037 ಉತ್ತರಗೋಗ್ರಹೇ ಅರ್ಜುನಪ್ರಶಂಸಾ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ಗೋಹರಣ ಪರ್ವ

ಅಧ್ಯಾಯ 37

ಸಾರ

ನಪುಂಸಕ ವೇಷದಲ್ಲಿರುವವನು ಅರ್ಜುನನೇ ಇರಬೇಕೆಂದು ಮತ್ತು ಕಾಣುವ ಉತ್ಪಾತಗಳು ಯುದ್ಧದಲ್ಲಿ ತಮಗೆ ಸೋಲನ್ನು ಸೂಚಿಸುತ್ತವೆ ಎಂದು ದ್ರೋಣನು ನುಡಿದುದು (1-12). ಅವನು ಅರ್ಜುನನೇ ಆಗಿದ್ದರೆ ಗುರುತು ಸಿಕ್ಕಿದ ಪಾಂಡವರು ಮತ್ತೆ ಹನ್ನೆರಡು ವರ್ಷ ಕಾಡಿನಲ್ಲಿ ಅಲೆಯ ಬೇಕಾಗುತ್ತದೆ ಎಂದು ದುರ್ಯೋಧನನು ನುಡಿದುದು (13-16).

04037001 ವೈಶಂಪಾಯನ ಉವಾಚ।
04037001a ತಂ ದೃಷ್ಟ್ವಾ ಕ್ಲೀಬವೇಷೇಣ ರಥಸ್ಥಂ ನರಪುಂಗವಂ।
04037001c ಶಮೀಮಭಿಮುಖಂ ಯಾಂತಂ ರಥಮಾರೋಪ್ಯ ಚೋತ್ತರಂ।।
04037002a ಭೀಷ್ಮದ್ರೋಣಮುಖಾಸ್ತತ್ರ ಕುರೂಣಾಂ ರಥಸತ್ತಮಾಃ।
04037002c ವಿತ್ರಸ್ತಮನಸಃ ಸರ್ವೇ ಧನಂಜಯಕೃತಾದ್ಭಯಾತ್।।

ವೈಶಂಪಾಯನನು ಹೇಳಿದನು: “ಉತ್ತರನನ್ನು ರಥದ ಮೇಲೆ ಕುಳ್ಳಿರಿಸಿಕೊಂಡು ಬನ್ನಿ ಮರದತ್ತ ರಥದಲ್ಲಿ ಹೋಗುತ್ತಿದ್ದ ಆ ನಪುಂಸಕ ವೇಷದ ನರಶ್ರೇಷ್ಠನನ್ನು ನೋಡಿ, ಭೀಷ್ಮ-ದ್ರೋಣಮುಖ್ಯ ಕುರುಗಳ ರಥಿಕ ಶ್ರೇಷ್ಠರೆಲ್ಲ ಧನಂಜಯನಿಂದುಂಟಾದ ಭಯದಿಂದ ತಲ್ಲಣಿಸಿದರು.

04037003a ತಾನವೇಕ್ಷ್ಯ ಹತೋತ್ಸಾಹಾನುತ್ಪಾತಾನಪಿ ಚಾದ್ಭುತಾನ್।
04037003c ಗುರುಃ ಶಸ್ತ್ರಭೃತಾಂ ಶ್ರೇಷ್ಠೋ ಭಾರದ್ವಾಜೋಽಭ್ಯಭಾಷತ।।

ಆ ಉತ್ಸಾಹಹೀನರನ್ನೂ ಅದ್ಭುತ ಉತ್ಪಾತಗಳನ್ನೂ ನೋಡಿ ಶಸ್ತ್ರಧರರಲ್ಲಿ ಶ್ರೇಷ್ಠ ಗುರು ದ್ರೋಣನು ನುಡಿದನು:

04037004a ಚಲಾಶ್ಚ ವಾತಾಃ ಸಂವಾಂತಿ ರೂಕ್ಷಾಃ ಪರುಷನಿಃಸ್ವನಾಃ।
04037004c ಭಸ್ಮವರ್ಣಪ್ರಕಾಶೇನ ತಮಸಾ ಸಂವೃತಂ ನಭಃ।।

“ವೇಗವಾದ ಕಠೋರ ಶಬ್ಧವುಳ್ಳ ಭಯಂಕರ ಗಾಳಿಯು ಬೀಸುತ್ತಿದೆ; ಬೂದಿಯ ಬಣ್ಣದ ಪ್ರಕಾಶದ ಕತ್ತಲು ಆಗಸವನ್ನು ಆವರಿಸಿದೆ.

04037005a ರೂಕ್ಷವರ್ಣಾಶ್ಚ ಜಲದಾ ದೃಶ್ಯಂತೇಽದ್ಭುತದರ್ಶನಾಃ।
04037005c ನಿಃಸರಂತಿ ಚ ಕೋಶೇಭ್ಯಃ ಶಸ್ತ್ರಾಣಿ ವಿವಿಧಾನಿ ಚ।।

ರೂಕ್ಷವರ್ಣದ ಮೋಡಗಳು ಅದ್ಭುತವಾಗಿ ತೋರುತ್ತಿವೆ; ನಮ್ಮ ವಿವಿಧ ಶಸ್ತ್ರಗಳು ತಮ್ಮ ಕೋಶಗಳಿಂದ ಹೊರಬರುತ್ತಿವೆ.

04037006a ಶಿವಾಶ್ಚ ವಿನದಂತ್ಯೇತಾ ದೀಪ್ತಾಯಾಂ ದಿಶಿ ದಾರುಣಾಃ।
04037006c ಹಯಾಶ್ಚಾಶ್ರೂಣಿ ಮುಂಚಂತಿ ಧ್ವಜಾಃ ಕಂಪಂತ್ಯಕಂಪಿತಾಃ।।

ಇದೋ! ಉರಿಯುತ್ತಿರುವ ದಿಕ್ಕುಗಳಲ್ಲಿ ನರಿಗಳು ದಾರುಣವಾಗಿ ಊಳಿಡುತ್ತಿವೆ; ಕುದುರೆಗಳು ಕಣ್ಣೀರಿಡುತ್ತಿವೆ; ಅಲ್ಲಾಡಿಸದಿದ್ದರೂ ಬಾವುಟಗಳು ಅಲ್ಲಾಡುತ್ತಿವೆ.

04037007a ಯಾದೃಶಾನ್ಯತ್ರ ರೂಪಾಣಿ ಸಂದೃಶ್ಯಂತೇ ಬಹೂನ್ಯಪಿ।
04037007c ಯತ್ತಾ ಭವಂತಸ್ತಿಷ್ಠಂತು ಸ್ಯಾದ್ಯುದ್ಧಂ ಸಮುಪಸ್ಥಿತಂ।।

ಇಲ್ಲಿ ಈ ಅಶುಭ ಚಿಹ್ನೆಗಳು ಬಹುವಾಗಿ ಕಂಡುಬರುತ್ತಿರುವುದರಿಂದ ನೀವು ಎಚ್ಚರಿಕೆಯಿಂದ ನಿಲ್ಲಿ! ಪ್ರಾಯಃ ಯುದ್ಧವು ಒದಗಿಬಂದಿದೆ.

04037008a ರಕ್ಷಧ್ವಮಪಿ ಚಾತ್ಮಾನಂ ವ್ಯೂಹಧ್ವಂ ವಾಹಿನೀಮಪಿ।
04037008c ವೈಶಸಂ ಚ ಪ್ರತೀಕ್ಷಧ್ವಂ ರಕ್ಷಧ್ವಂ ಚಾಪಿ ಗೋಧನಂ।।

ನಿಮ್ಮನ್ನು ರಕ್ಷಿಸಿಕೊಳ್ಳಿ; ಸೈನ್ಯವನ್ನು ವ್ಯೂಹಗೊಳಿಸಿ. ನಡೆಯಲಿರುವ ಕಗ್ಗೊಲೆಯನ್ನು ನಿರೀಕ್ಷಿಸಿ. ಗೋಧನವನ್ನು ರಕ್ಷಿಸಿಕೊಳ್ಳಿ.

04037009a ಏಷ ವೀರೋ ಮಹೇಷ್ವಾಸಃ ಸರ್ವಶಸ್ತ್ರಭೃತಾಂ ವರಃ।
04037009c ಆಗತಃ ಕ್ಲೀಬವೇಷೇಣ ಪಾರ್ಥೋ ನಾಸ್ತ್ಯತ್ರ ಸಂಶಯಃ।।

ಮಹಾ ಬಿಲ್ಗಾರನೂ ಸರ್ವಶಸ್ತ್ರಧರರಲ್ಲಿ ಶ್ರೇಷ್ಠನೂ ಸಪುಂಸಕವೇಷದಲ್ಲಿ ಬಂದಿರುವವನೂ ಆದ ಈ ವೀರನು ಪಾರ್ಥನೆಂಬುವುದರಲ್ಲಿ ಸಂಶಯವಿಲ್ಲ.

04037010a ಸ ಏಷ ಪಾರ್ಥೋ ವಿಕ್ರಾಂತಃ ಸವ್ಯಸಾಚೀ ಪರಂತಪಃ।
04037010c ನಾಯುದ್ಧೇನ ನಿವರ್ತೇತ ಸರ್ವೈರಪಿ ಮರುದ್ಗಣೈಃ।।

ಶತ್ರುನಾಶಕನೂ ಸವ್ಯಸಾಚಿಯೂ ಆದ ಈ ವೀರ ಪಾರ್ಥನು ಸಕಲ ದೇವತಾ ಸಮೂಹದೊಡನೆ ಕೂಡ ಯುದ್ಧ ಮಾಡದೆ ಹಿಮ್ಮೆಟ್ಟುವುದಿಲ್ಲ.

04037011a ಕ್ಲೇಶಿತಶ್ಚ ವನೇ ಶೂರೋ ವಾಸವೇನ ಚ ಶಿಕ್ಷಿತಃ।
04037011c ಅಮರ್ಷವಶಮಾಪನ್ನೋ ಯೋತ್ಸ್ಯತೇ ನಾತ್ರ ಸಂಶಯಃ।।

ವನದಲ್ಲಿ ಕ್ಲೇಶಪಟ್ಟವನೂ ಇಂದ್ರನಿಂದ ಶಿಕ್ಷಣಪಡೆದವನೂ ಆದ ಈ ಶೂರನು ಕೋಪವಶನಾಗಿ ಬಂದಿದ್ದಾನೆ; ಇವನು ಯುದ್ಧಮಾಡುವುದರಲ್ಲಿ ಸಂಶಯವಿಲ್ಲ.

04037012a ನೇಹಾಸ್ಯ ಪ್ರತಿಯೋದ್ಧಾರಮಹಂ ಪಶ್ಯಾಮಿ ಕೌರವಾಃ।
04037012c ಮಹಾದೇವೋಽಪಿ ಪಾರ್ಥೇನ ಶ್ರೂಯತೇ ಯುಧಿ ತೋಷಿತಃ।।

ಕೌರವರೆ! ಅವನಿಗಿಲ್ಲಿ ಎದುರಾಗಿ ಕಾದುವವರು ಯಾರೂ ನನಗೆ ಕಾಣುತ್ತಿಲ್ಲ. ಪಾರ್ಥನು ಮಹಾದೇವನನ್ನೂ ಯುದ್ಧದಲ್ಲಿ ಸಂತೋಷಗೊಳಿಸಿದನೆಂದು ಕೇಳಿದ್ದೇವೆ.”

04037013 ಕರ್ಣ ಉವಾಚ।
04037013a ಸದಾ ಭವಾನ್ಫಲ್ಗುನಸ್ಯ ಗುಣೈರಸ್ಮಾನ್ವಿಕತ್ಥಸೇ।
04037013c ನ ಚಾರ್ಜುನಃ ಕಲಾ ಪೂರ್ಣಾ ಮಮ ದುರ್ಯೋಧನಸ್ಯ ವಾ।।

ಕರ್ಣನು ಹೇಳಿದನು: “ನೀವು ಯಾವಾಗಲೂ ಫಲ್ಗುಣನ ಗುಣಗಳನ್ನು ಹೊಗಳುವುದರ ಮೂಲಕ ನಮ್ಮನ್ನು ನಿಂದಿಸುತ್ತೀರಿ. ಆ ಅರ್ಜುನನು ನನಗಾಗಲೀ ದುರ್ಯೋಧನನಿಗಾಗಲೀ ಹದಿನಾರನೆಯ ಒಂದು ಪೂರ್ಣಾಂಶದಷ್ಟೂ ಸಮಾನನಲ್ಲ.”

04037014 ದುರ್ಯೋಧನ ಉವಾಚ।
04037014a ಯದ್ಯೇಷ ಪಾರ್ಥೋ ರಾಧೇಯ ಕೃತಂ ಕಾರ್ಯಂ ಭವೇನ್ಮಮ।
04037014c ಜ್ಞಾತಾಃ ಪುನಶ್ಚರಿಷ್ಯಂತಿ ದ್ವಾದಶಾನ್ಯಾನ್ ಹಿ ವತ್ಸರಾನ್।।

ದುರ್ಯೋಧನನು ಹೇಳಿದನು: “ಕರ್ಣ! ಇವನು ಪಾರ್ಥನಾಗಿದ್ದರೆ ನನ್ನ ಕಾರ್ಯವಾಯಿತು! ಗುರುತು ಸಿಕ್ಕಿದ ಪಾಂಡವರು ಮತ್ತೆ ಹನ್ನೆರಡು ವರ್ಷ ಕಾಡಿನಲ್ಲಿ ಅಲೆಯ ಬೇಕಾಗುತ್ತದೆ.

04037015a ಅಥೈಷ ಕಶ್ಚಿದೇವಾನ್ಯಃ ಕ್ಲೀಬವೇಷೇಣ ಮಾನವಃ।
04037015c ಶರೈರೇನಂ ಸುನಿಶಿತೈಃ ಪಾತಯಿಷ್ಯಾಮಿ ಭೂತಲೇ।।

ಇವನು ನಪುಂಸಕ ವೇಷದ ಬೇರೆ ಯಾವನೋ ಮನುಷ್ಯನಾಗಿದ್ದರೆ ಇವನನ್ನು ಹರಿತವಾದ ಬಾಣಗಳಿಂದ ನೆಲಕ್ಕೆ ಕೆಡಹುತ್ತೇನೆ.””

04037016 ವೈಶಂಪಾಯನ ಉವಾಚ।
04037016a ತಸ್ಮಿನ್ಬ್ರುವತಿ ತದ್ವಾಕ್ಯಂ ಧಾರ್ತರಾಷ್ಟ್ರೇ ಪರಂತಪೇ।
04037016c ಭೀಷ್ಮೋ ದ್ರೋಣಃ ಕೃಪೋ ದ್ರೌಣಿಃ ಪೌರುಷಂ ತದಪೂಜಯನ್।।

ವೈಶಂಪಾಯನನು ಹೇಳಿದನು: “ಶತ್ರುನಾಶಕ ದುರ್ಯೋಧನನು ಆ ಮಾತನ್ನಾಡಲು ಭೀಷ್ಮ-ದ್ರೋಣ-ಅಶ್ವತ್ಥಾಮರು ಅವನ ಆ ಪೌರುಷವನ್ನು ಹೊಗಳಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಅರ್ಜುನಪ್ರಶಂಸಾಯಾಂ ಸಪ್ತತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಅರ್ಜುನಪ್ರಶಂಸೆಯಲ್ಲಿ ಮೂವತ್ತೇಳನೆಯ ಅಧ್ಯಾಯವು.