040 ಉತ್ತರಗೋಗ್ರಹೇ ಉತ್ತರಾರ್ಜುನವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ಗೋಹರಣ ಪರ್ವ

ಅಧ್ಯಾಯ 40

ಸಾರ

ಅರ್ಜುನನಿಗೆ ನಪುಂಸಕತ್ವವು ಹೇಗುಂಟಾಯಿತೆಂದು ಉತ್ತರನು ಕೇಳಲು ತಾನು ಅಣ್ಣನ ಆಜ್ಞೆಯಂತೆ ಧರ್ಮಯುಕ್ತನಾಗಿ ಒಂದು ವರ್ಷದ ಬ್ರಹ್ಮಚರ್ಯವ್ರತವನ್ನು ಕೈಗೊಂಡಿರುವವನೆಂದು ಅರ್ಜುನನು ಹೇಳುವುದು (1-13). ಅರ್ಜುನನು ಯುದ್ಧ ಸನ್ನದ್ಧನಾಗಿ ಗಾಂಡೀವವನ್ನು ಟೇಂಕರಿಸುವುದು (14-27).

04040001 ಉತ್ತರ ಉವಾಚ।
04040001a ಆಸ್ಥಾಯ ವಿಪುಲಂ ವೀರ ರಥಂ ಸಾರಥಿನಾ ಮಯಾ।
04040001c ಕತಮಂ ಯಾಸ್ಯಸೇಽನೀಕಮುಕ್ತೋ ಯಾಸ್ಯಾಮ್ಯಹಂ ತ್ವಯಾ।।

ಉತ್ತರನು ಹೇಳಿದನು: “ವೀರ! ನಾನು ಸಾರಥಿಯಾಗಿರುವ ಈ ದೊಡ್ಡ ರಥದಲ್ಲಿ ಕುಳಿತು ನೀನು ಯಾವ ಸೈನ್ಯದತ್ತ ಹೋಗಬಯಸಿ ಹೇಳುತ್ತೀಯೋ ಅಲ್ಲಿಗೆ ನಿನ್ನನ್ನು ಒಯ್ಯುತ್ತೇನೆ.”

04040002 ಅರ್ಜುನ ಉವಾಚ।
04040002aಪ್ರೀತೋಽಸ್ಮಿ ಪುರುಷವ್ಯಾಘ್ರ ನ ಭಯಂ ವಿದ್ಯತೇ ತವ।
04040002c ಸರ್ವಾನ್ನುದಾಮಿ ತೇ ಶತ್ರೂನ್ರಣೇ ರಣವಿಶಾರದ।।

ಅರ್ಜುನನು ಹೇಳಿದನು: “ಪುರುಷಶ್ರೇಷ್ಠ! ನಿನ್ನ ವಿಷಯದಲ್ಲಿ ಸಂತುಷ್ಟನಾಗಿದ್ದೇನೆ. ನಿನಗಿನ್ನು ಭಯವಿಲ್ಲ. ಯುದ್ಧವಿಶಾರದನೇ! ರಣದಲ್ಲಿ ನಿನ್ನ ವೈರಿಗಳನ್ನು ಓಡಿಸಿಬಿಡುತ್ತೇನೆ.

04040003a ಸ್ವಸ್ಥೋ ಭವ ಮಹಾಬುದ್ಧೇ ಪಶ್ಯ ಮಾಂ ಶತ್ರುಭಿಃ ಸಹ।
04040003c ಯುಧ್ಯಮಾನಂ ವಿಮರ್ದೇಽಸ್ಮಿನ್ಕುರ್ವಾಣಂ ಭೈರವಂ ಮಹತ್।।

ಮಹಾಬುದ್ಧಿಶಾಲಿ! ಸ್ವಸ್ಥನಾಗಿರು. ನಾನು ಈ ಯುದ್ಧದಲ್ಲಿ ಬಯಂಕರವೂ ಮಹತ್ತೂ ಆದುದನ್ನು ಸಾಧಿಸುತ್ತಾ ಶತ್ರುಗಳೊಡನೆ ಹೋರಾಡುವುದನ್ನು ನೋಡು.

04040004a ಏತಾನ್ಸರ್ವಾನುಪಾಸಂಗಾನ್ ಕ್ಷಿಪ್ರಂ ಬಧ್ನೀಹಿ ಮೇ ರಥೇ।
04040004c ಏತಂ ಚಾಹರ ನಿಸ್ತ್ರಿಂಶಂ ಜಾತರೂಪಪರಿಷ್ಕೃತಂ।
04040004e ಅಹಂ ವೈ ಕುರುಭಿರ್ಯೋತ್ಸ್ಯಾಮ್ಯವಜೇಷ್ಯಾಮಿ ತೇ ಪಶೂನ್।।

ಈ ಎಲ್ಲ ಬತ್ತಳಿಕೆಗಳನ್ನೂ ನನ್ನ ರಥಕ್ಕೆ ಬೇಗ ಬಿಗಿ. ಈ ಸುವರ್ಣಖಚಿತ ಕತ್ತಿಯನ್ನು ತೆಗೆದುಕೋ. ನಾನು ಕುರುಗಳೊಡನೆ ಹೋರಾಡುತ್ತೇನೆ. ನಿನ್ನ ಗೋವುಗಳನ್ನು ಗೆದ್ದು ಕೊಡುತ್ತೇನೆ.

04040005a ಸಂಕಲ್ಪಪಕ್ಷವಿಕ್ಷೇಪಂ ಬಾಹುಪ್ರಾಕಾರತೋರಣಂ।
04040005c ತ್ರಿದಂಡತೂಣಸಂಬಾಧಮನೇಕಧ್ವಜಸಂಕುಲಂ।।
04040006a ಜ್ಯಾಕ್ಷೇಪಣಂ ಕ್ರೋಧಕೃತಂ ನೇಮೀನಿನದದುಂದುಭಿ।
04040006c ನಗರಂ ತೇ ಮಯಾ ಗುಪ್ತಂ ರಥೋಪಸ್ಥಂ ಭವಿಷ್ಯತಿ।।

ನಿನ್ನ ನಗರವು ಈ ರಥದ ಮಧ್ಯಭಾಗದಲ್ಲಿ ಇದೆಯೋ ಎಂಬಂತೆ ನನ್ನಿಂದ ರಕ್ಷಿತವಾಗಿದೆ. ನನ್ನ ಸಂಕಲ್ಪವೇ ನಗರದ ದಾರಿಗಳು ಮತ್ತು ಓಣಿಗಳು. ಬಾಹುಗಳೇ ಕೋಟೆ ಮತ್ತು ಹೆಬ್ಬಾಗಿಲುಗಳು. ರಥದ ಮೂರು ದಂಡಗಳೇ ಮೂರುಬಗೆಯ ಸೇನೆಗಳು. ಬತ್ತಳಿಕೆಯೇ ರಕ್ಷಣಸಾಮಗ್ರಿ. ನನ್ನ ಈ ಧ್ವಜವೇ ನಗರದ ಧ್ವಜಸಮೂಹ. ಈ ನನ್ನ ಬಿಲ್ಲಿನ ಹೆದೆಯೇ ನಗರ ರಕ್ಷಣೆಯ ಫಿರಂಗಿ. ಶತ್ರುನಾಶಕ ಕೋಪವೇ ದೃಢಚಿತ್ತ ಕಾರ್ಯ. ರಥಚಕ್ರದ ಶಬ್ಧವೇ ನಗರದ ದುಂದುಭಿಗಳು.

04040007a ಅಧಿಷ್ಠಿತೋ ಮಯಾ ಸಂಖ್ಯೇ ರಥೋ ಗಾಂಡೀವಧನ್ವನಾ।
04040007c ಅಜೇಯಃ ಶತ್ರುಸೈನ್ಯಾನಾಂ ವೈರಾಟೇ ವ್ಯೇತು ತೇ ಭಯಂ।।

ವಿರಾಟಪುತ್ರ! ಗಾಂಡೀವ ಧನುವನ್ನುಳ್ಳ ನಾನು ಕುಳಿತಿರುವ ಈ ರಥವು ಯುದ್ಧದಲ್ಲಿ ಶತ್ರುಸೇನೆಗೆ ಅಜೇಯವಾದುದು. ನಿನ್ನ ಹೆದರಿಕೆಯು ತೊಲಗಲಿ.”

04040008 ಉತ್ತರ ಉವಾಚ।
04040008a ಬಿಭೇಮಿ ನಾಹಮೇತೇಷಾಂ ಜಾನಾಮಿ ತ್ವಾಂ ಸ್ಥಿರಂ ಯುಧಿ।
04040008c ಕೇಶವೇನಾಪಿ ಸಂಗ್ರಾಮೇ ಸಾಕ್ಷಾದಿಂದ್ರೇಣ ವಾ ಸಮಂ।।

ಉತ್ತರನು ಹೇಳಿದನು: “ಇವರಿಗೆ ನಾನು ಇನ್ನು ಹೆದರುವುದಿಲ್ಲ. ಯುದ್ಧದಲ್ಲಿ ನೀನು ಸ್ಥಿರನೆಂಬುವುದನ್ನು ನಾನು ಬಲ್ಲೆ. ಸಂಗ್ರಾಮದಲ್ಲಿ ನೀನು ಸಾಕ್ಷಾತ್ ಕೇಶವನಿಗೆ ಅಥವಾ ಇಂದ್ರನಿಗೆ ಸಮಾನನೆಂದೂ ಬಲ್ಲೆ.

04040009a ಇದಂ ತು ಚಿಂತಯನ್ನೇವ ಪರಿಮುಹ್ಯಾಮಿ ಕೇವಲಂ।
04040009c ನಿಶ್ಚಯಂ ಚಾಪಿ ದುರ್ಮೇಧಾ ನ ಗಚ್ಛಾಮಿ ಕಥಂ ಚನ।।

ಆದರೆ ಇದನ್ನು ಆಲೋಚಿಸುತ್ತ ನಾನು ಸಂಪೂರ್ಣ ದಿಗ್ಭ್ರಾಂತನಾಗುತ್ತಿದ್ದೇನೆ. ಮಂದ ಬುದ್ಧಿಯವನಾದ ನಾನು ಯಾವುದೇ ನಿರ್ಧಾರಕ್ಕೆ ಬರಲಾರದವನಾಗಿದ್ದೇನೆ.

04040010a ಏವಂ ವೀರಾಂಗರೂಪಸ್ಯ ಲಕ್ಷಣೈರುಚಿತಸ್ಯ ಚ।
04040010c ಕೇನ ಕರ್ಮವಿಪಾಕೇನ ಕ್ಲೀಬತ್ವಮಿದಮಾಗತಂ।।

ಇಂಥಹ ವೀರಾಂಗಗಳಿಂದ ಕೂಡಿದ ರೂಪವುಳ್ಳ ಮತ್ತು ಸುಲಕ್ಷಣಗಳಿಂದ ಶ್ಲಾಘ್ಯನಾದ ನಿನಗೆ ಯಾವ ಕರ್ಮವಿಪಾಕದಿಂದ ಈ ನಪುಂಸಕತ್ವವು ಉಂಟಾಯಿತು?

04040011a ಮನ್ಯೇ ತ್ವಾಂ ಕ್ಲೀಬವೇಷೇಣ ಚರಂತಂ ಶೂಲಪಾಣಿನಂ।
04040011c ಗಂಧರ್ವರಾಜಪ್ರತಿಮಂ ದೇವಂ ವಾಪಿ ಶತಕ್ರತುಂ।।

ನಪುಂಸಕ ವೇಶದಲ್ಲಿ ಸಂಚರಿಸುವ ಶೂಲಪಾಣಿಯೆಂದು, ಗಂಧರ್ವರಾಜಸಮಾನನೆಂದು ಅಥವಾ ದೇವೇಂದ್ರನೆಂದು ನಿನ್ನನ್ನು ತಿಳಿಯುತ್ತೇನೆ.”

04040012 ಅರ್ಜುನ ಉವಾಚ।
04040012a ಭ್ರಾತುರ್ನಿಯೋಗಾಜ್ಜ್ಯೇಷ್ಠಸ್ಯ ಸಂವತ್ಸರಮಿದಂ ವ್ರತಂ।
04040012c ಚರಾಮಿ ಬ್ರಹ್ಮಚರ್ಯಂ ವೈ ಸತ್ಯಮೇತದ್ಬ್ರವೀಮಿ ತೇ।।

ಅರ್ಜುನನು ಹೇಳಿದನು: “ಇದೋ ನಾನು ನಿನಗೆ ಹೇಳುತ್ತಿರುವುದು ಸತ್ಯ. ಅಣ್ಣನ ಆಜ್ಞೆಯಂತೆ ಈ ಬ್ರಹ್ಮಚರ್ಯವ್ರತವನ್ನು ಒಂದು ವರ್ಷಕಾಲ ಆಚರಿಸುತ್ತಿದ್ದೇನೆ.

04040013a ನಾಸ್ಮಿ ಕ್ಲೀಬೋ ಮಹಾಬಾಹೋ ಪರವಾನ್ಧರ್ಮಸಮ್ಯುತಃ।
04040013c ಸಮಾಪ್ತವ್ರತಮುತ್ತೀರ್ಣಂ ವಿದ್ಧಿ ಮಾಂ ತ್ವಂ ನೃಪಾತ್ಮಜ।।

ಮಹಾಬಾಹೋ! ನಾನು ನಪುಂಸಕನಲ್ಲ. ಪರಾಧೀನನಾಗಿ, ಧರ್ಮಯುಕ್ತನಾಗಿ ವ್ರತವನ್ನು ಮುಗಿಸಿ ದಡಮುಟ್ಟಿದ ರಾಜಪುತ್ರನೆಂದು ನೀನು ನನ್ನನ್ನು ತಿಳಿ.”

04040014 ಉತ್ತರ ಉವಾಚ।
04040014a ಪರಮೋಽನುಗ್ರಹೋ ಮೇಽದ್ಯ ಯತ್ಪ್ರತರ್ಕೋ ನ ಮೇ ವೃಥಾ।
04040014c ನ ಹೀದೃಶಾಃ ಕ್ಲೀಬರೂಪಾ ಭವಂತೀಹ ನರೋತ್ತಮಾಃ।।

ಉತ್ತರನು ಹೇಳಿದನು: “ನನಗೆ ನೀನಿಂದು ಪರಮಾನುಗ್ರವನ್ನುಂಟುಮಾಡಿರುವೆ. ನನ್ನ ತರ್ಕ ವ್ಯರ್ಥವಾಗಲಿಲ್ಲ. ಇಂತಹ ನರೋತ್ತಮರು ಲೋಕದಲ್ಲಿ ನಪುಂಸಕರೂಪದಲ್ಲಿರುವುದಿಲ್ಲ.

04040015a ಸಹಾಯವಾನಸ್ಮಿ ರಣೇ ಯುಧ್ಯೇಯಮಮರೈರಪಿ।
04040015c ಸಾಧ್ವಸಂ ತತ್ಪ್ರನಷ್ಟಂ ಮೇ ಕಿಂ ಕರೋಮಿ ಬ್ರವೀಹಿ ಮೇ।।

ಯುದ್ಧದಲ್ಲಿ ನನಗೆ ನೀನು ಸಹಾಯಮಾಡುತ್ತೀಯೆ. ಈಗ ನಾನು ದೇವತೆಗಳೊಡನೆ ಕೂಡ ಹೋರಾಡಬಲ್ಲೆ. ಆ ನನ್ನ ಹೆದರಿಕೆಯು ಅಳಿದುಹೋಯಿತು. ಮುಂದೆ ಏನು ಮಾಡಲಿ? ನನಗೆ ಹೇಳು.

04040016a ಅಹಂ ತೇ ಸಂಗ್ರಹೀಷ್ಯಾಮಿ ಹಯಾಂ ಶತ್ರುರಥಾರುಜಃ।
04040016c ಶಿಕ್ಷಿತೋ ಹ್ಯಸ್ಮಿ ಸಾರಥ್ಯೇ ತೀರ್ಥತಃ ಪುರುಷರ್ಷಭ।।

ಶತ್ರುರಥಗಳನ್ನು ಮುರಿಯಬಲ್ಲ ನಿನ್ನ ಕುದುರೆಗಳನ್ನು ನಾನು ಹಿಡಿದುಕೊಳ್ಳುತ್ತೇನೆ. ಪುರುಷಶ್ರೇಷ್ಠ! ಸಾರಥ್ಯದಲ್ಲಿ ನಾನು ಆಚಾರ್ಯನಿಂದ ಶಿಕ್ಷಣ ಪಡೆದಿದ್ದೇನೆ.

04040017a ದಾರುಕೋ ವಾಸುದೇವಸ್ಯ ಯಥಾ ಶಕ್ರಸ್ಯ ಮಾತಲಿಃ।
04040017c ತಥಾ ಮಾಂ ವಿದ್ಧಿ ಸಾರಥ್ಯೇ ಶಿಕ್ಷಿತಂ ನರಪುಂಗವ।।

ನರಶ್ರೇಷ್ಠ! ಸಾರಥ್ಯದಲ್ಲಿ ವಾಸುದೇವನಿಗೆ ದಾರುಕನು ಹೇಗೋ ಇಂದ್ರನಿಗೆ ಮಾತಲಿಯು ಹೇಗೋ ಹಾಗೆ ನಾನು ನಿನಗೆ ಸುಶಿಕ್ಷಿತ ಸಾರಥಿ ಎಂದು ತಿಳಿದುಕೋ.

04040018a ಯಸ್ಯ ಯಾತೇ ನ ಪಶ್ಯಂತಿ ಭೂಮೌ ಪ್ರಾಪ್ತಂ ಪದಂ ಪದಂ।
04040018c ದಕ್ಷಿಣಂ ಯೋ ಧುರಂ ಯುಕ್ತಃ ಸುಗ್ರೀವಸದೃಶೋ ಹಯಃ।।

ಬಲಗಡೆಯಲ್ಲಿ ನೊಗಕ್ಕೆ ಕಟ್ಟಿದ ಕುದುರೆ ಸುಗ್ರೀವದಂತಿದೆ. ಅದು ಚಲಿಸುವಾಗ ಹೆಜ್ಜೆಗಳು ಭೂಮಿಯನ್ನು ಸೋಕಿದ್ದು ಕಾಣುವುದಿಲ್ಲ.

04040019a ಯೋಽಯಂ ಧುರಂ ಧುರ್ಯವರೋ ವಾಮಂ ವಹತಿ ಶೋಭನಃ।
04040019c ತಂ ಮನ್ಯೇ ಮೇಘಪುಷ್ಪಸ್ಯ ಜವೇನ ಸದೃಶಂ ಹಯಂ।।

ರಥದ ಎಡಗಡೆಯ ನೊಗಕ್ಕೆ ಕಟ್ಟಿದ ಸುಂದರವೂ ಕುದುರೆಗಳಲ್ಲಿ ಶ್ರೇಷ್ಠವೂ ಆದ ಇನ್ನೊಂದು ಕುದುರೆ ವೇಗದಲ್ಲಿ ಮೇಘಪುಷ್ಪಕ್ಕೆ ಸಮಾನವಾಗಿದೆಯೆಂದು ಭಾವಿಸುತ್ತೇನೆ.

04040020a ಯೋಽಯಂ ಕಾಂಚನಸನ್ನಾಹಃ ಪಾರ್ಷ್ಣಿಂ ವಹತಿ ಶೋಭನಃ।
04040020c ವಾಮಂ ಸೈನ್ಯಸ್ಯ ಮನ್ಯೇ ತಂ ಜವೇನ ಬಲವತ್ತರಂ।।

ಸುಂದರ ಚಿನ್ನದ ಕವಚವನ್ನುಳ್ಳ, ಹಿಂಬಾಗದಲ್ಲಿ ಎಡಗಡೆಯಿರುವ ವೇಗದಲ್ಲಿ ಬಲವತ್ತರವಾದ ಈ ಮತ್ತೊಂದು ಕುದುರೆಯನ್ನು ಸೈನ್ಯ ಎಂದು ತಿಳಿಯುತ್ತೇನೆ.

04040021a ಯೋಽಯಂ ವಹತಿ ತೇ ಪಾರ್ಷ್ಣಿಂ ದಕ್ಷಿಣಾಮಂಚಿತೋದ್ಯತಃ।
04040021c ಬಲಾಹಕಾದಪಿ ಮತಃ ಸ ಜವೇ ವೀರ್ಯವತ್ತರಃ।।

ಹಿಂಬಾಗದಲ್ಲಿ ಬಲಗಡೆಯಿರುವ ಈ ಕುದುರೆ ವೇಗದಲ್ಲಿ ಬಲಾಹಕಕ್ಕಿಂತ ಬಲವತ್ತರವಾದುದೆಂದು ನನ್ನ ಅಭಿಪ್ರಾಯ.

04040022a ತ್ವಾಮೇವಾಯಂ ರಥೋ ವೋಢುಂ ಸಂಗ್ರಾಮೇಽರ್ಹತಿ ಧನ್ವಿನಂ।
04040022c ತ್ವಂ ಚೇಮಂ ರಥಮಾಸ್ಥಾಯ ಯೋದ್ಧುಮರ್ಹೋ ಮತೋ ಮಮ।।

ಯುದ್ಧದಲ್ಲಿ ಧನುರ್ಧರನಾದ ನಿನ್ನನ್ನೇ ಹೊರಲು ಈ ರಥ ತಕ್ಕುದಾಗಿದೆ. ನೀನು ಕೂಡ ಈ ರಥದಲ್ಲಿ ಕುಳಿತು ಯುದ್ಧಮಾಡಲು ತಕ್ಕವನೆಂದು ನನ್ನ ಅಭಿಪ್ರಾಯ.””

04040023 ವೈಶಂಪಾಯನ ಉವಾಚ।
04040023a ತತೋ ನಿರ್ಮುಚ್ಯ ಬಾಹುಭ್ಯಾಂ ವಲಯಾನಿ ಸ ವೀರ್ಯವಾನ್।
04040023c ಚಿತ್ರೇ ದುಂದುಭಿಸಂನಾದೇ ಪ್ರತ್ಯಮುಂಚತ್ತಲೇ ಶುಭೇ।।

ವೈಶಂಪಾಯನನು ಹೇಳಿದನು: “ಬಳಿಕ ಆ ಸತ್ವಶಾಲಿ ಅರ್ಜುನನು ತೋಳುಗಳಿಂದ ಬಳೆಗಳನ್ನು ಕಳಚಿ, ಸುಂದರವಾಗಿ ಹೊಳೆಯುವ ದುಂದುಭಿಯಂತೆ ಧ್ವನಿಮಾಡುವ ಕೈಗಾಪುಗಳನ್ನು ತೊಟ್ಟುಕೊಂಡನು.

04040024a ಕೃಷ್ಣಾನ್ಭಂಗೀಮತಃ ಕೇಶಾಂ ಶ್ವೇತೇನೋದ್ಗ್ರಥ್ಯ ವಾಸಸಾ।
04040024c ಅಧಿಜ್ಯಂ ತರಸಾ ಕೃತ್ವಾ ಗಾಂಡೀವಂ ವ್ಯಾಕ್ಷಿಪದ್ಧನುಃ।।

ಅನಂತರ ಅವನು ಸುರುಳಿ ಸುರುಳಿಯಾಗಿರುವ ಕಪ್ಪುಗೂದಲನ್ನು ಬಿಳಿಯ ಬಟ್ಟೆಯಿಂದ ಮೇಲೆತ್ತಿ ಕಟ್ಟಿ, ಗಾಂಡೀವ ಧನುಸ್ಸಿಗೆ ಬೇಗ ಹೆದೆಯೇರಿಸಿ ಅದನ್ನು ಮಿಡಿದನು.

04040025a ತಸ್ಯ ವಿಕ್ಷಿಪ್ಯಮಾಣಸ್ಯ ಧನುಷೋಽಭೂನ್ಮಹಾಸ್ವನಃ।
04040025c ಯಥಾ ಶೈಲಸ್ಯ ಮಹತಃ ಶೈಲೇನೈವಾಭಿಜಘ್ನುಷಃ।।

ಮಹಾಪರ್ವತವು ಮಹಾಪರ್ವತಕ್ಕೆ ತಾಗಿದಂತೆ ಅವನಿಂದ ಠೇಂಕಾರಗೊಂಡ ಆ ಬಿಲ್ಲು ಮಹಾಧ್ವನಿಯನ್ನುಂಟುಮಾಡಿತು.

04040026a ಸನಿರ್ಘಾತಾಭವದ್ಭೂಮಿರ್ದಿಕ್ಷು ವಾಯುರ್ವವೌ ಭೃಶಂ।
04040026c ಭ್ರಾಂತದ್ವಿಜಂ ಖಂ ತದಾಸೀತ್ಪ್ರಕಂಪಿತಮಹಾದ್ರುಮಂ।।

ಆಗ ಭೂಮಿಯು ನಡುಗಿತು. ದಿಕ್ಕುದಿಕ್ಕುಗಳಲ್ಲಿ ಗಾಳಿ ಬಲವಾಗಿ ಬೀಸಿತು. ಆಗಸದಲ್ಲಿ ಹಕ್ಕಿಗಳು ದಿಕ್ಕುಗೆಟ್ಟವು. ಮಹಾವೃಕ್ಷಗಳು ನಡುಗಿದವು.

04040027a ತಂ ಶಬ್ದಂ ಕುರವೋಽಜಾನನ್ವಿಸ್ಫೋಟಮಶನೇರಿವ।
04040027c ಯದರ್ಜುನೋ ಧನುಃಶ್ರೇಷ್ಠಂ ಬಾಹುಭ್ಯಾಮಾಕ್ಷಿಪದ್ರಥೇ।।

ಅರ್ಜುನನು ರಥದಲ್ಲಿ ಕುಳಿತು ಶ್ರೇಷ್ಠವಾದ ಧನುವನ್ನು ತೋಳುಗಳಿಂದ ಮಿಡಿದುದರಿಂದ ಉಂಟಾದ ಆ ಶಬ್ಧವನ್ನು ಸಿಡಿಲಿನ ಆಸ್ಪೋಟವೆಂದು ಕೌರವರು ಭಾವಿಸಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಉತ್ತರಾರ್ಜುನವಾಕ್ಯೇ ಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಉತ್ತರಾರ್ಜುನವಾಕ್ಯದಲ್ಲಿ ನಲ್ವತ್ತನೆಯ ಅಧ್ಯಾಯವು.