059 ಉತ್ತರಗೋಗ್ರಹೇ ಭೀಷ್ಮಾಪಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ಗೋಹರಣ ಪರ್ವ

ಅಧ್ಯಾಯ 59

ಸಾರ

ಭೀಷ್ಮಾರ್ಜುನರ ಯುದ್ಧದ ವರ್ಣನೆ, ಅರ್ಜುನನ ಬಾಣಗಳಿಂದ ಮೂರ್ಛಿತನಾದ ಭೀಷ್ಮನನ್ನು ಸಾರಥಿಯು ರಣದಿಂದ ಆಚೆ ಕೊಂಡೊಯ್ದುದು (1-44).

04059001 ವೈಶಂಪಾಯನ ಉವಾಚ।
04059001a ತತಃ ಶಾಂತನವೋ ಭೀಷ್ಮೋ ದುರಾಧರ್ಷಃ ಪ್ರತಾಪವಾನ್।
04059001c ವಧ್ಯಮಾನೇಷು ಯೋಧೇಷು ಧನಂಜಯಮುಪಾದ್ರವತ್।।

ವೈಶಂಪಾಯನನು ಹೇಳಿದನು: “ಆಗ ಯೋಧರು ಹತರಾಗುತ್ತಿರಲು, ದುರಾಧರ್ಷ ಪ್ರತಾಪವಾನ್ ಶಾಂತನವ ಭೀಷ್ಮನು ಧನಂಜಯನೆಡೆಗೆ ನುಗ್ಗಿದನು.

04059002a ಪ್ರಗೃಹ್ಯ ಕಾರ್ಮುಕಶ್ರೇಷ್ಠಂ ಜಾತರೂಪಪರಿಷ್ಕೃತಂ।
04059002c ಶರಾನಾದಾಯ ತೀಕ್ಷ್ಣಾಗ್ರಾನ್ಮರ್ಮಭೇದಪ್ರಮಾಥಿನಃ।।
04059003a ಪಾಂಡುರೇಣಾತಪತ್ರೇಣ ಧ್ರಿಯಮಾಣೇನ ಮೂರ್ಧನಿ।
04059003c ಶುಶುಭೇ ಸ ನರವ್ಯಾಘ್ರೋ ಗಿರಿಃ ಸೂರ್ಯೋದಯೇ ಯಥಾ।।

ಸುವರ್ಣಖಚಿತ ಶ್ರೇಷ್ಠ ಧನುಸ್ಸನ್ನು ಹಿಡಿದು, ಹರಿತ ಮೊನೆಗಳ ಮತ್ತು ಮರ್ಮಭೇದಕ ಶಕ್ತಿಯ ಬಾಣಗಳನ್ನು ಹಿಡಿದು, ತಲೆಯಮೇಲೆ ಬೆಳ್ಗೊಡೆಯನ್ನು ತಳೆದ ಆ ನರಶ್ರೇಷ್ಠನು ಸೂರ್ಯೋದಯದಲ್ಲಿ ಪರ್ವತದಂತೆ ಶೋಭಿಸುತ್ತಿದ್ದನು.

04059004a ಪ್ರಧ್ಮಾಯ ಶಂಖಂ ಗಾಂಗೇಯೋ ಧಾರ್ತರಾಷ್ಟ್ರಾನ್ಪ್ರಹರ್ಷಯನ್।
04059004c ಪ್ರದಕ್ಷಿಣಮುಪಾವೃತ್ಯ ಬೀಭತ್ಸುಂ ಸಮವಾರಯತ್।।

ಆ ಗಾಂಗೇಯನು ಶಂಖವನ್ನೂದಿ ಕೌರವರಿಗೆ ಹರ್ಷವನ್ನುಂಟುಮಾಡಿ, ಬಲಕ್ಕೆ ತಿರುಗಿ ಬೀಭತ್ಸುವನ್ನು ಎದುರಿಸಿದನು.

04059005a ತಮುದ್ವೀಕ್ಷ್ಯ ತಥಾಯಾಂತಂ ಕೌಂತೇಯಃ ಪರವೀರಹಾ।
04059005c ಪ್ರತ್ಯಗೃಹ್ಣಾತ್ಪ್ರಹೃಷ್ಟಾತ್ಮಾ ಧಾರಾಧರಮಿವಾಚಲಃ।।

ಹಾಗೆ ಬರುತ್ತಿರುವ ಅವನನ್ನು ಕಂಡು ಪರವೀರಹ ಕೌಂತೇಯನು ಸಂತೋಷಗೊಂಡು ಮೋಡವನ್ನು ಪರ್ವತದಂತೆ ಎದುರಿಸಿದನು.

04059006a ತತೋ ಭೀಷ್ಮಃ ಶರಾನಷ್ಟೌ ಧ್ವಜೇ ಪಾರ್ಥಸ್ಯ ವೀರ್ಯವಾನ್।
04059006c ಸಮಪರ್ಯನ್ಮಹಾವೇಗಾಂ ಶ್ವಸಮಾನಾನಿವೋರಗಾನ್।।

ಆಗ ವೀರ್ಯವಂತ ಭೀಷ್ಮನು ಭುಸುಗುಡುವ ಸರ್ಪಗಳಂತಿರುವ ಮಹಾವೇಗವುಳ್ಳ ಎಂಟು ಬಾಣಗಳನ್ನು ಪಾರ್ಥನ ಧ್ವಜದ ಮೇಲೆ ಪ್ರಯೋಗಿಸಿದನು.

04059007a ತೇ ಧ್ವಜಂ ಪಾಂಡುಪುತ್ರಸ್ಯ ಸಮಾಸಾದ್ಯ ಪತತ್ರಿಣಃ।
04059007c ಜ್ವಲಂತಃ ಕಪಿಮಾಜಘ್ನುರ್ಧ್ವಜಾಗ್ರನಿಲಯಾಂಶ್ಚ ತಾನ್।।

ಉರಿಯುತ್ತಿದ ಆ ಬಾಣವು ಪಾಂಡುಪುತ್ರನ ಧ್ವಜಕ್ಕೆ ತಾಗಿ ಕಪಿಯನ್ನೂ ಧ್ವಜಾಗ್ರದಲ್ಲಿ ನೆಲೆಗೊಂಡಿದ್ದವನ್ನೂ ಹೊಡೆದವು.

04059008a ತತೋ ಭಲ್ಲೇನ ಮಹತಾ ಪೃಥುಧಾರೇಣ ಪಾಂಡವಃ।
04059008c ಚತ್ರಂ ಚಿಚ್ಛೇದ ಭೀಷ್ಮಸ್ಯ ತೂರ್ಣಂ ತದಪತದ್ಭುವಿ।।

ಆಗ ಪಾಂಡವನು ಅಗಲ ಅಲಗನ್ನುಳ್ಳ ದೊಡ್ಡ ಭಲ್ಲೆಯಿಂದ ಭೀಷ್ಮನ ಕೊಡೆಯನ್ನು ಕತ್ತರಿದನು ಮತ್ತು ಅದು ತಕ್ಷಣವೇ ನೆಲದಮೇಲೆ ಬಿದ್ದಿತು.

04059009a ಧ್ವಜಂ ಚೈವಾಸ್ಯ ಕೌಂತೇಯಃ ಶರೈರಭ್ಯಹನದ್ದೃಢಂ।
04059009c ಶೀಘ್ರಕೃದ್ರಥವಾಹಾಂಶ್ಚ ತಥೋಭೌ ಪಾರ್ಷ್ಣಿಸಾರಥೀ।।

ಶೀಘ್ರಕರ್ಮಿ ಕೌಂತೇಯನು ಅವನ ದೃಢ ಧ್ವಜವನ್ನೂ, ರಥದ ಕುದುರೆಗಳನ್ನೂ, ಪಕ್ಕದಲ್ಲಿದ್ದ ಇಬ್ಬರು ಸಾರಥಿಗಳನ್ನೂ ಬಾಣಗಳಿಂದ ಹೊಡೆದನು.

04059010a ತಯೋಸ್ತದಭವದ್ಯುದ್ಧಂ ತುಮುಲಂ ಲೋಮಹರ್ಷಣಂ।
04059010c ಭೀಷ್ಮಸ್ಯ ಸಹ ಪಾರ್ಥೇನ ಬಲಿವಾಸವಯೋರಿವ।।

ಬಲಿ ಮತ್ತು ವಾಸವನಿಗೆ ನಡೆದಂತೆ ಭೀಷ್ಮ ಪಾರ್ಥರಿಗೆ ರೋಮಾಂಚನಕಾರಿ ತುಮುಲ ಯುದ್ಧವು ನಡೆಯಿತು.

04059011a ಭಲ್ಲೈರ್ಭಲ್ಲಾಃ ಸಮಾಗಮ್ಯ ಭೀಷ್ಮಪಾಂಡವಯೋರ್ಯುಧಿ।
04059011c ಅಂತರಿಕ್ಷೇ ವ್ಯರಾಜಂತ ಖದ್ಯೋತಾಃ ಪ್ರಾವೃಷೀವ ಹಿ।।

ಭೀಷ್ಮಾರ್ಜುನರಿಗೆ ನಡೆದ ಯುದ್ಧದಲ್ಲಿ ಭಲ್ಲೆಗಳು ಭಲ್ಲೆಗಳಿಗೆ ತಾಗಿ ಮಳೆಗಾಲದ ಮಿಣುಕು ಹುಳುಗಳಂತೆ ಆಕಾಶದಲ್ಲಿ ಹೊಳೆದವು.

04059012a ಅಗ್ನಿಚಕ್ರಮಿವಾವಿದ್ಧಂ ಸವ್ಯದಕ್ಷಿಣಮಸ್ಯತಃ।
04059012c ಗಾಂಡೀವಮಭವದ್ರಾಜನ್ಪಾರ್ಥಸ್ಯ ಸೃಜತಃ ಶರಾನ್।।

ರಾಜನ್! ಎಡಗೈ ಮತ್ತು ಬಲಗೈ ಎರಡರಿಂದಲೂ ಶರಗಳನ್ನು ಬಿಡುತ್ತಿದ್ದ ಪಾರ್ಥನ ಗಾಂಡೀವವು ಅಗ್ನಿಚಕ್ರದಂತಿತ್ತು.

04059013a ಸ ತೈಃ ಸಂಚಾದಯಾಮಾಸ ಭೀಷ್ಮಂ ಶರಶತೈಃ ಶಿತೈಃ।
04059013c ಪರ್ವತಂ ವಾರಿಧಾರಾಭಿಶ್ಚಾದಯನ್ನಿವ ತೋಯದಃ।।

ಮಳೆಯಿಂದ ಪರ್ವತವನ್ನು ಮುಚ್ಚಿಬಿಡುವ ಮೋಡದಂತೆ ಅವನು ಆ ಹರಿತ ನೂರು ಬಾಣಗಳಿಂದ ಭೀಷ್ಮನನ್ನು ಮುಚ್ಚಿಬಿಟ್ಟನು.

04059014a ತಾಂ ಸ ವೇಲಾಮಿವೋದ್ಧೂತಾಂ ಶರವೃಷ್ಟಿಂ ಸಮುತ್ಥಿತಾಂ।
04059014c ವ್ಯಧಮತ್ಸಾಯಕೈರ್ಭೀಷ್ಮೋ ಅರ್ಜುನಂ ಸಂನಿವಾರಯತ್।।

ಮೇಲೆದ್ದು ಬರುವ ಅಲೆಯನ್ನು ತಡೆಯುವಂತೆ ಎರಗುವ ಆ ಬಾಣಗಳ ಮಳೆಯನ್ನು ಭೀಷ್ಮನು ಬಾಣಗಳಿಂದ ಕತ್ತರಿಸಿ ಅರ್ಜುನನನ್ನು ತಡೆದನು.

04059015a ತತಸ್ತಾನಿ ನಿಕೃತ್ತಾನಿ ಶರಜಾಲಾನಿ ಭಾಗಶಃ।
04059015c ಸಮರೇಽಭಿವ್ಯಶೀರ್ಯಂತ ಫಲ್ಗುನಸ್ಯ ರಥಂ ಪ್ರತಿ।।

ಸಮರದಲ್ಲಿ ತುಂಡುತುಂಡಾಗಿ ಕತ್ತರಿಸಲ್ಪಟ್ಟ ಆ ಬಾಣಸಮೂಹಗಳು ಅರ್ಜುನನ ರಥದ ಮೇಲೆ ಉದುರಿಬಿದ್ದವು.

04059016a ತತಃ ಕನಕಪುಂಖಾನಾಂ ಶರವೃಷ್ಟಿಂ ಸಮುತ್ಥಿತಾಂ।
04059016c ಪಾಂಡವಸ್ಯ ರಥಾತ್ತೂರ್ಣಂ ಶಲಭಾನಾಮಿವಾಯತಿಂ।
04059016e ವ್ಯಧಮತ್ತಾಂ ಪುನಸ್ತಸ್ಯ ಭೀಷ್ಮಃ ಶರಶತೈಃ ಶಿತೈಃ।।

ಆಗ ಪಾಂಡವನ ರಥದಿಂದ ಮಿಡಿತೆಗಳ ಹಿಂಡಿನಂತೆ ಚಿನ್ನದ ಗರಿಗಳನ್ನುಳ್ಳ ಬಾಣಗಳ ಮಳೆಯು ಶೀಘ್ರವಾಗಿ ಹೊಮ್ಮಿತು. ಭೀಷ್ಮನು ಪುನಃ ಅದನ್ನು ನೂರಾರು ಹರಿತ ಬಾಣಗಳಿಂದ ಕತ್ತರಿಸಿದನು.

04059017a ತತಸ್ತೇ ಕುರವಃ ಸರ್ವೇ ಸಾಧು ಸಾಧ್ವಿತಿ ಚಾಬ್ರುವನ್।
04059017c ದುಷ್ಕರಂ ಕೃತವಾನ್ಭೀಷ್ಮೋ ಯದರ್ಜುನಮಯೋಧಯತ್।।

ಆಗ ಕೌರವರೆಲ್ಲರು ನುಡಿದರು: “ಸಾಧು! ಸಾಧು! ಅರ್ಜುನನೊಡನೆ ಯುದ್ಧಮಾಡುತ್ತಿರುವ ಭೀಷ್ಮನು ಅಸಾಧ್ಯವಾದುದನ್ನು ಮಾಡಿದನು.

04059018a ಬಲವಾಂಸ್ತರುಣೋ ದಕ್ಷಃ ಕ್ಷಿಪ್ರಕಾರೀ ಚ ಪಾಂಡವಃ।
04059018c ಕೋಽನ್ಯಃ ಸಮರ್ಥಃ ಪಾರ್ಥಸ್ಯ ವೇಗಂ ಧಾರಯಿತುಂ ರಣೇ।।
04059019a ಋತೇ ಶಾಂತನವಾದ್ಭೀಷ್ಮಾತ್ಕೃಷ್ಣಾದ್ವಾ ದೇವಕೀಸುತಾತ್।
04059019c ಆಚಾರ್ಯಪ್ರವರಾದ್ವಾಪಿ ಭಾರದ್ವಾಜಾನ್ಮಹಾಬಲಾತ್।।

ಅರ್ಜುನನು ಬಲಶಾಲಿ, ತರುಣ, ದಕ್ಷ ಮತ್ತು ಶೀಘ್ರಕಾರಿ. ಶಂತನುಪುತ್ರ ಭೀಷ್ಮ, ದೇವಕೀಸುತ ಕೃಷ್ಣ, ಮಹಾಬಲಶಾಲಿ ಆಚಾರ್ಯಶೇಷ್ಠ ಭಾರದ್ವಾಜನನ್ನು ಬಿಟ್ಟರೆ ಬೇರೆಯಾರು ತಾನೇ ರಣದಲ್ಲಿ ಪಾರ್ಥನ ವೇಗವನ್ನು ಸಹಿಸಿಕೊಳ್ಳಬಲ್ಲರು?”

04059020a ಅಸ್ತ್ರೈರಸ್ತ್ರಾಣಿ ಸಂವಾರ್ಯ ಕ್ರೀಡತಃ ಪುರುಷರ್ಷಭೌ।
04059020c ಚಕ್ಷೂಂಷಿ ಸರ್ವಭೂತಾನಾಂ ಮೋಹಯಂತೌ ಮಹಾಬಲೌ।।

ಮಹಾಬಲಶಾಲಿಗಳಾಗಿದ್ದ ಆ ಪುರುಷಶ್ರೇಷ್ಠರೀರ್ವರೂ ಅಸ್ತ್ರಗಳಿಂದ ಅಸ್ತ್ರಗಳನ್ನು ತಡೆಗಟ್ಟುತ್ತಾ ಯುದ್ಧಕ್ರೀಡೆಯನ್ನಾಡುತ್ತಾ ಎಲ್ಲ ಜೀವಿಗಳ ಕಣ್ಣುಗಳನ್ನೂ ಮರುಳುಗೊಳಿಸಿದರು.

04059021a ಪ್ರಾಜಾಪತ್ಯಂ ತಥೈವೈಂದ್ರಮಾಗ್ನೇಯಂ ಚ ಸುದಾರುಣಂ।
04059021c ಕೌಬೇರಂ ವಾರುಣಂ ಚೈವ ಯಾಮ್ಯಂ ವಾಯವ್ಯಮೇವ ಚ।
04059021e ಪ್ರಯುಂಜಾನೌ ಮಹಾತ್ಮಾನೌ ಸಮರೇ ತೌ ವಿಚೇರತುಃ।।

ಬ್ರಹ್ಮ, ಇಂದ್ರ, ಅಗ್ನಿ, ಕುಬೇರ, ವರುಣ, ಯಮ, ವಾಯು ಇವರಿಂದ ಪಡೆದ ಭಯಂಕರ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದ ಆ ಮಹಾತ್ಮರು ರಣರಂಗದಲ್ಲಿ ಚರಿಸುತ್ತಿದ್ದರು.

04059022a ವಿಸ್ಮಿತಾನ್ಯಥ ಭೂತಾನಿ ತೌ ದೃಷ್ಟ್ವಾ ಸಂಯುಗೇ ತದಾ।
04059022c ಸಾಧು ಪಾರ್ಥ ಮಹಾಬಾಹೋ ಸಾಧು ಭೀಷ್ಮೇತಿ ಚಾಬ್ರುವನ್।।

ಆಗ ಅವರಿಬ್ಬರೂ ಯುದ್ಧದಲ್ಲಿ ತೊಡಗಿರುವುದನ್ನು ಕಂಡು ಎಲ್ಲ ಜೀವಿಗಳೂ ವಿಸ್ಮಯಗೊಂಡು “ಮಹಾಬಾಹು ಪಾರ್ಥ! ಲೇಸು! ಭೀಷ್ಮ! ಲೇಸು!” ಎಂದು ನುಡಿದವು.

04059023a ನೇದಂ ಯುಕ್ತಂ ಮನುಷ್ಯೇಷು ಯೋಽಯಂ ಸಂದೃಶ್ಯತೇ ಮಹಾನ್।
04059023c ಮಹಾಸ್ತ್ರಾಣಾಂ ಸಂಪ್ರಯೋಗಃ ಸಮರೇ ಭೀಷ್ಮಪಾರ್ಥಯೋಃ।।

“ಭೀಷ್ಮ-ಪಾರ್ಥರ ಯುದ್ಧದಲ್ಲಿ ಕಂಡುಬರುತ್ತಿರುವ ಈ ಮಹಾಸ್ತ್ರಗಳ ಮಹಾಪ್ರಯೋಗವು ಮನುಷ್ಯರಲ್ಲಿ ಕಾಣತಕ್ಕದ್ದಲ್ಲ!”

04059024a ಏವಂ ಸರ್ವಾಸ್ತ್ರವಿದುಷೋರಸ್ತ್ರಯುದ್ಧಮವರ್ತತ।
04059024c ಅಥ ಜಿಷ್ಣುರುಪಾವೃತ್ಯ ಪೃಥುಧಾರೇಣ ಕಾರ್ಮುಕಂ।
04059024e ಚಕರ್ತ ಭೀಷ್ಮಸ್ಯ ತದಾ ಜಾತರೂಪಪರಿಷ್ಕೃತಂ।।

ಹೀಗೆ ಸರ್ವಾಸ್ತ್ರಕೋವಿದರ ನಡುವೆ ಅಸ್ತ್ರಯುದ್ಧವು ನಡೆಯಿತು. ಆಗ ಅರ್ಜುನನು ಪಕ್ಕಕ್ಕೆ ಸರಿದು ಅಗಲ ಅಲಗುಗಳನ್ನುಳ್ಳ ಬಾಣಗಳಿಂದ ಭೀಷ್ಮನ ಸ್ವರ್ಣಖಚಿತ ಬಿಲ್ಲನ್ನು ಕತ್ತರಿಸಿದನು.

04059025a ನಿಮೇಷಾಂತರಮಾತ್ರೇಣ ಭೀಷ್ಮೋಽನ್ಯತ್ಕಾರ್ಮುಕಂ ರಣೇ।
04059025c ಸಮಾದಾಯ ಮಹಾಬಾಹುಃ ಸಜ್ಯಂ ಚಕ್ರೇ ಮಹಾಬಲಃ।
04059025e ಶರಾಂಶ್ಚ ಸುಬಹೂನ್ಕ್ರುದ್ಧೋ ಮುಮೋಚಾಶು ಧನಂಜಯೇ।।

ಮಹಾಬಾಹು ಮಹಾಬಲಶಾಲಿ ಭೀಷ್ಮನು ಎವೆಯಿಕ್ಕುವಷ್ಟರಲ್ಲಿ ಬೇರೊಂದು ಬಿಲ್ಲನ್ನು ತೆಗೆದುಕೊಂಡು ಹೆದೆಯೇರಿಸಿ, ಕೋಪದಿಂದ ಯುದ್ಧದಲ್ಲಿ ಧನಂಜಯನ ಮೇಲೆ ಬೇಗ ಬಾಣಗಳನ್ನು ಬಿಟ್ಟನು.

04059026a ಅರ್ಜುನೋಽಪಿ ಶರಾಂಶ್ಚಿತ್ರಾನ್ಭೀಷ್ಮಾಯ ನಿಶಿತಾನ್ಬಹೂನ್।
04059026c ಚಿಕ್ಷೇಪ ಸುಮಹಾತೇಜಾಸ್ತಥಾ ಭೀಷ್ಮಶ್ಚ ಪಾಂಡವೇ।।

ಮಹಾತೇಜಸ್ವಿ ಅರ್ಜುನನೂ ಕೂಡ ಭೀಷ್ಮನ ಮೇಲೆ ವಿಚಿತ್ರವೂ ಹರಿತವೂ ಆದ ಅನೇಕ ಬಾಣಗಳನ್ನು ಬಿಟ್ಟನು. ಹಾಗೆಯೇ ಭೀಷ್ಮನೂ ಕೂಡ ಅರ್ಜುನನ ಮೇಲೆ ಬಿಟ್ಟನು.

04059027a ತಯೋರ್ದಿವ್ಯಾಸ್ತ್ರವಿದುಷೋರಸ್ಯತೋರನಿಶಂ ಶರಾನ್।
04059027c ನ ವಿಶೇಷಸ್ತದಾ ರಾಜನ್ಲಕ್ಷ್ಯತೇ ಸ್ಮ ಮಹಾತ್ಮನೋಃ।।

ರಾಜನ್! ನಿರಂತರವಾಗಿ ಬಾಣಗಳನ್ನು ಬಿಡುತ್ತಿದ್ದ ಆ ದಿವ್ಯಾಸ್ತ್ರವಿದ ಮಹಾತ್ಮರಲ್ಲಿ ವ್ಯತ್ಯಾಸವೇ ಕಾಣುತ್ತಿರಲಿಲ್ಲ.

04059028a ಅಥಾವೃಣೋದ್ದಶ ದಿಶಃ ಶರೈರತಿರಥಸ್ತದಾ।
04059028c ಕಿರೀಟಮಾಲೀ ಕೌಂತೇಯಃ ಶೂರಃ ಶಾಂತನವಸ್ತಥಾ।।

ಆಗ ಕಿರೀಟಮಾಲೀ ಅತಿರಥ ಕುಂತೀಪುತ್ರನು ಹತ್ತು ದಿಕ್ಕುಗಳನ್ನೂ ಬಾಣಗಳಿಂದ ಮುಚ್ಚಿದನು. ಶಾಂತನವನೂ ಹಾಗೆಯೇ ಮಾಡಿದನು.

04059029a ಅತೀವ ಪಾಂಡವೋ ಭೀಷ್ಮಂ ಭೀಷ್ಮಶ್ಚಾತೀವ ಪಾಂಡವಂ।
04059029c ಬಭೂವ ತಸ್ಮಿನ್ಸಂಗ್ರಾಮೇ ರಾಜನ್ಲೋಕೇ ತದದ್ಭುತಂ।।

ರಾಜನ್! ಆ ಯುದ್ದದಲ್ಲಿ ಅರ್ಜುನನನ್ನು ಭೀಷ್ಮನೂ, ಭೀಷ್ಮನನ್ನು ಅರ್ಜುನನೂ ಮೀರಿಸಿದಂತಿತ್ತು. ಅದು ಲೋಕದಲ್ಲಿ ಅದ್ಭುತವಾಯಿತು.

04059030a ಪಾಂಡವೇನ ಹತಾಃ ಶೂರಾ ಭೀಷ್ಮಸ್ಯ ರಥರಕ್ಷಿಣಃ।
04059030c ಶೇರತೇ ಸ್ಮ ತದಾ ರಾಜನ್ಕೌಂತೇಯಸ್ಯಾಭಿತೋ ರಥಂ।।

ರಾಜನ್! ಆಗ ಭೀಷ್ಮನ ಶೂರ ರಥರಕ್ಷಕರು ಅರ್ಜುನನಿಂದ ಹತರಾಗಿ ಅವನ ರಥದೆಡೆಯಲ್ಲಿ ಬಿದ್ದರು.

04059031a ತತೋ ಗಾಂಡೀವನಿರ್ಮುಕ್ತಾ ನಿರಮಿತ್ರಂ ಚಿಕೀರ್ಷವಃ।
04059031c ಆಗಚ್ಛನ್ಪುಂಖಸಂಶ್ಲಿಷ್ಟಾಃ ಶ್ವೇತವಾಹನಪತ್ರಿಣಃ।।

ಆಗ ಅರ್ಜುನನ ಗಾಂಡೀವದಿಂದ ಹೊರಬಂದ ಗರಿಸಹಿತ ಬಾಣಗಳು ಹಗೆಯನ್ನು ಇಲ್ಲದಂತೆ ಮಾಡುವ ಬಯಕೆಯಿಂದ ಮುನ್ನುಗ್ಗಿದವು.

04059032a ನಿಷ್ಪತಂತೋ ರಥಾತ್ತಸ್ಯ ಧೌತಾ ಹೈರಣ್ಯವಾಸಸಃ।
04059032c ಆಕಾಶೇ ಸಮದೃಶ್ಯಂತ ಹಂಸಾನಾಮಿವ ಪಂಕ್ತಯಃ।।

ಅವನ ರಥದಿಂದ ಹೊಮ್ಮುತ್ತಿದ್ದ, ಬೆಳಗುತ್ತಿದ್ದ ಸುವರ್ಣಖಚಿತ ಬಾಣಗಳು ಆಕಾಶದಲ್ಲಿ ಹಂಸಗಳ ಸಾಲಿನಂತೆ ಕಾಣುತ್ತಿದ್ದವು.

04059033a ತಸ್ಯ ತದ್ದಿವ್ಯಮಸ್ತ್ರಂ ಹಿ ಪ್ರಗಾಢಂ ಚಿತ್ರಮಸ್ಯತಃ।
04059033c ಪ್ರೇಕ್ಷಂತೇ ಸ್ಮಾಂತರಿಕ್ಷಸ್ಥಾಃ ಸರ್ವೇ ದೇವಾಃ ಸವಾಸವಾಃ।।

ಬಲವಾಗಿ ಪ್ರಯೋಗಿಸಲಾದ ಅವನ ಆ ವಿಚಿತ್ರ ದಿವ್ಯಾಸ್ತ್ರವನ್ನು ಇಂದ್ರಸಹಿತರಾಗಿ ಆಕಾಶದಲ್ಲಿ ದೇವತೆಗಳು ನೋಡುತ್ತಿದ್ದರು.

04059034a ತದ್ದೃಷ್ಟ್ವಾ ಪರಮಪ್ರೀತೋ ಗಂಧರ್ವಶ್ಚಿತ್ರಮದ್ಭುತಂ।
04059034c ಶಶಂಸ ದೇವರಾಜಾಯ ಚಿತ್ರಸೇನಃ ಪ್ರತಾಪವಾನ್।।

ವಿಚಿತ್ರವೂ ಅದ್ಭುತವೂ ಆದ ಅದನ್ನು ನೋಡಿ ಬಹಳ ಸಂತೋಷಗೊಂಡ ಪತಾಪಿ ಗಂಧರ್ವ ಚಿತ್ರಸೇನನು ದೇವೇಂದ್ರನ ಮುಂದೆ ಅರ್ಜುನನನ್ನು ಹೊಗಳಿದನು.

04059035a ಪಶ್ಯೇಮಾನರಿನಿರ್ದಾರಾನ್ಸಂಸಕ್ತಾನಿವ ಗಚ್ಛತಃ।
04059035c ಚಿತ್ರರೂಪಮಿದಂ ಜಿಷ್ಣೋರ್ದಿವ್ಯಮಸ್ತ್ರಮುದೀರ್ಯತಃ।।

“ಒಂದಕ್ಕೊಂದು ಅಂಟಿಕೊಂಡಂತೆ ಹೋಗುತ್ತಿರುವ ಶತ್ರುಗಳನ್ನು ಸೀಳುವ ಈ ಬಾಣಗಳನ್ನು ನೋಡು. ಅರ್ಜುನನ ಈ ದಿವ್ಯಾಸ್ತ್ರಪ್ರಯೋಗವು ಅದ್ಭುತವಾಗಿದೆ.

04059036a ನೇದಂ ಮನುಷ್ಯಾಃ ಶ್ರದ್ದಧ್ಯುರ್ನ ಹೀದಂ ತೇಷು ವಿದ್ಯತೇ।
04059036c ಪೌರಾಣಾನಾಂ ಮಹಾಸ್ತ್ರಾಣಾಂ ವಿಚಿತ್ರೋಽಯಂ ಸಮಾಗಮಃ।।

ಇದನ್ನು ಮಾನವರು ನಂಬುವುದಿಲ್ಲ. ಇದು ಅವರಲ್ಲಿಲ್ಲ. ಪ್ರಾಚೀನ ಕಾಲದ ಈ ಮಹಾಸ್ತ್ರಗಳ ಕೂಟವು ವಿಚಿತ್ರವಾದುದು.

04059037a ಮಧ್ಯಂದಿನಗತಂ ಸೂರ್ಯಂ ಪ್ರತಪಂತಮಿವಾಂಬರೇ।
04059037c ನ ಶಕ್ನುವಂತಿ ಸೈನ್ಯಾನಿ ಪಾಂಡವಂ ಪ್ರತಿವೀಕ್ಷಿತುಂ।।

ಆಕಾಶದಲ್ಲಿ ಜ್ವಲಿಸುತ್ತಿರುವ ಮಧ್ಯಾಹ್ನದ ಸೂರ್ಯನಂತಿರುವ ಅರ್ಜುನನನ್ನು ಸೈನ್ಯಗಳು ಕಣ್ಣೆತ್ತಿ ನೋಡಲಾರವು.

04059038a ಉಭೌ ವಿಶ್ರುತಕರ್ಮಾಣಾವುಭೌ ಯುದ್ಧವಿಶಾರದೌ।
04059038c ಉಭೌ ಸದೃಶಕರ್ಮಾಣಾವುಭೌ ಯುಧಿ ದುರಾಸದೌ।।

ಇವರಿಬ್ಬರೂ ತಮ್ಮ ಕಾರ್ಯಗಳಲ್ಲಿ ಪ್ರಸಿದ್ಧರು. ಇಬ್ಬರೂ ಯುದ್ಧವಿಶಾರದರು. ಇಬ್ಬರೂ ಕೆಲಸದಲ್ಲಿ ಸಮಾನರು. ಇಬ್ಬರೂ ಯುದ್ಧದಲ್ಲಿ ಎದುರಿಸಲಾಗದವರು.”

04059039a ಇತ್ಯುಕ್ತೋ ದೇವರಾಜಸ್ತು ಪಾರ್ಥಭೀಷ್ಮಸಮಾಗಮಂ।
04059039c ಪೂಜಯಾಮಾಸ ದಿವ್ಯೇನ ಪುಷ್ಪವರ್ಷೇಣ ಭಾರತ।।

ಭಾರತ! ಚಿತ್ರಸೇನನು ಹೀಗೆ ಹೇಳಲು ದೇವೇಂದ್ರನು ದಿವ್ಯ ಹೂಮಳೆಯಿಂದ ಆ ಪಾರ್ಥ-ಭೀಷ್ಮರ ಕೂಟವನ್ನು ಗೌರವಿಸಿದನು.

04059040a ತತೋ ಭೀಷ್ಮಃ ಶಾಂತನವೋ ವಾಮೇ ಪಾರ್ಶ್ವೇ ಸಮರ್ಪಯತ್।
04059040c ಅಸ್ಯತಃ ಪ್ರತಿಸಂಧಾಯ ವಿವೃತಂ ಸವ್ಯಸಾಚಿನಃ।।

ಆಗ ಶಾಂತನವ ಭೀಷ್ಮನು ಬಾಣಪ್ರಯೋಗಮಾಡುತ್ತಿದ್ದ ಅರ್ಜುನನನಲ್ಲಿ ಆಸ್ಪದವನ್ನು ಕಂಡು ಎಡಬದಿಗೆ ಹೊಡೆದನು.

04059041a ತತಃ ಪ್ರಹಸ್ಯ ಬೀಭತ್ಸುಃ ಪೃಥುಧಾರೇಣ ಕಾರ್ಮುಕಂ।
04059041c ನ್ಯಕೃಂತದ್ಗಾರ್ಧ್ರಪತ್ರೇಣ ಭೀಷ್ಮಸ್ಯಾಮಿತತೇಜಸಃ।।

ಆಗ ಅರ್ಜುನನು ನಕ್ಕು ಬಹು ತೇಜಸ್ವಿ ಭೀಷ್ಮನ ಬಿಲ್ಲನ್ನು ಹದ್ದಿನ ಗರಿಗಳನ್ನುಳ್ಳ ಅಗಲವಾದ ಅಲಗಿನ ಬಾಣದಿಂದ ಕತ್ತರಿಸಿದನು.

04059042a ಅಥೈನಂ ದಶಭಿರ್ಬಾಣೈಃ ಪ್ರತ್ಯವಿಧ್ಯತ್ಸ್ತನಾಂತರೇ।
04059042c ಯತಮಾನಂ ಪರಾಕ್ರಾಂತಂ ಕುಂತೀಪುತ್ರೋ ಧನಂಜಯಃ।।

ಹಾಗೆಯೇ ಕುಂತೀಪುತ್ರ ಧನಂಜಯನು ಪರಾಕ್ರಮದಿಂದ ಪ್ರಯತ್ನಿಸುತ್ತಿದ್ದ ಅವನ ಎದೆಗೆ ಹತ್ತು ಬಾಣಗಳಿಂದ ಹೊಡೆದನು.

04059043a ಸ ಪೀಡಿತೋ ಮಹಾಬಾಹುರ್ಗೃಹೀತ್ವಾ ರಥಕೂಬರಂ।
04059043c ಗಾಂಗೇಯೋ ಯುಧಿ ದುರ್ಧರ್ಷಸ್ತಸ್ಥೌ ದೀರ್ಘಮಿವಾತುರಃ।।

ಯದ್ಧದಲ್ಲಿ ಎದುರಿಸಲಾಗದ ಮಹಾಬಾಹು ಗಾಂಗೇಯನು ಪೀಡಿತನಾಗಿ ರಥದ ದಂಡವನ್ನು ಹಿಡಿದು ಅಸ್ವಸ್ಥನಂತೆ ಬಹಳ ಹೊತ್ತು ಕುಳಿತುಬಿಟ್ಟನು.

04059044a ತಂ ವಿಸಂಜ್ಞಮಪೋವಾಹ ಸಮ್ಯಂತಾ ರಥವಾಜಿನಾಂ।
04059044c ಉಪದೇಶಮನುಸ್ಮೃತ್ಯ ರಕ್ಷಮಾಣೋ ಮಹಾರಥಂ।।

ಪ್ರಜ್ಞೆತಪ್ಪಿದ ಆ ಮಹಾರಥನನ್ನು ರಕ್ಷಿಸುವುದಕ್ಕಾಗಿ ರಥಾಶ್ವಗಳ ಸಾರಥಿಯು ಉಪದೇಶವನ್ನು ನೆನೆದು ಅವನನ್ನು ಕೊಂಡೊಯ್ದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಭೀಷ್ಮಾಪಯಾನೇ ಏಕೋನಷಷ್ಟಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಭೀಷ್ಮಾಪಯಾನದಲ್ಲಿ ಐವತ್ತೊಂಭತ್ತನೆಯ ಅಧ್ಯಾಯವು.