ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ವಿರಾಟ ಪರ್ವ
ಗೋಹರಣ ಪರ್ವ
ಅಧ್ಯಾಯ 44
ಸಾರ
ಕೃಪನು ಕರ್ಣನ ಪೌರುಷವನ್ನು ನಿಂದಿಸಿ, ಅರ್ಜುನನ ಪರಾಕ್ರಮವನ್ನು ಹೊಗಳುತ್ತಾ, ತಾವೆಲ್ಲ ಷಡ್ರಥರೂ ಒಟ್ಟಾದರೆ ಮಾತ್ರ ಅರ್ಜುನನೊಂದಿಗೆ ಹೋರಾಡಬಲ್ಲೆವು ಎಂದು ಹೇಳಿದುದು (1-22).
04044001 ಕೃಪ ಉವಾಚ।
04044001a ಸದೈವ ತವ ರಾಧೇಯ ಯುದ್ಧೇ ಕ್ರೂರತರಾ ಮತಿಃ।
04044001c ನಾರ್ಥಾನಾಂ ಪ್ರಕೃತಿಂ ವೇತ್ಥ ನಾನುಬಂಧಮವೇಕ್ಷಸೇ।।
ಕೃಪನು ಹೇಳಿದನು: “ಕರ್ಣ! ನಿನ್ನ ಕ್ರೂರತರ ಮನಸ್ಸು ಯಾವಾಗಲೂ ಯುದ್ಧದಲ್ಲಿ ಆಸಕ್ತವಾಗಿರುತ್ತದೆ. ವಿಷಯಗಳ ಸ್ವರೂಪ ನಿನಗೆ ತಿಳಿಯದು. ಅವುಗಳ ಪರಿಣಾಮವೂ ನಿನಗೆ ಕಾಣುವುದಿಲ್ಲ.
04044002a ನಯಾ ಹಿ ಬಹವಃ ಸಂತಿ ಶಾಸ್ತ್ರಾಣ್ಯಾಶ್ರಿತ್ಯ ಚಿಂತಿತಾಃ।
04044002c ತೇಷಾಂ ಯುದ್ಧಂ ತು ಪಾಪಿಷ್ಠಂ ವೇದಯಂತಿ ಪುರಾವಿದಃ।।
ಶಾಸ್ತ್ರಗಳ ಆಧಾರದಿಂದ ಚಿಂತಿತವಾದ ನೀತಿಗಳು ಬಹಳಷ್ಟುಂಟು. ಅವುಗಳಲ್ಲಿ ಯುದ್ಧವು ಪಾಪಪೂರಿತವಾದುದೆಂದು ಹಿಂದಿನದನ್ನು ಬಲ್ಲವರು ಭಾವಿಸುತ್ತಾರೆ.
04044003a ದೇಶಕಾಲೇನ ಸಮ್ಯುಕ್ತಂ ಯುದ್ಧಂ ವಿಜಯದಂ ಭವೇತ್।
04044003c ಹೀನಕಾಲಂ ತದೇವೇಹ ಫಲವನ್ನ ಭವತ್ಯುತ।
04044003e ದೇಶೇ ಕಾಲೇ ಚ ವಿಕ್ರಾಂತಂ ಕಲ್ಯಾಣಾಯ ವಿಧೀಯತೇ।।
ದೇಶಕಾಲಗಳು ಕೂಡಿಬಂದಾಗ ಮಾತ್ರ ಯುದ್ಧವು ವಿಜಯವನ್ನು ತರುತ್ತದೆ. ಕೆಟ್ಟ ಕಾಲಗಳಲ್ಲಿ ಅದು ಫಲವನ್ನು ಕೊಡುವುದಿಲ್ಲ. ತಕ್ಕ ದೇಶಕಾಲಗಳಲ್ಲಿ ತೋರುವ ಪರಾಕ್ರಮವು ಕಲ್ಯಾಣವನ್ನುಂಟುಮಾಡುತ್ತದೆ.
04044004a ಆನುಕೂಲ್ಯೇನ ಕಾರ್ಯಾಣಾಮಂತರಂ ಸಂವಿಧೀಯತಾಂ।
04044004c ಭಾರಂ ಹಿ ರಥಕಾರಸ್ಯ ನ ವ್ಯವಸ್ಯಂತಿ ಪಂಡಿತಾಃ।।
ದೇಶಕಾಲಗಳ ಅನುಕೂಲಕ್ಕೆ ತಕ್ಕಂತೆ ಕಾರ್ಯಗಳ ಸಫಲತೆಯನ್ನು ಯೋಚಿಸಿಕೊಳ್ಳಬೇಕು. ರಥ ತಯಾರಿಸುವವನ ಅಭಿಪ್ರಾಯದಂತೆ ಪಂಡಿತರು ಆದರೆ ಯುದ್ಧ ಯೋಗ್ಯತೆಯನ್ನು ನಿರ್ಧರಿಸುವುದಿಲ್ಲ.
04044005a ಪರಿಚಿಂತ್ಯ ತು ಪಾರ್ಥೇನ ಸಂನಿಪಾತೋ ನ ನಃ ಕ್ಷಮಃ।
04044005c ಏಕಃ ಕುರೂನಭ್ಯರಕ್ಷದೇಕಶ್ಚಾಗ್ನಿಮತರ್ಪಯತ್।।
ಇದನ್ನೆಲ್ಲ ಆಲೋಚಿಸಿದರೆ ಪಾರ್ಥನೊಡನೆ ಯುದ್ಧಮಾಡುವುದು ನಮಗೆ ಉಚಿತವಲ್ಲ. ಅವನು ಒಂಟಿಯಾಗಿಯೇ ಕೌರವರನ್ನು ಗಂಧರ್ವರಿಂದ ರಕ್ಷಿಸಿದವನು. ಒಂಟಿಯಾಗಿಯೇ ಅಗ್ನಿಯನ್ನು ತೃಪ್ತಿಗೊಳಿಸಿದನು.
04044006a ಏಕಶ್ಚ ಪಂಚ ವರ್ಷಾಣಿ ಬ್ರಹ್ಮಚರ್ಯಮಧಾರಯತ್।
04044006c ಏಕಃ ಸುಭದ್ರಾಮಾರೋಪ್ಯ ದ್ವೈರಥೇ ಕೃಷ್ಣಮಾಹ್ವಯತ್।
04044006e ಅಸ್ಮಿನ್ನೇವ ವನೇ ಕೃಷ್ಣೋ ಹೃತಾಂ ಕೃಷ್ಣಾಮವಾಜಯತ್।।
ಅರ್ಜುನನು ಒಂಟಿಯಾಗಿ ಐದು ವರ್ಷ ಬ್ರಹ್ಮಚರ್ಯವನ್ನಾಚರಿಸಿದನು. ಸುಭದ್ರೆಯನ್ನು ರಥದಲ್ಲಿ ಕುಳ್ಳಿರಿಸಿಕೊಂಡು ಒಂಟಿಯಾಗಿಯೇ ಕೃಷ್ಣನನ್ನು ದ್ವಂದ್ವಯುದ್ಧಕ್ಕೆ ಕರೆದನು. ಈ ವನದಲ್ಲಿಯೇ ಅಪಹೃತಳಾದ ಕೃಷ್ಣೆಯನ್ನು ಗೆದ್ದುಕೊಂಡನು.
04044007a ಏಕಶ್ಚ ಪಂಚ ವರ್ಷಾಣಿ ಶಕ್ರಾದಸ್ತ್ರಾಣ್ಯಶಿಕ್ಷತ।
04044007c ಏಕಃ ಸಾಮ್ಯಮಿನೀಂ ಜಿತ್ವಾ ಕುರೂಣಾಮಕರೋದ್ಯಶಃ।।
ಒಂಟಿಯಾಗಿ ಐದು ವರ್ಷ ಇಂದ್ರನಿಂದ ಅಸ್ತ್ರಗಳನ್ನು ಕಲಿತನು. ಒಂಟಿಯಾಗಿಯೇ ಶತ್ರುಗಳನ್ನು ಗೆದ್ದು ಕುರುಗಳಿಗೆ ಯಶವನ್ನುಂಟುಮಾಡಿದನು.
04044008a ಏಕೋ ಗಂಧರ್ವರಾಜಾನಂ ಚಿತ್ರಸೇನಮರಿಂದಮಃ।
04044008c ವಿಜಿಗ್ಯೇ ತರಸಾ ಸಂಖ್ಯೇ ಸೇನಾಂ ಚಾಸ್ಯ ಸುದುರ್ಜಯಾಂ।।
ಆ ಶತ್ರುವಿನಾಶಕನು ಗಂಧರ್ವರಾಜ ಚಿತ್ರಸೇನನನ್ನೂ ಅವನ ಅಜೇಯ ಸೈನ್ಯವನ್ನೂ ಯುದ್ಧದಲ್ಲಿ ಒಂಟಿಯಾಗಿಯೇ ಬೇಗ ಸೋಲಿಸಿದ್ದನು.
04044009a ತಥಾ ನಿವಾತಕವಚಾಃ ಕಾಲಖಂಜಾಶ್ಚ ದಾನವಾಃ।
04044009c ದೈವತೈರಪ್ಯವಧ್ಯಾಸ್ತೇ ಏಕೇನ ಯುಧಿ ಪಾತಿತಾಃ।।
ಹಾಗೆಯೇ ದೇವತೆಗಳೂ ಕೊಲ್ಲಲಾಗದಿದ್ದ ನಿವಾತಕವಚ ಮತ್ತು ಕಾಲಖಂಜರೆಂಬ ರಾಕ್ಷಸರನ್ನೂ ಅವನೊಬ್ಬನೇ ಯುದ್ಧದಲ್ಲಿ ಉರುಳಿಸಿದನು.
04044010a ಏಕೇನ ಹಿ ತ್ವಯಾ ಕರ್ಣ ಕಿಂ ನಾಮೇಹ ಕೃತಂ ಪುರಾ।
04044010c ಏಕೈಕೇನ ಯಥಾ ತೇಷಾಂ ಭೂಮಿಪಾಲಾ ವಶೀಕೃತಾಃ।।
ಕರ್ಣ! ಆ ಪಾಂಡವರಲ್ಲಿ ಒಬ್ಬೊಬ್ಬರೇ ಅನೇಕ ರಾಜರನ್ನು ವಶಪಡಿಸಿಕೊಂಡಂತೆ ನೀನು ಒಂಟಿಯಾಗಿ ಹಿಂದೆ ಏನನ್ನಾದರೂ ಮಾಡಿರುವೆಯೇನು?
04044011a ಇಂದ್ರೋಽಪಿ ಹಿ ನ ಪಾರ್ಥೇನ ಸಮ್ಯುಗೇ ಯೋದ್ಧುಮರ್ಹತಿ।
04044011c ಯಸ್ತೇನಾಶಂಸತೇ ಯೋದ್ಧುಂ ಕರ್ತವ್ಯಂ ತಸ್ಯ ಭೇಷಜಂ।।
ಇಂದ್ರನೂ ಪಾರ್ಥನೊಡನೆ ಯುದ್ಧಮಾಡಲಾರ. ಅವನೊಡನೆ ಯುದ್ಧಮಾಡಬಯಸುವವನಿಗೆ ಯಾವುದಾದರೂ ಔಷಧ ಮಾಡಬೇಕು.
04044012a ಆಶೀವಿಷಸ್ಯ ಕ್ರುದ್ಧಸ್ಯ ಪಾಣಿಮುದ್ಯಮ್ಯ ದಕ್ಷಿಣಂ।
04044012c ಅವಿಮೃಶ್ಯ ಪ್ರದೇಶಿನ್ಯಾ ದಂಷ್ಟ್ರಾಮಾದಾತುಮಿಚ್ಛಸಿ।।
ನೀನು ವಿಚಾರಮಾಡದೇ ಬಲಗೈಯನ್ನೆತ್ತಿ ತೋರುಬೆರಳನ್ನು ಚಾಚಿ ರೋಷಗೊಂಡಿರುವ ವಿಷಸರ್ಪದ ಹಲ್ಲನ್ನು ಕೀಳಬಯಸುತ್ತಿರುವೆ.
04044013a ಅಥ ವಾ ಕುಂಜರಂ ಮತ್ತಮೇಕ ಏವ ಚರನ್ವನೇ।
04044013c ಅನಂಕುಶಂ ಸಮಾರುಹ್ಯ ನಗರಂ ಗಂತುಮಿಚ್ಛಸಿ।।
ಅಥವಾ ಒಬ್ಬನೇ ಅರಣ್ಯದಲ್ಲಿ ಅಲೆಯುತ್ತ ಅಂಕುಶವಿಲ್ಲದೆ ಮದಗಜವನ್ನು ಹತ್ತಿ ನಗರಕ್ಕೆ ಹೋಗಬಯಸುತ್ತಿರುವೆ.
04044014a ಸಮಿದ್ಧಂ ಪಾವಕಂ ವಾಪಿ ಘೃತಮೇದೋವಸಾಹುತಂ।
04044014c ಘೃತಾಕ್ತಶ್ಚೀರವಾಸಾಸ್ತ್ವಂ ಮಧ್ಯೇನೋತ್ತರ್ತುಮಿಚ್ಛಸಿ।।
ಅಥವಾ ತುಪ್ಪ, ಕೊಬ್ಬು, ಮಜ್ಜೆಗಳ ಆಹುತಿಯಿಂದ ಪ್ರಜ್ವಲಿಸುತ್ತಿರುವ ಅಗ್ನಿಯನ್ನು ತುಪ್ಪದಲ್ಲಿ ತೊಯ್ದ ವಸ್ತ್ರ ತೊಟ್ಟುಕೊಂಡು ದಾಟಿಹೋಗಬಯಸುತ್ತಿರುವೆ.
04044015a ಆತ್ಮಾನಂ ಯಃ ಸಮುದ್ಬಧ್ಯ ಕಂಠೇ ಬದ್ಧ್ವಾ ಮಹಾಶಿಲಾಂ।
04044015c ಸಮುದ್ರಂ ಪ್ರತರೇದ್ದೋರ್ಭ್ಯಾಂ ತತ್ರ ಕಿಂ ನಾಮ ಪೌರುಷಂ।।
ತನ್ನನ್ನು ಹಗ್ಗದಿಂದ ಬಿಗಿದುಕೊಂಡು ಕೊರಳಿನಲ್ಲಿ ದೊಡ್ಡ ಕಲ್ಲೊಂದನ್ನು ಕಟ್ಟಿಕೊಂಡು ತೋಳುಗಳಿಂದ ಈಜಿ ಸಮುದ್ರವನ್ನು ದಾಟುವವನಾರು? ಇದು ಎಂಥ ಪೌರುಷ?
04044016a ಅಕೃತಾಸ್ತ್ರಃ ಕೃತಾಸ್ತ್ರಂ ವೈ ಬಲವಂತಂ ಸುದುರ್ಬಲಃ।
04044016c ತಾದೃಶಂ ಕರ್ಣ ಯಃ ಪಾರ್ಥಂ ಯೋದ್ಧುಮಿಚ್ಛೇತ್ಸ ದುರ್ಮತಿಃ।।
ಕರ್ಣ! ಕೃತಾಸ್ತ್ರನೂ ಬಲಶಾಲಿಯೂ ಆದ ಅಂತಹ ಪಾರ್ಥನೊಡನೆ ಯುದ್ಧಮಾಡಬಯಸುವ ಅಸ್ತ್ರ ಪರಿಣಿತಿಯಿಲ್ಲದವನೂ ದುರ್ಬಲನೂ ಆದವನು ದುರ್ಮತಿ.
04044017a ಅಸ್ಮಾಭಿರೇಷ ನಿಕೃತೋ ವರ್ಷಾಣೀಹ ತ್ರಯೋದಶ।
04044017c ಸಿಂಹಃ ಪಾಶವಿನಿರ್ಮುಕ್ತೋ ನ ನಃ ಶೇಷಂ ಕರಿಷ್ಯತಿ।।
ನಮ್ಮಿಂದ ಹದಿಮೂರು ವರ್ಷಕಾಲ ವಂಚಿತರಾಗಿ ಈಗ ಪಾಶದಿಂದ ಬಿಡುಗಡೆಗೊಂಡಿರುವ ಈ ಸಿಂಹವು ನಮ್ಮಲ್ಲಿ ಯಾರನ್ನೂ ಉಳಿಸುವುದಿಲ್ಲ.
04044018a ಏಕಾಂತೇ ಪಾರ್ಥಮಾಸೀನಂ ಕೂಪೇಽಗ್ನಿಮಿವ ಸಂವೃತಂ।
04044018c ಅಜ್ಞಾನಾದಭ್ಯವಸ್ಕಂದ್ಯ ಪ್ರಾಪ್ತಾಃ ಸ್ಮೋ ಭಯಮುತ್ತಮಂ।।
ಬಾವಿಯಲ್ಲಿ ಅಡಗಿರುವ ಬೆಂಕಿಯಂತೆ ಏಕಾಂತದಲ್ಲಿ ಇದ್ದಂತ ಪಾರ್ಥನನ್ನು ಅಜ್ಞಾನದಿಂದ ಎದುರಿಸಿ ನಾವು ಮಹಾಭಯಕ್ಕೊಳಗಾದೆವು.
04044019a ಸಹ ಯುಧ್ಯಾಮಹೇ ಪಾರ್ಥಮಾಗತಂ ಯುದ್ಧದುರ್ಮದಂ।
04044019c ಸೈನ್ಯಾಸ್ತಿಷ್ಠಂತು ಸಂನದ್ಧಾ ವ್ಯೂಢಾನೀಕಾಃ ಪ್ರಹಾರಿಣಃ।।
ಯುದ್ಧೋನ್ಮತ್ತನಾಗಿ ಬಂದಿರುವ ಪಾರ್ಥನೊಡನೆ ನಾವು ಹೋರಾಡೋಣ. ಸೈನ್ಯ ಸನ್ನದ್ಧವಾಗಿ ನಿಲ್ಲಲಿ. ಯೋಧರು ವ್ಯೂಹಗೊಳ್ಳಲಿ.
04044020a ದ್ರೋಣೋ ದುರ್ಯೋಧನೋ ಭೀಷ್ಮೋ ಭವಾನ್ದ್ರೌಣಿಸ್ತಥಾ ವಯಂ।
04044020c ಸರ್ವೇ ಯುಧ್ಯಾಮಹೇ ಪಾರ್ಥಂ ಕರ್ಣ ಮಾ ಸಾಹಸಂ ಕೃಥಾಃ।।
ದ್ರೋಣ, ದುರ್ಯೋಧನ, ಭೀಷ್ಮ, ನೀನು, ಅಶ್ವತ್ಥಾಮ - ನಾವೆಲ್ಲರೂ ಪಾರ್ಥನೊಡನೆ ಯುದ್ಧಮಾಡೋಣ ಕರ್ಣ. ನೀನೊಬ್ಬನೇ ಸಾಹಸಮಾಡಬೇಡ.
04044021a ವಯಂ ವ್ಯವಸಿತಂ ಪಾರ್ಥಂ ವಜ್ರಪಾಣಿಮಿವೋದ್ಯತಂ।
04044021c ಷಡ್ರಥಾಃ ಪ್ರತಿಯುಧ್ಯೇಮ ತಿಷ್ಠೇಮ ಯದಿ ಸಂಹತಾಹಃ।
ಷಡ್ರಥರಾದ ನಾವು ಒಟ್ಟಾಗಿ ನಿಂತರೆ ವಜ್ರಪಾಣಿಯಂತೆ ಸಿದ್ಧವಾಗಿ ಯುದ್ಧಕ್ಕೆ ನಿಶ್ಚಯಿಸಿರುವ ಪಾರ್ಥನೊಡನೆ ಹೋರಾಡಬಲ್ಲೆವು.
04044022a ವ್ಯೂಢಾನೀಕಾನಿ ಸೈನ್ಯಾನಿ ಯತ್ತಾಃ ಪರಮಧನ್ವಿನಃ।
04044022c ಯುಧ್ಯಾಮಹೇಽರ್ಜುನಂ ಸಂಖ್ಯೇ ದಾನವಾ ವಾಸವಂ ಯಥಾ।।
ವ್ಯೂಹಗೊಂಡು ನಿಂತ ಸೈನ್ಯದೊಡಗೂಡಿದ ಶ್ರೇಷ್ಠ ಧನುರ್ಧರರಾದ ನಾವು ಎಚ್ಚರಿಕೆಯಿಂದ ರಣದಲ್ಲಿ ದಾನವರು ಇಂದ್ರನೊಡನೆ ಯುದ್ಧಮಾಡುವಂತೆ ಅರ್ಜುನನೊಡನೆ ಯುದ್ಧಮಾಡೋಣ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಕೃಪವಾಕ್ಯೇ ಚತುಶ್ಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಕೃಪವಾಕ್ಯದಲ್ಲಿ ನಲ್ವತ್ನಾಲ್ಕನೆಯ ಅಧ್ಯಾಯವು.