ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ವಿರಾಟ ಪರ್ವ
ವೈವಾಹಿಕ ಪರ್ವ
ಅಧ್ಯಾಯ 66
ಸಾರ
ಯುಧಿಷ್ಠಿರನ ಸಹೋದರರೆಲ್ಲೆಂದು ವಿರಾಟನು ಕೇಳಲು ಅರ್ಜುನನು ಇತರರನ್ನೂ ವಿರಾಟನಿಗೆ ಪರಿಚಯಿಸುವುದು (1-10). ಉತ್ತರನು ಅರ್ಜುನನ ಪರಾಕ್ರಮವನ್ನು ವರ್ಣಿಸಿದುದು (11-20). ವಿರಾಟನು ಪಾಂಡವರನ್ನು ಗೌರವಿಸಿ, ಮಗಳು ಉತ್ತರೆಯನ್ನು ಅರ್ಜುನನು ಪತ್ನಿಯನ್ನಾಗಿ ಸ್ವೀಕರಿಸಬೇಕೆಂದು ಕೇಳಿಕೊಳ್ಳಲು ಅರ್ಜುನನು ಅವಳನ್ನು ತನ್ನ ಸೊಸೆಯನ್ನಾಗಿ ಸ್ವೀಕರಿಸುವೆನೆಂದು ಹೇಳಿದುದು (21-29).
04066001 ವಿರಾಟ ಉವಾಚ।
04066001a ಯದ್ಯೇಷ ರಾಜಾ ಕೌರವ್ಯಃ ಕುಂತೀಪುತ್ರೋ ಯುಧಿಷ್ಠಿರಃ।
04066001c ಕತಮೋಽಸ್ಯಾರ್ಜುನೋ ಭ್ರಾತಾ ಭೀಮಶ್ಚ ಕತಮೋ ಬಲೀ।।
ವಿರಾಟನು ಹೇಳಿದನು: “ಇವನು ಕುರುವಂಶಕ್ಕೆ ಸೇರಿದ ಕುಂತೀಪುತ್ರ ಯುಧಿಷ್ಠಿರ ರಾಜನಾಗಿದ್ದರೆ ಇವನ ಸೋದರ ಅರ್ಜುನನೆಲ್ಲಿ? ಬಲಶಾಲಿ ಭೀಮನೆಲ್ಲಿ?
04066002a ನಕುಲಃ ಸಹದೇವೋ ವಾ ದ್ರೌಪದೀ ವಾ ಯಶಸ್ವಿನೀ।
04066002c ಯದಾ ದ್ಯೂತೇ ಜಿತಾಃ ಪಾರ್ಥಾ ನ ಪ್ರಾಜ್ಞಾಯಂತ ತೇ ಕ್ವ ಚಿತ್।।
ನಕುಲ ಸಹದೇವರೆಲ್ಲಿ? ಯಶಸ್ವಿನಿ ದ್ರೌಪದಿಯೆಲ್ಲಿ? ಜೂಜಿನಲ್ಲಿ ಸೋತಮೇಲೆ ಆ ಕುಂತೀಪುತ್ರರ ವಿಷಯವನ್ನು ಯಾರೂ ಎಲ್ಲೂ ಅರಿಯರು.”
04066003 ಅರ್ಜುನ ಉವಾಚ।
04066003a ಯ ಏಷ ಬಲ್ಲವೋ ಬ್ರೂತೇ ಸೂದಸ್ತವ ನರಾಧಿಪ।
04066003c ಏಷ ಭೀಮೋ ಮಹಾಬಾಹುರ್ಭೀಮವೇಗಪರಾಕ್ರಮಃ।।
ಅರ್ಜುನನು ಹೇಳಿದನು: “ರಾಜನ್! ನಿನ್ನ ಅಡುಗೆಯವನೆಂದು ಹೇಳಲಾಗಿರುವ ಬಲ್ಲವನೆಂಬುವವನೇ ಮಹಾಬಾಹು, ಭಯಂಕರ ವೇಗ-ಪರಾಕ್ರಮಗಳನ್ನುಳ್ಳ ಭೀಮ.
04066004a ಏಷ ಕ್ರೋಧವಶಾನ್ ಹತ್ವಾ ಪರ್ವತೇ ಗಂಧಮಾದನೇ।
04066004c ಸೌಗಂಧಿಕಾನಿ ದಿವ್ಯಾನಿ ಕೃಷ್ಣಾರ್ಥೇ ಸಮುಪಾಹರತ್।।
ಗಂಧಮಾದನ ಪರ್ವತದಲ್ಲಿ ಕೋಪವಶನಾಗಿ ರಾಕ್ಷಸರನ್ನು ಕೊಂದು ದ್ರೌಪದಿಗಾಗಿ ದಿವ್ಯ ಸೌಗಂಧಿಕ ಪುಷ್ಪಗಳನ್ನು ತಂದವನು ಇವನೇ.
04066005a ಗಂಧರ್ವ ಏಷ ವೈ ಹಂತಾ ಕೀಚಕಾನಾಂ ದುರಾತ್ಮನಾಂ।
04066005c ವ್ಯಾಘ್ರಾನೃಕ್ಷಾನ್ವರಾಹಾಂಶ್ಚ ಹತವಾನ್ ಸ್ತ್ರೀಪುರೇ ತವ।।
ದುರಾತ್ಮ ಕೀಚಕನನ್ನು ಕೊಂದ ಗಂಧರ್ವನು ಇವನೇ. ನಿನ್ನ ಅಂತಃಪುರದಲ್ಲಿ ಹುಲಿ, ಕರಡಿ, ಹಂದಿಗಳನ್ನು ಕೊಂದವನೂ ಇವನೇ.
04066006a ಯಶ್ಚಾಸೀದಶ್ವಬಂಧಸ್ತೇ ನಕುಲೋಽಯಂ ಪರಂತಪಃ।
04066006c ಗೋಸಂಖ್ಯಃ ಸಹದೇವಶ್ಚ ಮಾದ್ರೀಪುತ್ರೌ ಮಹಾರಥೌ।।
ನಿನ್ನ ಅಶ್ವಪಾಲಕನಾಗಿದ್ದವನು ಈ ಶತ್ರುನಾಶಕ ನಕುಲ. ಗೋಪಾಲಕನಾಗಿದ್ದವನು ಸಹದೇವ. ಈ ಮಾದ್ರಿ ಪುತ್ರರು ಮಹಾಥರು.
04066007a ಶೃಂಗಾರವೇಷಾಭರಣೌ ರೂಪವಂತೌ ಯಶಸ್ವಿನೌ।
04066007c ನಾನಾರಥಸಹಸ್ರಾಣಾಂ ಸಮರ್ಥೌ ಪುರುಷರ್ಷಭೌ।।
ಈ ಪುರುಷಶ್ರೇಷ್ಠರಿಬ್ಬರೂ ವಸ್ತ್ರಾಭರಣಗಳಿಂದ ಅಲಂಕೃತರು. ರೂಪವಂತರು. ಯುಶಸ್ವಿಗಳು. ಸಾವಿರಾರು ಮಂದಿ ರಥಿಕರ ಸಮಾನ ಶಕ್ತಿಯುಳ್ಳವರು.
04066008a ಏಷಾ ಪದ್ಮಪಲಾಶಾಕ್ಷೀ ಸುಮಧ್ಯಾ ಚಾರುಹಾಸಿನೀ।
04066008c ಸೈರಂಧ್ರೀ ದ್ರೌಪದೀ ರಾಜನ್ಯತ್ಕೃತೇ ಕೀಚಕಾ ಹತಾಃ।।
ರಾಜನ್! ಕಮಲದ ಎಸಳುಗಳಂತೆ ಕಣ್ಣುಳ್ಳವಳೂ, ಸುಂದರ ನಡುವುಳ್ಳವಳೂ, ಮಧುರ ಮುಗುಳ್ನಗೆಯುಳ್ಳವಳೂ ಆದ ಈ ಸೈರಂಧ್ರಿಯೇ ದ್ರೌಪದಿ. ಇವಳಿಗಾಗಿಯೇ ಕೀಚಕರು ಹತರಾದರು.
04066009a ಅರ್ಜುನೋಽಹಂ ಮಹಾರಾಜ ವ್ಯಕ್ತಂ ತೇ ಶ್ರೋತ್ರಮಾಗತಃ।
04066009c ಭೀಮಾದವರಜಃ ಪಾರ್ಥೋ ಯಮಾಭ್ಯಾಂ ಚಾಪಿ ಪೂರ್ವಜಃ।।
ಮಹಾರಾಜ! ನಾನೇ ಅರ್ಜುನ. ನನ್ನ ವಿಷಯ ಈಗಾಗಲೇ ನಿನ್ನ ಕಿವಿಗೆ ಬಿದ್ದಿದೆಯಷ್ಟೇ? ನಾನು ಭೀಮನಿಗೆ ಕಿರಿಯನಾದ ಪಾರ್ಥ. ಯಮಳರಿಗೆ ಹಿರಿಯನು.
04066010a ಉಷಿತಾಃ ಸ್ಮ ಮಹಾರಾಜ ಸುಖಂ ತವ ನಿವೇಶನೇ।
04066010c ಅಜ್ಞಾತವಾಸಮುಷಿತಾ ಗರ್ಭವಾಸ ಇವ ಪ್ರಜಾಃ।।
ಮಹಾರಾಜ! ಮಕ್ಕಳು ಗರ್ಭವಾಸವನ್ನು ಕಳೆಯುವಂತೆ ನಾವು ನಿನ್ನ ಅರಮನೆಯಲ್ಲಿ ಸುಖವಾಗಿ ಅಜ್ಞಾತವಾಸವನ್ನು ಕಳೆದೆವು.””
04066011 ವೈಶಂಪಾಯನ ಉವಾಚ।
04066011a ಯದಾರ್ಜುನೇನ ತೇ ವೀರಾಃ ಕಥಿತಾಃ ಪಂಚ ಪಾಂಡವಾಃ।
04066011c ತದಾರ್ಜುನಸ್ಯ ವೈರಾಟಿಃ ಕಥಯಾಮಾಸ ವಿಕ್ರಮಂ।।
ವೈಶಂಪಾಯನನು ಹೇಳಿದನು: “ಆ ವೀರರು ಪಂಚ ಪಾಂಡವರೆಂದು ಅರ್ಜುನನು ವಿವರಿಸಿದ ನಂತರ ವಿರಾಟಪುತ್ರನು ಅರ್ಜುನನ ಪರಾಕ್ರಮವನ್ನು ವರ್ಣಿಸಿದನು.
04066012a ಅಯಂ ಸ ದ್ವಿಷತಾಂ ಮಧ್ಯೇ ಮೃಗಾಣಾಮಿವ ಕೇಸರೀ।
04066012c ಅಚರದ್ರಥವೃಂದೇಷು ನಿಘ್ನಂಸ್ತೇಷಾಂ ವರಾನ್ವರಾನ್।।
“ಇವನು ಜಿಂಕೆಗಳ ನಡುವೆ ಸಿಂಹದಂತೆ ಅವರಲ್ಲಿ ಮುಖ್ಯ ಮುಖ್ಯರಾದವರನ್ನೆಲ್ಲ ಕೊಲ್ಲುತ್ತ ವೈರಿಗಳ ರಥಸಮೂಹಗಳ ನಡುವೆ ಸಂಚರಿದನು.
04066013a ಅನೇನ ವಿದ್ಧೋ ಮಾತಂಗೋ ಮಹಾನೇಕೇಷುಣಾ ಹತಃ।
04066013c ಹಿರಣ್ಯಕಕ್ಷ್ಯಃ ಸಂಗ್ರಾಮೇ ದಂತಾಭ್ಯಾಮಗಮನ್ಮಹೀಂ।।
ಇವನು ದೊಡ್ಡ ಆನೆಯೊಂದನ್ನು ಯುದ್ಧದಲ್ಲಿ ಒಂದೇ ಬಾಣದಿಂದ ಹೊಡೆದು ಕೊಂದನು. ಸುವರ್ಣಾಲಂಕೃತ ಗವಸಣಿಗೆಗಳಿಂದ ಕೂಡಿದ ಆ ಅನೆಯು ದಂತಗಳನ್ನೂರಿ ನೆಲಕ್ಕೊರಗಿತು.
04066014a ಅನೇನ ವಿಜಿತಾ ಗಾವೋ ಜಿತಾಶ್ಚ ಕುರವೋ ಯುಧಿ।
04066014c ಅಸ್ಯ ಶಂಖಪ್ರಣಾದೇನ ಕರ್ಣೌ ಮೇ ಬಧಿರೀಕೃತೌ।।
ಇವನು ಹಸುಗಳನ್ನು ಗೆದ್ದನು. ಯುದ್ಧದಲ್ಲಿ ಕೌರವರನ್ನು ಗೆದ್ದನು. ಇವನ ಶಂಖಧ್ವನಿಯಿಂದ ನನ್ನ ಕಿವಿಗಳು ಕಿವುಡಾಗಿಹೋದವು.”
04066015a ತಸ್ಯ ತದ್ವಚನಂ ಶ್ರುತ್ವಾ ಮತ್ಸ್ಯರಾಜಃ ಪ್ರತಾಪವಾನ್।
04066015c ಉತ್ತರಂ ಪ್ರತ್ಯುವಾಚೇದಮಭಿಪನ್ನೋ ಯುಧಿಷ್ಠಿರೇ।।
ಅವನ ಆ ಮಾತನ್ನು ಕೇಳಿ ಯುಧಿಷ್ಠಿರನ ವಿಷಯದಲ್ಲಿ ತಪ್ಪುಮಾಡಿದ ಪ್ರತಾಪಶಾಲಿ ಮತ್ಸ್ಯರಾಜನು ಉತ್ತರನಿಗೆ ಮರುನುಡಿದನು.
04066016a ಪ್ರಸಾದನಂ ಪಾಂಡವಸ್ಯ ಪ್ರಾಪ್ತಕಾಲಂ ಹಿ ರೋಚಯೇ।
04066016c ಉತ್ತರಾಂ ಚ ಪ್ರಯಚ್ಛಾಮಿ ಪಾರ್ಥಾಯ ಯದಿ ತೇ ಮತಂ।।
“ಪಾಂಡುಪುತ್ರನನ್ನು ಪ್ರಸನ್ನನಾಗಿಸಲು ಸಮಯ ಒದಗಿದೆಯೆಂದು ಭಾವಿಸುತ್ತೇನೆ. ನಿನಗೆ ಒಪ್ಪಿಗೆಯಾದರೆ ಪಾರ್ಥನಿಗೆ ಉತ್ತರೆಯನ್ನು ಕೊಡುತ್ತೇನೆ.”
04066017 ಉತ್ತರ ಉವಾಚ।
04066017a ಅರ್ಚ್ಯಾಃ ಪೂಜ್ಯಾಶ್ಚ ಮಾನ್ಯಾಶ್ಚ ಪ್ರಾಪ್ತಕಾಲಂ ಚ ಮೇ ಮತಂ।
04066017c ಪೂಜ್ಯಂತಾಂ ಪೂಜನಾರ್ಹಾಶ್ಚ ಮಹಾಭಾಗಾಶ್ಚ ಪಾಂಡವಾಃ।।
ಉತ್ತರನು ಹೇಳಿದನು: “ಪಾಂಡವರು ಪೂಜ್ಯರು. ಮಾನ್ಯರು. ಅವರನ್ನು ಗೌರವಿಸುವ ಕಾಲ ಒದಗಿಬಂದಿದೆಯೆಂದು ನನ್ನ ಅಭಿಪ್ರಾಯ. ಪೂಜಾಯೋಗ್ಯರೂ ಮಹಾಭಾಗ್ಯಶಾಲಿಗಳೂ ಆದ ಪಾಂಡವರು ಸತ್ಕಾರಗೊಳ್ಳಲಿ.”
04066018 ವಿರಾಟ ಉವಾಚ।
04066018a ಅಹಂ ಖಲ್ವಪಿ ಸಂಗ್ರಾಮೇ ಶತ್ರೂಣಾಂ ವಶಮಾಗತಃ।
04066018c ಮೋಕ್ಷಿತೋ ಭೀಮಸೇನೇನ ಗಾವಶ್ಚ ವಿಜಿತಾಸ್ತಥಾ।।
ವಿರಾಟನು ಹೇಳಿದನು: “ಯುದ್ಧದಲ್ಲಿ ಶತ್ರುಗಳಿಗೆ ವಶನಾದ ನನ್ನನ್ನು ಭೀಮಸೇನನು ಬಿಡಿಸಿದನು. ಅಂತೆಯೇ ಹಸುಗಳನ್ನು ಗೆದ್ದನು.
04066019a ಏತೇಷಾಂ ಬಾಹುವೀರ್ಯೇಣ ಯದಸ್ಮಾಕಂ ಜಯೋ ಮೃಧೇ।
04066019c ವಯಂ ಸರ್ವೇ ಸಹಾಮಾತ್ಯಾಃ ಕುಂತೀಪುತ್ರಂ ಯುಧಿಷ್ಠಿರಂ।
04066019e ಪ್ರಸಾದಯಾಮೋ ಭದ್ರಂ ತೇ ಸಾನುಜಂ ಪಾಂಡವರ್ಷಭಂ।।
ಇವನ ಬಾಹುಬಲದಿಂದ ನಮಗೆ ಯುದ್ಧದಲ್ಲಿ ಜಯವುಂಟಾಗಿದೆ. ನಾವೆಲ್ಲರೂ ಸಚಿವರೊಡನೆ ತಮ್ಮಂದಿರೊಡಗೂಡಿದ ಕುಂತೀಪುತ್ರ ಪಾಂಡವಶ್ರೇಷ್ಠ ಯುಧಿಷ್ಠಿರನನ್ನು ಪ್ರಸನ್ನಗೊಳಿಸೋಣ.
04066020a ಯದಸ್ಮಾಭಿರಜಾನದ್ಭಿಃ ಕಿಂ ಚಿದುಕ್ತೋ ನರಾಧಿಪಃ।
04066020c ಕ್ಷಂತುಮರ್ಹತಿ ತತ್ಸರ್ವಂ ಧರ್ಮಾತ್ಮಾ ಹ್ಯೇಷ ಪಾಂಡವಃ।।
ನಾವು ತಿಳಿಯದಂತೆ ಏನನ್ನಾದರೂ ಆಡಿದ್ದರೆ ಈ ರಾಜನು ಅವೆಲ್ಲವನ್ನೂ ಕ್ಷಮಿಸಬೇಕು. ಏಕೆಂದರೆ ಪಾಂಡುಪುತ್ರನು ಧರ್ಮಾತ್ಮನು.””
04066021 ವೈಶಂಪಾಯನ ಉವಾಚ।
04066021a ತತೋ ವಿರಾಟಃ ಪರಮಾಭಿತುಷ್ಟಃ। ಸಮೇತ್ಯ ರಾಜ್ಞಾ ಸಮಯಂ ಚಕಾರ।
04066021c ರಾಜ್ಯಂ ಚ ಸರ್ವಂ ವಿಸಸರ್ಜ ತಸ್ಮೈ। ಸದಂಡಕೋಶಂ ಸಪುರಂ ಮಹಾತ್ಮಾ।।
ವೈಶಂಪಾಯನನು ಹೇಳಿದನು: “ಅನಂತರ ವಿರಾಟನು ಬಹಳ ಸಂತೋಷಗೊಂಡು ಆ ರಾಜನ ಬಳಿ ಹೋಗಿ ಒಪ್ಪಂದ ಮಾಡಿಕೊಂಡನು. ಸೇನೆ, ಕೋಶ, ಪುರಸಹಿತವಾಗಿ ರಾಜ್ಯವನ್ನೆಲ್ಲ ಆ ಮಹಾತ್ಮನು ಯುಧಿಷ್ಠಿರನಿಗೆ ಬಿಟ್ಟುಕೊಟ್ಟನು.
04066022a ಪಾಂಡವಾಂಶ್ಚ ತತಃ ಸರ್ವಾನ್ಮತ್ಸ್ಯರಾಜಃ ಪ್ರತಾಪವಾನ್।
04066022c ಧನಂಜಯಂ ಪುರಸ್ಕೃತ್ಯ ದಿಷ್ಟ್ಯಾ ದಿಷ್ಟ್ಯೇತಿ ಚಾಬ್ರವೀತ್।।
ಆಗ ಆ ಪ್ರತಾಪಶಾಲಿ ಮತ್ಸ್ಯರಾಜನು ಧನಂಜಯನನ್ನು ವಿಶೇಷವಾಗಿ ಪುರಸ್ಕರಿಸುತ್ತಾ ಎಲ್ಲ ಪಾಂಡವರಿಗೆ “ನನ್ನ ಅದೃಷ್ಟ! ಅದೃಷ್ಟ!” ಎಂದನು.
04066023a ಸಮುಪಾಘ್ರಾಯ ಮೂರ್ಧಾನಂ ಸಂಶ್ಲಿಷ್ಯ ಚ ಪುನಃ ಪುನಃ।
04066023c ಯುಧಿಷ್ಠಿರಂ ಚ ಭೀಮಂ ಚ ಮಾದ್ರೀಪುತ್ರೌ ಚ ಪಾಂಡವೌ।।
ಅವನು ಯುಧಿಷ್ಠಿರ, ಭೀಮ, ಮತ್ತು ಪಾಂಡವ ಮಾದ್ರೀಪುತ್ರರ ನೆತ್ತಿಯನ್ನು ಮೂಸಿ ಮತ್ತೆ ಮತ್ತೆ ಆಲಂಗಿಸಿದನು.
04066024a ನಾತೃಪ್ಯದ್ದರ್ಶನೇ ತೇಷಾಂ ವಿರಾಟೋ ವಾಹಿನೀಪತಿಃ।
04066024c ಸಂಪ್ರೀಯಮಾಣೋ ರಾಜಾನಂ ಯುಧಿಷ್ಠಿರಮಥಾಬ್ರವೀತ್।।
ಸೇನಾಪತಿ ವಿರಾಟನು ಅವರ ದರ್ಶನದಿಂದ ತೃಪ್ತನಾಗದೇ ಪ್ರೀತಿಯಿಂದ ರಾಜ ಯುಧಿಷ್ಠಿರನಿಗೆ ನುಡಿದನು:
04066025a ದಿಷ್ಟ್ಯಾ ಭವಂತಃ ಸಂಪ್ರಾಪ್ತಾಃ ಸರ್ವೇ ಕುಶಲಿನೋ ವನಾತ್।
04066025c ದಿಷ್ಟ್ಯಾ ಚ ಪಾರಿತಂ ಕೃಚ್ಛ್ರಮಜ್ಞಾತಂ ವೈ ದುರಾತ್ಮಭಿಃ।।
“ನೀವೆಲ್ಲರೂ ದೈವವಶಾತ್ ಕಾಡಿನಿಂದ ಕ್ಷೇಮವಾಗಿ ಬಂದಿರಿ. ಆ ದುರಾತ್ಮರಿಗೆ ಗೊತ್ತಾಗದಂತೆ ಭಾಗ್ಯವಶಾತ್ ಕಷ್ಟಕರ ಅಜ್ಞಾತವಾಸವನ್ನು ಕಳೆದಿರಿ.
04066026a ಇದಂ ಚ ರಾಜ್ಯಂ ನಃ ಪಾರ್ಥಾ ಯಚ್ಚಾನ್ಯದ್ವಸು ಕಿಂ ಚನ।
04066026c ಪ್ರತಿಗೃಹ್ಣಂತು ತತ್ಸರ್ವಂ ಕೌಂತೇಯಾ ಅವಿಶಂಕಯಾ।।
ಪಾಂಡವರೇ! ನನ್ನ ರಾಜ್ಯ ಮತ್ತು ಇತರ ಐಶ್ವರ್ಯವೆಲ್ಲವನ್ನೂ ನೀವು ಯಾವುದೇ ಶಂಕೆಯಿಲ್ಲದೇ ಸ್ವೀಕರಿಸಿ.
04066027a ಉತ್ತರಾಂ ಪ್ರತಿಗೃಹ್ಣಾತು ಸವ್ಯಸಾಚೀ ಧನಂಜಯಃ।
04066027c ಅಯಂ ಹ್ಯೌಪಯಿಕೋ ಭರ್ತಾ ತಸ್ಯಾಃ ಪುರುಷಸತ್ತಮಃ।।
ಸವ್ಯಸಾಚೀ ಧನಂಜಯನು ಉತ್ತರೆಯನ್ನು ಸ್ವೀಕರಿಸಲಿ. ಆ ಪುರುಷಶ್ರೇಷ್ಠನು ಅವಳಿಗೆ ಪತಿಯಾಗಲು ತಕ್ಕವನು.”
04066028a ಏವಮುಕ್ತೋ ಧರ್ಮರಾಜಃ ಪಾರ್ಥಮೈಕ್ಷದ್ಧನಂಜಯಂ।
04066028c ಈಕ್ಷಿತಶ್ಚಾರ್ಜುನೋ ಭ್ರಾತ್ರಾ ಮತ್ಸ್ಯಂ ವಚನಮಬ್ರವೀತ್।।
ವಿರಾಟನು ಹೀಗೆ ಹೇಳಲು ಧರ್ಮರಾಜನು ಕುಂತೀಪುತ್ರ ಧನಂಜಯನನ್ನು ನೋಡಿದನು. ಅಣ್ಣನು ನೋಡಿದಾಗ ಅರ್ಜುನನು ಮತ್ಸ್ಯರಾಜನಿಗೆ ಹೇಳಿದನು:
04066029a ಪ್ರತಿಗೃಹ್ಣಾಮ್ಯಹಂ ರಾಜನ್ ಸ್ನುಷಾಂ ದುಹಿತರಂ ತವ।
04066029c ಯುಕ್ತಶ್ಚಾವಾಂ ಹಿ ಸಂಬಂಧೋ ಮತ್ಸ್ಯಭಾರತಸತ್ತಮೌ।।
“ರಾಜನ್! ನಿನ್ನ ಮಗಳನ್ನು ಸೊಸೆಯನ್ನಾಗಿ ನಾನು ಸ್ವೀಕರಿಸುತ್ತೇನೆ. ಭಾರತವಂಶದ ಶ್ರೇಷ್ಠರಾದ ನಮಗೆ ಮತ್ಸ್ಯವಂಶದ ಈ ಸಂಬಂಧವು ಉಚಿತವೇ ಸರಿ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ವೈವಾಹಿಕ ಪರ್ವಣಿ ಉತ್ತರಾವಿವಾಹಪ್ರಸ್ತಾನೇ ಷಟ್ಷಷ್ಟಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ವೈವಾಹಿಕ ಪರ್ವದಲ್ಲಿ ಉತ್ತರಾವಿವಾಹಪ್ರಸ್ತಾನದಲ್ಲಿ ಅರವತ್ತಾರನೆಯ ಅಧ್ಯಾಯವು.