039 ಉತ್ತರಗೋಗ್ರಹೇ ಅರ್ಜುನಪರಿಚಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ಗೋಹರಣ ಪರ್ವ

ಅಧ್ಯಾಯ 39

ಸಾರ

ಅರ್ಜುನನು ವೇಷಮರೆಸಿಕೊಂಡು ಅಜ್ಞಾತವಾಸ ಮಾಡುತ್ತಿದ್ದ ತನ್ನ, ಸಹೋದರರ ಮತ್ತು ದ್ರೌಪದಿಯ ಕುರುಹನ್ನು ಉತ್ತರನಿಗೆ ಹೇಳುವುದು (1-6). ಅದನ್ನು ನಂಬದೇ ಕೇಳಿದ ಉತ್ತರನಿಗೆ ಬೃಹನ್ನಡೆಯು ಅರ್ಜುನನಿಗಿರುವ ಹತ್ತು ಹೆಸರುಗಳನ್ನೂ ಅವುಗಳ ಅರ್ಥದೊಂದಿಗೆ ವಿವರಿಸುವುದು (7-20). ಇದನ್ನು ಕೇಳಿ ಉತ್ತರನು ಅರ್ಜುನನಲ್ಲಿ ಕ್ಷಮೆಯನ್ನು ಕೇಳುವುದು (21-23).

04039001 ಉತ್ತರ ಉವಾಚ।
04039001a ಸುವರ್ಣವಿಕೃತಾನೀಮಾನ್ಯಾಯುಧಾನಿ ಮಹಾತ್ಮನಾಂ।
04039001c ರುಚಿರಾಣಿ ಪ್ರಕಾಶಂತೇ ಪಾರ್ಥಾನಾಮಾಶುಕಾರಿಣಾಂ।।

ಉತ್ತರನು ಹೇಳಿದನು: “ಮಹಾತ್ಮರೂ, ಶೀಘ್ರಕರ್ಮಿಗಳೂ ಆದ ಪಾಂಡವರ ಈ ಚಿನ್ನದಿಂದ ಮಾಡಿದ ಸುಂದರ ಆಯುಧಗಳು ಪ್ರಕಾಶಿಸುತ್ತಿವೆ.

04039002a ಕ್ವ ನು ಸ್ವಿದರ್ಜುನಃ ಪಾರ್ಥಃ ಕೌರವ್ಯೋ ವಾ ಯುಧಿಷ್ಠಿರಃ।
04039002c ನಕುಲಃ ಸಹದೇವಶ್ಚ ಭೀಮಸೇನಶ್ಚ ಪಾಂಡವಃ।।

ಆದರೆ ಕುಂತೀಸುತ ಅರ್ಜುನನೆಲ್ಲಿ? ಕೌರವ್ಯ ಯುಧಿಷ್ಠಿರನೆಲ್ಲಿ? ನಕುಲ ಸಹದೇವರೆಲ್ಲಿ? ಪಾಂಡವ ಭೀಮಸೇನನೆಲ್ಲಿ?

04039003a ಸರ್ವ ಏವ ಮಹಾತ್ಮಾನಃ ಸರ್ವಾಮಿತ್ರವಿನಾಶನಾಃ।
04039003c ರಾಜ್ಯಮಕ್ಷೈಃ ಪರಾಕೀರ್ಯ ನ ಶ್ರೂಯಂತೇ ಕದಾ ಚನ।।

ಪಗಡೆಯಾಟದಿಂದ ರಾಜ್ಯವನ್ನು ಕಳೆದುಕೊಂಡ ನಂತರ ಆ ಸರ್ವಶತ್ರುನಾಶಕ ಮಹಾತ್ಮರ ವಿಷಯವು ಎಂದೂ ಕೇಳಿಬಂದಿಲ್ಲ.

04039004a ದ್ರೌಪದೀ ಕ್ವ ಚ ಪಾಂಚಾಲೀ ಸ್ತ್ರೀರತ್ನಮಿತಿ ವಿಶ್ರುತಾ।
04039004c ಜಿತಾನಕ್ಷೈಸ್ತದಾ ಕೃಷ್ಣಾ ತಾನೇವಾನ್ವಗಮದ್ವನಂ।।

ಸ್ತ್ರೀರತ್ನವೆಂದು ಹೆಸರಾದ ಪಾಂಚಾಲಿ ದ್ರೌಪದಿಯೆಲ್ಲಿ? ಆಗ ಕೃಷ್ಣೆಯು ಪಗಡೆಯಾಟದಲ್ಲಿ ಸೋತ ಆ ಪಾಂಡವರನ್ನೇ ಅನುಸರಿಸಿ ಕಾಡಿಗೆ ಹೋದಳಷ್ಟೆ?”

04039005 ಅರ್ಜುನ ಉವಾಚ।
04039005a ಅಹಮಸ್ಮ್ಯರ್ಜುನಃ ಪಾರ್ಥಃ ಸಭಾಸ್ತಾರೋ ಯುಧಿಷ್ಠಿರಃ।
04039005c ಬಲ್ಲವೋ ಭೀಮಸೇನಸ್ತು ಪಿತುಸ್ತೇ ರಸಪಾಚಕಃ।।
04039006a ಅಶ್ವಬಂಧೋಽಥ ನಕುಲಃ ಸಹದೇವಸ್ತು ಗೋಕುಲೇ।
04039006c ಸೈರಂಧ್ರೀಂ ದ್ರೌಪದೀಂ ವಿದ್ಧಿ ಯತ್ಕೃತೇ ಕೀಚಕಾ ಹತಾಃ।।

ಅರ್ಜುನನು ಹೇಳಿದನು: “ನಾನೇ ಕುಂತೀಪುತ್ರ ಅರ್ಜುನ. ಆಸ್ಥಾನಿಕನೇ ಯುಧಿಷ್ಠಿರ. ನಿನ್ನ ತಂದೆಗೆ ರುಚಿಕರ ಆಡುಗೆ ಮಾಡುವ ಬಲ್ಲವನೇ ಭೀಮಸೇನ. ಅಶ್ವಪಾಲಕನೇ ನಕುಲ. ಗೋಶಾಲೆಯಲ್ಲಿರುವವನೇ ಸಹದೇವ, ಯಾರಿಗಾಗಿ ಕೀಚಕರು ಹತರಾದರೋ ಆ ಸೈರಂಧ್ರಿಯೇ ದ್ರೌಪದಿಯೆಂದು ತಿಳಿ.”

04039007 ಉತ್ತರ ಉವಾಚ।
04039007a ದಶ ಪಾರ್ಥಸ್ಯ ನಾಮಾನಿ ಯಾನಿ ಪೂರ್ವಂ ಶ್ರುತಾನಿ ಮೇ।
04039007c ಪ್ರಬ್ರೂಯಾಸ್ತಾನಿ ಯದಿ ಮೇ ಶ್ರದ್ದಧ್ಯಾಂ ಸರ್ವಮೇವ ತೇ।।

ಉತ್ತರನು ಹೇಳಿದನು: “ನಾನು ಹಿಂದೆ ಕೇಳಿದ್ದ ಪಾರ್ಥನ ಹತ್ತು ಹೆಸರುಗಳನ್ನು ನೀನು ಹೇಳುವುದಾದರೆ ನಿನ್ನ ಹೇಳಿಕೆಯೆಲ್ಲವನ್ನೂ ನಂಬುತ್ತೇನೆ.”

04039008 ಅರ್ಜುನ ಉವಾಚ।
04039008a ಹಂತ ತೇಽಹಂ ಸಮಾಚಕ್ಷೇ ದಶ ನಾಮಾನಿ ಯಾನಿ ಮೇ।
04039008c ಅರ್ಜುನಃ ಫಲ್ಗುನೋ ಜಿಷ್ಣುಃ ಕಿರೀಟೀ ಶ್ವೇತವಾಹನಃ।
04039008e ಬೀಭತ್ಸುರ್ವಿಜಯಃ ಕೃಷ್ಣಃ ಸವ್ಯಸಾಚೀ ಧನಂಜಯಃ।।

ಅರ್ಜುನನು ಹೇಳಿದನು: “ನನ್ನ ಹತ್ತು ಹೆಸರುಗಳನ್ನೂ ನಿನಗೆ ಹೇಳುತ್ತೇನೆ: ಅರ್ಜುನ, ಫಲ್ಗುನ, ಜಿಷ್ಣು, ಕಿರೀಟಿ, ಶ್ವೇತವಾಹನ, ಬೀಭತ್ಸು, ವಿಜಯ, ಕೃಷ್ಣ, ಸವ್ಯಸಾಚಿ ಮತ್ತು ಧನಂಜಯ.”

04039009 ಉತ್ತರ ಉವಾಚ।
04039009a ಕೇನಾಸಿ ವಿಜಯೋ ನಾಮ ಕೇನಾಸಿ ಶ್ವೇತವಾಹನಃ।
04039009c ಕಿರೀಟೀ ನಾಮ ಕೇನಾಸಿ ಸವ್ಯಸಾಚೀ ಕಥಂ ಭವಾನ್।।
04039010a ಅರ್ಜುನಃ ಫಲ್ಗುನೋ ಜಿಷ್ಣುಃ ಕೃಷ್ಣೋ ಬೀಭತ್ಸುರೇವ ಚ।
04039010c ಧನಂಜಯಶ್ಚ ಕೇನಾಸಿ ಪ್ರಬ್ರೂಹಿ ಮಮ ತತ್ತ್ವತಃ।।
04039010e ಶ್ರುತಾ ಮೇ ತಸ್ಯ ವೀರಸ್ಯ ಕೇವಲಾ ನಾಮಹೇತವಃ।।

ಉತ್ತರನು ಹೇಳಿದನು: “ಯಾವುದರಿಂದ ನೀನು ವಿಜಯನೆಂದಾದೆ? ಏತರಿಂದ ಶ್ವೇತವಾಹನನಾದೆ? ಏತರಿಂದ ಕಿರೀಟಿ ಎಂದಾದೆ? ಸವ್ಯಸಾಚಿ ಹೇಗಾದೆ? ಏತರಿಂದ ಅರ್ಜುನ, ಫಲ್ಗುನ, ಜಿಷ್ಣು, ಕೃಷ್ಣ, ಬೀಭತ್ಸು, ಧನಂಜಯ ಎಂದೆನಿಸಿಕೊಂಡೆ? ನನಗೆ ನಿಜವಾಗಿ ಹೇಳು. ಆ ವೀರನ ಹೆಸರುಗಳಿಗೆ ಕಾರಣಗಳನ್ನು ಚೆನ್ನಾಗಿ ಕೇಳಿ ಬಲ್ಲೆ.”

04039011 ಅರ್ಜುನ ಉವಾಚ।
04039011a ಸರ್ವಾಂ ಜನಪದಾಂ ಜಿತ್ವಾ ವಿತ್ತಮಾಚ್ಛಿದ್ಯ ಕೇವಲಂ।
04039011c ಮಧ್ಯೇ ಧನಸ್ಯ ತಿಷ್ಠಾಮಿ ತೇನಾಹುರ್ಮಾಂ ಧನಂಜಯಂ।।

ಅರ್ಜುನನು ಹೇಳಿದನು: “ನಾನು ಎಲ್ಲ ದೇಶಗಳನ್ನೂ ಗೆದ್ದು ಐಶ್ವರ್ಯವನ್ನೆಲ್ಲ ಸುಲಿದುಕೊಂಡು ಸಂಪತ್ತಿನ ನಡುವೆ ಇರುತ್ತೇನೆ. ಆದುದರಿಂದ ನನ್ನನ್ನು ಧನಂಜಯನೆಂದು ಕರೆಯುತ್ತಾರೆ.

04039012a ಅಭಿಪ್ರಯಾಮಿ ಸಂಗ್ರಾಮೇ ಯದಹಂ ಯುದ್ಧದುರ್ಮದಾನ್।
04039012c ನಾಜಿತ್ವಾ ವಿನಿವರ್ತಾಮಿ ತೇನ ಮಾಂ ವಿಜಯಂ ವಿದುಃ।।

ನಾನು ಯುದ್ಧದುರ್ಮದರನ್ನು ಯುದ್ಧದಲ್ಲಿ ಎದುರಿಸಿದಾಗ ಅವರನ್ನು ಗೆಲ್ಲದೇ ಹಿಂದಿರುಗುವುದಿಲ್ಲ. ಆದುದರಿಂದ ನನ್ನನ್ನು ವಿಜಯನೆಂದು ತಿಳಿಯುತ್ತಾರೆ.

04039013a ಶ್ವೇತಾಃ ಕಾಂಚನಸಂನಾಹಾ ರಥೇ ಯುಜ್ಯಂತಿ ಮೇ ಹಯಾಃ।
04039013c ಸಂಗ್ರಾಮೇ ಯುಧ್ಯಮಾನಸ್ಯ ತೇನಾಹಂ ಶ್ವೇತವಾಹನಃ।।

ನಾನು ಯುದ್ಧದಲ್ಲಿ ಕಾದುವಾಗ ಚಿನ್ನದ ಕವಚವುಳ್ಳ ಬಿಳಿಯಕುದುರೆಗಳನ್ನು ನನ್ನ ರಥಕ್ಕೆ ಹೂಡಲಾಗುತ್ತದೆ. ಅದರಿಂದ ನಾನು ಶ್ವೇತವಾಹನ.

04039014a ಉತ್ತರಾಭ್ಯಾಂ ಚ ಪೂರ್ವಾಭ್ಯಾಂ ಫಲ್ಗುನೀಭ್ಯಾಮಹಂ ದಿವಾ।
04039014c ಜಾತೋ ಹಿಮವತಃ ಪೃಷ್ಠೇ ತೇನ ಮಾಂ ಫಲ್ಗುನಂ ವಿದುಃ।।

ನಾನು ಉತ್ತರ ಮತ್ತು ಪೂರ್ವ ಫಲ್ಗುನೀ ನಕ್ಷತ್ರದಂದು ಹಿಮವತ್ಪರ್ವತದ ತಪ್ಪಲಿನಲ್ಲಿ ಹುಟ್ಟಿದೆ. ಆದುದರಿಂದ ನನ್ನನ್ನು ಫಲ್ಗುನನೆಂದು ತಿಳಿಯುತ್ತಾರೆ.

04039015a ಪುರಾ ಶಕ್ರೇಣ ಮೇ ದತ್ತಂ ಯುಧ್ಯತೋ ದಾನವರ್ಷಭೈಃ।
04039015c ಕಿರೀಟಂ ಮೂರ್ಧ್ನಿ ಸೂರ್ಯಾಭಂ ತೇನ ಮಾಹುಃ ಕಿರೀಟಿನಂ।।

ಹಿಂದೆ ದಾನವಶ್ರೇಷ್ಠರೊಡನೆ ಯುದ್ಧಮಾಡುವಾಗ ಇಂದ್ರನು ಸೂರ್ಯಸಮಾನ ಕಿರೀಟವನ್ನು ನನ್ನ ತಲೆಗಿಟ್ಟನು. ಆದುದರಿಂದ ನನ್ನನ್ನು ಕಿರೀಟಿಯೆನ್ನುತ್ತಾರೆ.

04039016a ನ ಕುರ್ಯಾಂ ಕರ್ಮ ಬೀಭತ್ಸಂ ಯುಧ್ಯಮಾನಃ ಕಥಂ ಚನ।
04039016c ತೇನ ದೇವಮನುಷ್ಯೇಷು ಬೀಭತ್ಸುರಿತಿ ಮಾಂ ವಿದುಃ।।

ನಾನು ಯುದ್ಧಮಾಡುವಾಗ ಎಂದೂ ಬೀಭತ್ಸವಾದ ಕರ್ಮವನ್ನೆಸಗುವುದಿಲ್ಲ. ಅದರಿಂದ ದೇವ-ಮಾನವರು ನನ್ನನ್ನು ಬೀಭತ್ಸುವೆಂದು ತಿಳಿಯುತ್ತಾರೆ.

04039017a ಉಭೌ ಮೇ ದಕ್ಷಿಣೌ ಪಾಣೀ ಗಾಂಡೀವಸ್ಯ ವಿಕರ್ಷಣೇ।
04039017c ತೇನ ದೇವಮನುಷ್ಯೇಷು ಸವ್ಯಸಾಚೀತಿ ಮಾಂ ವಿದುಃ।।

ಗಾಂಡೀವವನ್ನು ಸೆಳೆಯುವಾಗ ನನ್ನ ಎರಡು ಕೈಗಳೂ ಬಲಗೈಗಳೇ. ಅದರಿಂದ ದೇವ-ಮಾನವರು ನನ್ನನ್ನು ಸವ್ಯಸಾಚಿಯೆಂದು ತಿಳಿಯುತ್ತಾರೆ.

04039018a ಪೃಥಿವ್ಯಾಂ ಚತುರಂತಾಯಾಂ ವರ್ಣೋ ಮೇ ದುರ್ಲಭಃ ಸಮಃ।
04039018c ಕರೋಮಿ ಕರ್ಮ ಶುಕ್ಲಂ ಚ ತೇನ ಮಾಮರ್ಜುನಂ ವಿದುಃ।।

ಚತುಃಸಮುದ್ರಪರ್ಯಂತವಾದ ಈ ಭೂಮಿಯಲ್ಲಿ ನನ್ನ ಬಣ್ಣಕ್ಕೆ ಸಮಾನವಾದ ಬಣ್ಣ ದುರ್ಲಭ. ಅಲ್ಲದೆ ನಾನು ನಿರ್ಮಲವಾದ ಕಾರ್ಯವನ್ನು ಮಾಡುತ್ತೇನೆ. ಅದರಿಂದ ನನ್ನನ್ನು ಅರ್ಜುನನೆಂದು ತಿಳಿಯುತ್ತಾರೆ.

04039019a ಅಹಂ ದುರಾಪೋ ದುರ್ಧರ್ಷೋ ದಮನಃ ಪಾಕಶಾಸನಿಃ।
04039019c ತೇನ ದೇವಮನುಷ್ಯೇಷು ಜಿಷ್ಣುನಾಮಾಸ್ಮಿ ವಿಶ್ರುತಃ।।

ಪಾಕಶಾಸನನ ಮಗನಾದ ನಾನು ಸಮೀಪಿಸಲಾಗದವನು; ಎದುರಿಸಲಾಗದವನು, ಶತ್ರುಗಳನ್ನು ದಮನಮಾಡತಕ್ಕವನು. ಅದರಿಂದ ದೇವ-ಮಾನವರಲ್ಲಿ ನಾನು ಜಿಷ್ಣುವೆಂದು ಪ್ರಸಿದ್ಧನಾಗಿದ್ದೇನೆ.

04039020a ಕೃಷ್ಣ ಇತ್ಯೇವ ದಶಮಂ ನಾಮ ಚಕ್ರೇ ಪಿತಾ ಮಮ।
04039020c ಕೃಷ್ಣಾವದಾತಸ್ಯ ಸತಃ ಪ್ರಿಯತ್ವಾದ್ಬಾಲಕಸ್ಯ ವೈ।।

ಬಾಲ್ಯದಲ್ಲಿ ನಾನು ಕಪ್ಪುಬಣ್ಣದಿಂದ ಕೂಡಿ ಹೊಳೆಯುತ್ತಿದ್ದುದರಿಂದಲೂ, ತಂದೆಗೆ ಪ್ರಿಯನಾಗಿದ್ದುದರಿಂದಲೂ ನನ್ನ ತಂದೆಯು ನನಗೆ ಕೃಷ್ಣನೆಂಬ ಹತ್ತನೆಯ ಹೆಸರನ್ನಿಟ್ಟನು.””

04039021 ವೈಶಂಪಾಯನ ಉವಾಚ।
04039021a ತತಃ ಪಾರ್ಥಂ ಸ ವೈರಾಟಿರಭ್ಯವಾದಯದಂತಿಕಾತ್।
04039021c ಅಹಂ ಭೂಮಿಂಜಯೋ ನಾಮ ನಾಂನಾಹಮಪಿ ಚೋತ್ತರಃ।।

ವೈಶಂಪಾಯನನು ಹೇಳಿದನು: “ಬಳಿಕ ಆ ವಿರಾಟಪುತ್ರನು ಪಾರ್ಥನನ್ನು ಸಮೀಪಿಸಿ ಅಭಿವಾದನ ಮಾಡಿ ಹೇಳಿದನು: “ನಾನು ಭೂಮಿಂಜಯ. ಉತ್ತರನೆಂಬ ಹೆಸರೂ ನನಗುಂಟು.

04039022a ದಿಷ್ಟ್ಯಾ ತ್ವಾಂ ಪಾರ್ಥ ಪಶ್ಯಾಮಿ ಸ್ವಾಗತಂ ತೇ ಧನಂಜಯ।
04039022c ಲೋಹಿತಾಕ್ಷ ಮಹಾಬಾಹೋ ನಾಗರಾಜಕರೋಪಮ।
04039022e ಯದಜ್ಞಾನಾದವೋಚಂ ತ್ವಾಂ ಕ್ಷಂತುಮರ್ಹಸಿ ತನ್ಮಮ।।

ಪಾರ್ಥ! ಅದೃಷ್ಟವಶಾತ್ ನಾನು ನಿನ್ನನ್ನು ನೋಡುತ್ತಿದ್ದೇನೆ. ಧನಂಜಯ! ನಿನಗೆ ಸ್ವಾಗತ! ಕೆಂಪು ಕಣ್ಣುಳ್ಳವನೇ! ಗಜರಾಜನ ಸೊಂಡಿಲಿನಂಥ ಮಹಾಬಾಹುಗಳುಳ್ಳವನೇ! ಅಜ್ಞಾನದಿಂದ ನಾನು ನಿನ್ನ ಬಗ್ಗೆ ನುಡಿದುದನ್ನು ಕ್ಷಮಿಸು.

04039023a ಯತಸ್ತ್ವಯಾ ಕೃತಂ ಪೂರ್ವಂ ವಿಚಿತ್ರಂ ಕರ್ಮ ದುಷ್ಕರಂ।
04039023c ಅತೋ ಭಯಂ ವ್ಯತೀತಂ ಮೇ ಪ್ರೀತಿಶ್ಚ ಪರಮಾ ತ್ವಯಿ।।

ನೀನು ಹಿಂದೆ ಅದ್ಭುತವೂ ದುಷ್ಕರವೂ ಆದ ಕಾರ್ಯಗಳನ್ನು ಮಾಡಿದ್ದವನಾದ್ದರಿಂದ ನನ್ನ ಹೆದರಿಕೆ ಕಳೆಯಿತು. ನಿನ್ನಲ್ಲಿ ನನಗೆ ಪರಮ ಪ್ರೀತಿಯುಂಟಾಗಿದೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಅರ್ಜುನಪರಿಚಯೇ ಏಕೋನಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಅರ್ಜುನಪರಿಚಯದಲ್ಲಿ ಮೂವತ್ತೊಂಭತ್ತನೆಯ ಅಧ್ಯಾಯವು.