ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ವಿರಾಟ ಪರ್ವ
ಗೋಹರಣ ಪರ್ವ
ಅಧ್ಯಾಯ 61
ಸಾರ
ತನ್ನ ಮೇಲೆ ತಿರುಗಿ ಬಿದ್ದ ಕೌರವ ಸೇನೆಯ ಮೇಲೆ ಅರ್ಜುನನು ಸಮ್ಮೋಹನಾಸ್ತ್ರವನ್ನು ಪ್ರಯೋಗಿಸಿ, ಶಂಖವನ್ನೂದಿ, ಸರ್ವ ಸೇನೆಗಳನ್ನೂ ಮೂರ್ಛೆಗೊಳಿಸಿದುದು (1-11). ಮೂರ್ಛಿತರಾದ ಮಹಾರಥರ ವಸ್ತ್ರಗಳನ್ನು ತೆಗೆದುಕೊಂಡು ರಥವನ್ನೇರಿ ರಣದಿಂದಾಚೆಗೆ ಅರ್ಜುನ-ಉತ್ತರರು ಹೋದುದು (12-16). ಹಾಗೆ ಹೋಗುತ್ತಿದ್ದ ಅರ್ಜುನನನ್ನು ಭೀಷ್ಮನು ಬಾಣಗಳಿಂದ ಹೊಡೆಯಲು ಅರ್ಜುನನು ಅವನ ಕುದುರೆಗಳನ್ನು ಕೊಂದು ಪಕ್ಕೆಗಳಿಗೆ ಹೊಡೆದು ಮುಂದುವರೆದಿದು (17-18). ಎಚ್ಚೆತ್ತ ದುರ್ಯೋಧನನು ಅರ್ಜುನನನ್ನು ಹಿಡಿಯಲು ಬಯಸಿದರೂ ಭೀಷ್ಮನ ಹಿತವಚನದಿಂದ ಸುಮ್ಮನಾಗಿ ಎಲ್ಲರೂ ಮರಳಲು ನಿರ್ಧರಿಸಿದುದು (19-24). ಹಿಂದಿರುಗುತ್ತಿದ್ದ ಹಿರಿಯರನ್ನು ಅರ್ಜುನನು ಗೌರವಿಸಿದುದು ಮತ್ತು ದುರ್ಯೋಧನನನ್ನು ಕಿರೀಟ ತುಂಡರಿಸಿ ಅಪಮಾನಿಸಿದುದು (25-29).
04061001 ವೈಶಂಪಾಯನ ಉವಾಚ।
04061001a ಆಹೂಯಮಾನಸ್ತು ಸ ತೇನ ಸಂಖ್ಯೇ। ಮಹಾಮನಾ ಧೃತರಾಷ್ಟ್ರಸ್ಯ ಪುತ್ರಃ।
04061001c ನಿವರ್ತಿತಸ್ತಸ್ಯ ಗಿರಾಮ್ಕುಶೇನ। ಗಜೋ ಯಥಾ ಮತ್ತ ಇವಾಂಕುಶೇನ।।
ವೈಶಂಪಾಯನನು ಹೇಳಿದನು: “ಅವನಿಂದ ಯುದ್ಧಕ್ಕೆ ಆಹ್ವಾನಿತನಾದ ಮಹಾತ್ಮ ದುರ್ಯೋಧನನು ಅಂಕುಶದಿಂದ ತಿವಿತಗೊಂಡ ಮದಗಜವು ಹಿಂದಕ್ಕೆ ತಿರುಗುವಂತೆ ಅವನ ಮಾತಿನ ಅಂಕುಶದಿಂದ ತಿವಿತಗೊಂಡು ಹಿಂದಿರುಗಿದನು.
04061002a ಸೋಽಮೃಷ್ಯಮಾಣೋ ವಚಸಾಭಿಮೃಷ್ಟೋ। ಮಹಾರಥೇನಾತಿರಥಸ್ತರಸ್ವೀ।
04061002c ಪರ್ಯಾವವರ್ತಾಥ ರಥೇನ ವೀರೋ। ಭೋಗೀ ಯಥಾ ಪಾದತಲಾಭಿಮೃಷ್ಟಃ।।
ಆ ಅತಿರಥ, ಶೀಘ್ರತೆಯುಳ್ಳ ವೀರನು ಕಾಲಿನಿಂದ ತುಳಿದ ಸರ್ಪದಂತೆ ಮಹಾರಥಿ ಅರ್ಜುನನ ಮಾತಿನಿಂದ ಪೆಟ್ಟುಗೊಂಡು ಅದನ್ನು ಸೈರಿಸಲಾರದೇ ರಥದಲ್ಲಿ ಹಿಂದಿರುಗಿದನು.
04061003a ತಂ ಪ್ರೇಕ್ಷ್ಯ ಕರ್ಣಃ ಪರಿವರ್ತಮಾನಂ। ನಿವರ್ತ್ಯ ಸಂಸ್ತಭ್ಯ ಚ ವಿದ್ಧಗಾತ್ರಃ।
04061003c ದುರ್ಯೋಧನಂ ದಕ್ಷಿಣತೋಽಭ್ಯಗಚ್ಛತ್। ಪಾರ್ಥಂ ನೃವೀರೋ ಯುಧಿ ಹೇಮಮಾಲೀ।।
ಹಿಂದಕ್ಕೆ ಬರುತ್ತಿದ್ದ ಆ ದುರ್ಯೋಧನನ್ನು ನೋಡಿ ಯುದ್ಧದಲ್ಲಿ ಶರೀರ ಗಾಯಗೊಂಡ, ಸುವರ್ಣಮಾಲೆಯನ್ನು ಧರಿಸಿದ ವೀರ ಕರ್ಣನು ಅವನನ್ನು ತಡೆದು ದುರ್ಯೋಧನನ ಬಲಗಡೆಯಿದ ಪಾರ್ಥನಿದ್ದೆಡಗೆ ಹೋದನು.
04061004a ಭೀಷ್ಮಸ್ತತಃ ಶಾಂತನವೋ ನಿವೃತ್ಯ। ಹಿರಣ್ಯಕಕ್ಷ್ಯಾಂಸ್ತ್ವರಯಂಸ್ತುರಂಗಾನ್।
04061004c ದುರ್ಯೋಧನಂ ಪಶ್ಚಿಮತೋಽಭ್ಯರಕ್ಷತ್। ಪಾರ್ಥಾನ್ಮಹಾಬಾಹುರಧಿಜ್ಯಧನ್ವಾ।।
ಬಳಿಕ ಮಹಾಬಾಹು ಶಂತನುಪುತ್ರ ಭೀಷ್ಮನು ಚಿನ್ನದ ಜೀನುಗಳನ್ನುಳ್ಳ ಕುದುರೆಗಳನ್ನು ತ್ವರೆಗೊಳಿಸಿ ಹಿಂದಕ್ಕೆ ತಿರುಗಿಸಿ, ಬಿಲ್ಲನ್ನು ಮಿಡಿಯುತ್ತ ಹಿಂದಿನಿಂದ ದುರ್ಯೋಧನನನ್ನು ಪಾರ್ಥನಿಂದ ರಕ್ಷಿಸಿದನು.
04061005a ದ್ರೋಣಃ ಕೃಪಶ್ಚೈವ ವಿವಿಂಶತಿಶ್ಚ। ದುಃಶಾಸನಶ್ಚೈವ ನಿವೃತ್ಯ ಶೀಘ್ರಂ।
04061005c ಸರ್ವೇ ಪುರಸ್ತಾದ್ವಿತತೇಷುಚಾಪಾ। ದುರ್ಯೋಧನಾರ್ಥಂ ತ್ವರಿತಾಭ್ಯುಪೇಯುಃ।।
ದ್ರೋಣ, ಕೃಪ, ವಿವಿಂಶತಿ, ದುಃಶಾಸನ - ಎಲ್ಲರೂ ಬೇಗ ಹಿಂದಿರುಗಿ, ಬಾಣಹೂಡಿದ ಬಿಲ್ಲುಗಳನ್ನೆಳೆದು ದುರ್ಯೋಧನನ ರಕ್ಷಣೆಗಾಗಿ ಮುನ್ನುಗ್ಗಿದರು.
04061006a ಸ ತಾನ್ಯನೀಕಾನಿ ನಿವರ್ತಮಾನಾನ್ಯ್। ಆಲೋಕ್ಯ ಪೂರ್ಣೌಘನಿಭಾನಿ ಪಾರ್ಥಃ।
04061006c ಹಂಸೋ ಯಥಾ ಮೇಘಮಿವಾಪತಂತಂ। ಧನಂಜಯಃ ಪ್ರತ್ಯಪತತ್ತರಸ್ವೀ।।
ಹಿಂದಿರುಗಿ ಪೂರ್ಣಪ್ರವಾಹಸದೃಶ ಆ ಸೈನ್ಯಗಳನ್ನು ನೋಡಿದ ಕುಂತೀಪುತ್ರ ವೇಗಶಾಲಿ ಧನಂಜಯನು ಥಟ್ಟನೆ ಎದುರಾದ ಮೋಡಕ್ಕೆರಗುವ ಹಂಸದಂತೆ ಅವುಗಳ ಮೇಲೆ ಬಿದ್ದನು.
04061007a ತೇ ಸರ್ವತಃ ಸಂಪರಿವಾರ್ಯ ಪಾರ್ಥಂ। ಅಸ್ತ್ರಾಣಿ ದಿವ್ಯಾನಿ ಸಮಾದದಾನಾಃ।
04061007c ವವರ್ಷುರಭ್ಯೇತ್ಯ ಶರೈಃ ಸಮಂತಾನ್। ಮೇಘಾ ಯಥಾ ಭೂಧರಮಂಬುವೇಗೈಃ।।
ಅವರು ದಿವ್ಯಾಸ್ತ್ರಗಳನ್ನು ಹಿಡಿದು ಪಾರ್ಥನನ್ನು ಎಲ್ಲ ಕಡೆಗಳಿಂದಲೂ ಮುತ್ತಿ ಮೋಡಗಳು ಪರ್ವತದ ಮೇಲೆ ಜಲಧಾರೆಯನ್ನು ಸುರಿಸುವಂತೆ ಅವನ ಮೇಲೆ ಬಿದ್ದು ಸುತ್ತಲೂ ಬಾಣಗಳನ್ನು ಸುರಿಸಿದರು.
04061008a ತತೋಽಸ್ತ್ರಮಸ್ತ್ರೇಣ ನಿವಾರ್ಯ ತೇಷಾಂ। ಗಾಂಡೀವಧನ್ವಾ ಕುರುಪುಂಗವಾನಾಂ।
04061008c ಸಮ್ಮೋಹನಂ ಶತ್ರುಸಹೋಽನ್ಯದಸ್ತ್ರಂ। ಪ್ರಾದುಶ್ಚಕಾರೈಂದ್ರಿರಪಾರಣೀಯಂ।।
ಆಗ ಶತ್ರುಗಳನ್ನು ಎದುರಿಸಬಲ್ಲ ಇಂದ್ರಪುತ್ರ ಗಾಂಡೀವಿಯು ಆ ಕೌರವಶ್ರೇಷ್ಠರ ಅಸ್ತ್ರಗಳನ್ನು ಅಸ್ತ್ರದಿಂದ ನಿವಾರಿಸಿ, ಸಮ್ಮೋಹನವೆಂಬ ಮತ್ತೊಂದು ಅಜೇಯ ಅಸ್ತ್ರವನ್ನು ಹೊರತೆಗೆದನು.
04061009a ತತೋ ದಿಶಶ್ಚಾನುದಿಶೋ ವಿವೃತ್ಯ। ಶರೈಃ ಸುಧಾರೈರ್ನಿಶಿತೈಃ ಸುಪುಂಖೈಃ।
04061009c ಗಾಂಡೀವಘೋಷೇಣ ಮನಾಂಸಿ ತೇಷಾಂ। ಮಹಾಬಲಃ ಪ್ರವ್ಯಥಯಾಂ ಚಕಾರ।।
ಆ ಬಲಶಾಲಿಯು ಹರಿತ ಅಲಗುಗಳಿಂದಲೂ, ಅಂದದ ಗರಿಗಳಿಂದಲೂ ಕೂಡಿದ ಬಾಣಗಳಿಂದ ಎಲ್ಲ ದಿಕ್ಕುಗಳನ್ನೂ ಮುಚ್ಚಿ ಗಾಂಡೀವ ಘೋಷದಿಂದ ಅವರ ಮನಸ್ಸುಗಳಿಗೆ ವ್ಯಥೆಯನ್ನುಂಟುಮಾಡಿದನು.
04061010a ತತಃ ಪುನರ್ಭೀಮರವಂ ಪ್ರಗೃಹ್ಯ। ದೋರ್ಭ್ಯಾಂ ಮಹಾಶಂಖಮುದಾರಘೋಷಂ।
04061010c ವ್ಯನಾದಯತ್ಸ ಪ್ರದಿಶೋ ದಿಶಃ ಖಂ। ಭುವಂ ಚ ಪಾರ್ಥೋ ದ್ವಿಷತಾಂ ನಿಹಂತಾ।।
ಆಗ ಶತ್ರುನಾಶಕ ಪಾರ್ಥನು ಭಯಂಕರ ಧ್ವನಿಯ, ಮಹಾಘೋಷವನ್ನುಳ್ಳ, ಮಹಾಶಂಖವನ್ನು ಎರಡು ಕೈಗಳಿಂದಲೂ ಹಿಡಿದು ಊದಿ ದಿಕ್ಕುದಿಕ್ಕುಗಳನ್ನೂ ಭೂಮ್ಯಾಕಾಶಗಳನ್ನೂ ಮೊಳಗಿಸಿದನು.
04061011a ತೇ ಶಂಖನಾದೇನ ಕುರುಪ್ರವೀರಾಃ। ಸಮ್ಮೋಹಿತಾಃ ಪಾರ್ಥಸಮೀರಿತೇನ।
04061011c ಉತ್ಸೃಜ್ಯ ಚಾಪಾನಿ ದುರಾಸದಾನಿ। ಸರ್ವೇ ತದಾ ಶಾಂತಿಪರಾ ಬಭೂವುಃ।।
ಪಾರ್ಥನು ಊದಿದ ಆ ಶಂಖದ ಶಬ್ಧದಿಂದ ಕೌರವವೀರರೆಲ್ಲ ಮೂರ್ಛಿತರಾಗಿ ಎದುರಿಸಲು ಅಶಕ್ಯವಾಗಿದ್ದ ತಮ್ಮ ಬಿಲ್ಲುಗಳನ್ನು ತ್ಯಜಿಸಿ ಸ್ತಬ್ಧರಾದರು.
04061012a ತಥಾ ವಿಸಂಜ್ಞೇಷು ಪರೇಷು ಪಾರ್ಥಃ। ಸ್ಮೃತ್ವಾ ತು ವಾಕ್ಯಾನಿ ತಥೋತ್ತರಾಯಾಃ।
04061012c ನಿರ್ಯಾಹಿ ಮಧ್ಯಾದಿತಿ ಮತ್ಸ್ಯಪುತ್ರಂ। ಉವಾಚ ಯಾವತ್ಕುರವೋ ವಿಸಂಜ್ಞಾಃ।।
ಹಾಗೆ ಶತ್ರುಗಳು ಪ್ರಜ್ಞಾಹೀನರಾಗಿರಲು ಪಾರ್ಥನು ಉತ್ತರೆಯ ಮಾತುಗಳನ್ನು ಜ್ಞಾಪಿಸಿಕೊಂಡು ವಿರಾಟಪುತ್ರನಿಗೆ ಹೇಳಿದನು: “ಕೌರವರು ಪ್ರಜ್ಞಾಶೀಲರಾಗುವುದರೊಳಗೇ ಅವರ ನಡುವೆ ಹೋಗು.
04061013a ಆಚಾರ್ಯ ಶಾರದ್ವತಯೋಃ ಸುಶುಕ್ಲೇ। ಕರ್ಣಸ್ಯ ಪೀತಂ ರುಚಿರಂ ಚ ವಸ್ತ್ರಂ।
04061013c ದ್ರೌಣೇಶ್ಚ ರಾಜ್ಞಶ್ಚ ತಥೈವ ನೀಲೇ। ವಸ್ತ್ರೇ ಸಮಾದತ್ಸ್ವ ನರಪ್ರವೀರ।।
ವೀರಶ್ರೇಷ್ಠ! ಆಚಾರ್ಯ ದ್ರೋಣನ ಮತ್ತು ಕೃಪನ ಬಿಳಿಯ ವಸ್ತ್ರಗಳನ್ನೂ, ಕರ್ಣನ ಸುಂದರ ಹಳದಿ ವಸ್ತ್ರವನ್ನೂ, ಅಶ್ವತ್ಥಾಮನ ಹಾಗೂ ರಾಜ ದುರ್ಯೊಧನನ ನೀಲಿ ವಸ್ತ್ರವನ್ನೂ ತೆಗೆದುಕೊಂಡು ಬಾ.
04061014a ಭೀಷ್ಮಸ್ಯ ಸಂಜ್ಞಾಂ ತು ತಥೈವ ಮನ್ಯೇ। ಜಾನಾತಿ ಮೇಽಸ್ತ್ರಪ್ರತಿಘಾತಮೇಷಃ।
04061014c ಏತಸ್ಯ ವಾಹಾನ್ಕುರು ಸವ್ಯತಸ್ತ್ವಂ। ಏವಂ ಹಿ ಯಾತವ್ಯಮಮೂಢಸಂಜ್ಞೈಃ।।
ಭೀಷ್ಮನು ಎಚ್ಚರವಾಗಿದ್ದಾನೆಂದು ಭಾವಿಸುತ್ತೇನೆ. ನನ್ನ ಅಸ್ತ್ರಕ್ಕೆ ಪ್ರತೀಕಾರವನ್ನು ಅವನು ಬಲ್ಲ. ಅವನ ಕುದುರೆಗಳನ್ನು ಎಡಕ್ಕಿಟ್ಟುಕೊಂಡು ಹೋಗು. ಪ್ರಜ್ಞೆತಪ್ಪದಿರುವವರ ಬಳಿಗೆ ಹೀಗೆಯೇ ಹೋಗಬೇಕು.”
04061015a ರಶ್ಮೀನ್ಸಮುತ್ಸೃಜ್ಯ ತತೋ ಮಹಾತ್ಮಾ। ರಥಾದವಪ್ಲುತ್ಯ ವಿರಾಟಪುತ್ರಃ।
04061015c ವಸ್ತ್ರಾಣ್ಯುಪಾದಾಯ ಮಹಾರಥಾನಾಂ। ತೂರ್ಣಂ ಪುನಃ ಸ್ವಂ ರಥಮಾರುರೋಹ।।
ಆಗ ಮಹಾಸತ್ವ ವಿರಾಟಪುತ್ರನು ಕಡಿವಾಣಗಳನ್ನು ಬಿಟ್ಟು, ರಥದಿಂದ ಧುಮುಕಿ, ಮಹಾರಥರ ವಸ್ತ್ರಗಳನ್ನು ತೆಗೆದುಕೊಂಡು ಶೀಘ್ರವಾಗಿ ಮತ್ತೆ ರಥವನ್ನೇರಿದನು.
04061016a ತತೋಽನ್ವಶಾಸಚ್ಚತುರಃ ಸದಶ್ವಾನ್। ಪುತ್ರೋ ವಿರಾಟಸ್ಯ ಹಿರಣ್ಯಕಕ್ಷ್ಯಾನ್।
04061016c ತೇ ತದ್ವ್ಯತೀಯುರ್ಧ್ವಜಿನಾಮನೀಕಂ। ಶ್ವೇತಾ ವಹಂತೋಽರ್ಜುನಮಾಜಿಮಧ್ಯಾತ್।।
ವಿರಾಟಪುತ್ರನು ಚಿನ್ನದ ಜೀನುಗಳನ್ನುಳ್ಳ ನಾಲ್ಕು ಉತ್ತಮ ಕುದುರೆಗಳನ್ನು ಮುನ್ನಡೆಸಿದನು. ಆ ಬಿಳಿಯ ಕುದುರೆಗಳು ಅರ್ಜುನನನ್ನು ರಣರಂಗದ ಮಧ್ಯದಿಂದ ರಣದಿಂದಾದಾಚೆಗೆ ಕೊಂಡೊಯ್ದವು.
04061017a ತಥಾ ತು ಯಾಂತಂ ಪುರುಷಪ್ರವೀರಂ। ಭೀಷ್ಮಃ ಶರೈರಭ್ಯಹನತ್ತರಸ್ವೀ।
04061017c ಸ ಚಾಪಿ ಭೀಷ್ಮಸ್ಯ ಹಯಾನ್ನಿಹತ್ಯ। ವಿವ್ಯಾಧ ಪಾರ್ಶ್ವೇ ದಶಭಿಃ ಪೃಷತ್ಕೈಃ।।
ಹಾಗೆ ಹೋಗುತ್ತಿದ್ದ ವೀರಪುರುಷ ಅರ್ಜುನನನ್ನು ಚುರುಕಿನಿಂದ ಕೂಡಿದ ಭೀಷ್ಮನು ಬಾಣಗಳಿಂದ ಹೊಡೆದನು. ಅವನಾದರೋ ಭೀಷ್ಮನ ಕುದುರೆಗಳನ್ನು ಕೊಂದು ಹತ್ತು ಬಾಣಗಳಿಂದ ಅವನ ಪಕ್ಕೆಗೆ ಹೊಡೆದನು.
04061018a ತತೋಽರ್ಜುನೋ ಭೀಷ್ಮಮಪಾಸ್ಯ ಯುದ್ಧೇ। ವಿದ್ಧ್ವಾಸ್ಯ ಯಂತಾರಮರಿಷ್ಟಧನ್ವಾ।
04061018c ತಸ್ಥೌ ವಿಮುಕ್ತೋ ರಥವೃಂದಮಧ್ಯಾದ್। ರಾಹುಂ ವಿದಾರ್ಯೇವ ಸಹಸ್ರರಶ್ಮಿಃ।।
ಬಳಿಕ ಅಜೇಯ ಬಿಲ್ಲನ್ನುಳ್ಳ ಅರ್ಜುನನನು ಭೀಷ್ಮನನ್ನು ಯುದ್ಧರಂಗದಲ್ಲಿ ಬಿಟ್ಟು ಅವನ ಸಾರಥಿಯನ್ನು ಹೊಡೆದು ರಾಹುವನ್ನು ಸೀಳಿಕೊಂಡು ಸೂರ್ಯನು ಹೊರಬರುವಂತೆ ರಥಸಮೂಹದ ಮಧ್ಯದಿಂದ ಹೊರಬಂದು ನಿಂತನು.
04061019a ಲಬ್ಧ್ವಾ ತು ಸಂಜ್ಞಾಂ ಚ ಕುರುಪ್ರವೀರಃ। ಪಾರ್ಥಂ ಸಮೀಕ್ಷ್ಯಾಥ ಮಹೇಂದ್ರಕಲ್ಪಂ।
04061019c ರಣಾದ್ವಿಮುಕ್ತಂ ಸ್ಥಿತಮೇಕಮಾಜೌ। ಸ ಧಾರ್ತರಾಷ್ಟ್ರಸ್ತ್ವರಿತೋ ಬಭಾಷೇ।।
ರಣದಿಂದ ಹೊರಬಂದು ಯುದ್ಧರಂಗದಲ್ಲಿ ಏಕಾಂಗಿಯಾಗಿ ನಿಂತಿದ್ದ ಮಹೇಂದ್ರಸಮ ಪಾರ್ಥನನ್ನು ಪ್ರಜ್ಞೆಬಂದ ಕುರುವೀರ ದುರ್ಯೋಧನನು ಕಂಡು ಭೀಷ್ಮನಿಗೆ ನುಡಿದನು:
04061020a ಅಯಂ ಕಥಂ ಸ್ವಿದ್ಭವತಾಂ ವಿಮುಕ್ತಸ್। ತಂ ವೈ ಪ್ರಬಧ್ನೀತ ಯಥಾ ನ ಮುಚ್ಯೇತ್।
04061020c ತಮಬ್ರವೀಚ್ಚಾಂತನವಃ ಪ್ರಹಸ್ಯ। ಕ್ವ ತೇ ಗತಾ ಬುದ್ಧಿರಭೂತ್ಕ್ವ ವೀರ್ಯಂ।।
“ಇವನು ಹೇಗೆ ನಮ್ಮಿಂದ ತಪ್ಪಿಸಿಕೊಂಡ? ತಪ್ಪಿಸಿಕೊಳ್ಳದಂತೆ ಇವನನ್ನು ಕಟ್ಟಿಹಾಕಿ!” ಭೀಷ್ಮನು ನಕ್ಕು ಅವನಿಗೆ ಹೇಳಿದನು: “ನಿನ್ನ ಬುದ್ಧಿ ಎಲ್ಲಿ ಹೋಗಿತ್ತು? ನಿನ್ನ ಶೌರ್ಯ ಎಲ್ಲಿ ಹೋಗಿತ್ತು?
04061021a ಶಾಂತಿಂ ಪರಾಶ್ವಸ್ಯ ಯಥಾ ಸ್ಥಿತೋಽಭೂರ್। ಉತ್ಸೃಜ್ಯ ಬಾಣಾಂಶ್ಚ ಧನುಶ್ಚ ಚಿತ್ರಂ।
04061021c ನ ತ್ವೇವ ಬೀಭತ್ಸುರಲಂ ನೃಶಂಸಂ। ಕರ್ತುಂ ನ ಪಾಪೇಽಸ್ಯ ಮನೋ ನಿವಿಷ್ಟಂ।।
ಬಾಣಗಳನ್ನೂ ಸುಂದರ ಬಿಲ್ಲನ್ನೂ ತ್ಯಜಿಸಿ ತೆಪ್ಪಗೆ ಸ್ತಬ್ಧನಾಗಿದ್ದೆಯಲ್ಲ? ಅರ್ಜುನನು ಕ್ರೂರಕಾರ್ಯವನ್ನು ಮಾಡುವವನಲ್ಲ. ಅವನ ಮನಸ್ಸು ಪಾಪದಲ್ಲಿ ಆಸಕ್ತವಾಗಿಲ್ಲ.
04061022a ತ್ರೈಲೋಕ್ಯಹೇತೋರ್ನ ಜಹೇತ್ಸ್ವಧರ್ಮಂ। ತಸ್ಮಾನ್ನ ಸರ್ವೇ ನಿಹತಾ ರಣೇಽಸ್ಮಿನ್।
04061022c ಕ್ಷಿಪ್ರಂ ಕುರೂನ್ಯಾಹಿ ಕುರುಪ್ರವೀರ। ವಿಜಿತ್ಯ ಗಾಶ್ಚ ಪ್ರತಿಯಾತು ಪಾರ್ಥಃ।।
ಮೂರುಲೋಕಗಳಿಗಾಗಿಯಾದರೂ ಅವನು ಸ್ವಧರ್ಮವನ್ನು ಬಿಡುವುದಿಲ್ಲ. ಆದ್ದರಿಂದಲೇ ಈ ಯುದ್ಧದಲ್ಲಿ ಎಲ್ಲರೂ ಹತರಾಗಿಲ್ಲ. ಕುರುವೀರ! ಬೇಗ ಕುರುದೇಶಕ್ಕೆ ಹೋಗಿಬಿಡು. ಪಾರ್ಥನು ಗೋವುಗಳನ್ನು ಗೆದ್ದುಕೊಂಡು ಹಿಂದಿರುಗಲಿ.”
04061023a ದುರ್ಯೋಧನಸ್ತಸ್ಯ ತು ತನ್ನಿಶಮ್ಯ। ಪಿತಾಮಹಸ್ಯಾತ್ಮಹಿತಂ ವಚೋಽಥ।
04061023c ಅತೀತಕಾಮೋ ಯುಧಿ ಸೋಽತ್ಯಮರ್ಷೀ। ರಾಜಾ ವಿನಿಃಶ್ವಸ್ಯ ಬಭೂವ ತೂಷ್ಣೀಂ।।
ಆಗ ರಾಜ ದುರ್ಯೋಧನನು ತನಗೆ ಹಿತಕರವಾದ ಪಿತಾಮಹನ ಮಾತನ್ನು ಕೇಳಿ ಯುದ್ಧದ ಆಸೆಯನ್ನು ಬಿಟ್ಟು ಬಹಳ ಕೋಪದಿಂದ ನಿಡುಸುಯ್ದು ಸುಮ್ಮನಾದನು.
04061024a ತದ್ಭೀಷ್ಮವಾಕ್ಯಂ ಹಿತಮೀಕ್ಷ್ಯ ಸರ್ವೇ। ಧನಂಜಯಾಗ್ನಿಂ ಚ ವಿವರ್ಧಮಾನಂ।
04061024c ನಿವರ್ತನಾಯೈವ ಮನೋ ನಿದಧ್ಯುರ್। ದುರ್ಯೋಧನಂ ತೇ ಪರಿರಕ್ಷಮಾಣಾಃ।।
ಭೀಷ್ಮನ ಆ ಹಿತಕರ ಮಾತನ್ನು ಪರಿಭಾವಿಸಿ ಹೆಚ್ಚುತ್ತಿರುವ ಧನಂಜಯಾಗ್ನಿಯನ್ನು ನೋಡಿ ದುರ್ಯೊಧನನನ್ನು ರಕ್ಷಿಸುತ್ತಾ ಹಿಂದಿರುಗಲು ಅವರೆಲ್ಲರೂ ಮನಸ್ಸು ಮಾಡಿದರು.
04061025a ತಾನ್ಪ್ರಸ್ಥಿತಾನ್ಪ್ರೀತಮನಾಃ ಸ ಪಾರ್ಥೋ। ಧನಂಜಯಃ ಪ್ರೇಕ್ಷ್ಯ ಕುರುಪ್ರವೀರಾನ್।
04061025c ಆಭಾಷಮಾಣೋಽನುಯಯೌ ಮುಹೂರ್ತಂ। ಸಂಪೂಜಯಂಸ್ತತ್ರ ಗುರೂನ್ಮಹಾತ್ಮಾ।।
ಕುಂತೀಪುತ್ರ ಮಹಾತ್ಮ ಧನಂಜಯನು ಕೌರವವೀರರು ಹೊರಡುತ್ತಿರುವುದನ್ನು ಕಂಡು ಸಂತೋಷಚಿತ್ತನಾಗಿ ಹಿರಿಯರೊಡನೆ ಮಾತನಾಡುತ್ತಾ ಅವರನ್ನು ಆದರಿಸಿ ತುಸುಹೊತ್ತು ಹಿಂಬಾಲಿಸಿದನು.
04061026a ಪಿತಾಮಹಂ ಶಾಂತನವಂ ಸ ವೃದ್ಧಂ। ದ್ರೋಣಂ ಗುರುಂ ಚ ಪ್ರತಿಪೂಜ್ಯ ಮೂರ್ಧ್ನಾ।
04061026c ದ್ರೌಣಿಂ ಕೃಪಂ ಚೈವ ಗುರೂಂಶ್ಚ ಸರ್ವಾಂ। ಶರೈರ್ವಿಚಿತ್ರೈರಭಿವಾದ್ಯ ಚೈವ।।
ಅವನು ವೃದ್ಧ ಪಿತಾಮಹ ಶಾಂತನವನನ್ನೂ ಗುರುದ್ರೋಣನನ್ನೂ ತಲೆಬಾಗಿ ಗೌರವಿಸಿ ಅಶ್ವತ್ಥಾಮನನ್ನೂ ಕೃಪನನ್ನೂ ಇತರ ಎಲ್ಲ ಹಿರಿಯರನ್ನೂ ಸುಂದರ ಬಾಣಗಳಿಂದ ವಂದಿಸಿದನು.
04061027a ದುರ್ಯೋಧನಸ್ಯೋತ್ತಮರತ್ನಚಿತ್ರಂ। ಚಿಚ್ಛೇದ ಪಾರ್ಥೋ ಮುಕುಟಂ ಶರೇಣ।
04061027c ಆಮಂತ್ರ್ಯ ವೀರಾಂಶ್ಚ ತಥೈವ ಮಾನ್ಯಾನ್। ಗಾಂಡೀವಘೋಷೇಣ ವಿನಾದ್ಯ ಲೋಕಾನ್।।
ಪಾರ್ಥನು ಶ್ರೇಷ್ಠ ರತ್ನಗಳಿಂದ ಸುಂದರವಾಗಿದ್ದ ದುರ್ಯೋಧನನ ಕಿರೀಟವನ್ನು ಬಾಣದಿಂದ ತುಂಡರಿಸಿದನು. ಅಂತೆಯೇ ಗಾಂಡೀವಘೋಷದಿಂದ ಲೋಕಗಳನ್ನು ಮೊಳಗಿಸುತ್ತಾ ಮಾನ್ಯ ವೀರರನ್ನು ಕರೆದು ಆದರಿಸಿದನು.
04061028a ಸ ದೇವದತ್ತಂ ಸಹಸಾ ವಿನಾದ್ಯ। ವಿದಾರ್ಯ ವೀರೋ ದ್ವಿಷತಾಂ ಮನಾಂಸಿ।
04061028c ಧ್ವಜೇನ ಸರ್ವಾನಭಿಭೂಯ ಶತ್ರೂನ್। ಸ ಹೇಮಜಾಲೇನ ವಿರಾಜಮಾನಃ।।
ಆ ವೀರನು ಇದ್ದಕ್ಕಿದ್ದಂತೆ ದೇವದತ್ತವನ್ನು ಮೊಳಗಿಸಿ ಶತ್ರುಗಳ ಮನಸ್ಸನ್ನು ಭೇದಿಸಿದನು. ವೈರಿಗಳನ್ನೆಲ್ಲ ಸೋಲಿಸಿ ಚಿನ್ನದ ಸರಿಗೆಯುಳ್ಳ ಧ್ವಜದಿಂದ ಶೋಭಿಸಿದನು.
04061029a ದೃಷ್ಟ್ವಾ ಪ್ರಯಾತಾಂಸ್ತು ಕುರೂನ್ಕಿರೀಟೀ। ಹೃಷ್ಟೋಽಬ್ರವೀತ್ತತ್ರ ಸ ಮತ್ಸ್ಯಪುತ್ರಂ।
04061029c ಆವರ್ತಯಾಶ್ವಾನ್ಪಶವೋ ಜಿತಾಸ್ತೇ। ಯಾತಾಃ ಪರೇ ಯಾಹಿ ಪುರಂ ಪ್ರಹೃಷ್ಟಃ।।
ಕೌರವರು ಹೋದುದನ್ನು ನೋಡಿದ ಅರ್ಜುನನನು ಹರ್ಷಗೊಂಡು “ಕುದುರೆಗಳನ್ನು ತಿರುಗಿಸು. ನಿನ್ನ ಹಸುಗಳನ್ನು ಗೆದ್ದುದ್ದಾಯಿತು. ಶತ್ರುಗಳು ತೊಲಗಿದರು. ಸಂತೋಷದಿಂದ ನಗರಕ್ಕೆ ನಡೆ!” ಎಂದು ಉತ್ತರನಿಗೆ ಹೇಳಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಸಮಸ್ತಕೌರವಪಲಾಯನೇ ಏಕಷಷ್ಟಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಸಮಸ್ತಕೌರವಪಲಾಯನದಲ್ಲಿ ಅರವತ್ತೊಂದನೆಯ ಅಧ್ಯಾಯವು.