065 ಪಾಂಡವಪ್ರಕಾಶಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ವೈವಾಹಿಕ ಪರ್ವ

ಅಧ್ಯಾಯ 65

ಸಾರ

ನಿಗದಿತ ಕಾಲದಲ್ಲಿ ಪ್ರತಿಜ್ಞೆ ಪೂರೈಸಿದ ಐವರು ಪಾಂಡವರು ಮೂರನೆಯ ದಿವಸ ವಿರಾಟನ ಆಸ್ಥಾನದಲ್ಲಿ ರಾಜಾಸನಗಳಲ್ಲಿ ಕುಳಿತುಕೊಂಡಿರಲು ಆಸ್ಥಾನವನ್ನು ಪ್ರವೇಶಿಸಿದ ವಿರಾಟನು ಕಾರಣವನ್ನು ಕೇಳಿದುದು (1-6). ಆಗ ಅರ್ಜುನನು ವಿರಾಟನಿಗೆ ಯುಧಿಷ್ಠಿರನ ಪರಿಚಯ ಮಾಡಿಸಿಕೊಡುವುದು (7-21).

04065001 ವೈಶಂಪಾಯನ ಉವಾಚ।
04065001a ತತಸ್ತೃತೀಯೇ ದಿವಸೇ ಭ್ರಾತರಃ ಪಂಚ ಪಾಂಡವಾಃ।
04065001c ಸ್ನಾತಾಃ ಶುಕ್ಲಾಂಬರಧರಾಃ ಸಮಯೇ ಚರಿತವ್ರತಾಃ।।
04065002a ಯುಧಿಷ್ಠಿರಂ ಪುರಸ್ಕೃತ್ಯ ಸರ್ವಾಭರಣಭೂಷಿತಾಃ।
04065002c ಅಭಿಪದ್ಮಾ ಯಥಾ ನಾಗಾ ಭ್ರಾಜಮಾನಾ ಮಹಾರಥಾಃ।।

ವೈಶಂಪಾಯನನು ಹೇಳಿದನು: “ಅನಂತರ ನಿಗದಿತ ಕಾಲದಲ್ಲಿ ಪ್ರತಿಜ್ಞೆ ಪೂರೈಸಿದ ಐವರು ಮಹಾರಥ ಪಾಂಡವ ಸಹೋದರರು ಮೂರನೆಯ ದಿವಸ ಮಿಂದು ಬಿಳಿಯ ಬಟ್ಟೆಗಳನ್ನುಟ್ಟು ಸರ್ವಾಭರಣಗಳಿಂದ ಅಲಂಕೃತರಾಗಿ ಯುಧಿಷ್ಠಿರನನ್ನು ಮುಂದಿಟ್ಟುಕೊಂಡು ಪದ್ಮಚಿಹ್ನೆಗಳನ್ನುಳ್ಳ ಆನೆಗಳಂತೆ ಪ್ರಕಾಶಿಸಿದರು.

04065003a ವಿರಾಟಸ್ಯ ಸಭಾಂ ಗತ್ವಾ ಭೂಮಿಪಾಲಾಸನೇಷ್ವಥ।
04065003c ನಿಷೇದುಃ ಪಾವಕಪ್ರಖ್ಯಾಃ ಸರ್ವೇ ಧಿಷ್ಣ್ಯೇಷ್ವಿವಾಗ್ನಯಃ।।

ಬಳಿಕ ಆ ಅಗ್ನಿಸಮಾನರೆಲ್ಲರೂ ವಿರಾಟನ ಸಭಾಭವನಕ್ಕೆ ಹೋಗಿ ಯಜ್ಞವೇದಿಗಳಲ್ಲಿ ಅಗ್ನಿಗಳು ನೆಲೆಗೊಳ್ಳುವಂತೆ ರಾಜಾಸನಗಳಲ್ಲಿ ಕುಳಿತರು.

04065004a ತೇಷು ತತ್ರೋಪವಿಷ್ಟೇಷು ವಿರಾಟಃ ಪೃಥಿವೀಪತಿಃ।
04065004c ಆಜಗಾಮ ಸಭಾಂ ಕರ್ತುಂ ರಾಜಕಾರ್ಯಾಣಿ ಸರ್ವಶಃ।।

ಅವರು ಅಲ್ಲಿ ಕುಳಿತಿರಲು ದೊರೆ ವಿರಾಟನು ರಾಜಕಾರ್ಯಗಳನ್ನೆಲ್ಲ ನಿರ್ವಹಿಸುವುದಕ್ಕಾಗಿ ಸಭೆಗೆ ಬಂದನು.

04065005a ಶ್ರೀಮತಃ ಪಾಂಡವಾನ್ದೃಷ್ಟ್ವಾ ಜ್ವಲತಃ ಪಾವಕಾನಿವ।
04065005c ಅಥ ಮತ್ಸ್ಯೋಽಬ್ರವೀತ್ಕಂಕಂ ದೇವರೂಪಮವಸ್ಥಿತಂ।
04065005e ಮರುದ್ಗಣೈರುಪಾಸೀನಂ ತ್ರಿದಶಾನಾಮಿವೇಶ್ವರಂ।।

ಆಗ ಅಗ್ನಿಗಳಂತೆ ಜ್ವಲಿಸುತ್ತಿದ್ದ ಶ್ರೀಯುತ ಪಾಂಡವರನ್ನು ನೋಡಿ ಮರುತ್ತುಗಳಿಂದ ಕೂಡಿದ ದೇವೇಂದ್ರನಂತೆ ಕುಳಿತಿದ್ದ ದೇವರೂಪಿ ಕಂಕನಿಗೆ ಮತ್ಸ್ಯರಾಜನು ಹೀಗೆಂದನು:

04065006a ಸ ಕಿಲಾಕ್ಷಾತಿವಾಪಸ್ತ್ವಂ ಸಭಾಸ್ತಾರೋ ಮಯಾ ಕೃತಃ।
04065006c ಅಥ ರಾಜಾಸನೇ ಕಸ್ಮಾದುಪವಿಷ್ಟೋಽಸ್ಯಲಂಕೃತಃ।।

“ನಿನ್ನನ್ನು ನಾನು ಪಗಡೆಯಾಟದವನನ್ನಾಗಿ, ಸಭಾಸದಸ್ಯನನ್ನಾಗಿ ಮಾತ್ರ ಮಾಡಿದ್ದೆನು. ನೀನು ಅಲಂಕಾರ ಮಾಡಿಕೊಂಡು ರಾಜಾಸನದಲ್ಲಿ ಕುಳಿತಿದ್ದೇತಕ್ಕೆ?”

04065007a ಪರಿಹಾಸೇಪ್ಸಯಾ ವಾಕ್ಯಂ ವಿರಾಟಸ್ಯ ನಿಶಮ್ಯ ತತ್।
04065007c ಸ್ಮಯಮಾನೋಽರ್ಜುನೋ ರಾಜನ್ನಿದಂ ವಚನಮಬ್ರವೀತ್।।

ರಾಜನ್! ವಿರಾಟನ ಆ ಮಾತನ್ನು ಕೇಳಿದ ಅರ್ಜುನನು ಪರಿಹಾಸಮಾಡುವ ಬಯಕೆಯಿಂದ ಮುಗುಳ್ನಗುತ್ತ ಈ ಮಾತನ್ನಾಡಿದನು.

04065008a ಇಂದ್ರಸ್ಯಾಪ್ಯಾಸನಂ ರಾಜನ್ನಯಮಾರೋಢುಮರ್ಹತಿ।
04065008c ಬ್ರಹ್ಮಣ್ಯಃ ಶ್ರುತವಾಂಸ್ತ್ಯಾಗೀ ಯಜ್ಞಶೀಲೋ ದೃಢವ್ರತಃ।।

“ರಾಜನ್! ಬ್ರಾಹ್ಮಣರನ್ನು ಸೇವಿಸುವ, ಈ ವಿಧ್ವಾಂಸ, ತ್ಯಾಗಿ, ಯಜ್ಞನಿರತ, ಧೃಢವ್ರತನು ಇಂದ್ರನ ಆಸನವನ್ನಾದರೂ ಏರಲು ಯೋಗ್ಯ.

04065009a ಅಯಂ ಕುರೂಣಾಂ ವೃಷಭಃ ಕುಂತೀಪುತ್ರೋ ಯುಧಿಷ್ಠಿರಃ।
04065009c ಅಸ್ಯ ಕೀರ್ತಿಃ ಸ್ಥಿತಾ ಲೋಕೇ ಸೂರ್ಯಸ್ಯೇವೋದ್ಯತಃ ಪ್ರಭಾ।।

ಇವನು ಕುರುವಂಶದಲ್ಲಿ ಶ್ರೇಷ್ಠ, ಕುಂತೀಪುತ್ರ ಯುಧಿಷ್ಠಿರನು. ಇವನ ಕೀರ್ತಿಯು ಮೇಲೇರುತ್ತಿರುವ ಸೂರ್ಯನ ಪ್ರಭೆಯಂತೆ ಲೋಕದಲ್ಲಿ ನೆಲೆಗೊಂಡಿದೆ.

04065010a ಸಂಸರಂತಿ ದಿಶಃ ಸರ್ವಾ ಯಶಸೋಽಸ್ಯ ಗಭಸ್ತಯಃ।
04065010c ಉದಿತಸ್ಯೇವ ಸೂರ್ಯಸ್ಯ ತೇಜಸೋಽನು ಗಭಸ್ತಯಃ।।

ಉದಯಸೂರ್ಯನ ತೇಜಸ್ಸಿನ ಕಿರಣಗಳಂತೆ ಇವನ ಕೀರ್ತಿಯ ಕಿರಣಗಳು ಎಲ್ಲ ದಿಕ್ಕುಗಳನ್ನೂ ವ್ಯಾಪಿಸಿವೆ.

04065011a ಏನಂ ದಶ ಸಹಸ್ರಾಣಿ ಕುಂಜರಾಣಾಂ ತರಸ್ವಿನಾಂ।
04065011c ಅನ್ವಯುಃ ಪೃಷ್ಠತೋ ರಾಜನ್ಯಾವದಧ್ಯಾವಸತ್ಕುರೂನ್।।

ರಾಜನ್! ಇವನು ಕುರುವಂಶದವರ ನಡುವೆ ವಾಸಮಾಡುತ್ತಿದ್ದಾಗ ಹತ್ತು ಸಾವಿರ ವೇಗಶಾಲಿ ಆನೆಗಳು ಇವನನ್ನು ಹಿಂಬಾಲಿಸುತ್ತಿದ್ದವು.

04065012a ತ್ರಿಂಶದೇನಂ ಸಹಸ್ರಾಣಿ ರಥಾಃ ಕಾಂಚನಮಾಲಿನಃ।
04065012c ಸದಶ್ವೈರುಪಸಂಪನ್ನಾಃ ಪೃಷ್ಠತೋಽನುಯಯುಃ ಸದಾ।।

ಮೂವತ್ತು ಸಾವಿರ ಸುವರ್ಣಮಾಲೆಗಳನ್ನು ಧರಿಸಿದ ಉತ್ತಮ ಕುದುರೆಗಳಿಂದ ಕೂಡಿದ ರಥಗಳು ಇವನನ್ನು ಯಾವಾಗಲೂ ಅನುಸರಿಸುತ್ತಿದ್ದವು.

04065013a ಏನಮಷ್ಟಶತಾಃ ಸೂತಾಃ ಸುಮೃಷ್ಟಮಣಿಕುಂಡಲಾಃ।
04065013c ಅಸ್ತುವನ್ಮಾಗಧೈಃ ಸಾರ್ಧಂ ಪುರಾ ಶಕ್ರಮಿವರ್ಷಯಃ।।

ಹಿಂದೆ ಋಷಿಗಳು ಇಂದ್ರನನ್ನು ಹೊಗಳುತ್ತಿದ್ದಂತೆ ಹೊಳೆಯುವ ಮಣಿಕುಂಡಲಗಳನ್ನು ಧರಿಸಿದ ಎಂಟುನೂರು ಸೂತರು ಮಾಗಧರ ಸಹಿತ ಇವನನ್ನು ಹೊಗಳುತ್ತಿದ್ದರು.

04065014a ಏನಂ ನಿತ್ಯಮುಪಾಸಂತ ಕುರವಃ ಕಿಂಕರಾ ಯಥಾ।
04065014c ಸರ್ವೇ ಚ ರಾಜನ್ರಾಜಾನೋ ಧನೇಶ್ವರಮಿವಾಮರಾಃ।।

ರಾಜನ್! ದೇವತೆಗಳು ಕುಬೇರನನ್ನು ಸೇವಿಸುವಂತೆ ಇವನನ್ನು ಕುರುವಂಶದವರೆಲ್ಲರೂ, ಇತರ ಎಲ್ಲ ದೊರೆಗಳೂ ಕಿಂಕರರ ಹಾಗೆ ಯಾವಾಗಲೂ ಸೇವಿಸುತ್ತಿದ್ದರು.

04065015a ಏಷ ಸರ್ವಾನ್ಮಹೀಪಾಲಾನ್ಕರಮಾಹಾರಯತ್ತದಾ।
04065015c ವೈಶ್ಯಾನಿವ ಮಹಾರಾಜ ವಿವಶಾನ್ಸ್ವವಶಾನಪಿ।।

ಮಹಾರಾಜ! ಆಗ ಇವನು ವೈಶ್ಯರಿಂದ ಪಡೆಯುವಂತೆ ಎಲ್ಲ ರಾಜರಿಂದಲೂ - ಅವರು ಸಮರ್ಥರಾಗಿರಲಿ ಅಥವಾ ದುರ್ಬಲರಾಗಿರಲಿ – ಕಪ್ಪವನ್ನು ಪಡೆಯುತ್ತಿದ್ದನು.

04065016a ಅಷ್ಟಾಶೀತಿಸಹಸ್ರಾಣಿ ಸ್ನಾತಕಾನಾಂ ಮಹಾತ್ಮನಾಂ।
04065016c ಉಪಜೀವಂತಿ ರಾಜಾನಮೇನಂ ಸುಚರಿತವ್ರತಂ।।

ವ್ರತಗಳನ್ನು ಚೆನ್ನಾಗಿ ಆಚರಿಸುತ್ತಿದ್ದ ಈ ರಾಜನನ್ನು ಎಂಬತ್ತೆರಡು ಸಾವಿರ ಮಹಾತ್ಮ ಸ್ನಾತಕರು ಆಶ್ರಯಿಸಿದ್ದರು.

04065017a ಏಷ ವೃದ್ಧಾನನಾಥಾಂಶ್ಚ ವ್ಯಂಗಾನ್ಪಂಗೂಂಶ್ಚ ಮಾನವಾನ್।
04065017c ಪುತ್ರವತ್ಪಾಲಯಾಮಾಸ ಪ್ರಜಾ ಧರ್ಮೇಣ ಚಾಭಿಭೋ।।

ಪ್ರಭು! ಇವನು ವೃದ್ದರೂ ಅನಾಥರೂ ಅಂಗಹೀನರೂ ಹೆಳವ ಪ್ರಜೆಗಳನ್ನು ಪುತ್ರರೆಂಬಂತೆ ಧರ್ಮದಿಂದ ಪಾಲಿಸುತ್ತಿದ್ದನು.

04065018a ಏಷ ಧರ್ಮೇ ದಮೇ ಚೈವ ಕ್ರೋಧೇ ಚಾಪಿ ಯತವ್ರತಃ।
04065018c ಮಹಾಪ್ರಸಾದೋ ಬ್ರಹ್ಮಣ್ಯಃ ಸತ್ಯವಾದೀ ಚ ಪಾರ್ಥಿವಃ।।

ಈ ರಾಜನು ಧರ್ಮಪರ, ಇಂದ್ರಿಯನಿಗ್ರಹಿ, ಕೋಪದಲ್ಲಿ ಸಂಯಮಿ, ಉದಾರಿ, ಬ್ರಾಹ್ಮಣರನ್ನು ಸೇವಿಸುವವನು ಮತ್ತು ಸತ್ಯವನ್ನಾಡುವವನು.

04065019a ಶ್ರೀಪ್ರತಾಪೇನ ಚೈತಸ್ಯ ತಪ್ಯತೇ ಸ ಸುಯೋಧನಃ।
04065019c ಸಗಣಃ ಸಹ ಕರ್ಣೇನ ಸೌಬಲೇನಾಪಿ ವಾ ವಿಭುಃ।।

ಆ ರಾಜ ಸುಯೋಧನನು ತನ್ನ ಗುಂಪಿನೊಡನೆ ಮತ್ತು ಕರ್ಣ-ಶಕುನಿಯರ ಸಮೇತ ಇವನ ಶ್ರೀ ಪ್ರತಾಪದಿಂದ ಪರಿತಪಿಸುತ್ತಾನೆ.

04065020a ನ ಶಕ್ಯಂತೇ ಹ್ಯಸ್ಯ ಗುಣಾಃ ಪ್ರಸಂಖ್ಯಾತುಂ ನರೇಶ್ವರ।
04065020c ಏಷ ಧರ್ಮಪರೋ ನಿತ್ಯಮಾನೃಶಂಸ್ಯಶ್ಚ ಪಾಂಡವಃ।।

ರಾಜನ್! ಇವನ ಗುಣಗಳನ್ನು ಎಣಿಸುವುದು ಅಸಾಧ್ಯ. ಇವನು ಯಾವಾಗಲೂ ಧರ್ಮಪರ, ದಯಾಶೀಲ ಪಾಂಡುಪುತ್ರ.

04065021a ಏವಮ್ಯುಕ್ತೋ ಮಹಾರಾಜಃ ಪಾಂಡವಃ ಪಾರ್ಥಿವರ್ಷಭಃ।
04065021c ಕಥಂ ನಾರ್ಹತಿ ರಾಜಾರ್ಹಮಾಸನಂ ಪೃಥಿವೀಪತಿಃ।।

ಹೀಗಿರುವ ಈ ಗುಣಯುಕ್ತ, ಮಹಾರಾಜ, ಕ್ಷತ್ರಿಯಶ್ರೇಷ್ಠ, ಪಾಂಡವ ಭೂಪತಿಯು ರಾಜಯೋಗ್ಯ ಆಸನದಲ್ಲಿ ಕುಳಿತಿರಲು ಹೇಗೆ ತಾನೇ ಅರ್ಹನಾಗುವುದಿಲ್ಲ?”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ವೈವಾಹಿಕ ಪರ್ವಣಿ ಪಾಂಡವಪ್ರಕಾಶೇ ಪಂಚಷಷ್ಟಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ವೈವಾಹಿಕ ಪರ್ವದಲ್ಲಿ ಪಾಂಡವಪ್ರಕಾಶದಲ್ಲಿ ಅರವತ್ತೈದನೆಯ ಅಧ್ಯಾಯವು.