049 ಉತ್ತರಗೋಗ್ರಹೇ ಕರ್ಣಾಪಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ಗೋಹರಣ ಪರ್ವ

ಅಧ್ಯಾಯ 49

ಸಾರ

ಕುರುಸೇನೆಯ ಮಧ್ಯ ಪ್ರವೇಶಿಸಿ ಅರ್ಜುನನು ಧ್ವಂಸಗೊಳಿಸುತ್ತಾ, ಕರ್ಣನನ್ನು ಪಲಾಯನಗೈಯುವಂತೆ ಮಾಡಿದುದು (1-23).

04049001 ವೈಶಂಪಾಯನ ಉವಾಚ।
04049001a ಸ ಶತ್ರುಸೇನಾಂ ತರಸಾ ಪ್ರಣುದ್ಯ। ಗಾಸ್ತಾ ವಿಜಿತ್ಯಾಥ ಧನುರ್ಧರಾಗ್ರ್ಯಃ।
04049001c ದುರ್ಯೋಧನಾಯಾಭಿಮುಖಂ ಪ್ರಯಾತೋ। ಭೂಯೋಽರ್ಜುನಃ ಪ್ರಿಯಮಾಜೌ ಚಿಕೀರ್ಷನ್।।

ವೈಶಂಪಾಯನನು ಹೇಳಿದನು: “ಧನುರ್ಧರರಲ್ಲಿ ಶ್ರೇಷ್ಠ ಆ ಅರ್ಜುನನು ಶತ್ರುಸೈನ್ಯವನ್ನು ಕೂಡಲೆ ಚೆಲ್ಲಾಪಿಲ್ಲಿಮಾಡಿ ಆ ಗೋವುಗಳನ್ನು ಗೆದ್ದು ಅನಂತರ ಮತ್ತೆ ಯುದ್ಧದಲ್ಲಿ ಪ್ರಿಯವಾದುದನ್ನು ಮಾಡಬಯಸಿ, ದುರ್ಯೋಧನನತ್ತ ಹೊರಟನು.

04049002a ಗೋಷು ಪ್ರಯಾತಾಸು ಜವೇನ ಮತ್ಸ್ಯಾನ್। ಕಿರೀಟಿನಂ ಕೃತಕಾರ್ಯಂ ಚ ಮತ್ವಾ।
04049002c ದುರ್ಯೋಧನಾಯಾಭಿಮುಖಂ ಪ್ರಯಾಂತಂ। ಕುರುಪ್ರವೀರಾಃ ಸಹಸಾಭಿಪೇತುಃ।।

ಗೋವುಗಳು ವೇಗವಾಗಿ ಮತ್ಸ್ಯನಗರದತ್ತ ಹೋಗುತ್ತಿರಲು ಅರ್ಜುನನು ಕೃತಕೃತ್ಯನಾದನೆಂದು ತಿಳಿದು ಕುರುವೀರರು ದುರ್ಯೋಧನನತ್ತ ಹೋಗುತ್ತಿದ್ದ ಅವನ ಮೇಲೆ ಥಟ್ಟನೆ ಎರಗಿದರು.

04049003a ತೇಷಾಮನೀಕಾನಿ ಬಹೂನಿ ಗಾಢಂ। ವ್ಯೂಢಾನಿ ದೃಷ್ಟ್ವಾ ಬಹುಲಧ್ವಜಾನಿ।
04049003c ಮತ್ಸ್ಯಸ್ಯ ಪುತ್ರಂ ದ್ವಿಷತಾಂ ನಿಹಂತಾ। ವೈರಾಟಿಮಾಮಂತ್ರ್ಯ ತತೋಽಭ್ಯುವಾಚ।।

ಆಗ ದಟ್ಟವಾಗಿ ವ್ಯೂಹಗೊಂಡಿದ್ದ ಬಹಳ ಬಾವುಟಗಳಿಂದ ಕೂಡಿದ್ದ ಅವರ ಬಹುಸೇನೆಯನ್ನು ನೋಡಿ ಶತ್ರುನಾಶಕ ಅರ್ಜುನನು ಮತ್ಸ್ಯರಾಜ ವಿರಾಟನ ಮಗನನ್ನು ಕುರಿತು ಹೀಗೆಂದನು:

04049004a ಏತೇನ ತೂರ್ಣಂ ಪ್ರತಿಪಾದಯೇಮಾಂ। ಶ್ವೇತಾನ್ ಹಯಾನ್ಕಾಂಚನರಶ್ಮಿಯೋಕ್ತ್ರಾನ್।
04049004c ಜವೇನ ಸರ್ವೇಣ ಕುರು ಪ್ರಯತ್ನಂ। ಆಸಾದಯೈತದ್ರಥಸಿಂಹವೃಂದಂ।।

“ಚಿನ್ನದ ಕಡಿವಾಣಗಳನ್ನು ಬಿಗಿದ ಈ ಕುದುರೆಗಳನ್ನು ಇದೇ ಮಾರ್ಗದಲ್ಲಿ ವೇಗವಾಗಿ ಓಡಿಸು. ಸರ್ವ ವೇಗದಿಂದಲೂ ಪ್ರಯತ್ನಿಸು. ಆ ರಥಿಕಸಿಂಹ ಸಮೂಹವನ್ನು ಹಿಡಿ.

04049005a ಗಜೋ ಗಜೇನೇವ ಮಯಾ ದುರಾತ್ಮಾ। ಯೋ ಯೋದ್ಧುಮಾಕಾಮ್ಕ್ಷತಿ ಸೂತಪುತ್ರಃ।
04049005c ತಮೇವ ಮಾಂ ಪ್ರಾಪಯ ರಾಜಪುತ್ರ। ದುರ್ಯೋಧನಾಪಾಶ್ರಯಜಾತದರ್ಪಂ।।

ರಾಜಪುತ್ರ! ಆನೆಯು ಆನೆಯೊಡನೆ ಹೋರಾಡಬಯಸುವಂತೆ ನನ್ನೊಡನೆ ಹೋರಾಡಬಯಸುವ, ದುರ್ಯೋಧನನ ಆಶ್ರಯದಿಂದ ದರ್ಪಿಷ್ಠನಾಗಿರುವ, ಆ ದುರಾತ್ಮ ಕರ್ಣನಲ್ಲಿಗೇ ನನ್ನನ್ನು ಕರೆದೊಯ್ಯಿ.”

04049006a ಸ ತೈರ್ಹಯೈರ್ವಾತಜವೈರ್ಬೃಹದ್ಭಿಃ। ಪುತ್ರೋ ವಿರಾಟಸ್ಯ ಸುವರ್ಣಕಕ್ಷ್ಯೈಃ।
04049006c ವಿಧ್ವಂಸಯಂಸ್ತದ್ರಥಿನಾಮನೀಕಂ। ತತೋಽವಹತ್ಪಾಂಡವಮಾಜಿಮಧ್ಯೇ।।

ವಿರಾಟಪುತ್ರನು ಗಾಳಿಯ ವೇಗವನ್ನುಳ್ಳ, ಚಿನ್ನದ ಜೀನುಗಳನ್ನು ಹೊದಿಸಿದ ದೊಡ್ಡ ಕುದುರೆಗಳಿಂದ ಆ ರಥಿಕರ ಸೇನೆಯನ್ನು ಧ್ವಂಸಮಾಡಿ ಆಮೇಲೆ ಅರ್ಜುನನನ್ನು ರಣರಂಗದ ಮಧ್ಯಕ್ಕೆ ಒಯ್ದನು.

04049007a ತಂ ಚಿತ್ರಸೇನೋ ವಿಶಿಖೈರ್ವಿಪಾಠೈಃ। ಸಂಗ್ರಾಮಜಿಚ್ಚತ್ರುಸಹೋ ಜಯಶ್ಚ।
04049007c ಪ್ರತ್ಯುದ್ಯಯುರ್ಭಾರತಮಾಪತಂತಂ। ಮಹಾರಥಾಃ ಕರ್ಣಮಭೀಪ್ಸಮಾನಾಃ।।

ಚಿತ್ರಸೇನ, ಸಂಗ್ರಾಮಜಿತ್, ಶತ್ರುಸಹ, ಜಯ - ಈ ಮಹಾರಥರು ಕರ್ಣನಿಗೆ ನೆರವಾಗ ಬಯಸಿ ಮೇಲೆ ಬೀಳುತ್ತಿದ್ದ ಅರ್ಜುನನತ್ತ ವಿಶಿಖ ವಿಪಾಠಗಳೆಂಬ ಬಾಣಗಳನ್ನು ಹಿಡಿದು ಧಾವಿಸಿದರು.

04049008a ತತಃ ಸ ತೇಷಾಂ ಪುರುಷಪ್ರವೀರಃ। ಶರಾಸನಾರ್ಚಿಃ ಶರವೇಗತಾಪಃ।
04049008c ವ್ರಾತಾನ್ರಥಾನಾಮದಹತ್ಸ ಮನ್ಯುರ್। ವನಂ ಯಥಾಗ್ನಿಃ ಕುರುಪುಂಗವಾನಾಂ।।

ಆ ಪುರುಷಶ್ರೇಷ್ಠನು ಕೋಪಗೊಂಡು ಬಿಲ್ಲೆಂಬ ಬೆಂಕಿಯಿಂದಲೂ ಶರವೇಗವೆಂಬ ತಾಪದಿಂದಲೂ ಕೂಡಿದವನಾಗಿ ಅಗ್ನಿಯು ವನವನ್ನು ಸುಡುವಂತೆ ಕುರುಶ್ರೇಷ್ಠರ ರಥಸಮೂಹವನ್ನು ಸುಟ್ಟುಹಾಕಿದನು.

04049009a ತಸ್ಮಿಂಸ್ತು ಯುದ್ಧೇ ತುಮುಲೇ ಪ್ರವೃತ್ತೇ। ಪಾರ್ಥಂ ವಿಕರ್ಣೋಽತಿರಥಂ ರಥೇನ।
04049009c ವಿಪಾಠವರ್ಷೇಣ ಕುರುಪ್ರವೀರೋ। ಭೀಮೇನ ಭೀಮಾನುಜಮಾಸಸಾದ।।

ಅನಂತರ ತುಮುಲ ಯುದ್ಧವು ಮೊದಲಾಗಲು ಕುರುವೀರ ವಿಕರ್ಣನು ರಥದ ಮೇಲೆ ಕುಳಿತು ಭಯಂಕರ ಕವಲುಬಾಣಗಳ ಮಳೆಗರೆಯುತ್ತ ಅತಿರಥ ಅರ್ಜುನನನ್ನು ಸಮೀಪಿಸಿದನು.

04049010a ತತೋ ವಿಕರ್ಣಸ್ಯ ಧನುರ್ವಿಕೃಷ್ಯ। ಜಾಂಬೂನದಾಗ್ರ್ಯೋಪಚಿತಂ ದೃಢಜ್ಯಂ।
04049010c ಅಪಾತಯದ್ಧ್ವಜಮಸ್ಯ ಪ್ರಮಥ್ಯ। ಚಿನ್ನಧ್ವಜಃ ಸೋಽಪ್ಯಪಯಾಜ್ಜವೇನ।।

ಆಗ ಅರ್ಜುನನು ದೃಢ ಹೆದೆಯಿಂದಲೂ ಚಿನ್ನದ ತುದಿಗಳಿಂದಲೂ ಕೂಡಿದ ವಿಕರ್ಣನ ಬಿಲ್ಲನ್ನು ಸೆಳೆದುಕೊಂಡು ಅವನ ಬಾವುಟವನ್ನು ಚಿಂದಿಮಾಡಿ ಬೀಳಿಸಿದನು. ಬಾವುಟವು ಚಿಂದಿಯಾಗಲು ಆ ವಿಕರ್ಣನು ವೇಗವಾಗಿ ಪಲಾಯನಮಾಡಿದನು.

04049011a ತಂ ಶಾತ್ರವಾಣಾಂ ಗಣಬಾಧಿತಾರಂ। ಕರ್ಮಾಣಿ ಕುರ್ವಾಣಮಮಾನುಷಾಣಿ।
04049011c ಶತ್ರುಂತಪಃ ಕೋಪಮಮೃಷ್ಯಮಾಣಃ। ಸಮರ್ಪಯತ್ಕೂರ್ಮನಖೇನ ಪಾರ್ಥಂ।।

ಆಮೇಲೆ ಶತ್ರುಂತಪನು ಕೋಪವನ್ನು ತಡೆಯಲಾರದೆ ಶತ್ರುಗಣಬಾಧಕ ಅತಿಮಾನುಷ ಕಾರ್ಯಗಳನ್ನು ಮಾಡಿದ ಆ ಪಾರ್ಥನ ಮೇಲೆ ಕೂರ್ಮನಖ ಬಾಣಗಳನ್ನು ಪ್ರಯೋಗಿಸತೊಡಗಿದನು.

04049012a ಸ ತೇನ ರಾಜ್ಞಾತಿರಥೇನ ವಿದ್ಧೋ। ವಿಗಾಹಮಾನೋ ಧ್ವಜಿನೀಂ ಕುರೂಣಾಂ।
04049012c ಶತ್ರುಂತಪಂ ಪಂಚಭಿರಾಶು ವಿದ್ಧ್ವಾ। ತತೋಽಸ್ಯ ಸೂತಂ ದಶಭಿರ್ಜಘಾನ।।

ಆ ಅತಿರಥ ರಾಜನಿಂದ ಹೊಡೆಯಲ್ಪಟ್ಟು, ಕುರುಸೈನ್ಯದಲ್ಲಿ ಮುಳುಗಿಹೋದ ಅರ್ಜುನನು ಶತ್ರುಂತಪನನ್ನು ಬೇಗ ಐದು ಬಾಣಗಳಿಂದ ಭೇದಿಸಿ ಅನಂತರ ಅವನ ಸಾರಥಿಯನ್ನು ಹತ್ತು ಬಾಣಗಳಿಂದ ಕೊಂದನು.

04049013a ತತಃ ಸ ವಿದ್ಧೋ ಭರತರ್ಷಭೇಣ। ಬಾಣೇನ ಗಾತ್ರಾವರಣಾತಿಗೇನ।
04049013c ಗತಾಸುರಾಜೌ ನಿಪಪಾತ ಭೂಮೌ। ನಗೋ ನಗಾಗ್ರಾದಿವ ವಾತರುಗ್ಣಃ।।

ಆಗ ಭರತಶ್ರೇಷ್ಠ ಅರ್ಜುನನು ಕವಚವನ್ನು ಭೇದಿಸಬಲ್ಲ ಬಾಣದಿಂದ ಆ ವಿಕರ್ಣನನ್ನು ಹೊಡೆಯಲು ಬಿರುಗಾಳಿಯಿಂದ ಮುರಿದು ಬೆಟ್ಟದ ತುದಿಯಿಂದ ಉರುಳುವ ಮರದಂತೆ ಅವನು ರಣರಂಗದಲ್ಲಿ ನೆಲದ ಮೇಲೆ ಸತ್ತುಬಿದ್ದನು.

04049014a ರಥರ್ಷಭಾಸ್ತೇ ತು ರಥರ್ಷಭೇಣ। ವೀರಾ ರಣೇ ವೀರತರೇಣ ಭಗ್ನಾಃ।
04049014c ಚಕಂಪಿರೇ ವಾತವಶೇನ ಕಾಲೇ। ಪ್ರಕಂಪಿತಾನೀವ ಮಹಾವನಾನಿ।।

ಆ ರಥಿಕಶ್ರೇಷ್ಠ ವೀರರು ಆ ರಥಿಕಶ್ರೇಷ್ಠ ವೀರತರನಿಂದ ಯುದ್ಧದಲ್ಲಿ ಭಗ್ನರಾಗಿ ಪ್ರಳಯ ಕಾಲದ ಬಿರುಗಾಳಿಗೆ ಸಿಕ್ಕಿ ಕಂಪಿಸುವ ಮಹಾ ವನಗಳಂತೆ ಕಂಪಿಸಿದರು.

04049015a ಹತಾಸ್ತು ಪಾರ್ಥೇನ ನರಪ್ರವೀರಾ। ಭೂಮೌ ಯುವಾನಃ ಸುಷುಪುಃ ಸುವೇಷಾಃ।
04049015c ವಸುಪ್ರದಾ ವಾಸವತುಲ್ಯವೀರ್ಯಾಃ। ಪರಾಜಿತಾ ವಾಸವಜೇನ ಸಂಖ್ಯೇ।
04049015e ಸುವರ್ಣಕಾರ್ಷ್ಣಾಯಸವರ್ಮನದ್ಧಾ। ನಾಗಾ ಯಥಾ ಹೈಮವತಾಃ ಪ್ರವೃದ್ಧಾಃ।।

ಐಶ್ವರ್ಯವನ್ನು ಕೊಡತಕ್ಕವರೂ, ದೇವೇಂದ್ರಸಮಾನ ವೀರ್ಯವುಳ್ಳವರೂ, ಸುವರ್ಣಖಚಿತ ಉಕ್ಕಿನ ಕವಚಗಳನ್ನು ತೊಟ್ಟವರೂ, ಒಳ್ಳೆಯ ವಸ್ತ್ರಧರಿಸಿದವರೂ, ವೀರಶ್ರೇಷ್ಠರೂ ಆದ ಆ ತರುಣರು ದೇವೇಂದ್ರಪುತ್ರ ಪಾರ್ಥನಿಂದ ಯುದ್ಧದಲ್ಲಿ ಪರಾಜಿತರೂ ಹತರೂ ಆಗಿ ಹಿಮಾಲಯದ ದೊಡ್ಡ ಆನೆಗಳಂತೆ ನೆಲದ ಮೇಲೊರಗಿದರು.

04049016a ತಥಾ ಸ ಶತ್ರೂನ್ಸಮರೇ ವಿನಿಘ್ನನ್। ಗಾಂಡೀವಧನ್ವಾ ಪುರುಷಪ್ರವೀರಃ।
04049016c ಚಚಾರ ಸಂಖ್ಯೇ ಪ್ರದಿಶೋ ದಿಶಶ್ಚ। ದಹನ್ನಿವಾಗ್ನಿರ್ವನಮಾತಪಾಂತೇ।।

ಹಾಗೆ ಆ ಗಾಂಡೀವಧನುರ್ಧಾರಿ ವೀರಶ್ರೇಷ್ಠ ಅರ್ಜುನನು ಯುದ್ಧದಲ್ಲಿ ಶತ್ರುಗಳನ್ನು ಕೊಲ್ಲುತ್ತ ಬೇಸಗೆಯ ಕಡೆಯಲ್ಲಿ ವನವನ್ನು ಸುಡುವ ಬೆಂಕಿಯಂತೆ ರಣರಂಗದಲ್ಲಿ ದಿಕ್ಕು ದಿಕ್ಕುಗಳಲ್ಲಿಯೂ ಸಂಚರಿಸುತ್ತಿದ್ದನು.

04049017a ಪ್ರಕೀರ್ಣಪರ್ಣಾನಿ ಯಥಾ ವಸಂತೇ। ವಿಶಾತಯಿತ್ವಾತ್ಯನಿಲೋ ನುದನ್ಖೇ।
04049017c ತಥಾ ಸಪತ್ನಾನ್ವಿಕಿರನ್ಕಿರೀಟೀ। ಚಚಾರ ಸಂಖ್ಯೇಽತಿರಥೋ ರಥೇನ।।

ವಸಂತದಲ್ಲಿ ಬಿರುಗಾಳಿಯು ಉದುರಿದ ಎಲೆಗಳನ್ನು ಆಗಸಕ್ಕೆ ಹಾರಿಸಿ ಚದುರಿಸುವಂತೆ ಆ ಅತಿರಥ ಅರ್ಜುನನು ರಥದಲ್ಲಿ ಕುಳಿತು ಶತ್ರುಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಾ ರಣರಂಗದಲ್ಲಿ ಸಂಚರಿಸುತ್ತಿದ್ದನು.

04049018a ಶೋಣಾಶ್ವವಾಹಸ್ಯ ಹಯಾನ್ನಿಹತ್ಯ। ವೈಕರ್ತನಭ್ರಾತುರದೀನಸತ್ತ್ವಃ।
04049018c ಏಕೇನ ಸಂಗ್ರಾಮಜಿತಃ ಶರೇಣ। ಶಿರೋ ಜಹಾರಾಥ ಕಿರೀಟಮಾಲೀ।।

ಆ ಮಹಾಸತ್ವ ಕಿರೀಟಧಾರಿ ಅರ್ಜುನನು ಕರ್ಣನ ಸೋದರ ಸಂಗ್ರಾಮಜಿತ್ತಿನ ಕೆಂಪು ರಥಕ್ಕೆ ಕಟ್ಟಿದ ಕುದುರೆಗಳನ್ನು ಕೊಂದು, ಅನಂತರ ಅವನ ತಲೆಯನ್ನು ಒಂದೇ ಬಾಣದಿಂದ ಹಾರಿಸಿದನು.

04049019a ತಸ್ಮಿನ್ ಹತೇ ಭ್ರಾತರಿ ಸೂತಪುತ್ರೋ। ವೈಕರ್ತನೋ ವೀರ್ಯಮಥಾದದಾನಃ।
04049019c ಪ್ರಗೃಹ್ಯ ದಂತಾವಿವ ನಾಗರಾಜೋ। ಮಹರ್ಷಭಂ ವ್ಯಾಘ್ರ ಇವಾಭ್ಯಧಾವತ್।।

ತನ್ನ ಆ ಸೋದರನು ಹತನಾಗಲು ಸೂರ್ಯಪುತ್ರ ಕರ್ಣನು ತನ್ನ ಬಲವನ್ನು ಒಗ್ಗೂಡಿಸಿಕೊಂಡು ದಂತಗಳನ್ನು ಮುಂಚಾಚಿ ನುಗ್ಗುವ ಗಜರಾಜನಂತೆ, ದೊಡ್ಡ ಗೂಳಿಯತ್ತ ಧಾವಿಸುವ ಹುಲಿಯಂತೆ ಅರ್ಜುನನತ್ತ ಧಾವಿಸಿದನು.

04049020a ಸ ಪಾಂಡವಂ ದ್ವಾದಶಭಿಃ ಪೃಷತ್ಕೈರ್। ವೈಕರ್ತನಃ ಶೀಘ್ರಮುಪಾಜಘಾನ।
04049020c ವಿವ್ಯಾಧ ಗಾತ್ರೇಷು ಹಯಾಂಶ್ಚ ಸರ್ವಾನ್। ವಿರಾಟಪುತ್ರಂ ಚ ಶರೈರ್ನಿಜಘ್ನೇ।।

ಕರ್ಣನು ಅರ್ಜುನನನ್ನು ಹನ್ನೆರಡು ಬಾಣಗಳಿಂದ ಶೀಘ್ರವಾಗಿ ಹೊಡೆದನು. ಎಲ್ಲ ಕುದುರೆಗಳ ಶರೀರಗಳಿಗೂ ಬಾಣಗಳಿಂದ ಹೊಡೆದನು. ಉತ್ತರನನ್ನೂ ಬಾಣಗಳಿಂದ ಘಾತಿಸಿದನು.

04049021a ಸ ಹಸ್ತಿನೇವಾಭಿಹತೋ ಗಜೇಂದ್ರಃ। ಪ್ರಗೃಹ್ಯ ಭಲ್ಲಾನ್ನಿಶಿತಾನ್ನಿಷಂಗಾತ್।
04049021c ಆಕರ್ಣಪೂರ್ಣಂ ಚ ಧನುರ್ವಿಕೃಷ್ಯ। ವಿವ್ಯಾಧ ಬಾಣೈರಥ ಸೂತಪುತ್ರಂ।।

ಅರ್ಜುನನು ಸಾಮಾನ್ಯ ಆನೆಯಿಂದ ಪೆಟ್ಟುತಿಂದ ಗಜೇಂದ್ರನಂತೆ ಬತ್ತಳಿಕೆಯಿಂದ ಹರಿತ ಭಲ್ಲವೆಂಬ ಬಾಣಗಳನ್ನು ತೆಗೆದು ಕಿವಿಯವರೆಗೂ ಬಿಲ್ಲನ್ನೆಳೆದು ಕರ್ಣನನ್ನು ಆ ಬಾಣಗಳಿಂದ ಹೊಡೆದನು.

04049022a ಅಥಾಸ್ಯ ಬಾಹೂರುಶಿರೋಲಲಾಟಂ। ಗ್ರೀವಾಂ ರಥಾಂಗಾನಿ ಪರಾವಮರ್ದೀ।
04049022c ಸ್ಥಿತಸ್ಯ ಬಾಣೈರ್ಯುಧಿ ನಿರ್ಬಿಭೇದ। ಗಾಂಡೀವಮುಕ್ತೈರಶನಿಪ್ರಕಾಶೈಃ।।

ಅನಂತರ ಆ ಶತ್ರುನಾಶಕನು ಯುದ್ಧದಲ್ಲಿ ಸಿಡಿಲಿನ ಕಾಂತಿಯ ಬಾಣಗಳನ್ನು ಗಾಂಡೀವದಿಂದ ಬಿಟ್ಟು ರಣದಲ್ಲಿದ್ದ ಕರ್ಣನ ತೋಳು, ತೊಡೆ, ತಲೆ, ಹಣೆ, ಕೊರಳುಗಳನ್ನೂ, ರಥದ ಚಕ್ರಗಳನ್ನೂ ಭೇದಿಸಿದನು.

04049023a ಸ ಪಾರ್ಥಮುಕ್ತೈರ್ವಿಶಿಖೈಃ ಪ್ರಣುನ್ನೋ। ಗಜೋ ಗಜೇನೇವ ಜಿತಸ್ತರಸ್ವೀ।
04049023c ವಿಹಾಯ ಸಂಗ್ರಾಮಶಿರಃ ಪ್ರಯಾತೋ। ವೈಕರ್ತನಃ ಪಾಂಡವಬಾಣತಪ್ತಃ।।

ಪಾರ್ಥನು ಬಿಟ್ಟ ಬಾಣಗಳಿಂದ ಅಲ್ಲಾಡಿಹೋದ, ಪಾಂಡವ ಬಾಣತಪ್ತ ಕರ್ಣನು ಆನೆಗೆ ಸೋತುಹೋದ ಆನೆಯಂತೆ ಯುದ್ಧದ ಮಂಚೂಣಿಯನ್ನು ತೊರೆದು ಬೇಗ ಹೊರಟುಹೋದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಕರ್ಣಾಪಯಾನೇ ಏಕೋನಪಂಚಾಶತ್ತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಕರ್ಣಾಪಯಾನದಲ್ಲಿ ನಲ್ವತ್ತೊಂಭತ್ತನೆಯ ಅಧ್ಯಾಯವು.