ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ವಿರಾಟ ಪರ್ವ
ಗೋಹರಣ ಪರ್ವ
ಅಧ್ಯಾಯ 51
ಸಾರ
ಕೌರವಸೇನೆಯೊಡನೆ ಅರ್ಜುನನ ಯುದ್ಧವನ್ನು ವೀಕ್ಷಿಸಲು ಇಂದ್ರನು ದೇವಗಣಗಳೊಡನೆ ಮತ್ತು ವಿಶ್ವೇದೇವತೆಗಳು, ಅಶ್ವಿನಿಗಳ ಹಾಗೂ ಮರುತರ ಸಮೂಹಗಳೊಡನೆ ಬಂದು ಆಗಸದಲ್ಲಿ ನೆರೆದುದು (1-17).
04051001 ವೈಶಂಪಾಯನ ಉವಾಚ।
04051001a ತಾನ್ಯನೀಕಾನ್ಯದೃಶ್ಯಂತ ಕುರೂಣಾಮುಗ್ರಧನ್ವಿನಾಂ।
04051001c ಸಂಸರ್ಪಂತೋ ಯಥಾ ಮೇಘಾ ಘರ್ಮಾಂತೇ ಮಂದಮಾರುತಾಃ।।
ವೈಶಂಪಾಯನನು ಹೇಳಿದನು: “ಆ ಉಗ್ರಧನುರ್ಧರ ಕೌರವರ ಸೇನೆಗಳು ಬೇಸಗೆಯ ಕಡೆಯಲ್ಲಿ ಮಂದಮಾರುತದಿಂದ ಚಲಿಸುವ ಮೋಡಗಳಂತೆ ತೋರಿದವು.
04051002a ಅಭ್ಯಾಶೇ ವಾಜಿನಸ್ತಸ್ಥುಃ ಸಮಾರೂಢಾಃ ಪ್ರಹಾರಿಭಿಃ।
04051002c ಭೀಮರೂಪಾಶ್ಚ ಮಾತಂಗಾಸ್ತೋಮರಾಮ್ಕುಶಚೋದಿತಾಃ।।
ಹತ್ತಿರದಲ್ಲಿ ಯೋಧರು ಏರಿದ್ದ ಕುದುರೆಗಳೂ ತೋಮರ ಮತ್ತು ಅಂಕುಶಗಳಿಂದ ಪ್ರಚೋದಿತವಾದ ಭಯಂಕರ ರೂಪದ ಆನೆಗಳೂ ಇದ್ದವು.
04051003a ತತಃ ಶಕ್ರಃ ಸುರಗಣೈಃ ಸಮಾರುಹ್ಯ ಸುದರ್ಶನಂ।
04051003c ಸಹೋಪಾಯಾತ್ತದಾ ರಾಜನ್ವಿಶ್ವಾಶ್ವಿಮರುತಾಂ ಗಣೈಃ।।
ರಾಜ! ಅನಂತರ ಇಂದ್ರನು ಸುದರ್ಶನ ರಥವನ್ನೇರಿ ದೇವಗಣಗಳೊಡನೆ ಮತ್ತು ವಿಶ್ವೇದೇವತೆಗಳು, ಅಶ್ವಿನಿಗಳ ಹಾಗೂ ಮರುತರ ಸಮೂಹಗಳೊಡನೆ ಆಗ ಅಲ್ಲಿಗೆ ಬಂದನು.
04051004a ತದ್ದೇವಯಕ್ಷಗಂಧರ್ವಮಹೋರಗಸಮಾಕುಲಂ।
04051004c ಶುಶುಭೇಽಭ್ರವಿನಿರ್ಮುಕ್ತಂ ಗ್ರಹೈರಿವ ನಭಸ್ತಲಂ।।
ಮೋಡಗಳಿಲ್ಲದ ಆಕಾಶವು ಗ್ರಹಗಳಿಂದ ಶೋಭಿಸುವಂತೆ ಆ ದೇವ- ಯಕ್ಷ-ಗಂಧರ್ವ-ಮಹೋರಗರಿಂದ ತುಂಬಿ ಶೋಭಿಸುತ್ತಿತ್ತು.
04051005a ಅಸ್ತ್ರಾಣಾಂ ಚ ಬಲಂ ತೇಷಾಂ ಮಾನುಷೇಷು ಪ್ರಯುಜ್ಯತಾಂ।
04051005c ತಚ್ಚ ಘೋರಂ ಮಹದ್ಯುದ್ಧಂ ಭೀಷ್ಮಾರ್ಜುನಸಮಾಗಮೇ।।
ಮನುಷ್ಯರು ಪ್ರಯೋಗಿಸುವ ತಮ್ಮ ಅಸ್ತ್ರಗಳ ಬಲವನ್ನೂ, ಭೀಷ್ಮಾರ್ಜುನರು ಸೇರಿದಾಗ ನಡೆಯುವ ಮಹಾಯುದ್ಧವನ್ನೂ ನೋಡಲು ಅವರು ಬಂದರು.
04051006a ಶತಂ ಶತಸಹಸ್ರಾಣಾಂ ಯತ್ರ ಸ್ಥೂಣಾ ಹಿರಣ್ಮಯಾಃ।
04051006c ಮಣಿರತ್ನಮಯಾಶ್ಚಾನ್ಯಾಃ ಪ್ರಾಸಾದಮುಪಧಾರಯನ್।।
04051007a ತತ್ರ ಕಾಮಗಮಂ ದಿವ್ಯಂ ಸರ್ವರತ್ನವಿಭೂಷಿತಂ।
04051007c ವಿಮಾನಂ ದೇವರಾಜಸ್ಯ ಶುಶುಭೇ ಖೇಚರಂ ತದಾ।।
ಆಗ ಸುವರ್ಣಮಯ ಮತ್ತು ಮಣಿರತ್ನಮಯ ಒಂದು ಕೋಟಿ ಕಂಬಗಳಿಂದ ಕೂಡಿದ ಪ್ರಾಸಾದವುಳ್ಳ, ಇಚ್ಛೆಯಂತೆ ಎಲ್ಲಿಗೆ ಬೇಕಾದರೂ ಹೋಗಬಲ್ಲ, ದಿವ್ಯ, ಸರ್ವರತ್ನ ವಿಭೂಷಿತ, ಗಗನ ಸಂಚಾರಿ, ದೇವೇಂದ್ರನ ವಿಮಾನವು ಶೋಭಿಸಿತು.
04051008a ತತ್ರ ದೇವಾಸ್ತ್ರಯಸ್ತ್ರಿಂಶತ್ತಿಷ್ಠಂತಿ ಸಹವಾಸವಾಃ।
04051008c ಗಂಧರ್ವಾ ರಾಕ್ಷಸಾಃ ಸರ್ಪಾಃ ಪಿತರಶ್ಚ ಮಹರ್ಷಿಭಿಃ।।
ಇಂದ್ರನೊಡನೆ ಮೂವತ್ತಮೂರು ದೇವತೆಗಳೂ, ಮಹರ್ಷಿಗಳೊಂದಿಗೆ ಗಂಧರ್ವ-ರಾಕ್ಷಸ-ಸರ್ಪರೂ, ಪಿತೃಗಳೂ ಅಲ್ಲಿದ್ದರು.
04051009a ತಥಾ ರಾಜಾ ವಸುಮನಾ ಬಲಾಕ್ಷಃ ಸುಪ್ರತರ್ದನಃ।
04051009c ಅಷ್ಟಕಶ್ಚ ಶಿಬಿಶ್ಚೈವ ಯಯಾತಿರ್ನಹುಷೋ ಗಯಃ।।
04051010a ಮನುಃ ಕ್ಷುಪೋ ರಘುರ್ಭಾನುಃ ಕೃಶಾಶ್ವಃ ಸಗರಃ ಶಲಃ।
04051010c ವಿಮಾನೇ ದೇವರಾಜಸ್ಯ ಸಮದೃಶ್ಯಂತ ಸುಪ್ರಭಾಃ।।
ಹಾಗೆಯೇ ರಾಜ ವಸುಮನ, ಬಲಾಕ್ಷ, ಸುಪ್ರತರ್ದನ, ಅಷ್ಟಕ, ಶಿಬಿ, ಯಯಾತಿ, ನಹುಷ, ಗಯ, ಮನು, ಕ್ಷುಪ, ರಘು, ಭಾನು, ಕೃಶಾಶ್ವ, ಸಗರ, ಶಲ ಇವರು ಪ್ರಕಾಶಮಾನರಾಗಿ ದೇವೇಂದ್ರನ ವಿಮಾನದಲ್ಲಿ ಕಾಣಿಸಿಕೊಂಡರು.
04051011a ಅಗ್ನೇರೀಶಸ್ಯ ಸೋಮಸ್ಯ ವರುಣಸ್ಯ ಪ್ರಜಾಪತೇಃ।
04051011c ತಥಾ ಧಾತುರ್ವಿಧಾತುಶ್ಚ ಕುಬೇರಸ್ಯ ಯಮಸ್ಯ ಚ।।
04051012a ಅಲಂಬುಸೋಗ್ರಸೇನಸ್ಯ ಗಂಧರ್ವಸ್ಯ ಚ ತುಂಬುರೋಃ।
04051012c ಯಥಾಭಾಗಂ ಯಥೋದ್ದೇಶಂ ವಿಮಾನಾನಿ ಚಕಾಶಿರೇ।।
ಅಗ್ನಿ, ಈಶ, ಸೋಮ, ವರುಣ, ಪ್ರಜಾಪತಿ, ಧಾತೃ, ವಿಧಾತೃ, ಕುಬೇರ, ಯಮ, ಅಲಂಬುಸ, ಉಗ್ರಸೇನ, ಗಂಧರ್ವ ತುಂಬುರ ಇವರ ವಿಮಾನಗಳು ತಕ್ಕ ತಕ್ಕ ವಿಭಾಗಸ್ಥಾನಗಳಲ್ಲಿ ಕಂಗೊಳಿಸಿದವು.
04051013a ಸರ್ವದೇವನಿಕಾಯಾಶ್ಚ ಸಿದ್ಧಾಶ್ಚ ಪರಮರ್ಷಯಃ।
04051013c ಅರ್ಜುನಸ್ಯ ಕುರೂಣಾಂ ಚ ದ್ರಷ್ಟುಂ ಯುದ್ಧಮುಪಾಗತಾಃ।।
ಎಲ್ಲ ದೇವ ಸಮೂಹಗಳೂ, ಸಿದ್ಧರೂ, ಪರಮ ಋಷಿಗಳೂ ಅರ್ಜುನನ ಮತ್ತು ಕೌರವರ ಯುದ್ಧವನ್ನು ನೋಡಲು ಬಂದರು.
04051014a ದಿವ್ಯಾನಾಂ ತತ್ರ ಮಾಲ್ಯಾನಾಂ ಗಂಧಃ ಪುಣ್ಯೋಽಥ ಸರ್ವಶಃ।
04051014c ಪ್ರಸಸಾರ ವಸಂತಾಗ್ರೇ ವನಾನಾಮಿವ ಪುಷ್ಪಿತಾಂ।।
ಅಲ್ಲಿ ದಿವ್ಯಮಾಲೆಗಳ ಪುಣ್ಯಗಂಧವು ವಸಂತಾಗಮನವಾದಾಗ ಕುಸುಮಿಸುವ ವನಗಳ ಗಂಧದಂತೆ ಎಲ್ಲೆಡೆ ಹರಡಿತು.
04051015a ರಕ್ತಾರಕ್ತಾನಿ ದೇವಾನಾಂ ಸಮದೃಶ್ಯಂತ ತಿಷ್ಠತಾಂ।
04051015c ಆತಪತ್ರಾಣಿ ವಾಸಾಂಸಿ ಸ್ರಜಶ್ಚ ವ್ಯಜನಾನಿ ಚ।।
ಅಲ್ಲಿದ್ದ ದೇವತೆಗಳ ಕಡುಗೆಂಪಾದ ಕೊಡೆಗಳೂ, ವಸ್ತ್ರಗಳೂ, ಮಾಲೆಗಳೂ, ಚಾಮರಗಳೂ, ಚೆನ್ನಾಗಿ ಕಂಡುಬಂದವು.
04051016a ಉಪಶಾಮ್ಯದ್ರಜೋ ಭೌಮಂ ಸರ್ವಂ ವ್ಯಾಪ್ತಂ ಮರೀಚಿಭಿಃ।
04051016c ದಿವ್ಯಾನ್ಗಂಧಾನುಪಾದಾಯ ವಾಯುರ್ಯೋಧಾನಸೇವತ।।
ನೆಲದ ಧೂಳೆಲ್ಲ ಅಡಗಿಹೋಯಿತು. ಎಲ್ಲೆಡೆಯೂ ಕಾಂತಿ ವ್ಯಾಪಿಸಿ, ದಿವ್ಯಗಂಧವನ್ನು ಹೊತ್ತ ಗಾಳಿ ಯೋಧರನ್ನು ತಣಿಸಿತು.
04051017a ಪ್ರಭಾಸಿತಮಿವಾಕಾಶಂ ಚಿತ್ರರೂಪಮಲಂಕೃತಂ।
04051017c ಸಂಪತದ್ಭಿಃ ಸ್ಥಿತೈಶ್ಚೈವ ನಾನಾರತ್ನಾವಭಾಸಿತೈಃ।
04051017e ವಿಮಾನೈರ್ವಿವಿಧೈಶ್ಚಿತ್ರೈರುಪಾನೀತೈಃ ಸುರೋತ್ತಮೈಃ।।
ಬರುತ್ತಿದ್ದ ಮತ್ತು ಆಗಲೇ ಬಂದಿದ್ದ, ನಾನಾ ರತ್ನಗಳಿಂದ ಹೊಳೆಯುತ್ತಿದ್ದ ದೇವಶ್ರೇಷ್ಠರು ತಂದಿದ್ದ ವಿವಿಧ ವಿಚಿತ್ರ ವಿಮಾನಗಳಿಂದ ಅಲಂಕೃತ ಆಕಾಶವು ಚಿತ್ರರೂಪವಾಗಿ ಶೋಭಿಸುತ್ತಿತ್ತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ದೇವಾಗಮನೇ ಏಕಪಂಚಾಶತ್ತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ದೇವಾಗಮನದಲ್ಲಿ ಐವತ್ತೊಂದನೆಯ ಅಧ್ಯಾಯವು.