ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ವಿರಾಟ ಪರ್ವ
ಗೋಹರಣ ಪರ್ವ
ಅಧ್ಯಾಯ 34
ಸಾರ
ಸಮರ್ಥ ಸಾರಥಿಯಿದ್ದರೆ ತನ್ನ ಪರಾಕ್ರಮದಿಂದ ಗೋವುಗಳನ್ನು ಬಿಡಿಸಿಕೊಂಡು ಬರುತ್ತಿದ್ದೆ ಎಂದು ಭೂಮಿಂಜಯ ಉತ್ತರನು ತನ್ನ ಪೌರುಷವನ್ನು ಕೊಚ್ಚಿಕೊಳ್ಳುವುದು (1-9). ಅದನ್ನು ನೋಡಿ ಸೈರಿಸಲಾರದೇ ಸೈರಂಧ್ರಿಯು ಅಂತಃಪುರದಲ್ಲಿದ್ದ ಬೃಹನ್ನಡೆಯು ಅರ್ಜುನನ ಸಾರಥಿಯಾಗಿದ್ದನೆನ್ನಲು (10-17), ಉತ್ತರನು ಬೃಹನ್ನಡೆಯನ್ನು ಕರೆತರಲು ತಂಗಿ ಉತ್ತರೆಯನ್ನು ಕಳುಹಿಸಿದುದು (18-19).
04034001 ಉತ್ತರ ಉವಾಚ।
04034001a ಅದ್ಯಾಹಮನುಗಚ್ಛೇಯಂ ದೃಢಧನ್ವಾ ಗವಾಂ ಪದಂ।
04034001c ಯದಿ ಮೇ ಸಾರಥಿಃ ಕಶ್ಚಿದ್ಭವೇದಶ್ವೇಷು ಕೋವಿದಃ।।
ಉತ್ತರನು ಹೇಳಿದನು: “ಅಶ್ವಕೋವಿದನಾದ ಯಾವನಾದರೂ ನನಗೆ ಸಾರಥಿಯಾಗುವುದಾದರೆ ದೃಢಧನುರ್ಧರನಾದ ನಾನು ಈ ದಿವಸವೇ ಹಸುಗಳ ಜಾಡನ್ನು ಅನುಸರಿಸುತ್ತೇನೆ.
04034002a ತಮೇವ ನಾಧಿಗಚ್ಛಾಮಿ ಯೋ ಮೇ ಯಂತಾ ಭವೇನ್ನರಃ।
04034002c ಪಶ್ಯಧ್ವಂ ಸಾರಥಿಂ ಕ್ಷಿಪ್ರಂ ಮಮ ಯುಕ್ತಂ ಪ್ರಯಾಸ್ಯತಃ।।
ನನಗೆ ಸಾರಥಿಯಾಗುವ ವ್ಯಕ್ತಿಯನ್ನೇ ನಾನು ಅರಿಯೆನಲ್ಲ! ಆದ್ದರಿಂದ ಹೊರಟಿರುವ ನನಗೆ ತಕ್ಕ ಸಾರಥಿಯನ್ನು ಬೇಗ ಹುಡುಕಿ!
04034003a ಅಷ್ಟಾವಿಂಶತಿರಾತ್ರಂ ವಾ ಮಾಸಂ ವಾ ನೂನಮಂತತಃ।
04034003c ಯತ್ತದಾಸೀನ್ಮಹದ್ಯುದ್ಧಂ ತತ್ರ ಮೇ ಸಾರಥಿರ್ಹತಃ।।
ಇಪ್ಪತ್ತೆಂಟು ರಾತ್ರಿಯೋ ಒಂದು ತಿಂಗಳೋ ನಡೆದ ಮಹಾಯುದ್ಧದಲ್ಲಿ ನನ್ನ ಸಾರಥಿ ಹತನಾದುದು ನಿಶ್ಚಯವಷ್ಟೇ!
04034004a ಸ ಲಭೇಯಂ ಯದಿ ತ್ವನ್ಯಂ ಹಯಯಾನವಿದಂ ನರಂ।
04034004c ತ್ವರಾವಾನದ್ಯ ಯಾತ್ವಾಹಂ ಸಮುಚ್ಛ್ರಿತಮಹಾಧ್ವಜಂ।।
04034005a ವಿಗಾಹ್ಯ ತತ್ಪರಾನೀಕಂ ಗಜವಾಜಿರಥಾಕುಲಂ।
04034005c ಶಸ್ತ್ರಪ್ರತಾಪನಿರ್ವೀರ್ಯಾನ್ಕುರೂಂ ಜಿತ್ವಾನಯೇ ಪಶೂನ್।।
ರಥವನ್ನು ನಡೆಸಬಲ್ಲ ಮತ್ತೊಬ್ಬ ವ್ಯಕ್ತಿ ಸಿಗುವುದಾದಲ್ಲಿ, ನಾನಿಂದು ಮಹಾಧ್ವಜವನ್ನೇರಿಸಿ, ಶೀಘ್ರವಾಗಿ ಹೋಗಿ, ಆನೆ, ಕುದುರೆ ರಥಗಳಿಂದ ಕಿಕ್ಕಿರಿದ ಆ ಶತ್ರುಸೈನ್ಯವನ್ನು ಹೊಕ್ಕು, ಶಸ್ತ್ರ-ಪ್ರತಾಪಗಳಲ್ಲಿ ನಿರ್ವೀರ್ಯ ಕುರುಗಳನ್ನು ಗೆದ್ದು ಹಸುಗಳನ್ನು ಬಿಡಿಸಿ ತರುತ್ತೇನೆ.
04034006a ದುರ್ಯೋಧನಂ ಶಾಂತನವಂ ಕರ್ಣಂ ವೈಕರ್ತನಂ ಕೃಪಂ।
04034006c ದ್ರೋಣಂ ಚ ಸಹ ಪುತ್ರೇಣ ಮಹೇಷ್ವಾಸಾನ್ಸಮಾಗತಾನ್।।
04034007a ವಿತ್ರಾಸಯಿತ್ವಾ ಸಂಗ್ರಾಮೇ ದಾನವಾನಿವ ವಜ್ರಭೃತ್।
04034007c ಅನೇನೈವ ಮುಹೂರ್ತೇನ ಪುನಃ ಪ್ರತ್ಯಾನಯೇ ಪಶೂನ್।।
ಅಲ್ಲಿ ಸೇರಿರುವ ದುರ್ಯೋಧನ, ಭೀಷ್ಮ, ಸೂರ್ಯಪುತ್ರ ಕರ್ಣ, ಕೃಪ, ಪುತ್ರಸಹಿತ ದ್ರೋಣ – ಈ ಎಲ್ಲ ದೊಡ್ಡ ಬಿಲ್ಗಾರರನ್ನೂ ಯುದ್ಧದಲ್ಲಿ ಇಂದ್ರನು ರಾಕ್ಷಸರನ್ನು ಹೆದರಿಸಿದಂತೆ ಹೆದರಿಸಿ, ಈ ಗಳಿಗೆಯಲ್ಲಿ ಹಸುಗಳನ್ನು ಮರಳಿ ತರುತ್ತೇನೆ.
04034008a ಶೂನ್ಯಮಾಸಾದ್ಯ ಕುರವಃ ಪ್ರಯಾಂತ್ಯಾದಾಯ ಗೋಧನಂ।
04034008c ಕಿಂ ನು ಶಕ್ಯಂ ಮಯಾ ಕರ್ತುಂ ಯದಹಂ ತತ್ರ ನಾಭವಂ।।
ಯಾರೂ ಇಲ್ಲದಿರುವುದನ್ನು ಕಂಡು ಕುರುಗಳು ನಮ್ಮ ಗೋಧನವನ್ನು ಹಿಡಿದುಕೊಂಡು ಹೋಗುತ್ತಿದ್ದಾರೆ. ಅಲ್ಲಿಲ್ಲದಿರುವಾಗ ನಾನು ಏನು ತಾನೆ ಮಾಡುವುದು ಸಾಧ್ಯ?
04034009a ಪಶ್ಯೇಯುರದ್ಯ ಮೇ ವೀರ್ಯಂ ಕುರವಸ್ತೇ ಸಮಾಗತಾಃ।
04034009c ಕಿಂ ನು ಪಾರ್ಥೋಽರ್ಜುನಃ ಸಾಕ್ಷಾದಯಮಸ್ಮಾನ್ಪ್ರಬಾಧತೇ।।
ನಮ್ಮನ್ನು ಬಾಧಿಸುತ್ತಿರುವ ಇವನು ಸಾಕ್ಷಾತ್ ಕುಂತೀಪುತ್ರ ಅರ್ಜುನನೇನು? ಎಂದು ನೆರೆದಿರುವ ಕೌರವರು ಮಾತನಾಡಿಕೊಳ್ಳುತ್ತಾ ನನ್ನ ಪರಾಕ್ರಮವನ್ನಿಂದು ಕಾಣುವರು.””
04034010 ವೈಶಂಪಾಯನ ಉವಾಚ।
04034010a ತಸ್ಯ ತದ್ವಚನಂ ಸ್ತ್ರೀಷು ಭಾಷತಃ ಸ್ಮ ಪುನಃ ಪುನಃ।
04034010c ನಾಮರ್ಷಯತ ಪಾಂಚಾಲೀ ಬೀಭತ್ಸೋಃ ಪರಿಕೀರ್ತನಂ।।
ವೈಶಂಪಾಯನನು ಹೇಳಿದನು: “ಸ್ತ್ರೀಯರ ನಡುವೆ ಮತ್ತೆ ಮತ್ತೆ ಆಡುತ್ತಿದ್ದ ಅವನ ಆ ಮಾತನ್ನೂ ಅವನು ಅರ್ಜುನನ ಹೆಸರನ್ನೆತ್ತಿದುದನ್ನೂ ದ್ರೌಪದಿಯು ಸೈರಿಸದಾದಳು.
04034011a ಅಥೈನಮುಪಸಂಗಮ್ಯ ಸ್ತ್ರೀಮಧ್ಯಾತ್ಸಾ ತಪಸ್ವಿನೀ।
04034011c ವ್ರೀಡಮಾನೇವ ಶನಕೈರಿದಂ ವಚನಮಬ್ರವೀತ್।।
ಬಳಿಕ ಆ ಬಡಪಾಯಿಯು ಸ್ತ್ರೀಮಧ್ಯದಿಂದ ಎದ್ದು ಬಂದು, ಲಜ್ಜೆಯಿಂದೆಂಬಂತೆ ಮೆಲ್ಲಗೆ ಈ ಮಾತುಗಳನ್ನಾಡಿದಳು:
04034012a ಯೋಽಸೌ ಬೃಹದ್ವಾರಣಾಭೋ ಯುವಾ ಸುಪ್ರಿಯದರ್ಶನಃ।
04034012c ಬೃಹನ್ನಡೇತಿ ವಿಖ್ಯಾತಃ ಪಾರ್ಥಸ್ಯಾಸೀತ್ಸ ಸಾರಥಿಃ।।
“ದೊಡ್ಡ ಆನೆಯಂತಿರುವವನೂ, ಸುಂದರನೂ ಆದ ಬೃಹನ್ನಡೆ ಎಂಬ ಈ ಯುವಕನು ಪಾರ್ಥನ ಪ್ರಸಿದ್ಧ ಸಾರಥಿಯಾಗಿದ್ದನು.
04034013a ಧನುಷ್ಯನವರಶ್ಚಾಸೀತ್ತಸ್ಯ ಶಿಷ್ಯೋ ಮಹಾತ್ಮನಃ।
04034013c ದೃಷ್ಟಪೂರ್ವೋ ಮಯಾ ವೀರ ಚರಂತ್ಯಾ ಪಾಂಡವಾನ್ಪ್ರತಿ।।
ವೀರ! ಆ ಮಹಾತ್ಮನ ಶಿಷ್ಯನೂ ಧನುರ್ವಿದ್ಯೆಯಲ್ಲಿ ಯಾರಿಗೂ ಕಡಿಮೆಯಿಲ್ಲದವನೂ ಆದ ಇವನನ್ನು ಹಿಂದೆ ನಾನು ಪಾಂಡವರೊಡನಿದ್ದಾಗ ನೋಡಿದ್ದೆ.
04034014a ಯದಾ ತತ್ಪಾವಕೋ ದಾವಮದಹತ್ಖಾಂಡವಂ ಮಹತ್।
04034014c ಅರ್ಜುನಸ್ಯ ತದಾನೇನ ಸಂಗೃಹೀತಾ ಹಯೋತ್ತಮಾಃ।।
ಆ ದೊಡ್ಡ ಖಾಂಡವವನವನ್ನು ದಾವಾಗ್ನಿಯು ಸುಟ್ಟು ಹಾಕಿದಾಗ ಅರ್ಜನನ ಶ್ರೇಷ್ಠ ಕುದುರೆಗಳನ್ನು ಹಿಡಿದಿದ್ದವನು ಇವನೇ!
04034015a ತೇನ ಸಾರಥಿನಾ ಪಾರ್ಥಃ ಸರ್ವಭೂತಾನಿ ಸರ್ವಶಃ।
04034015c ಅಜಯತ್ಖಾಂಡವಪ್ರಸ್ಥೇ ನ ಹಿ ಯಂತಾಸ್ತಿ ತಾದೃಶಃ।।
ಈ ಸಾರಥಿಯೊಡನೆಯೇ ಪಾರ್ಥನು ಖಾಂಡವಪ್ರಸ್ಥದಲ್ಲಿ ಎಲ್ಲ ಜೀವಿಗಳನ್ನೂ ಸಂಪೂರ್ಣವಾಗಿ ಗೆದ್ದನು. ಇವನಿಗೆ ಸದೃಶನಾದ ಸಾರಥಿಯಿಲ್ಲ.
04034016a ಯೇಯಂ ಕುಮಾರೀ ಸುಶ್ರೋಣೀ ಭಗಿನೀ ತೇ ಯವೀಯಸೀ।
04034016c ಅಸ್ಯಾಃ ಸ ವಚನಂ ವೀರ ಕರಿಷ್ಯತಿ ನ ಸಂಶಯಃ।।
ವೀರ! ನಿನ್ನ ಈ ಕುಮಾರಿ ಸುಂದರಿ ತಂಗಿಯ ಮಾತನ್ನು ಅವನು ನಿಸ್ಸಂದೇಹವಾಗಿ ನಡೆಸಿಕೊಳ್ಳುತ್ತಾನೆ.
04034017a ಯದಿ ವೈ ಸಾರಥಿಃ ಸ ಸ್ಯಾತ್ಕುರೂನ್ಸರ್ವಾನಸಂಶಯಂ।
04034017c ಜಿತ್ವಾ ಗಾಶ್ಚ ಸಮಾದಾಯ ಧ್ರುವಮಾಗಮನಂ ಭವೇತ್।।
ಅವನು ನಿನಗೆ ಸಾರಥಿಯಾದರೆ ನೀನು ಎಲ್ಲ ಕೌರವರನ್ನೂ ನಿಸ್ಸಂಶಯವಾಗಿ ಗೆದ್ದು ಗೋವುಗಳನ್ನು ಖಂಡಿತವಾಗಿಯೂ ಮರಳಿ ಪಡೆದು ಹಿಂದಿರುಗುವೆ.”
04034018a ಏವಮುಕ್ತಃ ಸ ಸೈರಂಧ್ರ್ಯಾ ಭಗಿನೀಂ ಪ್ರತ್ಯಭಾಷತ।
04034018c ಗಚ್ಛ ತ್ವಮನವದ್ಯಾಂಗಿ ತಾಮಾನಯ ಬೃಹನ್ನಡಾಂ।।
ಸೈರಂಧ್ರಿಯು ಹೀಗೆ ಹೇಳಲು ಅವನು ಸೋದರಿಗೆ ನುಡಿದನು: “ಸುಂದರಿ! ನೀನು ಹೋಗು! ಆ ಬೃಹನ್ನಡೆಯನ್ನು ಕರೆದು ತಾ!”
04034019a ಸಾ ಭ್ರಾತ್ರಾ ಪ್ರೇಷಿತಾ ಶೀಘ್ರಮಗಚ್ಛನ್ನರ್ತನಾಗೃಹಂ।
04034019c ಯತ್ರಾಸ್ತೇ ಸ ಮಹಾಬಾಹುಶ್ಚನ್ನಃ ಸತ್ರೇಣ ಪಾಂಡವಃ।।
ಸೋದರನಿಂದ ಕಳುಹಿಸಲ್ಪಟ್ಟ ಅವಳು ಆ ಮಹಾಬಾಹು ಅರ್ಜುನನು ವೇಷಮರೆಸಿಕೊಂಡು ವಾಸಿಸುತ್ತಿದ್ದ ನರ್ತನಗೃಹಕ್ಕೆ ಶೀಘ್ರವಾಗಿ ಹೋದಳು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಬೃಹನ್ನಡಾಸಾರಥ್ಯಕಥನೇ ಚತುಸ್ತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಬೃಹನ್ನಡಾಸಾರಥ್ಯಕಥನದಲ್ಲಿ ಮೂವತ್ನಾಲ್ಕನೆಯ ಅಧ್ಯಾಯವು.