058 ಉತ್ತರಗೋಗ್ರಹೇ ಅರ್ಜುನಸಂಕುಲಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ಗೋಹರಣ ಪರ್ವ

ಅಧ್ಯಾಯ 58

ಸಾರ

ಅರ್ಜುನನು ಐಂದ್ರಾಸ್ತ್ರವನ್ನು ಪ್ರಯೋಗಿಸಿ ಕುರುಸೇನೆಯನ್ನು ಅಲ್ಲೋಲಕಲ್ಲೋಲಗೊಳಿಸಿದುದು (1-13).

04058001 ವೈಶಂಪಾಯನ ಉವಾಚ।
04058001a ಅಥ ದುರ್ಯೋಧನಃ ಕರ್ಣೋ ದುಃಶಾಸನವಿವಿಂಶತೀ।
04058001c ದ್ರೋಣಶ್ಚ ಸಹ ಪುತ್ರೇಣ ಕೃಪಶ್ಚಾತಿರಥೋ ರಣೇ।।
04058002a ಪುನರೀಯುಃ ಸುಸಂರಬ್ಧಾ ಧನಂಜಯಜಿಘಾಂಸಯಾ।
04058002c ವಿಸ್ಫಾರಯಂತಶ್ಚಾಪಾನಿ ಬಲವಂತಿ ದೃಢಾನಿ ಚ।।

ವೈಶಂಪಾಯನನು ಹೇಳಿದನು: “ಆಮೇಲೆ ದುರ್ಯೋಧನ, ಕರ್ಣ, ದುಃಶಾಸನ, ವಿವಿಂಶತಿ, ಪುತ್ರಸಹಿತ ದ್ರೋಣ, ಅತಿರಥ ಕೃಪ ಇವರು ಬಲವಾದ ದೃಢ ಬಿಲ್ಲುಗಳನ್ನು ಮಿಡಿಯುತ್ತಾ ಧನಂಜಯನನ್ನು ಕೊಲ್ಲಬೇಕೆಂದು ಕೋಪಾವೇಶದಿಂದ ಮತ್ತೆ ಯುದ್ಧಕ್ಕೆ ಬಂದರು.

04058003a ತಾನ್ಪ್ರಕೀರ್ಣಪತಾಕೇನ ರಥೇನಾದಿತ್ಯವರ್ಚಸಾ।
04058003c ಪ್ರತ್ಯುದ್ಯಯೌ ಮಹಾರಾಜ ಸಮಸ್ತಾನ್ವಾನರಧ್ವಜಃ।।

ಮಹಾರಾಜ! ವಾನರಧ್ವಜ ಅರ್ಜುನನು ಹಾರಾಡುವ ಬಾವುಟಗಳನ್ನುಳ್ಳ ಸೂರ್ಯನಂತೆ ಪ್ರಕಾಶಿಸುವ ರಥದಲ್ಲಿ ಕುಳಿತು ಅವರೆಲ್ಲರನ್ನೂ ಎದುರಿಸಿದನು.

04058004a ತತಃ ಕೃಪಶ್ಚ ಕರ್ಣಶ್ಚ ದ್ರೋಣಶ್ಚ ರಥಿನಾಂ ವರಃ।
04058004c ತಂ ಮಹಾಸ್ತ್ರೈರ್ಮಹಾವೀರ್ಯಂ ಪರಿವಾರ್ಯ ಧನಂಜಯಂ।।

ಬಳಿಕ ಕೃಪ, ಕರ್ಣ, ಮತ್ತು ರಥಿಗಳಲ್ಲಿ ಶ್ರೇಷ್ಠ ದ್ರೋಣರು ಮಹಾವೀರ್ಯ ಧನಂಜಯನನ್ನು ಮಹಾಸ್ತ್ರಗಳಿಂದ ತಡೆದರು.

04058005a ಶರೌಘಾನ್ಸಮ್ಯಗಸ್ಯಂತೋ ಜೀಮೂತಾ ಇವ ವಾರ್ಷಿಕಾಃ।
04058005c ವವರ್ಷುಃ ಶರವರ್ಷಾಣಿ ಪ್ರಪತಂತಂ ಕಿರೀಟಿನಂ।।

ಮೇಲೆ ಬೀಳುತ್ತಿದ್ದ ಕಿರೀಟಿಯಮೇಲೆ ಮಳೆಸುರಿಸುವ ಮೋಡಗಳಂತೆ ಬಾಣಗಳ ಮಳೆಗರೆದರು.

04058006a ಇಷುಭಿರ್ಬಹುಭಿಸ್ತೂರ್ಣಂ ಸಮರೇ ಲೋಮವಾಹಿಭಿಃ।
04058006c ಅದೂರಾತ್ಪರ್ಯವಸ್ಥಾಯ ಪೂರಯಾಮಾಸುರಾದೃತಾಃ।।

ಆ ಮಾನ್ಯರು ಯುದ್ಧದಲ್ಲಿ ಅವನ ಹತ್ತಿರವೇ ನಿಂತು ಗರಿಗಳಿಂದ ಕೂಡಿದ ಬಾಣಗಳಿಂದ ಅವನನ್ನು ಶೀಘ್ರವಾಗಿ ಮುಚ್ಚಿಬಿಟ್ಟರು.

04058007a ತಥಾವಕೀರ್ಣಸ್ಯ ಹಿ ತೈರ್ದಿವ್ಯೈರಸ್ತ್ರೈಃ ಸಮಂತತಃ।
04058007c ನ ತಸ್ಯ ದ್ವ್ಯಂಗುಲಮಪಿ ವಿವೃತಂ ಸಮದೃಶ್ಯತ।।

ಹಾಗೆ ಸುತ್ತಲೂ ಆ ದಿವ್ಯಾಸ್ತ್ರಗಳಿಂದ ಮುಚ್ಚಿ ಹೋಗಿದ್ದ ಅವನ ದೇಹದಲ್ಲಿ ಒಂದು ಅಂಗುಲದಷ್ಟು ಕೂಡ ಜಾಗವು ಕಾಣುತ್ತಿರಲಿಲ್ಲ.

04058008a ತತಃ ಪ್ರಹಸ್ಯ ಬೀಭತ್ಸುರ್ದಿವ್ಯಮೈಂದ್ರಂ ಮಹಾರಥಃ।
04058008c ಅಸ್ತ್ರಮಾದಿತ್ಯಸಂಕಾಶಂ ಗಾಂಡೀವೇ ಸಮಯೋಜಯತ್।।

ಅನಂತರ ಮಹಾರಥಿ ಬೀಭತ್ಸುವು ನಕ್ಕು ಆದಿತ್ಯಸಂಕಾಶ ಇಂದ್ರಾಸ್ತ್ರವನ್ನು ಗಾಂಡೀವಕ್ಕೆ ಹೂಡಿದನು.

04058009a ಸ ರಶ್ಮಿಭಿರಿವಾದಿತ್ಯಃ ಪ್ರತಪನ್ಸಮರೇ ಬಲೀ।
04058009c ಕಿರೀಟಮಾಲೀ ಕೌಂತೇಯಃ ಸರ್ವಾನ್ಪ್ರಾಚ್ಛಾದಯತ್ಕುರೂನ್।।

ಸಮರದಲ್ಲಿ ಬಲಶಾಲಿ, ಕಿರೀಟಮಾಲಿ ಕೌಂತೇಯನು ಸೂರ್ಯನ ಕಿರಣದಂತೆ ಪ್ರಜ್ವಲಿಸುತ್ತಾ ಕುರುಗಳೆಲ್ಲರನ್ನೂ ಮುಚ್ಚಿಬಿಟ್ಟನು.

04058010a ಯಥಾ ಬಲಾಹಕೇ ವಿದ್ಯುತ್ಪಾವಕೋ ವಾ ಶಿಲೋಚ್ಚಯೇ।
04058010c ತಥಾ ಗಾಂಡೀವಮಭವದಿಂದ್ರಾಯುಧಮಿವಾತತಂ।।

ಕಾಮನಬಿಲ್ಲಿನಂತೆ ಬಗ್ಗಿದ್ದ ಗಾಂಡೀವವು ಮೋಡದಲ್ಲಿನ ಮಿಂಚಿನಂತೆ ಮತ್ತು ಪರ್ವತದ ಮೇಲಿನ ಬೆಂಕಿಯಂತೆ ಪ್ರಜ್ವಲಿಸುತ್ತಿತ್ತು.

04058011a ಯಥಾ ವರ್ಷತಿ ಪರ್ಜನ್ಯೇ ವಿದ್ಯುದ್ವಿಭ್ರಾಜತೇ ದಿವಿ।
04058011c ತಥಾ ದಶ ದಿಶಃ ಸರ್ವಾಃ ಪತದ್ಗಾಂಡೀವಮಾವೃಣೋತ್।।

ಮೋಡವು ಮಳೆಗರೆಯುವಾಗ ಆಗಸದಲ್ಲಿ ಮಿಂಚು ಹೊಳೆಯುವಂತೆ ಗಾಂಡೀವವು ಹತ್ತುದಿಕ್ಕುಗಳಲ್ಲಿಯೂ ಬೆಂಕಿಯನ್ನು ಬೀಳಿಸಿತು.

04058012a ತ್ರಸ್ತಾಶ್ಚ ರಥಿನಃ ಸರ್ವೇ ಬಭೂವುಸ್ತತ್ರ ಸರ್ವಶಃ।
04058012c ಸರ್ವೇ ಶಾಂತಿಪರಾ ಭೂತ್ವಾ ಸ್ವಚಿತ್ತಾನಿ ನ ಲೇಭಿರೇ।
04058012e ಸಂಗ್ರಾಮವಿಮುಖಾಃ ಸರ್ವೇ ಯೋಧಾಸ್ತೇ ಹತಚೇತಸಃ।।

ಅಲ್ಲಿ ರಥಿಕರೆಲ್ಲರೂ ಎಲ್ಲೆಡೆಯೂ ತಲ್ಲಣಗೊಂಡರು. ಎಲ್ಲರೂ ಮೂಕರಾಗಿ, ಚಿತ್ತದ ಸ್ವಾಸ್ಥ್ಯವನ್ನು ಕಳೆದುಕೊಂಡರು. ಹತಚೇತಸರಾಗಿ ಯೋಧರೆಲ್ಲರೂ ಸಂಗ್ರಾಮವಿಮುಖರಾದರು.

04058013a ಏವಂ ಸರ್ವಾಣಿ ಸೈನ್ಯಾನಿ ಭಗ್ನಾನಿ ಭರತರ್ಷಭ।
04058013c ಪ್ರಾದ್ರವಂತ ದಿಶಃ ಸರ್ವಾ ನಿರಾಶಾನಿ ಸ್ವಜೀವಿತೇ।।

ಭರತರ್ಷಭ! ಹೀಗೆ ಸೇನೆಗಳೆಲ್ಲವೂ ಛಿದ್ರ ಛಿದ್ರವಾಗಿ ತಮ್ಮ ಜೀವದ ಆಸೆಯನ್ನು ತೊರೆದು ಎಲ್ಲ ದಿಕ್ಕುಗಳಿಗೂ ಓಡಿಹೋದವು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಅರ್ಜುನಸಂಕುಲಯುದ್ಧೇ ಅಷ್ಟಪಂಚಾಶತ್ತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಅರ್ಜುನಸಂಕುಲಯುದ್ಧದಲ್ಲಿ ಐವತ್ತೆಂಟನೆಯ ಅಧ್ಯಾಯವು.