ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ವಿರಾಟ ಪರ್ವ
ಕೀಚಕವಧ ಪರ್ವ
ಅಧ್ಯಾಯ 23
ಸಾರ
ಕೀಚಕ-ಉಪಕೀಚಕರ ದೇಹಸಂಸ್ಕಾರಕ್ಕೆ ಅಪ್ಪಣೆಯನ್ನಿತ್ತು ವಿರಾಟನು ಸುದೇಷ್ಣೆಗೆ ಸೈರಂಧ್ರಿಯನ್ನು ಕಳುಹಿಸಬೇಕೆಂದು ಹೇಳುವುದು (1-10). ಭೀಮ ಮತ್ತು ಅರ್ಜುನರೊಂದಿಗೆ ದ್ರೌಪದಿಯ ಸಂವಾದ (11-23). ಬಿಟ್ಟುಹೋಗೆಂದು ಸುದೇಷ್ಣೆಯು ಹೇಳಲು ದ್ರೌಪದಿಯು ಹದಿಮೂರುದಿನಗಳ ಅವಕಾಶವನ್ನು ಕೇಳಿಕೊಳ್ಳುವುದು (24-28).
04023001 ವೈಶಂಪಾಯನ ಉವಾಚ।
04023001a ತೇ ದೃಷ್ಟ್ವಾ ನಿಹತಾನ್ಸೂತಾನ್ರಾಜ್ಞೇ ಗತ್ವಾ ನ್ಯವೇದಯನ್।
04023001c ಗಂಧರ್ವೈರ್ನಿಹತಾ ರಾಜನ್ಸೂತಪುತ್ರಾಃ ಪರಃಶತಾಃ।।
ವೈಶಂಪಾಯನನು ಹೇಳಿದನು: “ಹತರಾಗಿದ್ದ ಸೂತರನ್ನು ನೋಡಿದ ಅವರು ರಾಜನಲ್ಲಿಗೆ ಹೋಗಿ ನಿವೇದಿಸಿದರು: “ರಾಜ! ನೂರಾರು ಮಂದಿ ಸೂತಪುತ್ರರು ಗಂಧರ್ವರಿಂದ ಹತರಾದರು.
04023002a ಯಥಾ ವಜ್ರೇಣ ವೈ ದೀರ್ಣಂ ಪರ್ವತಸ್ಯ ಮಹಚ್ಚಿರಃ।
04023002c ವಿನಿಕೀರ್ಣಂ ಪ್ರದೃಶ್ಯೇತ ತಥಾ ಸೂತಾ ಮಹೀತಲೇ।।
ವಜ್ರಾಯುಧದಿಂದ ಸೀಳಿಹೋದ ಪರ್ವತದ ಮಹಾಶಿಖರದಂತೆ ಸೂತರು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಾಣುತ್ತಿದೆ.
04023003a ಸೈರಂಧ್ರೀ ಚ ವಿಮುಕ್ತಾಸೌ ಪುನರಾಯಾತಿ ತೇ ಗೃಹಂ।
04023003c ಸರ್ವಂ ಸಂಶಯಿತಂ ರಾಜನ್ನಗರಂ ತೇ ಭವಿಷ್ಯತಿ।।
ಸೈರಂಧ್ರಿಯು ಬಿಡುಗಡೆಹೊಂದಿ ಮತ್ತೆ ನಿನ್ನ ಮನೆಗೆ ಇದೋ ಬರುತ್ತಿದ್ದಾಳೆ. ರಾಜನ್! ನಿನ್ನ ನಗರವೆಲ್ಲವೂ ಅಪಾಯಕ್ಕೀಡಾಗುತ್ತಿದೆ.
04023004a ತಥಾರೂಪಾ ಹಿ ಸೈರಂಧ್ರೀ ಗಂಧರ್ವಾಶ್ಚ ಮಹಾಬಲಾಃ।
04023004c ಪುಂಸಾಮಿಷ್ಟಶ್ಚ ವಿಷಯೋ ಮೈಥುನಾಯ ನ ಸಂಶಯಃ।।
ಸೈರಂಧ್ರಿಯು ಅತೀವ ರೂಪವತಿ. ಗಂಧರ್ವರೋ ಮಹಾಬಲರು. ಪುರುಷರಿಗೆ ಸಂಭೋಗವು ಇಷ್ಟವಾದುದು. ಇದರಲ್ಲಿ ಸಂದೇಹವಿಲ್ಲ.
04023005a ಯಥಾ ಸೈರಂಧ್ರಿವೇಷೇಣ ನ ತೇ ರಾಜನ್ನಿದಂ ಪುರಂ।
04023005c ವಿನಾಶಮೇತಿ ವೈ ಕ್ಷಿಪ್ರಂ ತಥಾ ನೀತಿರ್ವಿಧೀಯತಾಂ।।
ರಾಜನ್! ಸೈರಂಧ್ರಿಯ ಕಾರಣದಿಂದ ನಿನ್ನ ಈ ಪುರವು ವಿನಾಶವಾಗದಂತೆ ಬೇಗನೇ ತಕ್ಕ ನೀತಿಯನ್ನು ಯೋಜಿಸು.”
04023006a ತೇಷಾಂ ತದ್ವಚನಂ ಶ್ರುತ್ವಾ ವಿರಾಟೋ ವಾಹಿನೀಪತಿಃ।
04023006c ಅಬ್ರವೀತ್ಕ್ರಿಯತಾಮೇಷಾಂ ಸೂತಾನಾಂ ಪರಮಕ್ರಿಯಾ।।
ಅವರ ಆ ಮಾತನ್ನು ಕೇಳಿದ ವಾಹಿನೀಪತಿ ವಿರಾಟನು ಹೇಳಿದನು: “ಈ ಸೂತರ ಅಂತ್ಯಕ್ರಿಯೆಗಳನ್ನು ನೆರವೇರಿಸಿ.
04023007a ಏಕಸ್ಮಿನ್ನೇವ ತೇ ಸರ್ವೇ ಸುಸಮಿದ್ಧೇ ಹುತಾಶನೇ।
04023007c ದಹ್ಯಂತಾಂ ಕೀಚಕಾಃ ಶೀಘ್ರಂ ರತ್ನೈರ್ಗಂಧೈಶ್ಚ ಸರ್ವಶಃ।।
ಆ ಕೀಚಕರನ್ನೆಲ್ಲಾ ಚೆನ್ನಾಗಿ ಪ್ರಜ್ವಲಿತವಾಗಿರುವ ಒಂದೇ ಚಿತಾಗ್ನಿಯಲ್ಲಿ ರತ್ನ-ಗಂಧ ಸಹಿತವಾಗಿ ಬೇಗನೆ ದಹನ ಮಾಡತಕ್ಕದ್ದು.”
04023008a ಸುದೇಷ್ಣಾಂ ಚಾಬ್ರವೀದ್ರಾಜಾ ಮಹಿಷೀಂ ಜಾತಸಾಧ್ವಸಃ।
04023008c ಸೈರಂಧ್ರೀಮಾಗತಾಂ ಬ್ರೂಯಾ ಮಮೈವ ವಚನಾದಿದಂ।।
ಭೀತಿಗೊಂಡ ರಾಜನು ರಾಣಿ ಸುದೇಷ್ಣೆಗೆ ಹೇಳಿದನು: “ಸೈರಂಧ್ರಿಯು ಬಂದಾಗ ನಾನೇ ಹೇಳಿದೆನೆಂದು ಈ ಮಾತನ್ನು ಹೇಳಿಬಿಡು.
04023009a ಗಚ್ಛ ಸೈರಂಧ್ರಿ ಭದ್ರಂ ತೇ ಯಥಾಕಾಮಂ ಚರಾಬಲೇ।
04023009c ಬಿಭೇತಿ ರಾಜಾ ಸುಶ್ರೋಣಿ ಗಂಧರ್ವೇಭ್ಯಃ ಪರಾಭವಾತ್।।
‘ಹೋಗು ಸೈರಂಧ್ರಿ! ನಿನಗೆ ಮಂಗಳವಾಗಲಿ! ಅಬಲೇ! ಮನಬಂದಲ್ಲಿ ಹೋಗು. ಸುಶ್ರೋಣಿ! ಗಂಧರ್ವರಿಂದಾದ ಪರಾಭವದಿಂದ ರಾಜನು ಹೆದರಿದ್ದಾನೆ.’
04023010a ನ ಹಿ ತಾಮುತ್ಸಹೇ ವಕ್ತುಂ ಸ್ವಯಂ ಗಂಧರ್ವರಕ್ಷಿತಾಂ।
04023010c ಸ್ತ್ರಿಯಸ್ತ್ವದೋಷಾಸ್ತಾಂ ವಕ್ತುಮತಸ್ತ್ವಾಂ ಪ್ರಬ್ರವೀಮ್ಯಹಂ।।
ಗಂಧರ್ವರಿಂದ ರಕ್ಷಿತರಾದ ಅವಳಿಗೆ ಸ್ವತಃ ನಾನೇ ಹೇಳಲು ನನಗೆ ಧೈರ್ಯವಿಲ್ಲ. ಸ್ತ್ರೀಯರು ನಿರ್ದೋಷಿಗಳು. ಆದ್ದರಿಂದ ಅವಳಿಗೆ ಹೇಳಬೇಕೆಂದು ನಿನಗೆ ತಿಳಿಸುತ್ತಿದ್ದೇನೆ.”
04023011a ಅಥ ಮುಕ್ತಾ ಭಯಾತ್ಕೃಷ್ಣಾ ಸೂತಪುತ್ರಾನ್ನಿರಸ್ಯ ಚ।
04023011c ಮೋಕ್ಷಿತಾ ಭೀಮಸೇನೇನ ಜಗಾಮ ನಗರಂ ಪ್ರತಿ।।
ಇತ್ತ ಸೂತಪುತ್ರನನ್ನು ಕೊಂದ ಭೀಮಸೇನನಿಂದ ಬಿಡಿಸಲ್ಪಟ್ಟ ಕೃಷ್ಣೆಯು ಭಯಮುಕ್ತಳಾಗಿ ನಗರದ ಕಡೆ ನಡೆದಳು.
04023012a ತ್ರಾಸಿತೇವ ಮೃಗೀ ಬಾಲಾ ಶಾರ್ದೂಲೇನ ಮನಸ್ವಿನೀ।
04023012c ಗಾತ್ರಾಣಿ ವಾಸಸೀ ಚೈವ ಪ್ರಕ್ಷಾಲ್ಯ ಸಲಿಲೇನ ಸಾ।।
ಮನಸ್ವಿನೀ ಆ ಬಾಲೆಯು ಶರೀರವನ್ನೂ ವಸ್ತ್ರಗಳನ್ನೂ ನೀರಿನಿಂದ ಶುಚಿಮಾಡಿಕೊಂಡು ಹುಲಿಗೆ ಹೆದರಿದ ಹರಿಣಿಯಂತೆ ಬರುತ್ತಿದ್ದಳು.
04023013a ತಾಂ ದೃಷ್ಟ್ವಾ ಪುರುಷಾ ರಾಜನ್ಪ್ರಾದ್ರವಂತ ದಿಶೋ ದಶ।
04023013c ಗಂಧರ್ವಾಣಾಂ ಭಯತ್ರಸ್ತಾಃ ಕೇ ಚಿದ್ದೃಷ್ಟೀರ್ನ್ಯಮೀಲಯನ್।।
ರಾಜನ್! ಅವಳನ್ನು ನೋಡಿದ ಜನರು ಗಂಧರ್ವರ ಭಯಪೀಡಿತರಾಗಿ ಹತ್ತು ದಿಕ್ಕಿಗೂ ಓಡಿಹೋದರು. ಕೆಲವರು ಕಣ್ಣು ಮುಚ್ಚಿಕೊಂಡರು.
04023014a ತತೋ ಮಹಾನಸದ್ವಾರಿ ಭೀಮಸೇನಮವಸ್ಥಿತಂ।
04023014c ದದರ್ಶ ರಾಜನ್ಪಾಂಚಾಲೀ ಯಥಾ ಮತ್ತಂ ಮಹಾದ್ವಿಪಂ।।
ರಾಜನ್! ಅನಂತರ ದ್ರೌಪದಿಯು ಅಡುಗೆಮನೆಯ ಬಾಗಿಲಲ್ಲಿ ಮದಿಸಿದ ಮಹಾಗಜನಂತೆ ನಿಂತಿದ್ದ ಭೀಮಸೇನನನ್ನು ನೋಡಿದಳು.
04023015a ತಂ ವಿಸ್ಮಯಂತೀ ಶನಕೈಃ ಸಂಜ್ಞಾಭಿರಿದಮಬ್ರವೀತ್।
04023015c ಗಂಧರ್ವರಾಜಾಯ ನಮೋ ಯೇನಾಸ್ಮಿ ಪರಿಮೋಚಿತಾ।।
ಅವನನ್ನು ಕುರಿತು ಅಚ್ಚರಿಪಡುತ್ತಾ ಮೆಲ್ಲನೆ ಸನ್ನೆಗಳಿಂದ ಹೀಗೆ ನುಡಿದಳು: “ನನ್ನನ್ನು ಬಿಡಿಸಿದ ಗಂಧರ್ವರಾಜನಿಗೆ ನಮಸ್ಕಾರ!”
04023016 ಭೀಮಸೇನ ಉವಾಚ।
04023016a ಯೇ ಯಸ್ಯಾ ವಿಚರಂತೀಹ ಪುರುಷಾ ವಶವರ್ತಿನಃ।
04023016c ತಸ್ಯಾಸ್ತೇ ವಚನಂ ಶ್ರುತ್ವಾ ಅನೃಣಾ ವಿಚರಂತ್ಯುತ।।
ಭೀಮಸೇನನು ಹೇಳಿದನು: “ಯಾರ ವಶವರ್ತಿಗಳಾಗಿ ಇಲ್ಲಿ ಪುರುಷರು ಚರಿಸುತ್ತಿದ್ದಾರೋ ಅವರು ಈ ನಿನ್ನ ಮಾತನ್ನು ಕೇಳಿ ಋಣಮುಕ್ತರಾಗಿರುತ್ತಾರೆ.””
04023017 ವೈಶಂಪಾಯನ ಉವಾಚ।
04023017a ತತಃ ಸಾ ನರ್ತನಾಗಾರೇ ಧನಂಜಯಮಪಶ್ಯತ।
04023017c ರಾಜ್ಞಃ ಕನ್ಯಾ ವಿರಾಟಸ್ಯ ನರ್ತಯಾನಂ ಮಹಾಭುಜಂ।।
04023018a ತತಸ್ತಾ ನರ್ತನಾಗಾರಾದ್ವಿನಿಷ್ಕ್ರಮ್ಯ ಸಹಾರ್ಜುನಾಃ।
04023018c ಕನ್ಯಾ ದದೃಶುರಾಯಾಂತೀಂ ಕೃಷ್ಣಾಂ ಕ್ಲಿಷ್ಟಾಮನಾಗಸಂ।।
ವೈಶಂಪಾಯನನು ಹೇಳಿದನು: “ಬಳಿಕ ಅವಳು ನರ್ತನಶಾಲೆಯಲ್ಲಿ ವಿರಾಟರಾಜನ ಕನ್ಯೆಯರಿಗೆ ನೃತ್ಯವನ್ನು ಕಲಿಸುತ್ತಿದ್ದ ಮಹಾಭುಜ ಧನಂಜಯನನ್ನು ಕಂಡಳು.
04023019 ಕನ್ಯಾ ಊಚುಃ।
04023019a ದಿಷ್ಟ್ಯಾ ಸೈರಂಧ್ರಿ ಮುಕ್ತಾಸಿ ದಿಷ್ಟ್ಯಾಸಿ ಪುನರಾಗತಾ।
04023019c ದಿಷ್ಟ್ಯಾ ವಿನಿಹತಾಃ ಸೂತಾ ಯೇ ತ್ವಾಂ ಕ್ಲಿಶ್ಯಂತ್ಯನಾಗಸಂ।।
ಕನ್ಯೆಯರು ಹೇಳಿದರು: “ಸೈರಂಧ್ರಿ! ಅದೃಷ್ಟವಶಾತ್ ನೀನು ಬಿಡುಗಡೆ ಹೊಂದಿದೆ. ಅದೃಷ್ಟವಶಾತ್ ಮರಳಿ ಬಂದೆ. ನಿರಪರಾಧಿಯಾದ ನಿನಗೆ ಕ್ಲೇಶವನ್ನುಂಟುಮಾಡಿದ ಸೂತರು ಅದೃಷ್ಟವಶಾತ್ ಹತರಾದರು.”
04023020 ಬೃಹನ್ನಡೋವಾಚ।
04023020a ಕಥಂ ಸೈರಂಧ್ರಿ ಮುಕ್ತಾಸಿ ಕಥಂ ಪಾಪಾಶ್ಚ ತೇ ಹತಾಃ।
04023020c ಇಚ್ಛಾಮಿ ವೈ ತವ ಶ್ರೋತುಂ ಸರ್ವಮೇವ ಯಥಾತಥಂ।।
ಬೃಹನ್ನಡೆಯು ಹೇಳಿದಳು: “ಸೈರಂಧ್ರಿ! ನೀನು ಬಿಡುಗಡೆಗೊಂಡುದು ಹೇಗೆ? ಆ ಪಾಪಿಗಳು ಹತರಾದುದು ಹೇಗೆ? ಎಲ್ಲವನ್ನೂ ಯಥಾವತ್ತಾಗಿ ನಿನ್ನಿಂದಲೇ ಕೇಳ ಬಯಸುತ್ತೇನೆ.”
04023021 ಸೈರಂಧ್ರ್ಯುವಾಚ।
04023021a ಬೃಹನ್ನಡೇ ಕಿಂ ನು ತವ ಸೈರಂಧ್ರ್ಯಾ ಕಾರ್ಯಮದ್ಯ ವೈ।
04023021c ಯಾ ತ್ವಂ ವಸಸಿ ಕಲ್ಯಾಣಿ ಸದಾ ಕನ್ಯಾಪುರೇ ಸುಖಂ।।
ಸೈರಂಧ್ರಿಯು ಹೇಳಿದಳು: “ಕಲ್ಯಾಣಿ! ಬೃಹನ್ನಡೇ! ಯಾವಾಗಲೂ ಈ ಕನ್ಯೆಯರ ಅಂತಃಪುರದಲ್ಲಿ ಸುಖವಾಗಿ ವಾಸಿಸುವ ನಿನಗೆ ಈ ಸೈರಂಧ್ರಿಯಿಂದ ಏನಾಗಬೇಕಾಗಿದೆ?
04023022a ನ ಹಿ ದುಃಖಂ ಸಮಾಪ್ನೋಷಿ ಸೈರಂಧ್ರೀ ಯದುಪಾಶ್ನುತೇ।
04023022c ತೇನ ಮಾಂ ದುಃಖಿತಾಮೇವಂ ಪೃಚ್ಛಸೇ ಪ್ರಹಸನ್ನಿವ।।
ಸೈರಂಧ್ರಿಯು ಅನುಭವಿಸುತ್ತಿರುವ ದುಃಖವು ನಿನಗೆ ಪ್ರಾಪ್ತಿಯಾಗಿಲ್ಲ. ಆದುದರಿಂದಲೇ ದುಃಖಿತೆಯದ ನನ್ನನ್ನು ಹಾಸ್ಯಮಾಡಲು ಹೀಗೆ ಕೇಳುತ್ತಿರುವೆ.”
04023023 ಬೃಹನ್ನಡೋವಾಚ।
04023023a ಬೃಹನ್ನಡಾಪಿ ಕಲ್ಯಾಣಿ ದುಃಖಮಾಪ್ನೋತ್ಯನುತ್ತಮಂ।
04023023c ತಿರ್ಯಗ್ಯೋನಿಗತಾ ಬಾಲೇ ನ ಚೈನಾಮವಬುಧ್ಯಸೇ।।
ಬೃಹನ್ನಡೆಯು ಹೇಳಿದಳು: “ಕಲ್ಯಾಣೀ! ಬೃಹನ್ನಡೆಯೂ ಅಸದೃಶವಾದ ದುಃಖವನ್ನು ಅನುಭವಿಸುತ್ತಿದ್ದಾಳೆ. ಬಾಲೆ! ಇವಳು ಪ್ರಾಣಿಜನ್ಮದಲ್ಲಿದ್ದಾಳೆ ಎನ್ನುವುದು ನಿನಗೆ ತಿಳಿಯದು.””
04023024 ವೈಶಂಪಾಯನ ಉವಾಚ।
04023024a ತತಃ ಸಹೈವ ಕನ್ಯಾಭಿರ್ದ್ರೌಪದೀ ರಾಜವೇಶ್ಮ ತತ್।
04023024c ಪ್ರವಿವೇಶ ಸುದೇಷ್ಣಾಯಾಃ ಸಮೀಪಮಪಲಾಯಿನೀ।।
ವೈಶಂಪಾಯನನು ಹೇಳಿದನು: “ಅನಂತರ ದ್ರೌಪದಿಯು ಆ ಕನ್ಯೆಯರೊಡನೆ ನಿಧಾನವಾಗಿ ಅರಮನೆಯನ್ನು ಹೊಕ್ಕು ಸುದೇಷ್ಣೆಯ ಬಳಿ ಹೋದಳು.
04023025a ತಾಮಬ್ರವೀದ್ರಾಜಪುತ್ರೀ ವಿರಾಟವಚನಾದಿದಂ।
04023025c ಸೈರಂಧ್ರಿ ಗಮ್ಯತಾಂ ಶೀಘ್ರಂ ಯತ್ರ ಕಾಮಯಸೇ ಗತಿಂ।।
ಅವಳಿಗೆ ಆ ರಾಜಪುತ್ರಿಯು ವಿರಾಟನ ಮಾತಿನಂತೆ ಹೀಗೆಂದಳು: “ಸೈರಂಧ್ರಿ! ನಿನಗೆ ಇಷ್ಟಬಂದಲ್ಲಿಗೆ ಬೇಗ ಹೊರಟುಹೋಗು.
04023026a ರಾಜಾ ಬಿಭೇತಿ ಭದ್ರಂ ತೇ ಗಂಧರ್ವೇಭ್ಯಃ ಪರಾಭವಾತ್।
04023026c ತ್ವಂ ಚಾಪಿ ತರುಣೀ ಸುಭ್ರು ರೂಪೇಣಾಪ್ರತಿಮಾ ಭುವಿ।।
ಗಂಧರ್ವರಿಂದಾದ ಪರಾಭವದಿಂದ ರಾಜನು ಹೆದರಿದ್ದಾನೆ. ನಿನಗೆ ಮಂಗಳವಾಗಲಿ. ಸುಂದರವಾದ ಹುಬ್ಬುಳ್ಳುವಳೇ! ನೀನಾದರೋ ತರುಣಿ. ಲೋಕದಲ್ಲಿ ಅಪ್ರತಿಮ ರೂಪವುಳ್ಳವಳು.”
04023027 ಸೈರಂಧ್ರ್ಯುವಾಚ।
04023027a ತ್ರಯೋದಶಾಹಮಾತ್ರಂ ಮೇ ರಾಜಾ ಕ್ಷಮತು ಭಾಮಿನಿ।
04023027c ಕೃತಕೃತ್ಯಾ ಭವಿಷ್ಯಂತಿ ಗಂಧರ್ವಾಸ್ತೇ ನ ಸಂಶಯಃ।।
ಸೈರಂಧ್ರಿಯು ಹೇಳಿದಳು: “ಭಾಮಿನೀ! ಇನ್ನು ಹದಿಮೂರು ದಿನಗಳವರೆಗೆ ಮಾತ್ರ ರಾಜನು ನನ್ನನ್ನು ಸೈರಿಸಿಕೊಳ್ಳಲಿ. ಅಷ್ಟರಲ್ಲಿ ಗಂಧರ್ವರು ನಿಸ್ಸಂದೇಹವಾಗಿ ಕೃತಕೃತ್ಯರಾಗುತ್ತಾರೆ.
04023028a ತತೋ ಮಾಂ ತೇಽಪನೇಷ್ಯಂತಿ ಕರಿಷ್ಯಂತಿ ಚ ತೇ ಪ್ರಿಯಂ।
04023028c ಧ್ರುವಂ ಚ ಶ್ರೇಯಸಾ ರಾಜಾ ಯೋಕ್ಷ್ಯತೇ ಸಹ ಬಾಂಧವೈಃ।
ಅನಂತರ ಅವರು ನನ್ನನ್ನು ಕರೆದೊಯ್ಯುತ್ತಾರೆ ಮತ್ತು ನಿನಗೆ ಪ್ರಿಯವನ್ನುಂಟುಮಾಡುತ್ತಾರೆ. ರಾಜನೂ ಕೂಡ ಬಾಂಧವರೊಡನೆ ಶ್ರೇಯಸ್ಸನ್ನು ಗಳಿಸುತ್ತಾನೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ವಿರಾಟಪರ್ವಣಿ ಕೀಚಕವಧಪರ್ವಣಿ ಕೀಚಕದಾಹೇ ತ್ರಯೋವಿಂಶೋಽಧ್ಯಾಯಃ ।
ಇದು ಶ್ರೀ ಮಹಾಭಾರತದಲ್ಲಿ ವಿರಾಟಪರ್ವದಲ್ಲಿ ಕೀಚಕವಧಪರ್ವದಲ್ಲಿ ಕೀಚಕದಾಹದಲ್ಲಿ ಇಪ್ಪತ್ಮೂರನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ವಿರಾಟಪರ್ವಣಿ ಕೀಚಕವಧಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟಪರ್ವದಲ್ಲಿ ಕೀಚಕವಧಪರ್ವವು
ಇದೂವರೆಗಿನ ಒಟ್ಟು ಮಹಾಪರ್ವಗಳು-3/18, ಉಪಪರ್ವಗಳು-46/100, ಅಧ್ಯಾಯಗಳು-619/1995, ಶ್ಲೋಕಗಳು-20529/73784.