060 ಉತ್ತರಗೋಗ್ರಹೇ ದುರ್ಯೋಧನಾಪಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ಗೋಹರಣ ಪರ್ವ

ಅಧ್ಯಾಯ 60

ಸಾರ

ಅರ್ಜುನನು ದುರ್ಯೋಧನನನ್ನು ಎದುರಿಸಿ ಅವನನ್ನು ಓಡಿಸಿದುದು (1-15). ಅರ್ಜುನನು ದುರ್ಯೋಧನನನ್ನು ಹೀಯಾಳಿಸಿದುದು (16-19).

04060001 ವೈಶಂಪಾಯನ ಉವಾಚ।
04060001a ಭೀಷ್ಮೇ ತು ಸಂಗ್ರಾಮಶಿರೋ ವಿಹಾಯ। ಪಲಾಯಮಾನೇ ಧೃತರಾಷ್ಟ್ರಪುತ್ರಃ।
04060001c ಉಚ್ಛ್ರಿತ್ಯ ಕೇತುಂ ವಿನದನ್ಮಹಾತ್ಮಾ। ಸ್ವಯಂ ವಿಗೃಹ್ಯಾರ್ಜುನಮಾಸಸಾದ।।

ವೈಶಂಪಾಯನನು ಹೇಳಿದನು: “ಭೀಷ್ಮನು ರಣರಂಗವನ್ನು ಬಿಟ್ಟು ಓಡಿಹೋಗಲು ಮಹಾತ್ಮ ದುರ್ಯೋಧನನು ಬಾವುಟವನ್ನೇರಿಸಿ ಬಿಲ್ಲು ಹಿಡಿದು ಗರ್ಜನೆ ಮಾಡುತ್ತಾ ತಾನೇ ಅರ್ಜುನನನ್ನು ಎದುರಿಸಿದನು.

04060002a ಸ ಭೀಮಧನ್ವಾನಮುದಗ್ರವೀರ್ಯಂ। ಧನಂಜಯಂ ಶತ್ರುಗಣೇ ಚರಂತಂ।
04060002c ಆಕರ್ಣಪೂರ್ಣಾಯತಚೋದಿತೇನ। ಭಲ್ಲೇನ ವಿವ್ಯಾಧ ಲಲಾಟಮಧ್ಯೇ।।

ಅವನು ಭಯಂಕರ ಬಿಲ್ಲನ್ನು ಹಿಡಿದ, ಉತ್ತುಂಗ ಪರಾಕ್ರಮವನ್ನುಳ್ಳ, ಶತ್ರುಸಮೂಹದಲ್ಲಿ ಸಂಚರಿಸುತ್ತಿದ್ದ ಧನಂಜಯನ ನಡುಹಣೆಗೆ ಕಿವಿಯವರೆಗೂ ಸೆಳೆದು ಬಿಟ್ಟ ಭಲ್ಲೆಯಿಂದ ಹೊಡೆದನು.

04060003a ಸ ತೇನ ಬಾಣೇನ ಸಮರ್ಪಿತೇನ। ಜಾಂಬೂನದಾಭೇನ ಸುಸಂಶಿತೇನ।
04060003c ರರಾಜ ರಾಜನ್ಮಹನೀಯಕರ್ಮಾ। ಯಥೈಕಪರ್ವಾ ರುಚಿರೈಕಶೃಂಗಃ।।

ರಾಜನ್! ಮಹಾಕಾರ್ಯಗಳನ್ನು ಮಾಡಿದ ಆ ಅರ್ಜುನನು ಸುವರ್ಣಸದೃಶವೂ ತೀಕ್ಷ್ಣವೂ ಆದ ಆ ಬಾಣವು ನಾಟಲು, ಸುಂದರವಾದ ಒಂದೇ ಶಿಖರದ ಒಂದೇ ಸ್ತರದ ಪರ್ವತದಂತೆ ಶೋಭಿಸಿದನು.

04060004a ಅಥಾಸ್ಯ ಬಾಣೇನ ವಿದಾರಿತಸ್ಯ। ಪ್ರಾದುರ್ಬಭೂವಾಸೃಗಜಸ್ರಮುಷ್ಣಂ।
04060004c ಸಾ ತಸ್ಯ ಜಾಂಬೂನದಪುಷ್ಪಚಿತ್ರಾ। ಮಾಲೇವ ಚಿತ್ರಾಭಿವಿರಾಜತೇ ಸ್ಮ।।

ಬಾಣದಿಂದ ಸೀಳಿದ ಅವನ ಹಣೆಯಿಂದ ಬೆಚ್ಚನೆಯ ರಕ್ತವು ಸತತವಾಗಿ ಹೊಮ್ಮಿತು. ಅದು ಚಿನ್ನದ ವಿಚಿತ್ರ ಹೂಮಾಲೆಯಂತೆ ಸುಂದರವಾಗಿ ಶೋಭಿಸಿತು.

04060005a ಸ ತೇನ ಬಾಣಾಭಿಹತಸ್ತರಸ್ವೀ। ದುರ್ಯೋಧನೇನೋದ್ಧತಮನ್ಯುವೇಗಃ।
04060005c ಶರಾನುಪಾದಾಯ ವಿಷಾಗ್ನಿಕಲ್ಪಾನ್। ವಿವ್ಯಾಧ ರಾಜಾನಮದೀನಸತ್ತ್ವಃ।।

ರಾಜನ್! ದುರ್ಯೋಧನನ ಬಾಣತಾಗಿದ, ಕುಗ್ಗದ ಸತ್ವವುಳ್ಳ ಆ ಬಲಶಾಲಿಯು ಅತಿಶಯ ಕೋಪಾವೇಷದಿಂದ ವಿಷಾಗ್ನಿಸಮಾನ ಬಾಣಗಳನ್ನು ತೆಗೆದುಕೊಂಡು ಆ ರಾಜನನ್ನು ಹೊಡೆದನು.

04060006a ದುರ್ಯೋಧನಶ್ಚಾಪಿ ತಮುಗ್ರತೇಜಾಃ। ಪಾರ್ಥಶ್ಚ ದುರ್ಯೋಧನಮೇಕವೀರಃ।
04060006c ಅನ್ಯೋನ್ಯಮಾಜೌ ಪುರುಷಪ್ರವೀರೌ। ಸಮಂ ಸಮಾಜಘ್ನತುರಾಜಮೀಢೌ।।

ಉಗ್ರತೇಜಸ್ವಿ ದುರ್ಯೊಧನನು ಪಾರ್ಥನನ್ನೂ, ಏಕೈಕವೀರನಾದ ಪಾರ್ಥನು ದುರ್ಯೋಧನನ್ನೂ ಯುದ್ಧದಲ್ಲಿ ಎದುರಿಸಿದರು. ಅಜಮೀಢ ವಂಶದ ಆ ವೀರಶ್ರೇಷ್ಠರಿಬ್ಬರೂ ಒಬ್ಬರನ್ನೊಬ್ಬರು ಸಮಾನವಾಗಿ ಘಾತಿಸಿದರು.

04060007a ತತಃ ಪ್ರಭಿನ್ನೇನ ಮಹಾಗಜೇನ। ಮಹೀಧರಾಭೇನ ಪುನರ್ವಿಕರ್ಣಃ।
04060007c ರಥೈಶ್ಚತುರ್ಭಿರ್ಗಜಪಾದರಕ್ಷೈಃ। ಕುಂತೀಸುತಂ ಜಿಷ್ಣುಮಥಾಭ್ಯಧಾವತ್।।

ಅನಂತರ ವಿಕರ್ಣನು ಮದಿಸಿದ ಪರ್ವತಸಮಾನ ಮಹಾಗಜವನ್ನೇರಿ ಆನೆಯ ಕಾಲುಗಳನ್ನು ರಕ್ಷಿಸುವ ನಾಲ್ಕು ರಥಗಳೊಂದಿಗೆ ಕುಂತೀಪುತ್ರ ಅರ್ಜುನನತ್ತ ನುಗ್ಗಿದನು.

04060008a ತಮಾಪತಂತಂ ತ್ವರಿತಂ ಗಜೇಂದ್ರಂ। ಧನಂಜಯಃ ಕುಂಭವಿಭಾಗಮಧ್ಯೇ।
04060008c ಆಕರ್ಣಪೂರ್ಣೇನ ದೃಢಾಯಸೇನ। ಬಾಣೇನ ವಿವ್ಯಾಧ ಮಹಾಜವೇನ।।

ಧನಂಜಯನು ಬಿಲ್ಲನ್ನು ಕಿವಿಯವರೆಗೂ ಎಳೆದು ಬಿಟ್ಟ ಮಹಾವೇಗಶಾಲಿ ಉಕ್ಕಿನ ದೃಢ ಬಾಣದಿಂದ ಶೀಘ್ರವಾಗಿ ಮೇಲೇರಿ ಬರುತ್ತಿದ್ದ ಆ ಗಜೇಂದ್ರನ ಕುಂಭಸ್ಥಳದ ಮಧ್ಯಭಾಗಕ್ಕೆ ಹೊಡೆದನು.

04060009a ಪಾರ್ಥೇನ ಸೃಷ್ಟಃ ಸ ತು ಗಾರ್ಧ್ರಪತ್ರ। ಆ ಪುಂಖದೇಶಾತ್ಪ್ರವಿವೇಶ ನಾಗಂ।
04060009c ವಿದಾರ್ಯ ಶೈಲಪ್ರವರಪ್ರಕಾಶಂ। ಯಥಾಶನಿಃ ಪರ್ವತಮಿಂದ್ರಸೃಷ್ಟಃ।।

ಇಂದ್ರನು ಪ್ರಯೋಗಿಸಿದ ವಜ್ರಾಯುದವು ಪರ್ವತವನ್ನು ಭೇದಿಸಿ ಹೊಕ್ಕಂತೆ ಪಾರ್ಥನು ಬಿಟ್ಟ ಆ ಹದ್ದಿನ ಗರಿಯುಳ್ಳ ಬಾಣವು ಪರ್ವತಶ್ರೇಷ್ಠ ಸಮಾನ ಆ ಆನೆಯನ್ನು ಭೇದಿಸಿ ಪುಂಖದವರೆಗೂ ಒಳಹೊಕ್ಕಿತು.

04060010a ಶರಪ್ರತಪ್ತಃ ಸ ತು ನಾಗರಾಜಃ। ಪ್ರವೇಪಿತಾಂಗೋ ವ್ಯಥಿತಾಂತರಾತ್ಮಾ।
04060010c ಸಂಸೀದಮಾನೋ ನಿಪಪಾತ ಮಃಯಾಂ। ವಜ್ರಾಹತಂ ಶೃಂಗಮಿವಾಚಲಸ್ಯ।।

ಬಾಣದಿಂದ ಬಾಧಿತವಾಗಿ ಮೈ ನಡುಗಿ ಮನನೊಂದು ಕುಸಿತು ಆ ಶ್ರೇಷ್ಠ ಗಜವು ವಜ್ರಾಯುಧಹತ ಪರ್ವತಶಿಖರದಂತೆ ನೆಲಕ್ಕೆ ಬಿದ್ದಿತು.

04060011a ನಿಪಾತಿತೇ ದಂತಿವರೇ ಪೃಥಿವ್ಯಾಂ। ತ್ರಾಸಾದ್ವಿಕರ್ಣಃ ಸಹಸಾವತೀರ್ಯ।
04060011c ತೂರ್ಣಂ ಪದಾನ್ಯಷ್ಟಶತಾನಿ ಗತ್ವಾ। ವಿವಿಂಶತೇಃ ಸ್ಯಂದನಮಾರುರೋಹ।।

ಆ ಶ್ರೇಷ್ಠಗಜವು ನೆಲಕ್ಕುರುಳಲು ವಿಕರ್ಣನು ಭಯದಿಂದ ಥಟ್ಟನೇ ಕೆಳಗಿಳಿದು ಬೇಗ ನೂರೆಂಟು ಹೆಜ್ಜೆ ನಡೆದು ವಿವಿಂಶತಿಯ ರಥವನ್ನೇರಿದನು.

04060012a ನಿಹತ್ಯ ನಾಗಂ ತು ಶರೇಣ ತೇನ। ವಜ್ರೋಪಮೇನಾದ್ರಿವರಾಂಬುದಾಭಂ।
04060012c ತಥಾವಿಧೇನೈವ ಶರೇಣ ಪಾರ್ಥೋ। ದುರ್ಯೋಧನಂ ವಕ್ಷಸಿ ನಿರ್ಬಿಭೇದ।।

ವಜ್ರಾಯುಧಸಮಾನ ಬಾಣದಿಂದ ಮಹಾಪರ್ವತದಂತೆಯೂ ಮೋಡದಂತೆಯೂ ಇದ್ದ ಆ ಆನೆಯನ್ನು ಕೊಂದ ಪಾರ್ಥನು ಅದೇ ರೀತಿಯ ಬಾಣದಿಂದ ದುರ್ಯೋಧನನ ಎದೆಯನ್ನು ಭೇದಿಸಿದನು.

04060013a ತತೋ ಗಜೇ ರಾಜನಿ ಚೈವ ಭಿನ್ನೇ। ಭಗ್ನೇ ವಿಕರ್ಣೇ ಚ ಸಪಾದರಕ್ಷೇ।
04060013c ಗಾಂಡೀವಮುಕ್ತೈರ್ವಿಶಿಖೈಃ ಪ್ರಣುನ್ನಾಸ್। ತೇ ಯೋಧಮುಖ್ಯಾಃ ಸಹಸಾಪಜಗ್ಮುಃ।।

ಆಗ ರಾಜನೂ ಆನೆಯೂ ಗಾಯಗೊಂಡಿರಲು, ಆನೆಯ ಪಾದಗಳನ್ನು ರಕ್ಷಿಸುತ್ತಿದ್ದ ರಥಗಳೊಡನೆ ವಿಕರ್ಣನು ಭಗ್ನನಾಗಲು, ಗಾಂಡೀವದಿಂದ ಬಿಡಲಾದ ಬಾಣಗಳು ತಿವಿಯಲು, ಆ ಯೋಧಮುಖ್ಯರು ಕೂಡಲೇ ಚದುರಿ ಓಡಿಹೋದರು.

04060014a ದೃಷ್ಟ್ವೈವ ಬಾಣೇನ ಹತಂ ತು ನಾಗಂ। ಯೋಧಾಂಶ್ಚ ಸರ್ವಾನ್ದ್ರವತೋ ನಿಶಮ್ಯ।
04060014c ರಥಂ ಸಮಾವೃತ್ಯ ಕುರುಪ್ರವೀರೋ। ರಣಾತ್ಪ್ರದುದ್ರಾವ ಯತೋ ನ ಪಾರ್ಥಃ।।

ಆನೆಯು ಬಾಣದಿಂದ ಹತವಾದುದನ್ನೂ, ಯೋಧರೆಲ್ಲರೂ ಓಡಿಹೋಗುತ್ತಿದ್ದನ್ನೂ ಕಂಡು ಕುರುವೀರ ದುರ್ಯೋಧನನು ರಥವನ್ನು ತಿರುಗಿಸಿ ಪಾರ್ಥನಿಲ್ಲದೆಡೆಗೆ ರಣದಿಂದ ಓಡಿದನು.

04060015a ತಂ ಭೀಮರೂಪಂ ತ್ವರಿತಂ ದ್ರವಂತಂ। ದುರ್ಯೋಧನಂ ಶತ್ರುಸಹೋ ನಿಷಂಗೀ।
04060015c ಪ್ರಾಕ್ಷ್ವೇಡಯದ್ಯೋದ್ಧುಮನಾಃ ಕಿರೀಟೀ। ಬಾಣೇನ ವಿದ್ಧಂ ರುಧಿರಂ ವಮಂತಂ।।

ಭಯಂಕರರೂಪವುಳ್ಳ, ಬೇಗಬೇಗ ಓಡುತ್ತಿದ್ದ, ಬಾಣನಾಟಿ ರಕ್ತಕಾರುತ್ತಿದ್ದ ದುರ್ಯೊಧನನನ್ನು ನೋಡಿ ಶತ್ರುಗಳನ್ನು ಎದುರಿಸಬಲ್ಲ, ಬತ್ತಳಿಕೆಯುಳ್ಳ, ಯುದ್ಧದಲ್ಲಿ ಆಸಕ್ತ ಅರ್ಜುನನು ಗರ್ಜಿಸಿದನು.

04060016 ಅರ್ಜುನ ಉವಾಚ।
04060016a ವಿಹಾಯ ಕೀರ್ತಿಂ ವಿಪುಲಂ ಯಶಶ್ಚ। ಯುದ್ಧಾತ್ಪರಾವೃತ್ಯ ಪಲಾಯಸೇ ಕಿಂ।
04060016c ನ ತೇಽದ್ಯ ತೂರ್ಯಾಣಿ ಸಮಾಹತಾನಿ। ಯಥಾವದುದ್ಯಾಂತಿ ಗತಸ್ಯ ಯುದ್ಧೇ।।

ಅರ್ಜುನನು ಹೇಳಿದನು: “ಅತಿಶಯ ಕೀರ್ತಿ ಯಶಸ್ಸುಗಳನ್ನು ಬಿಟ್ಟು ಯುದ್ಧಕ್ಕೆ ಬೆನ್ನು ತಿರುಗಿಸಿ ಏತಕ್ಕೆ ಪಲಾಯನಮಾಡುತ್ತಿದ್ದೀಯೆ? ನಿನ್ನ ತೂರ್ಯಗಳು ನೀನು ಯುದ್ಧಕ್ಕೆ ಹೊರಟಾಗ ಮೊಳಗಿದಂತೆ ಇಂದು ಏಕೆ ಮೊಳಗುತ್ತಿಲ್ಲ?

04060017a ಯುಧಿಷ್ಠಿರಸ್ಯಾಸ್ಮಿ ನಿದೇಶಕಾರೀ। ಪಾರ್ಥಸ್ತೃತೀಯೋ ಯುಧಿ ಚ ಸ್ಥಿರೋಽಸ್ಮಿ।
04060017c ತದರ್ಥಮಾವೃತ್ಯ ಮುಖಂ ಪ್ರಯಚ್ಛ। ನರೇಂದ್ರವೃತ್ತಂ ಸ್ಮರ ಧಾರ್ತರಾಷ್ಟ್ರ।।

ದುರ್ಯೋಧನ! ಯುಧಿಷ್ಠಿರನ ಅಪ್ಪಣೆಗಳನ್ನು ಪಾಲಿಸುವ, ಕುಂತಿಯ ಮೂರನೆಯ ಮಗನಾದ ನಾನು ಯುದ್ಧದಲ್ಲಿ ಸ್ಥಿರವಾಗಿ ನಿಂತಿದ್ದೇನೆ. ಆದ್ದರಿಂದ ತಿರುಗಿ ಮುಖಕೊಟ್ಟು ಮಾತನಾಡು. ರಾಜಶ್ರೇಷ್ಠನ ನಡತೆಯನ್ನು ಸ್ಮರಿಸಿಕೋ.

04060018a ಮೋಘಂ ತವೇದಂ ಭುವಿ ನಾಮಧೇಯಂ। ದುರ್ಯೋಧನೇತೀಹ ಕೃತಂ ಪುರಸ್ತಾತ್।
04060018c ನ ಹೀಹ ದುರ್ಯೋಧನತಾ ತವಾಸ್ತಿ। ಪಲಾಯಮಾನಸ್ಯ ರಣಂ ವಿಹಾಯ।।

ದುರ್ಯೋಧನನೆಂದು ಹಿಂದೆ ನಿನಗಿಟ್ಟ ಈ ಹೆಸರು ಲೋಕದಲ್ಲಿ ವ್ಯರ್ಥವಾಯಿತು. ಯುದ್ಧವನ್ನು ಬಿಟ್ಟು ಪಲಾಯನಮಾಡುತ್ತಿರುವ ನಿನಗೆ ಈಗ ದುರ್ಯೋಧನತ್ವವು ಉಳಿದಿಲ್ಲ.

04060019a ನ ತೇ ಪುರಸ್ತಾದಥ ಪೃಷ್ಠತೋ ವಾ। ಪಶ್ಯಾಮಿ ದುರ್ಯೋಧನ ರಕ್ಷಿತಾರಮ್ಯ।
04060019c ಪರೈಹಿ ಯುದ್ಧೇನ ಕುರುಪ್ರವೀರ। ಪ್ರಾಣಾನ್ಪ್ರಿಯಾನ್ಪಾಂಡವತೋಽದ್ಯ ರಕ್ಷ।।

ದುರ್ಯೋಧನ! ನಿನ್ನ ಹಿಂದಾಗಲೀ ಮುಂದಾಗಲೀ ರಕ್ಷಕರು ನನಗೆ ಕಾಣುತ್ತಿಲ್ಲ. ಕುರುವೀರ! ಯುದ್ಧದಿಂದ ಓಡಿಹೋಗು. ಪ್ರಿಯವಾದ ಪ್ರಾಣವನ್ನು ಪಾಂಡುಪುತ್ರನಿಂದ ಈಗ ಕಾಪಾಡಿಕೋ!””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ದುರ್ಯೋಧನಾಪಯಾನೇ ಷಷ್ಟಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ದುರ್ಯೋಧನಾಪಯಾನದಲ್ಲಿ ಅರವತ್ತನೆಯ ಅಧ್ಯಾಯವು.