038 ಉತ್ತರಗೋಗ್ರಹೇ ಆಯುಧವರ್ಣನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ಗೋಹರಣ ಪರ್ವ

ಅಧ್ಯಾಯ 38

ಸಾರ

ಬನ್ನೀ ಮರವನ್ನು ಹತ್ತಿ ಪಾಂಡವರ ಆಯುಧಗಳನ್ನು ಕೆಳಗಿಳಿಸೆಂದು ಬೃಹನ್ನಡೆಯು ಉತ್ತರನಿಗೆ ಹೇಳಿದುದು (1-8). ಬಹಳ ಒತ್ತಾಯದ ನಂತರ ಉತ್ತರನು ಮರವನ್ನು ಹತ್ತಿ ಕಟ್ಟನ್ನು ಕಳಚಿ ಹೊಳೆಯುತ್ತಿರುವ ದೊಡ್ಡ ಬಿಲ್ಲುಗಳನ್ನು ನೋಡಿ ಭಯೋದ್ವಿಗ್ನನಾದುದು (9-19). ಅಲ್ಲಿದ್ದ ಪ್ರತಿಯೊಂದು ಆಯುಧವೂ ಯಾರದ್ದೆಂದು ಬೃಹನ್ನಡೆಯನ್ನು ಕೇಳಿದುದು (20-35). ಬೃಹನ್ನಡೆಯು ಪ್ರತಿಯೊಂದು ಆಯುಧವೂ ಯಾರದ್ದೆಂದು ಉತ್ತರನಿಗೆ ಪರಿಚಯಿಸುವುದು (36-58).

04038001 ವೈಶಂಪಾಯನ ಉವಾಚ।
04038001a ತಾಂ ಶಮೀಮುಪಸಂಗಮ್ಯ ಪಾರ್ಥೋ ವೈರಾಟಿಮಬ್ರವೀತ್।
04038001c ಸುಕುಮಾರಂ ಸಮಾಜ್ಞಾತಂ ಸಂಗ್ರಾಮೇ ನಾತಿಕೋವಿದಂ।।

ವೈಶಂಪಾಯನನು ಹೇಳಿದನು: “ಪಾರ್ಥನು ಆ ಬನ್ನೀಮರವನ್ನು ತಲುಪಿ ಉತ್ತರನು ಸುಕುಮಾರನೆಂದೂ ಯುದ್ಧದಲ್ಲಿ ಬಹಳ ಕೋವಿದನಲ್ಲವೆಂದೂ ಅರಿತು ಆ ವಿರಾಟಪುತ್ರನಿಗೆ ನುಡಿದನು:

04038002a ಸಮಾದಿಷ್ಟೋ ಮಯಾ ಕ್ಷಿಪ್ರಂ ಧನೂಂಷ್ಯವಹರೋತ್ತರ।
04038002c ನೇಮಾನಿ ಹಿ ತ್ವದೀಯಾನಿ ಸೋಢುಂ ಶಕ್ಷ್ಯಂತಿ ಮೇ ಬಲಂ।।
04038003a ಭಾರಂ ವಾಪಿ ಗುರುಂ ಹರ್ತುಂ ಕುಂಜರಂ ವಾ ಪ್ರಮರ್ದಿತುಂ।
04038003c ಮಮ ವಾ ಬಾಹುವಿಕ್ಷೇಪಂ ಶತ್ರೂನಿಹ ವಿಜೇಷ್ಯತಃ।।

“ಉತ್ತರ! ನನ್ನ ಆದೇಶದಂತೆ ನೀನು ಬಿಲ್ಲುಗಳನ್ನು ಬೇಗ ಮರದಿಂದ ತೆಗೆದು ಕೊಂಡು ಬಾ. ನಿನ್ನ ಈ ಬಿಲ್ಲುಗಳು ನನ್ನ ಬಲವನ್ನು ತಡೆದುಕೊಳ್ಳಲು ಶಕ್ತವಾಗಿಲ್ಲ. ಇವು ಶತ್ರುಗಳನ್ನು ಗೆಲ್ಲುವಾಗ ಮಹಾಭಾರವನ್ನು ಹೊರಲಾಗಲಿ ಆನೆಯನ್ನು ಕೊಲ್ಲಲಾಗಲೀ ನನ್ನ ತೋಳುಬೀಸನ್ನಾಗಲೀ ತಾಳಿಕೊಳ್ಳಲು ಸಮರ್ಥವಲ್ಲ.

04038004a ತಸ್ಮಾದ್ಭೂಮಿಂಜಯಾರೋಹ ಶಮೀಮೇತಾಂ ಪಲಾಶಿನೀಂ।
04038004c ಅಸ್ಯಾಂ ಹಿ ಪಾಂಡುಪುತ್ರಾಣಾಂ ಧನೂಂಷಿ ನಿಹಿತಾನ್ಯುತ।।
04038005a ಯುಧಿಷ್ಠಿರಸ್ಯ ಭೀಮಸ್ಯ ಬೀಭತ್ಸೋರ್ಯಮಯೋಸ್ತಥಾ।
04038005c ಧ್ವಜಾಃ ಶರಾಶ್ಚ ಶೂರಾಣಾಂ ದಿವ್ಯಾನಿ ಕವಚಾನಿ ಚ।।

ಆದ್ದರಿಂದ ಭೂಮಿಂಜಯ! ದಟ್ಟವಾದ ಎಲೆಗಳಿರುವ ಈ ಬನ್ನಿಮರವನ್ನು ಹತ್ತು. ಇದರಲ್ಲಿ ಶೂರ ಪಾಂಡುಪುತ್ರರ - ಯುಧಿಷ್ಠಿರ, ಭೀಮ, ಅರ್ಜುನ ಮತ್ತು ಯಮಳರ - ಬಿಲ್ಲು, ಬಾಣ, ಬಾವುಟ ಹಾಗೂ ದಿವ್ಯ ಕವಚಗಳನ್ನು ಅಡಗಿಸಿಡಲಾಗಿದೆ.

04038006a ಅತ್ರ ಚೈತನ್ಮಹಾವೀರ್ಯಂ ಧನುಃ ಪಾರ್ಥಸ್ಯ ಗಾಂಡಿವಂ।
04038006c ಏಕಂ ಶತಸಹಸ್ರೇಣ ಸಮ್ಮಿತಂ ರಾಷ್ಟ್ರವರ್ಧನಂ।।

ಅಲ್ಲಿ ಮಹಾಸತ್ವವುಳ್ಳ, ಒಂದೇ ಆದರೂ ಲಕ್ಷಬಿಲ್ಲುಗಳಿಗೆ ಸಮನಾದ, ರಾಷ್ಟ್ರವರ್ಧನಕರವಾದ ಪಾರ್ಥನ ಗಾಂಡೀವಧನುವಿದೆ.

04038007a ವ್ಯಾಯಾಮಸಹಮತ್ಯರ್ಥಂ ತೃಣರಾಜಸಮಂ ಮಹತ್।
04038007c ಸರ್ವಾಯುಧಮಹಾಮಾತ್ರಂ ಶತ್ರುಸಂಬಾಧಕಾರಕಂ।।

ಅದು ಒತ್ತಡವನ್ನು ಚೆನ್ನಾಗಿ ತಡೆದುಕೊಳ್ಳಬಲ್ಲದು. ತಾಳೆ ಮರದಂತೆ ದೊಡ್ಡದು. ಎಲ್ಲ ಆಯುಧಗಳಿಗಿಂತಲೂ ಬೃಹತ್ತಾದದು, ಶತ್ರುಗಳಿಗೆ ಬಾಧೆಯುಂಟು ಮಾಡುವಂಥದು.

04038008a ಸುವರ್ಣವಿಕೃತಂ ದಿವ್ಯಂ ಶ್ಲಕ್ಷ್ಣಮಾಯತಮವ್ರಣಂ।
04038008c ಅಲಂ ಭಾರಂ ಗುರುಂ ವೋಢುಂ ದಾರುಣಂ ಚಾರುದರ್ಶನಂ।
04038008e ತಾದೃಶಾನ್ಯೇವ ಸರ್ವಾಣಿ ಬಲವಂತಿ ದೃಢಾನಿ ಚ।।

ಸುವರ್ಣಖಚಿತ, ದಿವ್ಯವಾದ, ನುಣುಪಾದ, ವಿಸ್ತಾರವಾದ, ಗಂಟಿಲ್ಲದ, ದೊಡ್ಡ ಭಾರವನ್ನು ಸಹಿಸಿಕೊಳ್ಳುವಂಥ, ವೈರಿಗಳಿಗೆ ಭಯಂಕರವಾದ, ನೋಡುವುದಕ್ಕೆ ಸುಂದರವಾದ ಅದರಂತೆಯೇ ಉಳಿದವರ ಎಲ್ಲ ಬಿಲ್ಲುಗಳೂ ಬಲ ಮತ್ತು ದೃಢತೆಯನ್ನುಳ್ಳವು.”

04038009 ಉತ್ತರ ಉವಾಚ।
04038009a ಅಸ್ಮಿನ್ವೃಕ್ಷೇ ಕಿಲೋದ್ಬದ್ಧಂ ಶರೀರಮಿತಿ ನಃ ಶ್ರುತಂ।
04038009c ತದಹಂ ರಾಜಪುತ್ರಃ ಸನ್ಸ್ಪೃಶೇಯಂ ಪಾಣಿನಾ ಕಥಂ।।

ಉತ್ತರನು ಹೇಳಿದನು: “ಈ ಮರಕ್ಕೆ ಒಂದು ಮೃತಶರೀರವನ್ನು ಕಟ್ಟಲಾಗಿದೆಯೆಂದು ಕೇಳಿದ್ದೇನೆ. ಆದ್ದರಿಂದ ರಾಜಪುತ್ರನಾದ ನಾನು ಅದನ್ನೆಂತು ಕೈಯಿಂದ ಮುಟ್ಟಲಿ?

04038010a ನೈವಂವಿಧಂ ಮಯಾ ಯುಕ್ತಮಾಲಬ್ಧುಂ ಕ್ಷತ್ರಯೋನಿನಾ।
04038010c ಮಹತಾ ರಾಜಪುತ್ರೇಣ ಮಂತ್ರಯಜ್ಞವಿದಾ ಸತಾ।।

ಕ್ಷತ್ರಿಯನಾಗಿ ಹುಟ್ಟಿದ, ಮಹಾರಾಜಪುತ್ರ, ಮಂತ್ರಯಜ್ಞವಿದ, ಸತ್ಪುರುಷನಾದ ನಾನು ಹೀಗೆ ಶವವನ್ನು ಮುಟ್ಟುವುದು ಸರಿಯಲ್ಲ.

04038011a ಸ್ಪೃಷ್ಟವಂತಂ ಶರೀರಂ ಮಾಂ ಶವವಾಹಮಿವಾಶುಚಿಂ।
04038011c ಕಥಂ ವಾ ವ್ಯವಹಾರ್ಯಂ ವೈ ಕುರ್ವೀಥಾಸ್ತ್ವಂ ಬೃಹನ್ನಡೇ।।

ಬೃಹನ್ನಡೇ! ಮೃತಶರೀರವನ್ನು ನಾನು ಮುಟ್ಟಿದರೆ ಶವವಾಹಕನಂತೆ ಅಶುಚಿಯಾದ ನನ್ನೊಡನೆ ಹೇಗೆ ತಾನೆ ನೀನು ವ್ಯವಹರಿಸೀಯೆ?”

04038012 ಬೃಹನ್ನಡೋವಾಚ।
04038012a ವ್ಯವಹಾರ್ಯಶ್ಚ ರಾಜೇಂದ್ರ ಶುಚಿಶ್ಚೈವ ಭವಿಷ್ಯಸಿ।
04038012c ಧನೂಂಷ್ಯೇತಾನಿ ಮಾ ಭೈಸ್ತ್ವಂ ಶರೀರಂ ನಾತ್ರ ವಿದ್ಯತೇ।।

ಬೃಹನ್ನಡೆಯು ಹೇಳಿದಳು: “ರಾಜೇಂದ್ರ! ವ್ಯವಹರಿಸಲು ಯೋಗ್ಯನೂ ಆಗುವೆ; ಶುಚಿಯಾಗಿಯೂ ಉಳಿಯುವೆ. ಹೆದರಬೇಡ! ಇವು ಬಿಲ್ಲುಗಳು. ಇಲ್ಲಿ ಮೃತಶರೀರವಿಲ್ಲ.

04038013a ದಾಯಾದಂ ಮತ್ಸ್ಯರಾಜಸ್ಯ ಕುಲೇ ಜಾತಂ ಮನಸ್ವಿನಂ।
04038013c ಕಥಂ ತ್ವಾ ನಿಂದಿತಂ ಕರ್ಮ ಕಾರಯೇಯಂ ನೃಪಾತ್ಮಜ।।

ರಾಜಪುತ್ರ! ಮತ್ಸ್ಯರಾಜನ ಉತ್ತರಾಧಿಕಾರಿಯೂ ಉನ್ನತ ಕುಲದಲ್ಲಿ ಹುಟ್ಟಿದ ದೃಢಮನಸ್ಕನೂ ಆದ ನಿನ್ನಿಂದ ನಾನು ನಿಂದ್ಯವಾದ ಈ ಕಾರ್ಯವನ್ನೇಕೆ ಮಾಡಿಸಲಿ?””

04038014 ವೈಶಂಪಾಯನ ಉವಾಚ।
04038014a ಏವಮುಕ್ತಃ ಸ ಪಾರ್ಥೇನ ರಥಾತ್ಪ್ರಸ್ಕಂದ್ಯ ಕುಂಡಲೀ।
04038014c ಆರುರೋಹ ಶಮೀವೃಕ್ಷಂ ವೈರಾಟಿರವಶಸ್ತದಾ।।

ವೈಶಂಪಾಯನನು ಹೇಳಿದನು: “ಪಾರ್ಥನು ಹೀಗೆ ಹೇಳಲು ಕುಂಡಲಧಾರಿ ಆ ವಿರಾಟಪುತ್ರನು ರಥದಿಂದಿಳಿದು ವಿವಶನಾಗಿ ಶಮೀವೃಕ್ಷವನ್ನು ಹತ್ತಿದನು.

04038015a ತಮನ್ವಶಾಸಚ್ಚತ್ರುಘ್ನೋ ರಥೇ ತಿಷ್ಠನ್ಧನಂಜಯಃ।
04038015c ಪರಿವೇಷ್ಟನಮೇತೇಷಾಂ ಕ್ಷಿಪ್ರಂ ಚೈವ ವ್ಯಪಾನುದ।।

ಶತ್ರುನಾಶಕ ಧನಂಜಯನು ರಥದಲ್ಲಿ ಕುಳಿತು “ಆ ಕಟ್ಟನ್ನು ಬೇಗ ಬಿಚ್ಚು!” ಎಂದು ಆಜ್ಞಾಪಿಸಿದನು.

04038016a ತಥಾ ಸಂನಹನಾನ್ಯೇಷಾಂ ಪರಿಮುಚ್ಯ ಸಮಂತತಃ।
04038016c ಅಪಶ್ಯದ್ಗಾಂಡಿವಂ ತತ್ರ ಚತುರ್ಭಿರಪರೈಃ ಸಹ।।

ಉತ್ತರನು ಅಂತೆಯೇ ಅವುಗಳ ಕಟ್ಟುಗಳನ್ನು ಸುತ್ತಲೂ ಬಿಚ್ಚಿ, ಅಲ್ಲಿ ಬೇರೆ ನಾಲ್ಕು ಬಿಲ್ಲುಗಳೊಡನೆ ಇದ್ದ ಗಾಂಡೀವವನ್ನು ನೋಡಿದನು.

04038017a ತೇಷಾಂ ವಿಮುಚ್ಯಮಾನಾನಾಂ ಧನುಷಾಮರ್ಕವರ್ಚಸಾಂ।
04038017c ವಿನಿಶ್ಚೇರುಃ ಪ್ರಭಾ ದಿವ್ಯಾ ಗ್ರಹಾಣಾಮುದಯೇಷ್ವಿವ।।

ಕಟ್ಟನ್ನು ಕಳಚುತ್ತಿರಲು, ಸೂರ್ಯತೇಜಸ್ಸುಗಳನ್ನುಳ್ಳ ಆ ಬಿಲ್ಲುಗಳ ದಿವ್ಯಪ್ರಭೆ ಗ್ರಹಗಳ ಉದಯಕಾಲದ ಪ್ರಭೆಯಂತೆ ಹೊಮ್ಮಿತು.

04038018a ಸ ತೇಷಾಂ ರೂಪಮಾಲೋಕ್ಯ ಭೋಗಿನಾಮಿವ ಜೃಂಭತಾಂ।
04038018c ಹೃಷ್ಟರೋಮಾ ಭಯೋದ್ವಿಗ್ನಃ ಕ್ಷಣೇನ ಸಮಪದ್ಯತ।।

ವಿಜೃಂಭಿಸುವ ಸರ್ಪಗಳ ರೂಪದಂತಹ ಅವುಗಳ ರೂಪವನ್ನು ಕಂಡ ಅವನು ಕ್ಷಣಮಾತ್ರದಲ್ಲಿ ರೋಮಾಂಚನಗೊಂಡು ಭಯೋದ್ವಿಗ್ನನಾದನು.

04038019a ಸಂಸ್ಪೃಶ್ಯ ತಾನಿ ಚಾಪಾನಿ ಭಾನುಮಂತಿ ಬೃಹಂತಿ ಚ।
04038019c ವೈರಾಟಿರರ್ಜುನಂ ರಾಜನ್ನಿದಂ ವಚನಮಬ್ರವೀತ್।।

ರಾಜನ್! ಹೊಳೆಹೊಳೆಯುತ್ತಿರುವ ಆ ದೊಡ್ಡ ಬಿಲ್ಲುಗಳನ್ನು ಉತ್ತರನು ಮುಟ್ಟಿ ಈ ಮಾತನ್ನಾಡಿದನು.

04038020 ಉತ್ತರ ಉವಾಚ।
04038020a ಬಿಂದವೋ ಜಾತರೂಪಸ್ಯ ಶತಂ ಯಸ್ಮಿನ್ನಿಪಾತಿತಾಃ।
04038020c ಸಹಸ್ರಕೋಟಿ ಸೌವರ್ಣಾಃ ಕಸ್ಯೈತದ್ಧನುರುತ್ತಮಂ।।

ಉತ್ತರನು ಹೇಳಿದನು: “ಚಿನ್ನದ ನೂರು ಚಿಕ್ಕೆಗಳನ್ನುಳ್ಳ, ಸಾವಿರಕೋಟಿ ಸುವರ್ಣಗಳ ಈ ಉತ್ತಮ ಬಿಲ್ಲು ಯಾರದ್ದು?

04038021a ವಾರಣಾ ಯಸ್ಯ ಸೌವರ್ಣಾಃ ಪೃಷ್ಠೇ ಭಾಸಂತಿ ದಂಶಿತಾಃ।
04038021c ಸುಪಾರ್ಶ್ವಂ ಸುಗ್ರಹಂ ಚೈವ ಕಸ್ಯೈತದ್ಧನುರುತ್ತಮಂ।।

ಬೆನ್ನಿನ ಮೇಲೆ ಹೊಳೆಯುವ ಚಿನ್ನದ ಸಲಗಗಳನ್ನು ಕೆತ್ತಿರುವ ಒಳ್ಳೆಯ ಅಂಚು-ಹಿಡಿಗಳನ್ನುಳ್ಳ ಈ ಉತ್ತಮ ಬಿಲ್ಲು ಯಾರದ್ದು?

04038022a ತಪನೀಯಸ್ಯ ಶುದ್ಧಸ್ಯ ಷಷ್ಟಿರ್ಯಸ್ಯೇಂದ್ರಗೋಪಕಾಃ।
04038022c ಪೃಷ್ಠೇ ವಿಭಕ್ತಾಃ ಶೋಭಂತೇ ಕಸ್ಯೈತದ್ಧನುರುತ್ತಮಂ।।

ಬೆನ್ನಿನ ಮೇಲೆ ಬಿಡಿಸಿರುವ ಶುದ್ಧ ಸುವರ್ಣದ ಅರವತ್ತು ಇಂದ್ರಗೋಪ (ಚಿಟ್ಟೆಗಳು) ಗಳು ಶೋಭಿಸುತ್ತಿರುವ ಈ ಉತ್ತಮ ಬಿಲ್ಲು ಯಾರದ್ದು?

04038023a ಸೂರ್ಯಾ ಯತ್ರ ಚ ಸೌವರ್ಣಾಸ್ತ್ರಯೋ ಭಾಸಂತಿ ದಂಶಿತಾಃ।
04038023c ತೇಜಸಾ ಪ್ರಜ್ವಲಂತೋ ಹಿ ಕಸ್ಯೈತದ್ಧನುರುತ್ತಮಂ।।

ತೇಜಸ್ಸಿನಿಂದ ಪ್ರಜ್ವಲಿಸುತ್ತಿರುವ ಮೂರು ಸುವರ್ಣ ಸೂರ್ಯರನ್ನು ಕೆತ್ತಿರುವ ಈ ಉತ್ತಮ ಬಿಲ್ಲು ಯಾರದ್ದು?

04038024a ಶಾಲಭಾ ಯತ್ರ ಸೌವರ್ಣಾಸ್ತಪನೀಯವಿಚಿತ್ರಿತಾಃ।
04038024c ಸುವರ್ಣಮಣಿಚಿತ್ರಂ ಚ ಕಸ್ಯೈತದ್ಧನುರುತ್ತಮಂ।।

ಪುಟವಿಟ್ಟ ಚಿನ್ನದ ಚಿಟ್ಟೆಗಳನ್ನು ಚಿತ್ರಿಸಿರುವ ಬಂಗಾರ ಮತ್ತು ಮಣಿಗಳನ್ನು ಬಿಡಿಸಿದ ಈ ಉತ್ತಮ ಬಿಲ್ಲು ಯಾರದ್ದು?

04038025a ಇಮೇ ಚ ಕಸ್ಯ ನಾರಾಚಾಃ ಸಹಸ್ರಾ ಲೋಮವಾಹಿನಃ।
04038025c ಸಮಂತಾತ್ಕಲಧೌತಾಗ್ರಾ ಉಪಾಸಂಗೇ ಹಿರಣ್ಮಯೇ।।

ಸುತ್ತಲೂ ಗರಿಗಳಿಂದ, ಚಿನ್ನದ ಮೊನೆಗಳಿಂದ ಕೂಡಿದ ಮತ್ತು ಚಿನ್ನದ ಬತ್ತಳಿಕೆಯಲ್ಲಿರುವ ಈ ಸಾವಿರ ಬಾಣಗಳು ಯಾರವು?

04038026a ವಿಪಾಠಾಃ ಪೃಥವಃ ಕಸ್ಯ ಗಾರ್ಧ್ರಪತ್ರಾಃ ಶಿಲಾಶಿತಾಃ।
04038026c ಹಾರಿದ್ರವರ್ಣಾಃ ಸುನಸಾಃ ಪೀತಾಃ ಸರ್ವಾಯಸಾಃ ಶರಾಃ।।

ಉದ್ದವೂ, ದಪ್ಪವೂ, ಹದ್ದಿನ ಗರಿಗಳುಳ್ಳವೂ, ಕಲ್ಲಿನ ಮೇಲೆ ಮಸೆದವೂ, ಹಳದಿ ಬಣ್ಣದವೂ, ಒಳ್ಳೆಯ ತುದಿಗಳುಳ್ಳವೂ, ಹದಗೊಳಿಸಿದವೂ, ಉಕ್ಕಿನಿಂದ ಮಾಡಿದವೂ ಆದ ಈ ಬಾಣಗಳು ಯಾರವು?

04038027a ಕಸ್ಯಾಯಮಸಿತಾವಾಪಃ ಪಂಚಶಾರ್ದೂಲಲಕ್ಷಣಃ।
04038027c ವರಾಹಕರ್ಣವ್ಯಾಮಿಶ್ರಃ ಶರಾನ್ಧಾರಯತೇ ದಶ।।

ಐದು ಹುಲಿಗಳ ಗುರುತುಗಳನ್ನುಳ್ಳ, ಹಂದಿಯ ಕಿವಿಯನ್ನು ಹೋಲುವ ಮತ್ತು ಹತ್ತು ಬಾಣಗಳನ್ನು ಹೂಡಬದುದಾಗಿರುವ ಈ ಕಪ್ಪು ಬಿಲ್ಲು ಯಾರದ್ದು?

04038028a ಕಸ್ಯೇಮೇ ಪೃಥವೋ ದೀರ್ಘಾಃ ಸರ್ವಪಾರಶವಾಃ ಶರಾಃ।
04038028c ಶತಾನಿ ಸಪ್ತ ತಿಷ್ಠಂತಿ ನಾರಾಚಾ ರುಧಿರಾಶನಾಃ।।

ರಕ್ತವನ್ನು ಕುಡಿಯುವಂತಹ, ಪೂರ್ತಿ ಉಕ್ಕಿನಿಂದ ಮಾಡಿದ, ಈ ದಪ್ಪ, ಉದ್ದ, ಏಳು ನೂರು ಬಾಣಗಳು ಯಾರವು?

04038029a ಕಸ್ಯೇಮೇ ಶುಕಪತ್ರಾಭೈಃ ಪೂರ್ವೈರರ್ಧೈಃ ಸುವಾಸಸಃ।
04038029c ಉತ್ತರೈರಾಯಸೈಃ ಪೀತೈರ್ಹೇಮಪುಂಖೈಃ ಶಿಲಾಶಿತೈಃ।।

ಪೂರ್ವಾರ್ಧದಲ್ಲಿ ಗಿಣಿಯ ರೆಕ್ಕೆಯಂಥ ಬಣ್ಣದ ಹೊದಿಕೆಯನ್ನುಳ್ಳವೂ, ಉತ್ತರಾರ್ಧದಲ್ಲಿ ಹದಗೊಳಿಸಿದವೂ, ಚಿನ್ನದ ಗರಿಗಳನ್ನುಳ್ಳವೂ, ಉಕ್ಕಿನಿಂದಾದವೂ, ಕಲ್ಲಿನ ಮೇಲೆ ಮಸೆದವೂ ಆದ ಈ ಬಾಣಗಳು ಯಾರವು?

04038030a ಕಸ್ಯಾಯಂ ಸಾಯಕೋ ದೀರ್ಘಃ ಶಿಲೀಪೃಷ್ಠಃ ಶಿಲೀಮುಖಃ।
04038030c ವೈಯಾಘ್ರಕೋಶೇ ನಿಹಿತೋ ಹೇಮಚಿತ್ರತ್ಸರುರ್ಮಹಾನ್।।

ನೆಲಗಪ್ಪೆಯಂತ ಹಿಂಬಾಗ ಮುಂಬಾಗಗಳನ್ನುಳ್ಳ, ವ್ಯಾಘ್ರಚರ್ಮದ ಚೀಲದಲ್ಲಿರಿಸಲಾದ, ಸುಂದರ ಚಿನ್ನದ ಹಿಡಿಯನ್ನುಳ್ಳ ಈ ದೀರ್ಘ ಮಹಾಖಡ್ಗವು ಯಾರದ್ದು?

04038031a ಸುಫಲಶ್ಚಿತ್ರಕೋಶಶ್ಚ ಕಿಂಕಿಣೀಸಾಯಕೋ ಮಹಾನ್।
04038031c ಕಸ್ಯ ಹೇಮತ್ಸರುರ್ದಿವ್ಯಃ ಖಡ್ಗಃ ಪರಮನಿರ್ವ್ರಣಃ।।

ಒಳ್ಳೆಯ ಅಲಗುಳ್ಳದ್ದೂ, ಸುಂದರ ಚೀಲದಲ್ಲಿರುವ ಕಿರುಗೆಜ್ಜೆಗಳಿಂದ ಕೂಡಿದ ಚಿನ್ನದ ಹಿಡಿಯುಳ್ಳ, ತುಂಬ ನುಣುಪಾದ ಈ ದಿವ್ಯ ಮಹಾ ಖಡ್ಗವು ಯಾರದ್ದು?

04038032a ಕಸ್ಯಾಯಂ ವಿಮಲಃ ಖಡ್ಗೋ ಗವ್ಯೇ ಕೋಶೇ ಸಮರ್ಪಿತಃ।
04038032c ಹೇಮತ್ಸರುರನಾಧೃಷ್ಯೋ ನೈಷಧ್ಯೋ ಭಾರಸಾಧನಃ।।

ಗೋವಿನ ಚರ್ಮದ ಚೀಲದಲ್ಲಿರಿಸಿದ, ಚಿನ್ನದ ಹಿಡಿಯುಳ್ಳ, ಮುರಿಯಲಾಗದ, ನಿಷಧ ದೇಶದಲ್ಲಿ ಮಾಡಿದ, ಯಾವುದೇ ಕಾರ್ಯವನ್ನೂ ನಿರ್ವಹಿಸಬಲ್ಲ ಈ ವಿಮಲ ಖಡ್ಗವು ಯಾರದ್ದು?

04038033a ಕಸ್ಯ ಪಾಂಚನಖೇ ಕೋಶೇ ಸಾಯಕೋ ಹೇಮವಿಗ್ರಹಃ।
04038033c ಪ್ರಮಾಣರೂಪಸಂಪನ್ನಃ ಪೀತ ಆಕಾಶಸಂನಿಭಃ।।

ಆಡಿನ ಚರ್ಮದ ಚೀಲದಲ್ಲಿರುವ, ಸುವರ್ಣಖಚಿತವಾದ, ಸರಿಯಾದ ಅಳತೆ ಮತ್ತು ಆಕಾರದ, ಹದಗೊಳಿಸಿದ, ಆಕಾಶದ ಬಣ್ಣದ ಈ ಕತ್ತಿ ಯಾರದ್ದು?

04038034a ಕಸ್ಯ ಹೇಮಮಯೇ ಕೋಶೇ ಸುತಪ್ತೇ ಪಾವಕಪ್ರಭೇ।
04038034c ನಿಸ್ತ್ರಿಂಶೋಽಯಂ ಗುರುಃ ಪೀತಃ ಸೈಕ್ಯಃ ಪರಮನಿರ್ವ್ರಣಃ।।

ಚೆನ್ನಾಗಿ ಉರಿಯುತ್ತಿರುವ ಅಗ್ನಿಯ ಪ್ರಭೆಯುಳ್ಳ, ಪುಟವಿಟ್ಟ ಚಿನ್ನದ ಓರೆಯ, ಭಾರವಾದ, ಹದಗೊಳಿಸಿದ, ತುಂಬಾ ನುಣುಪಾಗಿರುವ, ಎಲ್ಲಿಯೂ ಭಿನ್ನವಾಗಿರದ ಉದ್ದವಾದ ಈ ಕತ್ತಿ ಯಾರದ್ದು?

04038035a ನಿರ್ದಿಶಸ್ವ ಯಥಾತತ್ತ್ವಂ ಮಯಾ ಪೃಷ್ಟಾ ಬೃಹನ್ನಡೇ।
04038035c ವಿಸ್ಮಯೋ ಮೇ ಪರೋ ಜಾತೋ ದೃಷ್ಟ್ವಾ ಸರ್ವಮಿದಂ ಮಹತ್।।

ಬೃಹನ್ನಡೆ! ನಾನು ಕೇಳಿದ ಈ ಪ್ರಶ್ನೆಗಳಿಗೆ ದಿಟವಾದ ಉತ್ತರ ಕೊಡು. ಈ ಮಹತ್ತಾದುದೆಲ್ಲವನ್ನೂ ಕಂಡು ನನಗೆ ಪರಮ ವಿಸ್ಮಯವಾಗಿದೆ.”

04038036 ಬೃಹನ್ನಡೋವಾಚ।
04038036a ಯನ್ಮಾಂ ಪೂರ್ವಮಿಹಾಪೃಚ್ಛಃ ಶತ್ರುಸೇನಾನಿಬರ್ಹಣಂ।
04038036c ಗಾಂಡೀವಮೇತತ್ಪಾರ್ಥಸ್ಯ ಲೋಕೇಷು ವಿದಿತಂ ಧನುಃ।।

ಬೃಹನ್ನಡೆಯು ಹೇಳಿದಳು: “ನನ್ನನ್ನು ನೀನು ಮೊದಲು ಕೇಳಿದ ಬಿಲ್ಲು ಪಾರ್ಥನ ಲೋಕಪ್ರಸಿದ್ಧವೂ ಶತ್ರುಸೇನಾನಾಶಕವೂ ಆದ ಗಾಂಡೀವವೆಂಬ ಧನುಸ್ಸು.

04038037a ಸರ್ವಾಯುಧಮಹಾಮಾತ್ರಂ ಶಾತಕುಂಭಪರಿಷ್ಕೃತಂ।
04038037c ಏತತ್ತದರ್ಜುನಸ್ಯಾಸೀದ್ಗಾಂಡೀವಂ ಪರಮಾಯುಧಂ।।

ಎಲ್ಲ ಆಯುಧಗಳಲ್ಲಿ ದೊಡ್ಡದೂ ಸುವರ್ಣಾಲಂಕೃತವೂ ಆದ ಈ ಗಾಂಡೀವವು ಅರ್ಜುನನ ಪರಮಾಯುಧವಾಗಿತ್ತು.

04038038a ಯತ್ತಚ್ಚತಸಹಸ್ರೇಣ ಸಮ್ಮಿತಂ ರಾಷ್ಟ್ರವರ್ಧನಂ।
04038038c ಯೇನ ದೇವಾನ್ಮನುಷ್ಯಾಂಶ್ಚ ಪಾರ್ಥೋ ವಿಷಹತೇ ಮೃಧೇ।।

ಸಾವಿರ ಆಯುಧಗಳಿಗೆ ಸಮನಾದ, ರಾಷ್ಟ್ರವರ್ಧಕವಾದ ಇದರಿಂದ ಪಾರ್ಥನು ಯುದ್ಧದಲ್ಲಿ ದೇವತೆಗಳನ್ನೂ ಮನುಷ್ಯರನ್ನೂ ಗೆಲ್ಲುತ್ತಾನೆ.

04038039a ದೇವದಾನವಗಂಧರ್ವೈಃ ಪೂಜಿತಂ ಶಾಶ್ವತೀಃ ಸಮಾಃ।
04038039c ಏತದ್ವರ್ಷಸಹಸ್ರಂ ತು ಬ್ರಹ್ಮಾ ಪೂರ್ವಮಧಾರಯತ್।।

ದೇವ-ದಾನವ-ಗಂಧರ್ವರಿಂದ ಬಹುಕಾಲ ಪೂಜಿತವಾದ ಇದನ್ನು ಬ್ರಹ್ಮನು ಸಾವಿರ ವರ್ಷ ಧರಿಸಿದ್ದನು.

04038040a ತತೋಽನಂತರಮೇವಾಥ ಪ್ರಜಾಪತಿರಧಾರಯತ್।
04038040c ತ್ರೀಣಿ ಪಂಚಶತಂ ಚೈವ ಶಕ್ರೋಽಶೀತಿ ಚ ಪಂಚ ಚ।।

ಅನಂತರ ಇದನ್ನು ಪ್ರಜಾಪತಿಯು ಐನೂರಾ ಮೂರು ವರ್ಷಗಳು ಮತ್ತು ಬಳಿಕ ಶಕ್ರನು ಎಂಬತ್ತೈದು ವರ್ಷ ಧರಿಸಿದ್ದರು.

04038041a ಸೋಮಃ ಪಂಚಶತಂ ರಾಜಾ ತಥೈವ ವರುಣಃ ಶತಂ।
04038041c ಪಾರ್ಥಃ ಪಂಚ ಚ ಷಷ್ಟಿಂ ಚ ವರ್ಷಾಣಿ ಶ್ವೇತವಾಹನಃ।।

ಆಮೇಲೆ ಚಂದ್ರನು ಐನೂರು ವರ್ಷ, ರಾಜ ವರುಣನು ನೂರುವರ್ಷ ಧರಿಸಿದರು. ಕಡೆಗೆ ಶ್ವೇತವಾಹನ ಪಾರ್ಥನು ಇದನ್ನು ಅರುವತ್ತೈದು ವರ್ಷ ಧರಿಸಿದ್ದಾನೆ.

04038042a ಮಹಾವೀರ್ಯಂ ಮಹದ್ದಿವ್ಯಮೇತತ್ತದ್ಧನುರುತ್ತಮಂ।
04038042c ಪೂಜಿತಂ ಸುರಮರ್ತ್ಯೇಷು ಬಿಭರ್ತಿ ಪರಮಂ ವಪುಃ।।

ಮಹಾ ಸತ್ವವುಳ್ಳದ್ದೂ, ಮಹದ್ದಿವ್ಯವೂ, ಉತ್ತಮವೂ, ಸುರಮರ್ತ್ಯರಲ್ಲಿ ಪೂಜಿತವೂ ಆದ ಈ ಧನುಸ್ಸು ಶ್ರೇಷ್ಠ ಆಕಾರದಲ್ಲಿದೆ.

04038043a ಸುಪಾರ್ಶ್ವಂ ಭೀಮಸೇನಸ್ಯ ಜಾತರೂಪಗ್ರಹಂ ಧನುಃ।
04038043c ಯೇನ ಪಾರ್ಥೋಽಜಯತ್ಕೃತ್ಸ್ನಾಂ ದಿಶಂ ಪ್ರಾಚೀಂ ಪರಂತಪಃ।।

ಒಳ್ಳೆಯ ಪಕ್ಕಗಳನ್ನೂ ಚಿನ್ನದ ಹಿಡಿಯನ್ನೂ ಹೊಂದಿದ ಈ ಮತ್ತೊಂದು ಬಿಲ್ಲು ಭೀಮಸೇನನದು. ಇದರಿಂದ ಆ ಶತ್ರುನಾಶಕ ಭೀಮನು ಪೂರ್ವದಿಕ್ಕನ್ನು ಗೆದ್ದನು.

04038044a ಇಂದ್ರಗೋಪಕಚಿತ್ರಂ ಚ ಯದೇತಚ್ಚಾರುವಿಗ್ರಹಂ।
04038044c ರಾಜ್ಞೋ ಯುಧಿಷ್ಠಿರಸ್ಯೈತದ್ವೈರಾಟೇ ಧನುರುತ್ತಮಂ।।

ವಿರಾಟಪುತ್ರ! ಇಂದ್ರಗೋಪಗಳನ್ನು ಬಿಡಿಸಿದ ಸುಂದರವಾದ ಆಕೃತಿಯನ್ನುಳ್ಳ ಈ ಉತ್ತಮ ಬಿಲ್ಲು ರಾಜ ಯುಧಿಷ್ಠಿರನದು.

04038045a ಸೂರ್ಯಾ ಯಸ್ಮಿಂಸ್ತು ಸೌವರ್ಣಾಃ ಪ್ರಭಾಸಂತೇ ಪ್ರಭಾಸಿನಃ।
04038045c ತೇಜಸಾ ಪ್ರಜ್ವಲಂತೋ ವೈ ನಕುಲಸ್ಯೈತದಾಯುಧಂ।।

ಯಾವುದರಲ್ಲಿ ತೇಜಸ್ಸಿನಿಂದ ಹೊಳೆಯುತ್ತಿರುವ ಮಿರುಗುವ ಚಿನ್ನದ ಸೂರ್ಯರು ಪ್ರಕಾಶಿಸುತ್ತಾರೋ ಆ ಆಯುಧವು ನಕುಲನದು.

04038046a ಶಲಭಾ ಯತ್ರ ಸೌವರ್ಣಾಸ್ತಪನೀಯವಿಚಿತ್ರಿತಾಃ।
04038046c ಏತನ್ಮಾದ್ರೀಸುತಸ್ಯಾಪಿ ಸಹದೇವಸ್ಯ ಕಾರ್ಮುಕಂ।।

ಸುವರ್ಣ ಪತಂಗಗಳು ಚಿತ್ರಿತವಾದ ಈ ಪುಟವಿಟ್ಟ ಚಿನ್ನದ ಬಿಲ್ಲು ಮಾದ್ರೀಸುತ ಸಹದೇವನದು.

04038047a ಯೇ ತ್ವಿಮೇ ಕ್ಷುರಸಂಕಾಶಾಃ ಸಹಸ್ರಾ ಲೋಮವಾಹಿನಃ।
04038047c ಏತೇಽರ್ಜುನಸ್ಯ ವೈರಾಟೇ ಶರಾಃ ಸರ್ಪವಿಷೋಪಮಾಃ।।

ವಿರಾಟಪುತ್ರ! ಗರಿಗಳನ್ನುಳ್ಳ, ಕತ್ತಿಯಂತಿರುವ, ಸರ್ಪದ ವಿಷದಂತೆ ಮಾರಕವಾದ ಈ ಸಾವಿರ ಬಾಣಗಳು ಅರ್ಜುನನವು.

04038048a ಏತೇ ಜ್ವಲಂತಃ ಸಂಗ್ರಾಮೇ ತೇಜಸಾ ಶೀಘ್ರಗಾಮಿನಃ।
04038048c ಭವಂತಿ ವೀರಸ್ಯಾಕ್ಷಯ್ಯಾ ವ್ಯೂಹತಃ ಸಮರೇ ರಿಪೂನ್।।

ರಣದಲ್ಲಿ ತೇಜಸ್ಸಿನಿಂದ ಪ್ರಜ್ವಲಿಸುವ ಶೀಘ್ರಗಾಮಿಗಳಾದ ಈ ಬಾಣಗಳು ಯುದ್ಧದಲ್ಲಿ ವೀರನು ಶತ್ರುಗಳ ಮೇಲೆ ಪ್ರಯೋಗಿಸಿದಾಗ ಅಕ್ಷಯವಾಗುತ್ತವೆ.

04038049a ಯೇ ಚೇಮೇ ಪೃಥವೋ ದೀರ್ಘಾಶ್ಚಂದ್ರಬಿಂಬಾರ್ಧದರ್ಶನಾಃ।
04038049c ಏತೇ ಭೀಮಸ್ಯ ನಿಶಿತಾ ರಿಪುಕ್ಷಯಕರಾಃ ಶರಾಃ।।

ದಪ್ಪವೂ ಉದ್ದವೂ ಅರ್ಧಚಂದ್ರಬಿಂಬದಂತೆ ಕಾಣಿಸುವ ಶತ್ರುನಾಶಕವಾದ ಈ ಹರಿತ ಬಾಣಗಳು ಭೀಮನವು.

04038050a ಹಾರಿದ್ರವರ್ಣಾ ಯೇ ತ್ವೇತೇ ಹೇಮಪುಂಖಾಃ ಶಿಲಾಶಿತಾಃ।
04038050c ನಕುಲಸ್ಯ ಕಲಾಪೋಽಯಂ ಪಂಚಶಾರ್ದೂಲಲಕ್ಷಣಃ।।

ಹಳದಿ ಬಣ್ಣದ ಚಿನ್ನದ ಗರಿಗಳನ್ನುಳ್ಳ, ಕಲ್ಲಿನ ಮೇಲೆ ಮಸೆದು ಹರಿತಗೊಳಿಸಿದ ಬಾಣಗಳುಳ್ಳ, ಐದು ಹುಲಿಗಳ ಚಿಹ್ನೆಗಳನ್ನುಳ್ಳ ಈ ಬತ್ತಳಿಕೆ ನಕುಲನದು.

04038051a ಯೇನಾಸೌ ವ್ಯಜಯತ್ಕೃತ್ಸ್ನಾಂ ಪ್ರತೀಚೀಂ ದಿಶಮಾಹವೇ।
04038051c ಕಲಾಪೋ ಹ್ಯೇಷ ತಸ್ಯಾಸೀನ್ಮಾದ್ರೀಪುತ್ರಸ್ಯ ಧೀಮತಃ।।

ಯುದ್ಧದಲ್ಲಿ ಪಶ್ಚಿಮ ದಿಕ್ಕನ್ನೆಲ್ಲ ಗೆದ್ದ ಈ ಬಾಣ ಸಮೂಹವು ಧೀಮಂತ ಮಾದ್ರೀಪುತ್ರನದಾಗಿತ್ತು.

04038052a ಯೇ ತ್ವಿಮೇ ಭಾಸ್ಕರಾಕಾರಾಃ ಸರ್ವಪಾರಶವಾಃ ಶರಾಃ।
04038052c ಏತೇ ಚಿತ್ರಾಃ ಕ್ರಿಯೋಪೇತಾಃ ಸಹದೇವಸ್ಯ ಧೀಮತಃ।।

ಸೂರ್ಯನ ಆಕಾರವುಳ್ಳ ಪೂರ್ತಿ ಉಕ್ಕಿನಿಂದ ಮಾಡಿದ ಸುಂದರ ಕ್ರಿಯಾತ್ಮಕ ಈ ಬಾಣಗಳು ಧೀಮಂತ ಸಹದೇವನವು.

04038053a ಯೇ ತ್ವಿಮೇ ನಿಶಿತಾಃ ಪೀತಾಃ ಪೃಥವೋ ದೀರ್ಘವಾಸಸಃ।
04038053c ಹೇಮಪುಂಖಾಸ್ತ್ರಿಪರ್ವಾಣೋ ರಾಜ್ಞ ಏತೇ ಮಹಾಶರಾಃ।।

ಹರಿತವೂ, ಹದಗೊಳಿಸಿದವೂ, ದೊಡ್ಡವೂ, ಉದ್ದವೂ ಆದ, ಚಿನ್ನದ ಗರಿಗಳನ್ನುಳ್ಳ, ಮೂರು ಗೆಣ್ಣುಗಳುಳ್ಳ ಈ ಮಹಾಶರಗಳು ರಾಜ ಯುಧಿಷ್ಠಿರನವು.

04038054a ಯಸ್ತ್ವಯಂ ಸಾಯಕೋ ದೀರ್ಘಃ ಶಿಲೀಪೃಷ್ಠಃ ಶಿಲೀಮುಖಃ।
04038054c ಅರ್ಜುನಸ್ಯೈಷ ಸಂಗ್ರಾಮೇ ಗುರುಭಾರಸಹೋ ದೃಢಃ।।

ಉದ್ದ ನೆಲಗಪ್ಪೆಯಂಥ ಹಿಂಬದಿ ಮತ್ತು ಮೂತಿಯುಳ್ಳ, ಯುದ್ಧದಲ್ಲಿ ಮಹಾಭಾರವನ್ನು ಸಹಿಸಬಲ್ಲ, ಈ ದೃಢ ಕತ್ತಿಯು ಅರ್ಜುನನದು.

04038055a ವೈಯಾಘ್ರಕೋಶಸ್ತು ಮಹಾನ್ಭೀಮಸೇನಸ್ಯ ಸಾಯಕಃ।
04038055c ಗುರುಭಾರಸಹೋ ದಿವ್ಯಃ ಶಾತ್ರವಾಣಾಂ ಭಯಂಕರಃ।।

ವ್ಯಾಘ್ರಚರ್ಮದ ಒರೆಯನ್ನುಳ್ಳ, ಮಹಾಭಾರವನ್ನು ಸಹಿಸಬಲ್ಲ, ಶತ್ರುಗಳಿಗೆ ಭಯಂಕರವಾದ ಈ ದಿವ್ಯ ಮಹಾಖಡ್ಗವು ಭೀಮಸೇನನದು.

04038056a ಸುಫಲಶ್ಚಿತ್ರಕೋಶಶ್ಚ ಹೇಮತ್ಸರುರನುತ್ತಮಃ।
04038056c ನಿಸ್ತ್ರಿಂಶಃ ಕೌರವಸ್ಯೈಷ ಧರ್ಮರಾಜಸ್ಯ ಧೀಮತಃ।।

ಒಳ್ಳೆಯ ಅಲಗುಳ್ಳ, ಸುಂದರ ಒರೆಯಲ್ಲಿರುವ, ಅತ್ತ್ಯುತ್ತಮ ಚಿನ್ನದ ಹಿಡಿಯುಳ್ಳ ಈ ಖಡ್ಗವು ಧೀಮಂತ ಕುರುಪುತ್ರ ಧರ್ಮರಾಜನದು.

04038057a ಯಸ್ತು ಪಾಂಚನಖೇ ಕೋಶೇ ನಿಹಿತಶ್ಚಿತ್ರಸೇವನೇ।
04038057c ನಕುಲಸ್ಯೈಷ ನಿಸ್ತ್ರಿಂಶೋ ಗುರುಭಾರಸಹೋ ದೃಢಃ।।

ಆಡಿನ ಚರ್ಮದ ಒರೆಯಲ್ಲಿರಿಸಿದ, ವಿಚಿತ್ರ ಬಳಕೆಗೆ ಬರುವ, ಮಹಾಭಾರವನ್ನು ಸಹಿಸಬಲ್ಲ ದೃಢವಾದ ಈ ಖಡ್ಗವು ನಕುಲನದು.

04038058a ಯಸ್ತ್ವಯಂ ವಿಮಲಃ ಖಡ್ಗೋ ಗವ್ಯೇ ಕೋಶೇ ಸಮರ್ಪಿತಃ।
04038058c ಸಹದೇವಸ್ಯ ವಿದ್ಧ್ಯೇನಂ ಸರ್ವಭಾರಸಹಂ ದೃಢಂ।।

ಗೋವಿನ ಚರ್ಮದ ಒರೆಯಲ್ಲಿರಿಸಿದ ಸರ್ವಭಾರವನ್ನೂ ಸಹಿಸಬಲ್ಲ ಈ ದೃಢ ವಿಮಲ ಖಡ್ಗವು ಸಹದೇವನದೆಂದು ತಿಳಿ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಆಯುಧವರ್ಣನೇ ಅಷ್ಟತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಆಯುಧವರ್ಣನದಲ್ಲಿ ಮೂವತ್ತೆಂಟನೆಯ ಅಧ್ಯಾಯವು.