056 ಉತ್ತರಗೋಗ್ರಹೇ ಅರ್ಜುನದುಃಶಾಸನಾದಿಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ಗೋಹರಣ ಪರ್ವ

ಅಧ್ಯಾಯ 56

ಸಾರ

ಅರ್ಜುನನು ತನ್ನ ಪೌರುಷವನ್ನು ಹೇಳಿಕೊಂಡು ಭೀಷ್ಮನಲ್ಲಿಗೆ ರಥವನ್ನು ಕೊಂಡೊಯ್ಯಲು ಹೇಳುವುದು (1-15). ಅರ್ಜುನನು ದುಃಶಾಸನನೊಂದಿಗೆ (16-22), ವಿಕರ್ಣನೊಂದಿಗೆ (23-24), ಮತ್ತು ದುಃಸ್ಸಹನೊಂದಿಗೆ ಯುದ್ಧಮಾಡಿ ಸೋಲಿಸಿ ಭೀಷ್ಮನನ್ನು ಸಮೀಪಿಸಿದುದು (25-28).

04056001 ವೈಶಂಪಾಯನ ಉವಾಚ।
04056001a ತತೋ ವೈಕರ್ತನಂ ಜಿತ್ವಾ ಪಾರ್ಥೋ ವೈರಾಟಿಮಬ್ರವೀತ್।
04056001c ಏತನ್ಮಾಂ ಪ್ರಾಪಯಾನೀಕಂ ಯತ್ರ ತಾಲೋ ಹಿರಣ್ಮಯಃ।।

ವೈಶಂಪಾಯನನು ಹೇಳಿದನು: “ಕರ್ಣನನ್ನು ಗೆದ್ದ ಪಾರ್ಥನು ಉತ್ತರನಿಗೆ ನುಡಿದನು: “ಇದೋ ಚಿನ್ನದ ತಾಳೆಮರದ ಧ್ವಜಚಿಹ್ನೆಯಿರುವ ಸೈನ್ಯದೆಡೆಗೆ ನನ್ನನ್ನು ಕೊಂಡೊಯ್ಯಿ.

04056002a ಅತ್ರ ಶಾಂತನವೋ ಭೀಷ್ಮೋ ರಥೇಽಸ್ಮಾಕಂ ಪಿತಾಮಹಃ।
04056002c ಕಾಂಕ್ಷಮಾಣೋ ಮಯಾ ಯುದ್ಧಂ ತಿಷ್ಠತ್ಯಮರದರ್ಶನಃ।
04056002e ಆದಾಸ್ಯಾಮ್ಯಹಮೇತಸ್ಯ ಧನುರ್ಜ್ಯಾಮಪಿ ಚಾಹವೇ।।

ಅಲ್ಲಿ ಶಂತನುಪುತ್ರ ದೇವಸದೃಶ ನಮ್ಮ ಪಿತಾಮಹ ಭೀಷ್ಮನು ನನ್ನೊಡನೆ ಯುದ್ಧಕಾತುರನಾಗಿ ರಥದಲ್ಲಿದ್ದಾನೆ. ಯುದ್ಧದಲ್ಲಿ ಅವನ ಬಿಲ್ಲನ್ನೂ ಹೆದೆಯನ್ನೂ ಕತ್ತರಿಸುತ್ತೇನೆ.

04056003a ಅಸ್ಯಂತಂ ದಿವ್ಯಮಸ್ತ್ರಂ ಮಾಂ ಚಿತ್ರಮದ್ಯ ನಿಶಾಮಯ।
04056003c ಶತಹ್ರದಾಮಿವಾಯಾಂತೀಂ ಸ್ತನಯಿತ್ನೋರಿವಾಂಬರೇ।।

ಆಕಾಶದಲ್ಲಿ ಮೋಡದಿಂದ ನೂರಾರು ಮಿಂಚುಗಳು ಹೊಮ್ಮುವಂತೆ ಇಂದು ದಿವ್ಯಾಸ್ತ್ರಗಳನ್ನು ಅದ್ಭುತವಾಗಿ ಬಿಡುವ ನನ್ನನ್ನು ನೋಡು.

04056004a ಸುವರ್ಣಪೃಷ್ಠಂ ಗಾಂಡೀವಂ ದ್ರಕ್ಷ್ಯಂತಿ ಕುರವೋ ಮಮ।
04056004c ದಕ್ಷಿಣೇನಾಥ ವಾಮೇನ ಕತರೇಣ ಸ್ವಿದಸ್ಯತಿ।
04056004e ಇತಿ ಮಾಂ ಸಂಗತಾಃ ಸರ್ವೇ ತರ್ಕಯಿಷ್ಯಂತಿ ಶತ್ರವಃ।।

ಚಿನ್ನದ ಹಿಂಬದಿಯುಳ್ಳ ನನ್ನ ಗಾಂಡೀವವನ್ನು ಕೌರವರು ಇಂದು ಕಾಣುತ್ತಾರೆ. ಶತ್ರುಗಳೆಲ್ಲ ಸೇರಿ ಬಲಗೈಯಿಂದಲೋ ಅಥವಾ ಎಡಗೈಯಿಂದಲೋ? ಯಾವುದರಿಂದ ಬಾಣವನ್ನು ಬಿಡುತ್ತಾನೆ? ಎಂದು ನನ್ನ ವಿಷಯದಲ್ಲಿ ತರ್ಕಿಸುತ್ತಾರೆ.

04056005a ಶೋಣಿತೋದಾಂ ರಥಾವರ್ತಾಂ ನಾಗನಕ್ರಾಂ ದುರತ್ಯಯಾಂ।
04056005c ನದೀಂ ಪ್ರಸ್ಯಂದಯಿಷ್ಯಾಮಿ ಪರಲೋಕಪ್ರವಾಹಿನೀಂ।।

ರಕ್ತವೆಂಬ ಜಲವನ್ನೂ, ರಥಗಳೆಂಬ ಸುಳಿಗಳನ್ನೂ, ಆನೆಗಳೆಂಬ ಮೊಸಳೆಗಳನ್ನೂ ಕೂಡಿದ, ದಾಟಲಾಗದ, ಪರಲೋಕದತ್ತ ಹರಿಯುವ ನದಿಯೊಂದನ್ನು ನಾನು ಇಂದು ಹರಿಯಿಸುತ್ತೇನೆ.

04056006a ಪಾಣಿಪಾದಶಿರಃಪೃಷ್ಠಬಾಹುಶಾಖಾನಿರಂತರಂ।
04056006c ವನಂ ಕುರೂಣಾಂ ಚೇತ್ಸ್ಯಾಮಿ ಭಲ್ಲೈಃ ಸಂನತಪರ್ವಭಿಃ।।

ಕೈ, ಕಾಲು, ಬೆನ್ನು, ತೋಳುಗಳ ಕೊಂಬೆಗಳನ್ನುಳ್ಳ ದಟ್ಟವಾದ ಕುರುವನವನ್ನು ನೇರ್ಪಡಿಸಿದ ಗಿಣ್ಣಿನ ಭಲ್ಲೆಗಳಿಂದ ಕಡಿದುಹಾಕುತ್ತೇನೆ.

04056007a ಜಯತಃ ಕೌರವೀಂ ಸೇನಾಮೇಕಸ್ಯ ಮಮ ಧನ್ವಿನಃ।
04056007c ಶತಂ ಮಾರ್ಗಾ ಭವಿಷ್ಯಂತಿ ಪಾವಕಸ್ಯೇವ ಕಾನನೇ।
04056007e ಮಯಾ ಚಕ್ರಮಿವಾವಿದ್ಧಂ ಸೈನ್ಯಂ ದ್ರಕ್ಷ್ಯಸಿ ಕೇವಲಂ।।

ಬಿಲ್ಲು ಹಿಡಿದು ಕುರು ಸೈನ್ಯವನ್ನು ಒಂಟಿಯಾಗಿ ಗೆಲ್ಲುವ ನನಗೆ ಕಾಡಿನಲ್ಲಿ ಅಗ್ನಿಗೆ ಹೇಗೋ ಹಾಗೆ ನೂರು ಮಾರ್ಗಗಳು ಉಂಟಾಗುತ್ತವೆ. ನನ್ನಿಂದ ಹೊಡೆತ ತಿಂದ ಸೈನ್ಯವೆಲ್ಲ ಚಕ್ರದಂತೆ ಸುತ್ತುವುದನ್ನು ನೀನು ನೋಡುತ್ತೀಯೆ.

04056008a ಅಸಂಭ್ರಾಂತೋ ರಥೇ ತಿಷ್ಠ ಸಮೇಷು ವಿಷಮೇಷು ಚ।
04056008c ದಿವಮಾವೃತ್ಯ ತಿಷ್ಠಂತಂ ಗಿರಿಂ ಭೇತ್ಸ್ಯಾಮಿ ಧಾರಿಭಿಃ।।

ನೆಲ ಒಂದೇಸಮನಾಗಿರಲಿ ಅಥವಾ ಹಳ್ಳತಿಟ್ಟುಗಳಿಂದ ಕೂಡಿರಲಿ. ನೀನು ಗಾಬರಿಕೊಳ್ಳದೆ ರಥದಲ್ಲಿ ಕುಳಿತಿರು. ಆಕಾಶವನ್ನು ಆವರಿಸಿ ನಿಂತಿರುವ ಗಿರಿಯನ್ನು ಕೂಡ ನಾನು ಬಾಣಗಳಿಂದ ಭೇದಿಸುತ್ತೇನೆ.

04056009a ಅಹಮಿಂದ್ರಸ್ಯ ವಚನಾತ್ಸಂಗ್ರಾಮೇಽಭ್ಯಹನಂ ಪುರಾ।
04056009c ಪೌಲೋಮಾನ್ಕಾಲಖಂಜಾಂಶ್ಚ ಸಹಸ್ರಾಣಿ ಶತಾನಿ ಚ।।

ಹಿಂದೆ ನಾನು ಇಂದ್ರನ ಮಾತಿನಂತೆ ಯುದ್ಧದಲ್ಲಿ ನೂರಾರು ಸಾವಿರಾರು ಮಂದಿ ಪೌಲೋಮ ಕಾಲಖಂಜರನ್ನು ಕೊಂದಿದ್ದೆ.

04056010a ಅಹಮಿಂದ್ರಾದ್ದೃಢಾಂ ಮುಷ್ಟಿಂ ಬ್ರಹ್ಮಣಃ ಕೃತಹಸ್ತತಾಂ।
04056010c ಪ್ರಗಾಢಂ ತುಮುಲಂ ಚಿತ್ರಮತಿವಿದ್ಧಂ ಪ್ರಜಾಪತೇಃ।।

ನಾನು ಇಂದ್ರನಿಂದ ದೃಢಮುಷ್ಠಿಯನ್ನೂ, ಬ್ರಹ್ಮನಿಂದ ಕೈಚಳಕವನ್ನೂ, ಪ್ರಜಾಪತಿಯಿಂದ ಗಾಢ, ಭಯಂಕರ ಅದ್ಭುತ ಭೇದಶಕ್ತಿಯನ್ನೂ ಪಡೆದಿದ್ದೇನೆ.

04056011a ಅಹಂ ಪಾರೇ ಸಮುದ್ರಸ್ಯ ಹಿರಣ್ಯಪುರಮಾರುಜಂ।
04056011c ಜಿತ್ವಾ ಷಷ್ಟಿಸಹಸ್ರಾಣಿ ರಥಿನಾಮುಗ್ರಧನ್ವಿನಾಂ।।

ನಾನು ಸಮುದ್ರದ ಆಚೆಯಿದ್ದ ಅರವತ್ತು ಸಾವಿರ ಉಗ್ರಧನುರ್ಧಾರಿ ರಥಿಕರನ್ನು ಗೆದ್ದು ಹಿರಣ್ಯಪುರವನ್ನು ನಾಶಮಾಡಿದ್ದೆ.

04056012a ಧ್ವಜವೃಕ್ಷಂ ಪತ್ತಿತೃಣಂ ರಥಸಿಂಹಗಣಾಯುತಂ।
04056012c ವನಮಾದೀಪಯಿಷ್ಯಾಮಿ ಕುರೂಣಾಮಸ್ತ್ರತೇಜಸಾ।।

ಬಾವುಟಗಳೆಂಬ ಮರಗಳಿಂದಲೂ, ಪದಾತಿಗಳೆಂಬ ಹುಲ್ಲಿನಿಂದಲೂ, ರಥಗಳೆಂಬ ಸಿಂಹ ಸಮೂಹದಿಂದಲೂ ಕೂಡಿದ ಕುರುವನವನ್ನು ನನ್ನ ಅಸ್ತ್ರಗಳ ತೇಜಸ್ಸಿನಿಂದ ಸುಟ್ಟುಹಾಕುತ್ತೇನೆ.

04056013a ತಾನಹಂ ರಥನೀಡೇಭ್ಯಃ ಶರೈಃ ಸಂನತಪರ್ವಭಿಃ।
04056013c ಏಕಃ ಸಂಕಾಲಯಿಷ್ಯಾಮಿ ವಜ್ರಪಾಣಿರಿವಾಸುರಾನ್।।

ದೇವೇಂದ್ರನು ರಾಕ್ಷಸರನ್ನು ಅಟ್ಟಿದಂತೆ ನಾನೊಬ್ಬನೇ ನೇರ್ಪಡಿಸಿದ ಗಿಣ್ಣಿನ ಬಾಣಗಳನ್ನು ಬಿಟ್ಟು ಆ ಶತ್ರುಗಳನ್ನು ರಥಗಳೆಂಬ ಗೂಡುಗಳಿಂದ ಎಳೆದುಹಾಕುತ್ತೇನೆ.

04056014a ರೌದ್ರಂ ರುದ್ರಾದಹಂ ಹ್ಯಸ್ತ್ರಂ ವಾರುಣಂ ವರುಣಾದಪಿ।
04056014c ಅಸ್ತ್ರಮಾಗ್ನೇಯಮಗ್ನೇಶ್ಚ ವಾಯವ್ಯಂ ಮಾತರಿಶ್ವನಃ।
04056014e ವಜ್ರಾದೀನಿ ತಥಾಸ್ತ್ರಾಣಿ ಶಕ್ರಾದಹಮವಾಪ್ತವಾನ್।।

ನಾನು ರುದ್ರನಿಂದ ರೌದ್ರಾಸ್ತ್ರವನ್ನೂ, ವರುಣನಿಂದ ವಾರುಣಾಸ್ತ್ರವನ್ನೂ, ಅಗ್ನಿಯಿಂದ ಆಗ್ನೇಯಾಸ್ತ್ರವನ್ನೂ, ವಾಯುವಿನಿಂದ ವಾಯುವ್ಯಾಸ್ತ್ರವನ್ನೂ, ಇಂದ್ರನಿಂದ ವಜ್ರಾಯುಧವೇ ಮುಂತಾದ ಅಸ್ತ್ರಗಳನ್ನು ಪಡೆದುಕೊಂಡಿದ್ದೇನೆ.

04056015a ಧಾರ್ತರಾಷ್ಟ್ರವನಂ ಘೋರಂ ನರಸಿಂಹಾಭಿರಕ್ಷಿತಂ।
04056015c ಅಹಮುತ್ಪಾಟಯಿಷ್ಯಾಮಿ ವೈರಾಟೇ ವ್ಯೇತು ತೇ ಭಯಂ।।

ಉತ್ತರ! ನರಶ್ರೇಷ್ಠರಿಂದ ರಕ್ಷಿತವಾದ ಧೃತರಾಷ್ಟ್ರಪುತ್ರರೆಂಬ ಈ ಘೋರ ವನವನ್ನು ನಾನು ಕಿತ್ತುಹಾಕುತ್ತೇನೆ. ನಿನ್ನ ಭಯವು ತೊಲಗಲಿ!”

04056016a ಏವಮಾಶ್ವಾಸಿತಸ್ತೇನ ವೈರಾಟಿಃ ಸವ್ಯಸಾಚಿನಾ।
04056016c ವ್ಯಗಾಹತ ರಥಾನೀಕಂ ಭೀಮಂ ಭೀಷ್ಮಸ್ಯ ಧೀಮತಃ।।

ಹೀಗೆ ಆ ಸವ್ಯಸಾಚಿಯಿಂದ ಆಶ್ವಾಸನೆಗೊಂಡ ಉತ್ತರನು ಧೀಮಂತ ಭೀಷ್ಮನ ಭಯಂಕರ ರಥಸೈನ್ಯವನ್ನು ಪ್ರವೇಶಿಸಿದನು.

04056017a ತಮಾಯಾಂತಂ ಮಹಾಬಾಹುಂ ಜಿಗೀಷಂತಂ ರಣೇ ಪರಾನ್।
04056017c ಅಭ್ಯವಾರಯದವ್ಯಗ್ರಃ ಕ್ರೂರಕರ್ಮಾ ಧನಂಜಯಂ।।

ಯುದ್ಧದಲ್ಲಿ ಶತ್ರುಗಳನ್ನು ಗೆಲ್ಲಬಯಸಿದ ಆ ಮಹಾಬಾಹು ಧನಂಜಯನನ್ನು ಕ್ರೂರಕಾರ್ಯಗಳನ್ನು ಮಾಡಿದ ಭೀಷ್ಮನು ಉದ್ವೇಗವಿಲ್ಲದೇ ತಡೆಗಟ್ಟಿದನು.

04056018a ತಂ ಚಿತ್ರಮಾಲ್ಯಾಭರಣಾಃ ಕೃತವಿದ್ಯಾ ಮನಸ್ವಿನಃ।
04056018c ಆಗಚ್ಛನ್ಭೀಮಧನ್ವಾನಂ ಮೌರ್ವೀಂ ಪರ್ಯಸ್ಯ ಬಾಹುಭಿಃ।।

ಸುಂದರ ಮಾಲೆಗಳನ್ನೂ, ಆಭರಣಗಳನ್ನೂ ಧರಿಸಿದ್ದ ವಿದ್ಯಾಪರಿಣಿತ ಆ ಚತುರನು ತೋಳುಗಳಿಂದ ಬಿಲ್ಲಿನ ಹೆದೆಯನ್ನು ಮಿಡಿಯುತ್ತ ಭಯಂಕರ ಧನುರ್ಧರನ ಮೇಲೆರಗಿದನು.

04056019a ದುಃಶಾಸನೋ ವಿಕರ್ಣಶ್ಚ ದುಃಸ್ಸಹೋಽಥ ವಿವಿಂಶತಿಃ।
04056019c ಆಗತ್ಯ ಭೀಮಧನ್ವಾನಂ ಬೀಭತ್ಸುಂ ಪರ್ಯವಾರಯನ್।।

ದುಃಶಾಸನ, ವಿಕರ್ಣ, ದುಃಸ್ಸಹ ಮತ್ತು ವಿವಿಂಶತಿ – ಇವರು ಭಯಂಕರ ಧನುರ್ಧರ ಅರ್ಜುನನತ್ತ ನುಗ್ಗಿ ಸುತ್ತುಗಟ್ಟಿದರು.

04056020a ದುಃಶಾಸನಸ್ತು ಭಲ್ಲೇನ ವಿದ್ಧ್ವಾ ವೈರಾಟಿಮುತ್ತರಂ।
04056020c ದ್ವಿತೀಯೇನಾರ್ಜುನಂ ವೀರಃ ಪ್ರತ್ಯವಿಧ್ಯತ್ಸ್ತನಾಂತರೇ।।

ವೀರ ದುಃಶಾಸನನು ಭಲ್ಲೆಯಿಂದ ವಿರಾಟಪುತ್ರ ಉತ್ತರನನ್ನು ಹೊಡೆದು ಇನ್ನೊಂದರಿಂದ ಅರ್ಜುನನ ಎದೆಗೆ ಹೊಡೆದನು.

04056021a ತಸ್ಯ ಜಿಷ್ಣುರುಪಾವೃತ್ಯ ಪೃಥುಧಾರೇಣ ಕಾರ್ಮುಕಂ।
04056021c ಚಕರ್ತ ಗಾರ್ಧ್ರಪತ್ರೇಣ ಜಾತರೂಪಪರಿಷ್ಕೃತಂ।।

ತಿರುಗಿ ಅರ್ಜುನನು ಹದ್ದಿನ ಗರಿಯ ವಿಶಾಲ ಅಲಗುಗಳ ಬಾಣಗಳಿಂದ ಅವನ ಸುವರ್ಣಖಚಿತ ಬಿಲ್ಲನ್ನು ಕತ್ತರಿಸಿದನು.

04056022a ಅಥೈನಂ ಪಂಚಭಿಃ ಪಶ್ಚಾತ್ಪ್ರತ್ಯವಿಧ್ಯತ್ಸ್ತನಾಂತರೇ।
04056022c ಸೋಽಪಯಾತೋ ರಣಂ ಹಿತ್ವಾ ಪಾರ್ಥಬಾಣಪ್ರಪೀಡಿತಃ।।

ಆಮೇಲೆ ಐದು ಬಾಣಗಳಿಂದ ಅವನ ಎದೆಗೆ ಹೊಡೆದನು. ಪಾರ್ಥನ ಬಾಣಗಳಿಂದ ಭಾದಿತನಾದ ಅವನು ಯುದ್ಧರಂಗವನ್ನು ಬಿಟ್ಟು ಓಡಿ ಹೋದನು.

04056023a ತಂ ವಿಕರ್ಣಃ ಶರೈಸ್ತೀಕ್ಷ್ಣೈರ್ಗಾರ್ಧ್ರಪತ್ರೈರಜಿಹ್ಮಗೈಃ।
04056023c ವಿವ್ಯಾಧ ಪರವೀರಘ್ನಮರ್ಜುನಂ ಧೃತರಾಷ್ಟ್ರಜಃ।।

ಧೃತರಾಷ್ಟ್ರಪುತ್ರ ವಿಕರ್ಣನು ಶತ್ರುವೀರರನ್ನು ಕೊಲ್ಲುವ ಅರ್ಜುನನನ್ನು ಹದ್ದಿನ ಗರಿಗಳ, ಹರಿತ ನೇರಗತಿಯ ಬಾಣಗಳಿಂದ ಹೊಡೆದನು.

04056024a ತತಸ್ತಮಪಿ ಕೌಂತೇಯಃ ಶರೇಣಾನತಪರ್ವಣಾ।
04056024c ಲಲಾಟೇಽಭ್ಯಹನತ್ತೂರ್ಣಂ ಸ ವಿದ್ಧಃ ಪ್ರಾಪತದ್ರಥಾತ್।।

ಆಗ ಅರ್ಜುನನು ನೇರ್ಪಡಿಸಿದ ಗಿಣ್ಣಿನ ಬಾಣದಿಂದ ಬೇಗ ಅವನ ಹಣೆಗೆ ಹೊಡೆದನು. ಪೆಟ್ಟುತಿಂದ ಅವನು ರಥದಿಂದ ಬಿದ್ದನು.

04056025a ತತಃ ಪಾರ್ಥಮಭಿದ್ರುತ್ಯ ದುಃಸ್ಸಹಃ ಸವಿವಿಂಶತಿಃ।
04056025c ಅವಾಕಿರಚ್ಚರೈಸ್ತೀಕ್ಷ್ಣೈಃ ಪರೀಪ್ಸನ್ಭ್ರಾತರಂ ರಣೇ।।

ಅನಂತರ ಯುದ್ಧದಲ್ಲಿ ಸೋದರರನ್ನು ರಕ್ಷಿಸ ಬಯಸಿದ ದುಃಸ್ಸಹನು ವಿವಿಂಶತಿಯೊಡಗೂಡಿ ಪಾರ್ಥನತ್ತ ನುಗ್ಗಿ ತೀಕ್ಷ್ಣಬಾಣಗಳಿಂದ ಅವನನ್ನು ಮುಚ್ಚಿದನು.

04056026a ತಾವುಭೌ ಗಾರ್ಧ್ರಪತ್ರಾಭ್ಯಾಂ ನಿಶಿತಾಭ್ಯಾಂ ಧನಂಜಯಃ।
04056026c ವಿದ್ಧ್ವಾ ಯುಗಪದವ್ಯಗ್ರಸ್ತಯೋರ್ವಾಹಾನಸೂದಯತ್।।

ಧನಂಜಯನು ಉದ್ವಿಗ್ನನಾಗದೇ ಹದ್ದಿನ ಗರಿಗಳಿಂದ ಕೂಡಿದ ಹರಿತ ಬಾಣಗಳಿಂದ ಅವರಿಬ್ಬರನ್ನೂ ಏಕಕಾಲದಲ್ಲಿ ಹೊಡೆದು ಅವರ ಕುದುರೆಗಳನ್ನು ಕೊಂದನು.

04056027a ತೌ ಹತಾಶ್ವೌ ವಿವಿದ್ಧಾಂಗೌ ಧೃತರಾಷ್ಟ್ರಾತ್ಮಜಾವುಭೌ।
04056027c ಅಭಿಪತ್ಯ ರಥೈರನ್ಯೈರಪನೀತೌ ಪದಾನುಗೈಃ।।

ಕುದುರೆಗಳು ಸತ್ತು, ಅವರ ದೇಹಗಳು ಗಾಯಗೊಳ್ಳಲು ಆ ಧೃತರಾಷ್ಟ್ರಪುತ್ರರಿಬ್ಬರನ್ನೂ ಅವರ ಕಾಲಾಳುಗಳು ಮುನ್ನುಗ್ಗಿ ಬೇರೆ ರಥಗಳಲ್ಲಿ ಕೊಂಡೊಯ್ದರು.

04056028a ಸರ್ವಾ ದಿಶಶ್ಚಾಭ್ಯಪತದ್ಬೀಭತ್ಸುರಪರಾಜಿತಃ।
04056028c ಕಿರೀಟಮಾಲೀ ಕೌಂತೇಯೋ ಲಬ್ಧಲಕ್ಷೋ ಮಹಾಬಲಃ।।

ಸೋಲಿಲ್ಲದ, ಕಿರೀಟಧಾರಿ, ಗುರಿತಪ್ಪದ, ಬಹಾಬಲಿ ಅರ್ಜುನನು ಎಲ್ಲ ದಿಕ್ಕುಗಳನ್ನೂ ಆಕ್ರಮಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಅರ್ಜುನದುಃಶಾಸನಾದಿಯುದ್ಧೇ ಷಟ್‌ಪಂಚಾಶತ್ತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಅರ್ಜುನದುಃಶಾಸನಾದಿಯುದ್ಧದಲ್ಲಿ ಐವತ್ತಾರನೆಯ ಅಧ್ಯಾಯವು.