ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ವಿರಾಟ ಪರ್ವ
ಗೋಹರಣ ಪರ್ವ
ಅಧ್ಯಾಯ 41
ಸಾರ
ಅರ್ಜುನನು ಮಹಾಶಂಖವನ್ನು ಊದುವುದು (1-7). ಶಂಖದ ಮಹಾಸ್ವನವನ್ನು ಕೇಳಿ ಉತ್ತರನು ನಡುಗಲು, ಅರ್ಜುನನು ಅವನಿಗೆ ಆಶ್ವಾಸನೆಯನ್ನಿತ್ತು ಇನ್ನೊಮ್ಮೆ ಶಂಖವನ್ನು ಮೊಳಗಿಸುವುದು (8-17). ಶಂಖಧ್ವನಿಯನ್ನು ಕೇಳಿ ಕೌರವ ಸೇನೆಯಲ್ಲಿದ್ದ ದ್ರೋಣನು ಅದು ಅರ್ಜುನನ ಶಂಖಧ್ವನಿಯೇ ಹೌದು ಎಂದೂ, ಕುರುಸೇನೆಗೆ ಆಪತ್ತನ್ನು ಸೂಚಿಸುವ ಶಕುನಗಳು ಕಾಣಿಸಿಕೊಳ್ಳುತ್ತಿವೆ ಎಂದೂ, ಎಲ್ಲರೂ ಸಾವಧಾನರಾಗಿರಬೇಕೆಂದೂ ಎಚ್ಚರಿಸುವುದು (18-23).
04041001 ವೈಶಂಪಾಯನ ಉವಾಚ।
04041001a ಉತ್ತರಂ ಸಾರಥಿಂ ಕೃತ್ವಾ ಶಮೀಂ ಕೃತ್ವಾ ಪ್ರದಕ್ಷಿಣಂ।
04041001c ಆಯುಧಂ ಸರ್ವಮಾದಾಯ ತತಃ ಪ್ರಾಯಾದ್ಧನಂಜಯಃ।।
ವೈಶಂಪಾಯನನು ಹೇಳಿದನು: “ಬಳಿಕ ಧನಂಜಯನು ಎಲ್ಲ ಆಯುಧಗಳನ್ನೂ ತೆಗೆದುಕೊಂಡು, ಉತ್ತರನನ್ನು ಸಾರಥಿಯನ್ನಾಗಿ ಮಾಡಿಕೊಂಡು, ಶಮೀವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ ಹೊರಟನು.
04041002a ಧ್ವಜಂ ಸಿಂಹಂ ರಥಾತ್ತಸ್ಮಾದಪನೀಯ ಮಹಾರಥಃ।
04041002c ಪ್ರಣಿಧಾಯ ಶಮೀಮೂಲೇ ಪ್ರಾಯಾದುತ್ತರಸಾರಥಿಃ।।
ಆ ರಥದಿಂದ ಮಹಾರಥನು ಸಿಂಹಧ್ವಜವನ್ನು ತೆಗೆದು ಶಮೀವೃಕ್ಷದ ಬುಡದಲ್ಲಿರಿಸಿ ಆ ಉತ್ತರ ಸಾರಥಿಯು ಹೊರಟನು.
04041003a ದೈವೀಂ ಮಾಯಾಂ ರಥೇ ಯುಕ್ತ್ವಾ ವಿಹಿತಾಂ ವಿಶ್ವಕರ್ಮಣಾ।
04041003c ಕಾಂಚನಂ ಸಿಂಹಲಾಂಗೂಲಂ ಧ್ವಜಂ ವಾನರಲಕ್ಷಣಂ।।
04041004a ಮನಸಾ ಚಿಂತಯಾಮಾಸ ಪ್ರಸಾದಂ ಪಾವಕಸ್ಯ ಚ।
04041004c ಸ ಚ ತಚ್ಚಿಂತಿತಂ ಜ್ಞಾತ್ವಾ ಧ್ವಜೇ ಭೂತಾನ್ಯಚೋದಯತ್।।
ಅವನು ಸಿಂಹದಂತೆ ಬಾಲವುಳ್ಳ, ವಾನರನ ಚಿಹ್ನೆಯ ತನ್ನ ಕಾಂಚನ ಧ್ವಜವನ್ನು – ವಿಶ್ವಕರ್ಮನಿಂದ ನಿರ್ಮಿತವಾದ ದೈವಮಾಯೆಯನ್ನು – ಆ ರಥಕ್ಕೆ ಕಟ್ಟಿ ಅಗ್ನಿಯ ಕೃಪೆಯನ್ನು ಮನಸ್ಸಿನಲ್ಲಿ ನೆನೆದನು. ಅಗ್ನಿಯು ಅವನ ಬಯಕೆಯನ್ನು ಅರಿತು ಧ್ವಜದಲ್ಲಿ ನೆಲೆಸುವಂತೆ ಭೂತಗಳನ್ನು ಪ್ರೇರಿಸಿದನು.
04041005a ಸಪತಾಕಂ ವಿಚಿತ್ರಾಂಗಂ ಸೋಪಾಸಂಗಂ ಮಹಾರಥಃ।
04041005c ರಥಮಾಸ್ಥಾಯ ಬೀಭತ್ಸುಃ ಕೌಂತೇಯಃ ಶ್ವೇತವಾಹನಃ।।
ಆ ಮಹಾರಥ ಬೀಭತ್ಸು, ಶ್ವೇತವಾಹನ ಕುಂತೀಪುತ್ರನು ಪತಾಕೆ ಮತ್ತು ಎತ್ತರ ಪೀಠದಿಂದ ಕೂಡಿದ ಸುಂದರ ರಥದಲ್ಲಿ ಕುಳಿತನು.
04041006a ಬದ್ಧಾಸಿಃ ಸತನುತ್ರಾಣಃ ಪ್ರಗೃಹೀತಶರಾಸನಃ।
04041006c ತತಃ ಪ್ರಾಯಾದುದೀಚೀಂ ಸ ಕಪಿಪ್ರವರಕೇತನಃ।।
ಆಮೇಲೆ ಆ ಕಪಿವರಧ್ವಜನು ಖಡ್ಗವನ್ನು ಸೊಂಟಕ್ಕೆ ಬಿಗಿದು, ಕವಚವನ್ನು ಧರಿಸಿ, ಬಿಲ್ಲನ್ನು ಹಿಡಿದು ಉತ್ತರ ದಿಕ್ಕಿಗೆ ಹೊರಟನು.
04041007a ಸ್ವನವಂತಂ ಮಹಾಶಂಖಂ ಬಲವಾನರಿಮರ್ದನಃ।
04041007c ಪ್ರಾಧಮದ್ಬಲಮಾಸ್ಥಾಯ ದ್ವಿಷತಾಂ ಲೋಮಹರ್ಷಣಂ।।
ಆ ಶತ್ರುನಾಶಕ ಬಲಶಾಲಿಯು ಭಾರಿ ಶಬ್ಧಮಾಡುವ, ಶತ್ರುಗಳಿಗೆ ರೋಮಾಂಚನವನ್ನುಂಟುಮಾಡುವ ಮಹಾಶಂಖವನ್ನು ಬಲವನ್ನೆಲ್ಲ ಬಿಟ್ಟು ಊದಿದನು.
04041008a ತತಸ್ತೇ ಜವನಾ ಧುರ್ಯಾ ಜಾನುಭ್ಯಾಮಗಮನ್ಮಹೀಂ।
04041008c ಉತ್ತರಶ್ಚಾಪಿ ಸಂತ್ರಸ್ತೋ ರಥೋಪಸ್ಥ ಉಪಾವಿಶತ್।।
ಅನಂತರ ಆ ವೇಗಗಾಮಿ ಕುದುರೆಗಳು ನೆಲಕ್ಕೆ ಮೊಣಕಾಲೂರಿದವು. ಉತ್ತರನೂ ಹೆದರಿ ರಥದಲ್ಲಿ ಕುಳಿತುಬಿಟ್ಟನು.
04041009a ಸಂಸ್ಥಾಪ್ಯ ಚಾಶ್ವಾನ್ಕೌಂತೇಯಃ ಸಮುದ್ಯಮ್ಯ ಚ ರಶ್ಮಿಭಿಃ।
04041009c ಉತ್ತರಂ ಚ ಪರಿಷ್ವಜ್ಯ ಸಮಾಶ್ವಾಸಯದರ್ಜುನಃ।।
ಕುಂತೀಪುತ್ರ ಅರ್ಜುನನು ಕುದುರೆಗಳನ್ನು ಎಬ್ಬಿಸಿ ನಿಲ್ಲಿಸಿ ಕಡಿವಾಣಗಳನ್ನು ಎಳೆದು ಉತ್ತರನನ್ನು ತಬ್ಬಿಕೊಂಡು ಹೀಗೆ ಸಮಾಧಾನಗೊಳಿಸಿದನು:
04041010a ಮಾ ಭೈಸ್ತ್ವಂ ರಾಜಪುತ್ರಾಗ್ರ್ಯ ಕ್ಷತ್ರಿಯೋಽಸಿ ಪರಂತಪ।
04041010c ಕಥಂ ಪುರುಷಶಾರ್ದೂಲ ಶತ್ರುಮಧ್ಯೇ ವಿಷೀದಸಿ।।
“ಶ್ರೇಷ್ಠ ರಾಜಪುತ್ರ! ಹೆದರಬೇಡ! ಶತ್ರುನಾಶಕ! ನೀನು ಕ್ಷತ್ರಿಯ. ಪುರುಷಶ್ರೇಷ್ಠ! ವೈರಿಗಳ ನಡುವೆ ನೀನು ಹೇಗೆ ಎದೆಗುಂದುವೆ?
04041011a ಶ್ರುತಾಸ್ತೇ ಶಂಖಶಬ್ದಾಶ್ಚ ಭೇರೀಶಬ್ದಾಶ್ಚ ಪುಷ್ಕಲಾಃ।
04041011c ಕುಂಜರಾಣಾಂ ಚ ನದತಾಂ ವ್ಯೂಢಾನೀಕೇಷು ತಿಷ್ಠತಾಂ।।
ಶಂಖಗಳ ಶಬ್ಧವನ್ನೂ, ಭೇರಿಗಳ ಶಬ್ಧವನ್ನೂ, ಸೇನಾವ್ಯೂಹಗಳ ನಡುವೆ ನಿಂತ ಆನೆಗಳ ಗರ್ಜನೆಯನ್ನೂ ನೀನೂ ಬೇಕಾದಷ್ಟು ಕೇಳಿದ್ದೀಯೆ.
04041012a ಸ ತ್ವಂ ಕಥಮಿಹಾನೇನ ಶಂಖಶಬ್ದೇನ ಭೀಷಿತಃ।
04041012c ವಿಷಣ್ಣರೂಪೋ ವಿತ್ರಸ್ತಃ ಪುರುಷಃ ಪ್ರಾಕೃತೋ ಯಥಾ।।
ಅಂತಹ ನೀನು ಇಲ್ಲಿ ಹೆದರಿದ ಸಾಮಾನ್ಯ ಮನುಷ್ಯನಂತೆ ಹೇಗೆ ಈ ಶಂಖದ ಶಬ್ಧದಿಂದ ಭೀತಿಗೊಂಡು ವಿಷಣ್ಣನಾಗಿರುವೆ?”
04041013 ಉತ್ತರ ಉವಾಚ।
04041013a ಶ್ರುತಾ ಮೇ ಶಂಖಶಬ್ದಾಶ್ಚ ಭೇರೀಶಬ್ದಾಶ್ಚ ಪುಷ್ಕಲಾಃ।
04041013c ಕುಂಜರಾಣಾಂ ಚ ನಿನದಾ ವ್ಯೂಢಾನೀಕೇಷು ತಿಷ್ಠತಾಂ।।
ಉತ್ತರನು ಹೇಳಿದನು: “ಶಂಖಗಳ ಶಬ್ಧವನ್ನೂ ಭೇರಿಗಳ ಶಬ್ಧವನ್ನೂ ಸೇನಾವ್ಯೂಹಗಳ ಮಧ್ಯೆ ನಿಂತಿರುವ ಆನೆಗಳ ಗರ್ಜನೆಯನ್ನೂ ನಾನು ಬೇಕಾದಷ್ಟು ಕೇಳಿದ್ದೇನೆ.
04041014a ನೈವಂವಿಧಃ ಶಂಖಶಬ್ದಃ ಪುರಾ ಜಾತು ಮಯಾ ಶ್ರುತಃ।
04041014c ಧ್ವಜಸ್ಯ ಚಾಪಿ ರೂಪಂ ಮೇ ದೃಷ್ಟಪೂರ್ವಂ ನ ಹೀದೃಶಂ।
04041014e ಧನುಷಶ್ಚೈವ ನಿರ್ಘೋಷಃ ಶ್ರುತಪೂರ್ವೋ ನ ಮೇ ಕ್ವ ಚಿತ್।।
ಆದರೆ ಇಂತಹ ಶಂಖಶಬ್ಧವನ್ನು ಹಿಂದೆ ನಾನೆಂದೂ ಕೇಳಿರಲಿಲ್ಲ. ಇಂತಹ ಧ್ವಜರೂಪವನ್ನು ಹಿಂದೆಂದೂ ನಾನು ಕಂಡಿಲ್ಲ. ಇಂತಹ ಬಿಲ್ಲಿನ ಘೋಷವನ್ನು ಹಿಂದೆ ನಾನು ಎಲ್ಲಿಯೂ ಕೇಳಿಲ್ಲ.
04041015a ಅಸ್ಯ ಶಂಖಸ್ಯ ಶಬ್ದೇನ ಧನುಷೋ ನಿಸ್ವನೇನ ಚ।
04041015c ರಥಸ್ಯ ಚ ನಿನಾದೇನ ಮನೋ ಮುಹ್ಯತಿ ಮೇ ಭೃಶಂ।।
ಈ ಶಂಖದ ಶಬ್ಧದಿಂದಲೂ ಬಿಲ್ಲಿನ ಧ್ವನಿಯಿಂದಲೂ ರಥದ ಘೋಷದಿಂದಲೂ ನನ್ನ ಮನಸ್ಸು ಬಹಳ ದಿಗ್ಭ್ರಮೆಗೊಳ್ಳುತ್ತಿದೆ.
04041016a ವ್ಯಾಕುಲಾಶ್ಚ ದಿಶಃ ಸರ್ವಾ ಹೃದಯಂ ವ್ಯಥತೀವ ಮೇ।
04041016c ಧ್ವಜೇನ ಪಿಹಿತಾಃ ಸರ್ವಾ ದಿಶೋ ನ ಪ್ರತಿಭಾಂತಿ ಮೇ।
04041016e ಗಾಂಡೀವಸ್ಯ ಚ ಶಬ್ದೇನ ಕರ್ಣೌ ಮೇ ಬಧಿರೀಕೃತೌ।।
ನನ್ನ ಪಾಲಿಗೆ ದಿಕ್ಕುಗಳೆಲ್ಲ ಗೊಂದಲಗೊಂಡಿವೆ; ನನ್ನ ಹೃದಯ ವ್ಯಥೆಗೊಂಡಿದೆ; ಬಾವುಟದಿಂದ ಮುಚ್ಚಿಹೋಗಿ ದಿಕ್ಕುಗಳೆಲ್ಲ ನನಗೆ ಕಾಣುತ್ತಿಲ್ಲ. ಗಾಂಡೀವದ ಶಬ್ಧದಿಂದ ನನ್ನ ಕಿವಿಗಳು ಕಿವುಡಾಗಿವೆ.”
04041017 ಅರ್ಜುನ ಉವಾಚ।
04041017a ಏಕಾಂತೇ ರಥಮಾಸ್ಥಾಯ ಪದ್ಭ್ಯಾಂ ತ್ವಮವಪೀಡಯ।
04041017c ದೃಢಂ ಚ ರಶ್ಮೀನ್ಸಮ್ಯಚ್ಛ ಶಂಖಂ ಧ್ಮಾಸ್ಯಾಮ್ಯಹಂ ಪುನಃ।।
ಅರ್ಜುನನು ಹೇಳಿದನು: “ನೀನು ರಥವನ್ನು ಒಂದುಕಡೆ ನಿಲ್ಲಿಸಿಕೊಂಡು ಪಾದಗಳನ್ನು ಊರಿಕೊಂಡು ನಿಂತು ಕಡಿವಾಣಗಳನ್ನು ಬಲವಾಗಿ ಹಿಡಿದುಕೋ. ನಾನು ಮತ್ತೆ ಶಂಖವನ್ನೂದುತ್ತೇನೆ.””
04041018 ವೈಶಂಪಾಯನ ಉವಾಚ।
04041018a ತಸ್ಯ ಶಂಖಸ್ಯ ಶಬ್ದೇನ ರಥನೇಮಿಸ್ವನೇನ ಚ।
04041018c ಗಾಂಡೀವಸ್ಯ ಚ ಘೋಷೇಣ ಪೃಥಿವೀ ಸಮಕಂಪತ।।
ವೈಶಂಪಾಯನನು ಹೇಳಿದನು: “ಆ ಶಂಖದ ಶಬ್ಧದಿಂದಲೂ ರಥಚಕ್ರದ ಧ್ವನಿಯಿಂದಲೂ ಗಾಂಡೀವದ ಘೋಷದಿಂದಲೂ ಭೂಮಿಯು ನಡುಗಿತು.
04041019 ದ್ರೋಣ ಉವಾಚ।
04041019a ಯಥಾ ರಥಸ್ಯ ನಿರ್ಘೋಷೋ ಯಥಾ ಶಂಖ ಉದೀರ್ಯತೇ।
04041019c ಕಂಪತೇ ಚ ಯಥಾ ಭೂಮಿರ್ನೈಷೋಽನ್ಯಃ ಸವ್ಯಸಾಚಿನಃ।।
ದ್ರೋಣನು ಹೇಳಿದನು: “ರಥನಿರ್ಘೋಷದ ರೀತಿ, ಶಂಖಶಬ್ಧದ ರೀತಿ, ಭೂಕಂಪನದ ರೀತಿ ಇವುಗಳಿಂದ ಹೇಳುವುದಾದರೆ ಇವನು ಅರ್ಜುನನಲ್ಲದೇ ಬೇರೆಯಲ್ಲ.
04041020a ಶಸ್ತ್ರಾಣಿ ನ ಪ್ರಕಾಶಂತೇ ನ ಪ್ರಹೃಷ್ಯಂತಿ ವಾಜಿನಃ।
04041020c ಅಗ್ನಯಶ್ಚ ನ ಭಾಸಂತೇ ಸಮಿದ್ಧಾಸ್ತನ್ನ ಶೋಭನಂ।।
ಶಸ್ತ್ರಗಳು ಹೊಳೆಯುತ್ತಿಲ್ಲ; ಕುದುರೆಗಳು ಹರ್ಷಿಸುತ್ತಿಲ್ಲ; ಚೆನ್ನಾಗಿ ಹೊತ್ತಿಸಿದ ಬೆಂಕಿಯೂ ಜ್ವಲಿಸುತ್ತಿಲ್ಲ. ಇದು ಒಳ್ಳೆಯದಲ್ಲ.
04041021a ಪ್ರತ್ಯಾದಿತ್ಯಂ ಚ ನಃ ಸರ್ವೇ ಮೃಗಾ ಘೋರಪ್ರವಾದಿನಃ।
04041021c ಧ್ವಜೇಷು ಚ ನಿಲೀಯಂತೇ ವಾಯಸಾಸ್ತನ್ನ ಶೋಭನಂ।
04041021e ಶಕುನಾಶ್ಚಾಪಸವ್ಯಾ ನೋ ವೇದಯಂತಿ ಮಹದ್ಭಯಂ।।
ನಮ್ಮ ಪ್ರಾಣಿಗಳೆಲ್ಲ ಸೂರ್ಯನಿಗೆ ಎದುರಾಗಿ ಘೋರವಾಗಿ ಕೂಗಿಕೊಳ್ಳುತ್ತಿವೆ. ಕಾಗೆಗಳು ಧ್ವಜಗಳ ಮೇಲೆ ಕುಳಿತುಕೊಳ್ಳುತ್ತಿವೆ. ಇದು ಒಳ್ಳೆಯದಲ್ಲ. ಬಲಕ್ಕೆ ಹೋಗುತ್ತಿರುವ ಪಕ್ಷಿಗಳು ಮಹಾಭಯವನ್ನು ಸೂಚಿಸುತ್ತಿವೆ.
04041022a ಗೋಮಾಯುರೇಷ ಸೇನಾಯಾ ರುವನ್ಮಧ್ಯೇಽನುಧಾವತಿ।
04041022c ಅನಾಹತಶ್ಚ ನಿಷ್ಕ್ರಾಂತೋ ಮಹದ್ವೇದಯತೇ ಭಯಂ।
04041022e ಭವತಾಂ ರೋಮಕೂಪಾಣಿ ಪ್ರಹೃಷ್ಟಾನ್ಯುಪಲಕ್ಷಯೇ।।
ಈ ನರಿಯು ಸೇನೆಯ ನಡುವೆ ಒರಲುತ್ತ ಓಡಿಹೋಗುತ್ತಿದೆ. ಹೊಡೆತಕ್ಕೆ ಸಿಕ್ಕದೇ ತಪ್ಪಿಸಿಕೊಂಡು ಓಡುತ್ತಿರುವ ಅದು ಮಹಾಭಯವನ್ನು ಸೂಚಿಸುತ್ತಿದೆ. ನಿಮ್ಮ ರೋಮಗಳು ನಿಮಿರಿ ನಿಂತಿರುವುದನ್ನು ಕಾಣುತ್ತಿದ್ದೇನೆ.
04041023a ಪರಾಭೂತಾ ಚ ವಃ ಸೇನಾ ನ ಕಶ್ಚಿದ್ಯೋದ್ಧುಮಿಚ್ಛತಿ।
04041023c ವಿವರ್ಣಮುಖಭೂಯಿಷ್ಠಾಃ ಸರ್ವೇ ಯೋಧಾ ವಿಚೇತಸಃ।
04041023e ಗಾಃ ಸಂಪ್ರಸ್ಥಾಪ್ಯ ತಿಷ್ಠಾಮೋ ವ್ಯೂಢಾನೀಕಾಃ ಪ್ರಹಾರಿಣಃ।।
ನಿಮ್ಮ ಸೇನೆ ಇದಾಗಲೇ ಪರಾಭವಗೊಂಡಂತಿದೆ. ಯಾರೂ ಯುದ್ಧಮಾಡಲು ಇಚ್ಛಿಸುತ್ತಿಲ್ಲ. ಎಲ್ಲ ಯೋಧರ ಮುಖಗಳೂ ಅತಿಯಾಗಿ ಬಿಳಿಚಿಕೊಂಡಿವೆ; ಭ್ರಾಂತರಂತೆ ಆಗಿದ್ದಾರೆ. ಗೋವುಗಳನ್ನು ಮುಂದೆ ಕಳುಹಿಸಿ, ವ್ಯೂಹವನ್ನು ರಚಿಸಿ ಆಯುಧಸನ್ನದ್ದರಾಗಿ ನಿಲ್ಲೋಣ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಔತ್ಪಾತಿಕೇ ಏಕಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಔತ್ಪಾತಿಕದಲ್ಲಿ ನಲ್ವತ್ತೊಂದನೆಯ ಅಧ್ಯಾಯವು.