ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ವಿರಾಟ ಪರ್ವ
ಗೋಹರಣ ಪರ್ವ
ಅಧ್ಯಾಯ 54
ಸಾರ
ಅಶ್ವತ್ಥಾಮನು ಅರ್ಜುನನೊಡನೆ ಯುದ್ಧಮಾಡುತ್ತಿರುವಾಗ ಅವನ ಬಾಣಗಳು ಬರಿದಾದುದು (1-14). ಪಕ್ಕದಲ್ಲಿದ್ದ ಕರ್ಣನ ಮೇಲೆ ಅರ್ಜುನನು ತನ್ನ ಕೋಪವನ್ನು ಹಾಯಿಸಿದುದು (15-20).
04054001 ವೈಶಂಪಾಯನ ಉವಾಚ।
04054001a ತಂ ಪಾರ್ಥಃ ಪ್ರತಿಜಗ್ರಾಹ ವಾಯುವೇಗಮಿವೋದ್ಧತಂ।
04054001c ಶರಜಾಲೇನ ಮಹತಾ ವರ್ಷಮಾಣಮಿವಾಂಬುದಂ।।
ವೈಶಂಪಾಯನನು ಹೇಳಿದನು: “ವಾಯುವೇಗದಂತೆ ಉದ್ಧತ, ಮಳೆಗರೆಯುವ ಮೋಡದಂಥ ಆ ಅಶ್ವತ್ಥಾಮನನ್ನು ಪಾರ್ಥನು ಬಾಣಗಳ ದೊಡ್ಡ ಸಮೂಹದಿಂದ ಎದುರಿಸಿದನು.
04054002a ತಯೋರ್ದೇವಾಸುರಸಮಃ ಸಂನಿಪಾತೋ ಮಹಾನಭೂತ್।
04054002c ಕಿರತೋಃ ಶರಜಾಲಾನಿ ವೃತ್ರವಾಸವಯೋರಿವ।।
ಬಾಣಗಳ ಸಮೂಹವನ್ನು ಬೀರುತ್ತಿದ್ದ ಅವರಲ್ಲಿ ವೃತ್ರ-ದೇವೇಂದ್ರರಿಗೆ ನಡೆದಂತೆ ದೇವಾಸುರ ಸಮಾನ ಮಹಾಯುದ್ಧವು ನಡೆಯಿತು.
04054003a ನ ಸ್ಮ ಸೂರ್ಯಸ್ತದಾ ಭಾತಿ ನ ಚ ವಾತಿ ಸಮೀರಣಃ।
04054003c ಶರಗಾಢೇ ಕೃತೇ ವ್ಯೋಮ್ನಿ ಚಾಯಾಭೂತೇ ಸಮಂತತಃ।।
ಆಗ ಆಕಾಶವು ಬಾಣಗಳ ದಟ್ಟಣೆಯಿಂದ ಕವಿದುಹೋಗಲು, ಸೂರ್ಯನು ಹೊಳೆಯಲ್ಲಿಲ್ಲ ಮತ್ತು ಗಾಳಿಯು ಬೀಸಲಿಲ್ಲ.
04054004a ಮಹಾಂಶ್ಚಟಚಟಾಶಬ್ದೋ ಯೋಧಯೋರ್ಹನ್ಯಮಾನಯೋಃ।
04054004c ದಹ್ಯತಾಮಿವ ವೇಣೂನಾಮಾಸೀತ್ಪರಪುರಂಜಯ।।
ಪರಪುರಂಜಯ! ಪರಸ್ಪರರನ್ನು ಹೊಡೆಯುತ್ತಿದ್ದ ಆ ಯೋಧರಿಂದ, ಉರಿಯುತ್ತಿರುವ ಬಿದಿರಿನಂತೆ, ಜೋರಾದ ಜಟಪಟ ಶಬ್ಧವು ಉಂಟಾಯಿತು.
04054005a ಹಯಾನಸ್ಯಾರ್ಜುನಃ ಸರ್ವಾನ್ಕೃತವಾನಲ್ಪಜೀವಿತಾನ್।
04054005c ಸ ರಾಜನ್ನ ಪ್ರಜಾನಾತಿ ದಿಶಂ ಕಾಂ ಚನ ಮೋಹಿತಃ।।
ರಾಜನ್! ಅರ್ಜುನನು ಅವನ ಕುದುರೆಗಳನ್ನೆಲ್ಲ ಕೊಂದುಹಾಕಲು, ಅಶ್ವತ್ಥಾಮನಿಗೆ ದಿಕ್ಕು ತೋರಲಿಲ್ಲ.
04054006a ತತೋ ದ್ರೌಣಿರ್ಮಹಾವೀರ್ಯಃ ಪಾರ್ಥಸ್ಯ ವಿಚರಿಷ್ಯತಃ।
04054006c ವಿವರಂ ಸೂಕ್ಷ್ಮಮಾಲೋಕ್ಯ ಜ್ಯಾಂ ಚಿಚ್ಛೇದ ಕ್ಷುರೇಣ ಹ।
04054006e ತದಸ್ಯಾಪೂಜಯನ್ದೇವಾಃ ಕರ್ಮ ದೃಷ್ಟ್ವಾತಿಮಾನುಷಂ।।
ಅನಂತರ ಮಹಾವೀರ್ಯಶಾಲಿ ದ್ರೋಣಪುತ್ರನು ಚಲಿಸುತ್ತಿದ್ದ ಪಾರ್ಥನ ತುಸು ಅಜಾಕರೂಕತೆಯನ್ನು ಗಮನಿಸಿ ಕಿರುಗತ್ತಿಯಿಂದ ಅವನ ಬಿಲ್ಲಿನ ಹಗ್ಗವನ್ನು ಕತ್ತರಿಸಿದನು. ದೇವತೆಗಳು ಅವನ ಈ ಅತಿಮಾನುಷ ಕಾರ್ಯವನ್ನು ನೋಡಿ ಹೊಗಳಿದರು.
04054007a ತತೋ ದ್ರೌಣಿರ್ಧನೂಂಷ್ಯಷ್ಟೌ ವ್ಯಪಕ್ರಮ್ಯ ನರರ್ಷಭಂ।
04054007c ಪುನರಭ್ಯಾಹನತ್ಪಾರ್ಥಂ ಹೃದಯೇ ಕಂಕಪತ್ರಿಭಿಃ।।
ಆಮೇಲೆ ಅಶ್ವತ್ಥಾಮನು ಎಂಟು ಬಿಲ್ಲುಗಳ ಅಳತೆಯಷ್ಟು ಹಿಂದಕ್ಕೆ ಸರಿದು ಕಂಕ ಪಕ್ಷಿಯ ಗರಿಗಳ ಬಾಣಗಳಿಂದ ನರಶ್ರೇಷ್ಠ ಪಾರ್ಥನ ಎದೆಗೆ ಮತ್ತೆ ಹೊಡೆದನು.
04054008a ತತಃ ಪಾರ್ಥೋ ಮಹಾಬಾಹುಃ ಪ್ರಹಸ್ಯ ಸ್ವನವತ್ತದಾ।
04054008c ಯೋಜಯಾಮಾಸ ನವಯಾ ಮೌರ್ವ್ಯಾ ಗಾಂಡೀವಂ ಓಜಸಾ।।
ಆಗ ಆ ಮಹಾನುಭಾವ ಪಾರ್ಥನು ಗಟ್ಟಿಯಾಗಿ ನಗುತ್ತಾ ಹೊಸದಾದ ಹಗ್ಗವನ್ನು ಗಾಂಡೀವಕ್ಕೆ ಬಲವಾಗಿ ಬಿಗಿದನು.
04054009a ತತೋಽರ್ಧಚಂದ್ರಮಾವೃತ್ಯ ತೇನ ಪಾರ್ಥಃ ಸಮಾಗಮತ್।
04054009c ವಾರಣೇನೇವ ಮತ್ತೇನ ಮತ್ತೋ ವಾರಣಯೂಥಪಃ।।
ಆಮೇಲೆ ಪಾರ್ಥನು ಅರ್ಧಚಂದ್ರಾಕಾರವಾಗಿ ತಿರುಗಿ, ಮದಿಸಿದ ಸಲಗವು ಮದ್ದಾನೆಯನ್ನು ಸಂಧಿಸುವಂತೆ, ಅವನನ್ನು ಸಂಧಿಸಿದನು.
04054010a ತತಃ ಪ್ರವವೃತೇ ಯುದ್ಧಂ ಪೃಥಿವ್ಯಾಮೇಕವೀರಯೋಃ।
04054010c ರಣಮಧ್ಯೇ ದ್ವಯೋರೇವ ಸುಮಹಲ್ಲೋಮಹರ್ಷಣಂ।।
ಆಗ ರಣರಂಗದ ನಡುವೆ ಆ ಲೋಕೈಕವೀರರಿಬ್ಬರಿಗೂ ರೋಮಾಂಚನಕಾರಿ ಮಹಾಯುದ್ಧವು ನಡೆಯಿತು.
04054011a ತೌ ವೀರೌ ಕುರವಃ ಸರ್ವೇ ದದೃಶುರ್ವಿಸ್ಮಯಾನ್ವಿತಾಃ।
04054011c ಯುಧ್ಯಮಾನೌ ಮಹಾತ್ಮಾನೌ ಯೂಥಪಾವಿವ ಸಂಗತೌ।।
ಸಲಗಗಳಂತೆ ತೊಡಕಿಕೊಂಡು ಹೋರಾಡುತ್ತಿದ್ದ ಆ ಮಹಾತ್ಮ ವೀರರನ್ನು ಕುರುಯೋಧರೆಲ್ಲರೂ ಆಶ್ಚರ್ಯದಿಂದ ನೋಡುತ್ತಿದ್ದರು.
04054012a ತೌ ಸಮಾಜಘ್ನತುರ್ವೀರಾವನ್ಯೋನ್ಯಂ ಪುರುಷರ್ಷಭೌ।
04054012c ಶರೈರಾಶೀವಿಷಾಕಾರೈರ್ಜ್ವಲದ್ಭಿರಿವ ಪನ್ನಗೈಃ।।
ಆ ಪುರುಷಶ್ರೇಷ್ಠ ವೀರರು ಸರ್ಪಾಕಾರದ, ಉರಗಗಳಂತೆ ಜ್ವಲಿಸುವ ಬಾಣಗಳಿಂದ ಒಬ್ಬರನ್ನೊಬ್ಬರು ಪ್ರಹರಿಸಿದರು.
04054013a ಅಕ್ಷಯ್ಯಾವಿಷುಧೀ ದಿವ್ಯೌ ಪಾಂಡವಸ್ಯ ಮಹಾತ್ಮನಃ।
04054013c ತೇನ ಪಾರ್ಥೋ ರಣೇ ಶೂರಸ್ತಸ್ಥೌ ಗಿರಿರಿವಾಚಲಃ।।
ಮಹಾತ್ಮ ಅರ್ಜುನನಲ್ಲಿ ಎರಡು ಅಕ್ಷಯ ದಿವ್ಯ ಬತ್ತಳಿಕೆಗಳಿದ್ದುದರಿಂದ ಶೂರ ಪಾರ್ಥನು ರಣದಲ್ಲಿ ಪರ್ವತದಂತೆ ಅಚಲನಾಗಿದ್ದನು.
04054014a ಅಶ್ವತ್ಥಾಮ್ನಃ ಪುನರ್ಬಾಣಾಃ ಕ್ಷಿಪ್ರಮಭ್ಯಸ್ಯತೋ ರಣೇ।
04054014c ಜಗ್ಮುಃ ಪರಿಕ್ಷಯಂ ಶೀಘ್ರಮಭೂತ್ತೇನಾಧಿಕೋಽರ್ಜುನಃ।।
ಅಶ್ವತ್ಥಾಮನಾದರೋ ಯುದ್ಧದಲ್ಲಿ ಬಾಣಗಳನ್ನು ಬೇಗ ಬೇಗ ಬಿಡುತ್ತಿದ್ದುದರಿಂದ ಅವು ಬೇಗ ಬರಿದಾದವು. ಆದ್ದರಿಂದ ಅರ್ಜುನನದೇ ಮೇಲುಗೈಯಾಯಿತು.
04054015a ತತಃ ಕರ್ಣೋ ಮಹಚ್ಚಾಪಂ ವಿಕೃಷ್ಯಾಭ್ಯಧಿಕಂ ರುಷಾ।
04054015c ಅವಾಕ್ಷಿಪತ್ತತಃ ಶಬ್ದೋ ಹಾಹಾಕಾರೋ ಮಹಾನಭೂತ್।।
ಆಗ ಕರ್ಣನು ರೋಷದಿಂದ ದೊಡ್ಡ ಬಿಲ್ಲನ್ನೆಳೆದು ಬಲವಾಗಿ ಮಿಡಿದನು. ಆಗ ದೊಡ್ಡ ಹಾಹಾಕಾರ ಶಬ್ಧವುಂಟಾಯಿತು.
04054016a ತತ್ರ ಚಕ್ಷುರ್ದಧೇ ಪಾರ್ಥೋ ಯತ್ರ ವಿಸ್ಫಾರ್ಯತೇ ಧನುಃ।
04054016c ದದರ್ಶ ತತ್ರ ರಾಧೇಯಂ ತಸ್ಯ ಕೋಪೋಽತ್ಯವೀವೃಧತ್।।
ಬಿಲ್ಲುಮಿಡಿದ ಕಡೆ ಪಾರ್ಥನು ಕಣ್ಣುಹಾಯಿಸಲು, ಅಲ್ಲಿ ಕರ್ಣನನ್ನು ಕಂಡು ಅವನ ಕೋಪವು ಇನ್ನು ಬಹಳವಾಯಿತು.
04054017a ಸ ರೋಷವಶಮಾಪನ್ನಃ ಕರ್ಣಮೇವ ಜಿಘಾಂಸಯಾ।
04054017c ಅವೈಕ್ಷತ ವಿವೃತ್ತಾಭ್ಯಾಂ ನೇತ್ರಾಭ್ಯಾಂ ಕುರುಪುಂಗವಃ।।
ಆ ಕುರುಶ್ರೇಷ್ಠನು ರೋಷವಶನಾಗಿ ಕರ್ಣನನ್ನೇ ಕೊಲ್ಲಬಯಸಿ ಕಣ್ಣುತಿರುಗಿಸಿ ಅವನನ್ನು ದಿಟ್ಟಿಸಿದನು.
04054018a ತಥಾ ತು ವಿಮುಖೇ ಪಾರ್ಥೇ ದ್ರೋಣಪುತ್ರಸ್ಯ ಸಾಯಕಾನ್।
04054018c ತ್ವರಿತಾಃ ಪುರುಷಾ ರಾಜನ್ನುಪಾಜಹ್ರುಃ ಸಹಸ್ರಶಃ।।
ರಾಜನ್! ಪಾರ್ಥನು ಹಾಗೆ ಮುಖತಿರುಗಿಸಲು ತೀವ್ರಗಾಮಿ ಯೋಧರು ಸಾವಿರಾರು ಬಾಣಗಳನ್ನು ಅಶ್ವತ್ಥಾಮನಿಗೆ ತಂದುಕೊಟ್ಟರು.
04054019a ಉತ್ಸೃಜ್ಯ ಚ ಮಹಾಬಾಹುರ್ದ್ರೋಣಪುತ್ರಂ ಧನಂಜಯಃ।
04054019c ಅಭಿದುದ್ರಾವ ಸಹಸಾ ಕರ್ಣಮೇವ ಸಪತ್ನಜಿತ್।।
ಮಹಾಬಾಹು ಶತ್ರುವಿಜೇತನ ಧನಂಜಯನು ಆಗ ಅಶ್ವತ್ಥಾಮನನ್ನು ಬಿಟ್ಟು ಇದ್ದಕ್ಕಿದ್ದಂತಲೇ ಕರ್ಣನತ್ತಲೇ ನುಗ್ಗಿದನು.
04054020a ತಮಭಿದ್ರುತ್ಯ ಕೌಂತೇಯಃ ಕ್ರೋಧಸಂರಕ್ತಲೋಚನಃ।
04054020c ಕಾಮಯನ್ದ್ವೈರಥೇ ಯುದ್ಧಮಿದಂ ವಚನಮಬ್ರವೀತ್।।
ಕೋಪದಿಂದ ಕಣ್ಣು ಕೆಂಪು ಮಾಡಿಕೊಂಡು ಅವನತ್ತ ನುಗ್ಗಿದ ಅರ್ಜುನನು ದ್ವಂದ್ವಯುದ್ಧವನ್ನು ಬಯಸಿ ಈ ಮಾತನ್ನಾಡಿದನು.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಅರ್ಜುನಾಶ್ವತ್ಥಾಮಯುದ್ಧೇ ಚತುಃಪಂಚಾಶತ್ತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಅರ್ಜುನಾಶ್ವತ್ಥಾಮಯುದ್ಧದಲ್ಲಿ ಐವತ್ನಾಲ್ಕನೆಯ ಅಧ್ಯಾಯವು.