ಶಿನಿಪ್ರವೀರಃ ಸಹರೌಹಿಣೇಯಃ।
05001004c ಮತ್ಸ್ಯಸ್ಯ ರಾಜ್ಞಾಸ್ತು ಸುಸಮ್ನಿಕೃಷ್ಟೌ। ಜನಾರ್ದನಶ್ಚೈವ ಯುಧಿಷ್ಠಿರಶ್ಚ।।
05001005a ಸುತಾಶ್ಚ ಸರ್ವೇ ದ್ರುಪದಸ್ಯ ರಾಜ್ಞೋ। ಭೀಮಾರ್ಜುನೌ ಮಾದ್ರವತೀಸುತೌ ಚ।
05001005c ಪ್ರದ್ಯುಮ್ನಸಾಂಬೌ ಚ ಯುಧಿ ಪ್ರವೀರೌ। ವಿರಾಟಪುತ್ರಶ್ಚ ಸಹಾಭಿಮನ್ಯುಃ।।

ಪಾಂಚಾಲನ ಸಮೀಪದಲ್ಲಿ ಶಿನಿಪ್ರವೀರನು ರೌಹಿಣೀಯನ ಸಹಿತಲೂ, ಮತ್ಸ್ಯರಾಜನ ಹತ್ತಿರ ಜನಾರ್ದನನೂ, ಯುಧಿಷ್ಠಿರನೂ, ರಾಜ ದ್ರುಪದನ ಎಲ್ಲ ಮಕ್ಕಳೂ, ಭೀಮಾರ್ಜುನರೂ, ಮಾದ್ರಿಯ ಮಕ್ಕಳೀರ್ವರೂ, ಯುದ್ಧಪ್ರವೀರ ಪ್ರದ್ಯುಮ್ನ-ಸಾಂಬರೂ, ವಿರಾಟಪುತ್ರರೊಂದಿಗೆ ಅಭಿಮನ್ಯುವೂ ಕುಳಿತಿದ್ದರು.

05001006a ಸರ್ವೇ ಚ ಶೂರಾಃ ಪಿತೃಭಿಃ ಸಮಾನಾ। ವೀರ್ಯೇಣ ರೂಪೇಣ ಬಲೇನ ಚೈವ।
05001006c ಉಪಾವಿಶನ್ದ್ರೌಪದೇಯಾಃ ಕುಮಾರಾಃ। ಸುವರ್ಣಚಿತ್ರೇಷು ವರಾಸನೇಷು।।

ವೀರ್ಯ ರೂಪ ಬಲಗಳಲ್ಲಿ ತಂದೆಯಂದಿರ ಸಮಾನರಾಗಿದ್ದ ಶೂರರಾದ ಎಲ್ಲ ದ್ರೌಪದೇಯ ಕುಮಾರರೂ ಬಣ್ಣಬಣ್ಣದ ಸುವರ್ಣಖಚಿತ ಶ್ರೇಷ್ಠ ಆಸನಗಳಲ್ಲಿ ಕುಳಿತಿದ್ದರು.

05001007a ತಥೋಪವಿಷ್ಟೇಷು ಮಹಾರಥೇಷು। ವಿಭ್ರಾಜಮಾನಾಂಬರಭೂಷಣೇಷು।
05001007c ರರಾಜ ಸಾ ರಾಜವತೀ ಸಮೃದ್ಧಾ। ಗ್ರಹೈರಿವ ದ್ಯೌರ್ವಿಮಲೈರುಪೇತಾ।।

ವಸ್ತ್ರಭೂಷಣಗಳಿಂದ ವಿಭ್ರಾಜಮಾನರಾಗಿ ಅಲ್ಲಿ ಕುಳಿತಿದ್ದ ಮಹಾರಥಿಗಳಿಂದ ಸಮೃದ್ಧ ಆ ರಾಜಸಭೆಯು ವಿಮಲ ಆಕಾಶದಲ್ಲಿ ಕಾಣುವ ಗ್ರಹಗಳಂತೆ ತೋರುತ್ತಿತ್ತು.

05001008a ತತಃ ಕಥಾಸ್ತೇ ಸಮವಾಯಯುಕ್ತಾಃ। ಕೃತ್ವಾ ವಿಚಿತ್ರಾಃ ಪುರುಷಪ್ರವೀರಾಃ।
05001008c ತಸ್ಥುರ್ಮುಹೂರ್ತಂ ಪರಿಚಿಂತಯಂತಃ। ಕೃಷ್ಣಂ ನೃಪಾಸ್ತೇ ಸಮುದೀಕ್ಷಮಾಣಾಃ।।

ಆಗ ಪರಸ್ಪರರಲ್ಲಿ ಬೇರೆ ಬೇರೆ ವಿಷಯಗಳ ಕುರಿತು ಮಾತನಾಡಿ ಆ ಪುರುಷಪ್ರವೀರರು ಒಂದು ಕ್ಷಣ ಪರಿಚಿಂತಿಸುತ್ತಾ ಕೃಷ್ಣನನ್ನೇ ನೋಡುತ್ತಾ ಸುಮ್ಮನಾದರು.

05001009a ಕಥಾಂತಮಾಸಾದ್ಯ ಚ ಮಾಧವೇನ। ಸಂಘಟ್ಟಿತಾಃ ಪಾಂಡವಕಾರ್ಯಹೇತೋಃ।
05001009c ತೇ ರಾಜಸಿಂಹಾಃ ಸಹಿತಾ ಹ್ಯಶೃಣ್ವನ್। ವಾಕ್ಯಂ ಮಹಾರ್ಥಂ ಚ ಮಹೋದ। ಯಂ ಚ।

ಅವರ ಮಾತುಗಳ ಕೊನೆಯಲ್ಲಿ ಮಾಧವನು ಪಾಂಡವರ ವಿಷಯದ ಕುರಿತು ಅವರ ಮನಸ್ಸನ್ನು ಸೆಳೆದನು. ಆ ರಾಜಸಿಂಹರು ಒಟ್ಟಿಗೇ ಅವನ ಮಹಾರ್ಥವುಳ್ಳ ಮಹೋದಯಕಾರಕ ವಾಕ್ಯಗಳನ್ನು ಕೇಳಿದರು.

05001010 ಕೃಷ್ಣ ಉವಾಚ।
05001010a ಸರ್ವೈರ್ಭವದ್ಭಿರ್ವಿದಿತಂ ಯಥಾಯಂ। ಯುಧಿಷ್ಠಿರಃ ಸೌಬಲೇನಾಕ್ಷವತ್ಯಾಂ।
05001010c ಜಿತೋ ನಿಕೃತ್ಯಾಪಹೃತಂ ಚ ರಾಜ್ಯಂ। ಪುನಃ ಪ್ರವಾಸೇ ಸಮಯಃ ಕೃತಶ್ಚ।।

ಕೃಷ್ಣನು ಹೇಳಿದನು: “ಸೌಬಲನಿಂದ ದಾಳದಾಟದಲ್ಲಿ ಗೆಲ್ಲಲ್ಪಟ್ಟು ಮೋಸದಿಂದ ಹೇಗೆ ಯುಧಿಷ್ಠಿರನ ರಾಜ್ಯವು ಅಪಹರಿಸಲ್ಪಟ್ಟಿತು ಮತ್ತು ನಂತರದ ಒಪ್ಪಂದದಂತೆ ಅವರು ಹೊರಗೆ ವಾಸಿಸಿದ್ದುದನ್ನೂ ನೀವೆಲ್ಲರೂ ಚೆನ್ನಾಗಿ ತಿಳಿದಿದ್ದೀರಿ.

05001011a ಶಕ್ತೈರ್ವಿಜೇತುಂ ತರಸಾ ಮಹೀಂ ಚ। ಸತ್ಯೇ ಸ್ಥಿತೈಸ್ತಚ್ಚರಿತಂ ಯಥಾವತ್।
05001011c ಪಾಂಡೋಃ ಸುತೈಸ್ತದ್ವ್ರತಮುಗ್ರರೂಪಂ। ವರ್ಷಾಣಿ ಷಟ್ಸಪ್ತ ಚ ಭಾರತಾಗ್ರ್ಯೈಃ।।

ಕ್ಷಣದಲ್ಲಿಯೇ ಮಹಿಯನ್ನು ಗೆಲ್ಲಲು ಶಕ್ತರಾಗಿದ್ದರೂ ಸತ್ಯದಲ್ಲಿ ಸ್ಥಿತರಾದ ಭಾರತಾಗ್ರ ಪಾಂಡುಸುತರು ಯಥಾವತ್ತಾಗಿ ನಡೆದುಕೊಂಡು ಹದಿಮೂರು ವರ್ಷಗಳ ಆ ಉಗ್ರರೂಪೀ ವ್ರತವನ್ನು ಪೂರೈಸಿದ್ದಾರೆ.

05001012a ತ್ರಯೋದಶಶ್ಚೈವ ಸುದುಸ್ತರೋಽಯಂ। ಅಜ್ಞಾಯಮಾನೈರ್ಭವತಾಂ ಸಮೀಪೇ।
05001012c ಕ್ಲೇಶಾನಸಹ್ಯಾಂಶ್ಚ ತಿತಿಕ್ಷಮಾಣೈಃ। ಯಥೋಷಿತಂ ತದ್ವಿದಿತಂ ಚ ಸರ್ವಂ।।

ಸುದುಸ್ತರವಾಗಿದ್ದ ಈ ಹದಿಮೂರನೆಯ ವರ್ಷವನ್ನೂ ಕೂಡ ನಿಮ್ಮ ಸಮೀಪದಲ್ಲಿಯೇ ಯಾರಿಗೂ ತಿಳಿಯದಂತೆ ಎಲ್ಲ ರೀತಿಯ ಕ್ಲೇಶಗಳನ್ನು ಸಹಿಸಿಕೊಂಡು ಹೇಗೆ ಕಳೆದರು ಎನ್ನುವುದೂ ನಿಮಗೆಲ್ಲರಿಗೆ ತಿಳಿದಿದೆ.

05001013a ಏವಂ ಗತೇ ಧರ್ಮಸುತಸ್ಯ ರಾಜ್ಞೋ। ದುರ್ಯೋಧನಸ್ಯಾಪಿ ಚ ಯದ್ಧಿತಂ ಸ್ಯಾತ್।
05001013c ತಚ್ಚಿಂತಯಧ್ವಂ ಕುರುಪಾಂಡವಾನಾಂ। ಧರ್ಮ್ಯಂ ಚ ಯುಕ್ತಂ ಚ ಯಶಸ್ಕರಂ ಚ।।

ಹೀಗಿರಲು ರಾಜ ಧರ್ಮಸುತನಿಗೂ ದುರ್ಯೋಧನನಿಗೂ ಇಬ್ಬರಿಗೂ ಒಳ್ಳೆಯದಾಗುವ ಹಾಗೆ ಕುರುಪಾಂಡವರಿಗೆ ಧರ್ಮವೂ, ಯುಕ್ತವೂ, ಯಶಸ್ಕರವೂ ಆದುದು ಏನು ಎಂದು ಯೋಚಿಸಬೇಕಾಗಿದೆ.

05001014a ಅಧರ್ಮಯುಕ್ತಂ ಚ ನ ಕಾಮಯೇತ। ರಾಜ್ಯಂ ಸುರಾಣಾಮಪಿ ಧರ್ಮರಾಜಃ।
05001014c ಧರ್ಮಾರ್ಥಯುಕ್ತಂ ಚ ಮಹೀಪತಿತ್ವಂ। ಗ್ರಾಮೇಽಪಿ ಕಸ್ಮಿಂಶ್ಚಿದಯಂ ಬುಭೂಷೇತ್।।

ಧರ್ಮರಾಜನು ಸುರರ ರಾಜ್ಯವೇ ಆದರೂ ಅಧರ್ಮಯುಕ್ತವಾದುದನ್ನು ಬಯಸುವುದಿಲ್ಲ. ಆದರೆ ಒಂದೇ ಗ್ರಾಮದ ಒಡೆತನವನ್ನಾದರೂ, ಅದು ಧರ್ಮಾರ್ಥಯುಕ್ತವಾಗಿದ್ದರೆ, ಅವನು ಸ್ವೀಕರಿಸುತ್ತಾನೆ.

05001015a ಪಿತ್ರ್ಯಂ ಹಿ ರಾಜ್ಯಂ ವಿದಿತಂ ನೃಪಾಣಾಂ। ಯಥಾಪಕೃಷ್ಟಂ ಧೃತರಾಷ್ಟ್ರಪುತ್ರೈಃ।
05001015c ಮಿಥ್ಯೋಪಚಾರೇಣ ತಥಾಪ್ಯನೇನ। ಕೃಚ್ಚ್ರಂ ಮಹತ್ಪ್ರಾಪ್ತಮಸಹ್ಯರೂಪಂ।।

ಧೃತರಾಷ್ಟ್ರನ ಮಕ್ಕಳು ಇವನ ಪಿತ್ರಾರ್ಜಿತ ರಾಜ್ಯವನ್ನು ಹೇಗೆ ಸುಳ್ಳುಕೆಲಸವನ್ನು ಮಾಡಿ ಅಪಹರಿಸಿದರು ಮತ್ತು ಇವನು ಹೇಗೆ ಸಹಿಸಲಸಾಧ್ಯ ಮಹಾ ಕಷ್ಟಗಳನ್ನು ಅನುಭವಿಸಿದನು ಎನ್ನುವುದು ನೃಪರೆಲ್ಲರಿಗೂ ತಿಳಿದೇ ಇದೆ.

05001016a ನ ಚಾಪಿ ಪಾರ್ಥೋ ವಿಜಿತೋ ರಣೇ ತೈಃ। ಸ್ವತೇಜಸಾ ಧೃತರಾಷ್ಟ್ರಸ್ಯ ಪುತ್ರೈಃ।
05001016c ತಥಾಪಿ ರಾಜಾ ಸಹಿತಃ ಸುಹೃದ್ಭಿಃ। ಅಭೀಪ್ಸತೇಽನಾಮಯಮೇವ ತೇಷಾಂ।।

ಧೃತರಾಷ್ಟ್ರನ ಮಕ್ಕಳಿಗೆ ತಮ್ಮದೇ ಬಲದಿಂದ ಪಾರ್ಥನನ್ನು ರಣದಲ್ಲಿ ಗೆಲ್ಲಲು ಸಾಧ್ಯವಿಲ್ಲ. ಆದರೂ ಕೂಡ ಹಿತೈಷಿಗಳೊಂದಿಗೆ ರಾಜನು ಅವರಿಗೆ ಒಳ್ಳೆಯದಾಗುವುದರ ಹೊರತಾಗಿ ಏನನ್ನೂ ಬಯಸುವುದಿಲ್ಲ.

05001017a ಯತ್ತತ್ಸ್ವಯಂ ಪಾಂಡುಸುತೈರ್ವಿಜಿತ್ಯ। ಸಮಾಹೃತಂ ಭೂಮಿಪತೀನ್ನಿಪೀಡ್ಯ।
05001017c ತತ್ಪ್ರಾರ್ಥಯಂತೇ ಪುರುಷಪ್ರವೀರಾಃ। ಕುಂತೀಸುತಾ ಮಾದ್ರವತೀಸುತೌ ಚ।।

ಸ್ವಪ್ರಯತ್ನದಿಂದ ಭೂಮಿಪತಿಗಳನ್ನು ಸೋಲಿಸಿ ಗೆದ್ದು ಒಟ್ಟುಗೂಡಿಸಿದುದನ್ನೇ ಈ ಪುರುಷಪ್ರವೀರ, ಪಾಂಡುಸುತರೂ, ಕುಂತೀಸುತರೂ, ಮಾದ್ರವತೀಸುತರೀರ್ವರೂ ಕೇಳುತ್ತಿದ್ದಾರೆ.

05001018a ಬಾಲಾಸ್ತ್ವಿಮೇ ತೈರ್ವಿವಿಧೈರುಪಾಯೈಃ। ಸಂಪ್ರಾರ್ಥಿತಾ ಹಂತುಮಮಿತ್ರಸಾಹಾಃ।
05001018c ರಾಜ್ಯಂ ಜಿಹೀರ್ಷದ್ಭಿರಸದ್ಭಿರುಗ್ರೈಃ। ಸರ್ವಂ ಚ ತದ್ವೋ ವಿದಿತಂ ಯಥಾವತ್।।

ಇವರು ಬಾಲಕರಾಗಿರುವಾಗ ಕೂಡ ಇವರ ಅ ಅಮಿತ್ರರು ಹೇಗೆ ರಾಜ್ಯವನ್ನು ತಮ್ಮದನ್ನಾಗಿಯೇ ಮಾಡಿಕೊಳ್ಳಲು ವಿವಿಧ ಉಪಾಯಗಳಿಂದ ಇವರನ್ನು ಕೊಲ್ಲಲು ಪ್ರಯತ್ನಿಸಿದರು ಎನ್ನುವುದನ್ನು ಯಥಾವತ್ತಾಗಿ ನೀವೆಲ್ಲರೂ ತಿಳಿದಿದ್ದೀರಿ.

05001019a ತೇಷಾಂ ಚ ಲೋಭಂ ಪ್ರಸಮೀಕ್ಷ್ಯ ವೃದ್ಧಂ। ಧರ್ಮಾತ್ಮತಾಂ ಚಾಪಿ ಯುಧಿಷ್ಠಿರಸ್ಯ।
05001019c ಸಂಬಂಧಿತಾಂ ಚಾಪಿ ಸಮೀಕ್ಷ್ಯ ತೇಷಾಂ। ಮತಿಂ ಕುರುಧ್ವಂ ಸಹಿತಾಃ ಪೃಥಕ್ಚ।।

ಬೆಳೆದಿರುವ ಅವರ ಲೋಭವನ್ನು ಮತ್ತು ಯುಧಿಷ್ಠಿರನ ಧರ್ಮಾತ್ಮತೆಯನ್ನೂ ನೋಡಿ, ಅವರೀರ್ವರ ನಡುವೆಯಿರುವ ಸಂಬಂಧವನ್ನೂ ನೋಡಿ ನೀವೆಲ್ಲರೂ ಒಂದಾಗಿ ಮತ್ತು ಪ್ರತ್ಯೇಕವಾಗಿ ವಿಚಾರಮಾಡಬೇಕು.

05001020a ಇಮೇ ಚ ಸತ್ಯೇಽಭಿರತಾಃ ಸದೈವ। ತಂ ಪಾರಯಿತ್ವಾ ಸಮಯಂ ಯಥಾವತ್।
05001020c ಅತೋಽನ್ಯಥಾ ತೈರುಪಚರ್ಯಮಾಣಾ। ಹನ್ಯುಃ ಸಮೇತಾನ್ಧೃತರಾಷ್ಟ್ರಪುತ್ರಾನ್।।

ಸದಾ ಸತ್ಯನಿರತರಾಗಿರುವ ಇವರು ಆ ಒಪ್ಪಂದವನ್ನು ಯಥಾವತ್ತಾಗಿ ಪಾಲಿಸಿದ್ದಾರೆ. ಈಗ ಧೃತರಾಷ್ಟ್ರ ಪುತ್ರರು ಅವರೊಂದಿಗೆ ಅನ್ಯಥಾ ನಡೆದುಕೊಂಡರೆ ಅವರನ್ನು ಅವರ ಬೆಂಬಲಿಗರೊಂದಿಗೆ ಇವರು ಕೊಲ್ಲುತ್ತಾರೆ.

05001021a ತೈರ್ವಿಪ್ರಕಾರಂ ಚ ನಿಶಮ್ಯ ರಾಜ್ಞಾಃ। ಸುಹೃಜ್ಜನಾಸ್ತಾನ್ಪರಿವಾರಯೇಯುಃ।
05001021c ಯುದ್ಧೇನ ಬಾಧೇಯುರಿಮಾಂಸ್ತಥೈವ। ತೈರ್ವಧ್ಯಮಾನಾ ಯುಧಿ ತಾಂಶ್ಚ ಹನ್ಯುಃ।।

ಈಗ ರಾಜನಿಂದ ಇವರಿಗೆ ತಪ್ಪು ನಡೆಯಿತೆಂದರೆ ಇವರನ್ನು ಸುತ್ತುವರೆದಿರುವ ಸ್ನೇಹಿತರಿದ್ದಾರೆ. ಯುದ್ಧದಲ್ಲಿ ತಾವು ಸತ್ತರೂ ಅವರ ಶತ್ರುಗಳೊಂದಿಗೆ ಹೋರಾಡುವವರು ಅವರಿಗೆ ಈಗ ಇದ್ದಾರೆ.

05001022a ತಥಾಪಿ ನೇಮೇಽಲ್ಪತಯಾ ಸಮರ್ಥಾಃ। ತೇಷಾಂ ಜಯಾಯೇತಿ ಭವೇನ್ಮತಂ ವಃ।
05001022c ಸಮೇತ್ಯ ಸರ್ವೇ ಸಹಿತಾಃ ಸುಹೃದ್ಭಿಃ। ತೇಷಾಂ ವಿನಾಶಾಯ ಯತೇಯುರೇವ।।

ಅಂಥವರು ಸ್ವಲ್ಪವೇ ಮಂದಿ ಇದ್ದು ಇವರಿಗೆ ಜಯವನ್ನು ಪಡೆಯುವ ಸಮರ್ಥರಿಲ್ಲರೆಂದು ನೀವು ತಿಳಿದರೂ ಕೂಡ ಇವರ ಸುಹೃದಯಿಗಳಾದ ಎಲ್ಲರೂ ಸೇರಿ ಒಟ್ಟಿಗೇ ಅವರ ವಿನಾಶಕ್ಕೆ ಯತ್ನಿಸಬಹುದು.

05001023a ದುರ್ಯೋಧನಸ್ಯಾಪಿ ಮತಂ ಯಥಾವನ್। ನ ಜ್ಞಾಯತೇ ಕಿಂ ನು ಕರಿಷ್ಯತೀತಿ।
05001023c ಅಜ್ಞಾಯಮಾನೇ ಚ ಮತೇ ಪರಸ್ಯ। ಕಿಂ ಸ್ಯಾತ್ಸಮಾರಭ್ಯತಮಂ ಮತಂ ವಃ।।

ದುರ್ಯೋಧನ ವಿಚಾರವೇನು ಮತ್ತು ಅವನು ಏನು ಮಾಡುವವನಿದ್ದಾನೆ ಎನ್ನುವುದು ನಮಗೆ ತಿಳಿದಿಲ್ಲ. ಇನ್ನೊಂದು ಪಕ್ಷದವರ ವಿಚಾರವೇನೆಂದು ತಿಳಿಯದೇ ನಾವಾದರೂ ಮಾಡಬೇಕಾದುದರಲ್ಲಿ ಒಳ್ಳೆಯದು ಏನು ಎಂದು ಹೇಗೆ ತಾನೇ ನಿರ್ಧರಿಸಬಹುದು?

05001024a ತಸ್ಮಾದಿತೋ ಗಚ್ಚತು ಧರ್ಮಶೀಲಃ। ಶುಚಿಃ ಕುಲೀನಃ ಪುರುಷೋಽಪ್ರಮತ್ತಃ।
05001024c ದೂತಃ ಸಮರ್ಥಃ ಪ್ರಶಮಾಯ ತೇಷಾಂ। ರಾಜ್ಯಾರ್ಧದಾನಾಯ ಯುಧಿಷ್ಠಿರಸ್ಯ।।

ಆದುದರಿಂದ ಅವರ ಕಡೆ ಯುಧಿಷ್ಠಿರನ ಅರ್ಧರಾಜ್ಯವನ್ನು ನೀಡಬೇಕೆಂದು ಸಮರ್ಥ ದೂತನನ್ನು – ಧರ್ಮಶೀಲ, ಶುಚಿ, ಕುಲೀನ, ಅಪ್ರಮತ್ತ – ಪುರುಷನನ್ನು ಕಳುಹಿಸಬೇಕು.”

05001025a ನಿಶಮ್ಯ ವಾಕ್ಯಂ ತು ಜನಾರ್ದನಸ್ಯ। ಧರ್ಮಾರ್ಥಯುಕ್ತಂ ಮಧುರಂ ಸಮಂ ಚ।
05001025c ಸಮಾದದೇ ವಾಕ್ಯಮಥಾಗ್ರಜೋಽಸ್ಯ। ಸಂಪೂಜ್ಯ ವಾಕ್ಯಂ ತದತೀವ ರಾಜನ್।।

ರಾಜನ್! ಜನಾರ್ದನನ ಆ ಮಧುರ, ಸಮ, ಧರ್ಮಾರ್ಥಯುಕ್ತ ಮಾತನ್ನು ಕೇಳಿ ಅವನ ಅಣ್ಣನು ಅವನ ಮತವನ್ನು ಗೌರವಿಸಿ ಈ ಮಾತುಗಳನ್ನಾಡಿದನು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಉದ್ಯೋಗ ಪರ್ವಣಿ ಕೃಷ್ಣವಾಕ್ಯೇ ಪ್ರಥಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಉದ್ಯೋಗ ಪರ್ವದಲ್ಲಿ ಕೃಷ್ಣವಾಕ್ಯದಲ್ಲಿ ಒಂದನೆಯ ಅಧ್ಯಾಯವು।