ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ವಿರಾಟ ಪರ್ವ
ಗೋಹರಣ ಪರ್ವ
ಅಧ್ಯಾಯ 29
ಸಾರ
ಹಿಂದೆ ಅನೇಕಸಲ ಕೀಚಕನಿಂದ ಪರಾಜಿತಗೊಂಡಿದ್ದ ತ್ರಿಗರ್ತರ ರಾಜ ಸುಶರ್ಮನು ಮತ್ಸ್ಯರ ಗೋವುಗಳನ್ನು ಅಪಹರಿಸಿ ಯುದ್ಧದಲ್ಲಿ ಅವರನ್ನು ಸೋಲಿಸಬೇಕೆಂದು ಸೂಚಿಸುವುದು (1-13). ಕರ್ಣನು ಆ ಸೂಚನೆಯನ್ನು ಅನುಮೋದಿಸಿದುದು (14-19). ಕೌರವ ಸೇನೆಯ ಸಿದ್ಧತೆ, ಸುಶರ್ಮನು ಆಗ್ನೇಯದಿಕ್ಕಿನಿಂದ ವಿರಾಟನ ಗೋವುಗಳನ್ನು ಹಿಡಿದುದು (20-28).
04029001 ವೈಶಂಪಾಯನ ಉವಾಚ।
04029001a ಅಥ ರಾಜಾ ತ್ರಿಗರ್ತಾನಾಂ ಸುಶರ್ಮಾ ರಥಯೂಥಪಃ।
04029001c ಪ್ರಾಪ್ತಕಾಲಮಿದಂ ವಾಕ್ಯಮುವಾಚ ತ್ವರಿತೋ ಭೃಶಂ।।
04029002a ಅಸಕೃನ್ನಿಕೃತಃ ಪೂರ್ವಂ ಮತ್ಸ್ಯೈಃ ಸಾಲ್ವೇಯಕೈಃ ಸಹ।
04029002c ಸೂತೇನ ಚೈವ ಮತ್ಸ್ಯಸ್ಯ ಕೀಚಕೇನ ಪುನಃ ಪುನಃ।।
04029003a ಬಾಧಿತೋ ಬಂಧುಭಿಃ ಸಾರ್ಧಂ ಬಲಾದ್ಬವತಾ ವಿಭೋ।
04029003c ಸ ಕರ್ಣಮಭ್ಯುದೀಕ್ಷ್ಯಾಥ ದುರ್ಯೋಧನಮಭಾಷತ।।
ವೈಶಂಪಾಯನನು ಹೇಳಿದನು: “ಪ್ರಭೋ! ಹಿಂದೆ ಮತ್ಸ್ಯರಿಂದಲೂ ಸಾಲ್ವೀಯಕರಿಂದಲೂ ಕೂಡಿದ ಮತ್ಸ್ಯರಾಜನ ಸೂತ ಕೀಚಕನಿಂದ ಮತ್ತೆ ಮತ್ತೆ ಅನೇಕ ಸಲ ಪರಾಜಿತನಾಗಿದ್ದ ತ್ರಿಗರ್ತರ ರಾಜನೂ ರಥಸಮೂಹದ ಒಡೆಯನೂ ತನ್ನ ಬಂಧುಗಳೊಡನೆ ಆ ಬಲಶಾಲಿಯಿಂದ ಉಗ್ರವಾಗಿ ಬಾಧಿತನಾಗಿದ್ದವನೂ ಆದ ಸುಶರ್ಮನು ಕರ್ಣನನ್ನು ಕಣ್ಣೆತ್ತಿ ನೋಡಿ, ಆಗ ಈ ಅನೇಕ ಕಾಲೋಚಿತ ಮಾತುಗಳನ್ನು ಅವಸರವಾಗಿ ದುರ್ಯೊಧನನಿಗೆ ಹೇಳಿದನು:
04029004a ಅಸಕೃನ್ಮತ್ಸ್ಯರಾಜ್ಞಾ ಮೇ ರಾಷ್ಟ್ರಂ ಬಾಧಿತಂ ಓಜಸಾ।
04029004c ಪ್ರಣೇತಾ ಕೀಚಕಶ್ಚಾಸ್ಯ ಬಲವಾನಭವತ್ಪುರಾ।।
“ನನ್ನ ರಾಷ್ಟ್ರವು ಮತ್ಸ್ಯರಾಜನ ಶಕ್ತಿಯಿಂದ ಎಷ್ಟೋ ಸಲ ಬಾಧಿತವಾಗಿದೆ. ಬಲಶಾಲಿಯಾದ ಕೀಚಕನು ಹಿಂದೆ ಅವನ ಸೇನಾಪತಿಯಾಗಿದ್ದನು.
04029005a ಕ್ರೂರೋಽಮರ್ಷೀ ಸ ದುಷ್ಟಾತ್ಮಾ ಭುವಿ ಪ್ರಖ್ಯಾತವಿಕ್ರಮಃ।
04029005c ನಿಹತಸ್ತತ್ರ ಗಂಧರ್ವೈಃ ಪಾಪಕರ್ಮಾ ನೃಶಂಸವಾನ್।।
ಕ್ರೂರಿಯೂ ಕೋಪಿಯೂ ದುಷ್ಟಾತ್ಮನೂ ಲೋಕದಲ್ಲಿ ಪ್ರಖ್ಯಾತ ಪರಾಕ್ರಮವುಳ್ಳವನೂ ಪಾಪಕರ್ಮನೂ ನಿರ್ದಯನೂ ಆದ ಆ ಕೀಚಕನು ಅಲ್ಲಿ ಗಂಧರ್ವರಿಂದ ಹತನಾಗಿದ್ದಾನೆ.
04029006a ತಸ್ಮಿಂಶ್ಚ ನಿಹತೇ ರಾಜನ್ ಹೀನದರ್ಪೋ ನಿರಾಶ್ರಯಃ।
04029006c ಭವಿಷ್ಯತಿ ನಿರುತ್ಸಾಹೋ ವಿರಾಟ ಇತಿ ಮೇ ಮತಿಃ।।
ರಾಜ! ಅವನು ಹತನಾಗಲು ದರ್ಪಹೀನನೂ ನಿರಾಶ್ರಯನೂ ಆದ ವಿರಾಟನು ನಿರುತ್ಸಾಹಗೊಂಡಿದ್ದಾನೆ ಎಂದು ನನ್ನ ಅನಿಸಿಕೆ.
04029007a ತತ್ರ ಯಾತ್ರಾ ಮಮ ಮತಾ ಯದಿ ತೇ ರೋಚತೇಽನಘ।
04029007c ಕೌರವಾಣಾಂ ಚ ಸರ್ವೇಷಾಂ ಕರ್ಣಸ್ಯ ಚ ಮಹಾತ್ಮನಃ।।
ಪಾಪರಹಿತನೇ! ನಿನಗೆ, ಎಲ್ಲ ಕೌರವರಿಗೂ, ಮಹಾತ್ಮನಾದ ಕರ್ಣನಿಗೂ ಇಷ್ಟವಾಗುವುದಾದರೆ ಅಲ್ಲಿಗೆ ದಾಳಿ ಮಾಡಬೇಕೆಂದು ನನ್ನ ಅಭಿಪ್ರಾಯ.
04029008a ಏತತ್ಪ್ರಾಪ್ತಮಹಂ ಮನ್ಯೇ ಕಾರ್ಯಮಾತ್ಯಯಿಕಂ ಹಿತಂ।
04029008c ರಾಷ್ಟ್ರಂ ತಸ್ಯಾಭಿಯಾತ್ವಾಶು ಬಹುಧಾನ್ಯಸಮಾಕುಲಂ।।
ತುರ್ತಾದ ನಮಗೆ ಹಿತಕರವಾದ ಕಾರ್ಯವೀಗ ಒದಗಿದೆಯೆಂದು ಭಾವಿಸುತ್ತೇನೆ. ಬಹುಧಾನ್ಯಭರಿತವಾದ ಅವನ ದೇಶಕ್ಕೆ ಕೂಡಲೇ ಹೋಗೋಣ.
04029009a ಆದದಾಮೋಽಸ್ಯ ರತ್ನಾನಿ ವಿವಿಧಾನಿ ವಸೂನಿ ಚ।
04029009c ಗ್ರಾಮಾನ್ರಾಷ್ಟ್ರಾಣಿ ವಾ ತಸ್ಯ ಹರಿಷ್ಯಾಮೋ ವಿಭಾಗಶಃ।।
ಅವನ ರತ್ನಗಳನ್ನೂ, ವಿವಿಧ ಸಂಪತ್ತನ್ನೂ ವಶಪಡಿಸಿಕೊಳ್ಳೋಣ. ಅವನ ಗ್ರಾಮಗಳನ್ನೂ ರಾಷ್ಟ್ರಗಳನ್ನೂ ಒಂದೊಂದಾಗಿ ತೆಗೆದುಕೊಳ್ಳೋಣ.
04029010a ಅಥ ವಾ ಗೋಸಹಸ್ರಾಣಿ ಬಹೂನಿ ಚ ಶುಭಾನಿ ಚ।
04029010c ವಿವಿಧಾನಿ ಹರಿಷ್ಯಾಮಃ ಪ್ರತಿಪೀಡ್ಯ ಪುರಂ ಬಲಾತ್।।
ಅಥವಾ ಅವನ ಪುರವನ್ನು ಬಲಾತ್ಕಾರದಿಂದ ಹಾಳುಗೆಡವಿ ವಿವಿಧ ಜಾತಿಯ ಅನೇಕ ಸಾವಿರ ಶ್ರೇಷ್ಠ ಗೋವುಗಳನ್ನು ಅಪಹರಿಸೋಣ.
04029011a ಕೌರವೈಃ ಸಹ ಸಂಗಮ್ಯ ತ್ರಿಗರ್ತೈಶ್ಚ ವಿಶಾಂ ಪತೇ।
04029011c ಗಾಸ್ತಸ್ಯಾಪಹರಾಮಾಶು ಸಹ ಸರ್ವೈಃ ಸುಸಂಹತಾಃ।।
ರಾಜ! ಕೌರವರೂ ತ್ರಿಗರ್ತರೂ ಎಲ್ಲರೂ ಒಟ್ಟಾಗಿ ಸೇರಿ ಅವನ ಗೋವುಗಳನ್ನು ಬೇಗ ಅಪಹರಿಸೋಣ.
04029012a ಸಂಧಿಂ ವಾ ತೇನ ಕೃತ್ವಾ ತು ನಿಬಧ್ನೀಮೋಽಸ್ಯ ಪೌರುಷಂ।
04029012c ಹತ್ವಾ ಚಾಸ್ಯ ಚಮೂಂ ಕೃತ್ಸ್ನಾಂ ವಶಮನ್ವಾನಯಾಮಹೇ।।
ಅವನೊಂದಿಗೆ ಸಂಧಿ ಮಾಡಿಕೊಂಡು ಅವನ ಪೌರುಷವನ್ನು ತಡೆಯೋಣ ಅಥವಾ ಅವನ ಸೈನ್ಯವನ್ನು ಸಂಪೂರ್ಣವಾಗಿ ನಾಶಮಾಡಿ ಅವನನ್ನು ವಶಪಡಿಸಿಕೊಳ್ಳೋಣ.
04029013a ತಂ ವಶೇ ನ್ಯಾಯತಃ ಕೃತ್ವಾ ಸುಖಂ ವತ್ಸ್ಯಾಮಹೇ ವಯಂ।
04029013c ಭವತೋ ಬಲವೃದ್ಧಿಶ್ಚ ಭವಿಷ್ಯತಿ ನ ಸಂಶಯಃ।।
ನ್ಯಾಯಮರ್ಗದಿಂದ ಅವನನ್ನು ವಶಮಾಡಿಕೊಂಡು ನಾವು ಸುಖವಾಗಿ ಇರೋಣ; ನಿಸ್ಸಂಶಯವಾಗಿ ನಿನ್ನ ಬಲವೂ ಹೆಚ್ಚುತ್ತದೆ.”
04029014a ತಚ್ಚ್ರುತ್ವಾ ವಚನಂ ತಸ್ಯ ಕರ್ಣೋ ರಾಜಾನಮಬ್ರವೀತ್।
04029014c ಸೂಕ್ತಂ ಸುಶರ್ಮಣಾ ವಾಕ್ಯಂ ಪ್ರಾಪ್ತಕಾಲಂ ಹಿತಂ ಚ ನಃ।।
ಅವನ ಮಾತನ್ನು ಕೇಳಿ ಕರ್ಣನು ದೊರೆಗೆ ಹೇಳಿದನು: “ಸುಶರ್ಮನು ಕಾಲೋಚಿತವೂ ನಮಗೆ ಹಿತಕರವೂ ಆದ ಮಾತನ್ನು ಚೆನ್ನಾಗಿ ಆಡಿದ್ದಾನೆ.
04029015a ತಸ್ಮಾತ್ಕ್ಷಿಪ್ರಂ ವಿನಿರ್ಯಾಮೋ ಯೋಜಯಿತ್ವಾ ವರೂಥಿನೀಂ।
04029015c ವಿಭಜ್ಯ ಚಾಪ್ಯನೀಕಾನಿ ಯಥಾ ವಾ ಮನ್ಯಸೇಽನಘ।।
ಆದ್ದರಿಂದ ಪಾಪರಹಿತನೇ! ಸೈನ್ಯವನ್ನು ಯೋಜಿಸಿ, ವಿಭಾಗಿಸಿ, ಶೀಘ್ರವಾಗಿ ಹೊರಡೋಣ. ಅಥವಾ ನಿನ್ನ ಅಭಿಪ್ರಾಯದಂತೆ ಆಗಲಿ.
04029016a ಪ್ರಜ್ಞಾವಾನ್ಕುರುವೃದ್ಧೋಽಯಂ ಸರ್ವೇಷಾಂ ನಃ ಪಿತಾಮಹಃ।
04029016c ಆಚಾರ್ಯಶ್ಚ ತಥಾ ದ್ರೋಣಃ ಕೃಪಃ ಶಾರದ್ವತಸ್ತಥಾ।।
04029017a ಮನ್ಯಂತೇ ತೇ ಯಥಾ ಸರ್ವೇ ತಥಾ ಯಾತ್ರಾ ವಿಧೀಯತಾಂ।
04029017c ಸಮ್ಮಂತ್ರ್ಯ ಚಾಶು ಗಚ್ಛಾಮಃ ಸಾಧನಾರ್ಥಂ ಮಹೀಪತೇಃ।।
ನಮ್ಮೆಲ್ಲರ ಪಿತಾಮಹ ಈ ಪ್ರಜ್ಞಾವಂತ ಕುರುವೃದ್ಧ, ಅಂತೆಯೇ ಆಚಾರ್ಯ ದ್ರೊಣ, ಶಾರದ್ವತ ಕೃಪ - ಇವರೆಲ್ಲ ಆಲೋಚಿಸುವ ಹಾಗೆ ದಾಳಿ ನಡೆಯಲಿ. ಇವರೊಡನೆ ಮಂತ್ರಾಲೋಚನೆ ಮಾಡಿ ದೊರೆಯ ಗುರಿ ಸಾಧಿಸುವುದಕ್ಕೆ ಬೇಗ ಹೋಗೋಣ.
04029018a ಕಿಂ ಚ ನಃ ಪಾಂಡವೈಃ ಕಾರ್ಯಂ ಹೀನಾರ್ಥಬಲಪೌರುಷೈಃ।
04029018c ಅತ್ಯರ್ಥಂ ವಾ ಪ್ರನಷ್ಟಾಸ್ತೇ ಪ್ರಾಪ್ತಾ ವಾಪಿ ಯಮಕ್ಷಯಂ।।
ಅರ್ಥ, ಬಲ, ಪೌರುಷಗಳಿಲ್ಲದ ಪಾಂಡವರೊಡನೆ ನಮಗೇನು ಕೆಲಸ? ಅವರು ಸಂಪೂರ್ಣವಾಗಿ ಹಾಳಾಗಿದ್ದಾರೆ ಅಥವಾ ಯಮಸದನವನ್ನು ಸೇರಿದ್ದಾರೆ.
04029019a ಯಾಮೋ ರಾಜನ್ನನುದ್ವಿಗ್ನಾ ವಿರಾಟವಿಷಯಂ ವಯಂ।
04029019c ಆದಾಸ್ಯಾಮೋ ಹಿ ಗಾಸ್ತಸ್ಯ ವಿವಿಧಾನಿ ವಸೂನಿ ಚ।।
ರಾಜ! ನಾವು ನಿರ್ಭಯನಾಗಿ ವಿರಾಟನ ದೇಶಕ್ಕೆ ಹೋಗೋಣ. ಅವನ ಗೋವುಗಳನ್ನೂ ವಿವಿಧ ಸಂಪತ್ತನ್ನೂ ತೆಗೆದುಕೊಳ್ಳೋಣ.”
04029020a ತತೋ ದುರ್ಯೋಧನೋ ರಾಜಾ ವಾಕ್ಯಮಾದಾಯ ತಸ್ಯ ತತ್।
04029020c ವೈಕರ್ತನಸ್ಯ ಕರ್ಣಸ್ಯ ಕ್ಷಿಪ್ರಮಾಜ್ಞಾಪಯತ್ಸ್ವಯಂ।।
04029021a ಶಾಸನೇ ನಿತ್ಯಸಮ್ಯುಕ್ತಂ ದುಃಶಾಸನಮನಂತರಂ।
04029021c ಸಹ ವೃದ್ಧೈಸ್ತು ಸಮ್ಮಂತ್ರ್ಯ ಕ್ಷಿಪ್ರಂ ಯೋಜಯ ವಾಹಿನೀಂ।।
ಬಳಿಕ ರಾಜ ದುರ್ಯೊಧನನು ಸೂರ್ಯಪುತ್ರ ಕರ್ಣನ ಮಾತನ್ನು ಒಪ್ಪಿ ತನ್ನ ಆಜ್ಞೆಯನ್ನು ಯಾವಾಗಲೂ ಪಾಲಿಸುವ ತಮ್ಮ ದುಃಶಾಸನನಿಗೆ “ಹಿರಿಯರೊಡನೆ ಸಮಾಲೋಚಿಸಿ ಸೈನ್ಯವನ್ನು ಬೇಗ ಯೋಜಿಸು!” ಎಂದು ಸ್ವತಃ ಅಪ್ಪಣೆ ಮಾಡಿದನು.
04029022a ಯಥೋದ್ದೇಶಂ ಚ ಗಚ್ಛಾಮಃ ಸಹಿತಾಃ ಸರ್ವಕೌರವೈಃ।
04029022c ಸುಶರ್ಮಾ ತು ಯಥೋದ್ದಿಷ್ಟಂ ದೇಶಂ ಯಾತು ಮಹಾರಥಃ।।
04029023a ತ್ರಿಗರ್ತೈಃ ಸಹಿತೋ ರಾಜಾ ಸಮಗ್ರಬಲವಾಹನಃ।
04029023c ಪ್ರಾಗೇವ ಹಿ ಸುಸಂವೀತೋ ಮತ್ಸ್ಯಸ್ಯ ವಿಷಯಂ ಪ್ರತಿ।।
“ಎಲ್ಲ ಕೌರವರೊಡನೆ ಗೊತ್ತುಪಡಿಸಿದ ಸ್ಥಳಕ್ಕೆ ಹೋಗೋಣ. ಮಹಾರಥ ರಾಜ ಸುಶರ್ಮನು ಸಮಗ್ರ ಸೈನ್ಯ ಮತ್ತು ವಾಹನಸಮೇತನಾಗಿ ತ್ರಿಗರ್ತರೊಡನೆ ಕೂಡಿ ಮತ್ಸ್ಯನ ದೇಶಕ್ಕೆ ಮೊದಲೇ ಹೋಗಲಿ.
04029024a ಜಘನ್ಯತೋ ವಯಂ ತತ್ರ ಯಾಸ್ಯಾಮೋ ದಿವಸಾಂತರಂ।
04029024c ವಿಷಯಂ ಮತ್ಸ್ಯರಾಜಸ್ಯ ಸುಸಮೃದ್ಧಂ ಸುಸಂಹತಾಃ।।
ಅವನ ಹಿಂದೆ, ಮರುದಿವಸ ನಾವು ಒಗ್ಗಟ್ಟಾಗಿ ಮತ್ಸ್ಯರಾಜನ ಸುಸಮೃದ್ಧ ದೇಶಕ್ಕೆ ಹೋಗೋಣ.
04029025a ತೇ ಯಾತ್ವಾ ಸಹಸಾ ತತ್ರ ವಿರಾಟನಗರಂ ಪ್ರತಿ।
04029025c ಕ್ಷಿಪ್ರಂ ಗೋಪಾನ್ಸಮಾಸಾದ್ಯ ಗೃಹ್ಣಂತು ವಿಪುಲಂ ಧನಂ।।
ಅವರು ವಿರಾಟನಗರಕ್ಕೆ ಥಟ್ಟನೇ ಹೋಗಿ, ಬೇಗ ಗೋಪಾಲಕರನ್ನು ಆಕ್ರಮಿಸಿ ವಿಪುಲ ಗೋಧನವನ್ನು ಹಿಡಿಯಲಿ.
04029026a ಗವಾಂ ಶತಸಹಸ್ರಾಣಿ ಶ್ರೀಮಂತಿ ಗುಣವಂತಿ ಚ।
04029026c ವಯಮಪಿ ನಿಗೃಹ್ಣೀಮೋ ದ್ವಿಧಾ ಕೃತ್ವಾ ವರೂಥಿನೀಂ।।
ನಾವು ಕೂಡ ಸೈನ್ಯವನ್ನು ಎರಡು ಭಾಗ ಮಾಡಿಕೊಂಡು ಶುಭಲಕ್ಷಣ ಸಂಪನ್ನವೂ ಉತ್ತಮವೂ ಆದ ಶತ ಸಹಸ್ರ ಗೋವುಗಳನ್ನು ಹಿಡಿಯೋಣ.”
04029027a ಸ ಸ್ಮ ಗತ್ವಾ ಯಥೋದ್ದಿಷ್ಟಾಂ ದಿಶಂ ವಹ್ನೇರ್ಮಹೀಪತಿಃ।
04029027c ಆದತ್ತ ಗಾಃ ಸುಶರ್ಮಾಥ ಘರ್ಮಪಕ್ಷಸ್ಯ ಸಪ್ತಮೀಂ।।
ಅನಂತರ ದೊರೆ ಸುಶರ್ಮನು ಗೊತ್ತೊಪಡಿಸಿದಂತೆ ಕೃಷ್ಣಪಕ್ಷದ ಸಪ್ತಮಿಯಂದು ಆಗ್ನೇಯ ದಿಕ್ಕಿಗೆ ಹೋಗಿ ಗೋವುಗಳನ್ನು ಹಿಡಿದನು.
04029028a ಅಪರಂ ದಿವಸಂ ಸರ್ವೇ ರಾಜನ್ಸಂಭೂಯ ಕೌರವಾಃ।
04029028c ಅಷ್ಟಮ್ಯಾಂ ತಾನ್ಯಗೃಹ್ಣಂತ ಗೋಕುಲಾನಿ ಸಹಸ್ರಶಃ।।
ರಾಜ! ಮರುದಿವಸ ಅಷ್ಟಮಿಯಂದು ಕೌರವರೆಲ್ಲರೂ ಸೇರಿ ಆ ಸಾವಿರ ಸಾವಿರ ಗೋವುಗಳ ಹಿಂಡನ್ನು ಹಿಡಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ದಕ್ಷಿಣಗೋಗ್ರಹೇ ಏಕೋನತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ದಕ್ಷಿಣಗೋಗ್ರಹದಲ್ಲಿ ಇಪ್ಪತ್ತೊಂಭತ್ತನೆಯ ಅಧ್ಯಾಯವು.