ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ವಿರಾಟ ಪರ್ವ
ಗೋಹರಣ ಪರ್ವ
ಅಧ್ಯಾಯ 46
ಸಾರ
ತಮ್ಮ ತಮ್ಮಲ್ಲಿ ಭಿನ್ನಾಭಿಪ್ರಾಯಗಳು ಬರಬಾರದೆಂದು ಭೀಷ್ಮನು ಹೇಳಲು (1-11), ದುರ್ಯೋಧನನು ದ್ರೋಣನ ಕ್ಷಮೆ ಬೇಡಿದುದು (12-13). ದ್ರೋಣನು ಪ್ರಸನ್ನನಾದುದು (14-18).
04046001 ಭೀಷ್ಮ ಉವಾಚ।
04046001a ಸಾಧು ಪಶ್ಯತಿ ವೈ ದ್ರೋಣಃ ಕೃಪಃ ಸಾಧ್ವನುಪಶ್ಯತಿ।
04046001c ಕರ್ಣಸ್ತು ಕ್ಷತ್ರಧರ್ಮೇಣ ಯಥಾವದ್ಯೋದ್ಧುಮಿಚ್ಛತಿ।।
ಭೀಷ್ಮನು ಹೇಳಿದನು: “ದ್ರೋಣನು ಹೇಳಿದ್ದು ಸರಿ. ಕೃಪನು ಹೇಳಿದ್ದೂ ಸರಿ. ಕರ್ಣನಾದರೋ ಕ್ಷತ್ರಧರ್ಮದಿಂದ ಪ್ರೇರಿತನಾಗಿ ಯಥೋಚಿತವಾಗಿ ಯುದ್ಧಮಾಡಬಯಸುತ್ತಾನೆ.
04046002a ಆಚಾರ್ಯೋ ನಾಭಿಷಕ್ತವ್ಯಃ ಪುರುಷೇಣ ವಿಜಾನತಾ।
04046002c ದೇಶಕಾಲೌ ತು ಸಂಪ್ರೇಕ್ಷ್ಯ ಯೋದ್ಧವ್ಯಮಿತಿ ಮೇ ಮತಿಃ।।
ತಿಳಿದವರು ಆಚಾರ್ಯನನ್ನು ತೆಗಳಲಾಗದು. ಆದರೆ ದೇಶಕಾಲಗಳನ್ನು ಪರಿಗಣಿಸಿ ಯುದ್ಧಮಾಡಬೇಕೆಂಬುದು ನನ್ನ ಅಭಿಪ್ರಾಯ.
04046003a ಯಸ್ಯ ಸೂರ್ಯಸಮಾಃ ಪಂಚ ಸಪತ್ನಾಃ ಸ್ಯುಃ ಪ್ರಹಾರಿಣಃ।
04046003c ಕಥಮಭ್ಯುದಯೇ ತೇಷಾಂ ನ ಪ್ರಮುಹ್ಯೇತ ಪಂಡಿತಃ।।
ಸೂರ್ಯಸಮಾನರೂ ವೀರರೂ ಆದ ಐವರು ಶತ್ರುಗಳನ್ನುಳ್ಳ ಪಂಡಿತನು ಅವರ ಅಭ್ಯುದಯದ ವಿಷಯದಲ್ಲಿ ಹೊಯ್ದಾಡದಿರುವುದು ಹೇಗೆ?
04046004a ಸ್ವಾರ್ಥೇ ಸರ್ವೇ ವಿಮುಹ್ಯಂತಿ ಯೇಽಪಿ ಧರ್ಮವಿದೋ ಜನಾಃ।
04046004c ತಸ್ಮಾದ್ರಾಜನ್ಬ್ರವೀಮ್ಯೇಷ ವಾಕ್ಯಂ ತೇ ಯದಿ ರೋಚತೇ।।
ರಾಜ! ಧರ್ಮವಿದರಾದರೂ ಕೂಡ ಎಲ್ಲ ಜನರೂ ಸ್ವಾರ್ಥದ ವಿಷಯದಲ್ಲಿ ಚಂಚಲರಾಗುತ್ತಾರೆ. ಆದ್ದರಿಂದ ನಿನಗೆ ಹಿಡಿಸುವುದಾದರೆ ಈ ಮಾತನ್ನು ಹೇಳುತ್ತೇನೆ.
04046005a ಕರ್ಣೋ ಯದಭ್ಯವೋಚನ್ನಸ್ತೇಜಃಸಂಜನನಾಯ ತತ್।
04046005c ಆಚಾರ್ಯಪುತ್ರಃ ಕ್ಷಮತಾಂ ಮಹತ್ಕಾರ್ಯಮುಪಸ್ಥಿತಂ।।
ಕರ್ಣನು ಆಡಿದ ಮಾತು ನಮ್ಮನ್ನು ಹುರಿದುಂಬಿಸುವುದಕ್ಕಾಗಿ ಅಷ್ಟೆ. ಆಚಾರ್ಯ ಪುತ್ರನು ಕ್ಷಮಿಸಿಬಿಡಲಿ. ಏಕೆಂದರೆ ಮಹತ್ಕಾರ್ಯ ಒದಗಿಬಂದಿದೆ.
04046006a ನಾಯಂ ಕಾಲೋ ವಿರೋಧಸ್ಯ ಕೌಂತೇಯೇ ಸಮುಪಸ್ಥಿತೇ।
04046006c ಕ್ಷಂತವ್ಯಂ ಭವತಾ ಸರ್ವಮಾಚಾರ್ಯೇಣ ಕೃಪೇಣ ಚ।।
ಅರ್ಜುನನು ಬಂದಿರುವಾಗ ಇದು ವಿರೋಧಕ್ಕೆ ಕಾಲವಲ್ಲ. ನೀನೂ ಆಚಾರ್ಯನೂ ಕೃಪನೂ ಎಲ್ಲವನ್ನು ಕ್ಷಮಿಸಬೇಕು.
04046007a ಭವತಾಂ ಹಿ ಕೃತಾಸ್ತ್ರತ್ವಂ ಯಥಾದಿತ್ಯೇ ಪ್ರಭಾ ತಥಾ।
04046007c ಯಥಾ ಚಂದ್ರಮಸೋ ಲಕ್ಷ್ಮ ಸರ್ವಥಾ ನಾಪಕೃಷ್ಯತೇ।
04046007e ಏವಂ ಭವತ್ಸು ಬ್ರಾಹ್ಮಣ್ಯಂ ಬ್ರಹ್ಮಾಸ್ತ್ರಂ ಚ ಪ್ರತಿಷ್ಠಿತಂ।।
ಸೂರ್ಯನಲ್ಲಿ ಪ್ರಭೆಯಿರುವಂತೆ ನಿಮ್ಮಲ್ಲಿ ಅಸ್ತ್ರಪರಿಣಿತಿಯಿದೆ. ಚಂದ್ರನಿಂದ ಕಲೆ ಹೇಗೆ ಎಂದೂ ಬೇರೆಯಾಗುವುದಿಲ್ಲವೋ ಹಾಗೆ ನಿಮ್ಮಲ್ಲಿ ಬ್ರಾಹ್ಮಣ್ಯವೂ ಬ್ರಹ್ಮಾಸ್ತ್ರವೂ ನೆಲೆಗೊಂಡಿವೆ.
04046008a ಚತ್ವಾರ ಏಕತೋ ವೇದಾಃ ಕ್ಷಾತ್ರಮೇಕತ್ರ ದೃಶ್ಯತೇ।
04046008c ನೈತತ್ಸಮಸ್ತಮುಭಯಂ ಕಸ್ಮಿಂಶ್ಚಿದನುಶುಶ್ರುಮಃ।।
04046009a ಅನ್ಯತ್ರ ಭಾರತಾಚಾರ್ಯಾತ್ಸಪುತ್ರಾದಿತಿ ಮೇ ಮತಿಃ।
04046009c ಬ್ರಹ್ಮಾಸ್ತ್ರಂ ಚೈವ ವೇದಾಶ್ಚ ನೈತದನ್ಯತ್ರ ದೃಶ್ಯತೇ।।
ನಾಲ್ಕು ವೇದಗಳು ಒಂದು ಕಡೆ ಇರುತ್ತವೆ; ಕ್ಷಾತ್ರ ಒಂದು ಕಡೆ ಕಂಡುಬರುತ್ತದೆ. ಭಾರತಾಚಾರ್ಯನನ್ನೂ ಅವನ ಮಗನನ್ನೂ ಬಿಟ್ಟರೆ, ಇವೆರಡೂ ಒಬ್ಬನಲ್ಲೇ ಇನ್ನೆಲ್ಲಿಯಾದರೂ ಇರುವುದನ್ನು ನಾವು ಕೇಳಿಲ್ಲ. ಬ್ರಹ್ಮಾಸ್ತ್ರವೂ ವೇದಗಳೂ ಒಟ್ಟಿಗೆ ಮತ್ತೆಲ್ಲಿಯೂ ಕಂಡುಬರುವುದಿಲ್ಲವೆಂದು ನನ್ನ ಅಭಿಪ್ರಾಯ.
04046010a ಆಚಾರ್ಯಪುತ್ರಃ ಕ್ಷಮತಾಂ ನಾಯಂ ಕಾಲಃ ಸ್ವಭೇದನೇ।
04046010c ಸರ್ವೇ ಸಂಹತ್ಯ ಯುಧ್ಯಾಮಃ ಪಾಕಶಾಸನಿಮಾಗತಂ।।
ಆಚಾರ್ಯಪುತ್ರನು ಕ್ಷಮಿಸಬೇಕು. ನಮ್ಮನಮ್ಮಲ್ಲೆ ಒಡಕಿಗೆ ಇದು ಕಾಲವಲ್ಲ. ನಾವೆಲ್ಲರೂ ಸೇರಿ ಬಂದಿರುವ ಅರ್ಜುನನೊಡನೆ ಕಾದೋಣ.
04046011a ಬಲಸ್ಯ ವ್ಯಸನಾನೀಹ ಯಾನ್ಯುಕ್ತಾನಿ ಮನೀಷಿಭಿಃ।
04046011c ಮುಖ್ಯೋ ಭೇದೋ ಹಿ ತೇಷಾಂ ವೈ ಪಾಪಿಷ್ಠೋ ವಿದುಷಾಂ ಮತಃ।।
ವಿದ್ವಾಂಸರು ಹೇಳಿರುವ ಸೈನ್ಯದ ವಿಪತ್ತುಗಳಲ್ಲಿ ಮುಖ್ಯವೂ ಕೆಟ್ಟುದೂ ಆದುದು ಯಾವುದೆಂದರೆ ಅದರ ಅನೈಕಮತ್ಯ ಎಂಬುದು ಬಲ್ಲವರ ಅಭಿಪ್ರಾಯ.”
04046012 ಅಶ್ವತ್ಥಾಮೋವಾಚ।
04046012a ಆಚಾರ್ಯ ಏವ ಕ್ಷಮತಾಂ ಶಾಂತಿರತ್ರ ವಿಧೀಯತಾಂ।
04046012c ಅಭಿಷಜ್ಯಮಾನೇ ಹಿ ಗುರೌ ತದ್ವೃತ್ತಂ ರೋಷಕಾರಿತಂ।।
ಅಶ್ವತ್ಥಾಮನು ಹೇಳಿದನು: “ಆಚಾರ್ಯನೇ ಕ್ಷಮಿಸಲಿ; ಇಲ್ಲಿ ಶಾಂತಿಯುಂಟಾಗಲಿ. ಗುರುವನ್ನು ನಿಂದಿಸಲಾಗಿ ಅವರ ಆ ನಡತೆ ರೋಷದಿಂದುಂಟಾಯಿತು.””
04046013 ವೈಶಂಪಾಯನ ಉವಾಚ।
04046013a ತತೋ ದುರ್ಯೋಧನೋ ದ್ರೋಣಂ ಕ್ಷಮಯಾಮಾಸ ಭಾರತ।
04046013c ಸಹ ಕರ್ಣೇನ ಭೀಷ್ಮೇಣ ಕೃಪೇಣ ಚ ಮಹಾತ್ಮನಾ।।
ವೈಶಂಪಾಯನನು ಹೇಳಿದನು: “ಭಾರತ! ಅನಂತರ ದುರ್ಯೋಧನನು ಕರ್ಣ, ಭೀಷ್ಮ ಹಾಗೂ ಮಹಾತ್ಮ ಕೃಪನೊಡನೆ ದ್ರೋಣನ ಕ್ಷಮೆ ಬೇಡಿದನು.
04046014 ದ್ರೋಣ ಉವಾಚ।
04046014a ಯದೇವ ಪ್ರಥಮಂ ವಾಕ್ಯಂ ಭೀಷ್ಮಃ ಶಾಂತನವೋಽಬ್ರವೀತ್।
04046014c ತೇನೈವಾಹಂ ಪ್ರಸನ್ನೋ ವೈ ಪರಮತ್ರ ವಿಧೀಯತಾಂ।।
ದ್ರೋಣನು ಹೇಳಿದನು: “ಶಂತನು ಪುತ್ರ ಭೀಷ್ಮನು ಆಡಿದ ಮೊದಲ ಮಾತಿನಿಂದಲೇ ನಾನು ಪ್ರಸನ್ನನಾದೆನು. ಈಗ ಮುಂದಿನದನ್ನು ಮಾಡಬೇಕು.
04046015a ಯಥಾ ದುರ್ಯೋಧನೇಽಯತ್ತೇ ನಾಗಃ ಸ್ಪೃಶತಿ ಸೈನಿಕಾನ್।
04046015c ಸಾಹಸಾದ್ಯದಿ ವಾ ಮೋಹಾತ್ತಥಾ ನೀತಿರ್ವಿಧೀಯತಾಂ।।
ದುರ್ಯೋಧನನು ನಮ್ಮನ್ನು ಅವಲಂಬಿಸಿರಲಾಗಿ ಸಾಹಸದಿಂದಾಗಲೀ ಭ್ರಾಂತಿಯಿಂದಾಗಲೀ ಯಾವುದೇ ವಿಪತ್ತು ಸೈನಿಕರನ್ನು ಸಮೀಪಿಸದಂತೆ ಯುದ್ಧನೀತಿಯನ್ನು ರೂಪಿಸಬೇಕು.
04046016a ವನವಾಸೇ ಹ್ಯನಿರ್ವೃತ್ತೇ ದರ್ಶಯೇನ್ನ ಧನಂಜಯಃ।
04046016c ಧನಂ ವಾಲಭಮಾನೋಽತ್ರ ನಾದ್ಯ ನಃ ಕ್ಷಂತುಮರ್ಹತಿ।।
ವನವಾಸದ ಅವಧಿ ಮುಗಿಯದೆ ಧನಂಜಯನು ಕಾಣಿಸಿಕೊಂಡಿಲ್ಲ. ಅಥವಾ ಗೋಧನವನ್ನು ಪಡೆಯದೇ ನಮ್ಮನ್ನು ಅವನಿಂದು ಕ್ಷಮಿಸಲಾರ.
04046017a ಯಥಾ ನಾಯಂ ಸಮಾಯುಜ್ಯಾದ್ಧಾರ್ತರಾಷ್ಟ್ರಾನ್ಕಥಂ ಚನ।
04046017c ಯಥಾ ಚ ನ ಪರಾಜಯ್ಯಾತ್ತಥಾ ನೀತಿರ್ವಿಧೀಯತಾಂ।।
ಅವನು ಯವುದೇ ರೀತಿಯಲ್ಲಿ ಧೃತರಾಷ್ಟ್ರಪುತ್ರರನ್ನು ಆಕ್ರಮಿಸದಂತೆ ಮತ್ತು ನಮಗೆ ಪರಾಜಯವಾಗದಂತೆ ಯುದ್ಧ ನೀತಿಯನ್ನು ರೂಪಿಸತಕ್ಕದ್ದು.
04046018a ಉಕ್ತಂ ದುರ್ಯೋಧನೇನಾಪಿ ಪುರಸ್ತಾದ್ವಾಕ್ಯಮೀದೃಶಂ।
04046018c ತದನುಸ್ಮೃತ್ಯ ಗಾಂಗೇಯ ಯಥಾವದ್ವಕ್ತುಮರ್ಹಸಿ।।
ದುರ್ಯೋಧನನು ಹಿಂದೆ ಇಂಥ ಮಾತನ್ನೇ ಹೇಳಿದ್ದನು. ಭೀಷ್ಮ! ಅದನ್ನು ನೆನೆದು ಉಚಿತವಾದುದನ್ನು ಹೇಳಲು ನೀನು ತಕ್ಕವನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ದ್ರೋಣವಾಕ್ಯೇ ಷಟ್ಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ದ್ರೋಣವಾಕ್ಯದಲ್ಲಿ ನಲ್ವತ್ತಾರನೆಯ ಅಧ್ಯಾಯವು.