027 ಭೀಷ್ಮವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ಗೋಹರಣ ಪರ್ವ

ಅಧ್ಯಾಯ 27

ಸಾರ

ಯುಧಿಷ್ಠಿರನಿರುವ ರಾಜ್ಯವು ಹೆಚ್ಚು ಅಭಿವೃದ್ಧಿಯನ್ನು ಹೊಂದಿರುತ್ತದೆಯೆಂದೂ (1-24), ಆದರೆ ಆ ಧರ್ಮಾತ್ಮನು ಬ್ರಾಹ್ಮಣರಿಗೂ ಕಾಣದಂತಾಗಿದ್ದಾನೆಂದು ಭೀಷ್ಮನು ಸೂಚಿಸಿದುದು (25-28).

04027001 ವೈಶಂಪಾಯನ ಉವಾಚ।
04027001a ತತಃ ಶಾಂತನವೋ ಭೀಷ್ಮೋ ಭರತಾನಾಂ ಪಿತಾಮಹಃ।
04027001c ಶ್ರುತವಾನ್ದೇಶಕಾಲಜ್ಞಸ್ತತ್ತ್ವಜ್ಞಃ ಸರ್ವಧರ್ಮವಿತ್।।
04027002a ಆಚಾರ್ಯವಾಕ್ಯೋಪರಮೇ ತದ್ವಾಕ್ಯಮಭಿಸಂದಧತ್।
04027002c ಹಿತಾರ್ಥಂ ಸ ಉವಾಚೇಮಾಂ ಭಾರತೀಂ ಭಾರತಾನ್ಪ್ರತಿ।।

ವೈಶಂಪಾಯನನು ಹೇಳಿದನು: “ಆಚಾರ್ಯನ ಮಾತು ನಿಂತ ಬಳಿಕ ಭರತರ ಪಿತಾಮಹ, ವೇದಪಾರಂಗತ, ದೇಶಕಾಲಜ್ಞ, ತತ್ತ್ವಜ್ಞ, ಸರ್ವಧರ್ಮಜ್ಞ, ಶಂತನುಪುತ್ರ ಭೀಷ್ಮನು ಅದಕ್ಕೆ ಒಪ್ಪಿಗೆ ಕೊಡುತ್ತ ಅವರ ಹಿತಾರ್ಥವಾಗಿ ಭಾರತರನ್ನು ಕುರಿತು ಈ ಮಾತುಗಳನ್ನಾಡಿದನು.

04027003a ಯುಧಿಷ್ಠಿರೇ ಸಮಾಸಕ್ತಾಂ ಧರ್ಮಜ್ಞೇ ಧರ್ಮಸಂಶ್ರಿತಾಂ।
04027003c ಅಸತ್ಸು ದುರ್ಲಭಾಂ ನಿತ್ಯಂ ಸತಾಂ ಚಾಭಿಮತಾಂ ಸದಾ।
04027003e ಭೀಷ್ಮಃ ಸಮವದತ್ತತ್ರ ಗಿರಂ ಸಾಧುಭಿರರ್ಚಿತಾಂ।।

ಧರ್ಮವನ್ನು ಆಶ್ರಯಿಸಿದ ಧರ್ಮಜ್ಞ ಯುಧಿಷ್ಠಿರನಲ್ಲಿ ಆಸಕ್ತಿ ತೋರುವ ದುರ್ಜನರಿಗೆ ದುರ್ಲಭವೂ ಸತ್ಪುರುಷರಿಗೆ ಸದಾ ಸಮ್ಮತವೂ ಸಾಧುಪೂಜಿತವೂ ಆದ ಮಾತನ್ನು ಭೀಷ್ಮನು ಅಲ್ಲಿ ಆಡಿದನು:

04027004a ಯಥೈಷ ಬ್ರಾಹ್ಮಣಃ ಪ್ರಾಹ ದ್ರೋಣಃ ಸರ್ವಾರ್ಥತತ್ತ್ವವಿತ್।
04027004c ಸರ್ವಲಕ್ಷಣಸಂಪನ್ನಾ ನಾಶಂ ನಾರ್ಹಂತಿ ಪಾಂಡವಾಃ।।

“ಸರ್ವಾರ್ಥತತ್ತ್ವವನ್ನೂ ಬಲ್ಲ ಈ ಬ್ರಾಹ್ಮಣ ದ್ರೋಣನು ಹೇಳಿದ್ದುದು ಸರಿ. ಸರ್ವಲಕ್ಷಣಸಂಪನ್ನರಾದ ಪಾಂಡವರು ನಾಶಹೊಂದುವವರಲ್ಲ.

04027005a ಶ್ರುತವೃತ್ತೋಪಸಂಪನ್ನಾಃ ಸಾಧುವ್ರತಸಮನ್ವಿತಾಃ।
04027005c ವೃದ್ಧಾನುಶಾಸನೇ ಮಗ್ನಾಃ ಸತ್ಯವ್ರತಪರಾಯಣಾಃ।।
04027006a ಸಮಯಂ ಸಮಯಜ್ಞಾಸ್ತೇ ಪಾಲಯಂತಃ ಶುಚಿವ್ರತಾಃ।
04027006c ನಾವಸೀದಿತುಮರ್ಹಂತಿ ಉದ್ವಹಂತಃ ಸತಾಂ ಧುರಂ।।

ವೇದಜ್ಞರೂ, ಶೀಲಸಂಪನ್ನರೂ, ಒಳ್ಳೆಯ ವ್ರತಗಳನ್ನುಳ್ಳವರೂ, ಹಿರಿಯರ ಅನುಶಾಸನಕ್ಕೆ ನಿಷ್ಠರೂ, ಸತ್ಯವ್ರತಪರಾಯಣರೂ, ಸಮಯಜ್ಞರೂ, ಕಟ್ಟುಪಾಡನ್ನು ಪಾಲಿಸುವವರೂ, ಶುಚಿವ್ರತರೂ, ಸತ್ಪುರುಷರ ಕರ್ತವ್ಯವನ್ನು ನಿರ್ವಹಿಸುವವರೂ ಆದ ಅವರು ನಾಶಗೊಳ್ಳತಕ್ಕವರಲ್ಲ.

04027007a ಧರ್ಮತಶ್ಚೈವ ಗುಪ್ತಾಸ್ತೇ ಸ್ವವೀರ್ಯೇಣ ಚ ಪಾಂಡವಾಃ।
04027007c ನ ನಾಶಮಧಿಗಚ್ಛೇಯುರಿತಿ ಮೇ ಧೀಯತೇ ಮತಿಃ।।

ಧರ್ಮದಿಂದಲೂ ಸ್ವಪರಾಕ್ರಮದಿಂದಲೂ ರಕ್ಷಿತರಾದ ಆ ಪಾಂಡವರು ನಾಶಗೊಳ್ಳುವುದಿಲ್ಲ ಎಂದು ನನ್ನ ಬುದ್ಧಿಗೆ ತೋರುತ್ತದೆ.

04027008a ತತ್ರ ಬುದ್ಧಿಂ ಪ್ರಣೇಷ್ಯಾಮಿ ಪಾಂಡವಾನ್ಪ್ರತಿ ಭಾರತ।
04027008c ನ ತು ನೀತಿಃ ಸುನೀತಸ್ಯ ಶಕ್ಯತೇಽನ್ವೇಷಿತುಂ ಪರೈಃ।।

ಆದ್ದರಿಂದ ಭಾರತ! ಪಾಂಡವರನ್ನು ಕುರಿತ ನನ್ನ ಆಲೋಚನೆಗಳನ್ನು ಮುಂದಿಡುತ್ತೇನೆ. ನೀತಿಜ್ಞನ ನೀತಿಯನ್ನು ಕಂಡುಹಿಡಿಯುವುದು ಶತ್ರುಗಳಿಗೆ ಸಾಧ್ಯವಿಲ್ಲ.

04027009a ಯತ್ತು ಶಕ್ಯಮಿಹಾಸ್ಮಾಭಿಸ್ತಾನ್ವೈ ಸಂಚಿಂತ್ಯ ಪಾಂಡವಾನ್।
04027009c ಬುದ್ಧ್ಯಾ ಪ್ರವಕ್ತುಂ ನ ದ್ರೋಹಾತ್ಪ್ರವಕ್ಷ್ಯಾಮಿ ನಿಬೋಧ ತತ್।।

ಆ ಪಾಂಡವರಿಗೆ ಈಗ ನಾವೇನು ಮಾಡಲು ಸಾಧ್ಯವೆಂಬುದನ್ನು ಬುದ್ಧಿಯಿಂದ ಚಿಂತಿಸಿ ಹೇಳುತ್ತೇನೆ. ದ್ರೋಹದಿಂದ ಹೇಳುವುದಿಲ್ಲ. ಇದನ್ನು ತಿಳಿದುಕೋ.

04027010a ಸಾ ತ್ವಿಯಂ ಸಾಧು ವಕ್ತವ್ಯಾ ನ ತ್ವನೀತಿಃ ಕಥಂ ಚನ।
04027010c ವೃದ್ಧಾನುಶಾಸನೇ ತಾತ ತಿಷ್ಠತಃ ಸತ್ಯಶೀಲಿನಃ।।

ಮಗು! ಹಿರಿಯರ ಅನುಶಾಸನವನ್ನು ಪಾಲಿಸುವ ಸತ್ಯಶೀಲನಿಗೆ ಎಂದೂ ಒಳ್ಳೆಯ ನೀತಿಯನ್ನು ಹೇಳಬೇಕೇ ಹೊರತು ಅನೀತಿಯನ್ನಲ್ಲ.

04027011a ಅವಶ್ಯಂ ತ್ವಿಹ ಧೀರೇಣ ಸತಾಂ ಮಧ್ಯೇ ವಿವಕ್ಷತಾ।
04027011c ಯಥಾಮತಿ ವಿವಕ್ತವ್ಯಂ ಸರ್ವಶೋ ಧರ್ಮಲಿಪ್ಸಯಾ।।

ಸಜ್ಜನರ ನಡುವೆ ಮಾತನಾಡುವ ಧೀರನು ಎಲ್ಲ ಸಂದರ್ಭಗಳಲ್ಲಿಯೂ ಅವಶ್ಯವಾಗಿ ತನ್ನ ಬುದ್ಧಿಗೆ ತೋಚಿದಂತೆ ಧರ್ಮಾರ್ಜನೆಯ ಆಸೆಯಿಂದ ಮಾತನಾಡಬೇಕು.

04027012a ತತ್ರ ನಾಹಂ ತಥಾ ಮನ್ಯೇ ಯಥಾಯಮಿತರೋ ಜನಃ।
04027012c ಪುರೇ ಜನಪದೇ ವಾಪಿ ಯತ್ರ ರಾಜಾ ಯುಧಿಷ್ಠಿರಃ।।
04027013a ನಾಸೂಯಕೋ ನ ಚಾಪೀರ್ಷುರ್ನಾತಿವಾದೀ ನ ಮತ್ಸರೀ।
04027013c ಭವಿಷ್ಯತಿ ಜನಸ್ತತ್ರ ಸ್ವಂ ಸ್ವಂ ಧರ್ಮಮನುವ್ರತಃ।।

ನಾನು ಈಗ ಈ ಇತರೆ ಜನರಂತೆ ಭಾವಿಸುವುದಿಲ್ಲ. ಪುರದಲ್ಲಾಗಲೀ ಜನಪದದಲ್ಲಾಗಲೀ ದೊರೆ ಯುಧಿಷ್ಠಿರನಿರುವಲ್ಲಿ ಅಸೂಯೆ ಉಳ್ಳವನಾಗಲೀ, ಈರ್ಷ್ಯೆ ಉಳ್ಳವನಾಗಲೀ, ಅತಿಮಾತಿನವನಾಗಲೀ, ಹೊಟ್ಟೆಕಿಚ್ಚಿನವನಾಗಲೀ ಇರುವುದಿಲ್ಲ. ಅಲ್ಲಿ ಪ್ರತಿಯೊಬ್ಬನೂ ಧರ್ಮವನ್ನು ಆಚರಿಸುತ್ತಿರುತ್ತಾನೆ.

04027014a ಬ್ರಹ್ಮಘೋಷಾಶ್ಚ ಭೂಯಾಂಸಃ ಪೂರ್ಣಾಹುತ್ಯಸ್ತಥೈವ ಚ।
04027014c ಕ್ರತವಶ್ಚ ಭವಿಷ್ಯಂತಿ ಭೂಯಾಂಸೋ ಭೂರಿದಕ್ಷಿಣಾಃ।।

ಅಲ್ಲಿ ವೇದಘೋಷಗಳೂ, ಅಂತೆಯೇ ವಿಪುಲ ಪೂರ್ಣಾಹುತಿಗಳೂ, ಯಾಗಗಳೂ, ಭೂರಿದಕ್ಷಿಣೆಗಳು ಇರುತ್ತವೆ.

04027015a ಸದಾ ಚ ತತ್ರ ಪರ್ಜನ್ಯಃ ಸಮ್ಯಗ್ವರ್ಷೀ ನ ಸಂಶಯಃ।
04027015c ಸಂಪನ್ನಸಸ್ಯಾ ಚ ಮಹೀ ನಿರೀತೀಕಾ ಭವಿಷ್ಯತಿ।।

ಅಲ್ಲಿ ಯಾವಾಗಲೂ ಮೋಡಗಳು ನಿಸ್ಸಂದೇಹವಾಗಿ ಸಮೃದ್ಧ ಮಳೆ ಸುರಿಸುತ್ತವೆ. ಭೂಮಿ ಸಸ್ಯಸಂಪನ್ನವಾಗಿ ಈತಿಬಾಧೆಗಳಿಲ್ಲದೆ ಇರುತ್ತದೆ.

04027016a ರಸವಂತಿ ಚ ಧಾನ್ಯಾನಿ ಗುಣವಂತಿ ಫಲಾನಿ ಚ।
04027016c ಗಂಧವಂತಿ ಚ ಮಾಲ್ಯಾನಿ ಶುಭಶಬ್ದಾ ಚ ಭಾರತೀ।।

ಧಾನ್ಯಗಳು ರಸದಿಂದಲೂ, ಫಲಗಳು ಗುಣಗಳಿಂದಲೂ, ಮಾಲೆಗಳು ಗಂಧದಿಂದಲೂ, ಮಾತುಗಳು ಶುಭಶಬ್ಧಗಳಿಂದಲೂ ಕೂಡಿರುತ್ತವೆ.

04027017a ವಾಯುಶ್ಚ ಸುಖಸಂಸ್ಪರ್ಶೋ ನಿಷ್ಪ್ರತೀಪಂ ಚ ದರ್ಶನಂ।
04027017c ಭಯಂ ನಾಭ್ಯಾವಿಶೇತ್ತತ್ರ ಯತ್ರ ರಾಜಾ ಯುಧಿಷ್ಠಿರಃ।।

ರಾಜ ಯುಧಿಷ್ಠಿರನಿರುವಲ್ಲಿ ಗಾಳಿಯು ಸುಖಸ್ಪರ್ಶ ಹಿತಕರವಾಗಿರುತ್ತದೆ. ಜನರ ಸಮಾಗಮಗಳು ನಿರಾತಂಕವಾಗಿರುತ್ತವೆ. ಭಯವು ಅಲ್ಲಿಗೆ ಪ್ರವೇಶಿಸುವುದಿಲ್ಲ.

04027018a ಗಾವಶ್ಚ ಬಹುಲಾಸ್ತತ್ರ ನ ಕೃಶಾ ನ ಚ ದುರ್ದುಹಾಃ।
04027018c ಪಯಾಂಸಿ ದಧಿಸರ್ಪೀಂಷಿ ರಸವಂತಿ ಹಿತಾನಿ ಚ।।

ಅಲ್ಲಿ ಬೇಕಾದಷ್ಟು ಹಸುಗಳು ಇರುತ್ತವೆ. ಅವು ಬಡಕಲಾಗಿರುವುದಿಲ್ಲ. ಹಾಲು ಕೊಡದಿರುವುದಿಲ್ಲ. ಹಾಲು, ಮೊಸರು, ತುಪ್ಪಗಳು ಸವಿಯಾಗಿಯೂ ಹಿತವಾಗಿಯೂ ಇರುತ್ತವೆ.

04027019a ಗುಣವಂತಿ ಚ ಪಾನಾನಿ ಭೋಜ್ಯಾನಿ ರಸವಂತಿ ಚ।
04027019c ತತ್ರ ದೇಶೇ ಭವಿಷ್ಯಂತಿ ಯತ್ರ ರಾಜಾ ಯುಧಿಷ್ಠಿರಃ।।

ಯುಧಿಷ್ಠಿರನಿರುವ ದೇಶದಲ್ಲಿ ಪಾನೀಯಗಳು ಗುಣಯುಕ್ತವಾಗಿಯೂ ಭೋಜ್ಯಗಳು ರಸವತ್ತಾಗಿಯೂ ಇರುತ್ತವೆ.

04027020a ರಸಾಃ ಸ್ಪರ್ಶಾಶ್ಚ ಗಂಧಾಶ್ಚ ಶಬ್ದಾಶ್ಚಾಪಿ ಗುಣಾನ್ವಿತಾಃ।
04027020c ದೃಶ್ಯಾನಿ ಚ ಪ್ರಸನ್ನಾನಿ ಯತ್ರ ರಾಜಾ ಯುಧಿಷ್ಠಿರಃ।।

ಯುಧಿಷ್ಠಿರನಿರುವಲ್ಲಿ ರಸ, ಸ್ಪರ್ಶ, ಗಂಧ, ಶಬ್ಧಗಳು ಗುಣಾನ್ವಿತವಾಗಿಯೂ ದೃಶ್ಯಗಳು ಪ್ರಸನ್ನವಾಗಿಯೂ ಇರುತ್ತವೆ.

04027021a ಸ್ವೈಃ ಸ್ವೈರ್ಗುಣೈಃ ಸುಸಮ್ಯುಕ್ತಾಸ್ತಸ್ಮಿನ್ವರ್ಷೇ ತ್ರಯೋದಶೇ।
04027021c ದೇಶೇ ತಸ್ಮಿನ್ಭವಿಷ್ಯಂತಿ ತಾತ ಪಾಂಡವಸಮ್ಯುತೇ।।

ಅಯ್ಯಾ! ಈ ಹದಿಮೂರನೆಯ ವರ್ಷದಲ್ಲಿ ಪಾಂಡವರಿರುವ ದೇಶದಲ್ಲಿ ಜನರು ತಮ್ಮ ತಮ್ಮ ಗುಣಧರ್ಮಗಳಿಂದ ಕೂಡಿರುತ್ತಾರೆ.

04027022a ಸಂಪ್ರೀತಿಮಾಂ ಜನಸ್ತತ್ರ ಸಂತುಷ್ಟಃ ಶುಚಿರವ್ಯಯಃ।
04027022c ದೇವತಾತಿಥಿಪೂಜಾಸು ಸರ್ವಭೂತಾನುರಾಗವಾನ್।।

ಅಲ್ಲಿ ಜನರು ಸಂಪ್ರೀತರೂ, ಸಂತುಷ್ಟರೂ, ಶುಚಿಗಳೂ, ಕ್ಷೀಣಸ್ಥಿತಿ ಇಲ್ಲದವರೂ, ದೇವತೆಗಳ ಮತ್ತು ಅತಿಥಿಗಳ ಪೂಜೆಗಳಲ್ಲಿ ತೊಡಗಿದವರೂ, ಸರ್ವಜೀವಿಗಳಲ್ಲಿ ಅನುರಾಗವುಳ್ಳವರೂ ಆಗಿರುತ್ತಾರೆ.

04027023a ಇಷ್ಟದಾನೋ ಮಹೋತ್ಸಾಹಃ ಶಶ್ವದ್ಧರ್ಮಪರಾಯಣಃ।
04027023c ಅಶುಭದ್ವಿಟ್ ಶುಭಪ್ರೇಪ್ಸುರ್ನಿತ್ಯಯಜ್ಞಃ ಶುಭವ್ರತಃ।
04027023e ಭವಿಷ್ಯತಿ ಜನಸ್ತತ್ರ ಯತ್ರ ರಾಜಾ ಯುಧಿಷ್ಠಿರಃ।।

ರಾಜ ಯುಧಿಷ್ಠಿರನಿರುವಲ್ಲಿ ಜನರು ದಾನ ಕೊಡುವುದರಲ್ಲಿ ಆಸಕ್ತರೂ, ಮಹೋತ್ಸಾಹವುಳ್ಳವರೂ, ಸದಾ ಧರ್ಮ ಪರಾಯಣರೂ, ಅಶುಭವನ್ನು ದ್ವೇಷಿಸುವವರೂ, ಶುಭಾಕಾಂಕ್ಷಿಗಳೂ, ನಿತ್ಯ ಯಜ್ಞಮಾಡುವವರೂ, ಶುಭವ್ರತವುಳ್ಳವರೂ ಆಗಿರುತ್ತಾರೆ.

04027024a ತ್ಯಕ್ತವಾಕ್ಯಾನೃತಸ್ತಾತ ಶುಭಕಲ್ಯಾಣಮಂಗಲಃ।
04027024c ಶುಭಾರ್ಥೇಪ್ಸುಃ ಶುಭಮತಿರ್ಯತ್ರ ರಾಜಾ ಯುಧಿಷ್ಠಿರಃ।
04027024e ಭವಿಷ್ಯತಿ ಜನಸ್ತತ್ರ ನಿತ್ಯಂ ಚೇಷ್ಟಪ್ರಿಯವ್ರತಃ।।

ಅಯ್ಯಾ! ರಾಜ ಯುಧಿಷ್ಠಿರನಿರುವಲ್ಲಿ ಜನರು ಸುಳ್ಳುಹೇಳುವುದನ್ನು ತೊರೆದವರೂ, ಶುಭ ಕಲ್ಯಾಣ ಮಂಗಳ ಕಾರ್ಯಪರರೂ, ಶುಭಾರ್ಥವನ್ನು ಬಯಸುವವರೂ, ಶುಭಮತಿಗಳೂ, ಸದಾ ಪ್ರಿಯವ್ರತರ ಆಸಕ್ತರಾಗಿರುವವರೂ ಆಗಿರುತ್ತಾರೆ.

04027025a ಧರ್ಮಾತ್ಮಾ ಸ ತದಾದೃಶ್ಯಃ ಸೋಽಪಿ ತಾತ ದ್ವಿಜಾತಿಭಿಃ।
04027025c ಕಿಂ ಪುನಃ ಪ್ರಾಕೃತೈಃ ಪಾರ್ಥಃ ಶಕ್ಯೋ ವಿಜ್ಞಾತುಮಂತತಃ।।
04027026a ಯಸ್ಮಿನ್ಸತ್ಯಂ ಧೃತಿರ್ದಾನಂ ಪರಾ ಶಾಂತಿರ್ಧ್ರುವಾ ಕ್ಷಮಾ।
04027026c ಹ್ರೀಃ ಶ್ರೀಃ ಕೀರ್ತಿಃ ಪರಂ ತೇಜ ಆನೃಶಂಸ್ಯಮಥಾರ್ಜವಂ।।

ಅಯ್ಯಾ! ಸತ್ಯ, ಧೃತಿ, ದಾನ, ಪರಮಶಾಂತಿ, ಕ್ಷಮೆ, ಸ್ಥಿರವಾದ ಬುದ್ಧಿ, ವಿನಯ, ಸಂಪತ್ತು, ಕೀರ್ತಿ, ಪರಮ ತೇಜಸ್ಸು, ಕರುಣೆ, ಸರಳತೆಗಳು ನೆಲೆಗೊಂಡಿರುವ ಆ ಧರ್ಮಾತ್ಮನು ಕೊನೆಯದಾಗಿ ಬ್ರಾಹ್ಮಣರಿಗೂ ಕಾಣದಂತಿದ್ದಾನೆ. ಇನ್ನು ಆ ಯುಧಿಷ್ಠಿರನನ್ನು ಕಂಡುಹಿಡಿಯುವುದು ಸಾಮಾನ್ಯ ಜನರಿಗೆ ಸಾಧ್ಯವೇ?

04027027a ತಸ್ಮಾತ್ತತ್ರ ನಿವಾಸಂ ತು ಚನ್ನಂ ಸತ್ರೇಣ ಧೀಮತಃ।
04027027c ಗತಿಂ ವಾ ಪರಮಾಂ ತಸ್ಯ ನೋತ್ಸಹೇ ವಕ್ತುಮನ್ಯಥಾ।।

ಆದ್ದರಿಂದ ಆ ಧೀಮಂತನು ವೇಷ ಮರೆಸಿಕೊಂಡು ವಾಸಿಸುತ್ತಿದ್ದಾನೆ. ಇದಕ್ಕಿಂತ ಶ್ರೇಷ್ಠವಾದ ಅವನ ಮಾರ್ಗದ ಕುರಿತು ನಾನು ಮತ್ತೇನನ್ನೂ ಹೇಳಲಾರೆ.

04027028a ಏವಮೇತತ್ತು ಸಂಚಿಂತ್ಯ ಯತ್ಕೃತಂ ಮನ್ಯಸೇ ಹಿತಂ।
04027028c ತತ್ಕ್ಷಿಪ್ರಂ ಕುರು ಕೌರವ್ಯ ಯದ್ಯೇವಂ ಶ್ರದ್ದಧಾಸಿ ಮೇ।।

ಕೌರವ್ಯ! ನಿನಗೆ ನನ್ನಲ್ಲಿ ನಂಬಿಕೆಯಿದ್ದರೆ ಇದರ ಕುರಿತು ಹೀಗೆ ಆಲೋಚಿಸಿ, ನಿನಗೆ ಹಿತವೆನಿಸುವ ಕಾರ್ಯವನ್ನು ಬೇಗ ಮಾಡು.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಭೀಷ್ಮವಾಕ್ಯೇ ಸಪ್ತವಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಭೀಷ್ಮವಾಕ್ಯದಲ್ಲಿ ಇಪ್ಪತ್ತೇಳನೆಯ ಅಧ್ಯಾಯವು.