ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ವಿರಾಟ ಪರ್ವ
ಗೋಹರಣ ಪರ್ವ
ಅಧ್ಯಾಯ 57
ಸಾರ
ಕೌರವ ಮಹಾರಥರೆಲ್ಲ ಒಟ್ಟಾಗಿ ಸೇರಿ ಅರ್ಜುನನನ್ನು ಆಕ್ರಮಿಸಲು, ಅವನು ಕುರುಸೇನೆಯನ್ನು ಧ್ವಂಸಮಾಡಿದುದರ ವರ್ಣನೆ (1-19).
04057001 ವೈಶಂಪಾಯನ ಉವಾಚ।
04057001a ಅಥ ಸಂಗಮ್ಯ ಸರ್ವೇ ತು ಕೌರವಾಣಾಂ ಮಹಾರಥಾಃ।
04057001c ಅರ್ಜುನಂ ಸಹಿತಾ ಯತ್ತಾಃ ಪ್ರತ್ಯಯುಧ್ಯಂತ ಭಾರತ।।
ವೈಶಂಪಾಯನನು ಹೇಳಿದನು: “ಭಾರತ! ಅನಂತರ ಕೌರವ ಮಹಾರಥರೆಲ್ಲ ಒಟ್ಟಾಗಿ ಸೇರಿ ಅರ್ಜುನನ ಮೇಲೆ ಬಲವಾಗಿ ಆಕ್ರಮಣ ಮಾಡಿದರು.
04057002a ಸ ಸಾಯಕಮಯೈರ್ಜಾಲೈಃ ಸರ್ವತಸ್ತಾನ್ಮಹಾರಥಾನ್।
04057002c ಪ್ರಾಚ್ಛಾದಯದಮೇಯಾತ್ಮಾ ನೀಹಾರ ಇವ ಪರ್ವತಾನ್।।
ಮಂಜು ಪರ್ವತಗಳನ್ನು ಕವಿಯುವಂತೆ ಆ ಅಮೇಯಾತ್ಮನು ಆ ಮಹಾರಥರನ್ನೆಲ್ಲಾ ಬಾಣಗಳ ಜಾಲದಿಂದ ಮುಚ್ಚಿಬಿಟ್ಟನು.
04057003a ನದದ್ಭಿಶ್ಚ ಮಹಾನಾಗೈರ್ಹೇಷಮಾಣೈಶ್ಚ ವಾಜಿಭಿಃ।
04057003c ಭೇರೀಶಂಖನಿನಾದೈಶ್ಚ ಸ ಶಬ್ದಸ್ತುಮುಲೋಽಭವತ್।।
ಮಹಾಗಜಗಳ ಘೀಂಕಾರದಿಂದಲೂ, ಕುದುರೆಗಳ ಹೇಷಾರವದಿಂದಲೂ, ಭೇರಿ-ಶಂಖಗಳ ನಿನಾದದಿಂದಲೂ ತುಮುಲ ಶಬ್ಧವುಂಟಾಯಿತು.
04057004a ನರಾಶ್ವಕಾಯಾನ್ನಿರ್ಭಿದ್ಯ ಲೋಹಾನಿ ಕವಚಾನಿ ಚ।
04057004c ಪಾರ್ಥಸ್ಯ ಶರಜಾಲಾನಿ ವಿನಿಷ್ಪೇತುಃ ಸಹಸ್ರಶಃ।।
ಪಾರ್ಥನ ಸಾವಿರಾರು ಬಾಣ ಸಮೂಹಗಳು ಮನುಷ್ಯರ ಮತ್ತು ಕುದುರೆಗಳ ಶರೀರಗಳನ್ನೂ, ಲೋಹಕವಚಗಳನ್ನೂ ಭೇದಿಸಿ ಹೊರಬೀಳುತ್ತಿದ್ದವು.
04057005a ತ್ವರಮಾಣಃ ಶರಾನಸ್ಯನ್ಪಾಂಡವಃ ಸ ಬಭೌ ರಣೇ।
04057005c ಮಧ್ಯಂದಿನಗತೋಽರ್ಚಿಷ್ಮಾಂ ಶರದೀವ ದಿವಾಕರಃ।।
ತ್ವರೆಯಿಂದ ಬಾಣಗಳನ್ನು ಬಿಡುತ್ತಿದ್ದ ಆ ಅರ್ಜುನನು ಶರತ್ಕಾಲದ ನಡುಹಗಲಿನಲ್ಲಿ ಜ್ವಲಿಸುವ ಸೂರ್ಯನಂತೆ ಸಮರದಲ್ಲಿ ಶೋಭಿಸುತ್ತಿದ್ದನು.
04057006a ಉಪಪ್ಲವಂತ ವಿತ್ರಸ್ತಾ ರಥೇಭ್ಯೋ ರಥಿನಸ್ತದಾ।
04057006c ಸಾದಿನಶ್ಚಾಶ್ವಪೃಷ್ಠೇಭ್ಯೋ ಭೂಮೌ ಚಾಪಿ ಪದಾತಯಃ।।
ಆಗ ಹೆದರಿದ ರಥಿಕರು ರಥಗಳಿಂದಲೂ, ಅಶ್ವಸೈನಿಕರು ಕುದುರೆಗಳಿಂದಲೂ ಧುಮುಕುತ್ತಿದ್ದರು ಮತ್ತು ಕಾಲಾಳುಗಳು ನೆಲಕ್ಕೆ ಬೀಳುತ್ತಿದ್ದರು.
04057007a ಶರೈಃ ಸಂತಾಡ್ಯಮಾನಾನಾಂ ಕವಚಾನಾಂ ಮಹಾತ್ಮನಾಂ।
04057007c ತಾಮ್ರರಾಜತಲೋಹಾನಾಂ ಪ್ರಾದುರಾಸೀನ್ಮಹಾಸ್ವನಃ।।
ಬಾಣಗಳು ತಾಗಿದ ಮಹಾವೀರರ ತಾಮ್ರ, ಬೆಳ್ಳಿ, ಮತ್ತು ಉಕ್ಕುಗಳ ಕವಚಗಳಿಂದ ಮಹಾ ಶಬ್ಧವುಂಟಾಯಿತು.
04057008a ಚನ್ನಮಾಯೋಧನಂ ಸರ್ವಂ ಶರೀರೈರ್ಗತಚೇತಸಾಂ।
04057008c ಗಜಾಶ್ವಸಾದಿಭಿಸ್ತತ್ರ ಶಿತಬಾಣಾತ್ತಜೀವಿತೈಃ।।
ಮಡಿದವರ ದೇಹಗಳಿಂದಲೂ, ಹರಿತ ಬಾಣಗಳಿಂದ ಪ್ರಾಣನೀಗಿದ ಗಜಾರೋಹೀ, ಅಶ್ವಾರೋಹಿಗಳಿಂದಲೂ ಆ ರಣರಂಗವೆಲ್ಲ ಮುಸುಕಿಹೋಯಿತು.
04057009a ರಥೋಪಸ್ಥಾಭಿಪತಿತೈರಾಸ್ತೃತಾ ಮಾನವೈರ್ಮಹೀ।
04057009c ಪ್ರನೃತ್ಯದಿವ ಸಂಗ್ರಾಮೇ ಚಾಪಹಸ್ತೋ ಧನಂಜಯಃ।।
ರಥದಿಂದುರುಳಿ ಬಿದ್ದ ಮಾನವರಿಂದ ಭೂಮಿಯು ತುಂಬಿಹೋಯಿತು. ಧನಂಜಯನು ಕೈಯಲ್ಲಿ ಬಿಲ್ಲನ್ನು ಹಿಡಿದು ಯುದ್ಧದಲ್ಲಿ ಕುಣಿಯುತ್ತಿರುವಂತೆ ತೋರುತ್ತಿತ್ತು.
04057010a ಶ್ರುತ್ವಾ ಗಾಂಡೀವನಿರ್ಘೋಷಂ ವಿಸ್ಫೂರ್ಜಿತಮಿವಾಶನೇಃ।
04057010c ತ್ರಸ್ತಾನಿ ಸರ್ವಭೂತಾನಿ ವ್ಯಗಚ್ಛಂತ ಮಹಾಹವಾತ್।।
ಸಿಡಿಲಿನ ಶಬ್ಧದಂತಿದ್ದ ಗಾಂಡೀವದ ನಿರ್ಘೋಷವನ್ನು ಕೇಳಿ ಎಲ್ಲ ಜೀವಿಗಳೂ ಆ ಮಹಾಯುದ್ಧಕ್ಕೆ ಹೆದರಿ ಓಡಿಹೋದವು.
04057011a ಕುಂಡಲೋಷ್ಣೀಷಧಾರೀಣಿ ಜಾತರೂಪಸ್ರಜಾನಿ ಚ।
04057011c ಪತಿತಾನಿ ಸ್ಮ ದೃಶ್ಯಂತೇ ಶಿರಾಂಸಿ ರಣಮೂರ್ಧನಿ।।
ಕುಂಡಲ-ಕಿರೀಟಗಳನ್ನೂ, ಚಿನ್ನದ ಹಾರಗಳನ್ನೂ ಧರಿಸಿದ ರುಂಡಗಳು ರಣರಂಗದಲ್ಲಿ ಬಿದ್ದಿರುವುದು ಕಂಡುಬರುತ್ತಿದ್ದವು.
04057012a ವಿಶಿಖೋನ್ಮಥಿತೈರ್ಗಾತ್ರೈರ್ಬಾಹುಭಿಶ್ಚ ಸಕಾರ್ಮುಕೈಃ।
04057012c ಸಹಸ್ತಾಭರಣೈಶ್ಚಾನ್ಯೈಃ ಪ್ರಚ್ಛನ್ನಾ ಭಾತಿ ಮೇದಿನೀ।।
ಬಾಣಗಳಿಂದ ಗಾಸಿಗೊಂಡ ದೇಹಗಳಿಂದಲೂ, ಬಿಲ್ಲುಗಳು ಚುಚ್ಚಲ್ಪಟ್ಟ ತೋಳುಗಳಿಂದಲೂ, ಆಭರಣಗಳ ಸಹಿತ ಕೈಗಳಿಂದಲೂ ಭೂಮಿಯು ಮುಚ್ಚಿಹೋಗಿ ಶೋಭಿಸುತ್ತಿತ್ತು.
04057013a ಶಿರಸಾಂ ಪಾತ್ಯಮಾನಾನಾಮಂತರಾ ನಿಶಿತೈಃ ಶರೈಃ।
04057013c ಅಶ್ಮವೃಷ್ಟಿರಿವಾಕಾಶಾದಭವದ್ ಭರತರ್ಷಭ।।
ಭರತರ್ಷಭ! ಆಕಾಶದಿಂದ ಕಲ್ಲುಗಳ ಮಳೆಸುರಿದಂತೆ ಹರಿತ ಬಾಣಗಳಿಂದ ರುಂಡಗಳು ಸತತವಾಗಿ ಬೀಳುತ್ತಿದ್ದವು.
04057014a ದರ್ಶಯಿತ್ವಾ ತಥಾತ್ಮಾನಂ ರೌದ್ರಂ ರುದ್ರಪರಾಕ್ರಮಃ।
04057014c ಅವರುದ್ಧಶ್ಚರನ್ಪಾರ್ಥೋ ದಶವರ್ಷಾಣಿ ತ್ರೀಣಿ ಚ।
04057014e ಕ್ರೋಧಾಗ್ನಿಮುತ್ಸೃಜದ್ಘೋರಂ ಧಾರ್ತರಾಷ್ಟ್ರೇಷು ಪಾಂಡವಃ।।
ಹದಿಮೂರು ವರ್ಷ ತಡೆದುಕೊಂಡಿದ್ದ ರುದ್ರಪರಾಕ್ರಮಿ ಪಾಂಡವ ಪಾರ್ಥನು ತನ್ನ ರೌದ್ರವನ್ನು ಹಾಗೆ ಪ್ರದರ್ಶಿಸುತ್ತಾ, ಸಂಚರಿಸುತ್ತಾ, ಆ ಭಯಂಕರ ಕೋಪಾಗ್ನಿಯನ್ನು ಧಾರ್ತರಾಷ್ಟ್ರರ ಮೇಲೆ ಸುರಿಸಿದನು.
04057015a ತಸ್ಯ ತದ್ದಹತಃ ಸೈನ್ಯಂ ದೃಷ್ಟ್ವಾ ಚೈವ ಪರಾಕ್ರಮಂ।
04057015c ಸರ್ವೇ ಶಾಂತಿಪರಾ ಯೋಧಾ ಧಾರ್ತರಾಷ್ಟ್ರಸ್ಯ ಪಶ್ಯತಃ।।
ಅವನಿಂದ ಸುಟ್ಟು ಹೋಗುತ್ತಿದ್ದ ಸೈನ್ಯವನ್ನೂ ಮತ್ತು ಅವನ ಪರಾಕ್ರಮವನ್ನು ನೋಡಿ ಎಲ್ಲ ಯೋಧರೂ ಧಾರ್ತರಾಷ್ಟ್ರನ ಕಣ್ಣೆದುರಿಗೇ ಮೂಕರಾದರು.
04057016a ವಿತ್ರಾಸಯಿತ್ವಾ ತತ್ಸೈನ್ಯಂ ದ್ರಾವಯಿತ್ವಾ ಮಹಾರಥಾನ್।
04057016c ಅರ್ಜುನೋ ಜಯತಾಂ ಶ್ರೇಷ್ಠಃ ಪರ್ಯವರ್ತತ ಭಾರತ।।
ಭಾರತ! ಜಯಶಾಲಿಗಳಲ್ಲಿ ಶ್ರೇಷ್ಠ ಅರ್ಜುನನು ಆ ಸೈನ್ಯವನ್ನು ಹೆದರಿಸುತ್ತಾ, ಮಹಾರಥಿಗಳನ್ನು ಓಡಿಸುತ್ತಾ ಸುತ್ತಾಡಿದನು.
04057017a ಪ್ರಾವರ್ತಯನ್ನದೀಂ ಘೋರಾಂ ಶೋಣಿತೌಘತರಂಗಿಣೀಂ।
04057017c ಅಸ್ಥಿಶೈವಲಸಂಬಾಧಾಂ ಯುಗಾಂತೇ ಕಾಲನಿರ್ಮಿತಾಂ।।
ರಕ್ತಪ್ರವಾಹದ ಅಲೆಗಳನ್ನುಳ್ಳ, ಮೂಳೆಗಳ ಪಾಚಿಯಿಂದ ತುಂಬಿದ, ಪ್ರಳಯಕಾಲದಲ್ಲಿ ಯಮನು ನಿರ್ಮಿಸಿದಂತಿದ್ದ ಘೋರ ನದಿಯನ್ನು ಹರಿಸಿದನು.
04057018a ಶರಚಾಪಪ್ಲವಾಂ ಘೋರಾಂ ಮಾಂಸಶೋಣಿತಕರ್ದಮಾಂ।
04057018c ಮಹಾರಥಮಹಾದ್ವೀಪಾಂ ಶಂಖದುಂದುಭಿನಿಸ್ವನಾಂ।
04057018e ಚಕಾರ ಮಹತೀಂ ಪಾರ್ಥೋ ನದೀಮುತ್ತರಶೋಣಿತಾಂ।।
ಬಿಲ್ಲು ಬಾಣಗಳ ದೋಣಿಗಳನ್ನುಳ್ಳ, ರಕ್ತ ಮಾಂಸಗಳ ಕೆಸರನ್ನುಳ್ಳ, ಮಹಾರಥರ ಮಹಾದ್ವೀಪಗಳನ್ನುಳ್ಳ, ಶಂಖದುಂದುಭಿಗಳ ಶಬ್ಧಗಳ, ಘೋರವಾಗಿ ಉಕ್ಕುತ್ತಿದ್ದ ನೆತ್ತರ ನದಿಯನ್ನು ಪಾರ್ಥನು ನಿರ್ಮಿಸಿದನು.
04057019a ಆದದಾನಸ್ಯ ಹಿ ಶರಾನ್ಸಂಧಾಯ ಚ ವಿಮುಂಚತಃ।
04057019c ವಿಕರ್ಷತಶ್ಚ ಗಾಂಡೀವಂ ನ ಕಿಂ ಚಿದ್ದೃಶ್ಯತೇಽಂತರಂ।।
ಅವನು ಬಾಣಗಳನ್ನು ತೆಗೆಯುವುದಕ್ಕೂ, ಹೂಡುವುದಕ್ಕೂ, ಗಾಂಡೀವವನ್ನೆಳೆದು ಬಿಡುವುದಕ್ಕೂ ನಡುವೆ ಯಾವುದೇ ಅಂತರವು ಕಾಣುತ್ತಿರಲಿಲ್ಲ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಅರ್ಜುನಸಂಕುಲಯುದ್ಧೇ ಸಪ್ತಪಂಚಾಶತ್ತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಅರ್ಜುನಸಂಕುಲಯುದ್ಧದಲ್ಲಿ ಐವತ್ತೇಳನೆಯ ಅಧ್ಯಾಯವು.