ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ವಿರಾಟ ಪರ್ವ
ಗೋಹರಣ ಪರ್ವ
ಅಧ್ಯಾಯ 35
ಸಾರ
ಉತ್ತರೆಯು ಬೃಹನ್ನಡೆಯನ್ನು ಒತ್ತಾಯಿಸಿ ಅಣ್ಣನಿದ್ದಲ್ಲಿಗೆ ಕರೆದುಕೊಂಡು ಬರುವುದು (1-9). ಉತ್ತರನು ಬೃಹನ್ನಡೆಯನ್ನು ತನ್ನ ಸಾರಥಿಯನ್ನಾಗಿ ನಿಯೋಜಿಸುವುದು (10-16). ಕವಚವನ್ನು ತೊಡುವಾಗ ಬೃಹನ್ನಡೆಯು ವಿನೋದದಿಂದ ನಡೆದುಕೊಂಡಿದುದು (17-21). ಗೊಂಬೆಗಳಿಗೆ ಕೌರವರ ಬಣ್ಣ ಬಣ್ಣದ ವಸ್ತ್ರಗಳನ್ನು ತೆಗೆದುಕೊಂಡು ಬನ್ನಿ ಎಂದು ಉತ್ತರೆಯು ಹೇಳಿಕಳುಹಿಸುವುದು (22-26).
04035001 ವೈಶಂಪಾಯನ ಉವಾಚ।
04035001a ಸ ತಾಂ ದೃಷ್ಟ್ವಾ ವಿಶಾಲಾಕ್ಷೀಂ ರಾಜಪುತ್ರೀಂ ಸಖೀಂ ಸಖಾ।
04035001c ಪ್ರಹಸನ್ನಬ್ರವೀದ್ರಾಜನ್ಕುತ್ರಾಗಮನಮಿತ್ಯುತ।।
ವೈಶಂಪಾಯನನು ಹೇಳಿದನು: “ರಾಜ! ತನ್ನ ಸಖಿ ಆ ವಿಶಾಲಾಕ್ಷಿ ರಾಜಪುತ್ರಿಯನ್ನು ಕಂಡು ಅವಳ ಮಿತ್ರ ಅರ್ಜುನನು ನಗುತ್ತ “ಬಂದುದೇಕೆ?” ಎಂದು ಕೇಳಿದನು.
04035002a ತಮಬ್ರವೀದ್ರಾಜಪುತ್ರೀ ಸಮುಪೇತ್ಯ ನರರ್ಷಭಂ।
04035002c ಪ್ರಣಯಂ ಭಾವಯಂತೀ ಸ್ಮ ಸಖೀಮಧ್ಯ ಇದಂ ವಚಃ।।
ರಾಜಪುತ್ರಿಯು ಆ ನರಶ್ರೇಷ್ಠನನ್ನು ಸಮೀಪಿಸಿ ವಿನಯವನ್ನು ತೋರುತ್ತಾ ಸಖಿಯರ ನಡುವೆ ಈ ಮಾತನ್ನಾಡಿದಳು:
04035003a ಗಾವೋ ರಾಷ್ಟ್ರಸ್ಯ ಕುರುಭಿಃ ಕಾಲ್ಯಂತೇ ನೋ ಬೃಹನ್ನಡೇ।
04035003c ತಾನ್ವಿಜೇತುಂ ಮಮ ಭ್ರಾತಾ ಪ್ರಯಾಸ್ಯತಿ ಧನುರ್ಧರಃ।।
“ಬೃಹನ್ನಡೇ! ನಮ್ಮ ನಾಡಿನ ಗೋವುಗಳನ್ನು ಕುರುಗಳು ಒಯ್ಯುತ್ತಿದ್ದಾರೆ. ಅವರನ್ನು ಗೆಲ್ಲಲು ನನ್ನ ಸೋದರನು ಧನುರ್ಧರನಾಗಿ ಹೋಗುವನು.
04035004a ನಚಿರಂ ಚ ಹತಸ್ತಸ್ಯ ಸಂಗ್ರಾಮೇ ರಥಸಾರಥಿಃ।
04035004c ತೇನ ನಾಸ್ತಿ ಸಮಃ ಸೂತೋ ಯೋಽಸ್ಯ ಸಾರಥ್ಯಮಾಚರೇತ್।।
ಅವನ ರಥದ ಸಾರಥಿಯು ಯುದ್ಧದಲ್ಲಿ ಸ್ವಲ್ಪ ಹಿಂದೆ ಹತನಾದನು. ಅವನಿಗೆ ಸಮನಾದ ಇವನ ಸಾರಥ್ಯವನ್ನು ಮಾಡುವ ಸೂತನು ಬೇರೆಯಿಲ್ಲ.
04035005a ತಸ್ಮೈ ಪ್ರಯತಮಾನಾಯ ಸಾರಥ್ಯರ್ಥಂ ಬೃಹನ್ನಡೇ।
04035005c ಆಚಚಕ್ಷೇ ಹಯಜ್ಞಾನೇ ಸೈರಂಧ್ರೀ ಕೌಶಲಂ ತವ।।
ಬೃಹನ್ನಡೇ! ಸಾರಥಿಗಾಗಿ ಪ್ರಯತ್ನಿಸುತ್ತಿರುವ ಅವನಿಗೆ, ಅಶ್ವಜ್ಞಾನದಲ್ಲಿ ನಿನಗಿರುವ ಕೌಶಲವನ್ನು ಸೈರಂಧ್ರಿಯು ತಿಳಿಸಿದಳು.
04035006a ಸಾ ಸಾರಥ್ಯಂ ಮಮ ಭ್ರಾತುಃ ಕುರು ಸಾಧು ಬೃಹನ್ನಡೇ।
04035006c ಪುರಾ ದೂರತರಂ ಗಾವೋ ಹ್ರಿಯಂತೇ ಕುರುಭಿರ್ಹಿ ನಃ।।
ಬೃಹನ್ನಡೇ! ನನ್ನ ಸೋದರನ ಸಾರಥ್ಯವನ್ನು ಚೆನ್ನಾಗಿ ಮಾಡು. ನಮ್ಮ ಗೋವುಗಳನ್ನು ಕುರುಗಳು ಇಷ್ಟರಲ್ಲಿ ಬಹುದೂರ ಅಟ್ಟಿಕೊಂಡು ಹೋಗಿರುತ್ತಾರೆ.
04035007a ಅಥೈತದ್ವಚನಂ ಮೇಽದ್ಯ ನಿಯುಕ್ತಾ ನ ಕರಿಷ್ಯಸಿ।
04035007c ಪ್ರಣಯಾದುಚ್ಯಮಾನಾ ತ್ವಂ ಪರಿತ್ಯಕ್ಷ್ಯಾಮಿ ಜೀವಿತಂ।।
ವಿಶ್ವಾಸದಿಂದ ನಾನು ನಿಯೋಜಿಸಿ ಹೇಳುತ್ತಿರುವ ಮಾತನ್ನು ನೀನು ನಡೆಸಿಕೊಡದಿದ್ದರೆ ನಾನು ಪ್ರಾಣತ್ಯಾಗ ಮಾಡುತ್ತೇನೆ.”
04035008a ಏವಮುಕ್ತಸ್ತು ಸುಶ್ರೋಣ್ಯಾ ತಯಾ ಸಖ್ಯಾ ಪರಂತಪಃ।
04035008c ಜಗಾಮ ರಾಜಪುತ್ರಸ್ಯ ಸಕಾಶಮಮಿತೌಜಸಃ।।
ಆ ಸುಂದರ ಗೆಳತಿಯು ಹೀಗೆ ಹೇಳಲು ಶತ್ರುನಾಶಕ ಅರ್ಜುನನು ಅಮಿತ ಶಕ್ತಿಶಾಲಿ ರಾಜಪುತ್ರನ ಬಳಿ ಹೋದನು.
04035009a ತಂ ಸಾ ವ್ರಜಂತಂ ತ್ವರಿತಂ ಪ್ರಭಿನ್ನಮಿವ ಕುಂಜರಂ।
04035009c ಅನ್ವಗಚ್ಛದ್ವಿಶಾಲಾಕ್ಷೀ ಶಿಶುರ್ಗಜವಧೂರಿವ।।
ಒಡೆದ ಗಂಡಸ್ಥಲವುಳ್ಳ ಆನೆಯಂತೆ ವೇಗವಾಗಿ ಹೋಗುತ್ತಿದ್ದ ಅವನನ್ನು ಹೆಣ್ಣಾನೆಯನ್ನು ಅನುಸರಿಸುವ ಮರಿಯಂತೆ ಆ ವಿಶಾಲಾಕ್ಷಿಯು ಅನುಸರಿಸಿದಳು.
04035010a ದೂರಾದೇವ ತು ತಂ ಪ್ರೇಕ್ಷ್ಯ ರಾಜಪುತ್ರೋಽಭ್ಯಭಾಷತ।
04035010c ತ್ವಯಾ ಸಾರಥಿನಾ ಪಾರ್ಥಃ ಖಾಂಡವೇಽಗ್ನಿಮತರ್ಪಯತ್।।
ಅವನನ್ನು ದೂರದಿಂದಲೇ ನೋಡಿ ರಾಜಪುತ್ರನು ಹೇಳಿದನು: “ನಿನ್ನನ್ನು ಸಾರಥಿಯನ್ನಾಗಿ ಮಾಡಿಕೊಂಡು ಪಾರ್ಥನು ಖಾಂಡವದಲ್ಲಿ ಅಗ್ನಿಯನ್ನು ತೃಪ್ತಿಪಡಿಸಿದನು.
04035011a ಪೃಥಿವೀಮಜಯತ್ಕೃತ್ಸ್ನಾಂ ಕುಂತೀಪುತ್ರೋ ಧನಂಜಯಃ।
04035011c ಸೈರಂಧ್ರೀ ತ್ವಾಂ ಸಮಾಚಷ್ಟ ಸಾ ಹಿ ಜಾನಾತಿ ಪಾಂಡವಾನ್।।
ಅಲ್ಲದೇ ಕುಂತೀಪುತ್ರ ಧನಂಜಯನು ಪೃಥ್ವಿಯನ್ನು ಸಂಪೂರ್ಣವಾಗಿ ಜಯಿಸಿದನು ಎಂದು ಸೈರಂಧ್ರಿಯು ನಿನ್ನ ಕುರಿತು ಹೇಳಿದ್ದಾಳೆ. ಅವಳಿಗೆ ಪಾಂಡವರು ಗೊತ್ತು.
04035012a ಸಮ್ಯಚ್ಛ ಮಾಮಕಾನಶ್ವಾಂಸ್ತಥೈವ ತ್ವಂ ಬೃಹನ್ನಡೇ।
04035012c ಕುರುಭಿರ್ಯೋತ್ಸ್ಯಮಾನಸ್ಯ ಗೋಧನಾನಿ ಪರೀಪ್ಸತಃ।।
ಆದ್ದರಿಂದ ಬೃಹನ್ನಡೇ! ಗೋಧನವನ್ನು ಮತ್ತೆ ತರಲು ಕುರುಗಳೊಡನೆ ಹೋರಾಡುವ ನನ್ನ ಕುದುರೆಗಳನ್ನು ನೀನು ಹಿಂದೆನಂತೆಯೇ ನಡೆಸು.
04035013a ಅರ್ಜುನಸ್ಯ ಕಿಲಾಸೀಸ್ತ್ವಂ ಸಾರಥಿರ್ದಯಿತಃ ಪುರಾ।
04035013c ತ್ವಯಾಜಯತ್ಸಹಾಯೇನ ಪೃಥಿವೀಂ ಪಾಂಡವರ್ಷಭಃ।।
ಹಿಂದೆ ನೀನು ಅರ್ಜುನನ ಪ್ರಿಯ ಸಾರಥಿಯಾಗಿದ್ದೆಯಷ್ಟೆ! ನಿನ್ನ ಸಹಾಯದಿಂದ ಆ ಪಾಂಡವಶ್ರೇಷ್ಠನು ಲೋಕವನ್ನು ಜಯಿಸಿದನು.”
04035014a ಏವಮುಕ್ತಾ ಪ್ರತ್ಯುವಾಚ ರಾಜಪುತ್ರಂ ಬೃಹನ್ನಡಾ।
04035014c ಕಾ ಶಕ್ತಿರ್ಮಮ ಸಾರಥ್ಯಂ ಕರ್ತುಂ ಸಂಗ್ರಾಮಮೂರ್ಧನಿ।।
ಉತ್ತರನು ಹೀಗೆ ಹೇಳಲು ಬೃಹನ್ನಡೆಯು ರಾಜಪುತ್ರನಿಗೆ ಮರುನುಡಿದಳು: “ಯುದ್ಧರಂಗದಲ್ಲಿ ಸಾರಥ್ಯಮಾಡಲು ನನಗಾವ ಶಕ್ತಿಯಿದೆ?
04035015a ಗೀತಂ ವಾ ಯದಿ ವಾ ನೃತ್ತಂ ವಾದಿತ್ರಂ ವಾ ಪೃಥಗ್ವಿಧಂ।
04035015c ತತ್ಕರಿಷ್ಯಾಮಿ ಭದ್ರಂ ತೇ ಸಾರಥ್ಯಂ ತು ಕುತೋ ಮಯಿ।।
ಗೀತವೋ ನೃತ್ಯವೋ ವಾದ್ಯವೋ ಮತ್ತಾವುದೋ ಆದರೆ ನಾನು ನಿರ್ವಹಿಸಬಲ್ಲೆ. ನನಗೆ ಸಾರಥ್ಯವೆಲ್ಲಿಯದು? ನಿನಗೆ ಮಂಗಳವಾಗಲಿ.”
04035016 ಉತ್ತರ ಉವಾಚ।
04035016a ಬೃಹನ್ನಡೇ ಗಾಯನೋ ವಾ ನರ್ತನೋ ವಾ ಪುನರ್ಭವ।
04035016c ಕ್ಷಿಪ್ರಂ ಮೇ ರಥಮಾಸ್ಥಾಯ ನಿಗೃಹ್ಣೀಷ್ವ ಹಯೋತ್ತಮಾನ್।।
ಉತ್ತರನು ಹೇಳಿದನು: “ಬೃಹನ್ನಡೇ! ಮತ್ತೆ ನೀನು ಗಾಯಕನೋ ನರ್ತಕನೋ ಆಗುವೆಯಂತೆ. ಸದ್ಯಕ್ಕೆ ಈಗ ಬೇಗ ನನ್ನ ರಥವನ್ನೇರಿ ಉತ್ತಮಾಶ್ವಗಳನ್ನು ನಿಯಂತ್ರಿಸು.””
04035017 ವೈಶಂಪಾಯನ ಉವಾಚ।
04035017a ಸ ತತ್ರ ನರ್ಮಸಮ್ಯುಕ್ತಮಕರೋತ್ಪಾಂಡವೋ ಬಹು।
04035017c ಉತ್ತರಾಯಾಃ ಪ್ರಮುಖತಃ ಸರ್ವಂ ಜಾನನ್ನರಿಂದಮ।।
ವೈಶಂಪಾಯನನು ಹೇಳಿದನು: “ಶತ್ರುನಾಶಕನೇ! ಆ ಪಾಂಡವನು ಎಲ್ಲವನ್ನೂ ಅರಿತಿದ್ದರೂ ಉತ್ತರೆಯ ಮುಂದೆ ವಿನೋದದಿಂದ ನಡೆದುಕೊಂಡನು.
04035018a ಊರ್ಧ್ವಮುತ್ಕ್ಷಿಪ್ಯ ಕವಚಂ ಶರೀರೇ ಪ್ರತ್ಯಮುಂಚತ।
04035018c ಕುಮಾರ್ಯಸ್ತತ್ರ ತಂ ದೃಷ್ಟ್ವಾ ಪ್ರಾಹಸನ್ಪೃಥುಲೋಚನಾಃ।।
ಅವನು ಕವಚವನ್ನು ಮಗುಚಿ ಮೈಗೆ ತೊಟ್ಟುಕೊಂಡನು. ಅದನ್ನು ನೋಡಿ ಅಲ್ಲಿದ್ದ ಬೊಗಸೆಗಣ್ಣಿನ ಕುಮಾರಿಯರು ನಕ್ಕುಬಿಟ್ಟರು.
04035019a ಸ ತು ದೃಷ್ಟ್ವಾ ವಿಮುಹ್ಯಂತಂ ಸ್ವಯಮೇವೋತ್ತರಸ್ತತಃ।
04035019c ಕವಚೇನ ಮಹಾರ್ಹೇಣ ಸಮನಹ್ಯದ್ಬೃಹನ್ನಡಾಂ।।
ಆಗ ಅವನು ಗೊಂದಲಗೊಂಡಿದ್ದುದನ್ನು ಕಂಡು ಸ್ವತಃ ಉತ್ತರನು ಬೆಲೆಬಾಳುವ ಕವಚವನ್ನು ಬೃಹನ್ನಡೆಗೆ ತೊಡಿಸಿದನು.
04035020a ಸ ಬಿಭ್ರತ್ಕವಚಂ ಚಾಗ್ರ್ಯಂ ಸ್ವಯಮಪ್ಯಂಶುಮತ್ಪ್ರಭಂ।
04035020c ಧ್ವಜಂ ಚ ಸಿಂಹಮುಚ್ಛ್ರಿತ್ಯ ಸಾರಥ್ಯೇ ಸಮಕಲ್ಪಯತ್।।
ಅವನು ಸ್ವತಃ ಸೂರ್ಯಪ್ರಭೆಯುಳ್ಳ ಶ್ರೇಷ್ಠ ಕವಚವನ್ನು ಧರಿಸಿ, ಸಿಂಹಧ್ವಜವನ್ನೇರಿಸಿ, ಬೃಹನ್ನಡೆಯನ್ನು ಸಾರಥ್ಯದಲ್ಲಿ ತೊಡಗಿಸಿದನು.
04035021a ಧನೂಂಷಿ ಚ ಮಹಾರ್ಹಾಣಿ ಬಾಣಾಂಶ್ಚ ರುಚಿರಾನ್ಬಹೂನ್।
04035021c ಆದಾಯ ಪ್ರಯಯೌ ವೀರಃ ಸ ಬೃಹನ್ನಡಸಾರಥಿಃ।।
ಆ ವೀರನು ಬೃಹನ್ನಡೆಯನ್ನು ಸಾರಥಿಯನ್ನಾಗಿ ಮಾಡಿಕೊಂಡು ಅನರ್ಘ್ಯ ಬಿಲ್ಲುಗಳನ್ನೂ, ಹೊಳೆಹೊಳೆಯುವ ಬಹು ಬಾಣಗಳನ್ನೂ ತೆಗೆದುಕೊಂಡು ಹೊರಟನು.
04035022a ಅಥೋತ್ತರಾ ಚ ಕನ್ಯಾಶ್ಚ ಸಖ್ಯಸ್ತಾಮಬ್ರುವಂಸ್ತದಾ।
04035022c ಬೃಹನ್ನಡೇ ಆನಯೇಥಾ ವಾಸಾಂಸಿ ರುಚಿರಾಣಿ ನಃ।।
04035023a ಪಾಂಚಾಲಿಕಾರ್ಥಂ ಸೂಕ್ಷ್ಮಾಣಿ ಚಿತ್ರಾಣಿ ವಿವಿಧಾನಿ ಚ।
04035023c ವಿಜಿತ್ಯ ಸಂಗ್ರಾಮಗತಾನ್ಭೀಷ್ಮದ್ರೋಣಮುಖಾನ್ಕುರೂನ್।।
ಅಗ ಉತ್ತರೆಯೂ ಸಖೀ ಕನ್ಯೆಯರೂ ಅವನಿಗೆ ಹೇಳಿದರು: “ಬೃಹನ್ನಡೇ! ಯುದ್ಧಕ್ಕೆ ಬಂದಿರುವ ಭೀಷ್ಮ-ದ್ರೋಣ ಪ್ರಮುಖ ಕುರುಗಳನ್ನು ಗೆದ್ದು, ನಮ್ಮ ಗೊಂಬೆಗಳಿಗಾಗಿ ಸುಂದರ ಸೂಕ್ಷ್ಮ ಬಣ್ಣಬಣ್ಣದ ವಿವಿಧ ವಸ್ತ್ರಗಳನ್ನು ತೆಗೆದುಕೊಂಡು ಬಾ.”
04035024a ಅಥ ತಾ ಬ್ರುವತೀಃ ಕನ್ಯಾಃ ಸಹಿತಾಃ ಪಾಂಡುನಂದನಃ।
04035024c ಪ್ರತ್ಯುವಾಚ ಹಸನ್ಪಾರ್ಥೋ ಮೇಘದುಂದುಭಿನಿಃಸ್ವನಃ।।
ಬಳಿಕ, ಪಾಂಡುಪುತ್ರ ಪಾರ್ಥನು ನಗುತ್ತ ಹಾಗೆ ನುಡಿಯುತ್ತಿರುವ ಕನ್ಯೆಯರ ಗುಂಪಿಗೆ ಮೇಘ ದುಂದುಭಿ ಧ್ವನಿಯಿಂದ ಮರುನುಡಿದನು:
04035025a ಯದ್ಯುತ್ತರೋಽಯಂ ಸಂಗ್ರಾಮೇ ವಿಜೇಷ್ಯತಿ ಮಹಾರಥಾನ್।
04035025c ಅಥಾಹರಿಷ್ಯೇ ವಾಸಾಂಸಿ ದಿವ್ಯಾನಿ ರುಚಿರಾಣಿ ಚ।।
“ಈ ಉತ್ತರನು ಯುದ್ಧದಲ್ಲಿ ಮಹಾರಥರನ್ನು ಗೆದ್ದರೆ ನಾನು ಆ ದಿವ್ಯ ಸುಂದರ ವಸ್ತ್ರಗಳನ್ನು ತರುತ್ತೇನೆ.”
04035026a ಏವಮುಕ್ತ್ವಾ ತು ಬೀಭತ್ಸುಸ್ತತಃ ಪ್ರಾಚೋದಯದ್ಧಯಾನ್।
04035026c ಕುರೂನಭಿಮುಖಾಂ ಶೂರೋ ನಾನಾಧ್ವಜಪತಾಕಿನಃ।।
ಹೀಗೆ ನುಡಿದು ಶೂರ ಅರ್ಜುನನು ನಾನಾಧ್ವಜ ಪತಾಕೆಗಳಿಂದ ಕೂಡಿದ ಕುರುಸೇನೆಗೆ ಅಭಿಮುಖವಾಗಿ ಕುದುರೆಗಳನ್ನು ಪ್ರಚೋದಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಉತ್ತರನಿರ್ಯಾಣೇ ಪಂಚತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಉತ್ತರನಿರ್ಯಾಣದಲ್ಲಿ ಮೂವತ್ತೈದನೆಯ ಅಧ್ಯಾಯವು.