025 ಕರ್ಣದುಃಶಾಸನವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ಗೋಹರಣ ಪರ್ವ

ಅಧ್ಯಾಯ 25

ಸಾರ

ಪಾಂಡವರನ್ನು ಬೇಗ ಹುಡುಕಬೇಕೆಂದು ದುರ್ಯೋಧನನು ಹೇಳಲು (1-7) ಕರ್ಣ (8-12) ಮತ್ತು ದುಃಶಾಸನರು (13-17) ಅದನ್ನು ಅನುಮೋದಿಸಿದುದು.

04025001 ವೈಶಂಪಾಯನ ಉವಾಚ।
04025001a ತತೋ ದುರ್ಯೋಧನೋ ರಾಜಾ ಶ್ರುತ್ವಾ ತೇಷಾಂ ವಚಸ್ತದಾ।
04025001c ಚಿರಮಂತರ್ಮನಾ ಭೂತ್ವಾ ಪ್ರತ್ಯುವಾಚ ಸಭಾಸದಃ।।

ವೈಶಂಪಾಯನನು ಹೇಳಿದನು: “ಅನಂತರ ರಾಜ ದುರ್ಯೋಧನನು ಅವರ ಮಾತನ್ನು ಕೇಳಿ ಬಹಳ ಹೊತ್ತು ಮನಸ್ಸಿನಲ್ಲಿಯೇ ಆಲೋಚಿಸಿ ಸಭಾಸದರಿಗೆ ಹೀಗೆಂದನು:

04025002a ಸುದುಃಖಾ ಖಲು ಕಾರ್ಯಾಣಾಂ ಗತಿರ್ವಿಜ್ಞಾತುಮಂತತಃ।
04025002c ತಸ್ಮಾತ್ಸರ್ವೇ ಉದೀಕ್ಷಧ್ವಂ ಕ್ವ ನು ಸ್ಯುಃ ಪಾಂಡವಾ ಗತಾಃ।।

“ಕಾರ್ಯಗತಿಗಳನ್ನು ನಿಶ್ಚಿತವಾಗಿ ತಿಳಿಯುವುದು ಕಷ್ಟವೇ ಸರಿ. ಆದ್ದರಿಂದ ಪಾಂಡವರು ಎಲ್ಲಿ ಇರಬಹುದು ಎಂಬುದನ್ನು ಎಲ್ಲರೂ ಕಂಡು ಹಿಡಿಯಿರಿ.

04025003a ಅಲ್ಪಾವಶಿಷ್ಟಂ ಕಾಲಸ್ಯ ಗತಭೂಯಿಷ್ಠಮಂತತಃ।
04025003c ತೇಷಾಮಜ್ಞಾತಚರ್ಯಾಯಾಮಸ್ಮಿನ್ ವರ್ಷೇ ತ್ರಯೋದಶೇ।।

ಅವರು ಅಜ್ಞಾತವಾಸದಲ್ಲಿ ಇರಬೇಕಾದ ಈ ಹದಿಮೂರನೆಯ ವರ್ಷದಲ್ಲಿ ಕಡೆಗೂ ಬಹುಭಾಗ ಕಳೆದುಹೋಗಿದೆ. ಇನ್ನು ಸ್ವಲ್ಪ ಕಾಲವೇ ಉಳಿದಿದೆ.

04025004a ಅಸ್ಯ ವರ್ಷಸ್ಯ ಶೇಷಂ ಚೇದ್ವ್ಯತೀಯುರಿಹ ಪಾಂಡವಾಃ।
04025004c ನಿವೃತ್ತಸಮಯಾಸ್ತೇ ಹಿ ಸತ್ಯವ್ರತಪರಾಯಣಾಃ।।

ಈ ವರ್ಷದ ಉಳಿದ ಅವಧಿಯನ್ನು ಪಾಂಡವರು ಕಳೆದುಬಿಟ್ಟರೆ ಆ ಸತ್ಯವ್ರತ ಪರಾಯಣರು ತಮ್ಮ ಪ್ರತಿಜ್ಞೆಯನ್ನು ಮುಗಿಸುತ್ತಾರೆ.

04025005a ಕ್ಷರಂತ ಇವ ನಾಗೇಂದ್ರಾಃ ಸರ್ವ ಆಶೀವಿಷೋಪಮಾಃ।
04025005c ದುಃಖಾ ಭವೇಯುಃ ಸಂರಬ್ಧಾಃ ಕೌರವಾನ್ಪ್ರತಿ ತೇ ಧ್ರುವಂ।।

ಮದೋದಕವನ್ನು ಸುರಿಸುವ ಗಜೇಂದ್ರರಂತೆ ಅಥವಾ ವಿಷಪೂರಿತ ಸರ್ಪಗಳಂತೆ ಅವರು ಆವೇಶಗೊಂಡು ಕೌರವರಿಗೆ ದುಃಖವನ್ನುಂಟುಮಾಡುವುದು ಖಚಿತ.

04025006a ಅರ್ವಾಕ್ಕಾಲಸ್ಯ ವಿಜ್ಞಾತಾಃ ಕೃಚ್ಛ್ರರೂಪಧರಾಃ ಪುನಃ।
04025006c ಪ್ರವಿಶೇಯುರ್ಜಿತಕ್ರೋಧಾಸ್ತಾವದೇವ ಪುನರ್ವನಂ।।

ಕಾಲಕ್ಕೆ ಮೊದಲೇ ಗುರುತಿಸಿಬಿಟ್ಟರೆ ಅವರು ದುಃಖಕರ ವೇಷವನ್ನು ಧರಿಸಿ ಕ್ರೋಧವನ್ನು ಹತ್ತಿಕ್ಕಿಕೊಂಡು ಪುನಃ ಕಾಡಿಗೆ ಹೋಗುವರು.

04025007a ತಸ್ಮಾತ್ಕ್ಷಿಪ್ರಂ ಬುಭುತ್ಸಧ್ವಂ ಯಥಾ ನೋಽತ್ಯಂತಮವ್ಯಯಂ।
04025007c ರಾಜ್ಯಂ ನಿರ್ದ್ವಂದ್ವಮವ್ಯಗ್ರಂ ನಿಃಸಪತ್ನಂ ಚಿರಂ ಭವೇತ್।।

ಆದ್ದರಿಂದ ನಮ್ಮ ರಾಜ್ಯ ಸದಾ ಅಕ್ಷಯವೂ ಕಲಹ ರಹಿತವೂ ಶಾಂತವೂ ಶತ್ರುರಹಿತವೂ ಆಗಿರಬೇಕೆಂದಾದರೆ ಅವರನ್ನು ಬೇಗ ಹುಡುಕಿ.”

04025008a ಅಥಾಬ್ರವೀತ್ತತಃ ಕರ್ಣಃ ಕ್ಷಿಪ್ರಂ ಗಚ್ಛಂತು ಭಾರತ।
04025008c ಅನ್ಯೇ ಧೂರ್ತತರಾ ದಕ್ಷಾ ನಿಭೃತಾಃ ಸಾಧುಕಾರಿಣಃ।।

ಆಗ ಕರ್ಣನು ನುಡಿದನು: “ಭಾರತ! ಧೂರ್ತತರರೂ ದಕ್ಷರೂ ಗುಪ್ತರೂ ಚೆನ್ನಾಗಿ ಕಾರ್ಯಸಾಧನೆ ಮಾಡುವವರೂ ಆದ ಬೇರೆಯವರು ಬೇಗ ಹೋಗಲಿ.

04025009a ಚರಂತು ದೇಶಾನ್ಸಂವೀತಾಃ ಸ್ಫೀತಾಂ ಜನಪದಾಕುಲಾನ್।
04025009c ತತ್ರ ಗೋಷ್ಠೀಷ್ವಥಾನ್ಯಾಸು ಸಿದ್ಧಪ್ರವ್ರಜಿತೇಷು ಚ।।
04025010a ಪರಿಚಾರೇಷು ತೀರ್ಥೇಷು ವಿವಿಧೇಷ್ವಾಕರೇಷು ಚ।
04025010c ವಿಜ್ಞಾತವ್ಯಾ ಮನುಷ್ಯೈಸ್ತೈಸ್ತರ್ಕಯಾ ಸುವಿನೀತಯಾ।।

ಅವರು ವೇಷ ಮರೆಸಿಕೊಂಡು ಜನಭರಿತವಾದ ಜನಪದಗಳನ್ನುಳ್ಳ ವಿಶಾಲ ದೇಶಗಳಲ್ಲಿಯೂ ಇತರ ಗೋಷ್ಠಿಗಳಲ್ಲಿಯೂ ಬಳಿಕ ಸಿದ್ಧಾಶ್ರಮಗಳಲ್ಲೂ, ಮಾರ್ಗಗಳಲ್ಲೂ, ತೀರ್ಥಕ್ಷೇತ್ರಗಳಲ್ಲೂ, ವಿವಿಧ ಗಣಿಗಳಲ್ಲೂ ಸಂಚರಿಸಲಿ. ಜನ ಅವರನ್ನು ಸುಶಿಕ್ಷಿತ ತರ್ಕದಿಂದ ಪತ್ತೆಮಾಡಬಹುದು.

04025011a ವಿವಿಧೈಸ್ತತ್ಪರೈಃ ಸಮ್ಯಕ್ತಜ್ಞೈರ್ನಿಪುಣಸಂವೃತೈಃ।
04025011c ಅನ್ವೇಷ್ಟವ್ಯಾಶ್ಚ ನಿಪುಣಂ ಪಾಂಡವಾಶ್ಚನ್ನವಾಸಿನಃ।।
04025012a ನದೀಕುಂಜೇಷು ತೀರ್ಥೇಷು ಗ್ರಾಮೇಷು ನಗರೇಷು ಚ।
04025012c ಆಶ್ರಮೇಷು ಚ ರಮ್ಯೇಷು ಪರ್ವತೇಷು ಗುಹಾಸು ಚ।।

ವೇಷಮರೆಸಿಕೊಂಡು ವಾಸಿಸುತ್ತಿರುವ ಪಾಂಡವರನ್ನು ತತ್ಪರರೂ, ಸಂಪೂರ್ಣತಜ್ಞರಾದವರೂ, ನಿಪುಣತೆಯಿಂದ ವೇಷ ಮರೆಸಿಕೊಂಡವರೂ ಆದ ವಿವಿಧ ಗೂಢಚರರು ನದೀ ಕುಂಜಗಳಲ್ಲಿಯೂ, ತೀರ್ಥಗಳೂ, ಗ್ರಾಮ ನಗರಗಳಲ್ಲಿಯೂ, ಆಶ್ರಮಗಳಲ್ಲಿಯೂ, ರಮ್ಯ ಪರ್ವತಗಳಲ್ಲಿಯೂ, ಗುಹೆಗಳಲ್ಲೂ ಎಚ್ಚರಿಕೆಯಿಂದ ಹುಡುಕಬೇಕು.”

04025013a ಅಥಾಗ್ರಜಾನಂತರಜಃ ಪಾಪಭಾವಾನುರಾಗಿಣಂ।
04025013c ಜ್ಯೇಷ್ಠಂ ದುಃಶಾಸನಸ್ತತ್ರ ಭ್ರಾತಾ ಭ್ರಾತರಮಬ್ರವೀತ್।।

ಅನಂತರ ಆ ವಿಷಯದಲ್ಲಿ ತಮ್ಮನಾದ ದುಃಶಾಸನನು ಪಾಪಭಾವದಲ್ಲಿ ಆಸಕ್ತನಾದ ಹಿರಿಯ ಅಣ್ಣನಿಗೆ ಹೇಳಿದನು:

04025014a ಏತಚ್ಚ ಕರ್ಣೋ ಯತ್ಪ್ರಾಹ ಸರ್ವಮೀಕ್ಷಾಮಹೇ ತಥಾ।
04025014c ಯಥೋದ್ದಿಷ್ಟಂ ಚರಾಃ ಸರ್ವೇ ಮೃಗಯಂತು ತತಸ್ತತಃ।
04025014e ಏತೇ ಚಾನ್ಯೇ ಚ ಭೂಯಾಂಸೋ ದೇಶಾದ್ದೇಶಂ ಯಥಾವಿಧಿ।।

“ಕರ್ಣನು ಹೇಳಿದುದೆಲ್ಲವೂ ನನಗೂ ಸರಿಕಾಣುತ್ತದೆ. ನಿರ್ದೇಶಿಸಿದ ರೀತಿಯಲ್ಲಿ ಚರರೆಲ್ಲರೂ ಅಲ್ಲಲ್ಲಿ ಹುಡುಕಲಿ. ಅವರೂ ಇನ್ನೂ ಇತರರೂ ಕ್ರಮವರಿತು ದೇಶದಿಂದ ದೇಶಕ್ಕೆ ಹೋಗಿ ಹುಡುಕಲಿ.

04025015a ನ ತು ತೇಷಾಂ ಗತಿರ್ವಾಸಃ ಪ್ರವೃತ್ತಿಶ್ಚೋಪಲಭ್ಯತೇ।
04025015c ಅತ್ಯಾಹಿತಂ ವಾ ಗೂಢಾಸ್ತೇ ಪಾರಂ ವೋರ್ಮಿಮತೋ ಗತಾಃ।।

ಅವರ ಗತಿಯಾಗಲೀ ವಾಸಸ್ಥಾನವಾಗಲೀ ಉದ್ಯೋಗವಾಗಲೀ ತಿಳಿಯಬರುತ್ತಿಲ್ಲ. ಅವರು ಅತ್ಯಂತ ಗುಪ್ತವಾಗಿ ಅಡಗಿಕೊಂಡಿದ್ದಾರೆ. ಇಲ್ಲವೆ ಸಮುದ್ರದಾಚೆಗೆ ಹೋಗಿದ್ದಾರೆ.

04025016a ವ್ಯಾಲೈರ್ವಾಪಿ ಮಹಾರಣ್ಯೇ ಭಕ್ಷಿತಾಃ ಶೂರಮಾನಿನಃ।
04025016c ಅಥ ವಾ ವಿಷಮಂ ಪ್ರಾಪ್ಯ ವಿನಷ್ಟಾಃ ಶಾಶ್ವತೀಃ ಸಮಾಃ।।

ಶೂರರೆಂದು ತಿಳಿದಿರುವ ಅವರು ಮಹಾರಣ್ಯದಲ್ಲಿ ದುಷ್ಟಮೃಗಗಳಿಂದ ಭಕ್ಷಿತರಾಗಿದ್ದಾರೆ ಇಲ್ಲವೇ ವಿಷಮ ಪರಿಸ್ಥಿತಿಗೆ ಸಿಕ್ಕಿ ಶಾಶ್ವತ ನಾಶಕ್ಕೀಡಾಗಿದ್ದಾರೆ.

04025017a ತಸ್ಮಾನ್ಮಾನಸಮವ್ಯಗ್ರಂ ಕೃತ್ವಾ ತ್ವಂ ಕುರುನಂದನ।
04025017c ಕುರು ಕಾರ್ಯಂ ಯಥೋತ್ಸಾಹಂ ಮನ್ಯಸೇ ಯನ್ನರಾಧಿಪ।।

ಆದುದರಿಂದ ಕುರುನಂದನ! ರಾಜ! ಮನಸ್ಸನ್ನು ಸಮಾಧಾನಗೊಳಿಸಿಕೊಂಡು ಆಲೋಚಿಸಿದ ಕಾರ್ಯವನ್ನು ಯಥಾಶಕ್ತಿಯಾಗಿ ಮಾಡು.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಕರ್ಣದುಃಶಾಸನವಾಕ್ಯೇ ಪಂಚವಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಕರ್ಣದುಃಶಾಸನವಾಕ್ಯದಲ್ಲಿ ಇಪ್ಪತ್ತೈದನೆಯ ಅಧ್ಯಾಯವು.