ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ವಿರಾಟ ಪರ್ವ
ಗೋಹರಣ ಪರ್ವ
ಅಧ್ಯಾಯ 31
ಸಾರ
ವಿರಾಟ ಮತ್ತು ಸುಶರ್ಮ ಸೇನೆಗಳ ನಡುವೆ ನಡೆದ ಯುದ್ಧ (1-24).
04031001 ವೈಶಂಪಾಯನ ಉವಾಚ।
04031001a ನಿರ್ಯಾಯ ನಗರಾಚ್ಚೂರಾ ವ್ಯೂಢಾನೀಕಾಃ ಪ್ರಹಾರಿಣಃ।
04031001c ತ್ರಿಗರ್ತಾನಸ್ಪೃಶನ್ಮತ್ಸ್ಯಾಃ ಸೂರ್ಯೇ ಪರಿಣತೇ ಸತಿ।।
ವೈಶಂಪಾಯನನು ಹೇಳಿದನು: “ಮತ್ಸ್ಯದೇಶದ ಶೂರ ಯೋಧರು ನಗರದಿಂದ ಹೊರಟು ಸೈನ್ಯವ್ಯೂಹವನ್ನು ರಚಿಸಿಕೊಂಡು, ಹೊತ್ತು ಇಳಿದಾಗ ತ್ರಿಗರ್ತರನ್ನು ತಾಗಿದರು.
04031002a ತೇ ತ್ರಿಗರ್ತಾಶ್ಚ ಮತ್ಸ್ಯಾಶ್ಚ ಸಂರಬ್ಧಾ ಯುದ್ಧದುರ್ಮದಾಃ।
04031002c ಅನ್ಯೋನ್ಯಮಭಿಗರ್ಜಂತೋ ಗೋಷು ಗೃದ್ಧಾ ಮಹಾಬಲಾಃ।।
ಕೋಪೋದ್ರಿಕ್ತರೂ, ಗೋವುಗಳ ಮೇಲೆ ಆಶೆಯುಳ್ಳವರೂ, ಯುದ್ಧೋನ್ಮತ್ತರೂ, ಮಹಾಬಲರೂ ಆದ ಆ ತ್ರಿಗರ್ತರು ಮತ್ತು ಮತ್ಸ್ಯರು ಪರಸ್ಪರ ಗರ್ಜನೆ ಮಾಡಿದರು.
04031003a ಭೀಮಾಶ್ಚ ಮತ್ತಮಾತಂಗಾಸ್ತೋಮರಾಮ್ಕುಶಚೋದಿತಾಃ।
04031003c ಗ್ರಾಮಣೀಯೈಃ ಸಮಾರೂಢಾಃ ಕುಶಲೈರ್ಹಸ್ತಿಸಾದಿಭಿಃ।।
ಆಗ ಸೈನ್ಯ ವಿಭಾಗ ಪ್ರಮುಖರೂ ಕುಶಲ ಗಜಾರೋಹಕರೂ ಏರಿ ಕುಳಿತ ಭಯಂಕರ ಮದಗಜಗಳು ತೋಮರಗಳಿಂದಲೂ ಅಂಕುಶಗಳಿಂದಲೂ ಪ್ರಚೋದಿತಗೊಂಡವು.
04031004a ತೇಷಾಂ ಸಮಾಗಮೋ ಘೋರಸ್ತುಮುಲೋ ಲೋಮಹರ್ಷಣಃ।
04031004c ದೇವಾಸುರಸಮೋ ರಾಜನ್ನಾಸೀತ್ಸೂರ್ಯೇ ವಿಲಂಬತಿ।।
ರಾಜ! ಹೊತ್ತು ಇಳಿಯುವ ಸಮಯದಲ್ಲಿ ಅವರ ಘೋರ ಮತ್ತು ರೋಮಾಂಚಕಾರಿ ತುಮುಲಯುದ್ಧವು ದೇವಾಸುರರ ಯುದ್ಧಕ್ಕೆ ಸಮಾನವಾಗಿತ್ತು.
04031005a ಉದತಿಷ್ಠದ್ರಜೋ ಭೌಮಂ ನ ಪ್ರಜ್ಞಾಯತ ಕಿಂ ಚನ।
04031005c ಪಕ್ಷಿಣಶ್ಚಾಪತನ್ಭೂಮೌ ಸೈನ್ಯೇನ ರಜಸಾವೃತಾಃ।।
ನೆಲದ ಧೂಳು ಮೇಲೆದ್ದಿತು; ಅದರಿಂದಾಗಿ ಏನೊಂದೂ ಗೊತ್ತಾಗುತ್ತಿರಲಿಲ್ಲ. ಸೈನ್ಯದ ಧೂಳು ಕವಿದ ಪಕ್ಷಿಗಳು ನೆಲಕ್ಕೆ ಬಿದ್ದವು.
04031006a ಇಷುಭಿರ್ವ್ಯತಿಸಮ್ಯದ್ಭಿರಾದಿತ್ಯೋಽಂತರಧೀಯತ।
04031006c ಖದ್ಯೋತೈರಿವ ಸಮ್ಯುಕ್ತಮಂತರಿಕ್ಷಂ ವ್ಯರಾಜತ।।
ಪ್ರಯೋಗಿಸುತ್ತಿದ್ದ ಬಾಣಗಳಿಂದ ಸೂರ್ಯನು ಕಣ್ಮರೆಯಾದನು. ಆಕಾಶವು ಮಿಂಚು ಹುಳುಗಳಿಂದ ಕೂಡಿದಂತೆ ವಿರಾಜಿಸಿತು.
04031007a ರುಕ್ಮಪೃಷ್ಠಾನಿ ಚಾಪಾನಿ ವ್ಯತಿಷಕ್ತಾನಿ ಧನ್ವಿನಾಂ।
04031007c ಪತತಾಂ ಲೋಕವೀರಾಣಾಂ ಸವ್ಯದಕ್ಷಿಣಮಸ್ಯತಾಂ।।
ಬಲಗೈ, ಎಡಗೈಗಳಿಂದ ಬಾಣ ಬಿಡುತ್ತಿದ್ದ ಲೋಕಪ್ರಸಿದ್ಧ ವೀರ ಬಿಲ್ಗಾರರು ಬಿದ್ದಾಗ, ಚಿನ್ನದ ಹಿಂಬಾಗವುಳ್ಳ ಅವರ ಬಿಲ್ಲುಗಳು ಪರಸ್ಪರ ತೊಡರಿಕೊಳ್ಳುತ್ತಿದ್ದವು.
04031008a ರಥಾ ರಥೈಃ ಸಮಾಜಗ್ಮುಃ ಪಾದಾತೈಶ್ಚ ಪದಾತಯಃ।
04031008c ಸಾದಿಭಿಃ ಸಾದಿನಶ್ಚೈವ ಗಜೈಶ್ಚಾಪಿ ಮಹಾಗಜಾಃ।।
ರಥಗಳು ರಥಗಳನ್ನೂ, ಪದಾತಿಗಳು ಪದಾತಿಗಳನ್ನೂ, ಮಾವುತರು ಮಾವುತರನ್ನೂ, ಗಜಗಳು ಮಹಾಗಜಗಳನ್ನೂ ಎದುರಿಸಿದವು.
04031009a ಅಸಿಭಿಃ ಪಟ್ಟಿಶೈಃ ಪ್ರಾಸೈಃ ಶಕ್ತಿಭಿಸ್ತೋಮರೈರಪಿ।
04031009c ಸಂರಬ್ಧಾಃ ಸಮರೇ ರಾಜನ್ನಿಜಘ್ನುರಿತರೇತರಂ।।
ರಾಜ! ಕೃದ್ಧರಾದ ಆ ಯೋಧರು ಕತ್ತಿಗಳಿಂದಲೂ, ಪಟ್ಟಿಶ, ಭರ್ಜಿ, ಶಕ್ತಿ, ತೋಮರಗಳಿಂದಲೂ ಯುದ್ಧದಲ್ಲಿ ಒಬ್ಬರನ್ನೊಬ್ಬರು ಹೊಡೆದರು.
04031010a ನಿಘ್ನಂತಃ ಸಮರೇಽನ್ಯೋನ್ಯಂ ಶೂರಾಃ ಪರಿಘಬಾಹವಃ।
04031010c ನ ಶೇಕುರಭಿಸಂರಬ್ಧಾಃ ಶೂರಾನ್ಕರ್ತುಂ ಪರಾಂಙ್ಮುಖಾನ್।।
ಪರಿಘದಂಥಹ ತೋಳುಗಳನ್ನುಳ್ಳ ಆ ಶೂರರು ಯುದ್ಧದಲ್ಲಿ ಕುಪಿತರಾಗಿ ಪರಸ್ಪರ ಹೊಡೆದಾಡುತ್ತಿದ್ದರೂ ಒಂದು ಪಕ್ಷದ ಶೂರರು ಮತ್ತೊಂದು ಪಕ್ಷದ ಶೂರರನ್ನು ವಿಮುಖರಾಗುವಂತೆ ಮಾಡಲು ಸಮರ್ಥರಾಗಲಿಲ್ಲ.
04031011a ಕ್ಲೋಪ್ತರೋಷ್ಠಂ ಸುನಸಂ ಕ್ಲಪ್ತಕೇಶಮಲಂಕೃತಂ।
04031011c ಅದೃಶ್ಯತ ಶಿರಶ್ಚಿನ್ನಂ ರಜೋಧ್ವಸ್ತಂ ಸಕುಂಡಲಂ।।
ಮೇಲ್ದುಟಿ ಹರಿದುಹೋದ, ಸುಸ್ಥಿತವಾದ ಮೂಗಿನ, ಅಲಂಕೃತವಾದ ಕೂದಲು ಕತ್ತರಿಸಿಹೋದ, ಕುಂಡಲ ಸಹಿತವಾಗಿ ಧೂಳು ಮುಚ್ಚಿದ ರುಂಡಗಳು ಅಲ್ಲಿ ಕಂಡು ಬರುತ್ತಿದ್ದವು.
04031012a ಅದೃಶ್ಯಂಸ್ತತ್ರ ಗಾತ್ರಾಣಿ ಶರೈಶ್ಚಿನ್ನಾನಿ ಭಾಗಶಃ।
04031012c ಶಾಲಸ್ಕಂಧನಿಕಾಶಾನಿ ಕ್ಷತ್ರಿಯಾಣಾಂ ಮಹಾಮೃಧೇ।।
ಆ ಮಹಾಯುದ್ಧದಲ್ಲಿ ಬಾಣಗಳಿಂದ ತುಂಡುತುಂಡಾಗಿ ಕತ್ತರಿಸಿಹೋದ ಕ್ಷತ್ರಿಯರ ದೇಹಗಳು ಶಾಲವೃಕ್ಷದ ಕಾಂಡಗಳಂತೆ ಕಾಣುತ್ತಿದ್ದವು.
04031013a ನಾಗಭೋಗನಿಕಾಶೈಶ್ಚ ಬಾಹುಭಿಶ್ಚಂದನೋಕ್ಷಿತೈಃ।
04031013c ಆಕೀರ್ಣಾ ವಸುಧಾ ತತ್ರ ಶಿರೋಭಿಶ್ಚ ಸಕುಂಡಲೈಃ।।
ಹಾವಿನ ಹೆಡೆಗಳಿಗೆ ಸಮಾನ ಚಂದನ ಲೇಪಿತ ಬಾಹುಗಳಿಂದಲೂ, ಕುಂಡಲಸಹಿತ ತಲೆಗಳಿಂದಲೂ ಆ ರಣಭೂಮಿಯು ತುಂಬಿಹೋಗಿತ್ತು.
04031014a ಉಪಶಾಮ್ಯದ್ರಜೋ ಭೌಮಂ ರುಧಿರೇಣ ಪ್ರಸರ್ಪತಾ।
04031014c ಕಶ್ಮಲಂ ಪ್ರಾವಿಶದ್ಘೋರಂ ನಿರ್ಮರ್ಯಾದಮವರ್ತತ।।
ಹರಿಯುತ್ತಿದ್ದ ರಕ್ತದಲ್ಲಿ ನೆಲದ ಧೂಳು ಅಡಗಿಹೋಯಿತು. ಅದರಿಂದ ಘೋರವೂ ಅಪರಿಮಿತವೂ ಆದ ಕೆಸರುಂಟಾಯಿತು.
04031015a ಶತಾನೀಕಃ ಶತಂ ಹತ್ವಾ ವಿಶಾಲಾಕ್ಷಶ್ಚತುಃಶತಂ।
04031015c ಪ್ರವಿಷ್ಟೌ ಮಹತೀಂ ಸೇನಾಂ ತ್ರಿಗರ್ತಾನಾಂ ಮಹಾರಥೌ।
04031015e ಆರ್ಚ್ಛೇತಾಂ ಬಹುಸಂರಬ್ಧೌ ಕೇಶಾಕೇಶಿ ನಖಾನಖಿ।।
ಶತಾನೀಕನು ನೂರುಮಂದಿ ಶತ್ರುಗಳನ್ನೂ, ವಿಶಾಲಾಕ್ಷನು ನಾನೂರುಮಂದಿಯನ್ನೂ ಕೊಂದು ಆ ಇಬ್ಬರು ಮಹಾರಥರು ತ್ರಿಗರ್ತರ ಮಹಾಸೇನೆಯನ್ನು ಹೊಕ್ಕರು. ಬಹು ರೋಷಾವೇಶದಿಂದ ಕೇಶಾಕೇಶಿಯಾಗಿ ನಖಾನಖಿಯಾಗಿ ಶತ್ರುಗಳೊಡನೆ ಕಾದಾಡಿದರು.
04031016a ಲಕ್ಷಯಿತ್ವಾ ತ್ರಿಗರ್ತಾನಾಂ ತೌ ಪ್ರವಿಷ್ಟೌ ರಥವ್ರಜಂ।
04031016c ಜಗ್ಮತುಃ ಸೂರ್ಯದತ್ತಶ್ಚ ಮದಿರಾಶ್ವಶ್ಚ ಪೃಷ್ಠತಃ।।
ಅವರು ತ್ರಿಗರ್ತರ ರಥಸಮೂಹವನ್ನು ಲಕ್ಷಿಸಿ ನುಗ್ಗಿದರು; ಅವರ ಹಿಂದೆ ಸೂರ್ಯದತ್ತನೂ ಮದಿರಾಶ್ವನೂ ಹೋದರು.
04031017a ವಿರಾಟಸ್ತತ್ರ ಸಂಗ್ರಾಮೇ ಹತ್ವಾ ಪಂಚಶತಾನ್ರಥಾನ್।
04031017c ಹಯಾನಾಂ ಚ ಶತಾನ್ಯತ್ರ ಹತ್ವಾ ಪಂಚ ಮಹಾರಥಾನ್।।
04031018a ಚರನ್ಸ ವಿವಿಧಾನ್ಮಾರ್ಗಾನ್ರಥೇಷು ರಥಯೂಥಪಃ।
04031018c ತ್ರಿಗರ್ತಾನಾಂ ಸುಶರ್ಮಾಣಮಾಚ್ಛ್ಭದ್ರುಕ್ಮರಥಂ ರಣೇ।।
ರಥ ಸೇನಾನಿ ವಿರಾಟನು ರಥದಲ್ಲಿ ಕುಳಿತು ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತ ಆ ರಣದಲ್ಲಿ ಐನೂರು ರಥಗಳನ್ನು ನಾಶಮಾಡಿ, ನೂರು ಕುದರೆಗಳನ್ನೂ, ಐವರು ಮಹಾರಥರನ್ನೂ ಕೊಂದು, ತ್ರಿಗರ್ತರ ರಾಜ ಸುಶರ್ಮನ ಸುವರ್ಣರಥವನ್ನು ಎದುರಿಸಿದನು.
04031019a ತೌ ವ್ಯಾವಹರತಾಂ ತತ್ರ ಮಹಾತ್ಮಾನೌ ಮಹಾಬಲೌ।
04031019c ಅನ್ಯೋನ್ಯಮಭಿಗರ್ಜಂತೌ ಗೋಷ್ಠೇ ಗೋವೃಷಭಾವಿವ।।
ಅಲ್ಲಿ ಮಹಾತ್ಮರೂ, ಮಹಾಬಲರೂ ಆದ ಅವರಿಬ್ಬರೂ ಹೋರಾಡುತ್ತಾ, ಕೊಟ್ಟಿಗೆಯಲ್ಲಿ ಎರಡು ಗೂಳಿಗಳು ಗರ್ಜಿಸುವಂತೆ ಪರಸ್ಪರ ಗರ್ಜನೆ ಮಾಡುತ್ತಿದ್ದರು.
04031020a ತತೋ ರಥಾಭ್ಯಾಂ ರಥಿನೌ ವ್ಯತಿಯಾಯ ಸಮಂತತಃ।
04031020c ಶರಾನ್ವ್ಯಸೃಜತಾಂ ಶೀಘ್ರಂ ತೋಯಧಾರಾ ಘನಾವಿವ।।
ಬಳಿಕ ಆ ರಥಿಕರು ರಥಗಳಲ್ಲಿ ಕುಳಿತು ಸುತ್ತಲೂ ತಿರುಗುತ್ತ, ಮೋಡಗಳು ಮಳೆಯ ಧಾರೆಯನ್ನು ಕರೆಯುವಂತೆ ಶೀಘ್ರ ಬಾಣಗಳನ್ನು ಸುರಿಸಿದರು.
04031021a ಅನ್ಯೋನ್ಯಂ ಚಾತಿಸಂರಬ್ಧೌ ವಿಚೇರತುರಮರ್ಷಣೌ।
04031021c ಕೃತಾಸ್ತ್ರೌ ನಿಶಿತೈರ್ಬಾಣೈರಸಿಶಕ್ತಿಗದಾಭೃತೌ।।
ಪರಸ್ಪರ ಅತಿ ಕೋಪಾವಿಷ್ಟರೂ ಅಸಹನೆಯುಳ್ಳವರೂ ಆದ, ಖಡ್ಗ, ಶಕ್ತಿ, ಗದೆಗಳನ್ನು ಧರಿಸಿದ ಅ ಅಸ್ತ್ರ ವಿಶಾರದರು ಹರಿತ ಬಾಣಗಳನ್ನು ಪ್ರಯೋಗಿಸುತ್ತಾ ಚಲಿಸುತ್ತಿದ್ದರು.
04031022a ತತೋ ರಾಜಾ ಸುಶರ್ಮಾಣಂ ವಿವ್ಯಾಧ ದಶಭಿಃ ಶರೈಃ।
04031022c ಪಂಚಭಿಃ ಪಂಚಭಿಶ್ಚಾಸ್ಯ ವಿವ್ಯಾಧ ಚತುರೋ ಹಯಾನ್।।
ಅನಂತರ ವಿರಾಟರಾಜನು ಸುಶರ್ಮನನ್ನು ಹತ್ತು ಬಾಣಗಳಿಂದ ಘಾತಿಸಿದನು; ಅವನ ನಾಲ್ಕು ಕುದುರೆಗಳನ್ನು ಐದೈದು ಬಾಣಗಳಿಂದ ಭೇದಿಸಿದನು.
04031023a ತಥೈವ ಮತ್ಸ್ಯರಾಜಾನಂ ಸುಶರ್ಮಾ ಯುದ್ಧದುರ್ಮದಃ।
04031023c ಪಂಚಾಶತಾ ಶಿತೈರ್ಬಾಣೈರ್ವಿವ್ಯಾಧ ಪರಮಾಸ್ತ್ರವಿತ್।।
ಹಾಗೆಯೇ, ಯುದ್ಧೋನ್ಮತ್ತನೂ, ಪರಮಾಸ್ತ್ರವಿದನೂ ಆದ ಸುಶರ್ಮನು ಮತ್ಸ್ಯರಾಜನನ್ನು ಐವತ್ತು ನಿಶಿತ ಬಾಣಗಳಿಂದ ಹೊಡೆದನು.
04031024a ತತಃ ಸೈನ್ಯಂ ಸಮಾವೃತ್ಯ ಮತ್ಸ್ಯರಾಜಸುಶರ್ಮಣೋಃ।
04031024c ನಾಭ್ಯಜಾನಂಸ್ತದಾನ್ಯೋನ್ಯಂ ಪ್ರದೋಷೇ ರಜಸಾವೃತೇ।।
ಆಗ ಧೂಳು ಮುಸುಕಿದ ಸಂಜೆಯಲ್ಲಿ ಮತ್ಸ್ಯರಾಜ ಸುಶರ್ಮರ ಸೇನೆಗಳು ಒಂದನ್ನೊಂದು ಆವರಿಸಿಕೊಂಡು ಪರಸ್ಪರ ಗುರುತಿಸಲಾಗುತ್ತಿರಲಿಲ್ಲ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ದಕ್ಷಿಣಗೋಗ್ರಹೇ ವಿರಾಟಸುಶರ್ಮಯುದ್ಧೇ ಏಕತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ದಕ್ಷಿಣಗೋಗ್ರಹದಲ್ಲಿ ವಿರಾಟಸುಶರ್ಮಯುದ್ಧದಲ್ಲಿ ಮೂವತ್ತೊಂದನೆಯ ಅಧ್ಯಾಯವು.