062 ಉತ್ತರಾಗಮನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ಗೋಹರಣ ಪರ್ವ

ಅಧ್ಯಾಯ 62

ಸಾರ

ಅಳಿದುಳಿದ ಕುರುಯೋಧರಿಗೆ ಅರ್ಜುನನು ಅಭಯವನ್ನು ನೀಡಿ (1-5), ನಗರಕ್ಕೆ ವಿಜಯದ ವಿಷಯವನ್ನು ತಿಳಿಸುವಂತೆ ಗೋಪಾಲಕರನ್ನು ಕಳಿಸೆಂದು ಉತ್ತರನಿಗೆ ಹೇಳುವುದು (6-11).

04062001 ವೈಶಂಪಾಯನ ಉವಾಚ।
04062001a ತತೋ ವಿಜಿತ್ಯ ಸಂಗ್ರಾಮೇ ಕುರೂನ್ಗೋವೃಷಭೇಕ್ಷಣಃ।
04062001c ಸಮಾನಯಾಮಾಸ ತದಾ ವಿರಾಟಸ್ಯ ಧನಂ ಮಹತ್।।

ವೈಶಂಪಾಯನನು ಹೇಳಿದನು: “ಅನಂತರ ಯುದ್ಧದಲ್ಲಿ ಕೌರವರನ್ನು ಗೆದ್ದು ಗೂಳಿಗಣ್ಣಿನ ಅರ್ಜುನನು ವಿರಾಟನ ದೊಡ್ಡ ಗೋಧನವನ್ನು ಮರಳಿ ತಂದನು.

04062002a ಗತೇಷು ಚ ಪ್ರಭಗ್ನೇಷು ಧಾರ್ತರಾಷ್ಟ್ರೇಷು ಸರ್ವಶಃ।
04062002c ವನಾನ್ನಿಷ್ಕ್ರಮ್ಯ ಗಹನಾದ್ಬಹವಃ ಕುರುಸೈನಿಕಾಃ।।
04062003a ಭಯಾತ್ಸಂತ್ರಸ್ತಮನಸಃ ಸಮಾಜಗ್ಮುಸ್ತತಸ್ತತಃ।
04062003c ಮುಕ್ತಕೇಶಾ ವ್ಯದೃಶ್ಯಂತ ಸ್ಥಿತಾಃ ಪ್ರಾಂಜಲಯಸ್ತದಾ।।

ಕೌರವರು ಎಲ್ಲರೀತಿಯಿಂದ ಭಗ್ನರಾಗಿ ಹೋಗಲು ಬಹುಮಂದಿ ಕುರುಸೈನಿನಿಕರು ಅಡಗಿದ್ದ ಕಾಡಿನಿಂದ ಹೊರಬಿದ್ದು ಭಯಗೊಂಡ ಮನಸ್ಸುಳ್ಳವರಾಗಿ ಬೇರೆಬೇರೆ ಕಡೆಯಿಂದ ಪಾರ್ಥನ ಬಳಿ ಬಂದರು. ಕೆರಳಿದ ತಲೆಯವರಾಗಿ ಕಂಡುಬಂದ ಅವರು ಆಗ ಕೈಜೋಡಿಸಿ ನಿಂತರು.

04062004a ಕ್ಷುತ್ಪಿಪಾಸಾಪರಿಶ್ರಾಂತಾ ವಿದೇಶಸ್ಥಾ ವಿಚೇತಸಃ।
04062004c ಊಚುಃ ಪ್ರಣಮ್ಯ ಸಂಭ್ರಾಂತಾಃ ಪಾರ್ಥ ಕಿಂ ಕರವಾಮ ತೇ।।

ಹಸಿವು ಬಾಯಾರಿಕೆಗಳಿಂದ ಬಳಲಿದ್ದವರೂ ವಿದೇಶದಲ್ಲಿದ್ದವರೂ ಚೈತನ್ಯಹೀನರೂ ಆಗಿದ್ದ ಅವರು ನಮಸ್ಕರಿಸಿ “ಪಾರ್ಥ! ನಾವು ನಿನಗೆ ಏನು ಮಾಡಬೇಕು?” ಎಂದು ದಿಗ್ಭ್ರಾಂತರಾಗಿ ಕೇಳಿದರು.

04062005 ಅರ್ಜುನ ಉವಾಚ।
04062005a ಸ್ವಸ್ತಿ ವ್ರಜತ ಭದ್ರಂ ವೋ ನ ಭೇತವ್ಯಂ ಕಥಂ ಚನ।
04062005c ನಾಹಮಾರ್ತಾಂ ಜಿಘಾಂಸಾಮಿ ಭೃಶಮಾಶ್ವಾಸಯಾಮಿ ವಃ।।

ಅರ್ಜುನನು ಹೇಳಿದನು: “ಒಳ್ಳೆಯದು! ಹೋಗಿ! ನಿಮಗೆ ಮಂಗಳವಾಗಲಿ! ಯಾವಕಾರಣದಿಂದಲೂ ಹೆದರಬೇಕಾಗಿಲ್ಲ. ಆರ್ತರನ್ನು ನಾನು ಕೊಲ್ಲಬಯಸುವುದಿಲ್ಲ. ನಿಮಗೆ ಬಹಳವಾಗಿ ಭರವಸೆಯನ್ನು ಕೊಡುತ್ತೇನೆ.””

04062006 ವೈಶಂಪಾಯನ ಉವಾಚ।
04062006a ತಸ್ಯ ತಾಮಭಯಾಂ ವಾಚಂ ಶ್ರುತ್ವಾ ಯೋಧಾಃ ಸಮಾಗತಾಃ।
04062006c ಆಯುಃಕೀರ್ತಿಯಶೋದಾಭಿಸ್ತಮಾಶಿರ್ಭಿರನಂದಯನ್।।

ವೈಶಂಪಾಯನನು ಹೇಳಿದನು: “ಬಂದಿದ್ದ ಯೋಧರು ಅವನ ಆ ಅಭಯವಾಕ್ಯವನ್ನು ಕೇಳಿ ಅವನಿಗೆ ಆಯುಷ್ಯ, ಕೀರ್ತಿ, ಯಶಸ್ಸುಗಳನ್ನು ಹಾರೈಸಿ ಅವನನ್ನು ಅಭಿನಂದಿಸಿದರು.

04062007a ತತೋ ನಿವೃತ್ತಾಃ ಕುರವಃ ಪ್ರಭಗ್ನಾ ವಶಮಾಸ್ಥಿತಾಃ।
04062007c ಪಂಥಾನಮುಪಸಂಗಮ್ಯ ಫಲ್ಗುನೋ ವಾಕ್ಯಮಬ್ರವೀತ್।।

ಅನಂತರ ಆ ಭಗ್ನ ಕುರುಯೋಧರು ಹಿಂದಿರುಗಿದರು. ತನ್ನ ದಾರಿಹಿಡಿದ ಅರ್ಜುನನನು ಉತ್ತರನಿಗೆ ಈ ಮಾತನ್ನಾಡಿದನು.

04062008a ರಾಜಪುತ್ರ ಪ್ರತ್ಯವೇಕ್ಷ ಸಮಾನೀತಾನಿ ಸರ್ವಶಃ।
04062008c ಗೋಕುಲಾನಿ ಮಹಾಬಾಹೋ ವೀರ ಗೋಪಾಲಕೈಃ ಸಹ।।
04062009a ತತೋಽಪರಾಹ್ಣೇ ಯಾಸ್ಯಾಮೋ ವಿರಾಟನಗರಂ ಪ್ರತಿ।
04062009c ಆಶ್ವಾಸ್ಯ ಪಾಯಯಿತ್ವಾ ಚ ಪರಿಪ್ಲಾವ್ಯ ಚ ವಾಜಿನಃ।।

“ರಾಜಪುತ್ರ! ಮಹಾಬಾಹೋ! ವೀರ! ಗೋಪಾಲಕರೊಡನೆ ಗೋಸಮೂಹವನ್ನೆಲ್ಲ ಹಿಂದಕ್ಕೆ ತಂದಿದ್ದೀವೆಯೋ ನೋಡು. ಕುದುರೆಗಳನ್ನು ಸಾಂತ್ವನಗೊಳಿಸಿ, ನೀರು ಕುಡಿಯಿಸಿ, ಮೀಯಿಸಿ, ಅನಂತರ ಸಾಯಂಕಾಲ ವಿರಾಟನಗರಕ್ಕೆ ಹೋಗೋಣ.

04062010a ಗಚ್ಛಂತು ತ್ವರಿತಾಶ್ಚೈವ ಗೋಪಾಲಾಃ ಪ್ರೇಷಿತಾಸ್ತ್ವಯಾ।
04062010c ನಗರೇ ಪ್ರಿಯಮಾಖ್ಯಾತುಂ ಘೋಷಯಂತು ಚ ತೇ ಜಯಂ।।

ನೀನು ಕಳುಹಿಸುವ ಈ ಗೋಪಾಲಕರು ಬೇಗ ನಗರಕ್ಕೆ ಹೋಗಲಿ. ಪ್ರಿಯವನ್ನು ಹೇಳುವುದಕ್ಕಾಗಿ ನಿನ್ನ ಜಯಘೋಷ ಮಾಡಲಿ.””

04062011 ವೈಶಂಪಾಯನ ಉವಾಚ।
04062011a ಉತ್ತರಸ್ತ್ವರಮಾಣೋಽಥ ದೂತಾನಾಜ್ಞಾಪಯತ್ತತಃ।
04062011c ವಚನಾದರ್ಜುನಸ್ಯೈವ ಆಚಕ್ಷಧ್ವಂ ಜಯಂ ಮಮ।।

ವೈಶಂಪಾಯನನು ಹೇಳಿದನು: “ಬಳಿಕ ಉತ್ತರನು ಅರ್ಜುನನ ಮಾತಿನಂತೆ “ನನ್ನ ವಿಜಯವನ್ನು ಸಾರಿ!” ಎಂದು ಶೀಘ್ರವಾಗಿ ದೂತರಿಗೆ ಅಪ್ಪಣೆ ಮಾಡಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಾಗಮನೇ ದ್ವಿಷಷ್ಟಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಾಗಮನದಲ್ಲಿ ಅರವತ್ತೆರಡನೆಯ ಅಧ್ಯಾಯವು. ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವವು. ಇದೂವರೆಗಿನ ಒಟ್ಟು ಮಹಾಪರ್ವಗಳು-3/18, ಉಪಪರ್ವಗಳು-47/100, ಅಧ್ಯಾಯಗಳು-658/1995, ಶ್ಲೋಕಗಳು-21539/73784.