ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ವಿರಾಟ ಪರ್ವ
ಗೋಹರಣ ಪರ್ವ
ಅಧ್ಯಾಯ 52
ಸಾರ
ಅರ್ಜುನನು ಕೃಪನನ್ನು ತನ್ನ ಸ್ಥಾನದಿಂದ ಉರುಳಿಸಿದುದು (1-9). ವಿರಥನಾದ ಕೃಪನು ರಣದಿಂದ ವಿಮುಖನಾದನು (10-28).
04052001 ವೈಶಂಪಾಯನ ಉವಾಚ।
04052001a ಏತಸ್ಮಿನ್ನಂತರೇ ತತ್ರ ಮಹಾವೀರ್ಯಪರಾಕ್ರಮಃ।
04052001c ಆಜಗಾಮ ಮಹಾಸತ್ತ್ವಃ ಕೃಪಃ ಶಸ್ತ್ರಭೃತಾಂ ವರಃ।
04052001e ಅರ್ಜುನಂ ಪ್ರತಿ ಸಂಯೋದ್ಧುಂ ಯುದ್ಧಾರ್ಥೀ ಸ ಮಹಾರಥಃ।।
ವೈಶಂಪಾಯನನು ಹೇಳಿದನು: “ಅಷ್ಟರಲ್ಲಿ ಮಹಾವೀರ್ಯ ಪರಾಕ್ರಮಿ, ಮಹಾಸತ್ವಶಾಲಿ, ಶಸ್ತ್ರಧಾರಿಗಳಲ್ಲಿ ಶ್ರೇಷ್ಠ, ಮಹಾರಥಿ ಕೃಪನು ಯುದ್ದಾಪೇಕ್ಷಿಯಾಗಿ ಅರ್ಜುನನೊಡನೆ ಹೋರಾಡಲು ಅಲ್ಲಿಗೆ ಬಂದನು.
04052002a ತೌ ರಥೌ ಸೂರ್ಯಸಂಕಾಶೌ ಯೋತ್ಸ್ಯಮಾನೌ ಮಹಾಬಲೌ।
04052002c ಶಾರದಾವಿವ ಜೀಮೂತೌ ವ್ಯರೋಚೇತಾಂ ವ್ಯವಸ್ಥಿತೌ।।
ವ್ಯವಸ್ಥಿತರಾಗಿ ನಿಂತು ಯುದ್ಧಸನ್ನದ್ದರಾಗಿದ್ದ ಆ ಸೂರ್ಯಸಮಾನ ರಥಿಕ ಮಹಾಬಲರು ಶರತ್ಕಾಲದ ಮೋಡಗಳಂತೆ ಹೊಳೆಯುತ್ತಿದ್ದರು.
04052003a ಪಾರ್ಥೋಽಪಿ ವಿಶ್ರುತಂ ಲೋಕೇ ಗಾಂಡೀವಂ ಪರಮಾಯುಧಂ।
04052003c ವಿಕೃಷ್ಯ ಚಿಕ್ಷೇಪ ಬಹೂನ್ನಾರಾಚಾನ್ಮರ್ಮಭೇದಿನಃ।।
ಪಾರ್ಥನು ಲೋಕಪ್ರಸಿದ್ದ ಪರಮಾಯುಧ ಗಾಂಡೀವವನ್ನೆಳೆದು ಮರ್ಮಭೇದಕ ಬಹಳ ಬಾಣಗಳನ್ನು ಬಿಟ್ಟನು.
04052004a ತಾನಪ್ರಾಪ್ತಾಂ ಶಿತೈರ್ಬಾಣೈರ್ನಾರಾಚಾನ್ರಕ್ತಭೋಜನಾನ್।
04052004c ಕೃಪಶ್ಚಿಚ್ಛೇದ ಪಾರ್ಥಸ್ಯ ಶತಶೋಽಥ ಸಹಸ್ರಶಃ।।
ಪಾರ್ಥನ ಆ ರಕ್ತಕುಡಿಯುವ ಬಾಣಗಳನ್ನು, ಅವು ಬರುವುದಕ್ಕೆ ಮೊದಲೇ ಕೃಪನು ಹರಿತ ಬಾಣಗಳಿಂದ ನೂರಾಗಿ ಸಾವಿರವಾಗಿ ಕಡಿದುಹಾಕಿದನು.
04052005a ತತಃ ಪಾರ್ಥಶ್ಚ ಸಂಕ್ರುದ್ಧಶ್ಚಿತ್ರಾನ್ಮಾರ್ಗಾನ್ಪ್ರದರ್ಶಯನ್।
04052005c ದಿಶಃ ಸಂಚಾದಯನ್ಬಾಣೈಃ ಪ್ರದಿಶಶ್ಚ ಮಹಾರಥಃ।।
ಬಳಿಕ ಕೋಪಗೊಂಡ ಮಹಾರಥಿ ಪಾರ್ಥನು ವಿಚಿತ್ರ ತಂತ್ರಗಳನ್ನು ಪ್ರದರ್ಶಿಸುತ್ತಾ ಬಾಣಗಳಿಂದ ದಿಕ್ಕುದಿಕ್ಕುಗಳನ್ನೂ ಮುಚ್ಚಿದನು.
04052006a ಏಕಚ್ಛಾಯಮಿವಾಕಾಶಂ ಪ್ರಕುರ್ವನ್ಸರ್ವತಃ ಪ್ರಭುಃ।
04052006c ಪ್ರಚ್ಛಾದಯದಮೇಯಾತ್ಮಾ ಪಾರ್ಥಃ ಶರಶತೈಃ ಕೃಪಂ।।
ಆ ಅಮಿತಾತ್ಮ ಪ್ರಭು ಪಾರ್ಥನು ಆಕಾಶವನ್ನೆಲ್ಲ ಕವಿದುಕೊಳ್ಳುವಂತೆ ಮಾಡಿ ಕೃಪನನ್ನು ನೂರಾರು ಬಾಣಗಳಿಂದ ಮುಸುಕಿದನು.
04052007a ಸ ಶರೈರರ್ಪಿತಃ ಕ್ರುದ್ಧಃ ಶಿತೈರಗ್ನಿಶಿಖೋಪಮೈಃ।
04052007c ತೂರ್ಣಂ ಶರಸಹಸ್ರೇಣ ಪಾರ್ಥಮಪ್ರತಿಮೌಜಸಂ।
04052007e ಅರ್ಪಯಿತ್ವಾ ಮಹಾತ್ಮಾನಂ ನನಾದ ಸಮರೇ ಕೃಪಃ।।
ಅಗ್ನಿಜ್ವಾಲೆಗಳಂತಹ ನಿಶಿತ ಬಾಣಗಳಿಂದ ಪೀಡಿತನಾಗಿ ಕೋಪಗೊಂಡ ಕೃಪನು ಯುದ್ಧದಲ್ಲಿ ಆ ಅಪ್ರತಿಮ ತೇಜಸ್ವಿ, ಮಹಾತ್ಮ ಅರ್ಜುನನ ಮೇಲೆ ಸಾವಿರ ಬಾಣಗಳನ್ನು ಬೇಗ ಬಿಟ್ಟು ಗರ್ಜಿಸಿದನು.
04052008a ತತಃ ಕನಕಪುಂಖಾಗ್ರೈರ್ವೀರಃ ಸಂನತಪರ್ವಭಿಃ।
04052008c ತ್ವರನ್ಗಾಂಡೀವನಿರ್ಮುಕ್ತೈರರ್ಜುನಸ್ತಸ್ಯ ವಾಜಿನಃ।
04052008e ಚತುರ್ಭಿಶ್ಚತುರಸ್ತೀಕ್ಷ್ಣೈರವಿಧ್ಯತ್ಪರಮೇಷುಭಿಃ।।
ಆಮೇಲೆ ವೀರ ಅರ್ಜುನನು ಗಾಂಡೀವದಿಂದ ಬಿಡಲಾದ ಚಿನ್ನದ ಗರಿ ಮತ್ತು ನೇರ್ಪಡಿಸಿದ ಗಿಣ್ಣುಗಳಿಂದ ಕೂಡಿದ ತೀಕ್ಷ್ಣ, ಶ್ರೇಷ್ಠ ಬಾಣಗಳಿಂದ ಅವನ ನಾಲ್ಕು ಕುದುರೆಗಳನ್ನೂ ಬೇಗ ಭೇದಿಸಿದನು.
04052009a ತೇ ಹಯಾ ನಿಶಿತೈರ್ವಿದ್ಧಾ ಜ್ವಲದ್ಭಿರಿವ ಪನ್ನಗೈಃ।
04052009c ಉತ್ಪೇತುಃ ಸಹಸಾ ಸರ್ವೇ ಕೃಪಃ ಸ್ಥಾನಾದಥಾಚ್ಯವತ್।।
ಸರ್ಪಗಳಂತೆ ಜ್ವಲಿಸುತ್ತಿದ್ದ ಹರಿತ ಬಾಣಗಳಿಂದ ಭೇದಿಸಲ್ಪಟ್ಟ ಆ ಕುದುರೆಗಳೆಲ್ಲ ಇದ್ದಕ್ಕಿಂದಂತೆ ಚಿಮ್ಮಿದವು. ಆಗ ಕೃಪನು ತನ್ನ ಸ್ಥಾನದಿಂದ ಉರುಳಿದನು.
04052010a ಚ್ಯುತಂ ತು ಗೌತಮಂ ಸ್ಥಾನಾತ್ಸಮೀಕ್ಷ್ಯ ಕುರುನಂದನಃ।
04052010c ನಾವಿಧ್ಯತ್ಪರವೀರಘ್ನೋ ರಕ್ಷಮಾಣೋಽಸ್ಯ ಗೌರವಂ।।
ಕೃಪನು ತನ್ನ ಸ್ಥಾನದಿಂದ ಉರುಳಿದುದನ್ನು ನೋಡಿ ಶತ್ರುವೀರರನ್ನು ಕೊಲ್ಲುವ, ಕುರುನಂದನ ಅರ್ಜುನನು ಅವನ ಗೌರವವನ್ನು ಕಾಯುವುದಕ್ಕಾಗಿ ಅವನನ್ನು ಬಾಣಗಳಿಂದ ಭೇದಿಸಲಿಲ್ಲ.
04052011a ಸ ತು ಲಬ್ಧ್ವಾ ಪುನಃ ಸ್ಥಾನಂ ಗೌತಮಃ ಸವ್ಯಸಾಚಿನಂ।
04052011c ವಿವ್ಯಾಧ ದಶಭಿರ್ಬಾಣೈಸ್ತ್ವರಿತಃ ಕಂಕಪತ್ರಿಭಿಃ।।
ಕೃಪನಾದರೋ ಮತ್ತೆ ಸ್ವಸ್ಥಾನವನ್ನು ಸೇರಿ, ಕಂಕಪಕ್ಷಿಯ ಗರಿಗಳಿಂದ ಕೂಡಿದ ಹತ್ತು ಬಾಣಗಳಿಂದ ಅರ್ಜುನನನ್ನು ಬೇಗ ಹೊಡೆದನು.
04052012a ತತಃ ಪಾರ್ಥೋ ಧನುಸ್ತಸ್ಯ ಭಲ್ಲೇನ ನಿಶಿತೇನ ಚ।
04052012c ಚಿಚ್ಛೇದೈಕೇನ ಭೂಯಶ್ಚ ಹಸ್ತಾಚ್ಚಾಪಮಥಾಹರತ್।।
ಬಳಿಕ ಪಾರ್ಥನು ಅವನ ಬಿಲ್ಲನ್ನು ಹರಿತವಾದ ಒಂದೇ ಬಾಣದಿಂದ ಕತ್ತರಿಸಿದನು ಮತ್ತು ಅವನ ಕೈಯಿಂದ ಬಿಲ್ಲನ್ನು ತೊಲಗಿಸಿದನು.
04052013a ಅಥಾಸ್ಯ ಕವಚಂ ಬಾಣೈರ್ನಿಶಿತೈರ್ಮರ್ಮಭೇದಿಭಿಃ।
04052013c ವ್ಯಧಮನ್ನ ಚ ಪಾರ್ಥೋಽಸ್ಯ ಶರೀರಮವಪೀಡಯತ್।।
ಅನಂತರ ಅವನ ಕವಚವನ್ನು ಪಾರ್ಥನು ಮರ್ಮಭೇದಕ ತೀಕ್ಷ್ಣ ಬಾಣಗಳಿಂದ ಕತ್ತರಿಸಿದನು. ಆದರೆ ಅವನ ಶರೀರವನ್ನು ನೋಯಿಸಲಿಲ್ಲ.
04052014a ತಸ್ಯ ನಿರ್ಮುಚ್ಯಮಾನಸ್ಯ ಕವಚಾತ್ಕಾಯ ಆಬಭೌ।
04052014c ಸಮಯೇ ಮುಚ್ಯಮಾನಸ್ಯ ಸರ್ಪಸ್ಯೇವ ತನುರ್ಯಥಾ।।
ಕವಚಮುಕ್ತವಾದ ಆ ಕೃಪನ ಶರೀರ ಆ ಸಮಯದಲ್ಲಿ ಪೊರೆಬಿಟ್ಟ ಹಾವಿನ ಶರೀರದಂತೆ ಶೋಭಿಸಿತು.
04052015a ಚಿನ್ನೇ ಧನುಷಿ ಪಾರ್ಥೇನ ಸೋಽನ್ಯದಾದಾಯ ಕಾರ್ಮುಕಂ।
04052015c ಚಕಾರ ಗೌತಮಃ ಸಜ್ಯಂ ತದದ್ಭುತಮಿವಾಭವತ್।।
ಪಾರ್ಥನಿಂದ ಬಿಲ್ಲು ಕಡಿದುಹೋಗಲು ಕೃಪನು ಮತ್ತೊಂದು ಬಿಲ್ಲನ್ನು ತೆಗೆದುಕೊಂಡು ಅದಕ್ಕೆ ಹೆದೆಯೇರಿಸಿದನು. ಅದು ಅದ್ಭುತವಾಗಿತ್ತು.
04052016a ಸ ತದಪ್ಯಸ್ಯ ಕೌಂತೇಯಶ್ಚಿಚ್ಛೇದ ನತಪರ್ವಣಾ।
04052016c ಏವಮನ್ಯಾನಿ ಚಾಪಾನಿ ಬಹೂನಿ ಕೃತಹಸ್ತವತ್।।
04052016e ಶಾರದ್ವತಸ್ಯ ಚಿಚ್ಛೇದ ಪಾಂಡವಃ ಪರವೀರಹಾ।।
ಅವನ ಆ ಬಿಲ್ಲನ್ನೂ ಕುಂತೀಪುತ್ರನು ನೇರಗಿಣ್ಣಿನ ಬಾಣದಿಂದ ಕತ್ತರಿಸಿ ಹಾಕಿದನು. ಹಾಗೆಯೇ ಕೃಪನ ಇತರ ಹಲವು ಬಿಲ್ಲುಗಳನ್ನೂ ಶತ್ರುನಾಶಕ ಆ ಪಾಂಡುಪುತ್ರನು ಕೈ ಚಳಕದಿಂದ ಕಡಿದು ಹಾಕಿದನು.
04052017a ಸ ಚಿನ್ನಧನುರಾದಾಯ ಅಥ ಶಕ್ತಿಂ ಪ್ರತಾಪವಾನ್।
04052017c ಪ್ರಾಹಿಣೋತ್ಪಾಂಡುಪುತ್ರಾಯ ಪ್ರದೀಪ್ತಾಮಶನೀಮಿವ।।
ಅನಂತರ ಬಿಲ್ಲುಕತ್ತರಿಸಿಹೋಗಲಾಗಿ ಆ ಪ್ರತಾಪಶಾಲಿ ಕೃಪನು ಸಿಡಿಲಿನಂತೆ ಉರಿಯುವ ಶಕ್ತ್ಯಾಯುಧವನ್ನು ಅರ್ಜುನನ ಮೇಲೆ ಪ್ರಯೋಗಿಸಿದನು.
04052018a ತಾಮರ್ಜುನಸ್ತದಾಯಾಂತೀಂ ಶಕ್ತಿಂ ಹೇಮವಿಭೂಷಿತಾಂ।
04052018c ವಿಯದ್ಗತಾಂ ಮಹೋಲ್ಕಾಭಾಂ ಚಿಚ್ಛೇದ ದಶಭಿಃ ಶರೈಃ।
04052018e ಸಾಪತದ್ದಶಧಾ ಚಿನ್ನಾ ಭೂಮೌ ಪಾರ್ಥೇನ ಧೀಮತಾ।।
ತನ್ನೆಡೆಗೆ ಬರುತ್ತಿದ್ದ ಚಿನ್ನದಿಂದ ಅಲಂಕೃತ, ಆಕಾಶಗಾಮಿ ದೊಡ್ಡ ಉಲ್ಕೆಯಂತಿದ್ದ ಆ ಶಕ್ತ್ಯಾಯುಧವನ್ನು ಅರ್ಜುನನು ಹತ್ತು ಬಾಣಗಳಿಂದ ಕತ್ತರಿಸಿದನು. ಧೀಮಂತ ಪಾರ್ಥನಿಂದ ಕತ್ತರಿಸಲ್ಪಟ್ಟ ಆ ಶಕ್ತ್ಯಾಯುಧವು ಹತ್ತು ತುಂಡುಗಳಾಗಿ ನೆಲಕ್ಕೆ ಬಿದ್ದಿತು.
04052019a ಯುಗಮಧ್ಯೇ ತು ಭಲ್ಲೈಸ್ತು ತತಃ ಸ ಸಧನುಃ ಕೃಪಃ।
04052019c ತಮಾಶು ನಿಶಿತೈಃ ಪಾರ್ಥಂ ಬಿಭೇದ ದಶಭಿಃ ಶರೈಃ।।
ಆಮೇಲೆ ಕೃಪನು ಕ್ಷಣಾರ್ಧದಲ್ಲಿಯೇ ಧನುರ್ಧರನಾಗಿ ಹರಿತ ಭಲ್ಲಗಳೆಂಬ ಹತ್ತು ಬಾಣಗಳಿಂದ ಆ ಪಾರ್ಥನನ್ನು ಬೇಗ ಹೊಡೆದನು.
04052020a ತತಃ ಪಾರ್ಥೋ ಮಹಾತೇಜಾ ವಿಶಿಖಾನಗ್ನಿತೇಜಸಃ।
04052020c ಚಿಕ್ಷೇಪ ಸಮರೇ ಕ್ರುದ್ಧಸ್ತ್ರಯೋದಶ ಶಿಲಾಶಿತಾನ್।।
ಬಳಿಕ ಮಹಾತೇಜಸ್ವಿ ಪಾರ್ಥನು ಕೋಪಗೊಂಡು ಸಾಣೆಕಲ್ಲಿನಿಂದ ಹರಿತಗೊಳಿಸಿದ ಅಗ್ನಿಯಂತೆ ತೇಜಸ್ಸಿನಿಂದ ಕೂಡಿದ ಹದಿಮೂರು ಬಾಣಗಳನ್ನು ಯುದ್ಧದಲ್ಲಿ ಪ್ರಯೋಗಿಸಿದನು.
04052021a ಅಥಾಸ್ಯ ಯುಗಮೇಕೇನ ಚತುರ್ಭಿಶ್ಚತುರೋ ಹಯಾನ್।
04052021c ಷಷ್ಠೇನ ಚ ಶಿರಃ ಕಾಯಾಚ್ಚರೇಣ ರಥಸಾರಥೇಃ।।
ಅನಂತರ ಒಂದು ಬಾಣದಿಂದ ಆ ಕೃಪನ ರಥದ ನೊಗವನ್ನೂ, ನಾಲ್ಕು ಬಾಣಗಳಿಂದ ನಾಲ್ಕು ಕುದುರೆಗಳನ್ನೂ ಸೀಳಿ, ಆರನೆಯ ಬಾಣವನ್ನು ಬಿಟ್ಟು ರಥದ ಸಾರಥಿಯ ತಲೆಯನ್ನು ಅವನ ದೇಹದಿಂದ ಬೇರ್ಪಡಿಸಿದನು.
04052022a ತ್ರಿಭಿಸ್ತ್ರಿವೇಣುಂ ಸಮರೇ ದ್ವಾಭ್ಯಾಮಕ್ಷೌ ಮಹಾಬಲಃ।
04052022c ದ್ವಾದಶೇನ ತು ಭಲ್ಲೇನ ಚಕರ್ತಾಸ್ಯ ಧ್ವಜಂ ತಥಾ।।
ಹಾಗೆಯೇ ಆ ಮಹಾಬಲಶಾಲಿಯು ಮೂರು ಬಾಣಗಳಿಂದ ರಥದ ಮೂರು ಬಿದಿರಿನ ದಂಡಗಳನ್ನೂ, ಎರಡು ಬಾಣಗಳಿಂದ ರಥದ ಅಚ್ಚನ್ನೂ, ಹನ್ನೆರಡನೆಯ ಬಾಣದಿಂದ ಧ್ವಜವನ್ನೂ ಯುದ್ಧದಲ್ಲಿ ಸೀಳಿಹಾಕಿದನು.
04052023a ತತೋ ವಜ್ರನಿಕಾಶೇನ ಫಲ್ಗುನಃ ಪ್ರಹಸನ್ನಿವ।
04052023c ತ್ರಯೋದಶೇನೇಂದ್ರಸಮಃ ಕೃಪಂ ವಕ್ಷಸ್ಯತಾಡಯತ್।।
ಅನಂತರ ಇಂದ್ರಸಮಾನ ಅರ್ಜುನನು ನಗುತ್ತ, ವಜ್ರಸಮಾನ ಹದಿಮೂರನೆಯ ಬಾಣದಿಂದ ಕೃಪನ ಎದೆಗೆ ಹೊಡೆದನು.
04052024a ಸ ಚಿನ್ನಧನ್ವಾ ವಿರಥೋ ಹತಾಶ್ವೋ ಹತಸಾರಥಿಃ।
04052024c ಗದಾಪಾಣಿರವಪ್ಲುತ್ಯ ತೂರ್ಣಂ ಚಿಕ್ಷೇಪ ತಾಂ ಗದಾಂ।।
ಬಿಲ್ಲು ಕತ್ತರಿಸಿ ಹೋಗಿ, ಕುದುರೆಗಳೂ ಸಾರಥಿಯೂ ಸತ್ತು, ವಿರಥನಾದ ಕೃಪನು ಗದೆಯನ್ನು ಹಿಡಿದು ಬೇಗ ಕೆಳಕ್ಕೆ ನೆಗೆದು ಆ ಗದೆಯನ್ನು ಅರ್ಜುನನ ಮೇಲೆ ಎಸೆದನು.
04052025a ಸಾ ತು ಮುಕ್ತಾ ಗದಾ ಗುರ್ವೀ ಕೃಪೇಣ ಸುಪರಿಷ್ಕೃತಾ।
04052025c ಅರ್ಜುನೇನ ಶರೈರ್ನುನ್ನಾ ಪ್ರತಿಮಾರ್ಗಮಥಾಗಮತ್।।
ಕೃಪನು ಎಸೆದ, ಚೆನ್ನಾಗಿ ಮಾಡಿದ ಆ ಭಾರ ಗದೆಯು, ಅರ್ಜುನನ ಬಾಣಗಳಿಂದ ತಡೆಗೊಂಡು ಬೇರೆ ಮಾರ್ಗದಲ್ಲಿ ಹಿಂದಿರುಗಿತು.
04052026a ತತೋ ಯೋಧಾಃ ಪರೀಪ್ಸಂತಃ ಶಾರದ್ವತಮಮರ್ಷಣಂ।
04052026c ಸರ್ವತಃ ಸಮರೇ ಪಾರ್ಥಂ ಶರವರ್ಷೈರವಾಕಿರನ್।।
ಬಳಿಕ ಕೋಪಗೊಂಡ ಕೃಪನನ್ನು ರಕ್ಷಿಸಬಯಸಿದ ಯೋಧರು ಯುದ್ಧದಲ್ಲಿ ಪಾರ್ಥನನ್ನು ಸುತ್ತಲೂ ಬಾಣಗಳ ಮಳೆಯಿಂದ ಮುಸುಕಿದರು.
04052027a ತತೋ ವಿರಾಟಸ್ಯ ಸುತಃ ಸವ್ಯಮಾವೃತ್ಯ ವಾಜಿನಃ।
04052027c ಯಮಕಂ ಮಂಡಲಂ ಕೃತ್ವಾ ತಾನ್ಯೋಧಾನ್ಪ್ರತ್ಯವಾರಯತ್।।
ಆಮೇಲೆ ಉತ್ತರನು ಕುದುರೆಗಳನ್ನು ಎಡಕ್ಕೆ ತಿರುಗಿಸಿ ಯಮಕವೆಂಬ ಮಂಡಲವನ್ನು ರಚಿಸಿ ಆ ಯೋಧರನ್ನು ನಿವಾರಿಸಿದನು.
04052028a ತತಃ ಕೃಪಮುಪಾದಾಯ ವಿರಥಂ ತೇ ನರರ್ಷಭಾಃ।
04052028c ಅಪಾಜಹ್ರುರ್ಮಹಾವೇಗಾಃ ಕುಂತೀಪುತ್ರಾದ್ಧನಂಜಯಾತ್।।
ಆಮೇಲೆ ಮಹಾವೇಗವುಳ್ಳ ಆ ನರಶ್ರೇಷ್ಠರು ವಿರಥನಾಗಿದ್ದ ಕೃಪನನ್ನು ಎತ್ತಿಕೊಂಡು ಕುಂತೀಪುತ್ರ ಧನಂಜಯನ ಬಳಿಯಿಂದ ಕೊಂಡೊಯ್ದರು.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಕೃಪಾಪಯಾನೇ ದ್ವಿಪಂಚಾಶತ್ತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಕೃಪಾಪಯಾನದಲ್ಲಿ ಐವತ್ತೆರಡನೆಯ ಅಧ್ಯಾಯವು.