ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ವಿರಾಟ ಪರ್ವ
ಗೋಹರಣ ಪರ್ವ
ಅಧ್ಯಾಯ 42
ಸಾರ
ದುರ್ಯೋಧನನು ಭೀಷ್ಮ-ದ್ರೋಣ-ಕೃಪರನ್ನುದ್ದೇಶಿಸಿ ಹದಿಮೂರನೆಯ ವರ್ಷವು ಮುಗಿಯುವುದರ ಒಳಗೇ ಪಾಂಡವರು ಕಾಣಿಸಿಕೊಂಡಿರುವುದರಿಂದ ಒಪ್ಪಂದದ ಪ್ರಕಾರ ಅವರು ಇನ್ನೂ ಹನ್ನೆರಡು ವರ್ಷ ವನಕ್ಕೆ ಹೋಗಬೇಕೆಂದೂ (1-6), ಅರ್ಜುನನು ಬಂದಿದ್ದಾನೆಂದು ಯಾರೂ ಹಿಂದೆ ತಿರುಗಬೇಕಾಗಿಲ್ಲವೆಂದೂ (7-15), ಅರ್ಜುನನ ಮೇಲೆ ಅತಿ ಪ್ರೀತಿಯಿರುವ ದ್ರೋಣರನ್ನು ಬಿಟ್ಟು ಯುದ್ಧನೀತಿಯನ್ನು ಮಾಡಬೇಕೆಂದು (16-31) ಹೇಳುವುದು.
04042001 ವೈಶಂಪಾಯನ ಉವಾಚ।
04042001a ಅಥ ದುರ್ಯೋಧನೋ ರಾಜಾ ಸಮರೇ ಭೀಷ್ಮಮಬ್ರವೀತ್।
04042001c ದ್ರೋಣಂ ಚ ರಥಶಾರ್ದೂಲಂ ಕೃಪಂ ಚ ಸುಮಹಾರಥಂ।।
ವೈಶಂಪಾಯನನು ಹೇಳಿದನು: “ಬಳಿಕ ರಾಜ ದುರ್ಯೋಧನನು ಯುದ್ಧರಂಗದಲ್ಲಿ ಭೀಷ್ಮನಿಗೂ ರಥಿಕಶ್ರೇಷ್ಠ ದ್ರೋಣನಿಗೂ ಸುಮಹಾರಥ ಕೃಪನಿಗೂ ಹೇಳಿದನು:
04042002a ಉಕ್ತೋಽಯಮರ್ಥ ಆಚಾರ್ಯೋ ಮಯಾ ಕರ್ಣೇನ ಚಾಸಕೃತ್।
04042002c ಪುನರೇವ ಚ ವಕ್ಷ್ಯಾಮಿ ನ ಹಿ ತೃಪ್ಯಾಮಿ ತಂ ಬ್ರುವನ್।।
“ಈ ವಿಷಯವನ್ನು ಅಚಾರ್ಯನಿಗೆ ನಾನೂ ಕರ್ಣನೂ ಅನೇಕಸಲ ಹೇಳಿದ್ದೇವೆ. ಅದನ್ನು ಹೇಳಿ ತೃಪ್ತನಾಗದೇ ಮತ್ತೆ ಹೇಳುತ್ತಿದ್ದೇನೆ.
04042003a ಪರಾಜಿತೈರ್ಹಿ ವಸ್ತವ್ಯಂ ತೈಶ್ಚ ದ್ವಾದಶ ವತ್ಸರಾನ್।
04042003c ವನೇ ಜನಪದೇಽಜ್ಞಾತೈರೇಷ ಏವ ಪಣೋ ಹಿ ನಃ।।
ಅವರು ಜೂಜಿನಲ್ಲಿ ಸೋತರೆ ಹನ್ನೆರಡು ವರ್ಷ ಕಾಡಿನಲ್ಲಿಯೂ ಒಂದು ವರ್ಷ ಅಜ್ಞಾತರಾಗಿ ಯಾವುದಾದರೂ ದೇಶದಲ್ಲಿಯೂ ವಾಸಮಾಡತಕ್ಕದ್ದು – ಇದೇ ಅಲ್ಲವೇ ನಮ್ಮ ಪಣ.
04042004a ತೇಷಾಂ ನ ತಾವನ್ನಿರ್ವೃತ್ತಂ ವರ್ತತೇ ತು ತ್ರಯೋದಶಂ।
04042004c ಅಜ್ಞಾತವಾಸಂ ಬೀಭತ್ಸುರಥಾಸ್ಮಾಭಿಃ ಸಮಾಗತಃ।।
ಅವರ ಅಜ್ಞಾತವಾಸದ ಹದಿಮೂರನೆಯ ವರ್ಷ ಮುಗಿದಿಲ್ಲ; ಇನ್ನೂ ನಡೆಯುತ್ತಿದೆ. ಆದರೆ ಅರ್ಜುನನು ನಮ್ಮೆದುರು ಬಂದಿದ್ದಾನೆ.
04042005a ಅನಿವೃತ್ತೇ ತು ನಿರ್ವಾಸೇ ಯದಿ ಬೀಭತ್ಸುರಾಗತಃ।
04042005c ಪುನರ್ದ್ವಾದಶ ವರ್ಷಾಣಿ ವನೇ ವತ್ಸ್ಯಂತಿ ಪಾಂಡವಾಃ।।
ಅಜ್ಞಾತವಾಸ ಮುಗಿಯದಿರುವಾಗ ಅರ್ಜುನನು ಬಂದಿದ್ದ ಪಕ್ಷದಲ್ಲಿ ಪಾಂಡವರು ಮತ್ತೆ ಹನ್ನೆರಡು ವರ್ಷ ಕಾಡಿನಲ್ಲಿ ವಾಸಮಾಡಬೇಕಾಗುತ್ತದೆ.
04042006a ಲೋಭಾದ್ವಾ ತೇ ನ ಜಾನೀಯುರಸ್ಮಾನ್ವಾ ಮೋಹ ಆವಿಶತ್।
04042006c ಹೀನಾತಿರಿಕ್ತಮೇತೇಷಾಂ ಭೀಷ್ಮೋ ವೇದಿತುಮರ್ಹತಿ।।
ಅವರು ರಾಜ್ಯ ಲೋಭದಿಂದ ಅವಧಿಯನ್ನು ಮರೆತಿದ್ದಾರೆಯೋ ಅಥವಾ ನಮಗೇ ಭ್ರಾಂತಿಯುಂಟಾಗಿದೆಯೋ ಅವರ ಅವಧಿಯ ಹೆಚ್ಚು ಕಡಿಮೆಗಳನ್ನು ಲೆಕ್ಕಹಾಕಿ ತಿಳಿಸಲು ಭೀಷ್ಮರು ಸಮರ್ಥರು.
04042007a ಅರ್ಥಾನಾಂ ತು ಪುನರ್ದ್ವೈಧೇ ನಿತ್ಯಂ ಭವತಿ ಸಂಶಯಃ।
04042007c ಅನ್ಯಥಾ ಚಿಂತಿತೋ ಹ್ಯರ್ಥಃ ಪುನರ್ಭವತಿ ಚಾನ್ಯಥಾ।।
ವಿಷಯಕ್ಕೆ ಎರಡು ಮುಖಗಳಿರುವಲ್ಲಿ ಯಾವುದು ಸರಿಯೆಂಬುದರ ಬಗ್ಗೆ ಯಾವಾಗಲೂ ಸಂಶಯವುಂಟಾಗುತ್ತದೆ. ಒಂದು ರೀತಿಯಲ್ಲಿ ಚಿಂತಿತವಾದ ವಿಷಯವು ಕೆಲವೊಮ್ಮೆ ಮತ್ತೊಂದು ರೀತಿಯಲ್ಲಿ ಪರಿಣಮಿಸುತ್ತದೆ.
04042008a ಉತ್ತರಂ ಮಾರ್ಗಮಾಣಾನಾಂ ಮತ್ಸ್ಯಸೇನಾಂ ಯುಯುತ್ಸತಾಂ।
04042008c ಯದಿ ಬೀಭತ್ಸುರಾಯಾತಸ್ತೇಷಾಂ ಕಃ ಸ್ಯಾತ್ಪರಾಙ್ಮುಖಃ।।
ಮತ್ಸ್ಯಸೇನೆಯೊಡನೆ ಹೋರಾಡುತ್ತಾ ಉತ್ತರನನ್ನು ನಿರೀಕ್ಷಿಸುತ್ತಿದ್ದ ನಮ್ಮಲ್ಲಿ ಯಾರುತಾನೆ ಅರ್ಜುನನು ಬಂದನೆಂದು ಬೆನ್ನುತಿರುಗಿಸಿಯಾರು?
04042009a ತ್ರಿಗರ್ತಾನಾಂ ವಯಂ ಹೇತೋರ್ಮತ್ಸ್ಯಾನ್ಯೋದ್ಧುಮಿಹಾಗತಾಃ।
04042009c ಮತ್ಸ್ಯಾನಾಂ ವಿಪ್ರಕಾರಾಂಸ್ತೇ ಬಹೂನಸ್ಮಾನಕೀರ್ತಯನ್।।
ತ್ರಿಗರ್ತರಿಗಾಗಿ ಮತ್ಸ್ಯರೊಂದಿಗೆ ಯುದ್ಧಮಾಡಲು ನಾವು ಇಲ್ಲಿಗೆ ಬಂದೆವು. ಮತ್ಸ್ಯರು ಮಾಡಿದ ಕೆಡಕುಗಳನ್ನು ತ್ರಿಗರ್ತರು ನಮಗೆ ಬಹುವಾಗಿ ಹೇಳುತ್ತಿದ್ದರು.
04042010a ತೇಷಾಂ ಭಯಾಭಿಪನ್ನಾನಾಂ ತದಸ್ಮಾಭಿಃ ಪ್ರತಿಶ್ರುತಂ।
04042010c ಪ್ರಥಮಂ ತೈರ್ಗ್ರಹೀತವ್ಯಂ ಮತ್ಸ್ಯಾನಾಂ ಗೋಧನಂ ಮಹತ್।।
04042011a ಸಪ್ತಮೀಮಪರಾಹ್ಣೇ ವೈ ತಥಾ ನಸ್ತೈಃ ಸಮಾಹಿತಂ।
04042011c ಅಷ್ಟಮ್ಯಾಂ ಪುನರಸ್ಮಾಭಿರಾದಿತ್ಯಸ್ಯೋದಯಂ ಪ್ರತಿ।।
ಭಯಗ್ರಸ್ತರಾದ ಅವರಿಗೆ ನಾವು ನೆರವಿನ ಭರವಸೆ ಕೊಟ್ಟೆವು. ಮೊದಲು ಅವರು ಮತ್ಸ್ಯರ ದೊಡ್ಡ ಗೋಧನವನ್ನು ಸಪ್ತಮಿಯಂದು ಅಪರಾಹ್ಣದಲ್ಲಿ ಹಿಡಿಯತಕ್ಕದ್ದೆಂದೂ ನಾವು ಅಷ್ಟಮಿಯಂದು ಸೂರ್ಯೋದಯದ ಹೊತ್ತಿಗೆ ಇನ್ನಷ್ಟು ಗೋಧನವನ್ನು ಹಿಡಿಯತಕ್ಕದ್ದೆಂದೂ ಅವರಿಗೂ ನಮಗೂ ಒಪ್ಪಂದವಾಗಿತ್ತು.
04042012a ತೇ ವಾ ಗಾವೋ ನ ಪಶ್ಯಂತಿ ಯದಿ ವ ಸ್ಯುಃ ಪರಾಜಿತಾಃ।
04042012c ಅಸ್ಮಾನ್ವಾಪ್ಯತಿಸಂಧಾಯ ಕುರ್ಯುರ್ಮತ್ಸ್ಯೇನ ಸಂಗತಂ।।
ಅವರಿಗೆ ಗೋವುಗಳು ಸಿಕ್ಕದಿರಬಹುದು ಅಥವಾ ಅವರು ಸೋತಿದ್ದರೆ ನಮ್ಮನ್ನು ವಂಚಿಸಿ ಮತ್ಸ್ಯರಾಜನೊಡನೆ ಸಂಧಿ ಮಾಡಿಕೊಂಡಿರಬಹುದು.
04042013a ಅಥ ವಾ ತಾನುಪಾಯಾತೋ ಮತ್ಸ್ಯೋ ಜಾನಪದೈಃ ಸಹ।
04042013c ಸರ್ವಯಾ ಸೇನಯಾ ಸಾರ್ಧಮಸ್ಮಾನ್ಯೋದ್ಧುಮುಪಾಗತಃ।।
ಅಥವಾ ಮತ್ಸ್ಯನು ಜಾನಪದರೊಡನೆ ಸೇರಿ ಅವರನ್ನೋಡಿಸಿ ಎಲ್ಲ ಸೇನೆಯ ಸಹಿತ ನಮ್ಮೊಡನೆ ಯುದ್ಧ ಮಾಡಲು ಬಂದಿರಬಹುದು.
04042014a ತೇಷಾಮೇವ ಮಹಾವೀರ್ಯಃ ಕಶ್ಚಿದೇವ ಪುರಃಸರಃ।
04042014c ಅಸ್ಮಾಂ ಜೇತುಮಿಹಾಯಾತೋ ಮತ್ಸ್ಯೋ ವಾಪಿ ಸ್ವಯಂ ಭವೇತ್।।
ಅವರಲ್ಲಿ ಯಾರೋ ಒಬ್ಬ ಮಹಾಪರಾಕ್ರಮಶಾಲಿ ಮೊದಲು ನಮ್ಮನ್ನು ಜಯಿಸಲು ಇಲ್ಲಿಗೆ ಬಂದಿದ್ದಾನೆ. ಅಥವಾ ಸ್ವಯಂ ಮತ್ಸ್ಯರಾಜನೇ ಇರಬಹುದು.
04042015a ಯದ್ಯೇಷ ರಾಜಾ ಮತ್ಸ್ಯಾನಾಂ ಯದಿ ಬೀಭತ್ಸುರಾಗತಃ।
04042015c ಸರ್ವೈರ್ಯೋದ್ಧವ್ಯಮಸ್ಮಾಭಿರಿತಿ ನಃ ಸಮಯಃ ಕೃತಃ।।
ಬಂದಿರುವವನು ಮತ್ಸ್ಯರಾಜನೇ ಆಗಿರಲಿ ಅಥವಾ ಅರ್ಜುನನೇ ಆಗಿರಲಿ, ನಾವೆಲ್ಲರೂ ಅವನೊಡನೆ ಹೋರಾಡಬೇಕೆಂಬುದು ನಾವು ಮಾಡಿಕೊಂಡಿರುವ ಒಪ್ಪಂದ.
04042016a ಅಥ ಕಸ್ಮಾತ್ಸ್ಥಿತಾ ಹ್ಯೇತೇ ರಥೇಷು ರಥಸತ್ತಮಾಃ।
04042016c ಭೀಷ್ಮೋ ದ್ರೋಣಃ ಕೃಪಶ್ಚೈವ ವಿಕರ್ಣೋ ದ್ರೌಣಿರೇವ ಚ।।
ಭೀಷ್ಮ, ದ್ರೋಣ, ಕೃಪ, ವಿಕರ್ಣ, ಅಶ್ವತ್ಥಾಮ - ಈ ರಥಿಕ ಶ್ರೇಷ್ಠರು ಏತಕ್ಕೆ ರಥಗಳಲ್ಲಿ ಸುಮ್ಮನೆ ನಿಂತುಬಿಟ್ಟಿದ್ದಾರೆ?
04042017a ಸಂಭ್ರಾಂತಮನಸಃ ಸರ್ವೇ ಕಾಲೇ ಹ್ಯಸ್ಮಿನ್ಮಹಾರಥಾಃ।
04042017c ನಾನ್ಯತ್ರ ಯುದ್ಧಾಚ್ಚ್ರೇಯೋಽಸ್ತಿ ತಥಾತ್ಮಾ ಪ್ರಣಿಧೀಯತಾಂ।।
ಎಲ್ಲ ಮಹಾರಥರೂ ಈಗ ಸಂಭ್ರಾಂತಚಿತ್ತರಾಗಿದ್ದಾರೆ. ಯುದ್ಧಕ್ಕಿಂತ ಶ್ರೇಯಸ್ಕರವಾದುದು ಬೇರೆಯಿಲ್ಲ. ಆದ್ದರಿಂದ ನಾವೆಲ್ಲರೂ ಮನಸ್ಸನ್ನು ಗಟ್ಟಿ ಮಾಡಿಕೊಳ್ಳೋಣ.
04042018a ಆಚ್ಛಿನ್ನೇ ಗೋಧನೇಽಸ್ಮಾಕಮಪಿ ದೇವೇನ ವಜ್ರಿಣಾ।
04042018c ಯಮೇನ ವಾಪಿ ಸಂಗ್ರಾಮೇ ಕೋ ಹಾಸ್ತಿನಪುರಂ ವ್ರಜೇತ್।।
ಯುದ್ಧದಲ್ಲಿ ದೇವೇಂದ್ರನಾಗಲೀ ಯಮನಾಗಲೀ ಗೋಧನವನ್ನು ನಮ್ಮಿಂದ ಕಿತ್ತುಕೊಂಡರೆ ಯಾರುತಾನೆ ಹಸ್ತಿನಾಪುರಕ್ಕೆ ಓಡಿಹೋಗುತ್ತಾರೆ?
04042019a ಶರೈರಭಿಪ್ರಣುನ್ನಾನಾಂ ಭಗ್ನಾನಾಂ ಗಹನೇ ವನೇ।
04042019c ಕೋ ಹಿ ಜೀವೇತ್ಪದಾತೀನಾಂ ಭವೇದಶ್ವೇಷು ಸಂಶಯಃ।
04042019e ಆಚಾರ್ಯಂ ಪೃಷ್ಠತಃ ಕೃತ್ವಾ ತಥಾ ನೀತಿರ್ವಿಧೀಯತಾಂ।।
ಅಶ್ವಸೇನೆಯು ತಪ್ಪಿಸಿಕೊಳ್ಳುವುದು ಸಂಶಯಾಸ್ಪದವಾಗಿರುವಾಗ ಬಾಣಗಳು ಹಿಂದಿನಿಂದ ಇರಿಯುತ್ತಿರಲು ಭಗ್ನವಾದ ಪದಾತಿಗೆ ಯಾರುತಾನೆ ದಟ್ಟವಾದ ಕಾಡಿನಲ್ಲಿ ಹೋಗಿ ಬದುಕಿಯಾರು? ಆಚಾರ್ಯನನ್ನು ಹಿಂದಿಕ್ಕಿ ಯುದ್ಧನೀತಿಯನ್ನು ರೂಪಿಸತಕ್ಕದ್ದು.
04042020a ಜಾನಾತಿ ಹಿ ಮತಂ ತೇಷಾಮತಸ್ತ್ರಾಸಯತೀವ ನಃ।
04042020c ಅರ್ಜುನೇನಾಸ್ಯ ಸಂಪ್ರೀತಿಮಧಿಕಾಮುಪಲಕ್ಷಯೇ।।
ಅವನು ಆ ಪಾಂಡವರ ಅಭಿಪ್ರಾಯವನ್ನು ಬಲ್ಲವನಾಗಿದ್ದು ನಮಗೆ ಹೆದರಿಕೆಯುಂಟುಮಾಡುತ್ತಿದ್ದಾನೆ. ಅರ್ಜುನನ ಮೇಲೆ ಅವನಿಗೆ ಮಿಗಿಲಾದ ಪ್ರೀತಿಯಿರುವುದು ನನಗೆ ಗೊತ್ತು.
04042021a ತಥಾ ಹಿ ದೃಷ್ಟ್ವಾ ಬೀಭತ್ಸುಮುಪಾಯಾಂತಂ ಪ್ರಶಂಸತಿ।
04042021c ಯಥಾ ಸೇನಾ ನ ಭಜ್ಯೇತ ತಥಾ ನೀತಿರ್ವಿಧೀಯತಾಂ।।
ಏಕೆಂದರೆ ಅರ್ಜುನನು ಬರುತ್ತಿರುವುದನ್ನು ನೋಡಿಯೇ ಅವನು ಹೊಗಳತೊಡಗುತ್ತಾನೆ. ಸೈನ್ಯ ಭಗ್ನವಾಗದಂತೆ ಯುದ್ಧನೀತಿಯನ್ನು ರೂಪಿಸತಕ್ಕದ್ದು.
04042022a ಅದೇಶಿಕಾ ಮಹಾರಣ್ಯೇ ಗ್ರೀಷ್ಮೇ ಶತ್ರುವಶಂ ಗತಾ।
04042022c ಯಥಾ ನ ವಿಭ್ರಮೇತ್ಸೇನಾ ತಥಾ ನೀತಿರ್ವಿಧೀಯತಾಂ।।
ಈ ಬೇಸಗೆಯ ಮಹಾರಣ್ಯದಲ್ಲಿ ಸ್ವದೇಶದಲ್ಲಿನ ಸೇನೆ ಶತ್ರುವಶವಾಗಿ ಗಾಬರಿಗೊಳ್ಳದಂತೆ ಯುದ್ಧನೀತಿಯನ್ನು ರೂಪಿಸತಕ್ಕದ್ದು.
04042023a ಅಶ್ವಾನಾಂ ಹೇಷಿತಂ ಶ್ರುತ್ವಾ ಕಾ ಪ್ರಶಂಸಾ ಭವೇತ್ಪರೇ।
04042023c ಸ್ಥಾನೇ ವಾಪಿ ವ್ರಜಂತೋ ವಾ ಸದಾ ಹೇಷಂತಿ ವಾಜಿನಃ।।
ಕುದುರೆಗಳ ಕೆನೆತವನ್ನು ಕೇಳಿಯೇ ವೈರಿಯ ವಿಷದಲ್ಲಿ ಎಂಥ ಹೊಗಳಿಕೆ! ನಿಂತಿರಲಿ ಅಥವಾ ಓಡುತ್ತಿರಲಿ, ಕುದುರೆಗಳು ಯಾವಾಗಲೂ ಕೆನೆಯುತ್ತವೆ.
04042024a ಸದಾ ಚ ವಾಯವೋ ವಾಂತಿ ನಿತ್ಯಂ ವರ್ಷತಿ ವಾಸವಃ।
04042024c ಸ್ತನಯಿತ್ನೋಶ್ಚ ನಿರ್ಘೋಷಃ ಶ್ರೂಯತೇ ಬಹುಶಸ್ತಥಾ।।
ಗಾಳಿ ಯಾವಾಗಲೂ ಬೀಸುತ್ತದೆ. ಇಂದ್ರ ಯಾವಾಗಲೂ ಮಳೆಗರೆಯುತ್ತಾನೆ. ಅಂತೆಯೇ ಮೋಡಗಳ ಮೊಳಗು ಮೇಲಿಂದ ಮೇಲೆ ಕೇಳಿ ಬರುತ್ತದೆ.
04042025a ಕಿಮತ್ರ ಕಾರ್ಯಂ ಪಾರ್ಥಸ್ಯ ಕಥಂ ವಾ ಸ ಪ್ರಶಸ್ಯತೇ।
04042025c ಅನ್ಯತ್ರ ಕಾಮಾದ್ದ್ವೇಷಾದ್ವಾ ರೋಷಾದ್ವಾಸ್ಮಾಸು ಕೇವಲಾತ್।।
ಇವುಗಳಲ್ಲಿ ಪಾರ್ಥನದೇನು ಕೆಲಸ? ಏತಕ್ಕಾಗಿ ಅವನನ್ನು ಹೊಗಳಬೇಕು? ಇದೆಲ್ಲ ಕೇವಲ ಅರ್ಜುನನ ಮೇಲಿನ ಪ್ರೀತಿಯಿಂದಾಗಿ ಅಥವಾ ನಮ್ಮ ಮೇಲಿನ ದ್ವೇಷ ಇಲ್ಲವೆ ಕೋಪದಿಂದ ಅಷ್ಟೆ.
04042026a ಆಚಾರ್ಯಾ ವೈ ಕಾರುಣಿಕಾಃ ಪ್ರಾಜ್ಞಾಶ್ಚಾಪಾಯದರ್ಶಿನಃ।
04042026c ನೈತೇ ಮಹಾಭಯೇ ಪ್ರಾಪ್ತೇ ಸಂಪ್ರಷ್ಟವ್ಯಾಃ ಕಥಂ ಚನ।।
ಆಚಾರ್ಯರು ಕರುಣಾಳುಗಳು, ಜ್ಞಾನಿಗಳು. ಮುಂಬರುವ ಅಪಾಯಗಳನ್ನು ಕಾಣುವವರು. ಮಹಾಭಯ ಒದಗಿರುವಾಗ ಅವರನ್ನೆಂದೂ ಕೇಳಬಾರದು.
04042027a ಪ್ರಾಸಾದೇಷು ವಿಚಿತ್ರೇಷು ಗೋಷ್ಠೀಷ್ವಾವಸಥೇಷು ಚ।
04042027c ಕಥಾ ವಿಚಿತ್ರಾಃ ಕುರ್ವಾಣಾಃ ಪಂಡಿತಾಸ್ತತ್ರ ಶೋಭನಾಃ।।
ಪಂಡಿತರು ಸುಂದರವಾದ ಅರಮನೆಗಳಲ್ಲಿ ಗೋಷ್ಠಿಗಳಲ್ಲಿ ಮತ್ತು ಶಾಲೆಗಳಲ್ಲಿ ವಿಚಿತ್ರವಾದ ಕಥೆಗಳನ್ನು ಹೇಳುತ್ತಾ ಇದ್ದರೆ ಶೋಭಿಸುತ್ತಾರೆ.
04042028a ಬಹೂನ್ಯಾಶ್ಚರ್ಯರೂಪಾಣಿ ಕುರ್ವಂತೋ ಜನಸಂಸದಿ।
04042028c ಇಷ್ವಸ್ತ್ರೇ ಚಾರುಸಂಧಾನೇ ಪಂಡಿತಾಸ್ತತ್ರ ಶೋಭನಾಃ।।
ಪಂಡಿತರು ಬಹಳ ಆಶ್ಚರ್ಯಕರವಾದ ವಿಷಯಗಳನ್ನು ಹೇಳುತ್ತಾ ಜನರ ಸಭೆಯಲ್ಲಿ ಬಿಲ್ಲಿಗೆ ಬಾಣವನ್ನು ಸರಿಯಾಗಿ ಸೇರಿಸುವಲ್ಲಿ ಶೋಭಿಸುತ್ತಾರೆ.
04042029a ಪರೇಷಾಂ ವಿವರಜ್ಞಾನೇ ಮನುಷ್ಯಾಚರಿತೇಷು ಚ।
04042029c ಅನ್ನಸಂಸ್ಕಾರದೋಷೇಷು ಪಂಡಿತಾಸ್ತತ್ರ ಶೋಭನಾಃ।।
ಪಂಡಿತರು ಇತರರ ದೋಷಗಳನ್ನು ಪತ್ತೆ ಹಚ್ಚುವಲ್ಲಿ, ಮನುಷ್ಯ ಸ್ವಭಾವವನ್ನು ಅರಿಯುವಲ್ಲಿ, ಅನ್ನಸಂಸ್ಕಾರ ದೋಷಗಳನ್ನು ಕಂಡುಹಿಡಿಯುವಲ್ಲಿ ಶೋಭಿಸುತ್ತಾರೆ.
04042030a ಪಂಡಿತಾನ್ಪೃಷ್ಠತಃ ಕೃತ್ವಾ ಪರೇಷಾಂ ಗುಣವಾದಿನಃ।
04042030c ವಿಧೀಯತಾಂ ತಥಾ ನೀತಿರ್ಯಥಾ ವಧ್ಯೇತ ವೈ ಪರಃ।।
ಅನ್ಯರ ಗುಣಗಳನ್ನು ಹೊಗಳುವ ಪಂಡಿತರನ್ನು ಅಲಕ್ಷಿಸಿ, ವೈರಿಯನ್ನು ವಧಿಸುವಂತಹ ಯುದ್ಧನೀತಿಯನ್ನು ರೂಪಿಸತಕ್ಕದ್ದು.
04042031a ಗಾವಶ್ಚೈವ ಪ್ರತಿಷ್ಠಂತಾಂ ಸೇನಾಂ ವ್ಯೂಹಂತು ಮಾಚಿರಂ।
04042031c ಆರಕ್ಷಾಶ್ಚ ವಿಧೀಯಂತಾಂ ಯತ್ರ ಯೋತ್ಸ್ಯಾಮಹೇ ಪರಾನ್।।
ಗೋವುಗಳನ್ನು ಸುರಕ್ಷಿತವಾಗಿ ಇರಿಸತಕ್ಕದ್ದು. ಸೇನೆ ಬೇಗ ವ್ಯೂಹಗೊಳ್ಳಲಿ. ಶತ್ರುಗಳೊಡನೆ ನಾವು ಹೋರಾಡುವ ಎಡೆಗಳಲ್ಲಿ ಕಾವಲುದಳದ ವ್ಯವಸ್ಥೆ ಮಾಡತಕ್ಕದ್ದು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ದುರ್ಯೋಧನವಾಕ್ಯೇ ದ್ವಿಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ದುರ್ಯೋಧನವಾಕ್ಯದಲ್ಲಿ ನಲ್ವತ್ತೆರಡನೆಯ ಅಧ್ಯಾಯವು.