ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ವಿರಾಟ ಪರ್ವ
ಗೋಹರಣ ಪರ್ವ
ಅಧ್ಯಾಯ 53
ಸಾರ
ಅರ್ಜುನನು ದ್ರೋಣನನ್ನು ಎದುರಿಸಿದುದು (1-9). ಅರ್ಜುನನ ಬಾಣಗಳಿಂದ ಕವಚ ಮತ್ತು ಧ್ವಜಗಳು ಹರಿದು ಹೋಗಿ ಗಾಯಗೊಂಡಿದ್ದ ದ್ರೋಣನು ಯುದ್ಧಬಿಟ್ಟು ಹೊರಟು ಹೋದುದು (10-69).
04053001 ಅರ್ಜುನ ಉವಾಚ।
04053001a ಯತ್ರೈಷಾ ಕಾಂಚನೀ ವೇದೀ ಪ್ರದೀಪ್ತಾಗ್ನಿಶಿಖೋಪಮಾ।
04053001c ಉಚ್ಛ್ರಿತಾ ಕಾಂಚನೇ ದಂಡೇ ಪತಾಕಾಭಿರಲಂಕೃತಾ।
04053001e ತತ್ರ ಮಾಂ ವಹ ಭದ್ರಂ ತೇ ದ್ರೋಣಾನೀಕಾಯ ಮಾರಿಷ।।
ಅರ್ಜುನನು ಹೇಳಿದನು: “ಮಿತ್ರ! ಉರಿಯುತ್ತಿರುವ ಅಗ್ನಿಜ್ವಾಲೆಗೆ ಸಮಾನ ಚಿನ್ನದ ವೇದಿಕೆಯನ್ನುಳ್ಳ, ಎತ್ತರವಾದ ಚಿನ್ನದ ದಂಡದ ತುದಿಗೆ ಬಿಗಿದಿರುವ ಬಾವುಟಗಳಿಂದ ಅಲಂಕೃತವಾದ ದ್ರೋಣಸೈನ್ಯದೆಡೆಗೆ ನನ್ನನ್ನು ಕರೆದೊಯ್ಯಿ. ನಿನಗೆ ಮಂಗಳವಾಗಲಿ.
04053002a ಅಶ್ವಾಃ ಶೋಣಾಃ ಪ್ರಕಾಶಂತೇ ಬೃಹಂತಶ್ಚಾರುವಾಹಿನಃ।
04053002c ಸ್ನಿಗ್ಧವಿದ್ರುಮಸಂಕಾಶಾಸ್ತಾಮ್ರಾಸ್ಯಾಃ ಪ್ರಿಯದರ್ಶನಾಃ।
04053002e ಯುಕ್ತಾ ರಥವರೇ ಯಸ್ಯ ಸರ್ವಶಿಕ್ಷಾವಿಶಾರದಾಃ।।
ದ್ರೋಣನ ಶ್ರೇಷ್ಠ ರಥಕ್ಕೆ ಹೂಡಿದ ಕುದುರೆಗಳು ಕೆಂಪಗೆ ಹೊಳೆಯುತ್ತಿವೆ. ಅವು ದೊಡ್ಡವು, ಸುಂದರವಾದವು. ಮಿರುಗುವ ಹರಣಕ್ಕೆ ಸಮನಾದವು. ತಾಮ್ರವರ್ಣದ ಮುಖವುಳ್ಳವು. ನೋಡುವುದಕ್ಕೆ ಅಂದವಾದವು ಮತ್ತು ಎಲ್ಲ ತರಬೇತಿಯನ್ನೂ ಪಡೆದವು.
04053003a ದೀರ್ಘಬಾಹುರ್ಮಹಾತೇಜಾ ಬಲರೂಪಸಮನ್ವಿತಃ।
04053003c ಸರ್ವಲೋಕೇಷು ವಿಖ್ಯಾತೋ ಭಾರದ್ವಾಜಃ ಪ್ರತಾಪವಾನ್।।
ದ್ರೋಣನು ಉದ್ದ ತೋಳುಗಳುಳ್ಳವನು. ಮಹಾತೇಜಸ್ವಿ. ಬಲ ಮತ್ತು ರೂಪವುಳ್ಳವನು. ಪ್ರತಾಪಶಾಲಿ ಮತ್ತು ಸರ್ವಲೋಕಗಳಲ್ಲಿಯೂ ಪ್ರಸಿದ್ಧ.
04053004a ಬುದ್ಧ್ಯಾ ತುಲ್ಯೋ ಹ್ಯುಶನಸಾ ಬೃಹಸ್ಪತಿಸಮೋ ನಯೇ।
04053004c ವೇದಾಸ್ತಥೈವ ಚತ್ವಾರೋ ಬ್ರಹ್ಮಚರ್ಯಂ ತಥೈವ ಚ।।
04053005a ಸಸಂಹಾರಾಣಿ ದಿವ್ಯಾನಿ ಸರ್ವಾಣ್ಯಸ್ತ್ರಾಣಿ ಮಾರಿಷ।
04053005c ಧನುರ್ವೇದಶ್ಚ ಕಾರ್ತ್ಸ್ನ್ಯೆನ ಯಸ್ಮಿನ್ನಿತ್ಯಂ ಪ್ರತಿಷ್ಠಿತಃ।।
ಅವನು ಬುದ್ಧಿಯಲ್ಲಿ ಶುಕ್ರನಿಗೂ, ನೀತಿಯಲ್ಲಿ ಬೃಹಸ್ಪತಿಗೂ ಸಮಾನ. ಮಿತ್ರ! ನಾಲ್ಕುವೇದಗಳೂ, ಅಂತೆಯೇ ಬ್ರಹ್ಮಚರ್ಯವೂ, ಉಪಸಂಹಾರ ವಿಧಿಸಹಿತವಾದ ಸಕಲ ದಿವ್ಯಾಸ್ತ್ರಗಳೂ, ಧನುರ್ವೇದವೂ, ಸಂಪೂರ್ಣವಾಗಿ ಸದಾ ಅವನಲ್ಲಿ ನೆಲೆಸಿವೆ.
04053006a ಕ್ಷಮಾ ದಮಶ್ಚ ಸತ್ಯಂ ಚ ಆನೃಶಂಸ್ಯಮಥಾರ್ಜವಂ।
04053006c ಏತೇ ಚಾನ್ಯೇ ಚ ಬಹವೋ ಗುಣಾ ಯಸ್ಮಿನ್ದ್ವಿಜೋತ್ತಮೇ।।
ಆ ಬ್ರಾಹ್ಮಣೋತ್ತಮನಲ್ಲಿ ಕ್ಷಮೆ, ದಮೆ, ಸತ್ಯ, ದಯೆ, ಪ್ರಾಮಾಣಿಕತೆ - ಇವೂ, ಇತರ ಹಲವಾರು ಗುಣಗಳೂ, ನೆಲೆಸಿವೆ.
04053007a ತೇನಾಹಂ ಯೋದ್ಧುಮಿಚ್ಛಾಮಿ ಮಹಾಭಾಗೇನ ಸಂಯುಗೇ।
04053007c ತಸ್ಮಾತ್ತ್ವಂ ಪ್ರಾಪಯಾಚಾರ್ಯಂ ಕ್ಷಿಪ್ರಮುತ್ತರ ವಾಹಯ।।
ಆ ಮಹಾಭಾಗ್ಯಶಾಲಿಯೊಡನೆ ನಾನು ಯುದ್ಧದಲ್ಲಿ ಹೋರಾಡ ಬಯಸುತ್ತೇನೆ. ಆದ್ದರಿಂದ, ಉತ್ತರ! ನನ್ನನ್ನು ಆಚಾರ್ಯನೆಡೆಗೆ ಬೇಗನೆ ಕರೆದೊಯ್ಯಿ.””
04053008 ವೈಶಂಪಾಯನ ಉವಾಚ।
04053008a ಅರ್ಜುನೇನೈವಮುಕ್ತಸ್ತು ವೈರಾಟಿರ್ಹೇಮಭೂಷಿತಾನ್।
04053008c ಚೋದಯಾಮಾಸ ತಾನಶ್ವಾನ್ಭಾರದ್ವಾಜರಥಂ ಪ್ರತಿ।।
ವೈಶಂಪಾಯನನು ಹೇಳಿದನು: “ಅರ್ಜುನನು ಹೀಗೆ ಹೇಳಲು ಉತ್ತರನು ಚಿನ್ನದಿಂದ ಅಲಂಕೃತವಾದ ಆ ಕುದುರೆಗಳನ್ನು ದ್ರೋಣದ ರಥಕ್ಕೆ ಎದುರಾಗಿ ನಡೆಸಿದನು.
04053009a ತಮಾಪತಂತಂ ವೇಗೇನ ಪಾಂಡವಂ ರಥಿನಾಂ ವರಂ।
04053009c ದ್ರೋಣಃ ಪ್ರತ್ಯುದ್ಯಯೌ ಪಾರ್ಥಂ ಮತ್ತೋ ಮತ್ತಮಿವ ದ್ವಿಪಂ।।
ವೇಗವಾಗಿ ನುಗ್ಗಿ ಬರುತ್ತಿದ್ದ ಆ ರಥಿಕಶ್ರೇಷ್ಠ ಪಾಂಡುಪುತ್ರ ಪಾರ್ಥನನ್ನು ದ್ರೋಣನು ಮದ್ದಾನೆಯು ಮದ್ದಾನೆಯನ್ನು ಎದುರಿಸುವಂತೆ ಎದುರಿಸಿದನು.
04053010a ತತಃ ಪ್ರಾಧ್ಮಾಪಯಚ್ಚಂಖಂ ಭೇರೀಶತನಿನಾದಿತಂ।
04053010c ಪ್ರಚುಕ್ಷುಭೇ ಬಲಂ ಸರ್ವಮುದ್ಧೂತ ಇವ ಸಾಗರಃ।।
ಅನಂತರ ದ್ರೋಣನು ನೂರು ಭೇರಿಗಳಂತೆ ಶಬ್ಧಮಾಡುವ ಶಂಖವನ್ನು ಊದಿದನು. ಆಗ ಸೈನ್ಯವೆಲ್ಲವೂ ಅಲ್ಲೋಲಕಲ್ಲೋಲ ಸಮುದ್ರದಂತೆ ಪ್ರಕ್ಷುಬ್ದವಾಯಿತು.
04053011a ಅಥ ಶೋಣಾನ್ಸದಶ್ವಾಂಸ್ತಾನ್ ಹಂಸವರ್ಣೈರ್ಮನೋಜವೈಃ।
04053011c ಮಿಶ್ರಿತಾನ್ಸಮರೇ ದೃಷ್ಟ್ವಾ ವ್ಯಸ್ಮಯಂತ ರಣೇ ಜನಾಃ।
ಆಗ ಯುದ್ಧದಲ್ಲಿ ಅರ್ಜುನನ ಮನೋವೇಗದ ಮತ್ತು ಹಂಸವರ್ಣದ ಕುದುರೆಗಳೊಡನೆ ಕೂಡಿದ ದ್ರೋಣನ ಕೆಂಪು ಕುದುರೆಗಳನ್ನು ನೋಡಿ ರಣರಂಗದಲ್ಲಿದ್ದವರು ವಿಸ್ಮಯಗೊಂಡರು.
04053012a ತೌ ರಥೌ ವೀರ್ಯಸಂಪನ್ನೌ ದೃಷ್ಟ್ವಾ ಸಂಗ್ರಾಮಮೂರ್ಧನಿ।
04053012c ಆಚಾರ್ಯಶಿಷ್ಯಾವಜಿತೌ ಕೃತವಿದ್ಯೌ ಮನಸ್ವಿನೌ।।
04053013a ಸಮಾಶ್ಲಿಷ್ಟೌ ತದಾನ್ಯೋನ್ಯಂ ದ್ರೋಣಪಾರ್ಥೌ ಮಹಾಬಲೌ।
04053013c ದೃಷ್ಟ್ವಾ ಪ್ರಾಕಂಪತ ಮುಹುರ್ಭರತಾನಾಂ ಮಹದ್ಬಲಂ।।
ವೀರ್ಯಸಂಪನ್ನರೂ, ಗುರು-ಶಿಷ್ಯರೂ, ಸೋಲದವರೂ, ವಿದ್ಯಾಪಾರಂಗತರೂ, ಉದಾತ್ತರೂ, ಮಹಾಬಲರೂ ಆದ ಆ ರಥಿಕ ದ್ರೋಣ-ಪಾರ್ಥರು ಯುದ್ಧರಂಗದಲ್ಲಿ ಪರಸ್ಪರ ಮಿಳಿತರಾಗಿರುವುದನ್ನು ಕಂಡು ಭಾರತರ ಮಹಾಸೈನ್ಯವು ಮತ್ತೆ ಮತ್ತೆ ಕಂಪಿಸಿತು.
04053014a ಹರ್ಷಯುಕ್ತಸ್ತಥಾ ಪಾರ್ಥಃ ಪ್ರಹಸನ್ನಿವ ವೀರ್ಯವಾನ್।
04053014c ರಥಂ ರಥೇನ ದ್ರೋಣಸ್ಯ ಸಮಾಸಾದ್ಯ ಮಹಾರಥಃ।।
ಆಮೇಲೆ ವೀರ್ಯಶಾಲಿ ಮಹಾರಥ ಪಾರ್ಥನು ಹರ್ಷಗೊಂಡು ನಗುತ್ತ ತನ್ನ ರಥವನ್ನು ದ್ರೋಣನ ರಥದ ಸಮೀಪ ತಂದನು.
04053015a ಅಭಿವಾದ್ಯ ಮಹಾಬಾಹುಃ ಸಾಂತ್ವಪೂರ್ವಮಿದಂ ವಚಃ।
04053015c ಉವಾಚ ಶ್ಲಕ್ಷ್ಣಯಾ ವಾಚಾ ಕೌಂತೇಯಃ ಪರವೀರಹಾ।।
ಆ ಮಹಾಬಾಹು ಶತ್ರುನಾಶಕ ಅರ್ಜುನನು ದ್ರೋಣನಿಗೆ ವಂದಿಸಿ ವಿನಯಪೂರ್ವಕ ಮಧುರ ಈ ಮಾತುಗಳನ್ನಾಡಿದನು:
04053016a ಉಷಿತಾಃ ಸ್ಮ ವನೇ ವಾಸಂ ಪ್ರತಿಕರ್ಮ ಚಿಕೀರ್ಷವಃ।
04053016c ಕೋಪಂ ನಾರ್ಹಸಿ ನಃ ಕರ್ತುಂ ಸದಾ ಸಮರದುರ್ಜಯ।।
“ಯುದ್ಧದಲ್ಲಿ ಸದಾ ಅಜೇಯನಾದವನೇ! ವನವಾಸಮಾಡಿದ ನಾವು ಈಗ ಪ್ರತೀಕಾರ ಮಾಡಬಯಸುತ್ತೇವೆ. ನೀನು ನಮ್ಮ ವಿಷಯದಲ್ಲಿ ಕೋಪಿಸಿಕೊಳ್ಳಬಾರದು.
04053017a ಅಹಂ ತು ಪ್ರಹೃತೇ ಪೂರ್ವಂ ಪ್ರಹರಿಷ್ಯಾಮಿ ತೇಽನಘ।
04053017c ಇತಿ ಮೇ ವರ್ತತೇ ಬುದ್ಧಿಸ್ತದ್ಭವಾನ್ಕರ್ತುಮರ್ಹತಿ।।
ಪಾಪರಹಿತನೇ! ನೀನು ನನ್ನನ್ನು ಮೊದಲು ಹೊಡೆದ ನಂತರ ಮಾತ್ರ ನಾನು ನಿನ್ನನ್ನು ಹೊಡೆಯುತ್ತೇನೆ ಎಂಬುದು ನನ್ನ ನಿಶ್ಚಯ. ಆದರಿಂದ ನೀನು ಹಾಗೆ ಮಾಡಬೇಕು.”
04053018a ತತೋಽಸ್ಮೈ ಪ್ರಾಹಿಣೋದ್ದ್ರೋಣಃ ಶರಾನಧಿಕವಿಂಶತಿಂ।
04053018c ಅಪ್ರಾಪ್ತಾಂಶ್ಚೈವ ತಾನ್ ಪಾರ್ಥಶ್ಚಿಚ್ಛೇದ ಕೃತಹಸ್ತವತ್।।
ಅನಂತರ ದ್ರೋಣನು ಅರ್ಜುನನ ಮೇಲೆ ಇಪ್ಪತ್ತಕ್ಕೂ ಹೆಚ್ಚು ಬಾಣಗಳನ್ನು ಬಿಟ್ಟನು. ಅವು ಮುಟ್ಟುವುದಕ್ಕೆ ಮುನ್ನವೇ ಕೈಚಳಕದಿಂದ ಪಾರ್ಥಗಳನ್ನು ಅವುಗಳನ್ನು ಕತ್ತರಿಸಿದನು.
04053019a ತತಃ ಶರಸಹಸ್ರೇಣ ರಥಂ ಪಾರ್ಥಸ್ಯ ವೀರ್ಯವಾನ್।
04053019c ಅವಾಕಿರತ್ತತೋ ದ್ರೋಣಃ ಶೀಘ್ರಮಸ್ತ್ರಂ ವಿದರ್ಶಯನ್।।
ಆಮೇಲೆ ವೀರ್ಯಶಾಲಿ ದ್ರೋಣನು ಅಸ್ತ್ರಕೌಶಲವನ್ನು ಬೇಗ ತೋರಿಸುತ್ತಾ ಸಾವಿರ ಬಾಣಗಳಿಂದ ಅರ್ಜುನನ ರಥವನ್ನು ಮುಚ್ಚಿದನು.
04053020a ಏವಂ ಪ್ರವವೃತೇ ಯುದ್ಧಂ ಭಾರದ್ವಾಜಕಿರೀಟಿನೋಃ।
04053020c ಸಮಂ ವಿಮುಂಚತೋಃ ಸಂಖ್ಯೇ ವಿಶಿಖಾನ್ದೀಪ್ತತೇಜಸಃ।।
ದ್ರೋಣ ಮತ್ತು ಅರ್ಜುನರಿಗೆ ಹೀಗೆ ಯುದ್ಧ ಮೊದಲಾಯಿತು. ಯುದ್ಧದಲ್ಲಿ ಉರಿಯುವ ತೇಜಸ್ಸನ್ನುಳ್ಳ ಬಾಣಗಳನ್ನು ಇಬ್ಬರೂ ಸಮನಾಗಿ ಪ್ರಯೋಗಿಸುತ್ತಿದ್ದರು.
04053021a ತಾವುಭೌ ಖ್ಯಾತಕರ್ಮಾಣಾವುಭೌ ವಾಯುಸಮೌ ಜವೇ।
04053021c ಉಭೌ ದಿವ್ಯಾಸ್ತ್ರವಿದುಷಾವುಭಾವುತ್ತಮತೇಜಸೌ।
04053021e ಕ್ಷಿಪಂತೌ ಶರಜಾಲಾನಿ ಮೋಹಯಾಮಾಸತುರ್ನೃಪಾನ್।।
ಇಬ್ಬರೂ ಖ್ಯಾತಕಾರ್ಯಗಳನ್ನು ಮಾಡಿದವರು. ಇಬ್ಬರೂ ವಾಯುಸಮಾನ ವೇಗವುಳ್ಳವರು. ಇಬ್ಬರೂ ದಿವ್ಯಾಸ್ತ್ರಗಳನ್ನು ಬಲ್ಲವರು. ಇಬ್ಬರೂ ಉತ್ತಮ ತೇಜಸ್ಸನ್ನುಳ್ಳವರು. ಅವರು ಬಾಣ ಸಮೂಹಗಳನ್ನು ಪ್ರಯೋಗಿಸುತ್ತಾ ದೊರೆಗಳನ್ನು ಬೆರಗುಗೊಳಿಸಿದರು.
04053022a ವ್ಯಸ್ಮಯಂತ ತತೋ ಯೋಧಾಃ ಸರ್ವೇ ತತ್ರ ಸಮಾಗತಾಃ।
04053022c ಶರಾನ್ವಿಸೃಜತೋಸ್ತೂರ್ಣಂ ಸಾಧು ಸಾಧ್ವಿತಿ ಪೂಜಯನ್।।
ಆಗ ಅಲ್ಲಿ ಸೇರಿದ್ದ ಯೋದ್ಧರೆಲ್ಲರೂ ವಿಸ್ಮಿತರಾಗಿ ಶೀಘ್ರವಾಗಿ ಬಾಣಪ್ರಯೋಗ ಮಾಡುತ್ತಿದ್ದ ಅವರನ್ನು “ಲೇಸು! ಲೇಸು!” ಎಂದು ಹೊಗಳಿದರು.
04053023a ದ್ರೋಣಂ ಹಿ ಸಮರೇ ಕೋಽನ್ಯೋ ಯೋದ್ಧುಮರ್ಹತಿ ಫಲ್ಗುನಾತ್।
04053023c ರೌದ್ರಃ ಕ್ಷತ್ರಿಯಧರ್ಮೋಽಯಂ ಗುರುಣಾ ಯದಯುಧ್ಯತ।
04053023e ಇತ್ಯಬ್ರುವಂ ಜನಾಸ್ತತ್ರ ಸಂಗ್ರಾಮಶಿರಸಿ ಸ್ಥಿತಾಃ।।
“ಅರ್ಜುನನ ವಿನಾ ಯುದ್ಧದಲ್ಲಿ ದ್ರೋಣನೊಡನೆ ಹೋರಾಡಬಲ್ಲವರು ಬೇರೆ ಯಾರು? ಈ ಕ್ಷತ್ರಿಯ ಧರ್ಮ ಭಯಂಕರವಾದುದು. ಏಕೆಂದರೆ ಗುರುವಿನೊಡನೆಯೂ ಇವನು ಯುದ್ಧಮಾಡುತ್ತಿದ್ದಾನೆ!” ಎಂದು ಆ ಯುದ್ಧರಂಗದಲ್ಲಿದ್ದ ಜನರು ಮಾತನಾಡಿಕೊಳ್ಳುತ್ತಿದ್ದರು.
04053024a ವೀರೌ ತಾವಪಿ ಸಂರಬ್ಧೌ ಸಂನಿಕೃಷ್ಟೌ ಮಹಾರಥೌ।
04053024c ಚಾದಯೇತಾಂ ಶರವ್ರಾತೈರನ್ಯೋನ್ಯಮಪರಾಜಿತೌ।।
ಹತ್ತಿರದಲ್ಲಿದ್ದ, ಮಹಾರಥರಾದ, ಸೋಲದ ಆ ವೀರರಿಬ್ಬರೂ ಕೋಪಾವಿಷ್ಟರಾಗಿ ಬಾಣಗಳ ಸಮೂಹದಿಂದ ಒಬ್ಬರನ್ನೊಬ್ಬರು ಮುಚ್ಚಿಬಿಟ್ಟರು.
04053025a ವಿಸ್ಫಾರ್ಯ ಸುಮಹಚ್ಚಾಪಂ ಹೇಮಪೃಷ್ಠಂ ದುರಾಸದಂ।
04053025c ಸಂರಬ್ಧೋಽಥ ಭರದ್ವಾಜಃ ಫಲ್ಗುನಂ ಪ್ರತ್ಯಯುಧ್ಯತ।।
ಆಗ ದ್ರೋಣನು ಕೃದ್ಧನಾಗಿ ಚಿನ್ನದ ಬದಿಯನ್ನುಳ್ಳ ದೊಡ್ಡ ಅಜೇಯ ಬಿಲ್ಲನ್ನು ಮಿಡಿದು ಅರ್ಜುನನೊಡನೆ ಯುದ್ಧಮಾಡಿದನು.
04053026a ಸ ಸಾಯಕಮಯೈರ್ಜಾಲೈರರ್ಜುನಸ್ಯ ರಥಂ ಪ್ರತಿ।
04053026c ಭಾನುಮದ್ಭಿಃ ಶಿಲಾಧೌತೈರ್ಭಾನೋಃ ಪ್ರಚ್ಛಾದಯತ್ಪ್ರಭಾಂ।।
ಅವನು ಸಾಣೆಕಲ್ಲಿನಿಂದ ಹರಿತಗೊಳಿಸಿ ಹೊಳೆಯುವ ಬಾಣಗಳ ಜಾಲವನ್ನು ಅರ್ಜುನನ ರಥದ ಮೇಲೆ ಪ್ರಯೋಗಿಸಿ ಸೂರ್ಯನ ಪ್ರಭೆಯನ್ನು ಮುಸುಕಿಬಿಟ್ಟನು.
04053027a ಪಾರ್ಥಂ ಚ ಸ ಮಹಾಬಾಹುರ್ಮಹಾವೇಗೈರ್ಮಹಾರಥಃ।
04053027c ವಿವ್ಯಾಧ ನಿಶಿತೈರ್ಬಾಣೈರ್ಮೇಘೋ ವೃಷ್ಟ್ಯೇವ ಪರ್ವತಂ।।
ಆ ಮಹಾಬಾಹು ಮಹಾರಥಿ ದ್ರೋಣನು ಮೋಡವು ಮಳೆಯಿಂದ ಪರ್ವತವನ್ನು ಹೊಡೆಯುವಂತೆ ಮಹಾವೇಗವುಳ್ಳ ಹರಿತ ಬಾಣಗಳಿಂದ ಪಾರ್ಥನನ್ನು ಹೊಡೆದನು.
04053028a ತಥೈವ ದಿವ್ಯಂ ಗಾಂಡೀವಂ ಧನುರಾದಾಯ ಪಾಂಡವಃ।
04053028c ಶತ್ರುಘ್ನಂ ವೇಗವದ್ಧೃಷ್ಟೋ ಭಾರಸಾಧನಮುತ್ತಮಂ।
04053028e ವಿಸಸರ್ಜ ಶರಾಂಶ್ಚಿತ್ರಾನ್ಸುವರ್ಣವಿಕೃತಾನ್ಬಹೂನ್।।
ಅಂತೆಯೇ ಧೈರ್ಯಶಾಲಿ ಅರ್ಜುನನು ಆ ದಿವ್ಯ, ವೇಗಶಾಲಿ, ಶತ್ರುನಾಶಕ, ಮಹತ್ಕಾರ್ಯಸಾಧಕ, ಉತ್ತಮ ಗಾಂಡೀವ ಧನುಸ್ಸನ್ನು ತೆಗೆದುಕೊಂಡು ಬಹಳ ವಿಚಿತ್ರ ಸುವರ್ಣಖಚಿತ ಬಾಣಗಳನ್ನು ಬಿಟ್ಟನು.
04053029a ನಾಶಯಂ ಶರವರ್ಷಾಣಿ ಭಾರದ್ವಾಜಸ್ಯ ವೀರ್ಯವಾನ್।
04053029c ತೂರ್ಣಂ ಚಾಪವಿನಿರ್ಮುಕ್ತೈಸ್ತದದ್ಭುತಮಿವಾಭವತ್।।
ಆ ವೀರ್ಯಶಾಲಿಯು ಬಿಲ್ಲಿನಿಂದ ಬಿಟ್ಟ ಬಾಣಗಳಿಂದ ದ್ರೋಣನ ಬಾಣಗಳ ಮಳೆಯನ್ನು ಬೇಗ ನಾಶಗೊಳಿಸಿದನು. ಅದು ಅದ್ಭುತವಾಗಿತ್ತು.
04053030a ಸ ರಥೇನ ಚರನ್ಪಾರ್ಥಃ ಪ್ರೇಕ್ಷಣೀಯೋ ಧನಂಜಯಃ।
04053030c ಯುಗಪದ್ದಿಕ್ಷು ಸರ್ವಾಸು ಸರ್ವಶಸ್ತ್ರಾಣ್ಯದರ್ಶಯತ್।।
ಆ ಸುಂದರ, ಕುಂತೀಪುತ್ರ ಧನಂಜಯನು ರಥದಲ್ಲಿ ಸಂಚರಿಸುತ್ತ ಏಕ ಕಾಲದಲ್ಲಿ ಎಲ್ಲ ದಿಕ್ಕುಗಳಲ್ಲಿಯೂ ತನ್ನ ಶಸ್ತ್ರಕೌಶಲವನ್ನು ತೋರಿಸಿದನು.
04053031a ಏಕಚ್ಛಾಯಮಿವಾಕಾಶಂ ಬಾಣೈಶ್ಚಕ್ರೇ ಸಮಂತತಃ।
04053031c ನಾದೃಶ್ಯತ ತದಾ ದ್ರೋಣೋ ನೀಹಾರೇಣೇವ ಸಂವೃತಃ।।
ಅವನು ಆಕಾಶವನ್ನು ಎಲ್ಲೆಡೆಯಲ್ಲಿಯೂ ಬಾಣಗಳಿಂದ ಮುಚ್ಚಿ ಒಂದೇ ಸಮನೆ ಕತ್ತಲಾಗುವಂತೆ ಮಾಡಿದನು. ಆಗ ದ್ರೋಣನು ಮಂಜಿನಿಂದ ಆವೃತನಾಗಿ ಕಾಣದಂತಾದನು.
04053032a ತಸ್ಯಾಭವತ್ತದಾ ರೂಪಂ ಸಂವೃತಸ್ಯ ಶರೋತ್ತಮೈಃ।
04053032c ಜಾಜ್ವಲ್ಯಮಾನಸ್ಯ ಯಥಾ ಪರ್ವತಸ್ಯೇವ ಸರ್ವತಃ।।
ಆಗ ಸುತ್ತಲೂ ಉತ್ತಮ ಬಾಣಗಳು ಕವಿದ ಅವನ ರೂಪವು ಎಲ್ಲ ಕಡೆಯೂ ಉರಿಯುತ್ತಿರುವ ಪರ್ವತದಂತಾಯಿತು.
04053033a ದೃಷ್ಟ್ವಾ ತು ಪಾರ್ಥಸ್ಯ ರಣೇ ಶರೈಃ ಸ್ವರಥಮಾವೃತಂ।
04053033c ಸ ವಿಸ್ಫಾರ್ಯ ಧನುಶ್ಚಿತ್ರಂ ಮೇಘಸ್ತನಿತನಿಸ್ವನಂ।।
ಯುದ್ಧದಲ್ಲಿ ತನ್ನ ರಥವು ಪಾರ್ಥನ ಬಾಣಗಳಿಂದ ಆವೃತವಾದುದನ್ನು ಕಂಡು ಆ ದ್ರೋಣನು ಮೋಡದ ಮೊಳಗಿನಂತೆ ಶಬ್ಧ ಮಾಡುವ ವಿಚಿತ್ರ ಬಿಲ್ಲನ್ನು ಮಿಡಿದನು.
04053034a ಅಗ್ನಿಚಕ್ರೋಪಮಂ ಘೋರಂ ವಿಕರ್ಷನ್ಪರಮಾಯುಧಂ।
04053034c ವ್ಯಶಾತಯಚ್ಚರಾಂಸ್ತಾಂಸ್ತು ದ್ರೋಣಃ ಸಮಿತಿಶೋಭನಃ।
04053034e ಮಹಾನಭೂತ್ತತಃ ಶಬ್ದೋ ವಂಶಾನಾಮಿವ ದಃಯತಾಂ।।
ಯುದ್ಧಕ್ಕೆ ಭೂಷಣಪ್ರಾಯ ದ್ರೊಣನು ಅಗ್ನಿಚಕ್ರ ಸದೃಶ, ಘೋರ, ಶ್ರೇಷ್ಠ ಆಯುಧವನ್ನು ಸೆಳೆದು ಆ ಬಾಣಗಳನ್ನು ಕತ್ತರಿಸಿದನು. ಆಗ ಸುಟ್ಟುಹೋಗುವ ಬಿದಿರಿನ ಶಬ್ಧದಂಥಹ ಮಹಾಶಬ್ಧವುಂಟಾಯಿತು.
04053035a ಜಾಂಬೂನದಮಯೈಃ ಪುಂಖೈಶ್ಚಿತ್ರಚಾಪವರಾತಿಗೈಃ।
04053035c ಪ್ರಾಚ್ಛಾದಯದಮೇಯಾತ್ಮಾ ದಿಶಃ ಸೂರ್ಯಸ್ಯ ಚ ಪ್ರಭಾಂ।।
ಆ ಅಮಿತಾತ್ಮನು ಶ್ರೇಷ್ಠ ವಿಚಿತ್ರ ಬಿಲ್ಲಿನಿಂದ ಬಿಟ್ಟ ಚಿನ್ನದ ಗರಿಗಳ ಬಾಣಗಳಿಂದ ದಿಕ್ಕುಗಳನ್ನೂ ಸೂರ್ಯನ ಕಾಂತಿಯನ್ನೂ ಮುಚ್ಚಿದನು.
04053036a ತತಃ ಕನಕಪುಂಖಾನಾಂ ಶರಾಣಾಂ ನತಪರ್ವಣಾಂ।
04053036c ವಿಯಚ್ಚರಾಣಾಂ ವಿಯತಿ ದೃಶ್ಯಂತೇ ಬಹುಶಃ ಪ್ರಜಾಃ।।
ಆಗ ಚಿನ್ನದ ಗರಿಗಳ, ನೇರ್ಪಡಿಸಿದ ಗಿಣ್ಣುಗಳ, ಆಕಾಶಗಾಮಿ ಬಾಣಗಳಿಂದ ಆಗಸದಲ್ಲಿ ಬಹಳ ಬಾಣಗಳ ಸಂತತಿಯೇ ಗೋಚರಿಸಿತು.
04053037a ದ್ರೋಣಸ್ಯ ಪುಂಖಸಕ್ತಾಶ್ಚ ಪ್ರಭವಂತಃ ಶರಾಸನಾತ್।
04053037c ಏಕೋ ದೀರ್ಘ ಇವಾದೃಶ್ಯದಾಕಾಶೇ ಸಂಹತಃ ಶರಃ।।
ದ್ರೋಣನ ಬಿಲ್ಲಿನಿಂದ ಪುಂಖಾನುಪುಂಖವಾಗಿ ಹೊಮ್ಮಿದ ಬಾಣಗಳು ಆಕಾಶದಲ್ಲಿ ಒಟ್ಟಿಗೆ ಸೇರಿ ಒಂದೇ ದೀರ್ಘ ಬಾಣದಂತೆ ತೋರಿದವು.
04053038a ಏವಂ ತೌ ಸ್ವರ್ಣವಿಕೃತಾನ್ವಿಮುಂಚಂತೌ ಮಹಾಶರಾನ್।
04053038c ಆಕಾಶಂ ಸಂವೃತಂ ವೀರಾವುಲ್ಕಾಭಿರಿವ ಚಕ್ರತುಃ।।
ಹೀಗೆ ಆ ವೀರರಿಬ್ಬರೂ ಚಿನ್ನದಿಂದ ಮಾಡಿದ ಮಹಾಬಾಣಗಳನ್ನು ಬಿಡುತ್ತಾ ಆಕಾಶವು ಉಲ್ಕೆಗಳಿಂದ ಮುಚ್ಚಿ ಹೋಯಿತೆಂಬಂತೆ ಮಾಡಿದರು.
04053039a ಶರಾಸ್ತಯೋಶ್ಚ ವಿಬಭುಃ ಕಂಕಬರ್ಹಿಣವಾಸಸಃ।
04053039c ಪಂಕ್ತ್ಯಃ ಶರದಿ ಖಸ್ಥಾನಾಂ ಹಂಸಾನಾಂ ಚರತಾಮಿವ।।
ಕಂಕಪಕ್ಷಿಗಳ ಹೊದಿಕೆಯ ಗರಿಗಳಿಂದ ಕೂಡಿದ ಅವರ ಆ ಬಾಣಗಳು ಶರತ್ಕಾಲದ ಆಕಾಶದಲ್ಲಿ ಸಂಚರಿಸುವ ಹಂಸಗಳ ಸಾಲುಗಳಂತೆ ಗೋಚರಿಸಿದವು.
04053040a ಯುದ್ಧಂ ಸಮಭವತ್ತತ್ರ ಸುಸಂರಬ್ಧಂ ಮಹಾತ್ಮನೋಃ।
04053040c ದ್ರೋಣಪಾಂಡವಯೋರ್ಘೋರಂ ವೃತ್ರವಾಸವಯೋರಿವ।।
ಆ ಮಹಾತ್ಮ ದ್ರೋಣಾರ್ಜುನರ ನಡುವಿನ ಯುದ್ಧವು ವೃತ್ರ ಮತ್ತು ಇಂದ್ರರ ನಡುವೆ ನಡೆದ ಯುದ್ಧದಂತೆ ಪ್ರಕ್ಷುಬ್ಧವೂ ಘೋರವೂ ಆಗಿತ್ತು.
04053041a ತೌ ಗಜಾವಿವ ಚಾಸಾದ್ಯ ವಿಷಾಣಾಗ್ರೈಃ ಪರಸ್ಪರಂ।
04053041c ಶರೈಃ ಪೂರ್ಣಾಯತೋತ್ಸೃಷ್ಟೈರನ್ಯೋನ್ಯಮಭಿಜಘ್ನತುಃ।।
ದಂತಗಳಿಂದ ಪರಸ್ಪರ ಸೆಣೆಯುವ ಆನೆಗಳಂತೆ ಅವರು ಪೂರ್ಣವಾಗಿ ಸೆಳೆದು ಬಿಟ್ಟ ಬಾಣಗಳಿಂದ ಒಬ್ಬರನ್ನೊಬ್ಬರು ಹೊಡೆದರು.
04053042a ತೌ ವ್ಯವಾಹರತಾಂ ಶೂರೌ ಸಂರಬ್ಧೌ ರಣಶೋಭಿನೌ।
04053042c ಉದೀರಯಂತೌ ಸಮರೇ ದಿವ್ಯಾನ್ಯಸ್ತ್ರಾಣಿ ಭಾಗಶಃ।।
ಕೃದ್ಧರೂ, ರಣರಂಗಕ್ಕೆ ಭೂಷಣಪ್ರಾಯರೂ ಆದ ಆ ವೀರರು ಒಂದೆಡೆಯಿಂದ ಮತ್ತೊಂದೆಡೆಗೆ ದಿವ್ಯಾಸ್ತ್ರಗಳನ್ನು ಪ್ರಯೋಗಿಸುತ್ತಾ ನಿಯಮಾನುಸಾರವಾಗಿ ಯುದ್ಧದಲ್ಲಿ ಹೋರಾಡಿದರು.
04053043a ಅಥ ತ್ವಾಚಾರ್ಯಮುಖ್ಯೇನ ಶರಾನ್ಸೃಷ್ಟಾಂ ಶಿಲಾಶಿತಾನ್।
04053043c ನ್ಯವಾರಯಚ್ಚಿತೈರ್ಬಾಣೈರರ್ಜುನೋ ಜಯತಾಂ ವರಃ।।
ಆಗ ಆಚಾರ್ಯಮುಖ್ಯನು ಬಿಟ್ಟ ಸಾಣೆಕಲ್ಲಿನಿಂದ ಮಸೆದ ಬಾಣಗಳನ್ನು ವಿಜಯಿಗಳಲ್ಲಿ ಶ್ರೇಷ್ಠ ಅರ್ಜುನನು ಹರಿತ ಬಾಣಗಳಿಂದ ನಿವಾರಿಸಿದನು.
04053044a ದರ್ಶಯನ್ನೈಂದ್ರಿರಾತ್ಮಾನಮುಗ್ರಮುಗ್ರಪರಾಕ್ರಮಃ।
04053044c ಇಷುಭಿಸ್ತೂರ್ಣಮಾಕಾಶಂ ಬಹುಭಿಶ್ಚ ಸಮಾವೃಣೋತ್।।
ಉಗ್ರಪರಾಕ್ರಮಿ ಅರ್ಜುನನು ತನ್ನ ಉಗ್ರತೆಯನ್ನು ಪ್ರದರ್ಶಿಸುತ್ತಾ ಬಹಳ ಬಾಣಗಳಿಂದ ಬೇಗ ಆಕಾಶವನ್ನು ಮುಚ್ಚಿಬಿಟ್ಟನು.
04053045a ಜಿಘಾಂಸಂತಂ ನರವ್ಯಾಘ್ರಮರ್ಜುನಂ ತಿಗ್ಮತೇಜಸಂ।
04053045c ಆಚಾರ್ಯಮುಖ್ಯಃ ಸಮರೇ ದ್ರೋಣಃ ಶಸ್ತ್ರಭೃತಾಂ ವರಃ।
04053045e ಅರ್ಜುನೇನ ಸಹಾಕ್ರೀಡಚ್ಚರೈಃ ಸಂನತಪರ್ವಭಿಃ।।
ಯುದ್ಧದಲ್ಲಿ ತನ್ನನ್ನು ಹೊಡೆಯುತ್ತಿದ್ದ ನರಶ್ರೇಷ್ಠ, ತೀವ್ರತೇಜಸ್ವಿ ಅರ್ಜುನನೊಡನೆ ಆಚಾರ್ಯಮುಖ್ಯ, ಶಸ್ತ್ರಧಾರಿಗಳಲ್ಲಿ ಶ್ರೇಷ್ಠ ದ್ರೋಣನು ನೇರ್ಪಡಿಸಿದ ಗಿಣ್ಣುಗಳ ಬಾಣಗಳಿಂದ ಆಟವಾಡುತ್ತಿದ್ದನು.
04053046a ದಿವ್ಯಾನ್ಯಸ್ತ್ರಾಣಿ ಮುಂಚಂತಂ ಭಾರದ್ವಾಜಂ ಮಹಾರಣೇ।
04053046c ಅಸ್ತ್ರೈರಸ್ತ್ರಾಣಿ ಸಂವಾರ್ಯ ಫಲ್ಗುನಃ ಸಮಯೋಧಯತ್।।
ಆ ಮಹಾಯುದ್ಧದಲ್ಲಿ ದ್ರೋಣನು ದಿವಾಸ್ತ್ರಗಳನ್ನು ಬಿಡುತ್ತಿರಲು, ಅರ್ಜುನನು ಆ ಅಸ್ತ್ರಗಳನ್ನು ಅಸ್ತ್ರಗಳಿಂದಲೇ ನಿವಾರಿಸಿ ಹೋರಾಡುತ್ತಿದ್ದನು.
04053047a ತಯೋರಾಸೀತ್ಸಂಪ್ರಹಾರಃ ಕ್ರುದ್ಧಯೋರ್ನರಸಿಂಹಯೋಃ।
04053047c ಅಮರ್ಷಿಣೋಸ್ತದಾನ್ಯೋನ್ಯಂ ದೇವದಾನವಯೋರಿವ।।
ಕುಪಿತರೂ ಅಸಹಿಷ್ಣುಗಳೂ ಆಗಿದ್ದ ಆ ನರಶ್ರೇಷ್ಠರ ನಡುವೆ ದೇವದಾನವರ ನಡುವಿನಂತೆ ಪರಸ್ಪರ ಯುದ್ಧವು ನಡೆಯಿತು.
04053048a ಐಂದ್ರಂ ವಾಯವ್ಯಮಾಗ್ನೇಯಮಸ್ತ್ರಮಸ್ತ್ರೇಣ ಪಾಂಡವಃ।
04053048c ದ್ರೋಣೇನ ಮುಕ್ತಂ ಮುಕ್ತಂ ತು ಗ್ರಸತೇ ಸ್ಮ ಪುನಃ ಪುನಃ।।
ದ್ರೋಣನು ಐಂದ್ರಾಸ್ತ್ರ, ವಾಯುವ್ಯಾಸ್ತ್ರ, ಅಗ್ನೇಯಾಸ್ತ್ರಗಳನ್ನು ಪ್ರಯೋಗಿಸುತ್ತಿದ್ದಂತೆಲ್ಲ ಅರ್ಜುನನು ಅವುಗಳನ್ನು ಅಸ್ತ್ರಗಳಿಂದ ಪುನಃ ಪುನಃ ನುಂಗಿಹಾಕುತ್ತಿದ್ದನು.
04053049a ಏವಂ ಶೂರೌ ಮಹೇಷ್ವಾಸೌ ವಿಸೃಜಂತೌ ಶಿತಾಂ ಶರಾನ್।
04053049c ಏಕಚ್ಛಾಯಂ ಚಕ್ರತುಸ್ತಾವಾಕಾಶಂ ಶರವೃಷ್ಟಿಭಿಃ।।
ಹೀಗೆ ದೊಡ್ಡ ಬಿಲ್ಗಾರರಾದ ಆ ಶೂರರು ಹರಿತ ಬಾಣಗಳನ್ನು ಬಿಡುತ್ತಾ ಬಾಣಗಳ ಮಳೆಯಿಂದ ಆಕಾಶವನ್ನು ಒಂದೇಸಮನೆ ಮುಚ್ಚಿಬಿಟ್ಟರು.
04053050a ತತೋಽರ್ಜುನೇನ ಮುಕ್ತಾನಾಂ ಪತತಾಂ ಚ ಶರೀರಿಷು।
04053050c ಪರ್ವತೇಷ್ವಿವ ವಜ್ರಾಣಾಂ ಶರಾಣಾಂ ಶ್ರೂಯತೇ ಸ್ವನಃ।।
ಶತ್ರು ಶರೀರಗಳ ಮೇಲೆ ಬೀಳುತ್ತಿದ್ದ ಅರ್ಜುನನ ಬಾಣಗಳ ಶಬ್ಧವು ಪರ್ವತಗಳ ಮೇಲೆ ಬಿದ್ದ ಸಿಡಿಲುಗಳ ಶಬ್ಧದಂತೆ ಕೇಳಿಬರುತ್ತಿತ್ತು.
04053051a ತತೋ ನಾಗಾ ರಥಾಶ್ಚೈವ ಸಾದಿನಶ್ಚ ವಿಶಾಂ ಪತೇ।
04053051c ಶೋಣಿತಾಕ್ತಾ ವ್ಯದೃಶ್ಯಂತ ಪುಷ್ಪಿತಾ ಇವ ಕಿಂಶುಕಾಃ।।
ರಾಜನ್! ಆಗ ರಕ್ತದಿಂದ ತೊಯ್ದ ಆನೆಗಳೂ, ರಥಿಕರೂ, ಮತ್ತು ಮಾವುತರೂ ಹೂಬಿಟ್ಟ ಮುತ್ತುಗದ ಮರಗಳಂತೆ ತೋರುತ್ತಿದ್ದರು.
04053052a ಬಾಹುಭಿಶ್ಚ ಸಕೇಯೂರೈರ್ವಿಚಿತ್ರೈಶ್ಚ ಮಹಾರಥೈಃ।
04053052c ಸುವರ್ಣಚಿತ್ರೈಃ ಕವಚೈರ್ಧ್ವಜೈಶ್ಚ ವಿನಿಪಾತಿತೈಃ।।
04053053a ಯೋಧೈಶ್ಚ ನಿಹತೈಸ್ತತ್ರ ಪಾರ್ಥಬಾಣಪ್ರಪೀಡಿತೈಃ।
04053053c ಬಲಮಾಸೀತ್ಸಮುದ್ಭ್ರಾಂತಂ ದ್ರೋಣಾರ್ಜುನಸಮಾಗಮೇ।।
ಆ ದ್ರೋಣಾರ್ಜುನರ ಯುದ್ಧದಲ್ಲಿ ಪಾರ್ಥನ ಬಾಣಗಳಿಂದ ಕತ್ತರಿಸಲ್ಪಟ್ಟ ಕೇಯೂರಗಳ ತೋಳುಗಳಿಂದಲೂ, ಬಣ್ಣ್ನಬಣ್ಣದ ಮಹಾರಥರಿಂದಲೂ, ಸ್ವರ್ಣಖಚಿತ ಕವಚಗಳಿಂದಲೂ, ಬಿದ್ದ ಬಾವುಟಗಳಿಂದಲೂ, ಹತರಾದ ಯೋಧರಿಂದಲೂ, ಕುರುಸೈನ್ಯವು ದಿಗ್ಭ್ರಾಂತವಾಯಿತು.
04053054a ವಿಧುನ್ವಾನೌ ತು ತೌ ವೀರೌ ಧನುಷೀ ಭಾರಸಾಧನೇ।
04053054c ಆಚ್ಛಾದಯೇತಾಮನ್ಯೋನ್ಯಂ ತಿತಕ್ಷಂತೌ ರಣೇಷುಭಿಃ।।
ಒತ್ತಡವನ್ನು ತಡೆಯಬಲ್ಲ ಬಿಲ್ಲುಗಳನ್ನು ಮಿಡಿಯುತ್ತ ಆ ವೀರರು ತಾಗುಬಾಣಗಳಿಂದ ತಡೆದುಕೊಳ್ಳಬಯಸಿ ಒಬ್ಬರನ್ನೊಬ್ಬರು ಮುಸುಕಿದರು.
04053055a ಅಥಾಂತರಿಕ್ಷೇ ನಾದೋಽಭೂದ್ದ್ರೋಣಂ ತತ್ರ ಪ್ರಶಂಸತಾಂ।
04053055c ದುಷ್ಕರಂ ಕೃತವಾನ್ದ್ರೋಣೋ ಯದರ್ಜುನಮಯೋಧಯತ್।।
04053056a ಪ್ರಮಾಥಿನಂ ಮಹಾವೀರ್ಯಂ ದೃಢಮುಷ್ಟಿಂ ದುರಾಸದಂ।
04053056c ಜೇತಾರಂ ದೇವದೈತ್ಯಾನಾಂ ಸರ್ಪಾಣಾಂ ಚ ಮಹಾರಥಂ।।
ಅನಂತರ ಆಕಾಶದಲ್ಲಿ ದ್ರೋಣನನ್ನು ಹೊಗಳುವವರ ದನಿಯೊಂದು ಕೇಳಿಬಂದಿತು: “ಶತ್ರುನಾಶಕ, ಮಹಾವೀರ್ಯಶಾಲಿ, ದೃಢಮುಷ್ಟಿಯುಳ್ಳ, ಎದುರಿಸಲಾಗದ, ದೇವದೈತ್ಯಸರ್ಪರನ್ನು ಗೆದ್ದ, ಮಹಾರಥಿ ಅರ್ಜುನನೊಡನೆ ಯುದ್ಧಮಾಡಿದ ದ್ರೋಣನು ದುಷ್ಕರವಾದುದನ್ನೇ ಮಾಡಿದ್ದಾನೆ.”
04053057a ಅವಿಶ್ರಮಂ ಚ ಶಿಕ್ಷಾಂ ಚ ಲಾಘವಂ ದೂರಪಾತಿತಾಂ।
04053057c ಪಾರ್ಥಸ್ಯ ಸಮರೇ ದೃಷ್ಟ್ವಾ ದ್ರೋಣಸ್ಯಾಭೂಚ್ಚ ವಿಸ್ಮಯಃ।।
ಯುದ್ಧದಲ್ಲಿ ಪಾರ್ಥನ ಅನಾಯಾಸವನ್ನೂ, ಶಿಕ್ಷಣವನ್ನೂ, ಕೈಚಳಕವನ್ನೂ, ಬಾಣಗಳ ದೂರಪ್ರಯೋಗವನ್ನೂ ನೋಡಿ ದ್ರೋಣನಿಗೆ ವಿಸ್ಮಯವಾಯಿತು.
04053058a ಅಥ ಗಾಂಡೀವಮುದ್ಯಮ್ಯ ದಿವ್ಯಂ ಧನುರಮರ್ಷಣಃ।
04053058c ವಿಚಕರ್ಷ ರಣೇ ಪಾರ್ಥೋ ಬಾಹುಭ್ಯಾಂ ಭರತರ್ಷಭ।।
ಭರತರ್ಷಭ! ಆಮೇಲೆ ರಣದಲ್ಲಿ ಪಾರ್ಥನು ಕೋಪಗೊಂಡು ದಿವ್ಯ ಗಾಂಡೀವ ಧನುವನ್ನೆತ್ತಿ ತೋಳುಗಳಿಂದ ಸೆಳೆದನು.
04053059a ತಸ್ಯ ಬಾಣಮಯಂ ವರ್ಷಂ ಶಲಭಾನಾಮಿವಾಯತಂ।
04053059c ನ ಚ ಬಾಣಾಂತರೇ ವಾಯುರಸ್ಯ ಶಕ್ನೋತಿ ಸರ್ಪಿತುಂ।।
ಅವನ ಬಾಣಗಳ ಮಳೆ ಮಿಡಿತೆಗಳ ಸಮೂಹದಂತೆ ವಿಸ್ತಾರವಾಗಿತ್ತು. ಅವನ ಬಾಣಗಳ ನಡುವೆ ಗಾಳಿಯೂ ಚಲಿಸಲಾಗಲಿಲ್ಲ.
04053060a ಅನಿಶಂ ಸಂದಧಾನಸ್ಯ ಶರಾನುತ್ಸೃಜತಸ್ತದಾ।
04053060c ದದೃಶೇ ನಾಂತರಂ ಕಿಂ ಚಿತ್ಪಾರ್ಥಸ್ಯಾದದತೋಽಪಿ ಚ।।
ಆಗ ಪಾರ್ಥನು ನಿರಂತರವಾಗಿ ಬಾಣಗಳನ್ನು ತೆಗೆದು ಹೂಡಿ ಬಿಡುತ್ತಿರಲಾಗಿ ನಡುವೆ ಸ್ವಲ್ಪವೂ ಅಂತರವು ಕಾಣುತ್ತಿರಲಿಲ್ಲ.
04053061a ತಥಾ ಶೀಘ್ರಾಸ್ತ್ರಯುದ್ಧೇ ತು ವರ್ತಮಾನೇ ಸುದಾರುಣೇ।
04053061c ಶೀಘ್ರಾಚ್ಚೀಘ್ರತರಂ ಪಾರ್ಥಃ ಶರಾನನ್ಯಾನುದೀರಯತ್।।
ಅನಂತರ ಭಯಂಕರ ಶೀಘ್ರಾಸ್ತ್ರಯುದ್ಧವು ನಡೆಯುತ್ತಿರಲು ಪಾರ್ಥನು ಮೊದಲಿಗಿಂತಲೂ ಶೀಘ್ರವಾಗಿ ಬೇರೆ ಬಾಣಗಳನ್ನು ಪ್ರಯೋಗಿಸಿದನು.
04053062a ತತಃ ಶತಸಹಸ್ರಾಣಿ ಶರಾಣಾಂ ನತಪರ್ವಣಾಂ।
04053062c ಯುಗಪತ್ಪ್ರಾಪತಂಸ್ತತ್ರ ದ್ರೋಣಸ್ಯ ರಥಮಂತಿಕಾತ್।।
ಬಳಿಕ ನೇರಗೊಳಿಸಿದ ಗಿಣ್ಣುಗಳನ್ನುಳ್ಳ ಲಕ್ಷಾಂತರ ಬಾಣಗಳು ಒಟ್ಟಿಗೇ ದ್ರೋಣನ ರಥದ ಸಮೀಪದಲ್ಲಿ ಬಿದ್ದವು.
04053063a ಅವಕೀರ್ಯಮಾಣೇ ದ್ರೋಣೇ ತು ಶರೈರ್ಗಾಂಡೀವಧನ್ವನಾ।
04053063c ಹಾಹಾಕಾರೋ ಮಹಾನಾಸೀತ್ಸೈನ್ಯಾನಾಂ ಭರತರ್ಷಭ।।
ಭರತರ್ಷಭ! ಗಾಂಡೀವಧನುರ್ಧರನು ಬಾಣಗಳಿಂದ ದ್ರೋಣನನ್ನು ಮುಚ್ಚಿಹಾಕಲು ಸೈನ್ಯದಲ್ಲಿ ದೊಡ್ಡ ಹಾಹಾಕಾರವುಂಟಾಯಿತು.
04053064a ಪಾಂಡವಸ್ಯ ತು ಶೀಘ್ರಾಸ್ತ್ರಂ ಮಘವಾನ್ಸಮಪೂಜಯತ್।
04053064c ಗಂಧರ್ವಾಪ್ಸರಸಶ್ಚೈವ ಯೇ ಚ ತತ್ರ ಸಮಾಗತಾಃ।।
ಇಂದ್ರನೂ ಮತ್ತು ಅಲ್ಲಿ ಬಂದು ಸೇರಿದ ಗಂಧರ್ವಾಪ್ಸರೆಯರೂ ಅರ್ಜುನನ ಶೀಘ್ರಾಸ್ತ್ರ ಪ್ರಯೋಗವನ್ನು ಹೊಗಳಿದರು.
04053065a ತತೋ ವೃಂದೇನ ಮಹತಾ ರಥಾನಾಂ ರಥಯೂಥಪಃ।
04053065c ಆಚಾರ್ಯಪುತ್ರಃ ಸಹಸಾ ಪಾಂಡವಂ ಪ್ರತ್ಯವಾರಯತ್।।
ಆಮೇಲೆ, ರಥಸೈನ್ಯಕ್ಕೆ ಅಧಿಪತಿಯಾದ ಆಚಾರ್ಯಪುತ್ರನು ದೊಡ್ಡ ರಥಸಮೂಹದಿಂದ ಅರ್ಜುನನನ್ನು ಇದ್ದಕ್ಕಿದ್ದಂತೆ ತಡೆದನು.
04053066a ಅಶ್ವತ್ಥಾಮಾ ತು ತತ್ಕರ್ಮ ಹೃದಯೇನ ಮಹಾತ್ಮನಃ।
04053066c ಪೂಜಯಾಮಾಸ ಪಾರ್ಥಸ್ಯ ಕೋಪಂ ಚಾಸ್ಯಾಕರೋದ್ಭೃಶಂ।।
ಅಶ್ವತ್ಥಾಮನು ಮಹಾತ್ಮ ಪಾರ್ಥನ ಕಾರ್ಯವನ್ನು ಮನಸ್ಸಿನಲ್ಲಿ ಹೊಗಳಿದರೂ ಅವನ ಮೇಲೆ ಬಹಳ ಕೋಪಮಾಡಿಕೊಂಡನು.
04053067a ಸ ಮನ್ಯುವಶಮಾಪನ್ನಃ ಪಾರ್ಥಮಭ್ಯದ್ರವದ್ರಣೇ।
04053067c ಕಿರಂ ಶರಸಹಸ್ರಾಣಿ ಪರ್ಜನ್ಯ ಇವ ವೃಷ್ಟಿಮಾನ್।।
ಯುದ್ಧದಲ್ಲಿ ಅವನು ಕೋಪವಶನಾಗಿ ಮಳೆಗರೆಯುವ ಮೋಡದಂತೆ ಪಾರ್ಥನನ್ನು ಸಾವಿರ ಬಾಣಗಳಿಂದ ಮುಚ್ಚಿ ಅವನತ್ತ ನುಗ್ಗಿದನು.
04053068a ಆವೃತ್ಯ ತು ಮಹಾಬಾಹುರ್ಯತೋ ದ್ರೌಣಿಸ್ತತೋ ಹಯಾನ್।
04053068c ಅಂತರಂ ಪ್ರದದೌ ಪಾರ್ಥೋ ದ್ರೋಣಸ್ಯ ವ್ಯಪಸರ್ಪಿತುಂ।।
ಮಹಾಬಾಹು ಪಾರ್ಥನು ದ್ರೋಣಪುತ್ರನಿದ್ದೆಡೆಗೆ ತನ್ನ ಕುದುರೆಗಳನ್ನು ತಿರುಗಿಸಿ, ದ್ರೋಣನು ಜಾರಿಕೊಳ್ಳಲು ಅವಕಾಶ ಮಾಡಿಕೊಟ್ಟನು.
04053069a ಸ ತು ಲಬ್ಧ್ವಾಂತರಂ ತೂರ್ಣಮಪಾಯಾಜ್ಜವನೈರ್ಹಯೈಃ।
04053069c ಚಿನ್ನವರ್ಮಧ್ವಜಃ ಶೂರೋ ನಿಕೃತ್ತಃ ಪರಮೇಷುಭಿಃ।।
ಅರ್ಜುನನ ಶ್ರೇಷ್ಠ ಬಾಣಗಳಿಂದ ಕವಚ ಮತ್ತು ಧ್ವಜಗಳು ಹರಿದು ಹೋಗಿ ಗಾಯಗೊಂಡಿದ್ದ ಆ ಶೂರ ದ್ರೋಣನು ಆ ಅವಕಾಶವನ್ನು ಬಳಸಿಕೊಂಡು ವೇಗಗಾಮಿ ಕುದುರೆಗಳ ನೆರವಿನಿಂದ ಬೇಗ ಹೊರಟುಹೋದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ದ್ರೋಣಾಪಯಾನೇ ತ್ರಿಪಂಚಾಶತ್ತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ದ್ರೋಣಾಪಯಾನದಲ್ಲಿ ಐವತ್ಮೂರನೆಯ ಅಧ್ಯಾಯವು.