ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ವಿರಾಟ ಪರ್ವ
ಗೋಹರಣ ಪರ್ವ
ಅಧ್ಯಾಯ 30
ಸಾರ
ಸುಶರ್ಮನನ್ನು ಎದುರಿಸಲು ಮತ್ಸ್ಯಸೇನೆಯು ಸಿದ್ಧವಾದುದು (1-18). ವೇಷ ಮರೆಸಿಕೊಂಡಿದ್ದ ಪಾಂಡವರೂ ಸೇನೆಯನ್ನು ಸೇರಬೇಕೆಂದು ವಿರಾಟನು ಆಜ್ಞಾಪಿಸಿದುದು (19-25). ಮತ್ಸ್ಯಸೇನೆಯು ತ್ರಿಗರ್ತಸೇನೆಯನ್ನು ಬೆನ್ನಟ್ಟಿ ಹೋದುದು (26-30).
04030001 ವೈಶಂಪಾಯನ ಉವಾಚ।
04030001a ತತಸ್ತೇಷಾಂ ಮಹಾರಾಜ ತತ್ರೈವಾಮಿತತೇಜಸಾಂ।
04030001c ಚದ್ಮಲಿಂಗಪ್ರವಿಷ್ಟಾನಾಂ ಪಾಂಡವಾನಾಂ ಮಹಾತ್ಮನಾಂ।।
04030002a ವ್ಯತೀತಃ ಸಮಯಃ ಸಮ್ಯಗ್ವಸತಾಂ ವೈ ಪುರೋತ್ತಮೇ।
04030002c ಕುರ್ವತಾಂ ತಸ್ಯ ಕರ್ಮಾಣಿ ವಿರಾಟಸ್ಯ ಮಹೀಪತೇಃ।।
ವೈಶಂಪಾಯನನು ಹೇಳಿದನು: “ಮಹಾರಾಜ! ಬಳಿಕ ವೇಷಮರೆಸಿಕೊಂಡು ವಿರಾಟನಗರವನ್ನು ಪ್ರವೇಶಿಸಿ ಆ ಶ್ರೇಷ್ಠ ನಗರದಲ್ಲಿ ವಿರಾಟರಾಜನ ಕೆಲಸಗಳನ್ನು ಮಾಡುತ್ತ ವಾಸಿಸುತ್ತಿದ್ದ ಅಮಿತತೇಜಸ್ವಿ ಮಹಾತ್ಮ ಪಾಂಡವರ ಅಜ್ಞಾತವಾಸದ ಅವಧಿಯು ಕಳೆಯಿತು.
04030003a ತತಸ್ತ್ರಯೋದಶಸ್ಯಾಂತೇ ತಸ್ಯ ವರ್ಷಸ್ಯ ಭಾರತ।
04030003c ಸುಶರ್ಮಣಾ ಗೃಹೀತಂ ತು ಗೋಧನಂ ತರಸಾ ಬಹು।।
ಭಾರತ! ಆಗ ಆ ಹದಿಮೂರನೆಯ ವರ್ಷದ ಕೊನೆಯಲ್ಲಿ ಸುಶರ್ಮನು ವಿರಾಟನ ಗೋಧನವನ್ನು ವಿಪುಲ ಸಂಖ್ಯೆಯಲ್ಲಿ ಶೀಘ್ರವಾಗಿ ಹಿಡಿದನು.
04030004a ತತೋ ಜವೇನ ಮಹತಾ ಗೋಪಾಃ ಪುರಮಥಾವ್ರಜತ್।
04030004c ಅಪಶ್ಯನ್ಮತ್ಸ್ಯರಾಜಂ ಚ ರಥಾತ್ಪ್ರಸ್ಕಂದ್ಯ ಕುಂಡಲೀ।।
04030005a ಶೂರೈಃ ಪರಿವೃತಂ ಯೋಧೈಃ ಕುಂಡಲಾಂಗದಧಾರಿಭಿಃ।
04030005c ಸದ್ಭಿಶ್ಚ ಮಂತ್ರಿಭಿಃ ಸಾರ್ಧಂ ಪಾಂಡವೈಶ್ಚ ನರರ್ಷಭೈಃ।।
ಆಗ ಗೋಪಾಲಕರು ಮಹಾವೇಗದಿಂದ ನಗರಕ್ಕೆ ಬಂದರು. ಕುಂಡಲಧಾರಿಯಾದ ಒಬ್ಬನು ರಥದಿಂದ ಕೆಳಕ್ಕೆ ನೆಗೆದು ಅಂಗದ ಕುಂಡಲಗಳನ್ನು ಧರಿಸಿದ ಶೂರ ಯೋಧರಿಂದಲೂ, ಸಜ್ಜನ ಮಂತ್ರಿಗಳಿಂದಲೂ, ನರಶ್ರೇಷ್ಠ ಪಾಂಡವರಿಂದಲೂ ಪರಿವೃತನಾಗಿದ್ದ ಮತ್ಸ್ಯರಾಜನನ್ನು ಕಂಡನು.
04030006a ತಂ ಸಭಾಯಾಂ ಮಹಾರಾಜಮಾಸೀನಂ ರಾಷ್ಟ್ರವರ್ಧನಂ।
04030006c ಸೋಽಬ್ರವೀದುಪಸಂಗಮ್ಯ ವಿರಾಟಂ ಪ್ರಣತಸ್ತದಾ।।
ಆ ಬಳಿಕ ಅವನು ಸಭೆಯಲ್ಲಿ ಕುಳಿತಿದ್ದ ರಾಷ್ಟ್ರವರ್ಧನ ಆ ವಿರಾಟ ಮಹಾರಾಜನ ಬಳಿಗೆ ಬಂದು ನಮಸ್ಕರಿಸಿ ಹೀಗೆ ಹೇಳಿದನು:
04030007a ಅಸ್ಮಾನ್ಯುಧಿ ವಿನಿರ್ಜಿತ್ಯ ಪರಿಭೂಯ ಸಬಾಂಧವಾನ್।
04030007c ಗವಾಂ ಶತಸಹಸ್ರಾಣಿ ತ್ರಿಗರ್ತಾಃ ಕಾಲಯಂತಿ ತೇ।
04030007e ತಾನ್ಪರೀಪ್ಸ ಮನುಷ್ಯೇಂದ್ರ ಮಾ ನೇಶುಃ ಪಶವಸ್ತವ।।
“ರಾಜ! ತ್ರಿಗರ್ತರು ನಮ್ಮ ಬಾಂಧವರೊಡನೆ ನಮ್ಮನ್ನು ಯುದ್ಧದಲ್ಲಿ ಸೋಲಿಸಿ ಅವಮಾನಿಸಿ ನಿನ್ನ ನೂರಾರು ಸಾವಿರಾರು ಗೋವುಗಳನ್ನು ಹಿಡಿಯುತ್ತಿದ್ದಾರೆ. ಅವುಗಳನ್ನು ರಕ್ಷಿಸು. ನಿನ್ನ ಗೋವುಗಳು ನಷ್ಟವಾಗದಿರಲಿ.”
04030008a ತಚ್ಚ್ರುತ್ವಾ ನೃಪತಿಃ ಸೇನಾಂ ಮತ್ಸ್ಯಾನಾಂ ಸಮಯೋಜಯತ್।
04030008c ರಥನಾಗಾಶ್ವಕಲಿಲಾಂ ಪತ್ತಿಧ್ವಜಸಮಾಕುಲಾಂ।।
ಅದನ್ನು ಕೇಳಿ ದೊರೆಯು ರಥ, ಆನೆ, ಕುದುರೆಗಳಿಂದಲೂ ಪದಾತಿ ಧ್ವಜಗಳಿಂದಲೂ ತುಂಬಿದ ಮತ್ಸ್ಯಸೇನೆಯನ್ನು ಸಜ್ಜುಗೊಳಿಸಿದನು.
04030009a ರಾಜಾನೋ ರಾಜಪುತ್ರಾಶ್ಚ ತನುತ್ರಾಣ್ಯತ್ರ ಭೇಜಿರೇ।
04030009c ಭಾನುಮಂತಿ ವಿಚಿತ್ರಾಣಿ ಸೂಪಸೇವ್ಯಾನಿ ಭಾಗಶಃ।।
ರಾಜರು ಮತ್ತು ರಾಜಪುತ್ರರು ಪ್ರಕಾಶಮಾನವೂ ಸುಂದರವೂ ಧರಿಸಲು ಯೋಗ್ಯವೂ ಆದ ಕವಚಗಳನ್ನು ಸ್ಥಾನೋಚಿತವಾಗಿ ಧರಿಸಿದರು.
04030010a ಸವಜ್ರಾಯಸಗರ್ಭಂ ತು ಕವಚಂ ತಪ್ತಕಾಂಚನಂ।
04030010c ವಿರಾಟಸ್ಯ ಪ್ರಿಯೋ ಭ್ರಾತಾ ಶತಾನೀಕೋಽಭ್ಯಹಾರಯತ್।।
ವಿರಾಟನ ಪ್ರಿಯ ಸೋದರ ಶತಾನೀಕನು ವಜ್ರಸಹಿತವಾದ ಉಕ್ಕಿನ ಒಳಭಾಗವನ್ನುಳ್ಳ ಪುಟವಿಟ್ಟ ಚಿನ್ನದ ಕವಚವನ್ನು ಧರಿಸಿದನು.
04030011a ಸರ್ವಪಾರಸವಂ ವರ್ಮ ಕಲ್ಯಾಣಪಟಲಂ ದೃಢಂ।
04030011c ಶತಾನೀಕಾದವರಜೋ ಮದಿರಾಶ್ವೋಽಭ್ಯಹಾರಯತ್।।
ಶತಾನೀಕನ ತಮ್ಮ ಮದಿರಾಶ್ವನು ಸುಂದರ ಹೊದಿಕೆಯನ್ನುಳ್ಳ, ಪೂರ್ತಿಯಾಗಿ ಉಕ್ಕಿನಿಂದ ಮಾಡಿದ್ದ ಗಟ್ಟಿ ಕವಚವನ್ನು ಧರಿಸಿದನು.
04030012a ಶತಸೂರ್ಯಂ ಶತಾವರ್ತಂ ಶತಬಿಂದು ಶತಾಕ್ಷಿಮತ್।
04030012c ಅಭೇದ್ಯಕಲ್ಪಂ ಮತ್ಸ್ಯಾನಾಂ ರಾಜಾ ಕವಚಮಾಹರತ್।।
ಮತ್ಸ್ಯರಾಜನು ನೂರು ಸೂರ್ಯ, ನೂರು ಸುಳಿ, ನೂರು ಚುಕ್ಕಿ, ಮತ್ತು ನೂರು ಕಣ್ಣಿನ ಆಕೃತಿಗಳಿಂದ ಕೂಡಿದ ಅಭೇದ್ಯ ಕವಚವನ್ನು ಧರಿಸಿದನು.
04030013a ಉತ್ಸೇಧೇ ಯಸ್ಯ ಪದ್ಮಾನಿ ಶತಂ ಸೌಗಂಧಿಕಾನಿ ಚ।
04030013c ಸುವರ್ಣಪೃಷ್ಠಂ ಸೂರ್ಯಾಭಂ ಸೂರ್ಯದತ್ತೋಽಭ್ಯಹಾರಯತ್।।
ಉಬ್ಬಿದ ಭಾಗದಲ್ಲಿ ನೂರು ಸೌಗಂಧಿಕ ಕಮಲಪುಷ್ಪಗಳನ್ನು ಹೊಂದಿದ್ದ, ಸುವರ್ಣ ಖಚಿತವೂ ಸೂರ್ಯಸಮಾನವೂ ಆದ ಕವಚವನ್ನು ಸೂರ್ಯದತ್ತನು ತೊಟ್ಟನು.
04030014a ದೃಢಮಾಯಸಗರ್ಭಂ ತು ಶ್ವೇತಂ ವರ್ಮ ಶತಾಕ್ಷಿಮತ್।
04030014c ವಿರಾಟಸ್ಯ ಸುತೋ ಜ್ಯೇಷ್ಠೋ ವೀರಃ ಶಂಖೋಽಭ್ಯಹಾರಯತ್।।
ವಿರಾಟನ ಹಿರಿಯ ಮಗ ವೀರ ಶಂಖನು ದೃಢವೂ, ಉಕ್ಕಿನಿಂದ ನಿರ್ಮಿತವೂ, ನೂರು ಕಣ್ಣುಗಳುಳ್ಳದ್ದೂ ಆದ ಬಿಳಿಯ ಕವಚವನ್ನು ತೊಟ್ಟನು.
04030015a ಶತಶಶ್ಚ ತನುತ್ರಾಣಿ ಯಥಾಸ್ವಾನಿ ಮಹಾರಥಾಃ।
04030015c ಯೋತ್ಸ್ಯಮಾನಾಭ್ಯನಹ್ಯಂತ ದೇವರೂಪಾಃ ಪ್ರಹಾರಿಣಃ।।
ಹೀಗೆ ಆ ನೂರಾರು ದೇವಸದೃಶ ಮಹಾರಥಿ ಯೋಧರು ಯುದ್ಧೋತ್ಸಾಹವುಳ್ಳವರಾಗಿ ತಮತಮಗೆ ತಕ್ಕ ಕವಚಗಳನ್ನು ತೊಟ್ಟರು.
04030016a ಸೂಪಸ್ಕರೇಷು ಶುಭ್ರೇಷು ಮಹತ್ಸು ಚ ಮಹಾರಥಾಃ।
04030016c ಪೃಥಕ್ಕಾಂಚನಸಂನಾಹಾನ್ರಥೇಷ್ವಶ್ವಾನಯೋಜಯನ್।।
ಆ ಮಹಾರಥರು ಯುದ್ಧ ಸಾಮಗ್ರಿಗಳಿಂದ ತುಂಬಿದ ಶುಭ್ರ, ಶ್ರೇಷ್ಠ ರಥಗಳಿಗೆ ಚಿನ್ನದ ಕವಚಗಳ ಕುದುರೆಗಳನ್ನು ಹೂಡಿದರು.
04030017a ಸೂರ್ಯಚಂದ್ರಪ್ರತೀಕಾಶೋ ರಥೇ ದಿವ್ಯೇ ಹಿರಣ್ಮಯಃ।
04030017c ಮಹಾನುಭಾವೋ ಮತ್ಸ್ಯಸ್ಯ ಧ್ವಜ ಉಚ್ಛಿಶ್ರಿಯೇ ತದಾ।।
ಆಗ ವಿರಾಟನ ದಿವ್ಯ ರಥದ ಮೇಲೆ ಸೂರ್ಯ-ಚಂದ್ರ ಸಮಾನ ಶ್ರೇಷ್ಠ ಚಿನ್ನದ ಬಾವುಟವನ್ನು ಹಾರಿಸಲಾಯಿತು.
04030018a ಅಥಾನ್ಯಾನ್ವಿವಿಧಾಕಾರಾನ್ಧ್ವಜಾನ್ ಹೇಮವಿಭೂಷಿತಾನ್।
04030018c ಯಥಾಸ್ವಂ ಕ್ಷತ್ರಿಯಾಃ ಶೂರಾ ರಥೇಷು ಸಮಯೋಜಯನ್।।
ಬಳಿಕ ಆ ಕ್ಷತ್ರಿಯ ಶೂರರು ಚಿನ್ನದಿಂದ ಅಲಂಕೃತವಾದ ವಿವಿಧಾಕಾರಗಳ ಇತರ ತಮ್ಮ ತಮ್ಮ ಬಾವುಟಗಳನ್ನು ರಥಗಳ ಮೇಲೆ ಕಟ್ಟಿದರು.
04030019a ಅಥ ಮತ್ಸ್ಯೋಽಬ್ರವೀದ್ರಾಜಾ ಶತಾನೀಕಂ ಜಘನ್ಯಜಂ।
04030019c ಕಂಕಬಲ್ಲವಗೋಪಾಲಾ ದಾಮಗ್ರನ್ಥಿಶ್ಚ ವೀರ್ಯವಾನ್।
04030019e ಯುಧ್ಯೇಯುರಿತಿ ಮೇ ಬುದ್ಧಿರ್ವರ್ತತೇ ನಾತ್ರ ಸಂಶಯಃ।।
ಅನಂತರ ಮತ್ಸ್ಯರಾಜನು ತಮ್ಮ ಶತಾನೀಕನಿಗೆ ಹೇಳಿದನು: “ಕಂಕ, ವಲ್ಲವ, ಗೋಪಾಲ, ವೀರ್ಯವಂತ ದಾಮಗ್ರಂಥಿ ಇವರೂ ಕೂಡ ಯುದ್ಧಮಾಡುವವರೆಂದು ನನ್ನ ಬುದ್ಧಿಗೆ ತೋರುತ್ತದೆ. ಇದರಲ್ಲಿ ಸಂಶಯವಿಲ್ಲ.
04030020a ಏತೇಷಾಮಪಿ ದೀಯಂತಾಂ ರಥಾ ಧ್ವಜಪತಾಕಿನಃ।
04030020c ಕವಚಾನಿ ವಿಚಿತ್ರಾಣಿ ದೃಢಾನಿ ಚ ಮೃದೂನಿ ಚ।
04030020e ಪ್ರತಿಮುಂಚಂತು ಗಾತ್ರೇಷು ದೀಯಂತಾಮಾಯುಧಾನಿ ಚ।।
ಧ್ವಜಪತಾಕೆಗಳಿಂದ ಕೂಡಿದ ರಥಗಳನ್ನು ಅವರಿಗೂ ಕೊಡು. ಸುಂದರವೂ ದೃಢವೂ ಮೃದುವೂ ಆದ ಕವಚಗಳನ್ನು ಅವರು ಶರೀರಗಳಲ್ಲಿ ಧರಿಸಿಕೊಳ್ಳಲಿ. ಅವರಿಗೆ ಆಯುಧಗಳನ್ನೂ ಕೊಡು.
04030021a ವೀರಾಂಗರೂಪಾಃ ಪುರುಷಾ ನಾಗರಾಜಕರೋಪಮಾಃ।
04030021c ನೇಮೇ ಜಾತು ನ ಯುಧ್ಯೇರನ್ನಿತಿ ಮೇ ಧೀಯತೇ ಮತಿಃ।।
ವೀರೋಚಿತವಾದ ಅಂಗ ಮತ್ತು ರೂಪವುಳ್ಳವರೂ, ಗಜರಾಜನ ಸೊಂಡಿಲಿನಂತಹ ತೋಳುಗಳುಳ್ಳವರೂ ಆದ ಆ ಪುರುಷರು ಯುದ್ಧಮಾಡಲಾರರೆಂದು ನನ್ನ ಬುದ್ಧಿಗೆ ತೋರುವುದಿಲ್ಲ.”
04030022a ಏತಚ್ಚ್ರುತ್ವಾ ತು ನೃಪತೇರ್ವಾಕ್ಯಂ ತ್ವರಿತಮಾನಸಃ।
04030022c ಶತಾನೀಕಸ್ತು ಪಾರ್ಥೇಭ್ಯೋ ರಥಾನ್ರಾಜನ್ಸಮಾದಿಶತ್।
04030022e ಸಹದೇವಾಯ ರಾಜ್ಞೇ ಚ ಭೀಮಾಯ ನಕುಲಾಯ ಚ।। ।
ರಾಜ! ದೊರೆಯ ಆ ಮಾತನ್ನು ಕೇಳಿದ ಶೀಘ್ರಬುದ್ಧಿ ಶತಾನೀಕನು ಪಾಂಡವರಿಗೆ - ಸಹದೇವ, ರಾಜ ಯುಧಿಷ್ಠಿರ, ಭೀಮ ಮತ್ತು ನಕುಲರಿಗೆ ರಥಗಳನ್ನು ಕೊಡುವಂತೆ ಆಜ್ಞಾಪಿಸಿದನು.
04030023a ತಾನ್ಪ್ರಹೃಷ್ಟಾಸ್ತತಃ ಸೂತಾ ರಾಜಭಕ್ತಿಪುರಸ್ಕೃತಾಃ।
04030023c ನಿರ್ದಿಷ್ಟಾನ್ನರದೇವೇನ ರಥಾಂ ಶೀಘ್ರಮಯೋಜಯನ್।।
ಬಳಿಕ ಸೂತರು ಹರ್ಷಿತರಾಗಿ, ರಾಜಭಕ್ತಿಪುರಸ್ಸರವಾಗಿ, ದೊರೆಯು ನಿರ್ದಿಷ್ಟಪಡಿಸಿದ ರಥಗಳನ್ನು ಬೇಗ ಸಜ್ಜುಗೊಳಿಸಿದರು.
04030024a ಕವಚಾನಿ ವಿಚಿತ್ರಾಣಿ ದೃಢಾನಿ ಚ ಮೃದೂನಿ ಚ।
04030024c ವಿರಾಟಃ ಪ್ರಾದಿಶದ್ಯಾನಿ ತೇಷಾಮಕ್ಲಿಷ್ಟಕರ್ಮಣಾಂ।
04030024e ತಾನ್ಯಾಮುಚ್ಯ ಶರೀರೇಷು ದಂಶಿತಾಸ್ತೇ ಪರಂತಪಾಃ।।
ಸುಂದರವೂ ದೃಢವೂ ಮೃದುವೂ ಆದ ಕವಚಗಳನ್ನು ಅನಾಯಾಸವಾಗಿ ಕೆಲಸಮಾಡಬಲ್ಲಂಥ ಆ ಪಾಂಡವರಿಗೆ ಕೊಡುವಂತೆ ವಿರಾಟನು ಅಪ್ಪಣೆ ಮಾಡಿದನು. ಅವುಗಳನ್ನು ಬಿಚ್ಚಿ ಆ ಶತ್ರುನಾಶಕರ ಮೈಗಳಿಗೆ ತೊಡಿಸಲಾಯಿತು.
04030025a ತರಸ್ವಿನಶ್ಚನ್ನರೂಪಾಃ ಸರ್ವೇ ಯುದ್ಧವಿಶಾರದಾಃ।
04030025c ವಿರಾಟಮನ್ವಯುಃ ಪಶ್ಚಾತ್ಸಹಿತಾಃ ಕುರುಪುಂಗವಾಃ।
04030025e ಚತ್ವಾರೋ ಭ್ರಾತರಃ ಶೂರಾಃ ಪಾಂಡವಾಃ ಸತ್ಯವಿಕ್ರಮಾಃ।।
ವೇಷ ಮರೆಸಿಕೊಂಡವರೂ, ಶಕ್ತರೂ, ಯುದ್ಧವಿಶಾರದರೂ, ಕುರುಶ್ರೇಷ್ಠರೂ, ಶೂರರೂ, ಸತ್ಯವಿಕ್ರಮರೂ ಆದ ಆ ಎಲ್ಲ ನಾಲ್ವರು ಪಾಂಡವ ಸಹೋದರರು ಒಟ್ಟಿಗೆ ವಿರಾಟನನ್ನು ಹಿಂಬಾಲಿಸಿದರು.
04030026a ಭೀಮಾಶ್ಚ ಮತ್ತಮಾತಂಗಾಃ ಪ್ರಭಿನ್ನಕರಟಾಮುಖಾಃ।
04030026c ಕ್ಷರಂತ ಇವ ಜೀಮೂತಾಃ ಸುದಂತಾಃ ಷಷ್ಟಿಹಾಯನಾಃ।।
04030027a ಸ್ವಾರೂಢಾ ಯುದ್ಧಕುಶಲೈಃ ಶಿಕ್ಷಿತೈರ್ಹಸ್ತಿಸಾದಿಭಿಃ।
04030027c ರಾಜಾನಮನ್ವಯುಃ ಪಶ್ಚಾಚ್ಚಲಂತ ಇವ ಪರ್ವತಾಃ।।
ಆಮೇಲೆ, ಭಯಂಕರವಾದ, ಒಳ್ಳೆಯ ದಂತಗಳನ್ನುಳ್ಳ, ಅರುವತ್ತು ವರ್ಷ ತುಂಬಿದ, ಒಡೆದ ಕಪೋಲಗಳ ಮದ್ದಾನೆಗಳು ಮೋಡಗಳಂತೆ ಮದೋದಕವನ್ನು ಸುರಿಸುತ್ತ ತಮ್ಮ ಮೇಲೇರಿದ ಯುದ್ಧಕುಶಲರಿಂದಲೂ ಸುಶಿಕ್ಷಿತರಾದ ಮಾವಟಿಗರಿಂದಲೂ ಕೂಡಿ ಚಲಿಸುವ ಪರ್ವತಗಳಂತೆ ರಾಜನನ್ನು ಅನುಸರಿಸಿದವು.
04030028a ವಿಶಾರದಾನಾಂ ವಶ್ಯಾನಾಂ ಹೃಷ್ಟಾನಾಂ ಚಾನುಯಾಯಿನಾಂ।
04030028c ಅಷ್ಟೌ ರಥಸಹಸ್ರಾಣಿ ದಶ ನಾಗಶತಾನಿ ಚ।
04030028e ಷಷ್ಟಿಶ್ಚಾಶ್ವಸಹಸ್ರಾಣಿ ಮತ್ಸ್ಯಾನಾಮಭಿನಿರ್ಯಯುಃ।।
ವಿಶಾರದರೂ, ವಿಧೇಯರೂ, ಸಂತುಷ್ಟರೂ ಆದ ಮತ್ಸ್ಯನ ಅನುಯಾಯಿಗಳಿಗೆ ಸೇರಿದ ಎಂಟುಸಾವಿರ ರಥಗಳೂ, ಒಂದು ಸಾವಿರ ಆನೆಗಳೂ, ಅರವತ್ತು ಸಾವಿರ ಕುದುರೆಗಳೂ ಹಿಂದೆ ಸಾಗಿದವು.
04030029a ತದನೀಕಂ ವಿರಾಟಸ್ಯ ಶುಶುಭೇ ಭರತರ್ಷಭ।
04030029c ಸಂಪ್ರಯಾತಂ ಮಹಾರಾಜ ನಿನೀಷಂತಂ ಗವಾಂ ಪದಂ।।
ಭರತರ್ಷಭ! ಮಹಾರಾಜ! ಗೋವುಗಳ ಹೆಜ್ಜೆಗಳನ್ನು ಅನುಸರಿಸುತ್ತಾ ಸಾಗುತ್ತಿದ್ದ ವಿರಾಟನ ಆ ಸೈನ್ಯವು ಶೋಭಿಸುತ್ತಿತ್ತು.
04030030a ತದ್ಬಲಾಗ್ರ್ಯಂ ವಿರಾಟಸ್ಯ ಸಂಪ್ರಸ್ಥಿತಮಶೋಭತ।
04030030c ದೃಢಾಯುಧಜನಾಕೀರ್ಣಂ ಗಜಾಶ್ವರಥಸಂಕುಲಂ।।
ಮುಂದೆ ಸಾಗುತ್ತಿದ್ದ ವಿರಾಟನ ಆ ಶ್ರೇಷ್ಠ ಸೈನ್ಯವು ದೃಢ ಆಯುಧಗಳನ್ನು ಹಿಡಿದ ಜನರಿಂದಲೂ ಆನೆ ಕುದುರೆ ರಥಗಳಿಂದಲೂ ತುಂಬಿ ಕಂಗೊಳಿಸುತ್ತಿತ್ತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ದಕ್ಷಿಣಗೋಗ್ರಹೇ ಮತ್ಸ್ಯರಾಜರಣೋದ್ಯೋಗೇ ತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ದಕ್ಷಿಣಗೋಗ್ರಹದಲ್ಲಿ ಮತ್ಸ್ಯರಾಜರಣೋದ್ಯೋಗದಲ್ಲಿ ಮೂವತ್ತನೆಯ ಅಧ್ಯಾಯವು.