048 ಉತ್ತರಗೋಗ್ರಹೇ ಗೋನಿವರ್ತನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ಗೋಹರಣ ಪರ್ವ

ಅಧ್ಯಾಯ 48

ಸಾರ

ಅರ್ಜುನನು ಕುರುಸೇನೆಯಲ್ಲಿ ದುರ್ಯೋಧನನನ್ನು ಕಾಣದೇ, ಅವನು ಗೋವುಗಳನ್ನು ಕರೆದುಕೊಂಡು ಹಸ್ತಿನಾವತಿಗೆ ಹಿಂದಿರುಗಿ ಹೋಗುತ್ತಿರುವುದನ್ನು ನೋಡಿ ಅವನ ಮೇಲೆ ಧಾಳಿಮಾಡಿ ಗೋವುಗಳನ್ನು ವಿರಾಟನಗರಿಯ ಕಡೆ ಹಿಂದಿರುಗುವಂತೆ ಮಾಡಿದುದು (1-23).

04048001 ವೈಶಂಪಾಯನ ಉವಾಚ।
04048001a ತಥಾ ವ್ಯೂಢೇಷ್ವನೀಕೇಷು ಕೌರವೇಯೈರ್ಮಹಾರಥೈಃ।
04048001c ಉಪಾಯಾದರ್ಜುನಸ್ತೂರ್ಣಂ ರಥಘೋಷೇಣ ನಾದಯನ್।।

ವೈಶಂಪಾಯನನು ಹೇಳಿದನು: “ಹಾಗೆ ಮಹಾರಥಿ ಕೌರವರು ಸೈನ್ಯವ್ಯೂಹವನ್ನು ರಚಿಸಲು ಅರ್ಜುನನು ರಥಘೋಷದಿಂದ ದಿಕ್ಕುಗಳನ್ನು ಮೊಳಗಿಸುತ್ತಾ ಶೀಘ್ರವಾಗಿ ಹತ್ತಿರಕ್ಕೆ ಬಂದೇಬಿಟ್ಟನು.

04048002a ದದೃಶುಸ್ತೇ ಧ್ವಜಾಗ್ರಂ ವೈ ಶುಶ್ರುವುಶ್ಚ ರಥಸ್ವನಂ।
04048002c ದೋಧೂಯಮಾನಸ್ಯ ಭೃಶಂ ಗಾಂಡೀವಸ್ಯ ಚ ನಿಸ್ವನಂ।।

ಅವರು ಅವನ ಬಾವುಟದ ತುದಿಯನ್ನು ನೋಡಿದರು ಮತ್ತು ರಥದ ಶಬ್ಧವನ್ನೂ. ವಿಶೇಷವಾಗಿ ಮಿಡಿಯುತ್ತಿದ್ದ ಗಾಂಡೀವದ ಶಬ್ಧವನ್ನೂ ಕೇಳಿದರು.

04048003a ತತಸ್ತತ್ಸರ್ವಮಾಲೋಕ್ಯ ದ್ರೋಣೋ ವಚನಮಬ್ರವೀತ್।
04048003c ಮಹಾರಥಮನುಪ್ರಾಪ್ತಂ ದೃಷ್ಟ್ವಾ ಗಾಂಡೀವಧನ್ವಿನಂ।।

ಆಗ ದ್ರೋಣನು ಅದನ್ನೆಲ್ಲ ನೋಡಿ ಗಾಂಡೀವಧನುರ್ಧರ ಮಹಾರಥನು ಬಂದಿದ್ದುದನ್ನು ಕಂಡು ಈ ಮಾತನ್ನಾಡಿದನು:

04048004a ಏತದ್ಧ್ವಜಾಗ್ರಂ ಪಾರ್ಥಸ್ಯ ದೂರತಃ ಸಂಪ್ರಕಾಶತೇ।
04048004c ಏಷ ಘೋಷಃ ಸಜಲದೋ ರೋರವೀತಿ ಚ ವಾನರಃ।।

“ಪಾರ್ಥನ ಬಾವುಟದ ತುದಿ ಅದೋ ಅಲ್ಲಿ ಹೊಳೆಯುತ್ತಿದೆ. ಈ ರಥದ ಶಬ್ಧ ಮೋಡದ ಗುಡುಗಿನಂತಿದೆ. ವಾನರನು ಗರ್ಜಿಸುತ್ತಿದ್ದಾನೆ.

04048005a ಏಷ ತಿಷ್ಠನ್ರಥಶ್ರೇಷ್ಠೋ ರಥೇ ರಥವರಪ್ರಣುತ್।
04048005c ಉತ್ಕರ್ಷತಿ ಧನುಃಶ್ರೇಷ್ಠಂ ಗಾಂಡೀವಮಶನಿಸ್ವನಂ।।

ರಥಿಕರಲ್ಲಿ ಶ್ರೇಷ್ಠ, ರಥನಡೆಸುವವರಲ್ಲಿ ಶ್ರೇಷ್ಠ ಅರ್ಜುನನು ರಥದಲ್ಲಿ ಶ್ರೇಷ್ಠವೂ ಸಿಡಿಲಿನಂತೆ ಧ್ವನಿಯುಳ್ಳದ್ದೂ ಆದ ಗಾಂಡೀವವನ್ನು ಸೆಳೆಯುತ್ತಿದ್ದಾನೆ.

04048006a ಇಮೌ ಹಿ ಬಾಣೌ ಸಹಿತೌ ಪಾದಯೋರ್ಮೇ ವ್ಯವಸ್ಥಿತೌ।
04048006c ಅಪರೌ ಚಾಪ್ಯತಿಕ್ರಾಂತೌ ಕರ್ಣೌ ಸಂಸ್ಪೃಶ್ಯ ಮೇ ಶರೌ।।

ಈ ಎರಡು ಬಾಣಗಳು ಒಟ್ಟಿಗೇ ಬಂದು ನನ್ನ ಪಾದಗಳಲ್ಲಿ ಬೀಳುತ್ತಿವೆ. ಉಳಿದ ಬಾಣಗಳು ನನ್ನ ಕಿವಿಗಳನ್ನು ಸೋಕಿ ಮುಂದೆ ಹೋಗುತ್ತಿವೆ.

04048007a ನಿರುಷ್ಯ ಹಿ ವನೇ ವಾಸಂ ಕೃತ್ವಾ ಕರ್ಮಾತಿಮಾನುಷಂ।
04048007c ಅಭಿವಾದಯತೇ ಪಾರ್ಥಃ ಶ್ರೋತ್ರೇ ಚ ಪರಿಪೃಚ್ಛತಿ।।

ಪಾರ್ಥನು ವನವಾಸವನ್ನು ಮಾಡಿ, ಅತಿಮಾನುಷ ಕಾರ್ಯವನ್ನು ಎಸಗಿ, ನನಗೆ ಅಭಿನಂದಿಸುತ್ತಿದ್ದಾನೆ ಮತ್ತು ಕಿವಿಯಲ್ಲಿ ಕುಶಲವನ್ನು ಕೇಳುತ್ತಿದ್ದಾನೆ.”

04048008 ಅರ್ಜುನ ಉವಾಚ।
04048008a ಇಷುಪಾತೇ ಚ ಸೇನಾಯಾ ಹಯಾನ್ಸಮ್ಯಚ್ಛ ಸಾರಥೇ।
04048008c ಯಾವತ್ಸಮೀಕ್ಷೇ ಸೈನ್ಯೇಽಸ್ಮಿನ್ಕ್ವಾಸೌ ಕುರುಕುಲಾಧಮಃ।।

ಅರ್ಜುನನು ಹೇಳಿದನು: “ಸಾರಥಿ! ನನ್ನ ಬಾಣಗಳು ಸೇನೆಯ ಮೇಲೆ ಬೀಳುವಷ್ಟು ದೂರದಲ್ಲಿ ಕುದುರೆಗಳನ್ನು ಬಿಗಿಹಿಡಿ. ಅಷ್ಟರಲ್ಲಿ ಆ ಕುರುಕುಲಾಧಮನು ಈ ಸೈನ್ಯದಲ್ಲಿ ಎಲ್ಲಿದ್ದಾನೆಂಬುದನ್ನು ನೋಡುತ್ತೇನೆ.

04048009a ಸರ್ವಾನನ್ಯಾನನಾದೃತ್ಯ ದೃಷ್ಟ್ವಾ ತಮತಿಮಾನಿನಂ।
04048009c ತಸ್ಯ ಮೂರ್ಧ್ನಿ ಪತಿಷ್ಯಾಮಿ ತತ ಏತೇ ಪರಾಜಿತಾಃ।।

ಇತರ ಎಲ್ಲರನ್ನೂ ಅಲಕ್ಷಿಸಿ, ಆ ಅತಿ ಅಹಂಕಾರಿಯನ್ನು ಕಂಡು ಅವನ ತಲೆಯ ಮೇಲೆರಗುತ್ತೇನೆ. ಬಳಿಕ ಇವರೆಲ್ಲರೂ ಸೋತಂತೆಯೇ.

04048010a ಏಷ ವ್ಯವಸ್ಥಿತೋ ದ್ರೋಣೋ ದ್ರೌಣಿಶ್ಚ ತದನಂತರಂ।
04048010c ಭೀಷ್ಮಃ ಕೃಪಶ್ಚ ಕರ್ಣಶ್ಚ ಮಹೇಷ್ವಾಸಾ ವ್ಯವಸ್ಥಿತಾಃ।।

ಇಗೋ! ದ್ರೋಣನೂ, ಅನಂತರ ಅಶ್ವತ್ಥಾಮನೂ, ದೊಡ್ಡ ಬಿಲ್ಗಾರರಾದ ಭಿಷ್ಮ, ಕೃಪ, ಕರ್ಣರೂ ಅಣಿಯಾಗಿದ್ದಾರೆ.

04048011a ರಾಜಾನಂ ನಾತ್ರ ಪಶ್ಯಾಮಿ ಗಾಃ ಸಮಾದಾಯ ಗಚ್ಛತಿ।
04048011c ದಕ್ಷಿಣಂ ಮಾರ್ಗಮಾಸ್ಥಾಯ ಶಂಕೇ ಜೀವಪರಾಯಣಃ।।

ಆದರೆ ದೊರೆಯು ಅಲ್ಲಿ ಕಾಣುತ್ತಿಲ್ಲ. ಅವನು ಜೀವದ ಮೇಲಿನ ಆಸೆಯಿಂದ ಹಸುಗಳನ್ನಟ್ಟಿಕೊಂಡು ಬಲಮಾರ್ಗದಲ್ಲಿ ಹೋಗುತ್ತಿದ್ದಾನೆಂದು ನನ್ನ ಸಂದೇಹ.

04048012a ಉತ್ಸೃಜ್ಯೈತದ್ರಥಾನೀಕಂ ಗಚ್ಛ ಯತ್ರ ಸುಯೋಧನಃ।
04048012c ತತ್ರೈವ ಯೋತ್ಸ್ಯೇ ವೈರಾಟೇ ನಾಸ್ತಿ ಯುದ್ಧಂ ನಿರಾಮಿಷಂ।
04048012e ತಂ ಜಿತ್ವಾ ವಿನಿವರ್ತಿಷ್ಯೇ ಗಾಃ ಸಮಾದಾಯ ವೈ ಪುನಃ।।

ಈ ರಥಸೈನ್ಯವನ್ನು ಬಿಟ್ಟು ಸುಯೋಧನನಿರುವಲ್ಲಿಗೆ ನಡೆ. ಉತ್ತರ! ಅಲ್ಲಿಯೇ ನಾನು ಯುದ್ಧ ಮಾಡುತ್ತೇನೆ. ಆಮಿಷವಿಲ್ಲದ ಯುದ್ಧವಿಲ್ಲ. ಅವನನ್ನು ಗೆದ್ದು ಗೋವುಗಳನ್ನು ಹೊಡೆದುಕೊಂಡು ಹಿಂದಿರುಗುತ್ತೇನೆ.””

04048013 ವೈಶಂಪಾಯನ ಉವಾಚ।
04048013a ಏವಮುಕ್ತಃ ಸ ವೈರಾಟಿರ್ಹಯಾನ್ಸಂಯಮ್ಯ ಯತ್ನತಃ।
04048013c ನಿಯಮ್ಯ ಚ ತತೋ ರಶ್ಮೀನ್ಯತ್ರ ತೇ ಕುರುಪುಂಗವಾಃ।
04048013e ಅಚೋದಯತ್ತತೋ ವಾಹಾನ್ಯತೋ ದುರ್ಯೋಧನಸ್ತತಃ।।

ವೈಶಂಪಾಯನನು ಹೇಳಿದನು: “ಅರ್ಜುನನು ಹೀಗೆ ಹೇಳಲು ಉತ್ತರನು ಕಡಿವಾಣಗಳನ್ನು ಬಿಗಿಡಿದು ಕುದುರೆಗಳನ್ನು ಯತ್ನಪೂರ್ವಕವಾಗಿ ನಿಯಂತ್ರಿಸಿದನು. ಅನಂತರ ಆ ಕುರುಶ್ರೇಷ್ಠ ದುರ್ಯೋಧನನಿದ್ದೆಡಗೆ ಕುದುರೆಗಳನ್ನು ಪ್ರಚೋದಿಸಿದನು.

04048014a ಉತ್ಸೃಜ್ಯ ರಥವಂಶಂ ತು ಪ್ರಯಾತೇ ಶ್ವೇತವಾಹನೇ।
04048014c ಅಭಿಪ್ರಾಯಂ ವಿದಿತ್ವಾಸ್ಯ ದ್ರೋಣೋ ವಚನಮಬ್ರವೀತ್।।

ಅರ್ಜುನನು ಆ ರಥಸಮೂಹವನ್ನು ಬಿಟ್ಟು ಹೊರಟುಹೋಗಲು ದ್ರೋಣನು ಅವನ ಅಭಿಪ್ರಾಯವನ್ನು ತಿಳಿದು ಈ ಮಾತನ್ನಾಡಿದನು:

04048015a ನೈಷೋಽಂತರೇಣ ರಾಜಾನಂ ಬೀಭತ್ಸುಃ ಸ್ಥಾತುಮಿಚ್ಛತಿ।
04048015c ತಸ್ಯ ಪಾರ್ಷ್ಣಿಂ ಗ್ರಹೀಷ್ಯಾಮೋ ಜವೇನಾಭಿಪ್ರಯಾಸ್ಯತಃ।।

“ಈ ಅರ್ಜುನನು ರಾಜ ದುರ್ಯೋಧನನನ್ನು ಕಾಣದೇ ನಿಲ್ಲುವುದಿಲ್ಲ. ವೇಗವಾಗಿ ಹೋಗುತ್ತಿರುವ ಅವನ ಬೆನ್ನುಹತ್ತೋಣ.

04048016a ನ ಹ್ಯೇನಮಭಿಸಂಕ್ರುದ್ಧಮೇಕೋ ಯುಧ್ಯೇತ ಸಂಯುಗೇ।
04048016c ಅನ್ಯೋ ದೇವಾತ್ಸಹಸ್ರಾಕ್ಷಾತ್ಕೃಷ್ಣಾದ್ವಾ ದೇವಕೀಸುತಾತ್।।

ಕೋಪಗೊಂಡ ಈ ಅರ್ಜುನನನ್ನು ಯುದ್ಧದಲ್ಲಿ ದೇವೇಂದ್ರ ಅಥವಾ ದೇವಕೀಪುತ್ರ ಕೃಷ್ಣನ ಹೊರತು ಬೇರೆ ಯಾರೂ ಏಕಾಕಿಯಾಗಿ ಎದುರಿಸಲಾರರು.

04048017a ಕಿಂ ನೋ ಗಾವಃ ಕರಿಷ್ಯಂತಿ ಧನಂ ವಾ ವಿಪುಲಂ ತಥಾ।
04048017c ದುರ್ಯೋಧನಃ ಪಾರ್ಥಜಲೇ ಪುರಾ ನೌರಿವ ಮಜ್ಜತಿ।।

ನೌಕೆಯಂತೆ ಮೊದಲು ದುರ್ಯೋಧನನೇ ಪಾರ್ಥನೆಂಬ ಜಲದಲ್ಲಿ ಮುಳುಗಿಹೋದರೆ, ಗೋವುಗಳಿಂದಾಗಲೀ ವಿಪುಲ ಧನದಿಂದಾಗಲೀ ನಮಗೆ ಏನು ಪ್ರಯೋಜನ?”

04048018a ತಥೈವ ಗತ್ವಾ ಬೀಭತ್ಸುರ್ನಾಮ ವಿಶ್ರಾವ್ಯ ಚಾತ್ಮನಃ।
04048018c ಶಲಭೈರಿವ ತಾಂ ಸೇನಾಂ ಶರೈಃ ಶೀಘ್ರಮವಾಕಿರತ್।।

ಅಂತೆಯೇ ಅರ್ಜುನನು ಆ ಎಡೆಗೆ ಹೋಗಿ ತನ್ನ ಹೆಸರನ್ನು ಘೋಷಿಸಿ ಮಿಡತೆಗಳಂತಹ ತನ್ನ ಬಾಣಗಳಿಂದ ಆ ಸೇನೆಯನ್ನು ಬೇಗ ಮುಸುಕಿದನು.

04048019a ಕೀರ್ಯಮಾಣಾಃ ಶರೌಘೈಸ್ತು ಯೋಧಾಸ್ತೇ ಪಾರ್ಥಚೋದಿತೈಃ।
04048019c ನಾಪಶ್ಯನ್ನಾವೃತಾಂ ಭೂಮಿಮಂತರಿಕ್ಷಂ ಚ ಪತ್ರಿಭಿಃ।।

ಪಾರ್ಥನು ಬಿಟ್ಟ ಬಾಣಸಮೂಹದಿಂದ ಮುಚ್ಚಿಹೋದ ಆ ಯೋಧರಿಗೆ ಬಾಣಗಳಿಂದ ಆವೃತವಾದ ಭೂಮಿಯೂ ಆಕಾಶವೂ ಕಾಣದಂತಾದವು.

04048020a ತೇಷಾಂ ನಾತ್ಮನಿನೋ ಯುದ್ಧೇ ನಾಪಯಾನೇಽಭವನ್ಮತಿಃ।
04048020c ಶೀಘ್ರತ್ವಮೇವ ಪಾರ್ಥಸ್ಯ ಪೂಜಯಂತಿ ಸ್ಮ ಚೇತಸಾ।।

ಅವರಿಗೆ ಯುದ್ಧಮಾಡಬೇಕೆಂಬ ಅಥವಾ ಪಲಾಯನ ಮಾಡಬೇಕೆಂಬ ಬುದ್ಧಿಯೇ ಹುಟ್ಟಲಿಲ್ಲ. ಅವರು ಪಾರ್ಥನ ಬಾಣಪ್ರಯೋಗದ ವೇಗವನ್ನು ಮನಃಪೂರ್ವಕವಾಗಿ ಮೆಚ್ಚಿಕೊಂಡರು.

04048021a ತತಃ ಶಂಖಂ ಪ್ರದಧ್ಮೌ ಸ ದ್ವಿಷತಾಂ ಲೋಮಹರ್ಷಣಂ।
04048021c ವಿಸ್ಫಾರ್ಯ ಚ ಧನುಃಶ್ರೇಷ್ಠಂ ಧ್ವಜೇ ಭೂತಾನ್ಯಚೋದಯತ್।।

ಅನಂತರ ಆ ಅರ್ಜುನನು ವೈರಿಗಳಿಗೆ ಪುಳಕವನ್ನುಂಟುಮಾಡುವ ಶಂಖವನ್ನು ಊದಿದನು. ಶ್ರೇಷ್ಠ ಬಿಲ್ಲನ್ನು ಮಿಡಿದು ಧ್ವಜದಲ್ಲಿದ್ದ ಭೂತಗಳನ್ನು ಪ್ರೇರಿಸಿದನು.

04048022a ತಸ್ಯ ಶಂಖಸ್ಯ ಶಬ್ದೇನ ರಥನೇಮಿಸ್ವನೇನ ಚ।
04048022c ಅಮಾನುಷಾಣಾಂ ತೇಷಾಂ ಚ ಭೂತಾನಾಂ ಧ್ವಜವಾಸಿನಾಂ।।
04048023a ಊರ್ಧ್ವಂ ಪುಚ್ಛಾನ್ವಿಧುನ್ವಾನಾ ರೇಭಮಾಣಾಃ ಸಮಂತತಃ।
04048023c ಗಾವಃ ಪ್ರತಿನ್ಯವರ್ತಂತ ದಿಶಮಾಸ್ಥಾಯ ದಕ್ಷಿಣಾಂ।।

ಅವನ ಶಂಖದ ಶಬ್ದದಿಂದಲೂ, ರಥಚಕ್ರದ ಶಬ್ದದಿಂದಲೂ, ಆ ಧ್ವಜವಾಸಿ ಅಮಾನುಷ ಭೂತಗಳ ಗರ್ಜನೆಯಿಂದಲೂ ಎಲ್ಲ ಕಡೆಗಳಲ್ಲಿಯೂ ಬೆದರಿದ ಗೋವುಗಳು ಬಾಲಗಳನ್ನು ಮೇಲೆತ್ತಿ ಆಡಿಸುತ್ತಾ ಅರಚುತ್ತಾ ದಕ್ಷಿಣದಿಕ್ಕನ್ನು ಹಿಡಿದು ಮರಳಿದವು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಗೋನಿವರ್ತನೇ ಅಷ್ಟಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಗೋನಿವರ್ತನದಲ್ಲಿ ನಲ್ವತ್ತೆಂಟನೆಯ ಅಧ್ಯಾಯವು.