026 ದ್ರೋಣವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ಗೋಹರಣ ಪರ್ವ

ಅಧ್ಯಾಯ 26

ಸಾರ

ಬ್ರಾಹ್ಮಣರ, ಚಾರರ, ಸಿದ್ಧರ ಮತ್ತು ಪಾಂಡವರನ್ನು ಬಲ್ಲ ಇತರ ಜನರ ಮೂಲಕ ಮತ್ತೊಮ್ಮೆ ಅವರನ್ನು ಹುಡುಕೋಣವೆಂದು ದ್ರೋಣನು ಸೂಚಿಸಿದುದು (1-10).

04026001 ವೈಶಂಪಾಯನ ಉವಾಚ।
04026001a ಅಥಾಬ್ರವೀನ್ಮಹಾವೀರ್ಯೋ ದ್ರೋಣಸ್ತತ್ತ್ವಾರ್ಥದರ್ಶಿವಾನ್।
04026001c ನ ತಾದೃಶಾ ವಿನಶ್ಯಂತಿ ನಾಪಿ ಯಾಂತಿ ಪರಾಭವಂ।।

ವೈಶಂಪಾಯನನು ಹೇಳಿದನು: “ಆಗ ಮಹಾವೀರ್ಯ ತತ್ವಾರ್ಥದರ್ಶಿ ದ್ರೋಣನು ನುಡಿದನು: “ಅಂಥವರು ನಾಶಹೊಂದುವುದಿಲ್ಲ ಅಥವಾ ಪರಾಭವಹೊಂದುವುದಿಲ್ಲ.

04026002a ಶೂರಾಶ್ಚ ಕೃತವಿದ್ಯಾಶ್ಚ ಬುದ್ಧಿಮಂತೋ ಜಿತೇಂದ್ರಿಯಾಃ।
04026002c ಧರ್ಮಜ್ಞಾಶ್ಚ ಕೃತಜ್ಞಾಶ್ಚ ಧರ್ಮರಾಜಮನುವ್ರತಾಃ।।

ಅವರು ಶೂರರು. ವಿದ್ಯಾಪಾರಂಗತರು. ಬುದ್ದಿವಂತರು. ಜಿತೇಂದ್ರಿಯರು. ಧರ್ಮಜ್ಞರು. ಕೃತಜ್ಞರು. ಮತ್ತು ಧರ್ಮರಾಜನಿಗೆ ಅನುವ್ರತರು.

04026003a ನೀತಿಧರ್ಮಾರ್ಥತತ್ತ್ವಜ್ಞಂ ಪಿತೃವಚ್ಚ ಸಮಾಹಿತಂ।
04026003c ಧರ್ಮೇ ಸ್ಥಿತಂ ಸತ್ಯಧೃತಿಂ ಜ್ಯೇಷ್ಠಂ ಜ್ಯೇಷ್ಠಾಪಚಾಯಿನಂ।।
04026004a ಅನುವ್ರತಾ ಮಹಾತ್ಮಾನಂ ಭ್ರಾತರಂ ಭ್ರಾತರೋ ನೃಪ।
04026004c ಅಜಾತಶತ್ರುಂ ಹ್ರೀಮಂತಂ ತಂ ಚ ಭ್ರಾತೄನನುವ್ರತಂ।।

ರಾಜ! ನೀತಿಧರ್ಮಾರ್ಥ ತತ್ತ್ವಜ್ಞನೂ, ತಂದೆಯಂತೆ ಅತ್ಯಾಸಕ್ತನೂ, ಧರ್ಮಸ್ಥಿತನೂ, ದೃಢಸತ್ಯನೂ, ಹಿರಿಯರನ್ನು ಪೂಜಿಸುವವನೂ, ಅಜಾತಶತ್ರುವೂ, ಸಂಕೋಚಶೀಲನೂ, ಮಹಾತ್ಮನೂ ಆದ ಹಿರಿಯಣ್ಣನಿಗೆ ಆ ಸೋದರರು ನಿಷ್ಠೆಯುಳ್ಳವರು. ಅವನೂ ಸೋದರರಿಗೆ ನಿಷ್ಠೆಯುಳ್ಳವನು.

04026005a ತೇಷಾಂ ತಥಾ ವಿಧೇಯಾನಾಂ ನಿಭೃತಾನಾಂ ಮಹಾತ್ಮನಾಂ।
04026005c ಕಿಮರ್ಥಂ ನೀತಿಮಾನ್ಪಾರ್ಥಃ ಶ್ರೇಯೋ ನೈಷಾಂ ಕರಿಷ್ಯತಿ।।

ಹಾಗೆ ವಿಧೇಯರೂ ವಿನಯಶೀಲರೂ ಮಹಾತ್ಮರೂ ಆದವರಿಗೆ ಆ ನೀತಿವಂತ ಯುಧಿಷ್ಠಿರನಿಂದ ಶ್ರೇಯಸ್ಸುಂಟಾಗದೇ ಇರುವುದೆಂತು?

04026006a ತಸ್ಮಾದ್ಯತ್ನಾತ್ಪ್ರತೀಕ್ಷಂತೇ ಕಾಲಸ್ಯೋದಯಮಾಗತಂ।
04026006c ನ ಹಿ ತೇ ನಾಶಮೃಚ್ಛೇಯುರಿತಿ ಪಶ್ಯಾಮ್ಯಹಂ ಧಿಯಾ।।

ಆದ್ದರಿಂದ ಕಾಲಬರುವುದನ್ನು ಅವರು ಯತ್ನಪೂರ್ವಕವಾಗಿ ಕಾಯುತ್ತಿದ್ದಾರೆ. ಅವರು ನಾಶಗೊಳ್ಳುವುದಿಲ್ಲವೆಂದು ನನ್ನ ಬುದ್ಧಿಗೆ ತೋರುತ್ತದೆ.

04026007a ಸಾಂಪ್ರತಂ ಚೈವ ಯತ್ಕಾರ್ಯಂ ತಚ್ಚ ಕ್ಷಿಪ್ರಮಕಾಲಿಕಂ।
04026007c ಕ್ರಿಯತಾಂ ಸಾಧು ಸಂಚಿಂತ್ಯ ವಾಸಶ್ಚೈಷಾಂ ಪ್ರಚಿಂತ್ಯತಾಂ।।
04026008a ಯಥಾವತ್ಪಾಂಡುಪುತ್ರಾಣಾಂ ಸರ್ವಾರ್ಥೇಷು ಧೃತಾತ್ಮನಾಂ।
04026008c ದುರ್ಜ್ಞೇಯಾಃ ಖಲು ಶೂರಾಸ್ತೇ ಅಪಾಪಾಸ್ತಪಸಾ ವೃತಾಃ।।

ಈಗ ಏನು ಮಾಡಬೇಕೆಂಬುದನ್ನು ಚೆನ್ನಾಗಿ ಆಲೋಚಿಸಿ, ಕಾಲ ಮೀರುವುದಕ್ಕೆ ಮೊದಲೇ ಬೇಗ ಮಾಡು. ಅಂತೆಯೇ, ಸರ್ವಾರ್ಥಗಳಲ್ಲೂ ಆತ್ಮಧೃತರಾದ ಪಾಂಡುಪುತ್ರರ ವಾಸಸ್ಥಾನದ ಕುರಿತು ಆಲೋಚಿಸು. ಶೂರರೂ ಪಾಪರಹಿತರೂ ತಪಸ್ವಿಗಳೂ ಆದ ಅವರನ್ನು ಪತ್ತೆ ಹಚ್ಚುವುದು ಅಸಾಧ್ಯ.

04026009a ಶುದ್ಧಾತ್ಮಾ ಗುಣವಾನ್ಪಾರ್ಥಃ ಸತ್ಯವಾನ್ನೀತಿಮಾಂ ಶುಚಿಃ।
04026009c ತೇಜೋರಾಶಿರಸಂಖ್ಯೇಯೋ ಗೃಹ್ಣೀಯಾದಪಿ ಚಕ್ಷುಷೀ।।

ಯುಧಿಷ್ಠಿರನು ಶುದ್ಧಾತ್ಮ, ಗುಣವಂತ, ಸತ್ಯವಂತ, ನೀತಿವಂತ, ಶುಚಿ, ತೇಜೋರಾಶಿ, ಎದುರಿಸಲಾಗದವನು ಮತ್ತು ಕಣ್ಣುಗಳನ್ನೂ ಸೆರೆಹಿಡಿವುವಂಥವನು.

04026010a ವಿಜ್ಞಾಯ ಕ್ರಿಯತಾಂ ತಸ್ಮಾದ್ಭೂಯಶ್ಚ ಮೃಗಯಾಮಹೇ।
04026010c ಬ್ರಾಹ್ಮಣೈಶ್ಚಾರಕೈಃ ಸಿದ್ಧೈರ್ಯೇ ಚಾನ್ಯೇ ತದ್ವಿದೋ ಜನಾಃ।।

ಆದಕಾರಣ, ಇವೆಲ್ಲವನ್ನೂ ತಿಳಿದು ಅಗತ್ಯವಾದುದನ್ನು ಮಾಡು. ಬ್ರಾಹ್ಮಣರ, ಚಾರರ, ಸಿದ್ಧರ ಮತ್ತು ಅವರನ್ನು ಬಲ್ಲ ಇತರ ಜನರ ಮೂಲಕ ಮತ್ತೊಮ್ಮೆ ಅವರನ್ನು ಹುಡುಕೋಣ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ದ್ರೋಣವಾಕ್ಯೇ ಷಡ್‌ವಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ದ್ರೋಣವಾಕ್ಯದಲ್ಲಿ ಇಪ್ಪತ್ತಾರನೆಯ ಅಧ್ಯಾಯವು.