045 ಉತ್ತರಗೋಗ್ರಹೇ ದ್ರೌಣಿವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ಗೋಹರಣ ಪರ್ವ

ಅಧ್ಯಾಯ 45

ಸಾರ

ಅಶ್ವತ್ಥಾಮನು ಆತ್ಮಶ್ಲಾಘನೆ ಮಾಡಿಕೊಳ್ಳುತ್ತಿದ್ದ ಕರ್ಣನನ್ನು ನಿಂದಿಸಿ, ಕುಪಿತನಾದ ಅರ್ಜುನನು ಎಲ್ಲವನ್ನೂ ನಾಶಮಾಡುತ್ತಾನೆಂದೂ, ತಾನು ಅವನೊಂದಿಗೆ ಯುದ್ಧಮಾಡುವುದಿಲ್ಲವೆಂದೂ ಹೇಳುವುದು (1-26).

04045001 ಅಶ್ವತ್ಥಾಮೋವಾಚ।
04045001a ನ ಚ ತಾವಜ್ಜಿತಾ ಗಾವೋ ನ ಚ ಸೀಮಾಂತರಂ ಗತಾಃ।
04045001c ನ ಹಾಸ್ತಿನಪುರಂ ಪ್ರಾಪ್ತಾಸ್ತ್ವಂ ಚ ಕರ್ಣ ವಿಕತ್ಥಸೇ।।

ಅಶ್ವತ್ಥಾಮನು ಹೇಳಿದನು: “ಕರ್ಣ! ಗೋವುಗಳನ್ನು ಇನ್ನೂ ಗೆದ್ದುಕೊಂಡಿಲ್ಲ. ಅವು ಇನ್ನೂ ಗಡಿದಾಟಿಲ್ಲ ಮತ್ತು ಹಸ್ತಿನಾಪುರವನ್ನು ಸೇರಿಲ್ಲ. ಆಗಲೇ ನೀನು ಜಂಬ ಕೊಚ್ಚಿಕೊಳ್ಳುತ್ತಿರುವೆ!

04045002a ಸಂಗ್ರಾಮಾನ್ಸುಬಹೂನ್ಜಿತ್ವಾ ಲಬ್ಧ್ವಾ ಚ ವಿಪುಲಂ ಧನಂ।
04045002c ವಿಜಿತ್ಯ ಚ ಪರಾಂ ಭೂಮಿಂ ನಾಹುಃ ಕಿಂ ಚನ ಪೌರುಷಂ।।

ಹಲವಾರು ಯುದ್ಧಗಳನ್ನು ಗೆದ್ದು ವಿಪುಲ ಧನವನ್ನು ಗಳಿಸಿ ಶತ್ರುರಾಜ್ಯವನ್ನು ಜಯಿಸಿದರೂ ನಿಜವಾದ ಶೂರರು ಪೌರುಷವನ್ನು ಸ್ವಲ್ಪವೂ ಹೇಳಿಕೊಳ್ಳುವುದಿಲ್ಲ.

04045003a ಪಚತ್ಯಗ್ನಿರವಾಕ್ಯಸ್ತು ತೂಷ್ಣೀಂ ಭಾತಿ ದಿವಾಕರಃ।
04045003c ತೂಷ್ಣೀಂ ಧಾರಯತೇ ಲೋಕಾನ್ವಸುಧಾ ಸಚರಾಚರಾನ್।।

ಅಗ್ನಿ ಮಾತಿಲ್ಲದೇ ಬೇಯಿಸುತ್ತಾನೆ, ಸೂರ್ಯ ಸದ್ದಿಲ್ಲದೇ ಬೆಳಗುತ್ತಾನೆ. ಭೂಮಿ ಸದ್ದಿಲ್ಲದೇ ಸಚರಾಚರ ಸೃಷ್ಟಿಯನ್ನು ಹೊರುತ್ತದೆ.

04045004a ಚಾತುರ್ವರ್ಣ್ಯಸ್ಯ ಕರ್ಮಾಣಿ ವಿಹಿತಾನಿ ಮನೀಷಿಭಿಃ।
04045004c ಧನಂ ಯೈರಧಿಗಂತವ್ಯಂ ಯಚ್ಚ ಕುರ್ವನ್ನ ದುಷ್ಯತಿ।।

ವಿದ್ವಾಂಸರು ನಾಲ್ಕು ವರ್ಣಗಳಿಗೂ ಅವು ಮಾಡಬೇಕಾದ ಕರ್ಮಗಳನ್ನು ವಿಧಿಸಿದ್ದಾರೆ. ಅವುಗಳನ್ನು ಅ ವರ್ಣಗಳು ಯಾವುದೇ ದೋಷಕ್ಕೊಳಗಾಗದಂತೆ ಆಚರಿಸಿ ಧನವನ್ನು ಪಡೆಯಬೇಕು.

04045005a ಅಧೀತ್ಯ ಬ್ರಾಹ್ಮಣೋ ವೇದಾನ್ಯಾಜಯೇತ ಯಜೇತ ಚ।
04045005c ಕ್ಷತ್ರಿಯೋ ಧನುರಾಶ್ರಿತ್ಯ ಯಜೇತೈವ ನ ಯಾಜಯೇತ್।
04045005e ವೈಶ್ಯೋಽಧಿಗಮ್ಯ ದ್ರವ್ಯಾಣಿ ಬ್ರಹ್ಮಕರ್ಮಾಣಿ ಕಾರಯೇತ್।।

ಬ್ರಾಹ್ಮಣನು ವೇದಾಧ್ಯಯಮಾಡಿ ಯಜ್ಞಗಳನ್ನು ಮಾಡಬೇಕು ಮತ್ತು ಮಾಡಿಸಬೇಕು. ಕ್ಷತ್ರಿಯನು ಧನುಸ್ಸನ್ನು ಆಶ್ರಯಿಸಿ ಯಜ್ಞಗಳನ್ನು ಸ್ವತಃ ಮಾಡಬೇಕು. ಮಾಡಿಸತಕ್ಕದ್ದಲ್ಲ. ವೈಶ್ಯನು ದ್ರವ್ಯವನ್ನು ಆರ್ಜಿಸಿ, ಬ್ರಹ್ಮಕರ್ಮಗಳನ್ನು ಮಾಡಿಸಬೇಕು.

04045006a ವರ್ತಮಾನಾ ಯಥಾಶಾಸ್ತ್ರಂ ಪ್ರಾಪ್ಯ ಚಾಪಿ ಮಹೀಮಿಮಾಂ।
04045006c ಸತ್ಕುರ್ವಂತಿ ಮಹಾಭಾಗಾ ಗುರೂನ್ಸುವಿಗುಣಾನಪಿ।।

ಮಹಾಭಾಗ್ಯಶಾಲಿಗಳಾದವರು ಶಾಸ್ತ್ರಾನುಗುಣವಾಗಿ ನಡೆದುಕೊಳ್ಳುತ್ತ ಈ ಭೂಮಿಯನ್ನು ಪಡೆದು ಕೂಡ ಗುರುಗಳನ್ನು ಗುಣವಿಹೀನರಾಗಿದ್ದರೂ ಸತ್ಕರಿಸುತ್ತಾರೆ.

04045007a ಪ್ರಾಪ್ಯ ದ್ಯೂತೇನ ಕೋ ರಾಜ್ಯಂ ಕ್ಷತ್ರಿಯಸ್ತೋಷ್ಟುಮರ್ಹತಿ।
04045007c ತಥಾ ನೃಶಂಸರೂಪೇಣ ಯಥಾನ್ಯಃ ಪ್ರಾಕೃತೋ ಜನಃ।।

ಬೇರೆ ಯಾವ ಕ್ಷತ್ರಿಯನು ತಾನೇ ಸಾಮಾನ್ಯನಂತೆ ಕ್ರೂರ ಜೂಜಿನಿಂದ ರಾಜ್ಯವನ್ನು ಪಡೆದು ಸಂತೋಷಪಡಬಲ್ಲ?

04045008a ತಥಾವಾಪ್ತೇಷು ವಿತ್ತೇಷು ಕೋ ವಿಕತ್ಥೇದ್ವಿಚಕ್ಷಣಃ।
04045008c ನಿಕೃತ್ಯಾ ವಂಚನಾಯೋಗೈಶ್ಚರನ್ವೈತಂಸಿಕೋ ಯಥಾ।।

ಈ ರೀತಿಯಲ್ಲಿ ಕಟುಕತನದಿಂದ ವಂಚನೆಗಳ ಆಶ್ರಯದಿಂದ ಧನವನ್ನು ಸಂಪಾದಿಸಿ ಯಾವ ವಿಚಕ್ಷಣನು ತಾನೇ ಬೇಡನಂತೆ ಜಂಬ ಕೊಚ್ಚುತ್ತಾನೆ?

04045009a ಕತಮದ್ದ್ವೈರಥಂ ಯುದ್ಧಂ ಯತ್ರಾಜೈಷೀರ್ಧನಂಜಯಂ।
04045009c ನಕುಲಂ ಸಹದೇವಂ ಚ ಧನಂ ಯೇಷಾಂ ತ್ವಯಾ ಹೃತಂ।।

ಯಾವ ದ್ವಂದ್ವರಥಯುದ್ಧದಲ್ಲಿ ನೀನು ಧನಂಜಯನನ್ನಾಗಲೀ, ನಕುಲನನ್ನಾಗಲೀ ಸಹದೇವನನ್ನಾಗಲೀ ಜಯಿಸಿದ್ದೀಯೆ? ಆದರೆ ಅವರ ಸಂಪತ್ತನ್ನು ನೀನು ಅಪಹರಿಸಿರುವೆ.

04045010a ಯುಧಿಷ್ಠಿರೋ ಜಿತಃ ಕಸ್ಮಿನ್ಭೀಮಶ್ಚ ಬಲಿನಾಂ ವರಃ।
04045010c ಇಂದ್ರಪ್ರಸ್ಥಂ ತ್ವಯಾ ಕಸ್ಮಿನ್ಸಂಗ್ರಾಮೇ ನಿರ್ಜಿತಂ ಪುರಾ।।

ಯಾವ ಯುದ್ಧದಲ್ಲಿ ನೀನು ಯುಧಿಷ್ಠಿರನನ್ನೂ ಬಲಶಾಲಿಗಳಲ್ಲಿ ಶ್ರೇಷ್ಠ ಭೀಮನನ್ನೂ ಗೆದ್ದಿದ್ದೀಯೆ? ಯಾವುದರಿಂದ ಹಿಂದೆ ಇಂದ್ರಪ್ರಸ್ಥವನ್ನು ಜಯಿಸಿದೆ?

04045011a ತಥೈವ ಕತಮಂ ಯುದ್ಧಂ ಯಸ್ಮಿನ್ಕೃಷ್ಣಾ ಜಿತಾ ತ್ವಯಾ।
04045011c ಏಕವಸ್ತ್ರಾ ಸಭಾಂ ನೀತಾ ದುಷ್ಟಕರ್ಮನ್ರಜಸ್ವಲಾ।।

ಅಂತೆಯೇ ಕೃಷ್ಣೆಯನ್ನು ನೀನು ಗೆದ್ದುದು ಯಾವ ಯುದ್ಧದಲ್ಲಿ? ದುಷ್ಟಕರ್ಮಿ! ಏಕವಸ್ತ್ರವುಳ್ಳವಳೂ ರಜಸ್ವಲೆಯೂ ಆದ ಅವಳನ್ನು ಸಭೆಗೆ ಎಳೆದು ತರಲಾಯಿತು.

04045012a ಮೂಲಮೇಷಾಂ ಮಹತ್ಕೃತ್ತಂ ಸಾರಾರ್ಥೀ ಚಂದನಂ ಯಥಾ।
04045012c ಕರ್ಮ ಕಾರಯಿಥಾಃ ಶೂರ ತತ್ರ ಕಿಂ ವಿದುರೋಽಬ್ರವೀತ್।।

ಸಾರವನ್ನು ಬಯಸುವವನು ಚಂದನ ವೃಕ್ಷವನ್ನು ಕಡಿಯುವಂತೆ ನೀನು ಅವರ ದೊಡ್ಡ ಬೇರನ್ನೇ ಕತ್ತರಿಸಿಹಾಕಿದೆ. ಶೂರ! ಆ ಕಾರ್ಯವನ್ನು ನೀನು ಮಾಡಿಸಿದೆ. ಆಗ ವಿದುರನು ಹೇಳಿದ್ದೇನು?

04045013a ಯಥಾಶಕ್ತಿ ಮನುಷ್ಯಾಣಾಂ ಶಮಮಾಲಕ್ಷಯಾಮಹೇ।
04045013c ಅನ್ಯೇಷಾಂ ಚೈವ ಸತ್ತ್ವಾನಾಮಪಿ ಕೀಟಪಿಪೀಲಿಕೇ।।

ಮನುಷ್ಯರು ಮತ್ತು ಇತರ ಜೀವಿಗಳಲ್ಲೂ ಹುಳು ಮತ್ತು ಇರುವೆಗಳಲ್ಲಿಯೂ ಸಾಧ್ಯವಾದ ಮಟ್ಟಿಗೆ ಸಹನೆ ಕಂಡುಬರುತ್ತದೆ.

04045014a ದ್ರೌಪದ್ಯಾಸ್ತಂ ಪರಿಕ್ಲೇಶಂ ನ ಕ್ಷಂತುಂ ಪಾಂಡವೋಽರ್ಹತಿ।
04045014c ದುಃಖಾಯ ಧಾರ್ತರಾಷ್ಟ್ರಾಣಾಂ ಪ್ರಾದುರ್ಭೂತೋ ಧನಂಜಯಃ।।

ಆದರೆ ದ್ರೌಪದಿಯ ಆ ಪರಿಕ್ಲೇಶವನ್ನು ಪಾಂಡವನು ಕ್ಷಮಿಸಲಾರನು. ಧನಂಜಯನು ಧೃತರಾಷ್ಟ್ರಪುತ್ರರಿಗೆ ದುಃಖವನ್ನುಂಟುಮಾಡುವುದಕ್ಕಾಗಿಯೇ ಬಂದಿದ್ದಾನೆ.

04045015a ತ್ವಂ ಪುನಃ ಪಂಡಿತೋ ಭೂತ್ವಾ ವಾಚಂ ವಕ್ತುಮಿಹೇಚ್ಛಸಿ।
04045015c ವೈರಾಂತಕರಣೋ ಜಿಷ್ಣುರ್ನ ನಃ ಶೇಷಂ ಕರಿಷ್ಯತಿ।।

ಮತ್ತೆ ನೀನು ಪಂಡಿತನಾಗಿ ಇಲ್ಲಿ ಮಾತನಾಡಬಯಸುತ್ತಿರುವೆ. ವೈರವನ್ನು ಕೊನೆಗೊಳಿಸುವ ಅರ್ಜುನನು ನಮ್ಮಲ್ಲಿ ಯಾರನ್ನೂ ಉಳಿಸುವುದಿಲ್ಲ.

04045016a ನೈಷ ದೇವಾನ್ನ ಗಂಧರ್ವಾನ್ನಾಸುರಾನ್ನ ಚ ರಾಕ್ಷಸಾನ್।
04045016c ಭಯಾದಿಹ ನ ಯುಧ್ಯೇತ ಕುಂತೀಪುತ್ರೋ ಧನಂಜಯಃ।।

ದೇವತೆಗಳೊಡೆಯನಾಗಲೀ ಗಂಧರ್ವರೊಡೆಯನಾಗಲೀ ಅಸುರರೊಡೆಯನಾಗಲೀ, ರಾಕ್ಷಸರೊಡೆಯನಾಗಲೀ ಕುಂತೀಪುತ್ರ ಈ ಧನಂಜಯನು ಹೆದರಿ ಯುದ್ಧಮಾಡದಿರುವುದಿಲ್ಲ.

04045017a ಯಂ ಯಮೇಷೋಽಭಿಸಂಕ್ರುದ್ಧಃ ಸಂಗ್ರಾಮೇಽಭಿಪತಿಷ್ಯತಿ।
04045017c ವೃಕ್ಷಂ ಗರುಡವೇಗೇನ ವಿನಿಹತ್ಯ ತಮೇಷ್ಯತಿ।।

ಇವನು ಯುದ್ಧದಲ್ಲಿ ಕ್ರುದ್ಧನಾಗಿ ಯಾರ ಯಾರ ಮೇಲೆ ಬೀಳುತ್ತಾನೋ ಅವರನ್ನು ಗರುಡನ ವೇಗದಿಂದ ಮರವನ್ನು ಹೇಗೋ ಹಾಗೆ ಹೊಡೆದು ಹೋಗುತ್ತಾನೆ.

04045018a ತ್ವತ್ತೋ ವಿಶಿಷ್ಟಂ ವೀರ್ಯೇಣ ಧನುಷ್ಯಮರರಾಟ್ಸಮಂ।
04045018c ವಾಸುದೇವಸಮಂ ಯುದ್ಧೇ ತಂ ಪಾರ್ಥಂ ಕೋ ನ ಪೂಜಯೇತ್।।

ಶೌರ್ಯದಲ್ಲಿ ನಿನಗಿಂತ ಮೇಲಾದ, ಬಿಲ್ಗಾರಿಕೆಯಲ್ಲಿ ದೇವೇಂದ್ರನಿಗೆ ಸಮಾನನಾದ, ಯುದ್ಧದಲ್ಲಿ ವಾಸುದೇವನಿಗೆಣೆಯಾದ ಆ ಪಾರ್ಥನನ್ನು ಯಾರು ತಾನೇ ಗೌರವಿಸುವುದಿಲ್ಲ?

04045019a ದೈವಂ ದೈವೇನ ಯುಧ್ಯೇತ ಮಾನುಷೇಣ ಚ ಮಾನುಷಂ।
04045019c ಅಸ್ತ್ರೇಣಾಸ್ತ್ರಂ ಸಮಾಹನ್ಯಾತ್ಕೋಽರ್ಜುನೇನ ಸಮಃ ಪುಮಾನ್।।

ದೈವಾಸ್ತ್ರವನ್ನು ದೈವಾಸ್ತ್ರದಿಂದ, ಮಾನುಷಾಸ್ತ್ರವನ್ನು ಮಾನುಷಾಸ್ತ್ರದಿಂದ ನಿಗ್ರಹಿಸುವ ಅರ್ಜುನನಿಗೆ ಸಮಾನ ಗಂಡಸು ಯಾರು?

04045020a ಪುತ್ರಾದನಂತರಃ ಶಿಷ್ಯ ಇತಿ ಧರ್ಮವಿದೋ ವಿದುಃ।
04045020c ಏತೇನಾಪಿ ನಿಮಿತ್ತೇನ ಪ್ರಿಯೋ ದ್ರೋಣಸ್ಯ ಪಾಂಡವಃ।।

ಮಗನಿಗೂ ಶಿಷ್ಯನಿಗೂ ಅಂತರವಿಲ್ಲವೆಂದು ಧರ್ಮಜ್ಞರು ತಿಳಿಯುತ್ತಾರೆ. ಈ ಕಾರಣದಿಂದಲೂ ಪಾಂಡವ ಅರ್ಜುನನು ದ್ರೋಣನಿಗೆ ಪ್ರಿಯನಾಗಿದ್ದಾನೆ.

04045021a ಯಥಾ ತ್ವಮಕರೋರ್ದ್ಯೂತಮಿಂದ್ರಪ್ರಸ್ಥಂ ಯಥಾಹರಃ।
04045021c ಯಥಾನೈಷೀಃ ಸಭಾಂ ಕೃಷ್ಣಾಂ ತಥಾ ಯುಧ್ಯಸ್ವ ಪಾಂಡವಂ।।

ನೀನು ಹೇಗೆ ಜೂಜನ್ನಾಡಿದೆಯೋ, ಇಂದ್ರಪ್ರಸ್ಥವನ್ನು ಹೇಗೆ ಕಿತ್ತುಕೊಂಡೆಯೋ, ಕೃಷ್ಣೆಯನ್ನು ಹೇಗೆ ಸಭೆಗೆಳೆದುತಂದೆಯೋ ಹಾಗೆಯೇ ಅರ್ಜುನನೊಡನೆ ಯುದ್ಧ ಮಾಡು!

04045022a ಅಯಂ ತೇ ಮಾತುಲಃ ಪ್ರಾಜ್ಞಃ ಕ್ಷತ್ರಧರ್ಮಸ್ಯ ಕೋವಿದಃ।
04045022c ದುರ್ದ್ಯೂತದೇವೀ ಗಾಂಧಾರಃ ಶಕುನಿರ್ಯುಧ್ಯತಾಮಿಹ।।

ಪ್ರಾಜ್ಞನೂ, ಕ್ಷತ್ರಧರ್ಮದಲ್ಲಿ ಕೋವಿದನೂ, ಕೆಟ್ಟ ಜೂಜಿನಲ್ಲಿ ಚತುರನೂ, ಗಾಂಧರದೇಶವನೂ ಆದ ಈ ನಿನ್ನ ಮಾವ ಶಕುನಿಯು ಈಗ ಯುದ್ಧಮಾಡಲಿ.

04045023a ನಾಕ್ಷಾನ್ ಕ್ಷಿಪತಿ ಗಾಂಡೀವಂ ನ ಕೃತಂ ದ್ವಾಪರಂ ನ ಚ।
04045023c ಜ್ವಲತೋ ನಿಶಿತಾನ್ಬಾಣಾಂಸ್ತೀಕ್ಷ್ಣಾನ್ ಕ್ಷಿಪತಿ ಗಾಂಡಿವಂ।।

ಗಾಂಡೀವ ಧನುಸ್ಸು ಕೃತ-ದ್ವಾಪರವೆಂಬ ದಾಳಗಳನ್ನು ಎಸೆಯುವುದಿಲ್ಲ. ಅದು ನಿಶಿತವೂ ತೀಕ್ಷ್ಣವೂ ಆದ ಉರಿಯುವ ಬಾಣಗಳನ್ನು ಎಸೆಯುತ್ತದೆ.

04045024a ನ ಹಿ ಗಾಂಡೀವನಿರ್ಮುಕ್ತಾ ಗಾರ್ಧ್ರಪತ್ರಾಃ ಸುತೇಜನಾಃ।
04045024c ಅಂತರೇಷ್ವವತಿಷ್ಠಂತಿ ಗಿರೀಣಾಮಪಿ ದಾರಣಾಃ।।

ಗಾಂಡೀವದಿಂದ ಬಿಡಲಾಗುವ ಹದ್ದಿನ ಗರಿಗಳನ್ನುಳ್ಳ ಪರ್ವತಗಳನ್ನೂ ಸೀಳಿಹಾಕುವ ತೀಕ್ಷ್ಣ ಬಾಣಗಳು ಮಧ್ಯದಲ್ಲಿಯೇ ನಿಂತುಬಿಡುವುದಿಲ್ಲ.

04045025a ಅಂತಕಃ ಶಮನೋ ಮೃತ್ಯುಸ್ತಥಾಗ್ನಿರ್ವಡವಾಮುಖಃ।
04045025c ಕುರ್ಯುರೇತೇ ಕ್ವ ಚಿಚ್ಚೇಷಂ ನ ತು ಕ್ರುದ್ಧೋ ಧನಂಜಯಃ।।

ಎಲ್ಲವನ್ನೂ ನಾಶಮಾಡುವ ಅಂತಕ ಮೃತ್ಯು ಮತ್ತು ಬಡಬಾಗ್ನಿ ಇವರು ಸ್ವಲ್ಪವನ್ನಾದರೂ ಉಳಿಸುತ್ತಾರೆ. ಆದರೆ ಕೋಪಗೊಂಡ ಧನಂಜಯನು ಏನನ್ನೂ ಉಳಿಸುವುದಿಲ್ಲ.

04045026a ಯುಧ್ಯತಾಂ ಕಾಮಮಾಚಾರ್ಯೋ ನಾಹಂ ಯೋತ್ಸ್ಯೇ ಧನಂಜಯಂ।
04045026c ಮತ್ಸ್ಯೋ ಹ್ಯಸ್ಮಾಭಿರಾಯೋಧ್ಯೋ ಯದ್ಯಾಗಚ್ಛೇದ್ಗವಾಂ ಪದಂ।।

ಇಷ್ಟವಿದ್ದರೆ ಆಚಾರ್ಯರು ಯುದ್ಧಮಾಡಲಿ. ನಾನು ಧನಂಜಯನೊಡನೆ ಯುದ್ಧಮಾಡುವುದಿಲ್ಲ. ಮತ್ಸ್ಯರಾಜನೇನಾದರೂ ಹಸುಗಳ ಹಾದಿಗೆ ಬಂದರೆ ಅವನೊಡನೆ ನಾವು ಹೋರಾಡಬೇಕು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ದ್ರೌಣಿವಾಕ್ಯೇ ಪಂಚಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ದ್ರೌಣಿವಾಕ್ಯದಲ್ಲಿ ನಲ್ವತ್ತೈದನೆಯ ಅಧ್ಯಾಯವು.