ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ವಿರಾಟ ಪರ್ವ
ಕೀಚಕವಧ ಪರ್ವ
ಅಧ್ಯಾಯ 22
ಸಾರ
ಉಪಕೀಚಕರು ಬಂದು ಕೀಚಕನ ಕೊಲೆಯಾದುದನ್ನು ನೋಡಿ, ಅಲ್ಲಿಯೇ ಇದ್ದ ದ್ರೌಪದಿಯನ್ನೂ ಅವನೊಂದಿಗೆ ಸುಡಲು ವಿರಾಟನಿಂದ ಅಪ್ಪಣೆಯನ್ನು ಪಡೆದು ಅವಳನ್ನು ಕಟ್ಟಿ ಶ್ಮಶಾನದ ಕಡೆ ಹೊರಟಿದುದು (1-10). ದ್ರೌಪದಿಯ ಕೂಗನ್ನು ಕೇಳಿ ಭೀಮನು ವೇಷ ಮರೆಸಿಕೊಂಡು ಬಂದು ಉಪಕೀಚಕರನ್ನು ಸಂಹರಿಸಿ ದ್ರೌಪದಿಯನ್ನು ಬಿಡುಗಡೆಗೊಳಿಸಿದುದು (11-30).
04022001 ವೈಶಂಪಾಯನ ಉವಾಚ।
04022001a ತಸ್ಮಿನ್ಕಾಲೇ ಸಮಾಗಮ್ಯ ಸರ್ವೇ ತತ್ರಾಸ್ಯ ಬಾಂಧವಾಃ।
04022001c ರುರುದುಃ ಕೀಚಕಂ ದೃಷ್ಟ್ವಾ ಪರಿವಾರ್ಯ ಸಮಂತತಃ।।
ವೈಶಂಪಾಯನನು ಹೇಳಿದನು: “ಆ ಹೊತ್ತಿನಲ್ಲಿ ಅವನ ಬಾಂಧವರೆಲ್ಲ ಅಲ್ಲಿಗೆ ಬಂದು ಸುತ್ತಲೂ ನಿಂತು ಕೀಚಕನನ್ನು ನೋಡಿ ಅಳತೊಡಗಿದರು.
04022002a ಸರ್ವೇ ಸಂಹೃಷ್ಟರೋಮಾಣಃ ಸಂತ್ರಸ್ತಾಃ ಪ್ರೇಕ್ಷ್ಯ ಕೀಚಕಂ।
04022002c ತಥಾ ಸರ್ವಾಂಗಸಂಭುಗ್ನಂ ಕೂರ್ಮಂ ಸ್ಥಲ ಇವೋದ್ಧೃತಂ।।
ನೆಲಕ್ಕೆತ್ತಿ ಹಾಕಿದ್ದ ಆಮೆಯಂತೆ ಎಲ್ಲ ಅಂಗಗಳೂ ಸೇರಿಹೋಗಿದ್ದ ಕೀಚಕನನ್ನು ಕಂಡು ಎಲ್ಲರೂ ರೋಮಾಂಚನಗೊಂಡು ಭೀತಿಗ್ರಸ್ತರಾದರು.
04022003a ಪೋಥಿತಂ ಭೀಮಸೇನೇನ ತಮಿಂದ್ರೇಣೇವ ದಾನವಂ।
04022003c ಸಂಸ್ಕಾರಯಿತುಮಿಚ್ಛಂತೋ ಬಹಿರ್ನೇತುಂ ಪ್ರಚಕ್ರಮುಃ।।
ಇಂದ್ರನು ದಾನವನನ್ನು ಜಜ್ಜಿಹಾಕಿದಂತೆ ಭೀಮಸೇನನು ಜಜ್ಜಿಹಾಕಿದ್ದ ಅವನ ಶವವನ್ನು ಕಂಡು ಸಂಸ್ಕಾರಮಾಡಬಯಸಿ ಅವನನ್ನು ಹೊರಕ್ಕೆ ಒಯ್ಯತೊಡಗಿದರು.
04022004a ದದೃಶುಸ್ತೇ ತತಃ ಕೃಷ್ಣಾಂ ಸೂತಪುತ್ರಾಃ ಸಮಾಗತಾಃ।
04022004c ಅದೂರಾದನವದ್ಯಾಂಗೀಂ ಸ್ತಂಭಮಾಲಿಂಗ್ಯ ತಿಷ್ಠತೀಂ।।
ಬಂದು ನೆರೆದಿದ್ದ ಆ ಸೂತಪುತ್ರರು ಹತ್ತಿರದಲ್ಲಿ ಕಂಬವೊಂದನ್ನು ಹಿಡಿದು ನಿಂತಿದ್ದ ಸುಂದರಾಂಗಿ ಕೃಷ್ಣೆಯನ್ನು ನೋಡಿದರು.
04022005a ಸಮವೇತೇಷು ಸೂತೇಷು ತಾನುವಾಚೋಪಕೀಚಕಃ।
04022005c ಹನ್ಯತಾಂ ಶೀಘ್ರಮಸತೀ ಯತ್ಕೃತೇ ಕೀಚಕೋ ಹತಃ।।
ಸೇರಿದ್ದ ಸೂತರಲ್ಲಿ ಒಬ್ಬ ಉಪಕೀಚಕನು ಅವರಿಗೆ ಹೇಳಿದನು: “ಯಾವ ಕುಲಟೆಗಾಗಿ ಕೀಚಕನು ಹತನಾದನೋ ಅವಳನ್ನು ಶೀಘ್ರವೇ ಕೊಲ್ಲಿ.
04022006a ಅಥ ವಾ ನೇಹ ಹಂತವ್ಯಾ ದಹ್ಯತಾಂ ಕಾಮಿನಾ ಸಹ।
04022006c ಮೃತಸ್ಯಾಪಿ ಪ್ರಿಯಂ ಕಾರ್ಯಂ ಸೂತಪುತ್ರಸ್ಯ ಸರ್ವಥಾ।।
ಅಥವಾ ಅವಳನ್ನು ಇಲ್ಲಿ ಕೊಲ್ಲುವುದು ಬೇಡ. ಅವಳ ಕಾಮಿಯೊಡನೆ ಸುಡೋಣ. ಮೃತನಾದ ಸೂತಪುತ್ರನಿಗೆ ಇದು ಸರ್ವಥಾ ಪ್ರಿಯವಾಗುತ್ತದೆ.”
04022007a ತತೋ ವಿರಾಟಮೂಚುಸ್ತೇ ಕೀಚಕೋಽಸ್ಯಾಃ ಕೃತೇ ಹತಃ।
04022007c ಸಹಾದ್ಯಾನೇನ ದಹ್ಯೇತ ತದನುಜ್ಞಾತುಮರ್ಹಸಿ।।
ಅನಂತರ ಅವರು ವಿರಾಟನಿಗೆ ಹೇಳಿದರು: “ಇವಳಿಗಾಗಿ ಕೀಚಕನು ಹತನಾದನು. ಆದ್ದರಿಂದ ಅವನೊಡನೆ ಇವಳನ್ನೂ ಇಂದು ಸುಡಬೇಕು. ನೀನು ಅಪ್ಪಣೆ ಕೊಡತಕ್ಕದ್ದು.”
04022008a ಪರಾಕ್ರಮಂ ತು ಸೂತಾನಾಂ ಮತ್ವಾ ರಾಜಾನ್ವಮೋದತ।
04022008c ಸೈರಂಧ್ರ್ಯಾಃ ಸೂತಪುತ್ರೇಣ ಸಹ ದಾಹಂ ವಿಶಾಂ ಪತೇ।।
ವಿಶಾಂಪತೇ! ಆ ಸೂತರ ಪರಾಕ್ರಮವನ್ನು ತಿಳಿದಿದ್ದ ರಾಜನು ಸೂತಪುತ್ರನೊಡನೆ ಸೈರಂಧ್ರಿಯನ್ನು ಸುಡಲು ಅನುಮತಿಯನ್ನಿತ್ತನು.
04022009a ತಾಂ ಸಮಾಸಾದ್ಯ ವಿತ್ರಸ್ತಾಂ ಕೃಷ್ಣಾಂ ಕಮಲಲೋಚನಾಂ।
04022009c ಮೋಮುಹ್ಯಮಾನಾಂ ತೇ ತತ್ರ ಜಗೃಹುಃ ಕೀಚಕಾ ಭೃಶಂ।।
ಹೆದರಿ ಮೂರ್ಛೆಹೋಗುವಂತಿದ್ದ ಆ ಕಮಲೋಚನೆ ಕೃಷ್ಣೆಯನ್ನು ಆ ಕೀಚಕರು ಸಮೀಪಿಸಿ ಗಟ್ಟಿಯಾಗಿ ಹಿಡಿದುಕೊಂಡರು.
04022010a ತತಸ್ತು ತಾಂ ಸಮಾರೋಪ್ಯ ನಿಬಧ್ಯ ಚ ಸುಮಧ್ಯಮಾಂ।
04022010c ಜಗ್ಮುರುದ್ಯಮ್ಯ ತೇ ಸರ್ವೇ ಶ್ಮಶಾನಮಭಿತಸ್ತದಾ।।
ಆಗ ಅವರೆಲ್ಲರೂ ಆ ಸುಮಧ್ಯಮೆಯನ್ನು ಬಿಗಿಯಾಗಿ ಕಟ್ಟಿ ಎತ್ತಿಕೊಂಡು ಶ್ಮಶಾನಾಭಿಮುಖವಾಗಿ ಹೊರಟರು.
04022011a ಹ್ರಿಯಮಾಣಾ ತು ಸಾ ರಾಜನ್ಸೂತಪುತ್ರೈರನಿಂದಿತಾ।
04022011c ಪ್ರಾಕ್ರೋಶನ್ನಾಥಮಿಚ್ಛಂತೀ ಕೃಷ್ಣಾ ನಾಥವತೀ ಸತೀ।।
ರಾಜನ್! ಆ ಸೂತಪುತ್ರರು ಹೊತ್ತೊಯ್ಯುತ್ತಿದ್ದ ನಾಥವತಿ ಸತೀ ಅನಿಂದಿತೆ ಕೃಷ್ಣೇಯು ರಕ್ಷಕನನ್ನು ಬಯಸುತ್ತಾ ಗಟ್ಟಿಯಾಗಿ ಕೂಗಿದಳು.
04022012 ದ್ರೌಪದ್ಯುವಾಚ।
04022012a ಜಯೋ ಜಯಂತೋ ವಿಜಯೋ ಜಯತ್ಸೇನೋ ಜಯದ್ಬಲಃ।
04022012c ತೇ ಮೇ ವಾಚಂ ವಿಜಾನಂತು ಸೂತಪುತ್ರಾ ನಯಂತಿ ಮಾಂ।।
ದ್ರೌಪದಿಯು ಹೇಳಿದಳು: “ಜಯ, ಜಯಂತ, ವಿಜಯ, ಜಯತ್ಸೇನ ಜಯದ್ಬಲರೇ! ನನ್ನ ಮಾತನ್ನು ಕೇಳಿ! ಸೂತಪುತ್ರರು ನನ್ನನ್ನು ಒಯ್ಯುತ್ತಿದ್ದಾರೆ.
04022013a ಯೇಷಾಂ ಜ್ಯಾತಲನಿರ್ಘೋಷೋ ವಿಸ್ಫೂರ್ಜಿತಮಿವಾಶನೇಃ।
04022013c ವ್ಯಶ್ರೂಯತ ಮಹಾಯುದ್ಧೇ ಭೀಮಘೋಷಸ್ತರಸ್ವಿನಾಂ।।
04022014a ರಥಘೋಷಶ್ಚ ಬಲವಾನ್ಗಂಧರ್ವಾಣಾಂ ಯಶಸ್ವಿನಾಂ।
04022014c ತೇ ಮೇ ವಾಚಂ ವಿಜಾನಂತು ಸೂತಪುತ್ರಾ ನಯಂತಿ ಮಾಂ।।
ವೇಗಗಾಮಿಗಳೂ ಕೀರ್ತಿಶಾಲಿಗಳೂ ಆದ ಯಾವ ಗಂಧರ್ವರ ಸಿಡಿಲ ಗರ್ಜನೆಯಂಥ ಬಿಲ್ಲಿನ ಹೆದೆಯ ಠೇಂಕಾರ, ಭಯಂಕರ ಗರ್ಜನೆ ಮತ್ತು ಪ್ರಬಲ ರಥಘೋಷವು ಮಹಾಯುದ್ಧದಲ್ಲಿ ಕೇಳಿ ಬರುತ್ತದೆಯೋ ಅವರು ನನ್ನ ಕೂಗನ್ನು ಕೇಳಿಸಿಕೊಳ್ಳಲಿ. ಸೂತಪುತ್ರರು ನನ್ನನ್ನು ಒಯ್ಯುತ್ತಿದ್ದಾರೆ.””
04022015 ವೈಶಂಪಾಯನ ಉವಾಚ।
04022015a ತಸ್ಯಾಸ್ತಾಃ ಕೃಪಣಾ ವಾಚಃ ಕೃಷ್ಣಾಯಾಃ ಪರಿದೇವಿತಾಃ।
04022015c ಶ್ರುತ್ವೈವಾಭ್ಯಪತದ್ಭೀಮಃ ಶಯನಾದವಿಚಾರಯನ್।।
ವೈಶಂಪಾಯನನು ಹೇಳಿದನು: “ಕೃಷ್ಣೆಯ ಆ ದೀನ ಮಾತುಗಳನ್ನೂ ಗೋಳನ್ನೂ ಕೇಳಿದ ಭೀಮನು ಸ್ವಲ್ಪವೂ ವಿಚಾರಮಾಡದೇ ಹಾಸಿಗೆಯಿಂದ ಜಿಗಿದೆದ್ದನು.
04022016 ಭೀಮಸೇನ ಉವಾಚ।
04022016a ಅಹಂ ಶೃಣೋಮಿ ತೇ ವಾಚಂ ತ್ವಯಾ ಸೈರಂಧ್ರಿ ಭಾಷಿತಾಂ।
04022016c ತಸ್ಮಾತ್ತೇ ಸೂತಪುತ್ರೇಭ್ಯೋ ನ ಭಯಂ ಭೀರು ವಿದ್ಯತೇ।।
ಭೀಮಸೇನನು ಹೇಳಿದನು: “ಸೈರಂಧ್ರಿ! ಭೀರು! ನಿನ್ನ ಕೂಗನ್ನು ನಾನು ಕೇಳುತ್ತಿದ್ದೇನೆ. ಆದ್ದರಿಂದ ಸೂತಪುತ್ರರಿಂದ ನಿನಗೆ ಭಯವಿಲ್ಲ.””
04022017 ವೈಶಂಪಾಯನ ಉವಾಚ।
04022017a ಇತ್ಯುಕ್ತ್ವಾ ಸ ಮಹಾಬಾಹುರ್ವಿಜಜೃಂಭೇ ಜಿಘಾಂಸಯಾ।
04022017c ತತಃ ಸ ವ್ಯಾಯತಂ ಕೃತ್ವಾ ವೇಷಂ ವಿಪರಿವರ್ತ್ಯ ಚ।
04022017e ಅದ್ವಾರೇಣಾಭ್ಯವಸ್ಕಂದ್ಯ ನಿರ್ಜಗಾಮ ಬಹಿಸ್ತದಾ।।
ವೈಶಂಪಾಯನನು ಹೇಳಿದನು: “ಆ ಮಹಾಬಾಹುವು ಹೀಗೆ ಹೇಳಿ ಅವರನ್ನು ಕೊಲ್ಲುವ ಅಪೇಕ್ಷೆಯಿಂದ ವಿಜೃಂಭಿಸಿದನು. ಬಳಿಕ ಅವನು ಮೈಯುಬ್ಬಿಸಿ ವೇಷ ಬದಲಿಸಿಕೊಂಡು ರಹಸ್ಯ ಮಾರ್ಗದಿಂದ ನುಸುಳಿ ಹೊರಹೊರಟನು.
04022018a ಸ ಭೀಮಸೇನಃ ಪ್ರಾಕಾರಾದಾರುಜ್ಯ ತರಸಾ ದ್ರುಮಂ।
04022018c ಶ್ಮಶಾನಾಭಿಮುಖಃ ಪ್ರಾಯಾದ್ಯತ್ರ ತೇ ಕೀಚಕಾ ಗತಾಃ।।
ಆ ಭೀಮಸೇನನು ಪ್ರಾಕಾರದಲ್ಲಿದ್ದ ಮರವೊಂದನ್ನು ಬೇಗ ಕಿತ್ತುಕೊಂಡು ಆ ಕೀಚಕರು ಹೋದ ಶ್ಮಶಾನದತ್ತ ಓಡಿದನು.
04022019a ಸ ತಂ ವೃಕ್ಷಂ ದಶವ್ಯಾಮಂ ಸಸ್ಕಂಧವಿಟಪಂ ಬಲೀ।
04022019c ಪ್ರಗೃಹ್ಯಾಭ್ಯದ್ರವತ್ಸೂತಾನ್ದಂಡಪಾಣಿರಿವಾಂತಕಃ।।
ಕಾಂಡಗಳಿಂದಲೂ ಕೊಂಬೆಗಳಿಂದಲೂ ಕೂಡಿದ ಬಲಿಷ್ಠವಾದ ಹತ್ತು ಮಾರುದ್ದದ ಆ ಮರವನ್ನು ಹಿಡಿದುಕೊಂಡು ಅವನು ದಂಡಪಾಣಿ ಯಮನಂತೆ ಸೂತರ ಬೆನ್ನಟ್ಟಿದನು.
04022020a ಊರುವೇಗೇನ ತಸ್ಯಾಥ ನ್ಯಗ್ರೋಧಾಶ್ವತ್ಥಕಿಂಶುಕಾಃ।
04022020c ಭೂಮೌ ನಿಪತಿತಾ ವೃಕ್ಷಾಃ ಸಂಘಶಸ್ತತ್ರ ಶೇರತೇ।।
ಅವನ ತೊಡೆಗಳ ವೇಗಕ್ಕೆ ಸಿಲುಕಿದ ಆಲ, ಅರಳಿ ಮತ್ತು ಮುತ್ತುಗದ ಮರಗಳು ಗುಂಪು ಗುಂಪಾಗಿ ಉರುಳಿ ನೆಲದ ಮೇಲೆ ಬಿದ್ದವು.
04022021a ತಂ ಸಿಂಹಮಿವ ಸಂಕ್ರುದ್ಧಂ ದೃಷ್ಟ್ವಾ ಗಂಧರ್ವಮಾಗತಂ।
04022021c ವಿತ್ರೇಸುಃ ಸರ್ವತಃ ಸೂತಾ ವಿಷಾದಭಯಕಂಪಿತಾಃ।।
ಸಿಂಹದಂತೆ ಕೃದ್ಧನಾಗಿ ಬಂದ ಆ ಗಂಧರ್ವನನ್ನು ಕಂಡು ಸೂತರೆಲ್ಲರೂ ವಿಷಾದಭಯಕಂಪಿತರಾಗಿ ತಲ್ಲಣಿಸಿದರು.
04022022a ತಮಂತಕಮಿವಾಯಾಂತಂ ಗಂಧರ್ವಂ ಪ್ರೇಕ್ಷ್ಯ ತೇ ತದಾ।
04022022c ದಿಧಕ್ಷಂತಸ್ತದಾ ಜ್ಯೇಷ್ಠಂ ಭ್ರಾತರಂ ಹ್ಯುಪಕೀಚಕಾಃ।
04022022e ಪರಸ್ಪರಮಥೋಚುಸ್ತೇ ವಿಷಾದಭಯಕಂಪಿತಾಃ।।
ಯಮನಂತೆ ಬಂದ ಗಂಧರ್ವನನ್ನು ನೋಡಿ ಅಣ್ಣನನ್ನು ಸುಡಲು ಬಂದಿದ್ದ ಉಪಕೀಚಕರು ವಿಷಾದ-ಭಯಕಂಪಿತರಾಗಿ ಪರಸ್ಪರರಲ್ಲಿ ಮತನಾಡಿಕೊಂಡರು.
04022023a ಗಂಧರ್ವೋ ಬಲವಾನೇತಿ ಕ್ರುದ್ಧ ಉದ್ಯಮ್ಯ ಪಾದಪಂ।
04022023c ಸೈರಂಧ್ರೀ ಮುಚ್ಯತಾಂ ಶೀಘ್ರಂ ಮಹನ್ನೋ ಭಯಮಾಗತಂ।।
“ಬಲಶಾಲಿ ಗಂಧರ್ವನು ಮರವನ್ನು ಎತ್ತಿ ಹಿಡಿದು ಕೃದ್ಧನಾಗಿ ಬರುತ್ತಿದ್ದಾನೆ. ಸೈರಂಧ್ರಿಯನ್ನು ಬೇಗ ಬಿಟ್ಟುಬಿಡಿ. ನಮಗೆ ಮಹಾಭಯವು ಬಂದೊದಗಿದೆ.”
04022024a ತೇ ತು ದೃಷ್ಟ್ವಾ ತಮಾವಿದ್ಧಂ ಭೀಮಸೇನೇನ ಪಾದಪಂ।
04022024c ವಿಮುಚ್ಯ ದ್ರೌಪದೀಂ ತತ್ರ ಪ್ರಾದ್ರವನ್ನಗರಂ ಪ್ರತಿ।।
ಭೀಮಸೇನನು ಕಿತ್ತು ತಂದಿದ್ದ ಆ ಮರವನ್ನು ಕಂಡು ಅವರು ದ್ರೌಪದಿಯನ್ನು ಅಲ್ಲಿಯೇ ಬಿಟ್ಟು ನಗರದತ್ತ ಓಡಿದರು.
04022025a ದ್ರವತಸ್ತಾಂಸ್ತು ಸಂಪ್ರೇಕ್ಷ್ಯ ಸ ವಜ್ರೀ ದಾನವಾನಿವ।
04022025c ಶತಂ ಪಂಚಾಧಿಕಂ ಭೀಮಃ ಪ್ರಾಹಿಣೋದ್ಯಮಸಾದನಂ।।
ಓಡಿಹೋಗುತ್ತಿದ್ದ ಅವರನ್ನು ಕಂಡು ಭೀಮನು ಇಂದ್ರನು ದಾನವರನ್ನು ಕೊಂದಂತೆ ಆ ನೂರೈದು ಮಂದಿಯನ್ನು ಯಮಾಲಯಕ್ಕಟ್ಟಿದನು.
04022026a ತತ ಆಶ್ವಾಸಯತ್ಕೃಷ್ಣಾಂ ಪ್ರವಿಮುಚ್ಯ ವಿಶಾಂ ಪತೇ।
04022026c ಉವಾಚ ಚ ಮಹಾಬಾಹುಃ ಪಾಂಚಾಲೀಂ ತತ್ರ ದ್ರೌಪದೀಂ।।
04022026e ಅಶ್ರುಪೂರ್ಣಮುಖೀಂ ದೀನಾಂ ದುರ್ಧರ್ಷಃ ಸ ವೃಕೋದರಃ।।
ವಿಶಾಂಪತೇ! ಅನಂತರ ಆ ಮಹಾಬಾಹುವು ಕೃಷ್ಣೆಯನ್ನು ಬಿಡಿಸಿ ಸಮಾಧಾನಗೊಳಿಸಿದನು. ಅಸಾಧ್ಯನಾದ ಆ ವೃಕೋದರನು ಅಶ್ರುಪೂರ್ಣಮುಖಿಯೂ ದೀನೆಯೂ ಆದ ದ್ರೌಪದಿಗೆ ಹೇಳಿದನು:
04022027a ಏವಂ ತೇ ಭೀರು ವಧ್ಯಂತೇ ಯೇ ತ್ವಾಂ ಕ್ಲಿಶ್ಯಂತ್ಯನಾಗಸಂ।
04022027c ಪ್ರೈಹಿ ತ್ವಂ ನಗರಂ ಕೃಷ್ಣೇ ನ ಭಯಂ ವಿದ್ಯತೇ ತವ।
04022027e ಅನ್ಯೇನಾಹಂ ಗಮಿಷ್ಯಾಮಿ ವಿರಾಟಸ್ಯ ಮಹಾನಸಂ।।
“ಭೀರು! ತಪ್ಪಿಲ್ಲದ ನಿನ್ನನ್ನು ಕ್ಲೇಶಗೊಳಿಸುವವರು ಹೀಗೆ ಹತರಾಗುತ್ತಾರೆ. ಕೃಷ್ಣೆ! ನೀನು ನಗರಕ್ಕೆ ಹೋಗು. ನಿನಗೆ ಇನ್ನು ಭಯವಿಲ್ಲ. ನಾನು ಬೇರೆದಾರಿಯಿಂದ ವಿರಾಟನ ಅಡುಗೆಮನೆಗೆ ಹೋಗುತ್ತೇನೆ.”
04022028a ಪಂಚಾಧಿಕಂ ಶತಂ ತಚ್ಚ ನಿಹತಂ ತತ್ರ ಭಾರತ।
04022028c ಮಹಾವನಮಿವ ಚಿನ್ನಂ ಶಿಶ್ಯೇ ವಿಗಲಿತದ್ರುಮಂ।।
ಭಾರತ! ಅಲ್ಲಿ ನೂರೈದುಮಂದಿ ಹತರಾದರು. ಕತ್ತರಿಸಿ ಉರುಳಿದ ಮರಗಳ ಮಹಾವನದಂತೆ ಅವರು ಬಿದ್ದಿದ್ದರು.
04022029a ಏವಂ ತೇ ನಿಹತಾ ರಾಜಂ ಶತಂ ಪಂಚ ಚ ಕೀಚಕಾಃ।
04022029c ಸ ಚ ಸೇನಾಪತಿಃ ಪೂರ್ವಮಿತ್ಯೇತತ್ಸೂತಷಟ್ಶತಂ।।
ರಾಜನ್! ಹೀಗೆ ಆ ನೂರೈದುಮಂದಿ ಕೀಚಕರು ಹತರಾದರು. ಮೊದಲೇ ಹತನಾದ ಸೇನಾಪತಿಯೂ ಸೇರಿ ಆ ಸೂತರು ನೂರಾ ಆರು ಮಂದಿ.
04022030a ತದ್ದೃಷ್ಟ್ವಾ ಮಹದಾಶ್ಚರ್ಯಂ ನರಾ ನಾರ್ಯಶ್ಚ ಸಂಗತಾಃ।
04022030c ವಿಸ್ಮಯಂ ಪರಮಂ ಗತ್ವಾ ನೋಚುಃ ಕಿಂ ಚನ ಭಾರತ।।
ಭಾರತ! ಅಲ್ಲಿ ನೆರೆದಿದ್ದ ನರನಾರಿಯರು ಆ ಮಹದಾಶ್ಚರ್ಯವನ್ನು ನೋಡಿ ಪರಮ ವಿಸ್ಮಯಗೊಂಡು ಏನೂ ಮಾತನಾಡಲಿಲ್ಲ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ವಿರಾಟಪರ್ವಣಿ ಕೀಚಕವಧಪರ್ವಣಿ ದ್ವಾವಿಂಶೋಽಧ್ಯಾಯಃ ।
ಇದು ಶ್ರೀ ಮಹಾಭಾರತದಲ್ಲಿ ವಿರಾಟಪರ್ವದಲ್ಲಿ ಕೀಚಕವಧಪರ್ವದಲ್ಲಿ ಇಪ್ಪತ್ತೆರಡನೆಯ ಅಧ್ಯಾಯವು.