ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ವಿರಾಟ ಪರ್ವ
ಗೋಹರಣ ಪರ್ವ
ಅಧ್ಯಾಯ 50
ಸಾರ
ಅರ್ಜುನನು ಉತ್ತರನಿಗೆ ಕುರುಸೇನೆಯಲ್ಲಿರುವ ಷಡ್ರಥರಾದ ಕೃಪ, ದ್ರೋಣ, ಅಶ್ವತ್ಥಾಮ, ದುರ್ಯೋಧನ, ಕರ್ಣ ಮತ್ತು ಭೀಷ್ಮರ ಪರಿಚಯ ಮಾಡಿಕೊಡುವುದು (1-23).
04050001 ವೈಶಂಪಾಯನ ಉವಾಚ।
04050001a ಅಪಯಾತೇ ತು ರಾಧೇಯೇ ದುರ್ಯೋಧನಪುರೋಗಮಾಃ।
04050001c ಅನೀಕೇನ ಯಥಾಸ್ವೇನ ಶರೈರಾರ್ಚ್ಛಂತ ಪಾಂಡವಂ।।
ವೈಶಂಪಾಯನನು ಹೇಳಿದನು: “ಕರ್ಣನು ಹೊರಟುಹೋಗಲು ಉಳಿದವರು ದುರ್ಯೋಧನನನ್ನು ಮುಂದಿಟ್ಟುಕೊಂಡು ತಮ್ಮ ತಮ್ಮ ಸೈನ್ಯದೊಡನೆ ಕೂಡಿ ಅರ್ಜುನನನ್ನು ಬಾಣಗಳಿಂದ ಹೊಡೆದರು.
04050002a ಬಹುಧಾ ತಸ್ಯ ಸೈನ್ಯಸ್ಯ ವ್ಯೂಢಸ್ಯಾಪತತಃ ಶರೈಃ।
04050002c ಅಭಿಯಾನೀಯಮಾಜ್ಞಾಯ ವೈರಾಟಿರಿದಮಬ್ರವೀತ್।।
ವ್ಯೂಹಗೊಂಡು ಬಹುಪ್ರಕಾರವಾಗಿ ಬಾಣಗಳಿಂದ ಎರಗುತ್ತಿದ್ದ ಆ ಸೈನ್ಯದ ಮೇಲೆ ಬೀಳಬೇಕೆಂಬ ಅರ್ಜುನನ ಅಭಿಪ್ರಾಯವನ್ನು ತಿಳಿದು ಉತ್ತರನು ಹೀಗೆ ಹೇಳಿದನು:
04050003a ಆಸ್ಥಾಯ ರುಚಿರಂ ಜಿಷ್ಣೋ ರಥಂ ಸಾರಥಿನಾ ಮಯಾ।
04050003c ಕತಮದ್ಯಾಸ್ಯಸೇಽನೀಕಮುಕ್ತೋ ಯಾಸ್ಯಾಮ್ಯಹಂ ತ್ವಯಾ।।
“ಅರ್ಜುನ! ಈ ಸುಂದರ ರಥದಲ್ಲಿ ನನ್ನನ್ನು ಸಾರಥಿಯನ್ನಾಗಿ ಮಾಡಿಕೊಂಡು ಕುಳಿತಿರುವ ನೀನು ಈಗ ಯಾವ ಸೈನ್ಯದತ್ತ ಹೋಗಬಯಸುವೆ ಎಂಬುದನ್ನು ಹೇಳಿದರೆ ಅಲ್ಲಿಗೆ ಕರೆದೊಯ್ಯುತ್ತೇನೆ.”
04050004 ಅರ್ಜುನ ಉವಾಚ।
04050004a ಲೋಹಿತಾಕ್ಷಮರಿಷ್ಟಂ ಯಂ ವೈಯಾಘ್ರಮನುಪಶ್ಯಸಿ।
04050004c ನೀಲಾಂ ಪತಾಕಾಮಾಶ್ರಿತ್ಯ ರಥೇ ತಿಷ್ಠಂತಮುತ್ತರ।।
ಅರ್ಜುನನು ಹೇಳಿದನು: “ಉತ್ತರ! ಆ ಕೆಂಪುಕಣ್ಣುಳ್ಳ, ಅಜೇಯ, ವ್ಯಾಘ್ರಚರ್ಮವನ್ನು ಧರಿಸಿದ, ನೀಲಿಬಣ್ಣದ ಬಾವುಟದ ರಥದಲ್ಲಿ ಕುಳಿತ, ನಿನಗೆ ಕಾಣಿಸುತ್ತಿರುವ ಅವನಲ್ಲಿಗೆ ಹೋಗಬೇಕು.
04050005a ಕೃಪಸ್ಯೈತದ್ರಥಾನೀಕಂ ಪ್ರಾಪಯಸ್ವೈತದೇವ ಮಾಂ।
04050005c ಏತಸ್ಯ ದರ್ಶಯಿಷ್ಯಾಮಿ ಶೀಘ್ರಾಸ್ತ್ರಂ ದೃಢಧನ್ವಿನಃ।।
ಅದು ಕೃಪನ ರಥಸೈನ್ಯ. ಅಲ್ಲಿಗೇ ನನ್ನನ್ನು ಕರೆದೊಯ್ಯಿ. ಆ ದೃಢಧನುರ್ಧರನಿಗೆ ನನ್ನ ಅಸ್ತ್ರವೇಗವನ್ನು ತೋರಿಸುತ್ತೇನೆ.
04050006a ಕಮಂಡಲುರ್ಧ್ವಜೇ ಯಸ್ಯ ಶಾತಕುಂಭಮಯಃ ಶುಭಃ।
04050006c ಆಚಾರ್ಯ ಏಷ ವೈ ದ್ರೋಣಃ ಸರ್ವಶಸ್ತ್ರಭೃತಾಂ ವರಃ।।
ಧ್ವಜದಲ್ಲಿ ಸುವರ್ಣಮಯ ಶುಭ ಕಮಂಡಲು ಇರುವ ಈತನೇ ಸರ್ವಶಸ್ತ್ರಧರರಲ್ಲಿ ಶ್ರೇಷ್ಠ ಆಚಾರ್ಯ ದ್ರೋಣ.
04050007a ಸುಪ್ರಸನ್ನಮನಾ ವೀರ ಕುರುಷ್ವೈನಂ ಪ್ರದಕ್ಷಿಣಂ।
04050007c ಅತ್ರೈವ ಚಾವಿರೋಧೇನ ಏಷ ಧರ್ಮಃ ಸನಾತನಃ।।
ವೀರ! ಇಲ್ಲಿಯೇ ಸುಪ್ರಸನ್ನಚಿತ್ತದಿಂದ ವಿರೋಧವಿಲ್ಲದೇ ಇವನಿಗೆ ಪ್ರದಕ್ಷಿಣೆ ಹಾಕು. ಇದು ಸನಾತನ ಧರ್ಮ.
04050008a ಯದಿ ಮೇ ಪ್ರಥಮಂ ದ್ರೋಣಃ ಶರೀರೇ ಪ್ರಹರಿಷ್ಯತಿ।
04050008c ತತೋಽಸ್ಯ ಪ್ರಹರಿಷ್ಯಾಮಿ ನಾಸ್ಯ ಕೋಪೋ ಭವಿಷ್ಯತಿ।।
ಮೊದಲು ದ್ರೋಣನು ನನಗೆ ಹೊಡೆದನೆಂದರೆ ನಂತರ ನಾನು ಅವನಿಗೆ ಹೊಡೆಯುತ್ತೇನೆ. ಆಗ ಅವನಿಗೆ ಕೋಪ ಬರುವುದಿಲ್ಲ.
04050009a ಅಸ್ಯಾವಿದೂರೇ ತು ಧನುರ್ಧ್ವಜಾಗ್ರೇ ಯಸ್ಯ ದೃಶ್ಯತೇ।
04050009c ಆಚಾರ್ಯಸ್ಯೈಷ ಪುತ್ರೋ ವೈ ಅಶ್ವತ್ಥಾಮಾ ಮಹಾರಥಃ।।
ಅವನಿಗೆ ಹತ್ತಿರದಲ್ಲಿ ಕಾಣಿಸುತ್ತಿರುವ, ಧ್ವಜಾಗ್ರದಲ್ಲಿ ಧನುವಿನ ಚಿಹ್ನೆಯನ್ನು ಹೊಂದಿದ ಇವನೇ ಆಚಾರ್ಯಪುತ್ರ ಮಹಾರಥಿ ಅಶ್ವತ್ಥಾಮ.
04050010a ಸದಾ ಮಮೈಷ ಮಾನ್ಯಶ್ಚ ಸರ್ವಶಸ್ತ್ರಭೃತಾಮಪಿ।
04050010c ಏತಸ್ಯ ತ್ವಂ ರಥಂ ಪ್ರಾಪ್ಯ ನಿವರ್ತೇಥಾಃ ಪುನಃ ಪುನಃ।।
ಇವನು ಯಾವಾಗಲೂ ನನಗೆ ಮತ್ತು ಎಲ್ಲ ಶಸ್ತ್ರಧರರಿಗೆ ಮಾನ್ಯನಾದವನು. ಇವನ ರಥವನ್ನು ಸಮೀಪಿಸಿದಾಗ ಅಲ್ಲಿಂದ ಮತ್ತೆ ಮತ್ತೆ ಹಿಮ್ಮೆಟ್ಟು.
04050011a ಯ ಏಷ ತು ರಥಾನೀಕೇ ಸುವರ್ಣಕವಚಾವೃತಃ।
04050011c ಸೇನಾಗ್ರ್ಯೇಣ ತೃತೀಯೇನ ವ್ಯವಹಾರ್ಯೇಣ ತಿಷ್ಠತಿ।।
04050012a ಯಸ್ಯ ನಾಗೋ ಧ್ವಜಾಗ್ರೇ ವೈ ಹೇಮಕೇತನಸಂಶ್ರಿತಃ।
04050012c ಧೃತರಾಷ್ಟ್ರಾತ್ಮಜಃ ಶ್ರೀಮಾನೇಷ ರಾಜಾ ಸುಯೋಧನಃ।।
ರಥಸೈನ್ಯದಲ್ಲಿ ಸುವರ್ಣಕವಚವನ್ನು ಧರಿಸಿ, ಸೇನೆಯ ಶ್ರೇಷ್ಠ ಮೂರನೆಯ ಒಂದು ಭಾಗದಿಂದ ಪರಿವೃತನಾಗಿ, ಧ್ವಜಾಗ್ರದಲ್ಲಿ ಚಿನ್ನದಲ್ಲಿ ಕೆತ್ತಿದ ಆನೆಯುಳ್ಳವನಾಗಿರುವ ಈತನೇ ಧೃತರಾಷ್ಟ್ರಪುತ್ರ ಶ್ರೀಯುತ ರಾಜ ಸುಯೋಧನ.
04050013a ಏತಸ್ಯಾಭಿಮುಖಂ ವೀರ ರಥಂ ಪರರಥಾರುಜಃ।
04050013c ಪ್ರಾಪಯಸ್ವೈಷ ತೇಜೋಭಿಪ್ರಮಾಥೀ ಯುದ್ಧದುರ್ಮದಃ।।
ವೀರ! ರಥವನ್ನು ಇವನ ಮುಂದಕ್ಕೆ ಒಯ್ಯಿ. ಇವನು ಶತ್ರುರಥಗಳನ್ನು ಧ್ವಂಸಮಾಡುವವನು, ಶತ್ರುಗಳ ತೇಜಸ್ಸನ್ನು ಕೆಡಿಸುವವನು ಮತ್ತು ಯುದ್ಧದುರ್ಮದವುಳ್ಳವನು.
04050014a ಏಷ ದ್ರೋಣಸ್ಯ ಶಿಷ್ಯಾಣಾಂ ಶೀಘ್ರಾಸ್ತ್ರಃ ಪ್ರಥಮೋ ಮತಃ।
04050014c ಏತಸ್ಯ ದರ್ಶಯಿಷ್ಯಾಮಿ ಶೀಘ್ರಾಸ್ತ್ರಂ ವಿಪುಲಂ ಶರೈಃ।।
ಇವನು ದ್ರೋಣನ ಶಿಷ್ಯರಲ್ಲೆಲ್ಲ ಅಸ್ತ್ರವೇಗದಲ್ಲಿ ಮೊದಲಿಗನೆಂದು ತಿಳಿಯಲಾಗಿದೆ. ಇವನಿಗೆ ವಿಪುಲ ಶರಗಳಿಂದ ನನ್ನ ಅಸ್ತ್ರವೇಗವನ್ನು ತೋರಿಸುತ್ತೇನೆ.
04050015a ನಾಗಕಕ್ಷ್ಯಾ ತು ರುಚಿರಾ ಧ್ವಜಾಗ್ರೇ ಯಸ್ಯ ತಿಷ್ಠತಿ।
04050015c ಏಷ ವೈಕರ್ತನಃ ಕರ್ಣೋ ವಿದಿತಃ ಪೂರ್ವಮೇವ ತೇ।।
ಧ್ವಜಾಗ್ರದಲ್ಲಿ ಪ್ರಕಾಶಮಾನವಾದ ಆನೆಗೆ ಕಟ್ಟುವ ಹಗ್ಗವನ್ನುಳ್ಳ ಈತನೇ ಸೂರ್ಯಪುತ್ರ ಕರ್ಣ. ಇವನನ್ನು ಹಿಂದೆಯೇ ನೀನು ತಿಳಿದಿರುವೆ.
04050016a ಏತಸ್ಯ ರಥಮಾಸ್ಥಾಯ ರಾಧೇಯಸ್ಯ ದುರಾತ್ಮನಃ।
04050016c ಯತ್ತೋ ಭವೇಥಾಃ ಸಂಗ್ರಾಮೇ ಸ್ಪರ್ಧತ್ಯೇಷ ಮಯಾ ಸದಾ।।
ಈ ದುರಾತ್ಮ ಕರ್ಣನ ರಥವನ್ನು ಸಮೀಪಿಸಿದಾಗ ಜಾಗರೂಕನಾಗಿರು. ಇವನು ಯಾವಾಗಲೂ ಯುದ್ಧದಲ್ಲಿ ನನ್ನೊಡನೆ ಸ್ಪರ್ಧಿಸುತ್ತಾನೆ.
04050017a ಯಸ್ತು ನೀಲಾನುಸಾರೇಣ ಪಂಚತಾರೇಣ ಕೇತುನಾ।
04050017c ಹಸ್ತಾವಾಪೀ ಬೃಹದ್ಧನ್ವಾ ರಥೇ ತಿಷ್ಠತಿ ವೀರ್ಯವಾನ್।।
ಇವನು ನೀಲಿಬಣ್ಣದ ಐದು ನಕ್ಷತ್ರಗಳ ಬಾವುಟವುಳ್ಳವನು. ದೊಡ್ಡ ಬಿಲ್ಲನ್ನು ಕೈಯಲ್ಲಿ ಹಿಡಿದು ರಥದಲ್ಲಿ ಕುಳಿತ ಪರಾಕ್ರಮಿ.
04050018a ಯಸ್ಯ ತಾರಾರ್ಕಚಿತ್ರೋಽಸೌ ರಥೇ ಧ್ವಜವರಃ ಸ್ಥಿತಃ।
04050018c ಯಸ್ಯೈತತ್ಪಾಂಡುರಂ ಚತ್ರಂ ವಿಮಲಂ ಮೂರ್ಧ್ನಿ ತಿಷ್ಠತಿ।।
ಇವನ ರಥದ ಮೇಲೆ ಸೂರ್ಯ ಮತ್ತು ನಕ್ಷತ್ರಗಳ ಚಿತ್ರವುಳ್ಳ ಶ್ರೇಷ್ಠ ಧ್ವಜವಿದೆ. ಇವನ ತಲೆಯ ಮೇಲೆ ವಿಮಲ ಬೆಳ್ಗೊಡೆಯಿದೆ.
04050019a ಮಹತೋ ರಥವಂಶಸ್ಯ ನಾನಾಧ್ವಜಪತಾಕಿನಃ।
04050019c ಬಲಾಹಕಾಗ್ರೇ ಸೂರ್ಯೋ ವಾ ಯ ಏಷ ಪ್ರಮುಖೇ ಸ್ಥಿತಃ।।
ಇವನು ಮೋಡಗಳ ಮುಂದೆ ನಿಂತ ಸೂರ್ಯನೆಂಬಂತೆ ನಾನಾ ಧ್ವಜಪತಾಕೆಗಳಿಂದ ಕೂಡಿದ ದೊಡ್ಡ ರಥಸಮೂಹದ ಮುಂದೆ ನಿಂತಿದ್ದಾನೆ.
04050020a ಹೈಮಂ ಚಂದ್ರಾರ್ಕಸಂಕಾಶಂ ಕವಚಂ ಯಸ್ಯ ದೃಶ್ಯತೇ।
04050020c ಜಾತರೂಪಶಿರಸ್ತ್ರಾಣಸ್ತ್ರಾಸಯನ್ನಿವ ಮೇ ಮನಃ।।
ಇವನ ಕವಚವು ಸೂರ್ಯ-ಚಂದ್ರರಂತೆ ಹೊಳೆಯುತ್ತಿದೆ. ಇವನು ಚಿನ್ನದ ತಲೆಗಾಪನ್ನುಳ್ಳವನು. ನನ್ನ ಮನಸ್ಸಿಗೆ ಅಂಜಿಕೆಯನ್ನುಂಟುಮಾಡುತ್ತಿದ್ದಾನೆ.
04050021a ಏಷ ಶಾಂತನವೋ ಭೀಷ್ಮಃ ಸರ್ವೇಷಾಂ ನಃ ಪಿತಾಮಹಃ।
04050021c ರಾಜಶ್ರಿಯಾವಬದ್ಧಸ್ತು ದುರ್ಯೋಧನವಶಾನುಗಃ।।
ಇವನೇ ಶಂತನುಪುತ್ರ ಭೀಷ್ಮ. ನಮ್ಮೆಲ್ಲರ ಅಜ್ಜ. ರಾಜೈಶ್ವರ್ಯಕ್ಕೆ ಕಟ್ಟುಬಿದ್ದು ದುರ್ಯೋಧನನ ವಶವರ್ತಿಯಾಗಿದ್ದಾನೆ.
04050022a ಪಶ್ಚಾದೇಷ ಪ್ರಯಾತವ್ಯೋ ನ ಮೇ ವಿಘ್ನಕರೋ ಭವೇತ್।
04050022c ಏತೇನ ಯುಧ್ಯಮಾನಸ್ಯ ಯತ್ತಃ ಸಂಯಚ್ಛ ಮೇ ಹಯಾನ್।।
ಕಡೆಯಲ್ಲಿ ಇವನ ಬಳಿ ಹೋಗಬೇಕು. ಏಕೆಂದರೆ ಇವನಿಂದ ನನಗೆ ವಿಘ್ನವಾಗಬಾರದು. ಇವನೊಡನೆ ಯುದ್ಧಮಾಡುವಾಗ ನನ್ನ ಕುದುರೆಗಳನ್ನು ಎಚ್ಚರಿಕೆಯಿಂದ ನಡೆಸು.”
04050023a ತತೋಽಭ್ಯವಹದವ್ಯಗ್ರೋ ವೈರಾಟಿಃ ಸವ್ಯಸಾಚಿನಂ।
04050023c ಯತ್ರಾತಿಷ್ಠತ್ಕೃಪೋ ರಾಜನ್ಯೋತ್ಸ್ಯಮಾನೋ ಧನಂಜಯಂ।।
ರಾಜ! ಅನಂತರ ಉತ್ತರನು ಉದ್ವೇಗವಿಲ್ಲದೇ ಸವ್ಯಸಾಚಿ ಧನಂಜಯನನ್ನು ಯುದ್ಧಮಾಡಲು ಉತ್ಸುಕನಾಗಿ ನಿಂತಿದ್ದ ಕೃಪನಲ್ಲಿಗೆ ಕರೆದೊಯ್ದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಪಂಚಾಶತ್ತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಐವತ್ತನೆಯ ಅಧ್ಯಾಯವು.