032 ದಕ್ಷಿಣಗೋಗ್ರಹೇ ವಿರಾಟಜಯಘೋಷಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ಗೋಹರಣ ಪರ್ವ

ಅಧ್ಯಾಯ 32

ಸಾರ

ಸುಶರ್ಮನಿಂದ ವಿರಾಟನ ಸೆರೆ (1-9). ಪಾಂಡವರು ವಿರಾಟನನ್ನು ಬಿಡಿಸಿದುದು (10-33). ವಿರಾಟನು ಪಾಂಡವರನ್ನು, ಅವರ್ಯಾರೆಂದು ಇನ್ನೂ ತಿಳಿಯದೇ, ಗೌರವಿಸಿದುದು (34-45). ತನ್ನ ವಿಜಯವಾರ್ತೆಯನ್ನು ವಿರಾಟನು ಪುರಕ್ಕೆ ಕಳುಹಿಸಿದುದು (46-50).

04032001 ವೈಶಂಪಾಯನ ಉವಾಚ।
04032001a ತಮಸಾಭಿಪ್ಲುತೇ ಲೋಕೇ ರಜಸಾ ಚೈವ ಭಾರತ।
04032001c ವ್ಯತಿಷ್ಠನ್ವೈ ಮುಹೂರ್ತಂ ತು ವ್ಯೂಢಾನೀಕಾಃ ಪ್ರಹಾರಿಣಃ।।

ವೈಶಂಪಾಯನನು ಹೇಳಿದನು: “ಭಾರತ! ಲೋಕವು ಕತ್ತಲೆಯಿಂದಲೂ ಧೂಳಿನಿಂದಲೂ ತುಂಬಿ ಹೋಗಲು ಸೈನ್ಯವ್ಯೂಹದಲ್ಲಿದ್ದ ಯೋಧರು ಮುಹೂರ್ತಕಾಲ ಹಾಗೆಯೇ ನಿಂತರು.

04032002a ತತೋಽಂಧಕಾರಂ ಪ್ರಣುದನ್ನುದತಿಷ್ಠತ ಚಂದ್ರಮಾಃ।
04032002c ಕುರ್ವಾಣೋ ವಿಮಲಾಂ ರಾತ್ರಿಂ ನಂದಯನ್ ಕ್ಷತ್ರಿಯಾನ್ಯುಧಿ।।

ಬಳಿಕ ಚಂದ್ರನು ಕತ್ತಲೆಯನ್ನು ಹೋಗಲಾಡಿಸಿ, ರಾತ್ರಿಯನ್ನು ನಿರ್ಮಲಗೊಳಿಸಿ, ರಣದಲ್ಲಿ ಕ್ಷತ್ರಿಯರನ್ನು ಸಂತೋಷಗೊಳಿಸಿ ಉದಿಸಿದನು.

04032003a ತತಃ ಪ್ರಕಾಶಮಾಸಾದ್ಯ ಪುನರ್ಯುದ್ಧಮವರ್ತತ।
04032003c ಘೋರರೂಪಂ ತತಸ್ತೇ ಸ್ಮ ನಾವೇಕ್ಷಂತ ಪರಸ್ಪರಂ।।

ಬೆಳಕು ಬರಲು ಘೋರರೂಪ ಯುದ್ಧವು ಮತ್ತೆ ಮುಂದುವರೆಯಿತು. ಆಗ ಅವರು ಒಬ್ಬರನ್ನೊಬ್ಬರು ನೋಡಲಾಗುತ್ತಿರಲಿಲ್ಲ.

04032004a ತತಃ ಸುಶರ್ಮಾ ತ್ರೈಗರ್ತಃ ಸಹ ಭ್ರಾತ್ರಾ ಯವೀಯಸಾ।
04032004c ಅಭ್ಯದ್ರವನ್ಮತ್ಸ್ಯರಾಜಂ ರಥವ್ರಾತೇನ ಸರ್ವಶಃ।।

ಬಳಿಕ, ತ್ರಿಗರ್ತ ಸುಶರ್ಮನು ತಮ್ಮನೊಡನೆ ಎಲ್ಲ ರಥಸಮೂಹದೊಡನೆ ಮತ್ಸ್ಯರಾಜನತ್ತ ನುಗ್ಗಿದನು.

04032005a ತತೋ ರಥಾಭ್ಯಾಂ ಪ್ರಸ್ಕಂದ್ಯ ಭ್ರಾತರೌ ಕ್ಷತ್ರಿಯರ್ಷಭೌ।
04032005c ಗದಾಪಾಣೀ ಸುಸಂರಬ್ಧೌ ಸಮಭ್ಯದ್ರವತಾಂ ಹಯಾನ್।।

ಆ ಕ್ಷತ್ರಿಯಶ್ರೇಷ್ಠ ಗದಾಪಾಣಿ ಸೋದರರು ರಥಗಳಿಂದ ಧುಮುಕಿ ಕೋಪಾವಿಶದಿಂದ ಶತ್ರುವಿನ ಕುದುರೆಗಳತ್ತ ನುಗ್ಗಿದರು.

04032006a ತಥೈವ ತೇಷಾಂ ತು ಬಲಾನಿ ತಾನಿ। ಕ್ರುದ್ಧಾನ್ಯಥಾನ್ಯೋನ್ಯಮಭಿದ್ರವಂತಿ।
04032006c ಗದಾಸಿಖಡ್ಗೈಶ್ಚ ಪರಶ್ವಧೈಶ್ಚ। ಪ್ರಾಸೈಶ್ಚ ತೀಕ್ಷ್ಣಾಗ್ರಸುಪೀತಧಾರೈಃ।।

ಅಂತೆಯೆ ಅವರ ಆ ಸೈನ್ಯಗಳೂ ಕೂಡ ಕ್ರೋಧಗೊಂಡು ಗದೆಗಳಿಂದಲೂ, ಹದಗೊಳಿಸಿದ, ಚೂಪಾದ ಮೊನೆ ಮತ್ತು ಹರಿತ ಅಲಗುಗಳನ್ನುಳ್ಳ ಖಡ್ಗ, ಗಂಡು ಗೊಡಲಿ, ಭರ್ಜಿಗಳಿಂದಲೂ ಪರಸ್ಪರರ ಆಕ್ರಮಣ ಮಾಡಿದವು.

04032007a ಬಲಂ ತು ಮತ್ಸ್ಯಸ್ಯ ಬಲೇನ ರಾಜಾ। ಸರ್ವಂ ತ್ರಿಗರ್ತಾಧಿಪತಿಃ ಸುಶರ್ಮಾ।
04032007c ಪ್ರಮಥ್ಯ ಜಿತ್ವಾ ಚ ಪ್ರಸಹ್ಯಯ ಮತ್ಸ್ಯಂ। ವಿರಾಟಂ ಓಜಸ್ವಿನಮಭ್ಯಧಾವತ್।।

ತ್ರಿಗರ್ತಾಧಿಪಧಿ ರಾಜ ಸುಶರ್ಮನು ತನ್ನ ಸೈನ್ಯದಿಂದ ಮತ್ಸ್ಯರಾಜನ ಸಮಸ್ತ ಸೈನ್ಯವನ್ನೂ ಅತಿಯಾಗಿ ಕಲಕಿ ಗೆದ್ದು, ಬಲಶಾಲಿ ಮತ್ಸ್ಯ ವಿರಾಟನತ್ತ ನುಗ್ಗಿದನು.

04032008a ತೌ ನಿಹತ್ಯ ಪೃಥಗ್ಧುರ್ಯಾವುಭೌ ಚ ಪಾರ್ಷ್ಣಿಸಾರಥೀ।
04032008c ವಿರಥಂ ಮತ್ಸ್ಯರಾಜಾನಂ ಜೀವಗ್ರಾಹಮಗೃಹ್ಣತಾಂ।।

ಅವರಿಬ್ಬರೂ ಎದುರಾಳಿಯ ಎರಡು ಕುದುರೆಗಳನ್ನೂ, ಕುದುರೆಗಳ ಸಾರಥಿಗಳನ್ನೂ ಕೊಂದು ವಿರಥನಾದ ಮತ್ಸ್ಯರಾಜನನ್ನು ಜೀವಂತವಾಗಿ ಸೆರೆಹಿಡಿದರು.

04032009a ತಮುನ್ಮಥ್ಯ ಸುಶರ್ಮಾ ತು ರುದತೀಂ ವಧುಕಾಮಿವ।
04032009c ಸ್ಯಂದನಂ ಸ್ವಂ ಸಮಾರೋಪ್ಯ ಪ್ರಯಯೌ ಶೀಘ್ರವಾಹನಃ।।

ಸುಶರ್ಮನು ಅಳುತ್ತಿರುವ ಯುವತಿಯನ್ನು ಎಳೆದೊಯ್ಯುವಂತೆ ಅವನನ್ನು ಚೆನ್ನಾಗಿ ಥಳಿಸಿ ತನ್ನ ರಥದ ಮೇಲೇರಿಸಿಕೊಂಡು ಶೀಘ್ರವಾಗಿ ಹೊರಟುಹೋದನು.

04032010a ತಸ್ಮಿನ್ಗೃಹೀತೇ ವಿರಥೇ ವಿರಾಟೇ ಬಲವತ್ತರೇ।
04032010c ಪ್ರಾದ್ರವಂತ ಭಯಾನ್ಮತ್ಸ್ಯಾಸ್ತ್ರಿಗರ್ತೈರರ್ದಿತಾ ಭೃಶಂ।।

ಬಲಶಾಲಿ ವಿರಾಟನು ವಿರಥನಾಗಿ ಸೆರೆಸಿಕ್ಕಲಾಗಿ ಮತ್ಸ್ಯರು ತ್ರಿಗರ್ತರಿಂದ ಬಹಳ ಬಾಧಿತರಾಗಿ ಭಯಗೊಂಡು ಚೆಲ್ಲಾಪಿಲ್ಲಿಯಾದರು.

04032011a ತೇಷು ಸಂತ್ರಾಸ್ಯಮಾನೇಷು ಕುಂತೀಪುತ್ರೋ ಯುಧಿಷ್ಠಿರಃ।
04032011c ಅಭ್ಯಭಾಷನ್ಮಹಾಬಾಹುಂ ಭೀಮಸೇನಮರಿಂದಮಂ।।

ಅವರು ಹಾಗೆ ಭಯಗ್ರಸ್ತರಾಗಲು ಕುಂತೀಪುತ್ರ ಯುಧಿಷ್ಠಿರನು ಮಹಾಬಾಹು ಶತ್ರುನಾಶಕ ಭೀಮಸೇನನಿಗೆ ಹೇಳಿದನು:

04032012a ಮತ್ಸ್ಯರಾಜಃ ಪರಾಮೃಷ್ಟಸ್ತ್ರಿಗರ್ತೇನ ಸುಶರ್ಮಣಾ।
04032012c ತಂ ಮೋಕ್ಷಯ ಮಹಾಬಾಹೋ ನ ಗಚ್ಛೇದ್ದ್ವಿಷತಾಂ ವಶಂ।।

“ಮತ್ಸ್ಯರಾಜನು ತ್ರಿಗರ್ತ ಸುಶರ್ಮನ ಹಿಡಿತಕ್ಕೆ ಸಿಕ್ಕಿದ್ದಾನೆ. ಮಹಾಬಾಹು! ಅವನನ್ನು ಬಿಡಿಸು. ಅವನು ಶತ್ರುಗಳಿಗೆ ವಶನಾಗಬಾರದು.

04032013a ಉಷಿತಾಃ ಸ್ಮಃ ಸುಖಂ ಸರ್ವೇ ಸರ್ವಕಾಮೈಃ ಸುಪೂಜಿತಾಃ।
04032013c ಭೀಮಸೇನ ತ್ವಯಾ ಕಾರ್ಯಾ ತಸ್ಯ ವಾಸಸ್ಯ ನಿಷ್ಕೃತಿಃ।।

ವಿರಾಟನಗರದಲ್ಲಿ ನಾವೆಲ್ಲರೂ ಎಲ್ಲ ಬಯಕೆಗಳನ್ನೂ ತೀರಿಸಿಕೊಂಡು ವಾಸಿಸಿದ್ದೇವೆ. ಭೀಮಸೇನ! ಆ ನಮ್ಮ ವಾಸದ ಋಣವನ್ನು ತೀರಿಸುವುದು ನಿನ್ನ ಕರ್ತವ್ಯ.”

04032014 ಭೀಮಸೇನ ಉವಾಚ।
04032014a ಅಹಮೇನಂ ಪರಿತ್ರಾಸ್ಯೇ ಶಾಸನಾತ್ತವ ಪಾರ್ಥಿವ।
04032014c ಪಶ್ಯ ಮೇ ಸುಮಹತ್ಕರ್ಮ ಯುಧ್ಯತಃ ಸಹ ಶತ್ರುಭಿಃ।।
04032015a ಸ್ವಬಾಹುಬಲಮಾಶ್ರಿತ್ಯ ತಿಷ್ಠ ತ್ವಂ ಭ್ರಾತೃಭಿಃ ಸಹ।
04032015c ಏಕಾಂತಮಾಶ್ರಿತೋ ರಾಜನ್ಪಶ್ಯ ಮೇಽದ್ಯ ಪರಾಕ್ರಮಂ।।

ಭೀಮಸೇನನು ಹೇಳಿದನು: “ರಾಜ! ನಿನ್ನ ಆಜ್ಞೆಯಂತೆ ಅವನನ್ನು ನಾನು ರಕ್ಷಿಸುತ್ತೇನೆ. ಸ್ವಬಾಹುಬಲವನ್ನು ನೆಮ್ಮಿ ಶತ್ರುಗಳೊಡನೆ ಯುದ್ಧಮಾಡುವ ನನ್ನ ಸಾಹಸವನ್ನು ನೋಡು. ರಾಜ! ಸಹೋದರರೊಡನೆ ಒಂದು ಕಡೆ ನಿಂತು ನನ್ನ ಪರಾಕ್ರಮವನ್ನಿಂದು ನೋಡು.

04032016a ಸುಸ್ಕಂಧೋಽಯಂ ಮಹಾವೃಕ್ಷೋ ಗದಾರೂಪ ಇವ ಸ್ಥಿತಃ।
04032016c ಏನಮೇವ ಸಮಾರುಜ್ಯ ದ್ರಾವಯಿಷ್ಯಾಮಿ ಶಾತ್ರವಾನ್।।

ದೊಡ್ಡ ಕಾಂಡವನ್ನುಳ್ಳ ಈ ಮಹಾವೃಕ್ಷವು ಗದೆಯಂತೆ ನಿಂತಿದೆ. ಇದನ್ನು ಕಿತ್ತು ಪ್ರಯೋಗಿಸಿ ವೈರಿಗಳನ್ನು ಓಡಿಸಿಬಿಡುತ್ತೇನೆ.””

04032017 ವೈಶಂಪಾಯನ ಉವಾಚ।
04032017a ತಂ ಮತ್ತಮಿವ ಮಾತಂಗಂ ವೀಕ್ಷಮಾಣಂ ವನಸ್ಪತಿಂ।
04032017c ಅಬ್ರವೀದ್ಭ್ರಾತರಂ ವೀರಂ ಧರ್ಮರಾಜೋ ಯುಧಿಷ್ಠಿರಃ।।

ವೈಶಂಪಾಯನನು ಹೇಳಿದನು: “ಮದಗಜದಂತೆ ಮರವನ್ನು ನೋಡುತ್ತಿದ್ದ ಆ ವೀರ ಸೋದರನಿಗೆ ಧರ್ಮರಾಜ ಯುಧಿಷ್ಠಿರನು ಹೇಳಿದನು:

04032018a ಮಾ ಭೀಮ ಸಾಹಸಂ ಕಾರ್ಷೀಸ್ತಿಷ್ಠತ್ವೇಷ ವನಸ್ಪತಿಃ।
04032018c ಮಾ ತ್ವಾ ವೃಕ್ಷೇಣ ಕರ್ಮಾಣಿ ಕುರ್ವಾಣಮತಿಮಾನುಷಂ।
04032018e ಜನಾಃ ಸಮವಬುಧ್ಯೇರನ್ಭೀಮೋಽಯಮಿತಿ ಭಾರತ।।

“ಭೀಮ! ಈ ಸಾಹಸವನ್ನು ಮಾಡಬೇಡ. ಆ ಮರ ಅಲ್ಲಿಯೇ ಇರಲಿ. ಮರದ ಮೂಲಕ ಅತಿಮಾನುಷ ಕಾರ್ಯವನ್ನು ನೀನು ಮಾಡಕೂಡದು. ಏಕೆಂದರೆ ಭಾರತ! ಇವನು ಭೀಮನೆಂದು ಜನ ನಿನ್ನನ್ನು ಗುರುತು ಹಿಡಿದು ಬಿಟ್ಟಾರು!

04032019a ಅನ್ಯದೇವಾಯುಧಂ ಕಿಂ ಚಿತ್ಪ್ರತಿಪದ್ಯಸ್ವ ಮಾನುಷಂ।
04032019c ಚಾಪಂ ವಾ ಯದಿ ವಾ ಶಕ್ತಿಂ ನಿಸ್ತ್ರಿಂಶಂ ವಾ ಪರಶ್ವಧಂ।।

ಬೇರೆ ಯಾವುದಾದರೂ ಮಾನುಷ ಆಯುಧವನ್ನು – ಬಿಲ್ಲು ಅಥವಾ ಶಕ್ತ್ಯಾಯುಧ ಅಥವಾ ಖಡ್ಗ, ಅಥವಾ ಗಂಡುಗೊಡಲಿಯನ್ನು – ತೆಗೆದುಕೋ!

04032020a ಯದೇವ ಮಾನುಷಂ ಭೀಮ ಭವೇದನ್ಯೈರಲಕ್ಷಿತಂ।
04032020c ತದೇವಾಯುಧಮಾದಾಯ ಮೋಕ್ಷಯಾಶು ಮಹೀಪತಿಂ।।

ಭೀಮ! ಮಾನುಷ ಆಯುಧವನ್ನೇ ತೆಗೆದುಕೊಂಡು ಬೇರೆಯವರು ಗಮನಿಸದಂತೆ ದೊರೆಯನ್ನು ಬೇಗ ಬಿಡಿಸು.

04032021a ಯಮೌ ಚ ಚಕ್ರರಕ್ಷೌ ತೇ ಭವಿತಾರೌ ಮಹಾಬಲೌ।
04032021c ವ್ಯೂಹತಃ ಸಮರೇ ತಾತ ಮತ್ಸ್ಯರಾಜಂ ಪರೀಪ್ಸತಃ।।

ಅಯ್ಯಾ! ಮಹಾಬಲ ಯಮಳರು ನಿನ್ನ ಪಡೆಗಳನ್ನು ರಕ್ಷಿಸುವರು. ಯುದ್ಧದಲ್ಲಿ ನೀವು ಒಟ್ಟುಗೂಡಿ ಮತ್ಸ್ಯರಾಜನನ್ನು ಬಿಡಿಸಿ.”

04032022a ತತಃ ಸಮಸ್ತಾಸ್ತೇ ಸರ್ವೇ ತುರಗಾನಭ್ಯಚೋದಯನ್।
04032022c ದಿವ್ಯಮಸ್ತ್ರಂ ವಿಕುರ್ವಾಣಾಸ್ತ್ರಿಗರ್ತಾನ್ಪ್ರತ್ಯಮರ್ಷಣಾಃ।।

ಬಳಿಕ ಅವರೆಲ್ಲರೂ ಕುದುರೆಗಳನ್ನು ಪ್ರಚೋದಿಸಿದರು. ಕೋಪದಿಂದ ದಿವ್ಯಾಸ್ತ್ರವನ್ನು ತ್ರಿಗರ್ತರ ಮೇಲೆ ಪ್ರಯೋಗಿಸಿದರು.

04032023a ತಾನ್ನಿವೃತ್ತರಥಾನ್ದೃಷ್ಟ್ವಾ ಪಾಂಡವಾನ್ಸಾ ಮಹಾಚಮೂಃ।
04032023c ವೈರಾಟೀ ಪರಮಕ್ರುದ್ಧಾ ಯುಯುಧೇ ಪರಮಾದ್ಭುತಂ।।

ರಥವನ್ನು ಹೊರಡಿಸಿದ ಪಾಂಡವರನ್ನು ನೋಡಿ ವಿರಾಟನ ಆ ಮಹಾಸೈನ್ಯವು ಬಹಳ ಕೋಪದಿಂದ ಅತ್ಯದ್ಭುತವಾಗಿ ಯುದ್ಧಮಾಡಿತು.

04032024a ಸಹಸ್ರಂ ನ್ಯವಧೀತ್ತತ್ರ ಕುಂತೀಪುತ್ರೋ ಯುಧಿಷ್ಠಿರಃ।
04032024c ಭೀಮಃ ಸಪ್ತಶತಾನ್ಯೋಧಾನ್ಪರಲೋಕಮದರ್ಶಯತ್।
04032024e ನಕುಲಶ್ಚಾಪಿ ಸಪ್ತೈವ ಶತಾನಿ ಪ್ರಾಹಿಣೋಚ್ಚರೈಃ।।

ಕುಂತೀಪುತ್ರ ಯುಧಿಷ್ಠಿರನು ಅಲ್ಲಿ ಸಾವಿರ ಯೋಧರನ್ನು ಕೊಂದನು; ಭೀಮನು ಏಳುನೂರು ಮಂದಿ ಯೋಧರಿಗೆ ಪರಲೋಕವನ್ನು ತೋರಿಸಿದನು; ನಕುಲನೂ ಬಾಣಗಳಿಂದ ಏಳುನೂರು ಮಂದಿಯನ್ನು ಪರಲೋಕಕ್ಕೆ ಕಳುಹಿಸಿದನು.

04032025a ಶತಾನಿ ತ್ರೀಣಿ ಶೂರಾಣಾಂ ಸಹದೇವಃ ಪ್ರತಾಪವಾನ್।
04032025c ಯುಧಿಷ್ಠಿರಸಮಾದಿಷ್ಟೋ ನಿಜಘ್ನೇ ಪುರುಷರ್ಷಭಃ।
04032025e ಭಿತ್ತ್ವಾ ತಾಂ ಮಹತೀಂ ಸೇನಾಂ ತ್ರಿಗರ್ತಾನಾಂ ನರರ್ಷಭ।।

ನರಶ್ರೇಷ್ಠ! ಯುಧಿಷ್ಠಿರನಿಂದ ಆಜ್ಞೆಗೊಂಡ ಪುರುಷಶ್ರೇಷ್ಠ, ಪ್ರತಾಪಶಾಲೀ ಸಹದೇವನು ತಿಗರ್ತರ ಆ ಮಹಾಸೈನ್ಯವನ್ನು ಭೇದಿಸಿ ಮುನ್ನೂರು ಮಂದಿ ಶೂರರನ್ನು ಕೊಂದನು.

04032026a ತತೋ ಯುಧಿಷ್ಠಿರೋ ರಾಜಾ ತ್ವರಮಾಣೋ ಮಹಾರಥಃ।
04032026c ಅಭಿದ್ರುತ್ಯ ಸುಶರ್ಮಾಣಂ ಶರೈರಭ್ಯತುದದ್ಭೃಶಂ।।

ಬಳಿಕ ಮಹಾರಥಿ ರಾಜ ಯುಧಿಷ್ಠಿರನು ಸುಶರ್ಮನತ್ತ ತ್ವರೆಯಿಂದ ನುಗ್ಗಿ, ಬಾಣಗಳಿಂದ ಅವನನ್ನು ಬಹುವಾಗಿ ಹೊಡೆದನು.

04032027a ಸುಶರ್ಮಾಪಿ ಸುಸಂಕ್ರುದ್ಧಸ್ತ್ವರಮಾಣೋ ಯುಧಿಷ್ಠಿರಂ।
04032027c ಅವಿಧ್ಯನ್ನವಭಿರ್ಬಾಣೈಶ್ಚತುರ್ಭಿಶ್ಚತುರೋ ಹಯಾನ್।।

ಸುಶರ್ಮನೂ ಕೃದ್ಧನಾಗಿ ತ್ವರೆಯಿಂದ ಯುಧಿಷ್ಠಿರನನ್ನು ಒಂಭತ್ತು ಬಾಣಗಳಿಂದಲೂ, ಅವನ ನಾಲ್ಕು ಕುದುರೆಗಳನ್ನು ನಾಲ್ಕು ಬಾಣಗಳಿಂದಲೂ ಹೊಡೆದನು.

04032028a ತತೋ ರಾಜನ್ನಾಶುಕಾರೀ ಕುಂತೀಪುತ್ರೋ ವೃಕೋದರಃ।
04032028c ಸಮಾಸಾದ್ಯ ಸುಶರ್ಮಾಣಮಶ್ವಾನಸ್ಯ ವ್ಯಪೋಥಯತ್।।

ರಾಜ! ಆಗ ಶೀಘ್ರಕರ್ಮಿ ಕುಂತೀಪುತ್ರ ವೃಕೋದರನು ಸುಶರ್ಮನ ಬಳಿಸಾರಿ ಅವನ ಕುದುರೆಗಳನ್ನು ಜಜ್ಜಿ ಹಾಕಿದನು.

04032029a ಪೃಷ್ಠಗೋಪೌ ಚ ತಸ್ಯಾಥ ಹತ್ವಾ ಪರಮಸಾಯಕೈಃ।
04032029c ಅಥಾಸ್ಯ ಸಾರಥಿಂ ಕ್ರುದ್ಧೋ ರಥೋಪಸ್ಥಾದಪಾಹರತ್।।

ಅಲ್ಲದೇ ಅವನ ಬೆಂಗಾಲಿನವರನ್ನು ಮಹಾಬಾಣಗಳಿಂದ ಕೊಂದು, ಅನಂತರ ಕೋಪದಿಂದ ಅವನ ಸಾರಥಿಯನ್ನು ರಥದ ಒಳಗಿನಿಂದ ಎಳೆದು ಹಾಕಿದನು.

04032030a ಚಕ್ರರಕ್ಷಶ್ಚ ಶೂರಶ್ಚ ಶೋಣಾಶ್ವೋ ನಾಮ ವಿಶ್ರುತಃ।
04032030c ಸ ಭಯಾದ್ದ್ವೈರಥಂ ದೃಷ್ಟ್ವಾ ತ್ರೈಗರ್ತಂ ಪ್ರಾಜಹತ್ತದಾ।।

ಆಗ ತ್ರಿಗರ್ತರಾಜನು ವಿರಥನಾದುದನ್ನು ಕಂಡು ಶೂರನೂ ಪ್ರಸಿದ್ಧನೂ ಆದ ಶೋಣಾಶ್ವನೆಂಬ ಅವನ ಚಕ್ರ ರಕ್ಷಕನು ಭಯದಿಂದ ರಣವನ್ನು ಬಿಟ್ಟೋಡಿದನು.

04032031a ತತೋ ವಿರಾಟಃ ಪ್ರಸ್ಕಂದ್ಯ ರಥಾದಥ ಸುಶರ್ಮಣಃ।
04032031c ಗದಾಮಸ್ಯ ಪರಾಮೃಶ್ಯ ತಮೇವಾಜಘ್ನಿವಾನ್ಬಲೀ।
04032031e ಸ ಚಚಾರ ಗದಾಪಾಣಿರ್ವೃದ್ಧೋಽಪಿ ತರುಣೋ ಯಥಾ।।

ಬಳಿಕ ಬಲಶಾಲಿ ವಿರಾಟನು ಸುಶರ್ಮನ ರಥದಿಂದ ಧುಮುಕಿ, ಅವನ ಗದೆಯನ್ನು ಕಿತ್ತುಕೊಂಡು ಅವನನ್ನು ಹೊಡೆದನು. ಅವನು ವೃದ್ಧನಾಗಿದ್ದರೂ ತರುಣನಂತೆ ಗದಾಪಾಣಿಯಾಗಿ ರಣರಂಗದಲ್ಲಿ ಸಂಚರಿಸಿದನು.

04032032a ಭೀಮಸ್ತು ಭೀಮಸಂಕಾಶೋ ರಥಾತ್ಪ್ರಸ್ಕಂದ್ಯ ಕುಂಡಲೀ।
04032032c ತ್ರಿಗರ್ತರಾಜಮಾದತ್ತ ಸಿಂಹಃ ಕ್ಷುದ್ರಮೃಗಂ ಯಥಾ।।

ಭಯಂಕರವಾಗಿ ಮೆರೆಯುತ್ತಿದ್ದ ಕುಂಡಲಧಾರಿ ಭೀಮನಾದರೋ ತನ್ನ ರಥದಿಂದ ಧುಮುಕಿ, ಸಿಂಹವು ಜಿಂಕೆಮರಿಯನ್ನು ಹಿಡಿಯುವಂತೆ ತ್ರಿಗರ್ತರಾಜನನ್ನು ಹಿಡಿದನು.

04032033a ತಸ್ಮಿನ್ಗೃಹೀತೇ ವಿರಥೇ ತ್ರಿಗರ್ತಾನಾಂ ಮಹಾರಥೇ।
04032033c ಅಭಜ್ಯತ ಬಲಂ ಸರ್ವಂ ತ್ರೈಗರ್ತಂ ತದ್ಭಯಾತುರಂ।।

ವಿರಥನಾದ ಆ ತ್ರಿಗರ್ತರ ಮಹಾರಥನು ಹಾಗೆ ಹಿಡಿತಕ್ಕೆ ಸಿಗಲು, ಭೀಮನು ತ್ರಿಗರ್ತರ ಆ ಭಯಗ್ರಸ್ತ ಸೈನ್ಯವನ್ನೆಲ್ಲ ಭಗ್ನಗೊಳಿಸಿದನು.

04032034a ನಿವರ್ತ್ಯ ಗಾಸ್ತತಃ ಸರ್ವಾಃ ಪಾಂಡುಪುತ್ರಾ ಮಹಾಬಲಾಃ।
04032034c ಅವಜಿತ್ಯ ಸುಶರ್ಮಾಣಂ ಧನಂ ಚಾದಾಯ ಸರ್ವಶಃ।।
04032035a ಸ್ವಬಾಹುಬಲಸಂಪನ್ನಾ ಹ್ರೀನಿಷೇಧಾ ಯತವ್ರತಾಃ।
04032035c ಸಂಗ್ರಾಮಶಿರಸೋ ಮಧ್ಯೇ ತಾಂ ರಾತ್ರಿಂ ಸುಖಿನೋಽವಸನ್।।

ಅನಂತರ, ಮಹಾಬಲರೂ, ಸ್ವಬಾಹು ಬಲಸಂಪನ್ನರೂ, ವಿನಯಶೀಲರೂ, ವ್ರತನಿರತರೂ ಆದ ಪಾಂಡುಪುತ್ರರೆಲ್ಲರೂ ಸುಶರ್ಮನನ್ನು ಸೋಲಿಸಿ, ಗೋವುಗಳೆಲ್ಲವನ್ನೂ ಮರಳಿಸಿ, ಅವರ ಎಲ್ಲ ಧನವನ್ನೂ ತೆಗೆದುಕೊಂಡು, ಮುಖ್ಯ ಯುದ್ಧ ಭೂಮಿಯ ಮಧ್ಯೆ ಅಂದಿನಿರುಳು ಸುಖವಾಗಿದ್ದರು.

04032036a ತತೋ ವಿರಾಟಃ ಕೌಂತೇಯಾನತಿಮಾನುಷವಿಕ್ರಮಾನ್।
04032036c ಅರ್ಚಯಾಮಾಸ ವಿತ್ತೇನ ಮಾನೇನ ಚ ಮಹಾರಥಾನ್।।

ಬಳಿಕ, ವಿರಾಟನು ಅತಿಮಾನುಷ ಪರಾಕ್ರಮಿ ಮಹಾರಥ ಕೌಂತೇಯರನ್ನು ಧನ-ಸನ್ಮಾನಗಳಿಂದ ಗೌರವಿಸಿದನು.

04032037 ವಿರಾಟ ಉವಾಚ।
04032037a ಯಥೈವ ಮಮ ರತ್ನಾನಿ ಯುಷ್ಮಾಕಂ ತಾನಿ ವೈ ತಥಾ।
04032037c ಕಾರ್ಯಂ ಕುರುತ ತೈಃ ಸರ್ವೇ ಯಥಾಕಾಮಂ ಯಥಾಸುಖಂ।।

ವಿರಾಟನು ಹೇಳಿದನು: “ರತ್ನಗಳು ಹೇಗೆ ನನ್ನವೋ ಹಾಗೆ ನಿಮ್ಮವೂ ಕೂಡ. ಅವುಗಳಿಂದ ನಿಮ್ಮ ನಿಮ್ಮ ಬಯಕೆಗೆ ಸುಖಕ್ಕೆ ತಕ್ಕಂತೆ ಎಲ್ಲರೂ ಕಾರ್ಯಮಾಡಿಕೊಳ್ಳಿ.

04032038a ದದಾನ್ಯಲಂಕೃತಾಃ ಕನ್ಯಾ ವಸೂನಿ ವಿವಿಧಾನಿ ಚ।
04032038c ಮನಸಶ್ಚಾಪ್ಯಭಿಪ್ರೇತಂ ಯದ್ವಃ ಶತ್ರುನಿಬರ್ಹಣಾಃ।।

ಶತ್ರುನಾಶಕರೇ! ಅಲಂಕೃತ ಕನ್ಯೆಯರನ್ನೂ, ವಿವಿಧ ಸಂಪತ್ತುಗಳನ್ನೂ, ನಿಮ್ಮ ಮನಸ್ಸು ಬಯಸಿದುದನ್ನೂ ಕೊಡುತ್ತೇನೆ.

04032039a ಯುಷ್ಮಾಕಂ ವಿಕ್ರಮಾದದ್ಯ ಮುಕ್ತೋಽಹಂ ಸ್ವಸ್ತಿಮಾನಿಹ।
04032039c ತಸ್ಮಾದ್ಭವಂತೋ ಮತ್ಸ್ಯಾನಾಮೀಶ್ವರಾಃ ಸರ್ವ ಏವ ಹಿ।।

ನಿಮ್ಮ ಪರಾಕ್ರಮದಿಂದ ನಾನಿಂದು ಬಿಡುಗಡೆಗೊಂಡು ಇಲ್ಲಿ ಕುಶಲದಿಂದಿದ್ದೇನೆ. ಆದ್ದರಿಂದ ನೀವೆಲ್ಲರೂ ಮತ್ಸ್ಯರಿಗೆ ಒಡೆಯರು.””

04032040 ವೈಶಂಪಾಯನ ಉವಾಚ।
04032040a ತಥಾಭಿವಾದಿನಂ ಮತ್ಸ್ಯಂ ಕೌರವೇಯಾಃ ಪೃಥಕ್ ಪೃಥಕ್।
04032040c ಊಚುಃ ಪ್ರಾಂಜಲಯಃ ಸರ್ವೇ ಯುಧಿಷ್ಠಿರಪುರೋಗಮಾಃ।।

ವೈಶಂಪಾಯನನು ಹೇಳಿದನು: “ಹಾಗೆ ಹೇಳಿದ ಮತ್ಸ್ಯರಾಜನಿಗೆ ಆ ಪಾಂಡವರೆಲ್ಲರೂ ಯುಧಿಷ್ಠಿರನನ್ನು ಮುಂದುಮಾಡಿಕೊಂಡು ಒಬ್ಬೊಬ್ಬರೂ ಕೈಮುಗಿದು ಹೇಳಿದರು:

04032041a ಪ್ರತಿನಂದಾಮ ತೇ ವಾಕ್ಯಂ ಸರ್ವಂ ಚೈವ ವಿಶಾಂ ಪತೇ।
04032041c ಏತೇನೈವ ಪ್ರತೀತಾಃ ಸ್ಮೋ ಯತ್ತ್ವಂ ಮುಕ್ತೋಽದ್ಯ ಶತ್ರುಭಿಃ।।

“ರಾಜ! ನಿನ್ನೆಲ್ಲ ಮಾತಿನಿಂದ ನಾವು ಆನಂದಿತರಾಗಿದ್ದೇವೆ. ನೀನಿಂದು ಹಗೆಗಳಿಂದ ಮುಕ್ತನಾದೆ. ಅದರಿಂದಲೇ ನಾವು ಸಂತುಷ್ಟರಾಗಿದ್ದೇವೆ.”

04032042a ಅಥಾಬ್ರವೀತ್ಪ್ರೀತಮನಾ ಮತ್ಸ್ಯರಾಜೋ ಯುಧಿಷ್ಠಿರಂ।
04032042c ಪುನರೇವ ಮಹಾಬಾಹುರ್ವಿರಾಟೋ ರಾಜಸತ್ತಮಃ।
04032042e ಏಹಿ ತ್ವಾಮಭಿಷೇಕ್ಷ್ಯಾಮಿ ಮತ್ಸ್ಯರಾಜೋಽಸ್ತು ನೋ ಭವಾನ್।।

ಆಗ ಮಹಾಬಾಹು, ರಾಜಶ್ರೇಷ್ಠ ಮತ್ಸ್ಯರಾಜ ವಿರಾಟನು ಮತ್ತೆ ಯುಧಿಷ್ಠಿರನಿಗೆ ಸಂತುಷ್ಟನಾಗಿ ಹೇಳಿದನು: “ಬಾ! ನಿನಗೆ ಅಭಿಷೇಕ ಮಾಡುತ್ತೇನೆ, ನೀನು ನಮ್ಮ ಮತ್ಸ್ಯಕ್ಕೆ ರಾಜನಾಗು!

04032043a ಮನಸಶ್ಚಾಪ್ಯಭಿಪ್ರೇತಂ ಯತ್ತೇ ಶತ್ರುನಿಬರ್ಹಣ।
04032043c ತತ್ತೇಽಹಂ ಸಂಪ್ರದಾಸ್ಯಾಮಿ ಸರ್ವಮರ್ಹತಿ ನೋ ಭವಾನ್।।

ಶತ್ರುನಾಶಕನೇ! ನೀನು ಮನಸ್ಸಿನಲ್ಲಿ ಇಷ್ಟಪಟ್ಟುದನ್ನು ಕೊಡುತ್ತೇನೆ. ನಮ್ಮದೆಲ್ಲಕ್ಕೂ ನೀನು ಅರ್ಹನಾಗಿರುವೆ.

04032044a ರತ್ನಾನಿ ಗಾಃ ಸುವರ್ಣಂ ಚ ಮಣಿಮುಕ್ತಮಥಾಪಿ ವಾ।
04032044c ವೈಯಾಘ್ರಪದ್ಯ ವಿಪ್ರೇಂದ್ರ ಸರ್ವಥೈವ ನಮೋಽಸ್ತು ತೇ।।

ವೈಯಾಘ್ರಪದ ಗೋತ್ರದ ಬ್ರಾಹ್ಮಣಶ್ರೇಷ್ಠನೇ! ರತ್ನಗಳು, ಗೋವುಗಳು, ಚಿನ್ನ, ಮಣಿ, ಮುತ್ತು ಮುಂತಾದುದೆಲ್ಲವನ್ನೂ ನಿನಗೆ ಕೊಡುತ್ತೇನೆ. ನಿನಗೆ ಎಲ್ಲ ರೀತಿಯಲ್ಲೂ ನಮಸ್ಕಾರ!

04032045a ತ್ವತ್ಕೃತೇ ಹ್ಯದ್ಯ ಪಶ್ಯಾಮಿ ರಾಜ್ಯಮಾತ್ಮಾನಮೇವ ಚ।
04032045c ಯತಶ್ಚ ಜಾತಃ ಸಂರಂಭಃ ಸ ಚ ಶತ್ರುರ್ವಶಂ ಗತಃ।।

ನಿನ್ನಿಂದಾಗಿಯೇ ನಾನಿಂದು ಮತ್ತೆ ನನ್ನ ರಾಜ್ಯವನ್ನು ಕಾಣುತ್ತಿದ್ದೇನೆ. ನನಗೆ ಕಳವಳವನ್ನುಂಟುಮಾಡಿದ ಆ ಶತ್ರುವು ಈಗ ನನ್ನ ವಶನಾಗಿದ್ದಾನೆ.”

04032046a ತತೋ ಯುಧಿಷ್ಠಿರೋ ಮತ್ಸ್ಯಂ ಪುನರೇವಾಭ್ಯಭಾಷತ।
04032046c ಪ್ರತಿನಂದಾಮಿ ತೇ ವಾಕ್ಯಂ ಮನೋಜ್ಞಂ ಮತ್ಸ್ಯ ಭಾಷಸೇ।।

ಆಗ ಯುಧಿಷ್ಠಿರನು ಮತ್ಸ್ಯನಿಗೆ ಮತ್ತೆ ಹೇಳಿದನು: “ಮತ್ಸ್ಯ! ನಿನ್ನ ಮಾತಿನಿಂದ ನನಗೆ ಸಂತೋಷವಾಗುತ್ತಿದೆ. ನೀನು ಮನೋಜ್ಞವಾಗಿ ಮಾತನಾಡುತ್ತಿರುವೆ.

04032047a ಆನೃಶಂಸ್ಯಪರೋ ನಿತ್ಯಂ ಸುಸುಖಃ ಸತತಂ ಭವ।
04032047c ಗಚ್ಛಂತು ದೂತಾಸ್ತ್ವರಿತಂ ನಗರಂ ತವ ಪಾರ್ಥಿವ।
04032047e ಸುಹೃದಾಂ ಪ್ರಿಯಮಾಖ್ಯಾತುಂ ಘೋಷಯಂತು ಚ ತೇ ಜಯಂ।।

ಯಾವಾಗಲೂ ದಯಾಪರನಾಗಿದ್ದುಕೊಂಡು ನಿತ್ಯ ಸುಖಿಯಾಗಿರು. ರಾಜ! ಮಿತ್ರರಿಗೆ ಪ್ರಿಯವನ್ನು ತಿಳಿಸುವುದಕ್ಕಾಗಿ ದೂತರು ಬೇಗ ನಿನ್ನ ನಗರಕ್ಕೆ ಹೋಗಲಿ. ನಿನ್ನ ಜಯವನ್ನು ಸಾರಲಿ.”

04032048a ತತಸ್ತದ್ವಚನಾನ್ಮತ್ಸ್ಯೋ ದೂತಾನ್ರಾಜಾ ಸಮಾದಿಶತ್।
04032048c ಆಚಕ್ಷಧ್ವಂ ಪುರಂ ಗತ್ವಾ ಸಂಗ್ರಾಮೇ ವಿಜಯಂ ಮಮ।।

ಬಳಿಕ, ಆ ಮಾತಿನಂತೆ ಮತ್ಸ್ಯರಾಜನು ದೂತರಿಗೆ ಅಪ್ಪಣೆಮಾಡಿದನು: “ಪುರಕ್ಕೆ ಹೋಗಿ ಯುದ್ಧದಲ್ಲಿ ನಮ್ಮ ಗೆಲುವನ್ನು ಸಾರಿರಿ.

04032049a ಕುಮಾರಾಃ ಸಮಲಂಕೃತ್ಯ ಪರ್ಯಾಗಚ್ಛಂತು ಮೇ ಪುರಾತ್।
04032049c ವಾದಿತ್ರಾಣಿ ಚ ಸರ್ವಾಣಿ ಗಣಿಕಾಶ್ಚ ಸ್ವಲಂಕೃತಾಃ।।

ಕುಮಾರರು ಚೆನ್ನಾಗಿ ಅಲಂಕರಿಸಿಕೊಂಡು ನನ್ನ ಪುರದಿಂದ ಹೊರಬರಲಿ. ಎಲ್ಲ ವಾದ್ಯಗಳೂ, ಚೆನ್ನಾಗಿ ಸಿಂಗರಿಸಿಕೊಂಡ ವೇಶ್ಯೆಯರೂ ಬರಲಿ.”

04032050a ತೇ ಗತ್ವಾ ಕೇವಲಾಂ ರಾತ್ರಿಮಥ ಸೂರ್ಯೋದಯಂ ಪ್ರತಿ।
04032050c ವಿರಾಟಸ್ಯ ಪುರಾಭ್ಯಾಶೇ ದೂತಾ ಜಯಮಘೋಷಯನ್।।

ಆ ದೂತರು ಒಂದೇ ರಾತ್ರಿಯಲ್ಲಿ ಅಲ್ಲಿಗೆ ಹೋಗಿ ಸೂರ್ಯೋದಯದಲ್ಲಿ ವಿರಾಟ ನಗರದ ಸಮೀಪದಲ್ಲಿ ಜಯವನ್ನು ಘೋಷಿಸಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ದಕ್ಷಿಣಗೋಗ್ರಹೇ ವಿರಾಟಜಯಘೋಷೇ ದ್ವಾತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ದಕ್ಷಿಣಗೋಗ್ರಹದಲ್ಲಿ ವಿರಾಟಜಯಘೋಷದಲ್ಲಿ ಮೂವತ್ತೆರಡನೆಯ ಅಧ್ಯಾಯವು.