047 ಉತ್ತರಗೋಗ್ರಹೇ ಭೀಷ್ಮಸೈನ್ಯವ್ಯೂಹಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ಗೋಹರಣ ಪರ್ವ

ಅಧ್ಯಾಯ 47

ಸಾರ

ಲೆಕ್ಕ ಹಾಕಿದರೆ ಹದಿಮೂರುವರ್ಷಗಳಲ್ಲಿ ಐದು ತಿಂಗಳುಗಳೂ ಹನ್ನೆರಡು ರಾತ್ರಿಗಳೂ ಅಧಿಕವಾಗಿ ಬಂದಿವೆಯೆಂದೂ, ಪಾಂಡವರು ತಮ್ಮ ಪ್ರತಿಜ್ಞೆಯನ್ನು ಯಥಾವತ್ತಾಗಿ ಮಾಡಿ ಮುಗಿಸಿದ್ದಾರೆಂದೂ (1-5), ಅರ್ಜುನನನ್ನು ಎದುರಿಸಲು ಯುದ್ಧ ಯೋಜನೆಯನ್ನು ರೂಪಿಸಿಕೊಳ್ಳಬೇಕೆಂದು ಭೀಷ್ಮನು ಹೇಳಿದುದು (6-14). ಪಾಂಡವರಿಗೆ ತಾನು ರಾಜ್ಯವನ್ನು ಕೊಡುವುದಿಲ್ಲವಾದುದರಿಂದ ಯುದ್ಧೋಚಿತ ಕ್ರಮಗಳನ್ನು ಬೇಗನೇ ಕೈಗೊಳ್ಳಿ ಎಂದು ದುರ್ಯೋಧನನು ಕೇಳಿಕೊಳ್ಳಲು ಭೀಷ್ಮನು ಯುದ್ಧಕ್ಕೆ ಯೋಜನೆಯನ್ನು ಸೂಚಿಸುವುದು (15-19).

04047001 ಭೀಷ್ಮ ಉವಾಚ।
04047001a ಕಲಾಂಶಾಸ್ತಾತ ಯುಜ್ಯಂತೇ ಮುಹೂರ್ತಾಶ್ಚ ದಿನಾನಿ ಚ।
04047001c ಅರ್ಧಮಾಸಾಶ್ಚ ಮಾಸಾಶ್ಚ ನಕ್ಷತ್ರಾಣಿ ಗ್ರಹಾಸ್ತಥಾ।।
04047002a ಋತವಶ್ಚಾಪಿ ಯುಜ್ಯಂತೇ ತಥಾ ಸಂವತ್ಸರಾ ಅಪಿ।
04047002c ಏವಂ ಕಾಲವಿಭಾಗೇನ ಕಾಲಚಕ್ರಂ ಪ್ರವರ್ತತೇ।।

ಭೀಷ್ಮನು ಹೇಳಿದನು: “ಅಯ್ಯಾ! ಕಲೆಗಳು, ಮುಹೂರ್ತಗಳು, ದಿನಗಳು, ಅರ್ಧಮಾಸಗಳು, ಮಾಸಗಳು, ನಕ್ಷತ್ರಗಳು, ಗ್ರಹಗಳು, ಋತುಗಳು, ಸಂವತ್ಸರಗಳು - ಈ ಕಾಲವಿಭಾಗಗಳಿಂದ ಕೂಡಿ ಕಾಲಚಕ್ರವು ಉರುಳುತ್ತದೆ.

04047003a ತೇಷಾಂ ಕಾಲಾತಿರೇಕೇಣ ಜ್ಯೋತಿಷಾಂ ಚ ವ್ಯತಿಕ್ರಮಾತ್।
04047003c ಪಂಚಮೇ ಪಂಚಮೇ ವರ್ಷೇ ದ್ವೌ ಮಾಸಾವುಪಜಾಯತಃ।।

ಅವುಗಳ ಕಾಲಾತಿರೇಕದಿಂದಲೂ ಗ್ರಹನಕ್ಷತ್ರಗಳ ವ್ಯತಿಕ್ರಮದಿಂದಲೂ ಐದೈದು ವರ್ಷಕ್ಕೊಮ್ಮೆ ಎರಡು ಮಾಸಗಳು ಹೆಚ್ಚಾಗಿ ಬರುತ್ತವೆ.

04047004a ತೇಷಾಮಭ್ಯಧಿಕಾ ಮಾಸಾಃ ಪಂಚ ದ್ವಾದಶ ಚ ಕ್ಷಪಾಃ।
04047004c ತ್ರಯೋದಶಾನಾಂ ವರ್ಷಾಣಾಮಿತಿ ಮೇ ವರ್ತತೇ ಮತಿಃ।।

ಹೀಗೆ ಲೆಕ್ಕ ಹಾಕಿದರೆ ಹದಿಮೂರುವರ್ಷಗಳಲ್ಲಿ ಐದು ತಿಂಗಳುಗಳೂ ಹನ್ನೆರಡು ರಾತ್ರಿಗಳೂ ಅಧಿಕವಾಗಿ ಬಂದಿವೆಯೆಂದು ನನ್ನ ಬುದ್ಧಿಗೆ ತೋರುತ್ತದೆ.

04047005a ಸರ್ವಂ ಯಥಾವಚ್ಚರಿತಂ ಯದ್ಯದೇಭಿಃ ಪರಿಶ್ರುತಂ।
04047005c ಏವಮೇತದ್ಧ್ರುವಂ ಜ್ಞಾತ್ವಾ ತತೋ ಬೀಭತ್ಸುರಾಗತಃ।।

ಈ ಪಾಂಡವರು ಮಾಡಿದ ಪ್ರತಿಜ್ಞೆಯನ್ನೆಲ್ಲಾ ಯಥಾವತ್ತಾಗಿ ನೆರವೇರಿಸಿದ್ದಾರೆ. ಇದು ಹೀಗೆಯೇ ಸರಿ ಎಂದು ನಿಶ್ಚಿತವಾಗಿ ತಿಳಿದುಕೊಂಡೇ ಅರ್ಜುನನು ಬಂದಿದ್ದಾನೆ.

04047006a ಸರ್ವೇ ಚೈವ ಮಹಾತ್ಮಾನಃ ಸರ್ವೇ ಧರ್ಮಾರ್ಥಕೋವಿದಾಃ।
04047006c ಯೇಷಾಂ ಯುಧಿಷ್ಠಿರೋ ರಾಜಾ ಕಸ್ಮಾದ್ಧರ್ಮೇಽಪರಾಧ್ನುಯುಃ।।

ಅವರೆಲ್ಲರೂ ಮಹಾತ್ಮರು; ಎಲ್ಲರೂ ಧರ್ಮಾರ್ಥಕೋವಿದರು. ಅವರಿಗೆ ಯುಧಿಷ್ಠಿರನೇ ರಾಜನಾಗಿರುವಾಗ, ಅವರು ಧರ್ಮದ ವಿಷಯದಲ್ಲಿ ತಪ್ಪು ಮಾಡುವುದಾದರೂ ಹೇಗೆ?

04047007a ಅಲುಬ್ಧಾಶ್ಚೈವ ಕೌಂತೇಯಾಃ ಕೃತವಂತಶ್ಚ ದುಷ್ಕರಂ।
04047007c ನ ಚಾಪಿ ಕೇವಲಂ ರಾಜ್ಯಮಿಚ್ಛೇಯುಸ್ತೇಽನುಪಾಯತಃ।।

ಪಾಂಡವರು ಲೋಭರಹಿತರು; ದುಷ್ಕರವಾದುದನ್ನು ಸಾಧಿಸಿದವರು. ಮಾರ್ಗವಿಲ್ಲದೆ ಅವರು ಸುಮ್ಮನೆ ರಾಜ್ಯವನ್ನು ಬಯಸುವವರಲ್ಲ.

04047008a ತದೈವ ತೇ ಹಿ ವಿಕ್ರಾಂತುಮೀಷುಃ ಕೌರವನಂದನಾಃ।
04047008c ಧರ್ಮಪಾಶನಿಬದ್ಧಾಸ್ತು ನ ಚೇಲುಃ ಕ್ಷತ್ರಿಯವ್ರತಾತ್।।

ಆ ಕೌರವನಂದನರು ಆಗಲೇ ಮೇಲೆರಗಬಯಸಿದ್ದರು. ಆದರೆ ಧರ್ಮಪಾಶಬದ್ಧರಾಗಿ ಕ್ಷತ್ರಿಯ ವ್ರತದಿಂದ ಕದಲಲಿಲ್ಲ.

04047009a ಯಚ್ಚಾನೃತ ಇತಿ ಖ್ಯಾಯೇದ್ಯಚ್ಚ ಗಚ್ಛೇತ್ಪರಾಭವಂ।
04047009c ವೃಣುಯುರ್ಮರಣಂ ಪಾರ್ಥಾ ನಾನೃತತ್ವಂ ಕಥಂ ಚನ।।

ಸುಳ್ಳುಗಾರನೆನಿಸಿಕೊಳ್ಳುವುದು, ಪರಾಭವಗೊಳ್ಳುವುದು ಇವುಗಳಲ್ಲೊಂದನ್ನು ನಿರ್ಧರಿಸಬೇಕಾದಲ್ಲಿ ಪಾಂಡವರು ಮರಣವನ್ನಾದರೂ ಅಪ್ಪಿಯಾರು, ಆದರೆ ಯಾವರೀತಿಯಲ್ಲೂ ಸುಳ್ಳುಗಾರಿಕೆಯನ್ನಪ್ಪುವುದಿಲ್ಲ.

04047010a ಪ್ರಾಪ್ತೇ ತು ಕಾಲೇ ಪ್ರಾಪ್ತವ್ಯಂ ನೋತ್ಸೃಜೇಯುರ್ನರರ್ಷಭಾಃ।
04047010c ಅಪಿ ವಜ್ರಭೃತಾ ಗುಪ್ತಂ ತಥಾವೀರ್ಯಾ ಹಿ ಪಾಂಡವಾಃ।।

ತಕ್ಕ ಕಾಲ ಬಂದಿರುವಾಗ ಅಂತಹ ವೀರ್ಯಶಾಲಿಗಳೂ ನರಶ್ರೇಷ್ಠರೂ ಆದ ಪಾಂಡವರು ತಮಗೆ ಬರಬೇಕಾದುದನ್ನು – ಇಂದ್ರನೇ ಅದನ್ನು ರಕ್ಷಿಸುತ್ತಿದ್ದರೂ ಕೂಡ - ಬಿಡುವುದಿಲ್ಲ.

04047011a ಪ್ರತಿಯುಧ್ಯಾಮ ಸಮರೇ ಸರ್ವಶಸ್ತ್ರಭೃತಾಂ ವರಂ।
04047011c ತಸ್ಮಾದ್ಯದತ್ರ ಕಲ್ಯಾಣಂ ಲೋಕೇ ಸದ್ಭಿರನುಷ್ಠಿತಂ।
04047011e ತತ್ಸಂವಿಧೀಯತಾಂ ಕ್ಷಿಪ್ರಂ ಮಾ ನೋ ಹ್ಯರ್ಥೋಽತಿಗಾತ್ಪರಾನ್।।

ಎಲ್ಲ ಶಸ್ತ್ರಧರರಲ್ಲಿ ಶ್ರೇಷ್ಠ ಅರ್ಜುನನನ್ನು ನಾವು ಯುದ್ಧದಲ್ಲಿ ಎದುರಿಸಬೇಕಾಗಿದೆ. ಆದ್ದರಿಂದ ಲೋಕದಲ್ಲಿ ಸಜ್ಜನರು ಅನುಸರಿಸುವ ಶುಭಕರ ಕ್ರಮವನ್ನು ಬೇಗ ಕೈಗೊಳ್ಳೋಣ. ನಮ್ಮ ಗೋಧನವು ಶತ್ರುಗಳಿಗೆ ಸೇರದಿರಲಿ.

04047012a ನ ಹಿ ಪಶ್ಯಾಮಿ ಸಂಗ್ರಾಮೇ ಕದಾ ಚಿದಪಿ ಕೌರವ।
04047012c ಏಕಾಂತಸಿದ್ಧಿಂ ರಾಜೇಂದ್ರ ಸಂಪ್ರಾಪ್ತಶ್ಚ ಧನಂಜಯಃ।।

ಕೌರವ! ಯುದ್ಧದಲ್ಲಿ ಸಂಪೂರ್ಣ ಗೆಲುವಿನ ಭರವಸೆಯಿರುವುದನ್ನು ಎಂದೂ ನಾನು ಕಂಡಿಲ್ಲ. ಅದರಲ್ಲೂ ಈಗ ಬಂದಿರುವವನು ಧನಂಜಯ.

04047013a ಸಂಪ್ರವೃತ್ತೇ ತು ಸಂಗ್ರಾಮೇ ಭಾವಾಭಾವೌ ಜಯಾಜಯೌ।
04047013c ಅವಶ್ಯಮೇಕಂ ಸ್ಪೃಶತೋ ದೃಷ್ಟಮೇತದಸಂಶಯಂ।।

ಯುದ್ಧವೊದಗಿದಾಗ ಲಾಭ-ನಷ್ಟಗಳು, ಜಯಾಪಜಯಗಳು ಒಂದು ಪಕ್ಷಕ್ಕೆ ಅವಶ್ಯವಾಗಿ ತಟ್ಟಲೇಬೇಕು. ಇದು ನಿಸ್ಸಂದೇಹವಾಗಿ ಕಂಡದ್ದು.

04047014a ತಸ್ಮಾದ್ಯುದ್ಧಾವಚರಿಕಂ ಕರ್ಮ ವಾ ಧರ್ಮಸಂಹಿತಂ।
04047014c ಕ್ರಿಯತಾಮಾಶು ರಾಜೇಂದ್ರ ಸಂಪ್ರಾಪ್ತೋ ಹಿ ಧನಂಜಯಃ।।

ಆದ್ದರಿಂದ, ರಾಜೇಂದ್ರ! ಈಗ ನಾವು ಯುದ್ಧೋಚಿತವಾದ ಅಥವಾ ಧರ್ಮಸಮ್ಮತವಾದ ಕಾರ್ಯವನ್ನು ಬೇಗ ಮಾಡಬೇಕು. ಧನಂಜಯನು ಬಂದುಬಿಟ್ಟಿದ್ದಾನೆ.”

04047015 ದುರ್ಯೋಧನ ಉವಾಚ।
04047015a ನಾಹಂ ರಾಜ್ಯಂ ಪ್ರದಾಸ್ಯಾಮಿ ಪಾಂಡವಾನಾಂ ಪಿತಾಮಹ।
04047015c ಯುದ್ಧಾವಚಾರಿಕಂ ಯತ್ತು ತಚ್ಚೀಘ್ರಂ ಸಂವಿಧೀಯತಾಂ।।

ದುರ್ಯೋಧನನು ಹೇಳಿದನು: “ಅಜ್ಜ! ಪಾಂಡವರಿಗೆ ನಾನು ರಾಜ್ಯವನ್ನು ಕೊಡುವುದಿಲ್ಲ. ಅದ್ದರಿಂದ ಯುದ್ಧೋಚಿತವಾದುದನ್ನು ಶೀಘ್ರವಾಗಿ ಕೈಕೊಳ್ಳಿ.”

04047016 ಭೀಷ್ಮ ಉವಾಚ।
04047016a ಅತ್ರ ಯಾ ಮಾಮಕೀ ಬುದ್ಧಿಃ ಶ್ರೂಯತಾಂ ಯದಿ ರೋಚತೇ।
04047016c ಕ್ಷಿಪ್ರಂ ಬಲಚತುರ್ಭಾಗಂ ಗೃಹ್ಯ ಗಚ್ಛ ಪುರಂ ಪ್ರತಿ।
04047016e ತತೋಽಪರಶ್ಚತುರ್ಭಾಗೋ ಗಾಃ ಸಮಾದಾಯ ಗಚ್ಛತು।।

ಭೀಷ್ಮನು ಹೇಳಿದನು: “ನಿನಗೆ ರುಚಿಸುವುದಾದರೆ ಈಗ ನಾನು ಹೇಳುವ ಬುದ್ಧಿವಚನವನ್ನು ಕೇಳು. ಸೈನ್ಯದ ನಾಲ್ಕನೆಯ ಒಂದು ಭಾಗವನ್ನು ತೆಗೆದುಕೊಂಡು ಬೇಗ ನಗರಕ್ಕೆ ಹೋಗು. ಅನಂತರ ಇನ್ನೊಂದು ನಾಲ್ಕನೆಯ ಒಂದು ಭಾಗ ಗೋವುಗಳನ್ನಟ್ಟಿಕೊಂಡು ಹೋಗಲಿ.

04047017a ವಯಂ ತ್ವರ್ಧೇನ ಸೈನ್ಯೇನ ಪ್ರತಿಯೋತ್ಸ್ಯಾಮ ಪಾಂಡವಂ।
04047017c ಮತ್ಸ್ಯಂ ವಾ ಪುನರಾಯಾತಮಥ ವಾಪಿ ಶತಕ್ರತುಂ।।

ಅರ್ಧ ಸೈನ್ಯ ಸಹಿತ ನಾವು ಅರ್ಜುನನೊಡನೆ ಯುದ್ಧಮಾಡುತ್ತೇವೆ. ಮತ್ತೆ ಮತ್ಸ್ಯನೇ ಬರಲಿ ಅಥವಾ ದೇವೇಂದ್ರನೇ ಬರಲಿ ಅವನೊಡನೆ ಯುದ್ಧಮಾಡುತ್ತೇವೆ.

04047018a ಆಚಾರ್ಯೋ ಮಧ್ಯತಸ್ತಿಷ್ಠತ್ವಶ್ವತ್ಥಾಮಾ ತು ಸವ್ಯತಃ।
04047018c ಕೃಪಃ ಶಾರದ್ವತೋ ಧೀಮಾನ್ಪಾರ್ಶ್ವಂ ರಕ್ಷತು ದಕ್ಷಿಣಂ।।

ಆಚಾರ್ಯನು ನಡುವೆ ನಿಲ್ಲಲಿ, ಅಶ್ವತ್ಥಾಮನು ಎಡಗಡೆ ನಿಲ್ಲಲಿ. ಶಾರದ್ವತ ಧೀಮಂತ ಕೃಪನು ಬಲಗಡೆಯಲ್ಲಿ ರಕ್ಷಿಸಲಿ.

04047019a ಅಗ್ರತಃ ಸೂತಪುತ್ರಸ್ತು ಕರ್ಣಸ್ತಿಷ್ಠತು ದಂಶಿತಃ।
04047019c ಅಹಂ ಸರ್ವಸ್ಯ ಸೈನ್ಯಸ್ಯ ಪಶ್ಚಾತ್ಸ್ಥಾಸ್ಯಾಮಿ ಪಾಲಯನ್।।

ಸೂತಪುತ್ರ ಕರ್ಣನು ಕವಚಧಾರಿಯಾಗಿ ಮುಂದುಗಡೆ ನಿಲ್ಲಲಿ. ನಾನು ಎಲ್ಲ ಸೈನ್ಯದ ಹಿಂದೆ ಅದನ್ನು ರಕ್ಷಿಸುತ್ತ ನಿಲ್ಲುತ್ತೇನೆ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಭೀಷ್ಮಸೈನ್ಯವ್ಯೂಹೇ ಸಪ್ತಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಭೀಷ್ಮಸೈನ್ಯವ್ಯೂಹದಲ್ಲಿ ನಲ್ವತ್ತೇಳನೆಯ ಅಧ್ಯಾಯವು.