ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ವಿರಾಟ ಪರ್ವ
ಗೋಹರಣ ಪರ್ವ
ಅಧ್ಯಾಯ 24
ಸಾರ
ಪಾಂಡವರನ್ನು ಪತ್ತೇಹಚ್ಚಲು ಕಳುಹಿಸಿದ್ದ ಗೂಢಚರರು ಹಿಂದಿರುಗಿ ದುರ್ಯೋಧನನಿಗೆ ಅವರ ಕುರುಹು ಸಿಗಲಿಲ್ಲವೆಂದು ವರದಿಮಾಡಿದುದು (1-18). ವಿರಾಟನಗರಿಯಲ್ಲಿ ಕೀಚಕನು ಅಗೋಚರ ಗಂಧರ್ವರಿಂದ ಹತನಾದನೆಂದೂ ತಿಳಿಸುವುದು (19-21).
04024001 ವೈಶಂಪಾಯನ ಉವಾಚ।
04024001a ಕೀಚಕಸ್ಯ ತು ಘಾತೇನ ಸಾನುಜಸ್ಯ ವಿಶಾಂ ಪತೇ।
04024001c ಅತ್ಯಾಹಿತಂ ಚಿಂತಯಿತ್ವಾ ವ್ಯಸ್ಮಯಂತ ಪೃಥಗ್ಜನಾಃ।।
ವೈಶಂಪಾಯನನು ಹೇಳಿದನು: “ವಿಶಾಂಪತೇ! ತಮ್ಮಂದಿರೊಡನೆ ಕೀಚಕನು ಹತನಾಗಲು ಆ ವಿಪತ್ತಿನ ಕುರಿತು ಯೋಚಿಸುತ್ತಾ ಇತರ ಜನರು ಆಶ್ಚರ್ಯಪಟ್ಟರು.
04024002a ತಸ್ಮಿನ್ಪುರೇ ಜನಪದೇ ಸಂಜಲ್ಪೋಽಭೂಚ್ಚ ಸರ್ವಶಃ।
04024002c ಶೌರ್ಯಾದ್ಧಿ ವಲ್ಲಭೋ ರಾಜ್ಞೋ ಮಹಾಸತ್ತ್ವಶ್ಚ ಕೀಚಕಃ।।
04024003a ಆಸೀತ್ಪ್ರಹರ್ತಾ ಚ ನೃಣಾಂ ದಾರಾಮರ್ಶೀ ಚ ದುರ್ಮತಿಃ।
04024003c ಸ ಹತಃ ಖಲು ಪಾಪಾತ್ಮಾ ಗಂಧರ್ವೈರ್ದುಷ್ಟಪೂರುಷಃ।।
ಮಹಾಸತ್ವನಾದ ಕೀಚಕನು ರಾಜನಿಗೆ ಪ್ರಿಯನಾಗಿದ್ದನು. ಆ ದುರ್ಮತಿಯು ಜನರನ್ನು ಹಿಂಸಿಸುತ್ತಿದ್ದನು ಮತ್ತು ಪರಸತಿಯರಲ್ಲಿ ಆಸಕ್ತನಾಗಿದ್ದನು. ಪಾಪಾತ್ಮನಾದ ಆ ದುಷ್ಟ ಪುರುಷನು ಗಂಧರ್ವರಿಂದ ಹತನಾದನು ಎಂದು ಆ ನಗರದಲ್ಲೂ ದೇಶದಲ್ಲೂ ಎಲ್ಲೆಡೆ ಮಾತುಕತೆ ನಡೆಯುತ್ತಿತ್ತು.
04024004a ಇತ್ಯಜಲ್ಪನ್ಮಹಾರಾಜ ಪರಾನೀಕವಿಶಾತನಂ।
04024004c ದೇಶೇ ದೇಶೇ ಮನುಷ್ಯಾಶ್ಚ ಕೀಚಕಂ ದುಷ್ಪ್ರಧರ್ಷಣಂ।।
ಮಹಾರಾಜ! ಪರಸೈನ್ಯ ನಾಶಕನೂ ಎದುರಿಸಲು ಅಸಾಧ್ಯನೂ ಆಗಿದ್ದ ಆ ಕೀಚಕನ ಕುರಿತು ಜನರು ದೇಶ ದೇಶಗಳಲ್ಲಿ ಹೀಗೆ ಮಾತನಾಡಿಕೊಳ್ಳುತ್ತಿದ್ದರು.
04024005a ಅಥ ವೈ ಧಾರ್ತರಾಷ್ಟ್ರೇಣ ಪ್ರಯುಕ್ತಾ ಯೇ ಬಹಿಶ್ಚರಾಃ।
04024005c ಮೃಗಯಿತ್ವಾ ಬಹೂನ್ಗ್ರಾಮಾನ್ರಾಷ್ಟ್ರಾಣಿ ನಗರಾಣಿ ಚ।।
04024006a ಸಂವಿಧಾಯ ಯಥಾದಿಷ್ಟಂ ಯಥಾದೇಶಪ್ರದರ್ಶನಂ।
04024006c ಕೃತಚಿಂತಾ ನ್ಯವರ್ತಂತ ತೇ ಚ ನಾಗಪುರಂ ಪ್ರತಿ।।
ಅಷ್ಟರಲ್ಲಿಯೇ ದುರ್ಯೋಧನನಿಂದ ನಿಯುಕ್ತರಾಗಿದ್ದ ಗೂಢಚರರು ಬಹಳ ಗ್ರಾಮಗಳನ್ನೂ, ರಾಷ್ಟ್ರಗಳನ್ನೂ, ನಗರಗಳನ್ನು ಹುಡುಕಿ ತಮಗೆ ಕೊಟ್ಟಿದ್ದ ರಾಜ್ಯಶೋಧನೆಯ ಆದೇಶವನ್ನು ನೆರವೇರಿಸಿ ಚಿಂತಾಕ್ರಾಂತರಾಗಿ ಹಸ್ತಿನಾಪುರಕ್ಕೆ ಮರಳಿದರು.
04024007a ತತ್ರ ದೃಷ್ಟ್ವಾ ತು ರಾಜಾನಂ ಕೌರವ್ಯಂ ಧೃತರಾಷ್ಟ್ರಜಂ।
04024007c ದ್ರೋಣಕರ್ಣಕೃಪೈಃ ಸಾರ್ಧಂ ಭೀಷ್ಮೇಣ ಚ ಮಹಾತ್ಮನಾ।।
04024008a ಸಂಗತಂ ಭ್ರಾತೃಭಿಶ್ಚಾಪಿ ತ್ರಿಗರ್ತೈಶ್ಚ ಮಹಾರಥೈಃ।
04024008c ದುರ್ಯೋಧನಂ ಸಭಾಮಧ್ಯೇ ಆಸೀನಮಿದಮಬ್ರುವನ್।।
ಅಲ್ಲಿ ದ್ರೋಣ, ಕರ್ಣ, ಕೃಪರೊಡನೆ, ಮಹಾತ್ಮ ಭೀಷ್ಮನೊಡನೆ, ಸೋದರರೊಡನೆ, ಮಹಾರಥಿ ತ್ರಿಗರ್ತರೊಡನೆ ಸಭಾಮಧ್ಯದಲ್ಲಿ ಕುಳಿತಿದ್ದ ಧೃತರಾಷ್ಟ್ರ ಪುತ್ರ, ಕೌರವರಾಜ ದುರ್ಯೋಧನನನ್ನು ಕಂಡು ಹೇಳಿದರು:
04024009a ಕೃತೋಽಸ್ಮಾಭಿಃ ಪರೋ ಯತ್ನಸ್ತೇಷಾಮನ್ವೇಷಣೇ ಸದಾ।
04024009c ಪಾಂಡವಾನಾಂ ಮನುಷ್ಯೇಂದ್ರ ತಸ್ಮಿನ್ಮಹತಿ ಕಾನನೇ।।
04024010a ನಿರ್ಜನೇ ಮೃಗಸಂಕೀರ್ಣೇ ನಾನಾದ್ರುಮಲತಾವೃತೇ।
04024010c ಲತಾಪ್ರತಾನಬಹುಲೇ ನಾನಾಗುಲ್ಮಸಮಾವೃತೇ।।
“ರಾಜನ್! ಮೃಗಗಳಿಂದ ತುಂಬಿದ, ನಾನಾ ವೃಕ್ಷಲತೆಗಳಿಂದ ಮುಸುಕಿದ, ಲತೆಗಳು ಬಹಳವಾಗಿ ಹರಡಿದ್ದ, ಹಲವು ಪೊದೆಗಳಿಂದ ಇಕ್ಕಿರಿದ ಆ ನಿರ್ಜನ ಮಹಾವನದಲ್ಲಿ ಪಾಂಡವರನ್ನು ಹುಡುಕುವ ಪರಮ ಪ್ರಯತ್ನವನ್ನು ನಿರಂತರವಾಗಿ ಮಾಡಿದೆವು.
04024011a ನ ಚ ವಿದ್ಮೋ ಗತಾ ಯೇನ ಪಾರ್ಥಾಃ ಸ್ಯುರ್ದೃಢವಿಕ್ರಮಾಃ।
04024011c ಮಾರ್ಗಮಾಣಾಃ ಪದನ್ಯಾಸಂ ತೇಷು ತೇಷು ತಥಾ ತಥಾ।।
ಆದರೆ ದೃಢವಿಕ್ರಮಿ ಪಾರ್ಥರು ಹೋದ ದಾರಿ ನಮಗೆ ತಿಳಿಯಲಿಲ್ಲ. ಎಲ್ಲೆಡೆಗಳಲ್ಲಿಯೂ ಅವರ ಹೆಜ್ಜೆಗುರುತುಗಳನ್ನು ಹುಡುಕಿದೆವು.
04024012a ಗಿರಿಕೂಟೇಷು ತುಂಗೇಷು ನಾನಾಜನಪದೇಷು ಚ।
04024012c ಜನಾಕೀರ್ಣೇಷು ದೇಶೇಷು ಖರ್ವಟೇಷು ಪುರೇಷು ಚ।।
04024013a ನರೇಂದ್ರ ಬಹುಶೋಽನ್ವಿಷ್ಟಾ ನೈವ ವಿದ್ಮಶ್ಚ ಪಾಂಡವಾನ್।
04024013c ಅತ್ಯಂತಭಾವಂ ನಷ್ಟಾಸ್ತೇ ಭದ್ರಂ ತುಭ್ಯಂ ನರರ್ಷಭ।।
ರಾಜನ್! ಎತ್ತರವಾದ ಗಿರಿಶಿಖರಗಳಲ್ಲಿ, ನಾನಾ ಜನಪದಗಳಲ್ಲಿ, ಜನಭರಿತ ದೇಶಗಳಲ್ಲಿ, ಬೆಟ್ಟದೂರುಗಳಲ್ಲಿ, ಮತ್ತು ಪುರಗಳಲ್ಲಿ ಬಹಳವಾಗಿ ಹುಡುಕಿದೆವು. ಆದರೂ ಪಾಂಡವರನ್ನು ಕಾಣಲಿಲ್ಲ. ನರಶ್ರೇಷ್ಠನೇ! ಅವರು ಸಂಪೂರ್ಣವಾಗಿ ನಾಶಹೊಂದಿದ್ದಾರೆ. ನಿನಗೆ ಮಂಗಳವಾಗಲಿ!
04024014a ವರ್ತ್ಮಾನ್ಯನ್ವಿಷ್ಯಮಾಣಾಸ್ತು ರಥಾನಾಂ ರಥಸತ್ತಮ।
04024014c ಕಂ ಚಿತ್ಕಾಲಂ ಮನುಷ್ಯೇಂದ್ರ ಸೂತಾನಾಮನುಗಾ ವಯಂ।।
ರಾಜನ್! ರಥಿಕಶ್ರೇಷ್ಠ! ಅವರ ರಥಗಳ ಜಾಡನ್ನು ಅರಸುತ್ತಾ ನಾವು ಸ್ವಲ್ಪ ಕಾಲ ಅವರ ಸೂತರನ್ನು ಅನುಸರಿಸಿದೆವು.
04024015a ಮೃಗಯಿತ್ವಾ ಯಥಾನ್ಯಾಯಂ ವಿದಿತಾರ್ಥಾಃ ಸ್ಮ ತತ್ತ್ವತಃ।
04024015c ಪ್ರಾಪ್ತಾ ದ್ವಾರವತೀಂ ಸೂತಾ ಋತೇ ಪಾರ್ಥೈಃ ಪರಂತಪ।।
ಯಥೋಚಿತವಾಗಿ ಹುಡುಕುತ್ತಾ ಕಡೆಗೆ ಹುರುಳನ್ನರಿತುಕೊಂಡೆವು. ಶತ್ರುನಾಶಕ! ಪಾಂಡವರಿಲ್ಲದೇ ಸೂತರು ದ್ವಾರವತಿಯನ್ನು ಸೇರಿದರು.
04024016a ನ ತತ್ರ ಪಾಂಡವಾ ರಾಜನ್ನಾಪಿ ಕೃಷ್ಣಾ ಪತಿವ್ರತಾ।
04024016c ಸರ್ವಥಾ ವಿಪ್ರನಷ್ಟಾಸ್ತೇ ನಮಸ್ತೇ ಭರತರ್ಷಭ।।
ಭರತರ್ಷಭ! ಅಲ್ಲಿ ಪಾಂಡವರಾಗಲೀ ಪತಿವ್ರತೆ ಕೃಷ್ಣೆಯಾಗಲೀ ಇಲ್ಲ. ಅವರು ಸಂಪೂರ್ಣವಾಗಿ ನಾಶಹೊಂದಿದ್ದಾರೆ. ನಿನಗೆ ವಂದನೆಗಳು.
04024017a ನ ಹಿ ವಿದ್ಮೋ ಗತಿಂ ತೇಷಾಂ ವಾಸಂ ವಾಪಿ ಮಹಾತ್ಮನಾಂ।
04024017c ಪಾಂಡವಾನಾಂ ಪ್ರವೃತ್ತಿಂ ವಾ ವಿದ್ಮಃ ಕರ್ಮಾಪಿ ವಾ ಕೃತಂ।
04024017e ಸ ನಃ ಶಾಧಿ ಮನುಷ್ಯೇಂದ್ರ ಅತ ಊರ್ಧ್ವಂ ವಿಶಾಂ ಪತೇ।।
ವಿಶಾಂಪತೇ! ಮಹಾತ್ಮ ಆ ಪಾಂಡವರ ಗತಿಯಾಗಲೀ ವಾಸಸ್ಥಾನವಾಗಲೀ, ಪ್ರವೃತ್ತಿಯಾಗಲೀ, ಮಾಡಿದ ಕಾರ್ಯವಾಗಲೀ ನಮಗೆ ತಿಳಿದು ಬರಲಿಲ್ಲ. ಮನುಷ್ಯೇಂದ್ರ! ಮುಂದೇನಾಗಬೇಕೆಂದು ಅಪ್ಪಣೆ ಮಾಡು.
04024018a ಅನ್ವೇಷಣೇ ಪಾಂಡವಾನಾಂ ಭೂಯಃ ಕಿಂ ಕರವಾಮಹೇ।
04024018c ಇಮಾಂ ಚ ನಃ ಪ್ರಿಯಾಮೀಕ್ಷ ವಾಚಂ ಭದ್ರವತೀಂ ಶುಭಾಂ।।
ಪಾಂಡವರ ಅನ್ವೇಷಣೆಗಾಗಿ ಇನ್ನೇನು ಮಾಡಬೇಕು? ಇದಲ್ಲದೇ ಮಂಗಳಕರವಾದ ಶುಭಕರವಾದ ಮತ್ತು ಪ್ರಿಯವಾದ ನಮ್ಮ ಈ ಮಾತನ್ನು ಕೇಳು.
04024019a ಯೇನ ತ್ರಿಗರ್ತಾ ನಿಕೃತಾ ಬಲೇನ ಮಹತಾ ನೃಪ।
04024019c ಸೂತೇನ ರಾಜ್ಞೋ ಮತ್ಸ್ಯಸ್ಯ ಕೀಚಕೇನ ಮಹಾತ್ಮನಾ।।
04024020a ಸ ಹತಃ ಪತಿತಃ ಶೇತೇ ಗಂಧರ್ವೈರ್ನಿಶಿ ಭಾರತ।
04024020c ಅದೃಶ್ಯಮಾನೈರ್ದುಷ್ಟಾತ್ಮಾ ಸಹ ಭ್ರಾತೃಭಿರಚ್ಯುತ।।
ಅಚ್ಯುತ! ರಾಜ! ಭಾರತ! ತನ್ನ ಮಹಾಬಲದಿಂದ ತ್ರಿಗರ್ತರನ್ನು ಸೋಲಿಸಿದ ಮತ್ಸ್ಯರಾಜನ ಸೂತ ಮಹಾಸತ್ವ ದುಷ್ಟಾತ್ಮ ಕೀಚಕನು ಅಗೋಚರ ಗಂಧರ್ವರಿಂದ ತನ್ನ ತಮ್ಮಂದಿರೊಡನೆ ಇರುಳಿನಲ್ಲಿ ಹತನಾಗಿ ಬಿದ್ದನು.
04024021a ಪ್ರಿಯಮೇತದುಪಶ್ರುತ್ಯ ಶತ್ರೂಣಾಂ ತು ಪರಾಭವಂ।
04024021c ಕೃತಕೃತ್ಯಶ್ಚ ಕೌರವ್ಯ ವಿಧತ್ಸ್ವ ಯದನಂತರಂ।।
ಕೌರವ! ಶತ್ರುಪರಾಭವದ ಈ ಪ್ರಿಯವಿಷವನ್ನಾಲಿಸಿ ಕೃತಕೃತ್ಯನಾಗಿ ಮುಂದಿನದನ್ನು ಆಜ್ಞಾಪಿಸು.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಚಾರಪ್ರತ್ಯಾಗಮನೇ ಚತುರ್ವಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಚಾರಪ್ರತ್ಯಾಗಮನದಲ್ಲಿ ಇಪ್ಪತ್ನಾಲ್ಕನೆಯ ಅಧ್ಯಾಯವು.