064 ವಿರಾಟೋತ್ತರಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ವೈವಾಹಿಕ ಪರ್ವ

ಅಧ್ಯಾಯ 64

ಸಾರ

ಆಸ್ಥಾನವನ್ನು ಪ್ರವೇಶಿಸಿದ ಉತ್ತರನು ರಕ್ತಸುರಿಸುತ್ತಿದ್ದ ಯುಧಿಷ್ಠಿರನನ್ನು ನೋಡಿ ತಂದೆಯು ಅವನ ಕ್ಷಮೆಕೇಳಿಕೊಳ್ಳುವಂತೆ ಮಾಡಿದುದು (1-11). ವಿರಾಟನು ಬೃಹನ್ನಡೆಯೂ ಕೇಳಿಸಿಕೊಳ್ಳುವಂತೆ ಉತ್ತರನನ್ನು ಹೊಗಳುವುದು (12-18). ಓರ್ವ ದೇವಪುತ್ರನ ಸಹಾಯದಿಂದ ಕೌರವ ಸೇನೆಯನ್ನು ಗೆದ್ದೆನೆಂದು ಉತ್ತರನು ಹೇಳುವುದು (19-32). ತಂದಿದ್ದ ವಸ್ತ್ರಗಳನ್ನು ಉತ್ತರೆಗೆ ಕೊಟ್ಟು, ಉತ್ತರನೊಂದಿಗೆ ಮುಂದೆ ಮಾಡಬೇಕಾದ ಕಾರ್ಯಗಳನ್ನು ರಹಸ್ಯದಿಂದ ಅರ್ಜುನನು ನೆರವೇರಿಸಿದ್ದುದು (33-37).

04064001 ವೈಶಂಪಾಯನ ಉವಾಚ।
04064001a ತತೋ ರಾಜ್ಞಃ ಸುತೋ ಜ್ಯೇಷ್ಠಃ ಪ್ರಾವಿಶತ್ಪೃಥಿವೀಂಜಯಃ।
04064001c ಸೋಽಭಿವಾದ್ಯ ಪಿತುಃ ಪಾದೌ ಧರ್ಮರಾಜಮಪಶ್ಯತ।।
04064002a ಸ ತಂ ರುಧಿರಸಂಸಿಕ್ತಮನೇಕಾಗ್ರಮನಾಗಸಂ।
04064002c ಭೂಮಾವಾಸೀನಮೇಕಾಂತೇ ಸೈರಂಧ್ರ್ಯಾ ಸಮುಪಸ್ಥಿತಂ।।

ವೈಶಂಪಾಯನನು ಹೇಳಿದನು: “ಅನಂತರ ರಾಜನ ಹಿರಿಯ ಮಗ ಉತ್ತರನು ಪ್ರವೇಶಿಸಿ ತಂದೆಯ ಪಾದಗಳಿಗೆ ಅಬಿವಂದಿಸಿ, ರಕ್ತದಿಂದ ತೊಯ್ದ, ಉದ್ವಿಗ್ನಚಿತ್ತ, ದೋಷರಹಿತ, ಆಸ್ಥಾನದ ಒಂದು ಕೊನೆಯಲ್ಲಿ ಸೈರಂಧ್ರಿಯೊಡನೆ ನೆಲದ ಮೇಲೆ ಕುಳಿತ ದರ್ಮರಾಜನನ್ನು ನೋಡಿದನು.

04064003a ತತಃ ಪಪ್ರಚ್ಛ ಪಿತರಂ ತ್ವರಮಾಣ ಇವೋತ್ತರಃ।
04064003c ಕೇನಾಯಂ ತಾಡಿತೋ ರಾಜನ್ಕೇನ ಪಾಪಮಿದಂ ಕೃತಂ।।

ಆಗ ಉತ್ತರನು ಅವಸರದಿಂದ “ರಾಜನ್! ಇವನನ್ನು ಹೊಡೆದವರು ಯಾರು? ಈ ಪಾಪವನ್ನಾರು ಮಾಡಿದರು?” ಎಂದು ತಂದೆಯನ್ನು ಕೇಳಿದನು.

04064004 ವಿರಾಟ ಉವಾಚ।
04064004a ಮಯಾಯಂ ತಾಡಿತೋ ಜಿಹ್ಮೋ ನ ಚಾಪ್ಯೇತಾವದರ್ಹತಿ।
04064004c ಪ್ರಶಸ್ಯಮಾನೇ ಯಃ ಶೂರೇ ತ್ವಯಿ ಷಂಢಂ ಪ್ರಶಂಸತಿ।।

ವಿರಾಟನು ಹೇಳಿದನು: “ಈ ದುಷ್ಟನನ್ನು ನಾನೇ ಹೊಡೆದೆನು. ಇವನಿಗೆ ಇಷ್ಟೇ ಸಾಲದು. ಶೂರನಾದ ನಿನ್ನನ್ನು ನಾನು ಹೊಗಳುತ್ತಿರುವಾಗ ಇವನು ನಪುಂಸಕನನ್ನು ಹೊಗಳುತ್ತಾನೆ.”

04064005 ಉತ್ತರ ಉವಾಚ।
04064005a ಅಕಾರ್ಯಂ ತೇ ಕೃತಂ ರಾಜನ್ ಕ್ಷಿಪ್ರಮೇವ ಪ್ರಸಾದ್ಯತಾಂ।
04064005c ಮಾ ತ್ವಾ ಬ್ರಹ್ಮವಿಷಂ ಘೋರಂ ಸಮೂಲಮಪಿ ನಿರ್ದಹೇತ್।।

ಉತ್ತರನು ಹೇಳಿದನು: “ರಾಜನ್! ನೀನು ಅಕಾರ್ಯವನ್ನು ಮಾಡಿದೆ. ಬೇಗ ಇವನು ಪ್ರಸನ್ನನಾಗುವಂತೆ ಮಾಡು. ಬ್ರಾಹ್ಮಣನ ಘೋರ ವಿಷ ನಿನ್ನನ್ನು ಬುಡಸಹಿತ ಸುಟ್ಟು ಹಾಕದಿರಲಿ!””

04064006 ವೈಶಂಪಾಯನ ಉವಾಚ।
04064006a ಸ ಪುತ್ರಸ್ಯ ವಚಃ ಶ್ರುತ್ವಾ ವಿರಾಟೋ ರಾಷ್ಟ್ರವರ್ಧನಃ।
04064006c ಕ್ಷಮಯಾಮಾಸ ಕೌಂತೇಯಂ ಭಸ್ಮಚ್ಛನ್ನಮಿವಾನಲಂ।।

ವೈಶಂಪಾಯನನು ಹೇಳಿದನು: “ರಾಷ್ಟ್ರವರ್ಧನ ವಿರಾಟನು ಮಗನ ಮಾತನ್ನು ಕೇಳಿ ಬೂದಿ ಮುಸುಕಿದ ಬೆಂಕಿಯಂತಿದ್ದ ಯುಧಿಷ್ಠಿರನ ಕ್ಷಮೆಯನ್ನು ಬೇಡಿದನು.

04064007a ಕ್ಷಮಯಂತಂ ತು ರಾಜಾನಂ ಪಾಂಡವಃ ಪ್ರತ್ಯಭಾಷತ।
04064007c ಚಿರಂ ಕ್ಷಾಂತಮಿದಂ ರಾಜನ್ನ ಮನ್ಯುರ್ವಿದ್ಯತೇ ಮಮ।।

ಕ್ಷಮೆಕೇಳುತ್ತಿದ್ದ ರಾಜನಿಗೆ ಯುಧಿಷ್ಠಿರನು ಮರುನುಡಿದನು: “ರಾಜನ್! ಈ ಮೊದಲೇ ಇದನ್ನು ಕ್ಷಮಿಸಿಬಿಟ್ಟಿದ್ದೇನೆ. ನನಗೇನೂ ಕೋಪವಿಲ್ಲ.

04064008a ಯದಿ ಹ್ಯೇತತ್ಪತೇದ್ಭೂಮೌ ರುಧಿರಂ ಮಮ ನಸ್ತತಃ।
04064008c ಸರಾಷ್ಟ್ರಸ್ತ್ವಂ ಮಹಾರಾಜ ವಿನಶ್ಯೇಥಾ ನ ಸಂಶಯಃ।।

ಮಹಾರಾಜ! ನನ್ನ ಮೂಗಿನಿಂದ ಸುರಿದ ರಕ್ತವು ನೆಲಕ್ಕೆ ಬಿದ್ದಿದ್ದರೆ ನೀನು ದೇಶಸಹಿತ ಖಂಡಿತ ನಾಶವಾಗುತ್ತಿದ್ದೆ.

04064009a ನ ದೂಷಯಾಮಿ ತೇ ರಾಜನ್ಯಚ್ಚ ಹನ್ಯಾದದೂಷಕಂ।
04064009c ಬಲವಂತಂ ಮಹಾರಾಜ ಕ್ಷಿಪ್ರಂ ದಾರುಣಮಾಪ್ನುಯಾತ್।।

ರಾಜನ್! ದೋಷವಿಲ್ಲದವನನ್ನು ಹೊಡೆದುದಕ್ಕಾಗಿ ನಿನ್ನನ್ನು ನಾನು ನಿಂದಿಸುವುದಿಲ್ಲ. ಬಲಶಾಲಿಗಳಿಗೆ ಬೇಗ ಕ್ರೌರ್ಯವುಂಟಾಗುತ್ತದೆ.”

04064010a ಶೋಣಿತೇ ತು ವ್ಯತಿಕ್ರಾಂತೇ ಪ್ರವಿವೇಶ ಬೃಹನ್ನಡಾ।
04064010c ಅಭಿವಾದ್ಯ ವಿರಾಟಂ ಚ ಕಂಕಂ ಚಾಪ್ಯುಪತಿಷ್ಠತ।।

ರಕ್ತ ಸುರಿಯುವುದು ನಿಂತಾಗ ಬೃಹನ್ನಡೆಯು ಪ್ರವೇಶಿಸಿ ವಿರಾಟನಿಗೂ ಕಂಕನಿಗೂ ನಮಸ್ಕರಿಸಿ ನಿಂತುಕೊಂಡಳು.

04064011a ಕ್ಷಮಯಿತ್ವಾ ತು ಕೌರವ್ಯಂ ರಣಾದುತ್ತರಮಾಗತಂ।
04064011c ಪ್ರಶಶಂಸ ತತೋ ಮತ್ಸ್ಯಃ ಶೃಣ್ವತಃ ಸವ್ಯಸಾಚಿನಃ।।

ಅರ್ಜುನನು ಕೇಳಿಸಿಕೊಳ್ಳವಂತೆಯೇ ಯುಧಿಷ್ಠಿರನ ಕ್ಷಮೆ ಬೇಡಿದ ಮತ್ಸ್ಯರಾಜನು ಯುದ್ಧರಂಗದಿಂದ ಬಂದ ಉತ್ತರನನ್ನು ಹೊಗಳಿದನು.

04064012a ತ್ವಯಾ ದಾಯಾದವಾನಸ್ಮಿ ಕೈಕೇಯೀನಂದಿವರ್ಧನ।
04064012c ತ್ವಯಾ ಮೇ ಸದೃಶಃ ಪುತ್ರೋ ನ ಭೂತೋ ನ ಭವಿಷ್ಯತಿ।।

“ಸುದೇಷ್ಣೆಯ ಆನಂದವನ್ನು ಹೆಚ್ಚಿಸುವವನೇ! ನಿನ್ನಿಂದ ನಾನು ಉತ್ತರಾಧಿಕಾರಿಯುಳ್ಳವನಾದೆ. ನಿನ್ನಂತಹ ಮಗನು ನನಗೆ ಹಿಂದೆ ಇರಲಿಲ್ಲ, ಮುಂದೆ ಇರುವುದಿಲ್ಲ.

04064013a ಪದಂ ಪದಸಹಸ್ರೇಣ ಯಶ್ಚರನ್ನಾಪರಾಧ್ನುಯಾತ್।
04064013c ತೇನ ಕರ್ಣೇನ ತೇ ತಾತ ಕಥಮಾಸೀತ್ಸಮಾಗಮಃ।।

ಮಗೂ! ಸಾವಿರ ಹೆಜ್ಜೆ ನಡೆದರೂ ಒಂದು ಹೆಜ್ಜೆಯನ್ನೂ ತಪ್ಪದ ಆ ಕರ್ಣನನ್ನು ನೀನು ಹೇಗೆ ಎದುರಿಸಿದೆ?

04064014a ಮನುಷ್ಯಲೋಕೇ ಸಕಲೇ ಯಸ್ಯ ತುಲ್ಯೋ ನ ವಿದ್ಯತೇ।
04064014c ಯಃ ಸಮುದ್ರ ಇವಾಕ್ಷೋಭ್ಯಃ ಕಾಲಾಗ್ನಿರಿವ ದುಃಸಹಃ।
04064014e ತೇನ ಭೀಷ್ಮೇಣ ತೇ ತಾತ ಕಥಮಾಸೀತ್ಸಮಾಗಮಃ।।

ಮಗೂ! ಇಡೀ ಮಾನವಲೋಕದಲ್ಲಿ ಸಮಾನರಿಲ್ಲದ, ಸಮುದ್ರದಂತೆ ಅಚಲನಾದ, ಕಾಲಾಗ್ನಿಯಂತೆ ಸಹಿಸಲಾಗದ ಆ ಭೀಷ್ಮನನ್ನು ನೀನು ಹೇಗೆ ಎದುರಿಸಿದೆ?

04064015a ಆಚಾರ್ಯೋ ವೃಷ್ಣಿವೀರಾಣಾಂ ಪಾಂಡವಾನಾಂ ಚ ಯೋ ದ್ವಿಜಃ।
04064015c ಸರ್ವಕ್ಷತ್ರಸ್ಯ ಚಾಚಾರ್ಯಃ ಸರ್ವಶಸ್ತ್ರಭೃತಾಂ ವರಃ।
04064015e ತೇನ ದ್ರೋಣೇನ ತೇ ತಾತ ಕಥಮಾಸೀತ್ಸಮಾಗಮಃ।।

ಮಗೂ! ವೃಷ್ಣಿವೀರರ, ಪಾಂಡವರ ಮತ್ತು ಎಲ್ಲ ಕ್ಷತ್ರಿಯರ ಆಚಾರ್ಯನೂ ಸರ್ವಶಸ್ತ್ರಧಾರಿಗಳಲ್ಲಿ ಶ್ರೇಷ್ಠನೂ ಆದ ಆ ಬ್ರಾಹ್ಮಣ ದ್ರೋಣನನ್ನು ನೀನು ಹೇಗೆ ಎದುರಿಸಿದೆ?

04064016a ಆಚಾರ್ಯಪುತ್ರೋ ಯಃ ಶೂರಃ ಸರ್ವಶಸ್ತ್ರಭೃತಾಮಪಿ।
04064016c ಅಶ್ವತ್ಥಾಮೇತಿ ವಿಖ್ಯಾತಃ ಕಥಂ ತೇನ ಸಮಾಗಮಃ।।

ಆಚಾರ್ಯಪುತ್ರನೂ, ಸರ್ವ ಶಸ್ತ್ರಧಾರಿಗಳಲ್ಲಿ ಶೂರನೂ, ಅಶ್ವತ್ಥಾಮನೆಂದು ಹೆಸರಾಂತವನೂ ಆದ ಅವನನ್ನು ಹೇಗೆ ಎದುರಿಸಿದೆ?

04064017a ರಣೇ ಯಂ ಪ್ರೇಕ್ಷ್ಯ ಸೀದಂತಿ ಹೃತಸ್ವಾ ವಣಿಜೋ ಯಥಾ।
04064017c ಕೃಪೇಣ ತೇನ ತೇ ತಾತ ಕಥಮಾಸೀತ್ಸಮಾಗಮಃ।।

ಮಗೂ! ಯುದ್ಧದಲ್ಲಿ ಯಾರನ್ನು ನೋಡಿದರೆ ಎಲ್ಲರೂ ತಮ್ಮದೆಲ್ಲವನ್ನೂ ಕಳೆದುಕೊಂಡ ವರ್ತಕರಂತೆ ಕುಗ್ಗಿಹೋಗುತ್ತಾರೋ ಆ ಕೃಪನನ್ನು ಹೇಗೆ ಎದುರಿಸಿದೆ?

04064018a ಪರ್ವತಂ ಯೋಽಭಿವಿಧ್ಯೇತ ರಾಜಪುತ್ರೋ ಮಹೇಷುಭಿಃ।
04064018c ದುರ್ಯೋಧನೇನ ತೇ ತಾತ ಕಥಮಾಸೀತ್ಸಮಾಗಮಃ।।

ಮಗೂ! ತನ್ನ ಮಹಾಬಾಣಗಳಿಂದ ಪರ್ವತವನ್ನು ಭೇದಿಸುವ ರಾಜಪುತ್ರ ಆ ದುರ್ಯೋಧನನನ್ನು ನೀನು ಹೇಗೆ ಎದುರಿಸಿದೆ?”

04064019 ಉತ್ತರ ಉವಾಚ।
04064019a ನ ಮಯಾ ನಿರ್ಜಿತಾ ಗಾವೋ ನ ಮಯಾ ನಿರ್ಜಿತಾಃ ಪರೇ।
04064019c ಕೃತಂ ತು ಕರ್ಮ ತತ್ಸರ್ವಂ ದೇವಪುತ್ರೇಣ ಕೇನ ಚಿತ್।।

ಉತ್ತರನು ಹೇಳಿದನು: “ನಾನು ಹಸುಗಳನ್ನು ಗೆಲ್ಲಲಿಲ್ಲ. ಶತ್ರುಗಳನ್ನು ನಾನು ಸೋಲಿಸಲಿಲ್ಲ. ಆ ಕಾರ್ಯವನ್ನೆಲ್ಲ ಯಾವನೋ ಒಬ್ಬ ದೇವಪುತ್ರನು ಮಾಡಿದನು.

04064020a ಸ ಹಿ ಭೀತಂ ದ್ರವಂತಂ ಮಾಂ ದೇವಪುತ್ರೋ ನ್ಯವಾರಯತ್।
04064020c ಸ ಚಾತಿಷ್ಠದ್ರಥೋಪಸ್ಥೇ ವಜ್ರಹಸ್ತನಿಭೋ ಯುವಾ।।

ದೇವೇಂದ್ರ ಸಮಾನನಾದ ಆ ತರುಣ ದೇವಪುತ್ರನು ಹೆದರಿ ಓಡಿಹೋಗುತ್ತಿದ್ದ ನನ್ನನ್ನು ತಡೆದು ರಥದಲ್ಲಿ ಕುಳಿತನು.

04064021a ತೇನ ತಾ ನಿರ್ಜಿತಾ ಗಾವಸ್ತೇನ ತೇ ಕುರವೋ ಜಿತಾಃ।
04064021c ತಸ್ಯ ತತ್ಕರ್ಮ ವೀರಸ್ಯ ನ ಮಯಾ ತಾತ ತತ್ಕೃತಂ।।

ಅವನು ಆ ಹಸುಗಳನ್ನು ಗೆದ್ದು ಆ ಕೌರವರನ್ನು ಸೋಲಿಸಿದನು. ತಂದೇ! ಅದು ಆ ವೀರನ ಕಾರ್ಯ. ನಾನು ಅದನ್ನು ಮಾಡಲಿಲ್ಲ.

04064022a ಸ ಹಿ ಶಾರದ್ವತಂ ದ್ರೋಣಂ ದ್ರೋಣಪುತ್ರಂ ಚ ವೀರ್ಯವಾನ್।
04064022c ಸೂತಪುತ್ರಂ ಚ ಭೀಷ್ಮಂ ಚ ಚಕಾರ ವಿಮುಖಾಂ ಶರೈಃ।।

ಬಾಣಗಳಿಂದ ಕೃಪ, ದ್ರೋಣ, ಪರಾಕ್ರಮಶಾಲಿ ಅಶ್ವತ್ಥಾಮ, ಕರ್ಣ, ಭೀಷ್ಮರನ್ನು ಅವನು ಮುಖ ತಿರುಗಿಸುವಂತೆ ಮಾಡಿದನು.

04064023a ದುರ್ಯೋಧನಂ ಚ ಸಮರೇ ಸನಾಗಮಿವ ಯೂಥಪಂ।
04064023c ಪ್ರಭಗ್ನಮಬ್ರವೀದ್ಭೀತಂ ರಾಜಪುತ್ರಂ ಮಹಾಬಲಂ।।

ಆನೆಗಳೊಳಗೂಡಿದ ಸಲಗದಂತೆ ಯುದ್ಧದಲ್ಲಿ ಭೀತನೂ ಭಗ್ನನೂ ಆಗಿದ್ದ ಮಹಾಬಲಶಾಲಿ ರಾಜಪುತ್ರ ದುರ್ಯೋಧನನಿಗೆ ಅವನು ಹೇಳಿದನು:

04064024a ನ ಹಾಸ್ತಿನಪುರೇ ತ್ರಾಣಂ ತವ ಪಶ್ಯಾಮಿ ಕಿಂ ಚನ।
04064024c ವ್ಯಾಯಾಮೇನ ಪರೀಪ್ಸಸ್ವ ಜೀವಿತಂ ಕೌರವಾತ್ಮಜ।।

“ಕೌರವಾತ್ಮಜ! ನಿನಗೆ ಹಸ್ತಿನಾಪುರದಲ್ಲಿ ಏನೇನೂ ರಕ್ಷಣೆಯಿರುವಂತೆ ನನಗೆ ತೋರುವುದಿಲ್ಲ. ಆದ್ದರಿಂದ ಹೋರಾಟದಿಂದ ಪ್ರಾಣವನ್ನು ರಕ್ಷಿಸಿಕೋ.

04064025a ನ ಮೋಕ್ಷ್ಯಸೇ ಪಲಾಯಂಸ್ತ್ವಂ ರಾಜನ್ಯುದ್ಧೇ ಮನಃ ಕುರು।
04064025c ಪೃಥಿವೀಂ ಭೋಕ್ಷ್ಯಸೇ ಜಿತ್ವಾ ಹತೋ ವಾ ಸ್ವರ್ಗಮಾಪ್ಸ್ಯಸಿ।।

ರಾಜನ್! ನೀನು ಪಲಾಯನ ಮಾಡಿ ತಪ್ಪಿಸಿಕೊಳ್ಳಲಾರೆ. ಯುದ್ಧಕ್ಕೆ ಮನಸ್ಸು ಮಾಡು. ಗೆದ್ದರೆ ಭೂಮಿಯನ್ನು ಆಳುತ್ತೀಯೆ. ಸತ್ತರೆ ಸ್ವರ್ಗವನ್ನು ಪಡೆಯುತ್ತೀಯೆ.”

04064026a ಸ ನಿವೃತ್ತೋ ನರವ್ಯಾಘ್ರೋ ಮುಂಚನ್ವಜ್ರನಿಭಾಂ ಶರಾನ್।
04064026c ಸಚಿವೈಃ ಸಂವೃತೋ ರಾಜಾ ರಥೇ ನಾಗ ಇವ ಶ್ವಸನ್।।

ನರಶ್ರೇಷ್ಠ ಆ ರಾಜನು ಆಗ ವಜ್ರಸದೃಶ ಬಾಣಗಳನ್ನು ಬಿಡುತ್ತ ಸರ್ಪದಂತೆ ಬುಸುಗುಟ್ಟುತ್ತ ಸಚಿವರೊಡಗೂಡಿ ರಥದಲ್ಲಿ ಹಿಂದಿರುಗಿದನು.

04064027a ತತ್ರ ಮೇ ರೋಮಹರ್ಷೋಽಭೂದೂರುಸ್ತಂಭಶ್ಚ ಮಾರಿಷ।
04064027c ಯದಭ್ರಘನಸಂಕಾಶಮನೀಕಂ ವ್ಯಧಮಚ್ಚರೈಃ।।

ಅಪ್ಪಾ! ಆಗ ನನಗೆ ರೋಮಾಂಚನವುಂಟಾಯಿತು. ನನ್ನ ತೊಡೆಗಳು ಮರಗಟ್ಟಿದವು. ಏಕೆಂದರೆ ಆ ದೇವಪುತ್ರನು ಆ ದಟ್ಟ ಸೇನೆಯನ್ನು ಬಾಣಗಳಿಂದ ಭೇದಿಸಿದನು.

04064028a ತತ್ಪ್ರಣುದ್ಯ ರಥಾನೀಕಂ ಸಿಂಹಸಂಹನನೋ ಯುವಾ।
04064028c ಕುರೂಂಸ್ತಾನ್ಪ್ರಹಸನ್ರಾಜನ್ವಾಸಾಂಸ್ಯಪಹರದ್ಬಲೀ।।

ರಾಜನ್! ಸಿಂಹದಂತಹ ಶರೀರವುಳ್ಳ ಆ ಬಲಶಾಲಿ ಯುವಕನು ರಥಸಮೂಹವನ್ನು ಚದುರಿಸಿ, ನಗುನಗುತ್ತಲೇ ಕೌರವರ ವಸ್ತ್ರಗಳನ್ನು ತೆಗೆದುಕೊಂಡನು.

04064029a ಏಕೇನ ತೇನ ವೀರೇಣ ಷಡ್ರಥಾಃ ಪರಿವಾರಿತಾಃ।
04064029c ಶಾರ್ದೂಲೇನೇವ ಮತ್ತೇನ ಮೃಗಾಸ್ತೃಣಚರಾ ವನೇ।।

ಕಾಡಿನಲ್ಲಿ ಹುಲ್ಲುತಿನ್ನುವ ಜಿಂಕೆಗಳನ್ನು ಮದಿಸಿದ ಒಂದೇ ಹುಲಿಯು ಆಕ್ರಮಿಸುವಂತೆ ಒಂಟಿಯಾಗಿಯೇ ಆ ವೀರನು ಷಡ್ರಥರನ್ನು ಮುತ್ತಿದನು.”

04064030 ವಿರಾಟ ಉವಾಚ।
04064030a ಕ್ವ ಸ ವೀರೋ ಮಹಾಬಾಹುರ್ದೇವಪುತ್ರೋ ಮಹಾಯಶಾಃ।
04064030c ಯೋ ಮೇ ಧನಮವಾಜೈಷೀತ್ಕುರುಭಿರ್ಗ್ರಸ್ತಮಾಹವೇ।।

ವಿರಾಟನು ಹೇಳಿದನು: “ಯುದ್ಧದಲ್ಲಿ ಕೌರವರು ಹಿಡಿದಿದ್ದ ನನ್ನ ಗೋಧನವನ್ನು ಗೆದ್ದು ತಂದ ಆ ವೀರ ಮಹಾಬಾಹು ಮಹಾಯಶಸ್ವಿ ದೇವಪುತ್ರನೆಲ್ಲಿ?

04064031a ಇಚ್ಛಾಮಿ ತಮಹಂ ದ್ರಷ್ಟುಮರ್ಚಿತುಂ ಚ ಮಹಾಬಲಂ।
04064031c ಯೇನ ಮೇ ತ್ವಂ ಚ ಗಾವಶ್ಚ ರಕ್ಷಿತಾ ದೇವಸೂನುನಾ।।

ಹಸುಗಳನ್ನೂ ನಿನ್ನನ್ನೂ ರಕ್ಷಿಸಿದ ಆ ಮಹಾಬಲಶಾಲಿ ದೇವಪುತ್ರನನ್ನು ನೋಡಲು ಮತ್ತು ಗೌರವಿಸಲು ಬಯಸುತ್ತೇನೆ.”

04064032 ಉತ್ತರ ಉವಾಚ।
04064032a ಅಂತರ್ಧಾನಂ ಗತಸ್ತಾತ ದೇವಪುತ್ರಃ ಪ್ರತಾಪವಾನ್।
04064032c ಸ ತು ಶ್ವೋ ವಾ ಪರಶ್ವೋ ವಾ ಮನ್ಯೇ ಪ್ರಾದುರ್ಭವಿಷ್ಯತಿ।।

ಉತ್ತರನು ಹೇಳಿದನು: “ತಂದೇ! ಆ ಪ್ರತಾಪಶಾಲೀ ದೇವಪುತ್ರನು ಅದೃಶ್ಯನಾಗಿಬಿಟ್ಟನು. ಆದರೆ ನಾಳೆಯೋ ಅಥವಾ ನಾಡಿದ್ದೋ ಅವನು ಕಾಣಿಸಿಕೊಳ್ಳುತ್ತಾನೆಂದು ನಾನು ಭಾವಿಸುತ್ತೇನೆ.””

04064033 ವೈಶಂಪಾಯನ ಉವಾಚ।
04064033a ಏವಮಾಖ್ಯಾಯಮಾನಂ ತು ಚನ್ನಂ ಸತ್ರೇಣ ಪಾಂಡವಂ।
04064033c ವಸಂತಂ ತತ್ರ ನಾಜ್ಞಾಸೀದ್ವಿರಾಟಃ ಪಾರ್ಥಮರ್ಜುನಂ।।

ವೈಶಂಪಾಯನನು ಹೇಳಿದನು: “ಹೀಗೆ ವರ್ಣಿಸುತ್ತಿರಲು ವೇಷಮರೆಸಿಕೊಂಡು ಅಲ್ಲಿ ವಾಸಿಸುತ್ತಿರುವ ಆ ಪಾಂಡುಪುತ್ರ ಕುಂತೀಸುತ ಅರ್ಜುನನನ್ನು ವಿರಾಟನು ಗುರುತಿಸಲೇ ಇಲ್ಲ.

04064034a ತತಃ ಪಾರ್ಥೋಽಭ್ಯನುಜ್ಞಾತೋ ವಿರಾಟೇನ ಮಹಾತ್ಮನಾ।
04064034c ಪ್ರದದೌ ತಾನಿ ವಾಸಾಂಸಿ ವಿರಾಟದುಹಿತುಃ ಸ್ವಯಂ।।

ಆಗ ಮಹಾತ್ಮ ವಿರಾಟನ ಅಪ್ಪಣೆ ಪಡೆದ ಪಾರ್ಥನು ಆ ವಸ್ತ್ರಗಳನ್ನು ವಿರಾಟನ ಮಗಳಿಗೆ ಸ್ವತಃ ಕೊಟ್ಟನು.

04064035a ಉತ್ತರಾ ತು ಮಹಾರ್ಹಾಣಿ ವಿವಿಧಾನಿ ತನೂನಿ ಚ।
04064035c ಪ್ರತಿಗೃಹ್ಯಾಭವತ್ಪ್ರೀತಾ ತಾನಿ ವಾಸಾಂಸಿ ಭಾಮಿನೀ।।

ಆ ಭಾಮಿನಿ ಉತ್ತರೆಯಾದರೋ ನವಿರಾದ ಆ ಅಮೂಲ್ಯ ವಿವಿಧ ವಸ್ತ್ರಗಳನ್ನು ತೆಗೆದುಕೊಂಡು ಸಂತೋಷಪಟ್ಟಳು.

04064036a ಮಂತ್ರಯಿತ್ವಾ ತು ಕೌಂತೇಯ ಉತ್ತರೇಣ ರಹಸ್ತದಾ।
04064036c ಇತಿಕರ್ತವ್ಯತಾಂ ಸರ್ವಾಂ ರಾಜನ್ಯಥ ಯುಧಿಷ್ಠಿರೇ।।

ಆಗ ಅರ್ಜುನನು ಮಹಾರಾಜ ಯುಧಿಷ್ಠಿರನಿಗೆ ಸಂಬಂಧಿಸಿದಂತೆ ಮಾಡಬೇಕಾದ ಎಲ್ಲವನ್ನೂ ಉತ್ತರನೊಡಗೂಡಿ ರಹಸ್ಯವಾಗಿ ಯೋಜಿಸಿದನು.

04064037a ತತಸ್ತಥಾ ತದ್ವ್ಯದಧಾದ್ಯಥಾವತ್ಪುರುಷರ್ಷಭ।
04064037c ಸಹ ಪುತ್ರೇಣ ಮತ್ಸ್ಯಸ್ಯ ಪ್ರಹೃಷ್ಟೋ ಭರತರ್ಷಭಃ।।

ಪುರುಷಶ್ರೇಷ್ಠ! ಆಮೇಲೆ ಆ ಭರತಶ್ರೇಷ್ಠನು ಮತ್ಸ್ಯರಾಜನ ಮಗನೊಡನೆ ಹಾಗೆಯೇ ಅದನ್ನು ಸಂತಸದಿಂದ ನೆರವೇರಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ವೈವಾಹಿಕ ಪರ್ವಣಿ ವಿರಾಟೋತ್ತರಸಂವಾದೇ ಚತುಃಷಷ್ಟಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ವೈವಾಹಿಕ ಪರ್ವದಲ್ಲಿ ವಿರಾಟೋತ್ತರಸಂವಾದದಲ್ಲಿ ಅರವತ್ನಾಲ್ಕನೆಯ ಅಧ್ಯಾಯವು.