043 ಉತ್ತರಗೋಗ್ರಹೇ ಕರ್ಣವಿಕತ್ಥನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ಗೋಹರಣ ಪರ್ವ

ಅಧ್ಯಾಯ 43

ಸಾರ

ಕರ್ಣನು ತಾನು ಅರ್ಜುನನನ್ನು ಎದುರಿಸಿ ಸೋಲಿಸುವೆನೆಂದು ಪೌರುಷವನ್ನು ಕೊಚ್ಚಿಕೊಳ್ಳುವುದು (1-21).

04043001 ಕರ್ಣ ಉವಾಚ।
04043001a ಸರ್ವಾನಾಯುಷ್ಮತೋ ಭೀತಾನ್ಸಂತ್ರಸ್ತಾನಿವ ಲಕ್ಷಯೇ।
04043001c ಅಯುದ್ಧಮನಸಶ್ಚೈವ ಸರ್ವಾಂಶ್ಚೈವಾನವಸ್ಥಿತಾನ್।।

ಕರ್ಣನು ಹೇಳಿದನು: “ಈ ಎಲ್ಲ ಆಯುಷ್ಮಂತರೂ ಹೆದರಿದವರಂತೆ, ತಲ್ಲಣಗೊಂಡವರಂತೆ, ಯುದ್ಧಮಾಡಲು ಮನಸ್ಸಿಲ್ಲದವರಂತೆ ಮತ್ತು ಅಸ್ಥಿರರಂತೆ ಕಂಡು ಬರುತ್ತಿದ್ದಾರೆ.

04043002a ಯದ್ಯೇಷ ರಾಜಾ ಮತ್ಸ್ಯಾನಾಂ ಯದಿ ಬೀಭತ್ಸುರಾಗತಃ।
04043002c ಅಹಮಾವಾರಯಿಷ್ಯಾಮಿ ವೇಲೇವ ಮಕರಾಲಯಂ।।

ಬಂದಿರುವವನು ಮತ್ಸ್ಯನಾಗಿರಲಿ ಅಥವಾ ಅರ್ಜುನನಾಗಿರಲಿ, ಅವನನ್ನು ದಡವು ಸಮುದ್ರವನ್ನು ತಡೆಯುವಂತೆ ನಾನು ತಡೆಯುತ್ತೇನೆ.

04043003a ಮಮ ಚಾಪಪ್ರಮುಕ್ತಾನಾಂ ಶರಾಣಾಂ ನತಪರ್ವಣಾಂ।
04043003c ನಾವೃತ್ತಿರ್ಗಚ್ಛತಾಮಸ್ತಿ ಸರ್ಪಾಣಾಮಿವ ಸರ್ಪತಾಂ।।

ನನ್ನ ಬಿಲ್ಲಿನಿಂದ ಹೊರಟ, ನೇರಗೊಳಿಸಿದ ಗೆಣ್ಣುಗಳನ್ನುಳ್ಳ, ಸರ್ಪಗಳಂತೆ ಹರಿಯುವ ಬಾಣಗಳು ಎಂದೂ ವ್ಯರ್ಥವಾಗಿ ಹಿಂದಿರುಗಿ ಬರುವುದಿಲ್ಲ.

04043004a ರುಕ್ಮಪುಂಖಾಃ ಸುತೀಕ್ಷ್ಣಾಗ್ರಾ ಮುಕ್ತಾ ಹಸ್ತವತಾ ಮಯಾ।
04043004c ಚಾದಯಂತು ಶರಾಃ ಪಾರ್ಥಂ ಶಲಭಾ ಇವ ಪಾದಪಂ।।

ನನ್ನ ಪಳಗಿದ ಕೈಗಳಿಂದ ಹೊರಡುವ ಚಿನ್ನದ ಗರಿಯ ಚೂಪು ಮೊನೆಯ ಬಾಣಗಳು ಮರವನ್ನು ಕವಿಯುವ ಮಿಡತೆಗಳಂತೆ ಪಾರ್ಥನನ್ನು ಕವಿಯಲಿ.

04043005a ಶರಾಣಾಂ ಪುಂಖಸಕ್ತಾನಾಂ ಮೌರ್ವ್ಯಾಭಿಹತಯಾ ದೃಢಂ।
04043005c ಶ್ರೂಯತಾಂ ತಲಯೋಃ ಶಬ್ದೋ ಭೇರ್ಯೋರಾಹತಯೋರಿವ।।

ಗರಿಗಳುಳ್ಳ ಬಾಣಗಳ ಮೇಲೆ ಬಲವಾಗಿ ಅಪ್ಪಳಿಸಿದ ಹೆದೆಯಿಂದ ನನ್ನ ಕೈಗಾಪಿನ ಮೇಲೆ ಉಂಟಾಗುವ ಭೇರಿ ಬಾರಿಸಿದಂಥ ಶಬ್ಧವನ್ನು ಶತ್ರುಗಳು ಕೇಳಲಿ.

04043006a ಸಮಾಹಿತೋ ಹಿ ಬೀಭತ್ಸುರ್ವರ್ಷಾಣ್ಯಷ್ಟೌ ಚ ಪಂಚ ಚ।
04043006c ಜಾತಸ್ನೇಹಶ್ಚ ಯುದ್ಧಸ್ಯ ಮಯಿ ಸಂಪ್ರಹರಿಷ್ಯತಿ।।

ಹದಿಮೂರು ವರ್ಷ ಸಂಯಮದಿಂದಿದ್ದ ಅರ್ಜುನನು ಈಗ ಯುದ್ಧದಲ್ಲಿ ಆಸಕ್ತಿಯುಳ್ಳವನಾಗಿ ನನ್ನನ್ನು ಬಲವಾಗಿಯೇ ಹೊಡೆಯುತ್ತಾನೆ.

04043007a ಪಾತ್ರೀಭೂತಶ್ಚ ಕೌಂತೇಯೋ ಬ್ರಾಹ್ಮಣೋ ಗುಣವಾನಿವ।
04043007c ಶರೌಘಾನ್ಪ್ರತಿಗೃಹ್ಣಾತು ಮಯಾ ಮುಕ್ತಾನ್ಸಹಸ್ರಶಃ।।

ಗುಣಶಾಲಿ ಬ್ರಾಹ್ಮಣನಂತೆ ದಾನಪಾತ್ರನಾಗಿರುವ ಆ ಕುಂತೀಪುತ್ರನು ನಾನು ಬಿಡುವ ಸಾವಿರಾರು ಬಾಣಗಳ ಸಮೂಹವನ್ನು ಸ್ವೀಕರಿಸಲಿ.

04043008a ಏಷ ಚೈವ ಮಹೇಷ್ವಾಸಸ್ತ್ರಿಷು ಲೋಕೇಷು ವಿಶ್ರುತಃ।
04043008c ಅಹಂ ಚಾಪಿ ಕುರುಶ್ರೇಷ್ಠಾ ಅರ್ಜುನಾನ್ನಾವರಃ ಕ್ವ ಚಿತ್।।

ಇವನು ಮೂರುಲೋಕಗಳಲ್ಲೂ ಪ್ರಸಿದ್ಧನಾದ ದೊಡ್ಡ ಬಿಲ್ಲುಗಾರ. ಕುರುಶ್ರೇಷ್ಠರೇ! ನಾನು ಕೂಡ ಈ ಅರ್ಜುನನಿಗೆ ಯಾವ ರೀತಿಯಲ್ಲೂ ಕಡಿಮೆಯಿಲ್ಲ.

04043009a ಇತಶ್ಚೇತಶ್ಚ ನಿರ್ಮುಕ್ತೈಃ ಕಾಂಚನೈರ್ಗಾರ್ಧ್ರವಾಜಿತೈಃ।
04043009c ದೃಶ್ಯತಾಮದ್ಯ ವೈ ವ್ಯೋಮ ಖದ್ಯೋತೈರಿವ ಸಂವೃತಂ।।

ನಾನು ಎಲ್ಲ ಕಡೆಗಳಲ್ಲೂ ಬಿಡುವ ಹದ್ದಿನ ಗರಿಗಳಿಂದ ಕೂಡಿದ ಚಿನ್ನದ ಬಾಣಗಳಿಂದ ಆಕಾಶವು ಮಿಂಚು ಹುಳುಗಳಿಂದ ತುಂಬಿದಂತಾಗುವುದನ್ನು ಇಂದು ನೋಡಿರಿ.

04043010a ಅದ್ಯಾಹಮೃಣಮಕ್ಷಯ್ಯಂ ಪುರಾ ವಾಚಾ ಪ್ರತಿಶ್ರುತಂ।
04043010c ಧಾರ್ತರಾಷ್ಟ್ರಸ್ಯ ದಾಸ್ಯಾಮಿ ನಿಹತ್ಯ ಸಮರೇಽರ್ಜುನಂ।।

ನಾನಿಂದು ಯುದ್ಧದಲ್ಲಿ ಅರ್ಜುನನನ್ನು ಕೊಂದು ದುರ್ಯೋಧನನಿಗೆ ಹಿಂದೆ ಮಾತುಕೊಟ್ಟಿದ್ದಂತೆ ಅಕ್ಷಯವಾದ ಋಣವನ್ನು ತೀರಿಸಿಬಿಡುತ್ತೇನೆ.

04043011a ಅಂತರಾ ಚಿದ್ಯಮಾನಾನಾಂ ಪುಂಖಾನಾಂ ವ್ಯತಿಶೀರ್ಯತಾಂ।
04043011c ಶಲಭಾನಾಮಿವಾಕಾಶೇ ಪ್ರಚಾರಃ ಸಂಪ್ರದೃಶ್ಯತಾಂ।।

ಮಧ್ಯಮಾರ್ಗದಲ್ಲೆ ಕಡಿದುಹೋಗಿ ಬಾಣಗಳ ಉದುರಿದ ಗರಿಗಳ ಸಂಚಾರವು ಆಕಾಶದಲ್ಲಿ ಮಿಡತೆಗಳ ಸಂಚಾರದಂತೆ ತೋರಲಿ.

04043012a ಇಂದ್ರಾಶನಿಸಮಸ್ಪರ್ಶಂ ಮಹೇಂದ್ರಸಮತೇಜಸಂ।
04043012c ಅರ್ದಯಿಷ್ಯಾಮ್ಯಹಂ ಪಾರ್ಥಮುಲ್ಕಾಭಿರಿವ ಕುಂಜರಂ।।

ಪಂಜುಗಳು ಆನೆಯನ್ನು ಪೀಡಿಸುವಂತೆ, ಇಂದ್ರನ ವಜ್ರಾಯುಧದಂತೆ ಕಠಿನಸ್ಪರ್ಶದವನೂ ಮಹೇಂದ್ರಸಮಾನವಾದ ತೇಜಸ್ಸುಳ್ಳವನೂ ಆದ ಆ ಪಾರ್ಥನನ್ನು ಪೀಡಿಸುತ್ತೇನೆ.

04043013a ತಮಗ್ನಿಮಿವ ದುರ್ಧರ್ಷಮಸಿಶಕ್ತಿಶರೇಂಧನಂ।
04043013c ಪಾಂಡವಾಗ್ನಿಮಹಂ ದೀಪ್ತಂ ಪ್ರದಹಂತಮಿವಾಹಿತಾನ್।।

ಎದುರಿಸಲಾಗದ, ಖಡ್ಗ, ಶಕ್ತಿ, ಶರಗಳನ್ನು ಇಂಧನವಾಗುಳ್ಳ, ಶತ್ರುಗಳನ್ನು ಸುಟ್ಟುಹಾಕುವಂತೆ ಜ್ವಲಿಸುವ ಪಾಂಡವಾಗ್ನಿಯು ಅವನು.

04043014a ಅಶ್ವವೇಗಪುರೋವಾತೋ ರಥೌಘಸ್ತನಯಿತ್ನುಮಾನ್।
04043014c ಶರಧಾರೋ ಮಹಾಮೇಘಃ ಶಮಯಿಷ್ಯಾಮಿ ಪಾಂಡವಂ।।

ಕುದುರೆಗಳ ವೇಗವೇ ಮುಂದೆ ಹೋಗುವ ಗಾಳಿಯಾಗಿರುವ, ರಥಗಳ ರಭಸವೇ ಗುಡುಗಾಗಿಯೂ ಬಾಣಗಳೇ ಮಳೆಯಾಗಿಯೂ ಉಳ್ಳ ಮಹಾಮೇಘನಾಗಿ ನಾನು ಆ ಬೆಂಕಿಯಂತಹ ಪಾಂಡವನನ್ನು ನಂದಿಸುತ್ತೇನೆ.

04043015a ಮತ್ಕಾರ್ಮುಕವಿನಿರ್ಮುಕ್ತಾಃ ಪಾರ್ಥಮಾಶೀವಿಷೋಪಮಾಃ।
04043015c ಶರಾಃ ಸಮಭಿಸರ್ಪಂತು ವಲ್ಮೀಕಮಿವ ಪನ್ನಗಾಃ।।

ಹಾವುಗಳು ಹುತ್ತವನ್ನು ಹೊಗುವಂತೆ ನನ್ನ ಬಿಲ್ಲಿನಿಂದ ಹೊರಡುವ ವಿಷಸರ್ಪ ಸಮಾನ ಬಾಣಗಳು ಪಾರ್ಥನನ್ನು ತಾಗಲಿ.

04043016a ಜಾಮದಗ್ನ್ಯಾನ್ಮಯಾ ಹ್ಯಸ್ತ್ರಂ ಯತ್ಪ್ರಾಪ್ತಮೃಷಿಸತ್ತಮಾತ್।
04043016c ತದುಪಾಶ್ರಿತ್ಯ ವೀರ್ಯಂ ಚ ಯುಧ್ಯೇಯಮಪಿ ವಾಸವಂ।।

ಋಷಿಶ್ರೇಷ್ಠ ಪರಶುರಾಮನಿಂದ ಅಸ್ತ್ರವನ್ನು ಪಡೆದಿರುವ ನಾನು ಅದರ ಸತ್ವವನ್ನು ಅವಲಂಬಿಸಿ ದೇವೇಂದ್ರನೊಡನೆ ಕೂಡ ಯುದ್ಧಮಾಡುತ್ತೇನೆ.

04043017a ಧ್ವಜಾಗ್ರೇ ವಾನರಸ್ತಿಷ್ಠನ್ಭಲ್ಲೇನ ನಿಹತೋ ಮಯಾ।
04043017c ಅದ್ಯೈವ ಪತತಾಂ ಭೂಮೌ ವಿನದನ್ಭೈರವಾನ್ರವಾನ್।।

ಅರ್ಜುನನ ಬಾವುಟದ ತುದಿಯಲ್ಲಿರುವ ವಾನರನು ಇಂದೇ ನನ್ನ ಭಲ್ಲೆಯಿಂದ ಹತನಾಗಿ ಭಯಂಕರವಾಗಿ ಶಬ್ಧಮಾಡುತ್ತಾ ರಥದಿಂದ ನೆಲಕ್ಕುರಳಲಿ.

04043018a ಶತ್ರೋರ್ಮಯಾಭಿಪನ್ನಾನಾಂ ಭೂತಾನಾಂ ಧ್ವಜವಾಸಿನಾಂ।
04043018c ದಿಶಃ ಪ್ರತಿಷ್ಠಮಾನಾನಾಮಸ್ತು ಶಬ್ದೋ ದಿವಂ ಗತಃ।।

ದಿಕ್ಕುಗಳಲ್ಲಿ ಪ್ರತಿಷ್ಠಿತವಾಗಿರುವ ಮತ್ತು ಶತ್ರುಗಳ ಧ್ವಜಗಳಲ್ಲಿ ಬಂದು ವಾಸಿಸುವ ಭೂತಗಳು ನನ್ನಿಂದ ಬಾಧೆಗೊಂಡು ಹೊರಡಿಸುವ ಚೀತ್ಕಾರವು ಆಗಸವನ್ನು ಮುಟ್ಟಲಿ.

04043019a ಅದ್ಯ ದುರ್ಯೋಧನಸ್ಯಾಹಂ ಶಲ್ಯಂ ಹೃದಿ ಚಿರಸ್ಥಿತಂ।
04043019c ಸಮೂಲಮುದ್ಧರಿಷ್ಯಾಮಿ ಬೀಭತ್ಸುಂ ಪಾತಯನ್ರಥಾತ್।।

ಇಂದು ಅರ್ಜುನನನ್ನು ರಥದಿಂದ ಕೆಡವಿ ದುರ್ಯೋಧನನ ಹೃದಯದಲ್ಲಿ ಬಹುಕಾಲದಿಂದ ನಾಟಿಕೊಂಡಿರುವ ಮುಳ್ಳನ್ನು ಬೇರುಸಹಿತ ಕಿತ್ತು ಹಾಕುತ್ತೇನೆ.

04043020a ಹತಾಶ್ವಂ ವಿರಥಂ ಪಾರ್ಥಂ ಪೌರುಷೇ ಪರ್ಯವಸ್ಥಿತಂ।
04043020c ನಿಃಶ್ವಸಂತಂ ಯಥಾ ನಾಗಮದ್ಯ ಪಶ್ಯಂತು ಕೌರವಾಃ।।

ಕುದುರೆಗಳು ಹತವಾಗಿ ರಥಹೀನರಾಗಿ ಪೌರುಷವನ್ನು ಕಳೆದುಕೊಂಡ ಪಾರ್ಥ ಹಾವಿನಂತೆ ನಿಟ್ಟುಸಿರು ಬಿಡುವುದನ್ನು ಕೌರವರು ಇಂದು ನೋಡಲಿ.

04043021a ಕಾಮಂ ಗಚ್ಛಂತು ಕುರವೋ ಧನಮಾದಾಯ ಕೇವಲಂ।
04043021c ರಥೇಷು ವಾಪಿ ತಿಷ್ಠಂತೋ ಯುದ್ಧಂ ಪಶ್ಯಂತು ಮಾಮಕಂ।।

ಬೇಕಾದರೆ ಕೌರವರು ಕೇವಲ ಗೋಧನವನ್ನು ತೆಗೆದುಕೊಂಡು ಹೋಗಿಬಿಡಲಿ ಅಥವಾ ರಥಗಳಲ್ಲಿದ್ದು ನನ್ನ ಯುದ್ಧವನ್ನು ನೋಡಲಿ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಕರ್ಣವಿಕತ್ಥನೇ ತ್ರಿಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಕರ್ಣವಿಕತ್ಥನದಲ್ಲಿ ನಲ್ವತ್ಮೂರನೆಯ ಅಧ್ಯಾಯವು.