ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ವಿರಾಟ ಪರ್ವ
ವೈವಾಹಿಕ ಪರ್ವ
ಅಧ್ಯಾಯ 67
ಸಾರ
ತಾನೇ ಏಕೆ ಉತ್ತರೆಯನ್ನು ವಿವಾಹವಾಗುವುದಿಲ್ಲವೆಂದು ಅರ್ಜುನನು ವಿರಾಟನಿಗೆ ವಿವರಿಸಿದುದು (1-9). ವಿವಾಹದ ನಿಶ್ಚಯವಾಗಲು ವಿರಾಟನಗರಿಗೆ ವೃಷ್ಣಿ-ಪಾಂಚಾಲರ ಆಗಮನ (10-24). ಅಭಿಮನ್ಯು-ಉತ್ತರೆಯರ ವಿವಾಹಕಾರ್ಯ ಮಹೋತ್ಸವ (25-28).
04067001 ವಿರಾಟ ಉವಾಚ।
04067001a ಕಿಮರ್ಥಂ ಪಾಂಡವಶ್ರೇಷ್ಠ ಭಾರ್ಯಾಂ ದುಹಿತರಂ ಮಮ।
04067001c ಪ್ರತಿಗ್ರಹೀತುಂ ನೇಮಾಂ ತ್ವಂ ಮಯಾ ದತ್ತಾಮಿಹೇಚ್ಛಸಿ।।
ವಿರಾಟನು ಹೇಳಿದನು: “ಪಾಂಡವಶ್ರೇಷ್ಠ! ನಿನಗೆ ನಾನಿಲ್ಲಿ ಕೊಡುತ್ತಿರುವ ನನ್ನ ಮಗಳನ್ನು ನೀನು ಹೆಂಡತಿಯನ್ನಾಗಿ ಏಕೆ ಸ್ವೀಕರಿಸುತ್ತಿಲ್ಲ?”
04067002 ಅರ್ಜುನ ಉವಾಚ।
04067002a ಅಂತಃಪುರೇಽಹಮುಷಿತಃ ಸದಾ ಪಶ್ಯನ್ಸುತಾಂ ತವ।
04067002c ರಹಸ್ಯಂ ಚ ಪ್ರಕಾಶಂ ಚ ವಿಶ್ವಸ್ತಾ ಪಿತೃವನ್ಮಯಿ।।
ಅರ್ಜುನನು ಹೇಳಿದನು: “ನಿನ್ನ ಅಂತಃಪುರದಲ್ಲಿ ವಾಸಿಸುತ್ತಿದ್ದ ನಾನು ನಿನ್ನ ಮಗಳನ್ನು ಯಾವಾಗಲೂ ನೋಡುತ್ತಿದ್ದೆ. ಅವಳೂ ಕೂಡ ಏಕಾಂತ-ಬಹಿರಂಗಗಳಲ್ಲಿ ನನ್ನಲ್ಲಿ ತಂದೆಯಂತೆ ನಂಬಿಕೆಯಿಟ್ಟಿದ್ದಳು.
04067003a ಪ್ರಿಯೋ ಬಹುಮತಶ್ಚಾಹಂ ನರ್ತಕೋ ಗೀತಕೋವಿದಃ।
04067003c ಆಚಾರ್ಯವಚ್ಚ ಮಾಂ ನಿತ್ಯಂ ಮನ್ಯತೇ ದುಹಿತಾ ತವ।।
ನರ್ತಕನಾಗಿ ಗೀತಕೋವಿದನಾಗಿ ನಾನು ಅವಳಿಗೆ ಇಷ್ಟನೂ ಗೌರವಾರ್ಹನೂ ಆಗಿದ್ದೆ. ನಿನ್ನ ಮಗಳು ಯಾವಾಗಲೂ ನನ್ನನ್ನು ಆಚಾರ್ಯನೆಂಬಂತೆ ಭಾವಿಸುತ್ತಿದ್ದಳು.
04067004a ವಯಃಸ್ಥಯಾ ತಯಾ ರಾಜನ್ಸಹ ಸಂವತ್ಸರೋಷಿತಃ।
04067004c ಅತಿಶಂಕಾ ಭವೇತ್ಸ್ಥಾನೇ ತವ ಲೋಕಸ್ಯ ಚಾಭಿಭೋ।।
ರಾಜನ್! ಹರಯಕ್ಕೆ ಬಂದ ಅವಳೊಡನೆ ನಾನು ಒಂದು ವರ್ಷ ವಾಸಮಾಡಿದೆ. ಆದ್ದರಿಂದ ನಿನಗೆ ಸಹಜವಾಗಿ ಅತಿಯಾದ ಶಂಕೆಯುಂಟಾದೀತು.
04067005a ತಸ್ಮಾನ್ನಿಮಂತ್ರಯೇ ತ್ವಾಹಂ ದುಹಿತುಃ ಪೃಥಿವೀಪತೇ।
04067005c ಶುದ್ಧೋ ಜಿತೇಂದ್ರಿಯೋ ದಾಂತಸ್ತಸ್ಯಾಃ ಶುದ್ಧಿಃ ಕೃತಾ ಮಯಾ।।
ರಾಜನ್! ಆದ್ದರಿಂದ ನಿನ್ನ ಮಗಳನ್ನು ನನ್ನ ಮಗನಿಗೆ ಕೊಡೆಂದು ಕೇಳುತ್ತಿದ್ದೇನೆ. ಇದರಿಂದ ಶುದ್ಧನೂ ಜಿತೇಂದ್ರಿಯನೂ ಸಂಯಮಿಯೂ ಆದ ನಾನು ಅವಳು ಶುದ್ಧಳೆಂಬುದನ್ನು ತೋರಿಸಿದಂತಾಗುತ್ತದೆ.
04067006a ಸ್ನುಷಾಯಾ ದುಹಿತುರ್ವಾಪಿ ಪುತ್ರೇ ಚಾತ್ಮನಿ ವಾ ಪುನಃ।
04067006c ಅತ್ರ ಶಂಕಾಂ ನ ಪಶ್ಯಾಮಿ ತೇನ ಶುದ್ಧಿರ್ಭವಿಷ್ಯತಿ।।
ಸೊಸೆಗೂ ಮಗಳಿಗೂ, ಮಗನಿಗೂ ತನಗೂ ಏನೂ ಅಂತರವಿಲ್ಲ. ಈ ವಿಷಯದಲ್ಲಿ ಶಂಕೆಗೆ ಅವಕಾಶ ಕಾಣುತ್ತಿಲ್ಲ. ಆದ್ದರಿಂದ ನಮ್ಮ ಶುದ್ಧಿ ಸಿದ್ಧವಾಗುತ್ತದೆ.
04067007a ಅಭಿಷಂಗಾದಹಂ ಭೀತೋ ಮಿಥ್ಯಾಚಾರಾತ್ಪರಂತಪ।
04067007c ಸ್ನುಷಾರ್ಥಮುತ್ತರಾಂ ರಾಜನ್ಪ್ರತಿಗೃಹ್ಣಾಮಿ ತೇ ಸುತಾಂ।।
ಶತ್ರುನಾಶಕ! ಆರೋಪ ಮತ್ತು ಮಿಥ್ಯಾಚಾರಕ್ಕೆ ನಾನು ಹೆದರುತ್ತೇನೆ. ರಾಜನ್! ನಿನ್ನ ಮಗಳು ಉತ್ತರೆಯನ್ನು ನಾನು ಸೊಸೆಯಾಗಿ ಸ್ವೀಕರಿಸುತ್ತೇನೆ.
04067008a ಸ್ವಸ್ರೀಯೋ ವಾಸುದೇವಸ್ಯ ಸಾಕ್ಷಾದ್ದೇವಶಿಶುರ್ಯಥಾ।
04067008c ದಯಿತಶ್ಚಕ್ರಹಸ್ತಸ್ಯ ಬಾಲ ಏವಾಸ್ತ್ರಕೋವಿದಃ।।
04067009a ಅಭಿಮನ್ಯುರ್ಮಹಾಬಾಹುಃ ಪುತ್ರೋ ಮಮ ವಿಶಾಂ ಪತೇ।
04067009c ಜಾಮಾತಾ ತವ ಯುಕ್ತೋ ವೈ ಭರ್ತಾ ಚ ದುಹಿತುಸ್ತವ।।
ರಾಜನ್! ನನ್ನ ಮಗ ಅಭಿಮನ್ಯುವು ಮಹಾಬಾಹು. ಸಾಕ್ಷಾತ್ ದೇವಕುಮಾರನಂತಿರುವನು. ವಾಸುದೇವನಿಗೆ ಸೋದರಳಿಯ. ಆ ಚಕ್ರಪಾಣಿಗೆ ಪ್ರಿಯನಾದವನು. ಬಾಲಕನಾಗಿಯೂ ಅಸ್ತ್ರಕೋವಿದ. ಅವನು ನಿನಗೆ ಅಳಿಯನಾಗಲು ಮತ್ತು ನಿನ್ನ ಮಗಳಿಗೆ ಪತಿಯಾಗಲು ತಕ್ಕವನು.”
04067010 ವಿರಾಟ ಉವಾಚ।
04067010a ಉಪಪನ್ನಂ ಕುರುಶ್ರೇಷ್ಠೇ ಕುಂತೀಪುತ್ರೇ ಧನಂಜಯೇ।
04067010c ಯ ಏವಂ ಧರ್ಮನಿತ್ಯಶ್ಚ ಜಾತಜ್ಞಾನಶ್ಚ ಪಾಂಡವಃ।।
ವಿರಾಟನು ಹೇಳಿದನು: “ಕುರುವಂಶದಲ್ಲಿ ಶ್ರೇಷ್ಠನೂ ಕುಂತೀಪುತ್ರನೂ ಆದ ಧನಂಜಯನಿಗೆ ಈ ಮಾತು ಯೋಗ್ಯವೇ. ಈ ಪಾಂಡುಪುತ್ರನು ಧರ್ಮನಿರತ ಮತ್ತು ಜ್ಞಾನಿ.
04067011a ಯತ್ಕೃತ್ಯಂ ಮನ್ಯಸೇ ಪಾರ್ಥ ಕ್ರಿಯತಾಂ ತದನಂತರಂ।
04067011c ಸರ್ವೇ ಕಾಮಾಃ ಸಮೃದ್ಧಾ ಮೇ ಸಂಬಂಧೀ ಯಸ್ಯ ಮೇಽರ್ಜುನಃ।।
ಪಾರ್ಥ! ನೀನು ಆಲೋಚಿಸುವ ಕಾರ್ಯವನ್ನು ಕೂಡಲೆ ಮಾಡು. ಅರ್ಜುನನನ್ನು ಸಂಬಂಧಿಯನ್ನಾಗಿ ಪಡೆದ ನನ್ನ ಎಲ್ಲ ಬಯಕೆಗಳೂ ಚೆನ್ನಾಗಿ ಸಿದ್ಧಿಸಿದವು.””
04067012 ವೈಶಂಪಾಯನ ಉವಾಚ।
04067012a ಏವಂ ಬ್ರುವತಿ ರಾಜೇಂದ್ರೇ ಕುಂತೀಪುತ್ರೋ ಯುಧಿಷ್ಠಿರಃ।
04067012c ಅನ್ವಜಾನಾತ್ಸ ಸಂಯೋಗಂ ಸಮಯೇ ಮತ್ಸ್ಯಪಾರ್ಥಯೋಃ।।
ವೈಶಂಪಾಯನನು ಹೇಳಿದನು: “ಆ ರಾಜೇಂದ್ರನು ಹೀಗೆ ಹೇಳಲು ಕುಂತೀಪುತ್ರ ಯುಧಿಷ್ಠಿರನು ವಿರಾಟ-ಪಾರ್ಥರ ನಡುವೆ ಆದ ಒಪ್ಪಂದಕ್ಕೆ ಆಗಲೇ ಸಮ್ಮತಿಯಿತ್ತನು.
04067013a ತತೋ ಮಿತ್ರೇಷು ಸರ್ವೇಷು ವಾಸುದೇವೇ ಚ ಭಾರತ।
04067013c ಪ್ರೇಷಯಾಮಾಸ ಕೌಂತೇಯೋ ವಿರಾಟಶ್ಚ ಮಹೀಪತಿಃ।।
ಭಾರತ! ಆಗ ಕುಂತೀಪುತ್ರ-ವಿರಾಟರಾಜರು ಎಲ್ಲ ಮಿತ್ರರಿಗೂ ವಾಸುದೇವನಿಗೂ ಆಹ್ವಾನವನ್ನು ಕಳುಹಿಸಿದರು.
04067014a ತತಸ್ತ್ರಯೋದಶೇ ವರ್ಷೇ ನಿವೃತ್ತೇ ಪಂಚ ಪಾಂಡವಾಃ।
04067014c ಉಪಪ್ಲವ್ಯೇ ವಿರಾಟಸ್ಯ ಸಮಪದ್ಯಂತ ಸರ್ವಶಃ।।
ಬಳಿಕ ಹದಿಮೂರನೆಯ ವರ್ಷವು ಕಳೆಯಲು ಐವರು ಪಾಂಡವರೂ ವಿರಾಟನ ಉಪಪ್ಲವದಲ್ಲಿ ಒಟ್ಟಿಗೇ ವಾಸಮಾಡತೊಡಗಿದರು.
04067015a ತಸ್ಮಿನ್ವಸಂಶ್ಚ ಬೀಭತ್ಸುರಾನಿನಾಯ ಜನಾರ್ದನಂ।
04067015c ಆನರ್ತೇಭ್ಯೋಽಪಿ ದಾಶಾರ್ಹಾನಭಿಮನ್ಯುಂ ಚ ಪಾಂಡವಃ।।
ಅಲ್ಲಿ ವಾಸಿಸುತ್ತಿರುವಾಗ ಪಾಂಡುಪುತ್ರ ಅರ್ಜುನನು ಕೃಷ್ಣನನ್ನೂ ಅನರ್ತ ದೇಶದಿಂದ ಯಾದವರನ್ನೂ ಅಭಿಮನ್ಯುವನ್ನೂ ಕರೆಯಿಸಿಕೊಂಡನು.
04067016a ಕಾಶಿರಾಜಶ್ಚ ಶೈಬ್ಯಶ್ಚ ಪ್ರೀಯಮಾಣೌ ಯುಧಿಷ್ಠಿರೇ।
04067016c ಅಕ್ಷೌಹಿಣೀಭ್ಯಾಂ ಸಹಿತಾವಾಗತೌ ಪೃಥಿವೀಪತೇ।।
ರಾಜನ್! ಯುಧಿಷ್ಠಿರನಿಗೆ ಪ್ರಿಯರಾದ ಕಾಶೀರಾಜನೂ, ಶೈಬ್ಯನೂ ಅಕ್ಷೌಹಿಣೀ ಸೇನೆಯೊಡನೆ ಆಗಮಿಸಿದರು.
04067017a ಅಕ್ಷೌಹಿಣ್ಯಾ ಚ ತೇಜಸ್ವೀ ಯಜ್ಞಸೇನೋ ಮಹಾಬಲಃ।
04067017c ದ್ರೌಪದ್ಯಾಶ್ಚ ಸುತಾ ವೀರಾಃ ಶಿಖಂಡೀ ಚಾಪರಾಜಿತಃ।।
ತೇಜಸ್ವಿ, ಮಹಾಬಲಶಾಲಿ ದ್ರುಪದನು ಅಕ್ಷೌಹಿಣಿಯೊಂದಿಗೆ ಬಂದನು. ದ್ರೌಪದಿಯ ವೀರ ಪುತ್ರರೂ, ಸೋಲಿಲ್ಲದ ಶಿಖಂಡಿಯೂ ಬಂದರು.
04067018a ಧೃಷ್ಟದ್ಯುಮ್ನಶ್ಚ ದುರ್ಧರ್ಷಃ ಸರ್ವಶಸ್ತ್ರಭೃತಾಂ ವರಃ।
04067018c ಸಮಸ್ತಾಕ್ಷೌಹಿಣೀಪಾಲಾ ಯಜ್ವಾನೋ ಭೂರಿದಕ್ಷಿಣಾಃ।
04067018e ಸರ್ವೇ ಶಸ್ತ್ರಾಸ್ತ್ರಸಂಪನ್ನಾಃ ಸರ್ವೇ ಶೂರಾಸ್ತನುತ್ಯಜಃ।।
ಎದುರಿಸಲಾಗದ, ಎಲ್ಲ ಶಸ್ತ್ರಧಾರಿಗಳಲ್ಲಿಯೂ ಶ್ರೇಷ್ಠನಾದ, ಧೃಷ್ಟದ್ಯುಮ್ನನು ಬಂದನು. ಎಲ್ಲ ಅಕ್ಷೌಹಿಣೀಪತಿಗಳೂ, ಯಜ್ಞಮಾಡಿ ಅಪಾರ ದಕ್ಷಿಣೆ ಕೊಡುವವರೂ, ಎಲ್ಲ ಶೂರರೂ, ಯುದ್ಧದಲ್ಲಿ ದೇಹತ್ಯಾಗಮಾಡುವವರೂ ಬಂದರು.
04067019a ತಾನಾಗತಾನಭಿಪ್ರೇಕ್ಷ್ಯ ಮತ್ಸ್ಯೋ ಧರ್ಮಭೃತಾಂ ವರಃ।
04067019c ಪ್ರೀತೋಽಭವದ್ದುಹಿತರಂ ದತ್ತ್ವಾ ತಾಮಭಿಮನ್ಯವೇ।।
ಧರ್ಮಧರರಲ್ಲಿ ಶ್ರೇಷ್ಠ ಮತ್ಸ್ಯರಾಜನು ಅವರೆಲ್ಲರೂ ಆಗಮಿಸಿದುದನ್ನು ನೋಡಿ ಅಭಿಮನ್ಯುವಿಗೆ ಆ ಮಗಳನ್ನು ಕೊಟ್ಟು ಸಂತುಷ್ಟನಾದನು.
04067020a ತತಃ ಪ್ರತ್ಯುಪಯಾತೇಷು ಪಾರ್ಥಿವೇಷು ತತಸ್ತತಃ।
04067020c ತತ್ರಾಗಮದ್ವಾಸುದೇವೋ ವನಮಾಲೀ ಹಲಾಯುಧಃ।
04067020e ಕೃತವರ್ಮಾ ಚ ಹಾರ್ದಿಕ್ಯೋ ಯುಯುಧಾನಶ್ಚ ಸಾತ್ಯಕಿಃ।।
ಬೇರೆ ಬೇರೆ ಕಡೆಗಳಿಂದ ರಾಜರು ಆಗಮಿಸಿದ ನಂತರ ವನಮಾಲಿ ವಾಸುದೇವ, ಬಲರಾಮ, ಹಾರ್ದಿಕ್ಯ ಕೃತವರ್ಮ, ಮತ್ತು ಯುಯುಧಾನ ಸಾತ್ಯಕಿಯರು ಅಲ್ಲಿಗೆ ಬಂದರು.
04067021a ಅನಾಧೃಷ್ಟಿಸ್ತಥಾಕ್ರೂರಃ ಸಾಂಬೋ ನಿಶಠ ಏವ ಚ।
04067021c ಅಭಿಮನ್ಯುಮುಪಾದಾಯ ಸಹ ಮಾತ್ರಾ ಪರಂತಪಾಃ।।
ಅನಾದೃಷ್ಟಿ, ಅಕ್ರೂರ, ಸಾಂಬ ಹಾಗೂ ನಿಶಠ - ಈ ಶತ್ರುಸಂತಾಪಕರು ಅಭಿಮನ್ಯುವನ್ನು ಅವನ ತಾಯಿಯೊಡನೆ ಕರೆದುಕೊಂಡು ಬಂದರು.
04067022a ಇಂದ್ರಸೇನಾದಯಶ್ಚೈವ ರಥೈಸ್ತೈಃ ಸುಸಮಾಹಿತೈಃ।
04067022c ಆಯಯುಃ ಸಹಿತಾಃ ಸರ್ವೇ ಪರಿಸಂವತ್ಸರೋಷಿತಾಃ।।
ಒಂದು ವರ್ಷ ದ್ವಾರಕೆಯಲ್ಲಿ ವಾಸಿಸಿದ ಇಂದ್ರಸೇನ ಮೊದಲಾದವರೆಲ್ಲ ಅಲಂಕೃತ ರಥಗಳೊಡನೆ ಬಂದರು.
04067023a ದಶ ನಾಗಸಹಸ್ರಾಣಿ ಹಯಾನಾಂ ಚ ಶತಾಯುತಂ।
04067023c ರಥಾನಾಮರ್ಬುದಂ ಪೂರ್ಣಂ ನಿಖರ್ವಂ ಚ ಪದಾತಿನಾಂ।।
ಹತ್ತು ಸಾವಿರ ಆನೆಗಳೂ, ಲಕ್ಷಾಂತರ ಕುದುರೆಗಳೂ, ಕೋಟಿ ಸಂಖ್ಯೆಯ ರಥಗಳೂ, ನೂರು ಕೋಟಿ ಸಂಖ್ಯೆಯು ಕಾಲಾಳುಗಳೂ ಬಂದರು.
04067024a ವೃಷ್ಣ್ಯಂಧಕಾಶ್ಚ ಬಹವೋ ಭೋಜಾಶ್ಚ ಪರಮೌಜಸಃ।
04067024c ಅನ್ವಯುರ್ವೃಷ್ಣಿಶಾರ್ದೂಲಂ ವಾಸುದೇವಂ ಮಹಾದ್ಯುತಿಂ।।
ಬಹಳ ಮಂದಿ ವೃಷ್ಣಿಗಳೂ, ಅಂಧಕರೂ, ಪರಮ ಬಲಶಾಲಿಗಳಾದ ಭೋಜರೂ ವೃಷ್ಣಿಶ್ರೇಷ್ಠ ಮುಹಾತೇಜಸ್ವಿ ಕೃಷ್ಣನನ್ನು ಅನುಸರಿಸಿ ಬಂದರು.
04067025a ಪಾರಿಬರ್ಹಂ ದದೌ ಕೃಷ್ಣಃ ಪಾಂಡವಾನಾಂ ಮಹಾತ್ಮನಾಂ।
04067025c ಸ್ತ್ರಿಯೋ ರತ್ನಾನಿ ವಾಸಾಂಸಿ ಪೃಥಕ್ ಪೃಥಗನೇಕಶಃ।
04067025e ತತೋ ವಿವಾಹೋ ವಿಧಿವದ್ವವೃತೇ ಮತ್ಸ್ಯಪಾರ್ಥಯೋಃ।।
ಕೃಷ್ಣನು ಮಹಾತ್ಮ ಪಾಂಡವರಿಗೆ ಬೇರೆಬೇರೆಯಾಗಿ ಅನೇಕ ಸ್ತ್ರೀಯರನ್ನೂ, ರತ್ನಗಳನ್ನೂ, ಅಸ್ತ್ರಗಳನ್ನೂ ಉಡುಗೊರೆಯನ್ನಾಗಿ ಕೊಟ್ಟನು. ಅನಂತರ ಮತ್ಸ್ಯ -ಪಾರ್ಥರ ಮನೆತನಗಳ ನಡುವೆ ಮದುವೆಯು ವಿಧಿಪೂರ್ವಕವಾಗಿ ನಡೆಯಿತು.
04067026a ತತಃ ಶಂಖಾಶ್ಚ ಭೇರ್ಯಶ್ಚ ಗೋಮುಖಾಡಂಬರಾಸ್ತಥಾ।
04067026c ಪಾರ್ಥೈಃ ಸಮ್ಯುಜ್ಯಮಾನಸ್ಯ ನೇದುರ್ಮತ್ಸ್ಯಸ್ಯ ವೇಶ್ಮನಿ।।
ಪಾಂಡವರ ನಂಟುಗೊಂಡ ಮತ್ಸ್ಯರಾಜನ ಅರಮನೆಯಲ್ಲಿ ಶಂಖಗಳೂ ಭೇರಿಗಳೂ ಗೋಮುಖಾಡಂಬರ ವಾದ್ಯಗಳೂ ಮೊಳಗಿದವು.
04067027a ಉಚ್ಚಾವಚಾನ್ಮೃಗಾಂ ಜಘ್ನುರ್ಮೇಧ್ಯಾಂಶ್ಚ ಶತಶಃ ಪಶೂನ್।
04067027c ಸುರಾಮೈರೇಯಪಾನಾನಿ ಪ್ರಭೂತಾನ್ಯಭ್ಯಹಾರಯನ್।।
ಬಗೆಬಗೆಯ ಜಿಂಕೆಗಳನ್ನೂ, ನೂರಾರು ತಿನ್ನಲು ಯೋಗ್ಯ ಪ್ರಾಣಿಗಳನ್ನೂ ಕೊಂದರು. ಸುರೆ ಮತ್ತು ಮೈನೇರ ಪಾನೀಯಗಳನ್ನು ಸಮೃದ್ಧವಾಗಿ ಸೇವಿಸಿದರು.
04067028a ಗಾಯನಾಖ್ಯಾನಶೀಲಾಶ್ಚ ನಟಾ ವೈತಾಲಿಕಾಸ್ತಥಾ।
04067028c ಸ್ತುವಂತಸ್ತಾನುಪಾತಿಷ್ಠನ್ಸೂತಾಶ್ಚ ಸಹ ಮಾಗಧೈಃ।।
ಗಾಯನ ಆಖ್ಯಾನಗಳಲ್ಲಿ ಪರಿಣಿತ ನಟರೂ, ವೈತಾಳಿಕರೂ, ಸೂತರೂ, ಮಾಗಧರೂ ಆ ರಾಜರನ್ನು ಹೊಗಳುತ್ತಾ ಅಲ್ಲಿಗೆ ಬಂದರು.
04067029a ಸುದೇಷ್ಣಾಂ ಚ ಪುರಸ್ಕೃತ್ಯ ಮತ್ಸ್ಯಾನಾಂ ಚ ವರಸ್ತ್ರಿಯಃ।
04067029c ಆಜಗ್ಮುಶ್ಚಾರುಸರ್ವಾಂಗ್ಯಃ ಸುಮೃಷ್ಟಮಣಿಕುಂಡಲಾಃ।।
ಶ್ರೇಷ್ಠ ಮತ್ತು ಸರ್ವಾಂಗಸುಂದರಿಯರಾದ ಮತ್ಸ್ಯರಾಜನ ಸ್ತ್ರೀಯರು ಮಿರುಗುವ ಮಣಿಕುಂಡಲಗಳನ್ನು ಧರಿಸಿ ಸುದೇಷ್ಣೆಯನ್ನು ಮುಂದಿಟ್ಟುಕೊಂಡು ವಿವಾಹ ಮಂಟಪಕ್ಕೆ ಬಂದರು.
04067030a ವರ್ಣೋಪಪನ್ನಾಸ್ತಾ ನಾರ್ಯೋ ರೂಪವತ್ಯಃ ಸ್ವಲಂಕೃತಾಃ।
04067030c ಸರ್ವಾಶ್ಚಾಭ್ಯಭವತ್ಕೃಷ್ಣಾ ರೂಪೇಣ ಯಶಸಾ ಶ್ರಿಯಾ।।
ಚೆನ್ನಾಗಿ ಅಲಂಕರಿಸಿಕೊಂಡಿದ್ದ, ಒಳ್ಳೆಯ ಬಣ್ಣ ಮತ್ತು ರೂಪದಿಂದ ಕೂಡಿದ ಆ ಹೆಂಗಸರನೆಲ್ಲ ದ್ರೌಪದಿಯು ರೂಪ ಕೀರ್ತಿ ಕಾಂತಿಗಳಲ್ಲಿ ಮೀರಿಸಿದ್ದಳು.
04067031a ಪರಿವಾರ್ಯೋತ್ತರಾಂ ತಾಸ್ತು ರಾಜಪುತ್ರೀಮಲಂಕೃತಾಂ।
04067031c ಸುತಾಮಿವ ಮಹೇಂದ್ರಸ್ಯ ಪುರಸ್ಕೃತ್ಯೋಪತಸ್ಥಿರೇ।।
ಅವರು ಮಹೇಂದ್ರನ ಮಗಳನ್ನೆಂತೋ ಅಂತೆ ಅಲಂಕೃತೆಯಾಗಿದ್ದ ರಾಜಪುತ್ರಿ ಉತ್ತರೆಯನ್ನು ಸುತ್ತುವರೆದು ಮುಂದಿಟ್ಟುಕೊಂಡು ಅಲ್ಲಿಗೆ ಬಂದರು.
04067032a ತಾಂ ಪ್ರತ್ಯಗೃಹ್ಣಾತ್ಕೌಂತೇಯಃ ಸುತಸ್ಯಾರ್ಥೇ ಧನಂಜಯಃ।
04067032c ಸೌಭದ್ರಸ್ಯಾನವದ್ಯಾಂಗೀಂ ವಿರಾಟತನಯಾಂ ತದಾ।।
ಆಗ ಕುಂತೀಪುತ್ರ ಧನಂಜಯನು ಆ ಸುಂದರಿ ಉತ್ತರೆಯನ್ನು ಸುಭದ್ರೆಯ ಮಗನಿಗಾಗಿ ಸ್ವೀಕರಿಸಿದನು.
04067033a ತತ್ರಾತಿಷ್ಠನ್ಮಹಾರಾಜೋ ರೂಪಮಿಂದ್ರಸ್ಯ ಧಾರಯನ್।
04067033c ಸ್ನುಷಾಂ ತಾಂ ಪ್ರತಿಜಗ್ರಾಹ ಕುಂತೀಪುತ್ರೋ ಯುಧಿಷ್ಠಿರಃ।।
ಇಂದ್ರನ ರೂಪವನ್ನು ಮೆರೆಯುತ್ತ ಅಲ್ಲಿದ್ದ ಕುಂತೀಪುತ್ರ ಮಹಾರಾಜ ಯುಧಿಷ್ಠಿರನು ಅವಳನ್ನು ಸೊಸೆಯಾಗಿ ಸ್ವೀಕರಿಸಿದನು.
04067034a ಪ್ರತಿಗೃಹ್ಯ ಚ ತಾಂ ಪಾರ್ಥಃ ಪುರಸ್ಕೃತ್ಯ ಜನಾರ್ದನಂ।
04067034c ವಿವಾಹಂ ಕಾರಯಾಮಾಸ ಸೌಭದ್ರಸ್ಯ ಮಹಾತ್ಮನಃ।।
ಯುಧಿಷ್ಠಿರನು ಕೃಷ್ಣನ್ನು ಮುಂದಿಟ್ಟುಕೊಂಡು ಅವಳನ್ನು ಸ್ವೀಕರಿಸಿ ಮಹಾತ್ಮ ಅಭಿಮನ್ಯುವಿನ ಮದುವೆಯನ್ನು ನೆರವೇರಿಸಿದನು.
04067035a ತಸ್ಮೈ ಸಪ್ತ ಸಹಸ್ರಾಣಿ ಹಯಾನಾಂ ವಾತರಂಹಸಾಂ।
04067035c ದ್ವೇ ಚ ನಾಗಶತೇ ಮುಖ್ಯೇ ಪ್ರಾದಾದ್ಬಹು ಧನಂ ತದಾ।।
ಆಗ ವಿರಾಟನು ಅವನಿಗೆ ವಾಯುವೇಗವುಳ್ಳ ಏಳು ಸಾವಿರ ಕುದುರೆಗಳನ್ನೂ, ಇನ್ನೂರು ಉತ್ತಮ ಆನೆಗಳನ್ನೂ, ಬಹಳ ಧನವನ್ನೂ ಕೊಟ್ಟನು.
04067036a ಕೃತೇ ವಿವಾಹೇ ತು ತದಾ ಧರ್ಮಪುತ್ರೋ ಯುಧಿಷ್ಠಿರಃ।
04067036c ಬ್ರಾಹ್ಮಣೇಭ್ಯೋ ದದೌ ವಿತ್ತಂ ಯದುಪಾಹರದಚ್ಯುತಃ।।
04067037a ಗೋಸಹಸ್ರಾಣಿ ರತ್ನಾನಿ ವಸ್ತ್ರಾಣಿ ವಿವಿಧಾನಿ ಚ।
04067037c ಭೂಷಣಾನಿ ಚ ಮುಖ್ಯಾನಿ ಯಾನಾನಿ ಶಯನಾನಿ ಚ।।
ವಿವಾಹದ ಬಳಿಕ ಧರ್ಮಪುತ್ರ ಯುಧಿಷ್ಠಿರನು ಕೃಷ್ಣನು ತಂದಿದ್ದ ಐಶ್ವರ್ಯವನ್ನೂ, ಸಾವಿರ ಗೋವುಗಳನ್ನೂ, ರತ್ನಗಳನ್ನೂ, ವಿವಿಧ ವಸ್ತ್ರಗಳನ್ನೂ, ಶ್ರೇಷ್ಠ ಆಭರಣಗಳನ್ನೂ, ವಾಹನ ಶಯನಗಳನ್ನೂ ಬ್ರಾಹ್ಮಣರಿಗಿತ್ತನು.
04067038a ತನ್ಮಹೋತ್ಸವಸಂಕಾಶಂ ಹೃಷ್ಟಪುಷ್ಟಜನಾವೃತಂ।
04067038c ನಗರಂ ಮತ್ಸ್ಯರಾಜಸ್ಯ ಶುಶುಭೇ ಭರತರ್ಷಭ।।
ಭರತರ್ಷಭ! ಹರ್ಷಿತರೂ ಪುಷ್ಟರೂ ಆದ ಜನರಿಂದ ತುಂಬಿದ ಆ ಮತ್ಸ್ಯರಾಜನ ನಗರಿಯು ಮಹೋತ್ಸವ ಸದೃಶವಾಗಿ ತೋರಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ವೈವಾಹಿಕ ಪರ್ವಣಿ ಉತ್ತರಾವಿವಾಹೇ ಸಪ್ತಷಷ್ಟಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ವೈವಾಹಿಕ ಪರ್ವದಲ್ಲಿ ಉತ್ತರಾವಿವಾಹದಲ್ಲಿ ಅರವತ್ತೇಳನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವೇ ವೈವಾಹಿಕ ಪರ್ವ ಸಮಾಪ್ತಿಃ।।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ವೈವಾಹಿಕ ಪರ್ವದ ಸಮಾಪ್ತಿ.
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವ ಸಮಾಪ್ತಿಃ।।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದ ಸಮಾಪ್ತಿ.
ಇದೂವರೆಗಿನ ಒಟ್ಟು ಮಹಾಪರ್ವಗಳು-4/18, ಉಪಪರ್ವಗಳು-48/100, ಅಧ್ಯಾಯಗಳು-663/1995, ಶ್ಲೋಕಗಳು-21218/73784.